ಕಳಪೆ ಅನುವಾದದಿಂದ ನೊಂದು ‘ಅಳಬೇಡ ಕಂದ’

ನಾಗಣ್ಣನವರ ಅನುವಾದಿತಅಳಬೇಡ ಕಂದ ಕಾದಂಬರಿಯನ್ನು ಕನ್ನಡದಲ್ಲಿ ಓದುವಾಗ ಅಲ್ಲಲ್ಲಿ ಭಾಷೆಯು ಕೃತಕವಾಗಿದ್ದು ಗಮನಕ್ಕೆ ಬರದೇ ಇರುವುದಿಲ್ಲ. ಅನುವಾದವು ತುಂಬ ಶ್ರಮವನ್ನು ಹಾಗೂ ತಾಳ್ಮೆಯನ್ನು ಅಪೇಕ್ಷಿಸುತ್ತದೆ. ಆದರೆ ಇದೊಂದು ಅವಸರದಿಂದ ಕೂಡಿದ ಅನುವಾದವೇ ಆಗಿದೆ.

-ಸುಭಾಷ್ ರಾಜಮಾನೆ

 

 

 

 

 

ವೀಪ್ ನಾಟ್, ಚೈಲ್ಡ್

(ಅಳಬೇಡ ಕಂದ)

ಗೂಗಿ ವಾ ಥಿಯಾಂಗೋ

ಅನು: ಡಾ.ಸಿ.ನಾಗಣ್ಣ

ಪ್ರಕಟನೆ: 2020, ಪು.198

ಬೆಲೆ: ರೂ.200

ಪ್ರಕಟನೆ: ಯುಕ್ತ ಪ್ರಕಾಶನ, ಮೈಸೂರು

ಆಧುನಿಕ ಆಫ್ರಿಕ ಖಂಡದ ಸಾಹಿತ್ಯವನ್ನು ಕುರಿತು ಪ್ರಸ್ತಾಪಿಸಿದರೆ ಚಿನುವಾ ಅಚಿಬೆ, ವೊಲೆ ಷೊಯಿಂಕ, ಗೂಗಿ ವಾ ಥಿಯಾಂ’ಗೋ, ಮಾಯಾ ಏಂಜೆಲೋ, ಜೆ.ಎಂ. ಕೊಯಟ್ಜೆ, ನಜೀಬ್ ಮೆಹಫೂಸ್, ನದೀನ್ ಗೋರ್ಡಿಮರ್, ಚಿಮಮಾಂಡ ಅಡೀಚಿ-ಇವರೆಲ್ಲರೂ ಸಹಜವಾಗಿಯೇ ನೆನಪಾಗುತ್ತಾರೆ. ಇವರಲ್ಲಿ ಕೀನ್ಯಾ ದೇಶದ ಗೂಗಿ ವಾ ಥಿಯಾಂ’ಗೋ ಅವರು ಬರಿ ಲೇಖಕರಲ್ಲ; ಆಫ್ರಿಕಾದ ಸಾಂಸ್ಕೃತಿಕ ಲೋಕವನ್ನು ಛಿದ್ರಗೊಳಿಸಿದ ವಸಾಹತುಶಾಹಿ ಚಿಂತನೆಗಳನ್ನು ನಿರಾಕರಿಸಿದ ಧೀಮಂತ ಚಿಂತಕರೂ ಹೌದು; ಅವರು ಗಿಕುಯು ಬುಡಕಟ್ಟು ಸಮುದಾಯದ ಜ್ಞಾನ ಪರಂಪರೆಯ ಪ್ರತಿಪಾದಕರಾಗಿದ್ದಾರೆ; ಗೂಗಿಯವರು ತಮ್ಮ ಸ್ಥಳೀಯ ಭಾಷೆ, ದೇಶಿ ಶಿಕ್ಷಣ, ಕಪ್ಪು ಸಾಹಿತ್ಯ, ರಾಷ್ಟ್ರೀಯತೆ-ಇವುಗಳ ಕುರಿತು ಹೊಸ ಚಿಂತನಧಾರೆಗಳನ್ನು ಮಂಡಿಸಿದ ಜಾಗತಿಕ ಖ್ಯಾತಿಯ ಚಿಂತಕರಾಗಿದ್ದಾರೆ.

