ಕವಿತೆ

ಪ್ರೀತಿಯ ರಾದ್ಧಾಂತಗಳು

 

ನಿದ್ದೆ ಬಾರದ ರಾತ್ರಿಗಳು

ಸದ್ದೆ ಇರದ ಜಾತ್ರೆಗಳು

ತುಂಬಿದ ಕೆರೆಗಳು

ಖಾಲಿ ಬಿದ್ದ ಕೊಡಗಳು

 

ಜಮಾವಣೆಯಾಗದ ಖಾತೆಗಳು

ಬಟವಾಡೆಯಾಗದ ರಸೀತಿಗಳು

ಜನಜಂಗುಳಿಯ ಮಾರುಕಟ್ಟೆಗಳು

ತೂತು ಬಿದ್ದ ಜೇಬುಗಳು

 

ನುಡಿಸದೆ ಹೋದ ವಾದ್ಯಗಳು

ಬಡಿಸದೆ ಇದ್ದ ಖಾದ್ಯಗಳು

ಚೆಂದದ ಜಡೆಗಳು

ಮುಡಿಗೇರದ ಹೂಗಳು

 

ಕೇಳದೆ ಬರುವ ಖಾಯಿಲೆಗಳು

ಹೇಳದೆ ಹೋದ ಕಾರಣಗಳು

ಸುಂದರ ಕಲಾಕೃತಿಗಳು

ಪಾಳುಬಿದ್ದ ದೇಗುಲಗಳು

 

ವಯಸುಗಳು

ಹೂ ಮನಸುಗಳು

ಜಾತಿಗಳು, ಜಟಾಪಟಿಗಳು

ಕೊನೆಯಿರದ ಪಯಣಗಳು

ಆಕಸ್ಮಿಕ ತಿರುವುಗಳು

ಪ್ರೀತಿಯ ಈ ರಾದ್ಧಾಂತಗಳು!!

 

ಡಾ.ಅಕ್ಕಿ ಬಸವೇಶ


ಉಪಚಾರ

 

ಚೈನಾ, ನಿಮ್ಮ ಆ ಉದ್ದ ಗೋಡೆ,

ಕಟ್ಟಿದ್ದೀರಲ್ಲಾ ವೈರಿಗಳಾಕ್ರಮಣ ತಡೆಗಟ್ಟಲು?

ಈಗ ವೈರಸ್ ಆಕ್ರಮಣವಾಗಿದೆ,

ಕೊಲ್ಲುತ್ತಿದೆಯಲ್ಲ ಕ್ಷಣ ಕ್ಷಣ ನಿಮ್ಮನ್ನು

ನಮ್ಮನ್ನೂ ಜಗತ್ತಿನ ಜನರನ್ನೂ !!

 

ನಿಮ್ಮಲ್ಲೇ ಹುಟ್ಟಿದೆ ಡೇಂಗಿ, ಕೊರೊನಾ

ಏನೇನೋ ವೈರಸ್ ಪಿಡುಗು !

ತಿಬೇಟನ್ನು ತಗಣಿಯಂತೆ ಒರೆದ್ದೀರಿ,

ಹಾಂಗ್‌ಕಾಗ್ ಯುವಕರನ್ನು ಸೊಳ್ಳೆಯಂತೆ ಅಟ್ಟಿದ್ದೀರಿ,

ಟೈವಾನ್‌ದ ಸ್ವಾಯತ್ತತೆಯನ್ನು ಮೆಟ್ಟಿ ಹಾಕಿದ್ದೀರಿ.

 

ಸಾವಿರ ಸಾವಿರ ನಿಮ್ಮ ಮುಗ್ಧ ಪ್ರಜೆಗಳನ್ನು

ನುಂಗಿ ನೀರು ಕುಡಿದ ಕೊರೊನಾ ಶೋಧಕ್ಕಾಗಿ

ಜಗತ್ತಿನ ವಿಜ್ಞಾನಿಗಳಿದ್ದಾರೆ ಬಿಡಿ,

ಈ ಅನಿಷ್ಟದ ಮೂಲವು ನಿಮ್ಮೊಳಗೂ ಇದೆ ನೋಡಿ!

