ಕವನಗಳು

ಆ ತಾಯಿ… ನೆನೆಯುತ್ತಾ…

ಮಗಳು ಬರ್ತಾಳಂತ ಮನೆಯಲ್ಲಿ ಕಾಯ್ತಿದ್ದೆ
ಜಾಣೆ ಬರ್ತಾಳಂತ ಜಗುಲಿಯಲಿ ಕಾಯ್ತಿದ್ದೆ
ಬಂದಳು ಮಗಳು ಹೆಣವಾಗಿ ಹೋದಳು
ಓದು ಮುಗಿಯಲೆ ಇಲ್ಲ ಹೊರಟೋದಳು…
 
ಓದಿದರೆ ಕಷ್ಟಗಳು ಓಡುವವು ದೂರಂತೆ
ಬದುಕೀನ ಬಂಧನವ ಕಳಚಿಕೊಳ್ವದಂತೆ
ಓದೂವೆ ನಾನು ಹೊಸ ಬಾಳಿಗೆ ಎನುತ
ಓದೂವ ಸಡಗರದಿ ಒಲವಾದಳು
 
ಅಂಕಗಳು ಕಡಿಮೆಂದು ಚಿಂತೆ ಮಾಡದವಳು
ಅಳಬೇಡ ಅಮ್ಮ ನೀ ಎನುತ ಎದೆಗಪ್ಪಿದಳು
ಓದು ಪರೀಕ್ಷೆಗಳ ಪಾಸಾದಳು
ಬದುಕೀನ ಪರೀಕ್ಷೆಗೆ ಬಲಿಯಾದಳು
 
ಜಾಣೆ ನನಮಗಳು ಜೇನಂತ ಹೆಸರವಳು
ಎಲ್ಲರೊಳಗೊಂದಾಗಿ ಸೆರಗಲ್ಲಿ ಬೆಳೆದವಳು
ಮನೆ ಓಣಿಯಲಿ ಬೆರೆತು ಮಧುವಾದಳು
ಕಾಮುಕರ ಕಣ್ ಬಿದ್ದು ಮಣ್ಣಾದಳು
 
ಸುಂದರಿ ನೀನಮ್ಮ ಕಣ್ಣು ನಿನಮ್ಯಾಲಮ್ಮ
ಮೋಹದ ಗಾಳಿಗೆ ಮೋಸ ಹೋದೆಯಮ್ಮ
ಅರಿಯಾದೆ ಹೋದೆ ಅವರಾಟಮ್ಮ
ದೇಹ ಸುಟ್ಟು ಉರುಳು ಕಟ್ಟಿದರಮ್ಮಾ..
 
ಸತ್ತಿದ್ದು ನೀನಲ್ಲ ಸಾವಿಲ್ಲ ನಿನಗಮ್ಮ
ಕಾಮುಕರ ಹೆತ್ತವರ ಕರುಳು ಸತ್ತೋಯ್ತಮ್ಮ
ಸತ್ತಿದ್ದು ನನ್ನ ತಾಯಿ ತಂಗೆಮ್ಮ ಓ ಮಧು
ಸುಮ್ಮನಿದ್ದು ನಾವು ಸತ್ತೆವಮ್ಮ..
 
ನಿನಗಾಕಿದ ಉರುಳು ನಮಕೊರಳು ನೋಡಮ್ಮ
ಅತ್ಯಾಚಾರಿಯ ಸುಟ್ಟು ಹಲ್ಲು ಮಸಿತೀವಮ್ಮ
ನಿನ್ನ ಕಷ್ಟದ ಸಾವು ಯಾರೀಗು ಬರದಂತೆ ಕೆಂಪಾಗ್ತೀವಿ ಅವರ
ಕುಣಿತೋಡ್ತೀವಿ…
-ರಮೇಶ ಗಬ್ಬೂರ್.

ಸೂಜಿಗವನ

ವೋಟಿನ ಗುಂಗಿನಲ್ಲಿ
ಮೈಮರೆತ ನನ್ನವ
ಆಟ ಮುಗಿಸಿ
ಬಳಿಗೆ ಬಂದವನೇ,
ಯಾವ ಬಟನ್ ಒತ್ತಿದರೆ
ನಿನ್ನ ಮೈನಸ್‍ಗೆ ನನ್ನ ಪ್ಲಸ್
ಕೂಡಿದರೆ ಡಬಲ್ ಪ್ಲಸ್
ಎಂದೆನ್ನಬೇಕೆ?
ಯಾರು ಬಂದರೇನು,
ನನ್ನ ಸಮಯಕ್ಕೆ ನೀನು
ಬಂದರೆ ಸಾಕೆಂದೆ.
-ಸೂಜಿ

ಒಂದು ಭಾವಬಿಂದು

ಮೊಗ್ಗುಗಣ್ಣ ಕಂದನೇ ಇದೋ ನಿನಗೆ ವಂದನೆ
ಹಿಗ್ಗುತಲೆವ ತಣ್ಣನೇ ಗಾಳಿಯೇ ವಂದನೆ
 
ಬನದ ಬಿನದ ಚಿದ್ವಿಲಾಸ ಉಲಿವ ರಾಗ ಕೋಗಿಲೆಯೇ
ಸುಳಿವ ಜಲದ ಮಂದಹಾಸ ತೊನೆವ ಕನೈದಿಲೆಯೇ
ಹಸಿರ ಬಸಿರ ಕಾನನವೇ ಉಸಿರ ನೀಡು ಬಾ ಒಲವೇ
 
ಝೊಂಪೆಝೊಂಪೆ ಹಣ್ಣು ಹೂವು ತೊನೆದಿರುವ ಮಾ ಮರವೇ
ಇಂಪು ತಂಪು ತಳಿರು ಕುಳಿರು ಸೂಸುತಿರುವ ಸಂಪಿಗೆಯೇ ಕಂಪು
ಕಂಪು ರಾಶಿ ಚೆಲ್ಲು ನನ್ನೊಲವ ಮಲ್ಲಿಗೆಯೇ
-ಸುಕನ್ಯಾ ಕಳಸ

 

2 Responses to "ಕವನಗಳು"

Leave a Reply

Your email address will not be published.