ಬಹುಮುಖ ಪ್ರತಿಭೆಯ ಗೂಗಿಯವರ ‘ವೀಪ್ ನಾಟ್, ಚೈಲ್ಡ್’ (1964) ಪೂರ್ವ ಆಫ್ರಿಕಾದಿಂದ ಇಂಗ್ಲಿಷಿನಲ್ಲಿ ಪ್ರಕಟವಾದ ಮೊದಲ ಕಾದಂಬರಿಯಾಗಿದೆ. ಕೀನ್ಯಾ ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ 1963ರಲ್ಲಿ ಸ್ವಾತಂತ್ರ್ಯ ಪಡೆಯಿತು; ಅದರ ಮರು ವರ್ಷದಲ್ಲಿ ಹೊರಬಂದ ಈ ಕೃತಿಯು ಹೆಚ್ಚು ಚರ್ಚೆಗೆ ಒಳಪಟ್ಟಿದೆ. ಇತ್ತೀಚೆಗೆ ಇದನ್ನು ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ. ಸಿ. ನಾಗಣ್ಣನವರು ‘ಅಳಬೇಡ ಕಂದ’ ಎಂಬ ಶಿರೋನಾಮೆಯಲ್ಲಿ ಕನ್ನಡಕ್ಕೆ ತಂದಿದ್ದಾರೆ.

ಯುರೋಪಿಯನ್ ಕೇಂದ್ರಿತ ವಸಾಹತುಶಾಹಿಯ ನೆಲೆಗಟ್ಟಿನಿಂದ ಆಫ್ರಿಕಾದ ಚರಿತ್ರೆಯನ್ನು ನೊಡುವ, ಗ್ರಹಿಸುವ, ವ್ಯಾಖ್ಯಾನಿಸುವ, ಮೌಲ್ಯಮಾಪನ ಮಾಡುವ ಪ್ರವೃತ್ತಿ ಆರಂಭವಾಗಿದ್ದು. ಬ್ರಿಟಿಷ್ ವಸಾಹತುಶಾಹಿಯು ಆಫ್ರಿಕಾದ ಜನರ ಫಲವತ್ತಾದ ಭೂಮಿ, ಖನಿಜ, ಕಾಡು, ನದಿಗಳಂತಹ ಸಂಪತ್ತನ್ನು ಕಸಿದುಕೊಂಡು ಅವರನ್ನು ದಾರಿದ್ರ್ಯದ ಕೂಪದಲ್ಲಿ ಮುಳುಗಿಸಿತು. ಆಫ್ರಿಕಾದ ಸಂಪದ್ಭರಿತ ನಿಸರ್ಗ ಸಹಜ ವಿವೇಕ, ಜ್ಞಾನ ಪರಂಪರೆ, ಸ್ಥಳೀಯ ಪುರಾಣ ಕತೆಗಳನ್ನು ಹಾಗೂ ಬುಡಕಟ್ಟು ಲೋಕದ ನೆನಪುಗಳನ್ನು ನಿರ್ನಾಮ ಮಾಡಿತು. ಆದರೆ ಅಷ್ಟು ಸುಲಭದಲ್ಲಿ ಒಂದು ಜನಾಂಗದ ನೆನಪುಗಳು ನಾಶವಾಗಿ ಹೋಗುವುದಿಲ್ಲ ಎಂಬುದನ್ನು ‘ಅಳಬೇಡ ಕಂದ’ ಕೃತಿಯು ಸಮರ್ಥವಾಗಿ ಚಿತ್ರಿಸುತ್ತದೆ. ಇದರಲ್ಲಿ ಆಫ್ರಿಕಾ ತನಗೆ ತಾನೇ ಮಾತನಾಡಿರುವಂತೆ ಹಾಗೂ ತನಗೆ ತಾನೇ ಕತೆಯನ್ನು ವಿವರಿಸಿಕೊಂಡಿರುವಂತೆ ಭಾಸವಾಗುತ್ತದೆ; ಭೂತಕಾಲದಲ್ಲಿ ತನ್ನ ಗತಿಯನ್ನು ಹೀಗೆ ಎಂದು ನಿರ್ಧರಿಸಿದ ಸಾಮ್ರಾಜ್ಯಶಾಹಿಯ ಪಟ್ಟಭದ್ರ ಹಿತಾಸಕ್ತಿಯನ್ನು ನಿರಾಕರಿಸುವ ಛಾತಿಯನ್ನು ಕಾಣುತ್ತೇವೆ. ಇದೇ ಬಗೆಯಲ್ಲಿ 1958ರಲ್ಲಿ ಚಿನುವಾ ಅಚಿಬೆಯವರ ‘ಥಿಂಗ್ಸ್ ಫಾಲ್ ಅಪಾರ್ಟ್’ (ಇದನ್ನು ಸಿ.ನಾಗಣ್ಣನವರೇ 2001ರಲ್ಲಿ ‘ಭಂಗ’ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ) ಕಾದಂಬರಿಯು ಕೂಡ ಅಪವ್ಯಾಖ್ಯಾನಕ್ಕೆ ಒಳಪಟ್ಟ ಆಫ್ರಿಕಾದ ಚರಿತ್ರೆಯನ್ನು ಮರು ವ್ಯಾಖ್ಯಾನಿಸುವ ಕಾರ್ಯವನ್ನೇ ಮಾಡಿದೆ.