ಶೋಧಿಸಿದಲ್ಲಿ ತಪ್ಪಿಲ್ಲ ಬಿಡಿ.

 

ಆಹಾರದಲ್ಲಿದೆಯೇ? – ಇರಬಹುದು

ಸರ್ವಾಧಿಕಾರದಲ್ಲಿದೆಯೇ? – ಹೌದಲ್ಲ.

ಏಶಿಯಾ ನುಂಗುವ ತಂತ್ರದಲ್ಲಿ? – ಸಾಧ್ಯವಿದೆ

ವೈರಿಗಳ ಬೆನ್ನು ಕಟ್ಟುವದಿದೆಯಲ್ಲ? – ಸರಿ

ಕಳಪೆ ಮಾರಿ ಕೋಟ್ಯಾಧೀಶರಾಗುವುದಿದೆಯಲ್ಲ ? – ಹೌಹೌದು

 

ಹೌದು, ಒಳಗಿನ ಈ ಕ್ರೌರ್ಯಗಳ

ರೋಗಾಣುಗಳನ್ನು ಕೊಲ್ಲುವುದೆಂದು?

ಸಲ್ಲುವುದೆಂದು ಮಾನವತೆಗೆ ನ್ಯಾಯ??

ಕಟ್ಟುವದೆಂದು ಔದಾರ್ಯಕ್ಕೆ ನೆಲೆ ಬೆಲೆ???

 

ಮನಕ್ಕಂಜಿ ನಡೆದರೆ ಉಂಟು

ಶಾಶ್ವತ ಉಪಚಾರ, ಪರಿಹಾರ !!.

 

ಮಾಲತಿ ಪಟ್ಟಣಶೆಟ್ಟಿ

 


ಸೂರ್ಯ

 

ಸಿಡಿದ ಪಟಾಕಿಯಂತಲ್ಲ

ಉರಿ ಜ್ವಾಲೆಯನ್ನುಂಡು ಶಿವಕಂಠದಲ್ಲಿ

ತಾಯ್ಗರ್ಭದಲ್ಲಿ, ಪರ್ವತಗಳೇ

ಸುಡು ನೀರಾಗಿ ಬೆಂಕಿಯ ಮೊಸರಾಗಿ

ಜ್ವಲಂತ ಜರಿಯು ಹರಿದಾಡಿದ

ಗರ್ಭಮಂಡಲದಲ್ಲಿ ನುಂಗಿ

ಸಾಂತ್ವನ ಕೊಡುವ ತಾಯ ಮೊಲೆಯಂತೆ

ಪ್ರೇಮದ ಜೀವ ಕಿರಣಗಳನ್ನು

ಪೂರ್ವದಲ್ಲಿ ಚೆಲ್ಲಿ, ಬೆಡಗು ಬಿನ್ನಾಣದಿಂದ

ಸಿಂಗರಿಸಿದ ಜರತಾರಿ ವಧುವಿನ ಹಾಗೆ

ಮೆಲ್ಲ ಮೆಲ್ಲ ಹೆಜ್ಜೆ ಇಡುವೆ

ದಿನವಿಡೀ ಉರಿನಾಟ್ಯವಾದ ಮೇಲೆ

ಮತ್ತೆ ನಿನ್ನ ಸಿಂಗಾರದ ಮುಖ ಕಾಣಲು

ಕಾಯುವೆ ಸಂಜೆಯಲ್ಲಿ

ಜೀವದಾನ ಮಾಡಿದ ದೈವಕ್ಕೆ ಶರಣಾಗಿ

ಬಾ ಗೆಳೆಯ ಮತ್ತೆ ನಾಳೆ ಬಾ.

ಸಿ.ಎನ್.ಶ್ರೀನಾಥ್

 

Leave a Reply

Your email address will not be published.