ಕವಿತೆ

ಎಷ್ಟು ದ್ರೋಣರಿದ್ದಾರೆ?

ಎಷ್ಟು ದ್ರೋಣರಿದ್ದಾರೆ? ಗುರುಕಾಣಿಕೆ ಕೇಳಲು

ನಮ್ಮ ಬೆರಳ ಕತ್ತರಿಸಿ ಜಾತಿವಾದ ಮೆರೆಯಲು

ಆಕಾಶವ ತೋರಿಸಿ ಆಸೆಗಣ್ಣ ತೆರೆಯಿಸಿ

ಪಾತಾಳಕೆ ದೂಡಲು ಪಾಪಕೃತ್ಯ ಮೆರೆಯಲು

ಅಲ್ಲಿ ಇಲ್ಲಿ ಅಲೆದಾಡಿಸಿ ನಮ್ಮ ಸಮಯ ಸಾಯಿಸಿ

ವಿಚಾರ ಸಂಕಿರಣದಲ್ಲಿ ಪ್ರಚಾರ ಪಡೆವ ಪಂಡಿತರು

ಪಾಠಪಠ್ಯ ಹೊರಗೆ ಇಟ್ಟು ಹೊಟೆಲ್ನಲ್ಲಿ ಕೂತುಬಿಟ್ಟು

ಹರಟೆ ಹೊಡೆವ ಭೂಪರು ಬಲು ಜಂಭದ ಪ್ರೊಫೆಸರು

ಕ್ಲಾಸಿನಲ್ಲಿ ತಮ್ಮ ಮನೆಯ ಕಥೆಯ ಹೇಳೋ ಮಾಸ್ಟರು

ಸ್ಪೆಷಲ್ ಕ್ಲಾಸಿನಲ್ಲಿ ಪುಂಗಿ ಊದೊ ಪ್ರವೀಣರು

ನೀತಿಗೀತಿ ಅನ್ನುತಾರೆ ತತ್ತ್ವಗಿತ್ವ ಬೊಗಳುತಾರೆ

ಉಪಕಾರವಿಲ್ಲದ ಉಪನ್ಯಾಸ ನೀಡಿ ಲಕ್ಷ ಲಕ್ಷ ಪಡೆಯುತಾರೆ

ಶಿಷ್ಯರನ್ನು ಕೂರಿಸಿ ಇಲ್ಲಸಲ್ಲದೆಲ್ಲ ಬೋಧಿಸಿ

ಓದಿ ಬರೆವ ವಿದ್ಯ ಕಲಿವ ಕರ್ತವ್ಯವ ಮರೆಯಿಸಿ

ಹಾಳಾಗಿ ಅಂಡಲೆಯುವ ಮಕ್ಕಳನ್ನು ನೋಡಿಕೊಂಡು

ಕಾಲಕಳೆವ ಕಳ್ಳರು ಇವರೆ ನೀಚ ದ್ರೋಣರು

ಕೇಳಿರಯ್ಯ ಗೆಳೆಯರೆ ನನ್ನದೊಂದು ಕಿವಿಮಾತು

ನಂಬದಿರಿ ನೆಚ್ಚದಿರಿ ಕಳ್ಳಗುರುವ ಸೇರದಿರಿ

ಕಲಿತು ಬಲಿತು ಬದುಕೊ ದಾರಿ ಅರಿತು ನಡೆಯಿರಿ

ಸುಖದ ದಾರಿ ತೆರೆಯಲಿ ಗೆಲುವು ನಿಮ್ಮದಾಗಲಿ

ಕೇಳಿರಮ್ಮ ಗೆಳತಿಯರೆ ನನ್ನದೊಂದು ಕಿವಿಮಾತು

ವಿದ್ಯಬುದ್ಧಿ ಕಲಿಯಿರಿ ಒಳ್ಳೆ ಕೆಲಸ ಪಡೆಯಿರಿ

ನಿಮ್ಮ ಕಾಲ ಮೇಲೆ ನಿಂತು ಪ್ರೇಮ ಪಕ್ಷಿ ಆಗ ಹುಡುಕಿ

ಜಾತಿಗೀತಿ ಎಲ್ಲ ಮೀರಿ ಬೆಳೆಯಿರಿ

ಪ್ರೀತಿ ಚಿರಾಯು ಎನ್ನಿರಿ

ಸಿಂಧುವಳ್ಳಿ ಸುಧೀರ


ಗ್ಲಿರಿಸೀಡಿಯಾ

ಎರಡೇ ಎರಡು ಮೆಟ್ಟಿಲು

ಕೆಳಗಿಳಿದು ಬಲಕ್ಕೆ ಹೊರಳಿದರೆ

ಮೈ ತುಂಬಾ ಹೂವರಳಿಸಿಕೊಂಡು ನಿಂತ

`ಗ್ಲಿರಿಸೀಡಿಯಾ

ಅದರ ಹಿಂದೆ

ಅದರ ಮುಂದೆ

ಅದರ ಸುತ್ತಾ ಮುತ್ತಾ

ಅಲ್ಲೆಲ್ಲಾ ಅದೇ ಅದೇ ಅದೇ `ಗ್ಲಿರಿಸೀಡಿಯಾ

ಒಂದೊಂದು ಪಕಳೆಯೂ ಅವಳ ಕೆಂದಾವರೆ ಕೆನ್ನೆ

ಮುದ್ದಾಡಿದ ಕೆಂಗುಲಾಬಿ ಅಧರಗಳು

ಹೂವ ತೊನೆದಾಟದಲಿ

ಕಣ್ಣ ಬೇಟದ ನೋಟ

ಮೈ ಸುಗಂಧ ಹೊದ್ದ ಪರಿಮಳ

ಹಗಲಲ್ಲೂ ಹುಣ್ಣಿಮೆಯ ಚಂದಿರ

ಮೋಡಿ ಮಾಡಿದ ಅವಳ ಮೈ ಮಾಟ

ತೆಳುವಾದ ಗಾಳಿಯೂ

ಹೂವ ರಾಶಿಯೊಳಗೆ ಸುಳಿದಾಡಿ ಸಮ್ಮೋಹಿತ

ಬೆಳಕು ಬಾಗಿ ಶರಣಾಗಿ

ದುಂಬಿ

ಸೂರ್ಯಪಾನದ ಹಕ್ಕಿ

ಬೆಸೆದುಕೊಂಡ ಜೀವದ ಜೀವ

ಮತ್ತೆ ಅದೇ ಎರಡು ಮೆಟ್ಟಿಲು

ಎಡಕ್ಕೆ ತಿರುಗಿ

ಹತ್ತಿ ಒಳಕ್ಕೆ ಬಂದರೆ

ಅಲ್ಲಿಯ ಪ್ರತಿ ಹೆಜ್ಜೆಯಲ್ಲೂ ಅವಳ ಜೀವ

ಜೀವತಳೆದ ಬೊಂಬೆ

ವಿ.ಹರಿನಾಥ ಬಾಬು

Leave a Reply

Your email address will not be published.