ಈ ಕಾದಂಬರಿಯು ಎರಡು ಭಾಗಗಳಲ್ಲಿ ನಿರೂಪಿತವಾಗಿದೆ. ‘ಬೆಳಕು ನಂದಿತು’ ಎಂಬ ಮೊದಲ ಭಾಗವು ನುಜರೋಗೆ ಎಂಬ ಹುಡುಗ ಶಾಲೆಗೆ ಹೋಗುವುದರೊಂದಿಗೆ ಶುರುವಾಗುತ್ತದೆ; ಈತನೇ ಕಾದಂಬರಿಯ ಕಥಾ ನಾಯಕ; ಈತನ ತಂದೆ ನುಗೊತೊ; ಆತನಿಗೆ ನಜೇರಿ ಮತ್ತು ನೋಕಬಿ ಎಂಬ ಇಬ್ಬರು ಹೆಂಡತಿಯರು; ಬೋರೊ, ಕೋರಿ ಮತ್ತು ಕಮಾವು-ಹಿರಿಯ ಹೆಂಡತಿ ನಜೇರಿಯ ಮಕ್ಕಳು. ನುಜರೋಗೆ ಮತ್ತು ಮವಾಂಗಿ ನೋಕಬಿಯ ಮಕ್ಕಳು. ಆದರೂ ನುಗೊತೊನ ಕುಟುಂಬದಲ್ಲಿ ದಾಯಾದಿಗಳ ಹಾಗೂ ಸವತಿ ಮತ್ಸರದ ಜಗಳಗಳಿಲ್ಲ; ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ. ಬಿಳಿಯ ಜಮೀನ್ದಾರ ಮಿಸ್ಟರ್ ಹೌಲೆಂಡ್ಸ್‍ನ ಭೂಮಿಯಲ್ಲಿ ನುಗೊತೊ ಕೂಲಿಯವನಾಗಿ ಕೆಲಸ ಮಾಡುತ್ತಿರುತ್ತಾನೆ. ಈ ಭೂಮಿ ತನ್ನ ಪೂರ್ವಜರಿಗೆ ಸೆರಿದ್ದು ಎಂದು ನುಗೊತೊನ ತಂದೆಯು ಹೇಳಿರುತ್ತಾನೆ; ಅದನ್ನು ನುಗೊತೊ ತನ್ನ ಮಕ್ಕಳಿಗೆ ಯಾವಾಗಲೂ ಹೇಳುತ್ತಲೇ ಇರುತ್ತಾನೆ. ಈ ಭೂಮಿಯು ಒಂದಲ್ಲ ಒಂದು ದಿನ ತನ್ನದಾಗಲಿದೆ ಎಂಬ ಆಶಾಭಾವವನ್ನು ಹೊಂದಿರುತ್ತಾನೆ. ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಯಲ್ಲಿ ಸಂಕಪ್ಪಯ್ಯನ ಜಮೀನಿನಲ್ಲಿ ಜೀತಗಾರನಾಗಿ ದುಡಿಯುತ್ತಿದ್ದ ಚೋಮ ತನ್ನ ಒಡೆಯನಿಂದ ತುಂಡು ಭೂಮಿಯನ್ನು ಕೇಳುತ್ತಿರುತ್ತಾನೆ.

ಬಿಳಿಯರು ಖಡ್ಗ ಮತ್ತು ಬೈಬಲ್-ಎಂಬ ಎರಡು ಅಸ್ತ್ರಗಳ ಮುಖಾಂತರ ಆಫ್ರಿಕನ್ನರ ಭೂಮಿಯನ್ನು ವಶಪಡಿಸಿಕೊಂಡು ಅವರನ್ನು ತಮ್ಮ ನಾಡಿನಲ್ಲಿಯೇ ನಿರ್ಗಗತಿಕ ಸ್ಥಿತಿಗೆ ತಳ್ಳಿದರು. ಅವರು ಜನಾಂಗಭೇದ ಹಾಗೂ ವರ್ಣಭೇದ ನೀತಿಗಳಿಂದಲೇ ಆಫ್ರಿಕಾದ ಜನರನ್ನು ಗುಲಾಮಗಿರಿಗೆ ತಳ್ಳಿದರು. ತಮ್ಮದು ಮಾತ್ರವೇ ಜಗತ್ತಿನ ಶ್ರೇಷ್ಠ ಜನಾಂಗವೆಂದು ಬಿಂಬಿಸಿಕೊಂಡರು.  ಕೀನ್ಯಾ ದೇಶದ ಜನರ ಅಸ್ತಿತ್ವವು ಭೂಮಿಯ ಒಡೆತನದೊಂದಿಗೆ ತಳಕು ಹಾಕಿಕೊಂಡಿದೆ. ಆದ್ದರಿಂದ ಗೂಗಿಯವರು “ಕೀನ್ಯಾದ ಚರಿತ್ರೆಯನ್ನು ಹಾಗೂ ಸಮಕಾಲೀನ ರಾಜಕೀಯವನ್ನು ಅರಿಯಲು ಭೂಮಿಯ ಪ್ರಶ್ನೆಯೇ ಅವಶ್ಯಕವಾಗಿದೆ; 20ನೇ ಶತಮಾನದ ಚರಿತ್ರೆಯೆಂದರೆ ಭೂಮಿಯನ್ನು ಕಸಿದುಕೊಂಡವರ, ಕಳೆದುಕೊಂಡವರ, ಸೋಲುಂಡವರ ದಾರುಣ ಚರಿತ್ರೆಯಾಗಿದೆ” ಎನ್ನುತ್ತಾರೆ.

