ಕವನಗಳು

ಅಂತಿಂಥ ಹೆಣ್ಣಲ್ಲ!

ನೆನಪಿರಕೇನು ಕಮ್ಮಿ ವಯಸೆ?
ಪಾಪ ಅರಳು ಮರಳು!
ಅಷ್ಟು ಕಾಣದೆ ನಿಮಗೆ?
ಒಮ್ಮೊಮ್ಮೆ ಬೀದಿ ತಿರುಗಿರಬೋದು
ಸೆರಗು ಹಾರಿಸಿ ಕಣ್ಣು ಹೊಡೆದಿರಬೋದು
ಗಂಡನೆಂಬ ಪ್ರಾಣಿ ಇದ್ದಿದ್ದರೆ ಇದೆಲ್ಲ ಏಕಿತ್ತು?
ಪಾಪ ಹೊಟ್ಟೆಪಾಡು!
ಇಡೀ ಜೀವನ ಪರಗಂಡನ ಜತೆ ನವೆದಳಲ್ಲ
ಅವಳೇನು ಬೇಕಂತ ಮಾಡಿದಳೆ?
ಕೂತುಣ್ಣುವವರೆ ಎಲ್ಲ ದುಡಿವವರೆ ಇಲ್ಲವಲ್ಲ
ತನ್ನನ್ನೂ ತನ್ನವರನ್ನೂ ಸಂಭಾಳಿಸಿದ್ದೇನು ಸಾಮಾನ್ಯನ?
ಅವಳದೂ ಪಾಪ ಹೇಸದ ಜೀವ ತಾನೆ?

ಹಿರಿತನದ ಅಧಿಕಾರ ಹೇಳಿಕೇಳಿ ಬಂದೀತೆ?
ಎಳೆಯರು ದಾರಿ ತಪ್ಪಿದರೆ
ಎಷ್ಟು ಕಳವಳ ಪಡುತಾಳೆ ಅಂತೀರಿ?
ತಪ್ಪು ತಿದ್ದದೆ ನಿದ್ದೆ ಹತ್ತಲೊಲ್ಲದು
ಬಾಳು ಹಸನಾಗಬೇಕಂತ ಭಾರಿ ಚಿಂತೆ
ಎಷ್ಟಿದ್ದರೂ ಅನುಭವಸ್ಥೆಯಲ್ಲವೆ?
ಚಿಕ್ಕವರು ಚಿಕ್ಕವರಂಗಿರಬೇಕು
ಆಕೆಂಥ ಮುತ್ತೈದೆ ಅಂತ ಯಾರಿಗೆ ಗೊತ್ತಿಲ್ಲ?
ತನ್ನ ಮುಂದೆ ಚೆಲ್ಲು ಚೆಲ್ಲು ಆಡಿದರೆ
ಸಹಿಸಿಯಾಳು ಹೇಗೆ?
ಅಷ್ಟೂ ತಿಳಿಯಬೇಡವೆ ಈ ಮಕ್ಕಳಿಗೆ?
ವಯಸ್ಸು ಬಂದೊಡನೆ ನೆಲ ಕಾಣದೆ ಹೋದರೆ ಹೇಗೆ?
ಬುದ್ಧಿಯಿಲ್ಲದವು ಬುದ್ಧಿ ಹೇಳಿದರೂ ಕೇಳವು
ಸುಮ್ಮನೆ ಅನ್ನಬಾರದು ಅವಳಿಗೆ
ಅಷ್ಟು ಕಾಳಜಿ ಯಾರು ಮಾಡುತಾರೆ
ಗರತಿ ತರ ಇರಬೇಕಂತ ಅವಳು ಹೇಳದೆ
ದಾರಿಲಿ ಹೋಗೋ ದಾಸಯ್ಯ ಹೇಳುತಾನ?
ಇದೆಲ್ಲ ಎಲ್ಲರಿಂದ ಆಗೋದಲ್ಲ
ಅವಳೇನು ಅಂತಿಂಥ ಹೆಣ್ಣಲ್ಲ!

-ಶ್ರೀಧರ ಪಿಸ್ಸೆ

 

ಸೂಜಿಗವನ

ಪರದೆಯ ಮೇಲೆ
ನಾಯಕಿಯ
ಅಗಲಿಕೆ ಬಯಸದೆ
ಬದುಕು ಬೇಡೆಂದ
ನಾಯಕನ
ದೃಶ್ಯ ಸಾಕೆನಿಸಿ
ಹಿಂಜರಿದ ನನ್ನ
ಕೈ ಗಟ್ಟಿ ಹಿಡಿದ ಪ್ರಿಯತಮ
ಹುಚ್ಚು ಹೃದಯದ
ಬಡಿತ ಬೇಡೆಂದರೂ
ಹೆಚ್ಚಿಸಿದ್ದ ದುಗುಡ ಹೆಚ್ಚಿಸಿದ್ದ

-ಸೂಜಿ

 

ಸುಧಾಮ

ದೂರದಲ್ಲಿ ಹರಕು
ಬಟ್ಟೆ ಹಳಸು ಮುಖ
ಅದೇ ಸುಧಾಮ ಬರುತ್ತಿದ್ದ
ಹೌದು ಅವನೇ ನಿಸ್ಸಂದೇಹ
ಛೇ ! ಈ ಹೊತ್ತು ಬರಬಾರದಿತ್ತು
ಹಳೇ ಸ್ನೇಹ ವ್ಯವಹಾರಕ್ಕೀಗ
ಕಾಲವೇ ವೇಳೆಯೇ ?
ಅವನಿಗೋ ಎಲ್ಲಾ ಕಾಲ ಒಂದೇ
ಕುಚೇಲ ಗರೀಬ ಮುಗ್ಧ
ಜಗತ್ತನ್ನಾಳುವ ರಾಜ ಕಾರ್ಯ
ದಿಗ್ವಿಜಯ ಯುದ್ಧ ಸಮರ
ನನಗೆಲ್ಲಿದೆ ಪುರುಸೊತ್ತು
ಸುಧಾಮನ ಉಪಚರಿಸಲು !
ಅದೋ ಬಂದೇ ಬಿಟ್ಟ
ಅಯ್ಯಯ್ಯೋ ! ಸಭಿಕರ ಮುಂದೆ
ಏನಂತ ಪರಿಚಯಿಸಲಿ ?
’ಕೃಷ್ಣ, ಶ್ರೀ ಕೃಷ್ಣಾ, ಗೆಳೆಯಾ’
ಅಕ್ಕರೆಯ ಕೂಗು ಕುಚೇಲ
ಕೈ ಮುಗಿದು ನಿಂತಿದ್ದ
ಕೂಗುತ್ತಲೇ ಇದ್ದ
ಹೃದಯದ ಒಳಗೂ ಬಂದು !
ಕದವಿಕ್ಕಿ ಮುಸುಕೆಳೆದು
ಇಲ್ಲ ಎಂದೆನಿಸಿಕೊಂಡೆ
ಇದ್ದು ಕೊಂಡೂ……..

-ವೈಲೆಟ್ ಪಿಂಟೋ

Leave a Reply

Your email address will not be published.