ಕವಿತೆ

ಉತ್ತರ ಹೇಳಿ

ಬೆಳ್ಳಂಬೆಳಿಗ್ಗೆ ಏನೋ ಕಳೆದುಕೊಂಡ

ಭಾವ ಎದೆಯೊಳಗೆ ಕಸಿವಿಸಿ…!

ಗಡಬಡಿಸಿ ಎದ್ದೆ

ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿ

ಜಂಭದ ಚೀಲ ಹೆಗಲಿಗೇರಿಸಿ

ದಾಪುಗಾಲಲಿ ನಡೆದುಬಿಟ್ಟೆ…!

ಅವಸರದಿ ಮೆಟ್ಟಿಲೇರಿ

ಚಿಲಕವ ಸರಿಸಿ ಬಾಗಿಲ ದೂಡಿ

ನಿಂತವಳ ಕಂಡು

ದೂಳು ಕೊಡವಿ ಬೆಂಚುಗಳೆಲ್ಲ

ನನ್ನತ್ತ ತಿರುಗಿ ನೋಡಿದವು…!

ಮೃದುವಾಗಿ ಮೈದಡವಿ ದೂಳು ಒರೆಸಿದ

ಬೆರಳುಗಳ ಹಿಡಿದು ಕೇಳಿದವು

ಏನಾಗಿದೆ…?”

ಮೌನದಿ ಕಣ್ಣುಮುಚ್ಚಿ ಹಗುರಾಗಿ

ಕೈ ಅದುಮಿ ಮುಂದೆ ನಡೆದೆ.

ಬೆತ್ತಲಾಗಿ ನಿಂತ ಕಪ್ಪು ಹಲಗೆ

ಮುಖ ಸಣ್ಣದು ಮಾಡಿ ಹುಬ್ಬು ಗಂಟಿಕ್ಕಿ

ಪ್ರಶ್ನೆ ಕೇಳುವ ಮೊದಲೇ

ಹಿತವಾಗಿ ಒಮ್ಮೆ ಸ್ಪರ್ಶಿಸಿ

ಮುದ್ದಾದ ಅಕ್ಷರಗಳ ಮುತ್ತಿಟ್ಟೆ…!

ದೀರ್ಘ ಧ್ಯಾನದಲ್ಲಿದ್ದ ಮಹಾವೀರ ಬುದ್ಧ ಏಸು

ಶಂಕರ ರಾಮಾನುಜ ಮಧ್ವ ಬಸವ ಕಣ್ಣು ತೆರೆದರು…!

ಮುಖದಲ್ಲಿ ಮಂದಸ್ಮಿತ ನಗು ಮಾಯವಾಗಿ

ಆತಂಕದ ಗೆರೆಗಳು ಮೂಡಿದವು…!

ವಿವೇಕಾನಂದ ಗಾಂಧಿ ಅಂಬೇಡ್ಕರ್ ಟ್ಯಾಗೋರ್

ತಮ್ಮ ತಮ್ಮೊಳಗೆ ಗುಸುಗುಸು

ಮಾತನಾಡತೊಡಗಿದರು…!

ಸುಮ್ಮನಿದ್ದದ್ದೇ ತಡ

ಪ್ಲೇಟೋ ಅರಿಸ್ಟಾಟಲ್ ರೂಸೊ

ಇವರೂ ಧ್ವನಿಗೂಡಿಸಿದರು…!

ಪಕ್ಕದ ಕೋಣೆಯಲ್ಲಿದ್ದ

ಥಾರ್ನ್ಡೈಕ್ ಪಾವಲೋ ಸ್ಕಿನ್ನರ್

ಪ್ರೈಡ್ ವ್ಯಾಟ್ಸನ್ ಪಿಯಾಜೆ

ಬಂದು ಸೇರಿದರು…!

ತರಗತಿ ತುಂಬಾ ಗದ್ದಲವೋ ಗದ್ದಲ…!

ಸೈಲೆನ್ಸ್ಜೋರಾಗಿ ಚೀರಿದೆ

ಒಂದು ಕ್ಷಣ ಎಲ್ಲವೂ ಸ್ತಬ್ಧ…!

ಒಳ್ಳೆಯದಾಯಿತು ನೀವೆಲ್ಲರೂ ಬಂದದ್ದು…!

ಹೇಳಿನಾನೀಗ ಹೇಗೆ ಪಾಠ ಮಾಡಲಿ…?

ಮತ್ತೆ ಗುಸುಗುಸು ಪಿಸುಪಿಸು

ಸದ್ದೊ ಸದ್ದು…!

ಅಸಹನೆಯಿಂದ ಗದರಿದೆ… “ಶ್.

ಗುಂಪು ಉತ್ತರ ಬೇಡ

ಉತ್ತರ ಗೊತ್ತಿರುವವರು ಕೈ ಮೇಲೆತ್ತಿ

ಯಾರು ಕೈ ಮೇಲೆತ್ತಲಿಲ್ಲ….!

ಮತ್ತೆ ಗಾಢ ಮೌನ

ನನಗೆ ನಿರಾಸೆ…!

ಮೆ ಕಮ್ ಇನ್

ಮತ್ತೆ ಎಲ್ಲರೂ ಧ್ವನಿ ಬಂದಕಡೆ ನೋಟ

ನಿಮ್ಮ ಮೊಬೈಲ್ ಚಾರ್ಜ್ ಆಗಿದೆ

ವೈಫೈ ಕೂಡಾ ಬರ್ತಿದೆ ನೀವೀಗ

ಆನ್ಲೈನ್ ಪಾಠ ಮಾಡಬಹುದು

ಸಿಪಾಯಿ ಫೋನ್ ಕೈಲಿಟ್ಟು ನಡೆದ…!!

ಡಾ.ನಿರ್ಮಲಾ ಬಟ್ಟಲ


ಬದುಕಾಟ

ಗಾಳಿಯ ಗಂಟುಗಳಿಗೆ

ದೂಳಿನ ಸಂಗ

ಅಪ್ಯಾಯಮಾನ

ಅದರಲ್ಲೆದ್ದ ಆಕಾರಕೆ

ರವಿಯ ಎರವಲು

ದೊರೆತು, ದುರಹಂಕಾರ.

ಬಣ್ಣಸುಣ್ಣ, ನೇರವಕ್ರ

ಆಕಾರಗಳು; ಬಗೆಬಗೆ

ಪಾತ್ರದ ವೇಷಧಾರಿಗಳು.

ಜಾತಿಮತಜನಾಂಗದ

ಭಜನೆಗಳು, ಮನದೊಳಗಿನ

ಶಾಂತಿಯ ವ್ಯಭಿಚಾರಿಗಳು.

ಭಿನ್ನತೆಗೆ ಆಟ ಹೂಡಿ

ಮೋಡಿಯಾಗಿ, ಮೋಸಹೋಗಿ

ಮೂರು ದಿನಗಳಿದ್ದು

ಹೊರಡುವ ಗಂಟುಗಳು

ಕೊನೆಗೆ ವಿಛಿದ್ರಗೊಂಡು

ಶೂನ್ಯವಾಸಿ

ಆಟದಲ್ಲಿ ನಿಯಮವಿದ್ದರೆ

ಆಟ, ಇಲ್ಲವಾದರೆ

ಬರೀ ಕಾದಾಟ.

ಅರಿತು ತಿಳಿದರೆ,

ಗಂಟುಗಳಿಗೂ ಇರುವುದು,

ಮೋಕ್ಷ!

ಎಂ.ಕುಸುಮ

Leave a Reply

Your email address will not be published.