ಊರಿನ ಬಡಗಿಯಾಗಿದ್ದ ನಗಂಗನ ಕುರಿತು ಕಾದಂಬರಿಯು “ಯಾವನೇ ಆಗಲಿ ಆತನಿಗೆ ಭೂಮಿ ಇದೆ ಅಂದರೆ ಅವನು ಸಾಹುಕಾರ. ಒಬ್ಬ ವ್ಯಕ್ತಿಯ ಬಳಿ ಬೇಕಾದಷ್ಟು ಹಣವಿರಲಿ, ಬೇಕಾದಷ್ಟು ಕಾರುಗಳಿರಲಿ; ಭೂಮಿ ಇಲ್ಲದಿದ್ದರೆ ಅವನು ಸಾಹುಕಾರ ಅಂತ ಜನ ಭಾವಿಸುತ್ತಿರಲಿಲ್ಲ. ಹರಕಲು ಬಟ್ಟೆ ಹಾಕಿಕೊಂಡಿದ್ದರೂ ಸರಿ, ಒಬ್ಬನಿಗೆ ಒಂದು ಎಕರೆ ಜಮೀನಿದೆ ಅಂದರೆ ಅವನು ಹಣವುಳ್ಳವನಿಗಿಂತಲೂ ಮೇಲು” (ಪು. 36) ಎಂದು ನಿರೂಪಿಸುತ್ತದೆ. ಭೂಮಿಯ ಒಡೆತನವು ಜನ ಸಮುದಾಯಗಳ ಅಭ್ಯುದಯದ ಸಂಪತ್ತಾಗಿರುತ್ತದೆ. ನುಜರೋಗೆಯ ಅಣ್ಣ ಕಮಾವು ಈ ನಗಂಗನ ಬಳಿಯಲ್ಲಿ ಕಾರ್ಪೆಂಟರ್ ಕೆಲಸವನ್ನು ಕಲಿಯುತ್ತಿರುತ್ತಾನೆ.

ಗೂಗಿಯವರು ಸದರಿ ಕಾದಂಬರಿಯ ವಿನ್ಯಾಸದಲ್ಲಿ ಕೀನ್ಯಾದ ಗಿಕುಯು ಬುಡಕಟ್ಟು ಜನಾಂಗದ ಪಾರಂಪರಿಕ ಕತೆಗಳನ್ನು ಹಾಗೂ ಐತಿಹ್ಯಗಳನ್ನು ತುಂಬ ಅಚ್ಚುಕಟ್ಟಾಗಿ ಸಂಯೋಜಿಸಿದ್ದಾರೆ. ನುಗೊತೊ ತನ್ನ ಮಕ್ಕಳನ್ನು ಕೂರಿಸಿಕೊಂಡು ರಾತ್ರಿಯ ಹೊತ್ತಿನಲ್ಲಿ ಹೇಳುವ ಕತೆಗೆ ಮಹತ್ವವಿದೆ. ಈ ಗಿಕುಯು ಕತೆಯ ಪ್ರಕಾರ ಜಗತ್ತಿನ ಸೃಷ್ಟಿಕರ್ತ ಮುರುಂಗು; ಆತ ಭೂಮಿಯ ಮೇಲೆ ಮೊದಲು ಮರಗಳನ್ನು ಹಾಗೂ ಪ್ರಾಣಿಗಳನ್ನು ಸೃಷ್ಟಿಸಿದ; ನಂತರದಲ್ಲಿ ಭೂಮಿಯ ಮೇಲಿನ ಮೊದಲ ಮನುಷ್ಯರೆಂದರೆ ಗಿಕುಯು ಗಂಡಸು ಮತ್ತು ಮುಂಬಿ ಎಂಬ ಹೆಂಗಸು.

ಮುರುಂಗು ಭೂಮಿಯನ್ನು ಇವರ ಉಡಿಗೆ ಹಾಕಿ ಶಾಂತಿ ಸಮಾಧಾನದಿಂದ ಉಳುಮೆ ಮಾಡಲು ಹೇಳುತ್ತಾನೆ. ಬುಡಕಟ್ಟಿನ ಮೂಲ ದಂಪತಿಗಳು ಮುರುಂಗುಗೆ ಬಲಿಯನ್ನು ಕೊಡಬೇಕಿತ್ತು ಎನ್ನುತ್ತಾನೆ. ಆಗ ನುಜರೋಗೆ ‘ಆ ಭೂಮಿಯೆಲ್ಲ ಎಲ್ಲಿ ಹೋಯಿತು? ಎಂದು ತನ್ನ ಅಪ್ಪನಿಗೆ ಪ್ರಶ್ನಿಸುತ್ತಾನೆ. ಆಗ ನುಗೊತೊ ಇದೇ ಪ್ರಶ್ನೆಯೇ ತನ್ನನ್ನು ಕೂಡ ಗಾಯಗೊಳಿಸಿ ಕೊರೆಯುತ್ತಲೇ ಇದೆ ಎನ್ನುತ್ತಾನೆ. ಗಿಕುಯು ಬುಡಕಟ್ಟಿನ ಸಂತ ಮುಗೋ ವ ಕಿಬಿರೋ ಬಿಳಿಯರು ಬಂದು ಭೂಮಿಯನ್ನು ಕಿತ್ತುಕೊಳ್ಳುತ್ತಾರೆಂಬ ಭವಿಷ್ಯವನ್ನು ನುಡಿದಿರುತ್ತಾನೆ. ಈ ಸಂತ ಬಿಳಿಯರನ್ನು ಓಡಿಸಲು ಒಗ್ಗಟ್ಟಾಗುವುದನ್ನು ಸಹ ಸೂಚಿಸಿರುತ್ತಾನೆ. ಆದರೆ ನುಗೊತೊನ ಹಿರಿಯ ಮಗ ಬೋರೊ ಈ ಪುರಾಣದ ಕತೆಗಳನ್ನು ನಂಬುವುದಿಲ್ಲ; ಬಿಳಿಯರು ಈ ನೆಲದಲ್ಲಿ ಬೀಡು ಬಿಡಲು ಕಾರಣರಾದ ತಮ್ಮ ಜನರನ್ನು ಕೋಪದಿಂದ ಶಪಿಸುತ್ತಾನೆ.

ಕಾದಂಬರಿಯ ಎರಡನೇ ಭಾಗದಲ್ಲಿ ‘ಕತ್ತಲಿಳಿಯಿತು’ ಎಂಬ ಶೀರ್ಷಿಕೆಯಲ್ಲಿ ಮೌ ಮೌ ಎಂಬ ಗುಪ್ತ ಸಂಘಟನೆಯು ಕೀನ್ಯಾದ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ ನಡೆಸುವ ವಿವರಗಳಿವೆ. ಡೇಡನ್ ಕಿಮತಿಯ ನಾಯಕತ್ವದಲ್ಲಿ ನಡೆಯುವ ಈ ಹೋರಾಟವು ತಮ್ಮಿಂದ ಬಿಳಿಯರು ಕಿತ್ತುಕೊಂಡಿರುವ ಭೂಮಿಯನ್ನು ವಾಪಸ್ಸು ಪಡೆಯುವ ಗುರಿಯನ್ನು ಹೊಂದಿರುತ್ತದೆ. ಮಿಸ್ಟರ್ ಹೌಲೆಂಡ್ಸ್‍ನಿಗೆ ತನ್ನ ಜಮೀನನ್ನು ಕಳೆದುಕೊಳ್ಳುವ ಭಯ ಆವರಿಸಿಕೊಳ್ಳುತ್ತದೆ. ಆ ಸಂದರ್ಭದಲ್ಲಿ ಆತ ಸ್ಥಳೀಯ ಜೇಕೋಬೊ ಎಂಬಾತನಿಗೆ ತನ್ನ ಜಮೀನನ್ನು ಹೂಗಳನ್ನು ಬೆಳೆಯಲು ಕೊಡುತ್ತಾನೆ. ಇದರಿಂದಾಗಿ ನುಗೊತೊ ತನ್ನ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ. ಜೇಕೋಬೊ ಬಿಳಿಯನೊಬ್ಬನಿಗೆ ವಿಧೇಯನಾಗುವುದರ ಬಗ್ಗೆ ಕಾದಂಬರಿಯು ಕಟುವಾದ ನಿಲುವು ತಾಳುತ್ತದೆ; ಅಷ್ಟೇ ಅಲ್ಲದೆ ಆಫ್ರಿಕನ್ ಜನರು ಬಿಳಿಯರ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಾಗದಿರುವುದರ ಬಗ್ಗೆಯು ನಿಷ್ಠುರವಾದ ಧೋರಣೆಯನ್ನು ಹೊಂದಿದೆ. ಆದರೆ ತನ್ನ ದೇಶದ ಜನರು ಕಳೆದುಕೊಂಡಿದ್ದ ಭೂಮಿಯನ್ನು ಸಶಸ್ತ್ರ ಹೋರಾಟದಿಂದಲೇ ಪಡೆಯುವುದನ್ನು ಈ ಕಾದಂಬರಿಯು ಎತ್ತಿ ಹಿಡಿಯುತ್ತದೆ. 

ಬೋರೊ ತನ್ನ ಜನರಿಗೆ ಮೋಸ ಮಾಡಿದ ಜೇಕೋಬೊನನ್ನು ಹಾಗೂ ಮಿಸ್ಟರ್ ಹೌಲೆಂಡ್ಸ್‍ರನ್ನು ಕೊಲೆ ಮಾಡುತ್ತಾನೆ. ನುಗೊತೊ ತನ್ನ ಮಗ ಜೈಲಿಗೆ ಹೋಗುವುದನ್ನು ತಪ್ಪಿಸಲು ಆ ಕೊಲೆಗಳನ್ನು ತಾನೇ ಮಾಡಿರುವುದೆಂದು ಒಪ್ಪಿಕೊಳ್ಳುತ್ತಾನೆ. ಈ ಸುದ್ದಿಯು ಕಿರಿಯ ಮಗ ನುಜರೋಗೆಯ ಮನಸ್ಸನ್ನು ಘಾಸಿಗೊಳಿಸುತ್ತದೆ; ಹತಾಶನಾಗುವ ಆತ ಆತ್ಮಹತ್ಯೆಗೂ ಪ್ರಯತ್ನಿಸಿ ವಿಫಲನಾಗುತ್ತಾನೆ. ಜೇಕೋಬೆಯ ಮಗಳು ಮಿವಾಕಿಯು ನುಜರೋಗೆಯ ಬಾಲ್ಯದ ಗೆಳತಿ ಹಾಗೂ ಶಾಲೆಯಲ್ಲಿ ಸಹಪಾಟಿಯಾಗಿದ್ದಳು. ನುಜರೋಗೆ ಕ್ರಮೇಣವಾಗಿ ಅವಳಿಂದ ಆಕರ್ಷಿತನಾಗುತ್ತಾನೆ; ಆಕೆಯನ್ನು ಮನಸಾರೆ ಪ್ರೀತಿಸುತ್ತಾನೆ. ಎಷ್ಟು ಸಾಧ್ಯವೋ ಅಷ್ಟು ದೊಡ್ಡ ಶಿಕ್ಷಣವನ್ನು ಪಡೆಯುವುದೇ ನುಜರೋಗೆಯ ಮಹತ್ವಾಕಾಂಕ್ಷೆಯಾಗಿರುತ್ತದೆ. ಇಡೀ ಕಾದಂಬರಿಯಲ್ಲಿ ಅತ್ಯಂತ ಮುಗ್ಧನಾಗಿರುವ ನುಜರೋಗೆ ಭವಿಷ್ಯದಲ್ಲಿ ಒಳಿತಾಗದಲಿದೆ ಎಂಬುದನ್ನು ಗಾಢವಾಗಿ ನಂಬಿರುತ್ತಾನೆ; ಆತ ಕಾದಂಬರಿಯಲ್ಲಿ ಕನಸುಗಾರನಾಗಿಯೇ ಚಿತ್ರಿತನಾಗಿದ್ದಾನೆ.

ಗೂಗಿಯವರು ಈ ಕಾದಂಬರಿಯ ಶೀರ್ಷಿಕೆಯನ್ನು ಅಮೆರಿಕಾದ ಮಾನವತಾವಾದಿ ಕವಿ ವಾಲ್ಟ್ ವಿಟ್‍ಮನ್ ಅವರ ‘ಲೀವ್ಸ್ ಆಫ್ ಗ್ರಾಸ್’ (ಇದನ್ನು ಗೋಪಾಲಕೃಷ್ಣ ಅಡಿಗರು 1966ರಲ್ಲಿ ‘ಹುಲ್ಲಿನ ದಳಗಳು’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ) ಎಂಬ ಕವನ ಸಂಕಲದ ಕವಿತೆಯೊಂದರಿಂದ ಪಡೆದುಕೊಂಡಿದ್ದಾರೆ. ‘ಅಳಬೇಡ, ಮಗುವೆ| ಅಳಬೇಡ ನನಕಂದ| ಈ ಚುಂಬನಗಳಿಂದ ಅಳಿಸುವೆ ನಿನ್ನ ಕಣ್ಣೀರ| ಸರ್ವಭಕ್ಷಕ ಮೋಡಗಳು ಗೆಲ್ಲಲಾರವು| ಆಕಾಶವನ್ನವು ಆವರಿಸಿಕೊಳ್ಳಲಾರವು…’ ಎಂಬ ಸಾಲುಗಳನ್ನು ಕಾದಂಬರಿಯ ಆರಂಭದಲ್ಲಿ ಕೋಟ್ ಮಾಡಲಾಗಿದೆ. ಯಾವುದೇ ಯುದ್ಧ ಅಥವಾ ಗೆಲುವುಗಳು ಒಂದು ದೇಶವನ್ನು ಸಂಪೂರ್ಣವಾಗಿ ನಾಶ ಮಾಡಲಾರವು. ಗೂಗಿಯ ಕಾದಂಬರಿಯು ದುರಂತಗಳನ್ನು ಹೇಳುತ್ತಲೇ ಅಪಾರ ಭರವಸೆಯನ್ನು ಕೂಡ ಮಂಡಿಸುತ್ತದೆ. ಸದರಿ ಕಾದಂಬರಿಯಲ್ಲಿ ಮಕ್ಕಳು ಚೈತನ್ಯಶೀಲತೆಯ ಹಾಗೂ ಬದಲಾವಣೆಯ ಪ್ರತೀಕರಾಗಿದ್ದಾರೆ.

ಈ ಕಾದಂಬರಿಯು ಮೊದಲು ‘ಜೇಮ್ಸ್ ಗೂಗಿ’ ಎಂಬ ಹೆಸರಿನಿಂದಲೇ ಪ್ರಕಟವಾಯಿತು. ಗೂಗಿಯವರು ಫ್ರ್ಯಾನ್ಜ್ ಫ್ಯಾನನ್ ಅವರ ಮಾಕ್ರ್ಸ್‍ವಾದಿ ಚಿಂತನೆಗಳಿಂದ ಪ್ರಭಾವಿತನಾಗಿ ಕ್ರಿಶ್ಚಿಯನ್ ಧರ್ಮವನ್ನು ತ್ಯಜಿಸಿದರು. ತಮ್ಮ ಹೆಸರನ್ನು ಗಿಕುಯು ಬುಡಕಟ್ಟಿನ ಪ್ರಕಾರ ಗೂಗಿ ವಾ ಥಿಯಾಂ’ಗೋ ಎಂದೇ ಇಟ್ಟುಕೊಂಡರು. ಗೂಗಿ 1977ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬರೆಯುವುದಕ್ಕೆ ವಿದಾಯ ಹೇಳಿ ಗಿಕುಯು ಭಾಷೆಯಲ್ಲಿಯೇ ‘ಎನ್‍ಗಾಹಿಕಾ ಎನ್‍ದೀಂಡಾ’ (ಐ ವಿಲ್ ಮ್ಯಾರಿ ವೆನ್ ಐ ವಾಂಟ್) ಎಂಬ ನಾಟಕವನ್ನು ಬರೆದರು. ಈ ನಾಟಕದಲ್ಲಿ ಅಂದಿನ ಕೀನ್ಯಾದ ರಾಷ್ಟ್ರಾಧ್ಯಕ್ಷನ ಸರ್ವಾಧಿಕಾರಿ ಪ್ರಭುತ್ವವವನ್ನು ಪ್ರತಿರೋಧಿಸಿದ್ದರಿಂದ ಗೂಗಿಯವರು ಸೆರೆಮನೆಗೆ ಹೋಗಬೇಕಾಯಿತು. ಸೆರೆಮನೆಯಲ್ಲಿ ಇದ್ದಾಗಲೇ ಅಧಿಕಾರಿಗಳ ಕಣ್ಣು ತಪ್ಪಿಸಿ ಟಾಯ್ಲೆಟ್ ಪೇಪರ್ ಮೇಲೆ ‘ಡೆವಿಲ್ಸ್ ಆನ್ ದ ಕ್ರಾಸ್’ ಕಾದಂಬರಿಯನ್ನು ಬರೆದರು.

ಗೂಗಿಯವರು ತಮ್ಮ ‘ಡಿಕಲೋನೈಜಿಂಗ್ ದ ಮೈಂಡ್: ದ ಪೊಲಿಟಿಕ್ಸ್ ಆಫ್ ಲ್ಯಾಂಗ್ವೇಜ್ ಇನ್ ಆಫ್ರಿಕನ್ ಲಿಟರೇಚರ್’ ಎಂಬ ಕೃತಿಯ ಮೂಲಕ ಜಗತ್ತಿನ ಅತ್ಯುತ್ತಮ ಚಿಂತಕರಾಗಿ ಪ್ರಖ್ಯಾತರಾಗಿದ್ದಾರೆ. ರಹಮತ್ ತರೀಕೆರೆಯವರು ಮೊದಲ ಬಾರಿಗೆ ಕನ್ನಡದಲ್ಲಿ ಈ ಕೃತಿಯ ಒಂದು ಅಧ್ಯಾಯವನ್ನು ‘ವಸಾಹತು ಪ್ರಜ್ಞೆ ಮತ್ತು ವಿಮೋಚನೆ’ (1996) ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಗೂಗಿಯವರ ಚಿಂತನೆಗಳನ್ನು ಎಚ್.ಎಸ್. ನಾಗಭೂಷಣ ಅವರು ‘ಎಲ್ಲೆ ಮೀರಿ’ (2017) ಎಂಬ ಕೃತಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಂಜಗೆರೆ ಜಯಪ್ರಕಾಶ್ ಅವರು ಗೂಗಿಯ ‘ಡೆವಿಲ್ ಆನ್ ದ ಕ್ರಾಸ್’ (2018) ಕಾದಂಬರಿಯನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಈಗ ಗೂಗಿಯ ‘ಅಳಬೇಡ ಕಂದ’ ಹಾಗೂ ‘ಹರಿವ ನದಿ ಸಾಕ್ಷಿ’ (ದಿ ರಿವರ್ ಬಿಟ್ವೀನ್) ಎರಡೂ ಕಾದಂಬರಿಗಳನ್ನು ಡಾ. ಸಿ. ನಾಗಣ್ಣನವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹೀಗೆ ಕನ್ನಡ ಜಗತ್ತು ಗೂಗಿಯವರ ಕೆಲವು ಕೃತಿಗಳನ್ನು ಬರಮಾಡಿಕೊಂಡಿದೆ. ಇವುಗಳು ಒಳಗೊಂಡ ಹಾಗೆ ಆಫ್ರಿಕನ್ ಸಾಹಿತ್ಯದ ಬಗ್ಗೆ ಗಂಭೀರ ಚರ್ಚೆಗಳು ನಡೆಯಬೇಕಿದೆ.

ನಾಗಣ್ಣನವರ ಅನುವಾದಿತ ‘ಅಳಬೇಡ ಕಂದ’ ಕಾದಂಬರಿಯನ್ನು ಕನ್ನಡದಲ್ಲಿ ಓದುವಾಗ ಅಲ್ಲಲ್ಲಿ ಭಾಷೆಯು ಕೃತಕವಾಗಿದ್ದು ಗಮನಕ್ಕೆ ಬರದೇ ಇರುವುದಿಲ್ಲ. ಅನುವಾದವು ತುಂಬ ಶ್ರಮವನ್ನು ಹಾಗೂ ತಾಳ್ಮೆಯನ್ನು ಅಪೇಕ್ಷಿಸುತ್ತದೆ. ಆದರೆ ಇದೊಂದು ಅವಸರದಿಂದ ಕೂಡಿದ ಅನುವಾದವೇ ಆಗಿದೆ. ಅನೇಕ ಕಡೆಗಳಲ್ಲಿ ಕನ್ನಡ ವಾಕ್ಯಗಳು ವ್ಯಾಕರಣಬದ್ಧವಾಗಿಲ್ಲ. ನಿದರ್ಶನಕ್ಕೆ ‘ಮುಖ ಸಿಂಡರಿಸಿಕೊಂಡು ಕಾಗದದ ತುದಿ ಹಿಡಿದುಕೊಂಡು ಆತ ಚಾಕುವಿನಿಂದ ತೆಗೆದು ಹಾಕಿದರು’ (ಪು. 118) ಹಾಗೂ ‘ಎಲ್ಲರಲ್ಲೂ ಇದ್ದ ಒಳ್ಳೆಯ ಗುಣಗಳನ್ನು ಹೊರತರಲು ಆತ ಪ್ರಯತ್ನಿಸಿದರು’ (162) -ಈ ವಾಕ್ಯಗಳನ್ನು ಗಮನಿಸಬಹುದು. ಇನ್ನೂ ಇಂತಹ ಅನೇಕ ಎಡವಟ್ಟುಗಳು ಓದುವಾಗ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಕಾದಂಬರಿಯ ಸರಾಗ ಓದಿಗೆ ಅಡ್ಡಿಯಾಗುತ್ತವೆ. ನಾಗಣ್ಣನವರು ಇದರ ಬಗ್ಗೆ ಮತ್ತಷ್ಟು ಮುತುವರ್ಜಿ ವಹಿಸಬೇಕಿತ್ತು.

*ಲೇಖಕರು ಬೆಳಗಾವಿ ಜಿಲ್ಲೆ ನಂದಗಾಂವನವರು. ಸಾಹಿತ್ಯ ವಿಮರ್ಶೆ, ಸಂಶೋಧನೆ, ಸಿನಿಮಾ ಅಧ್ಯಯನ, ಫೋಟೋಗ್ರಾಫಿ ಹಾಗೂ ಅನುವಾದದಲ್ಲಿ ಆಸಕ್ತಿ. ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿಯೋಜನೆ ಮೇರೆಗೆ ಪ್ರಾಧ್ಯಾಪಕರು.

Leave a Reply

Your email address will not be published.