ಕವಿತೆ

 

 

 

 

 

ಎರಡು ಸೊನ್ನೆಗಳು

ಯಮನಿಯಮ ಪ್ರಾಣಾಯಾಮವೆಂಬ

ಅಷ್ಟಾಂಗಯೋಗದಲ್ಲಿಎರಡು

ಯೋಗಗಳು: ಒಂದು ಅಳಿದು ಕೂಡುವ

ಯೋಗ ಒಂದು ಅಳಿಯದೆ ಕೂಡುವ

ಯೋಗ ಇವೆರಡರಲಿ ಅಳಿಯದೆ

ಕೂಡುವ ಯೋಗವರಿದು

ಕಾಣಾ ಗೊಗ್ಗೇಶ್ವರ

– ಅಲ್ಲಮಪ್ರಭು

ಎರಡು ಸೊನ್ನೆಗಳು ಎರಡು ಸನ್ನೆಗಳು

ಎರಡು ನನ್ನಿಗಳು

ಮೊದಲ ಸೊನ್ನೆ ಶಪಥ ಮಾಡಿತು: ಕೆಡುಕು,

ಕೊಳಕುಗಳನ್ನೆಲ್ಲಾ ಕಳೆದುಕೊಳ್ಳುತ್ತೇನೆ

ಒಂದೊಂದಾಗಿ ಕೆಡುಕುಗಳನ್ನು

ಕಳಚಿಕೊಂಡಿತು ತೊಲಗೋ

ಕಾಮತೊಲಗೋ ದ್ವೇಷ ಅಡಗಿರಿ

ಅರಿಷಡ್ವರ್ಗಗಳೆ ಇತ್ಯಾದಿಯಾಗಿ

ಜಪಿಸುತ್ತಾ ಮೇಲ್ಕಂಡ ಹೆಸರಿಸ

ಬಹುದಾದ ಪಾಪಗಳ ಜೊತೆಗೆ ಹೆಸರಿರದ

ಕೇಡುಗಳನ್ನೂ ಒದ್ದೋಡಿಸಿ ಪಾಪ ಅದರ

ದಢೂತಿಗಾತ್ರ ಅರ್ಧವಾಯಿತು ಆದರೆ

ಆಗ ಅದಕ್ಕನಿಸಿತು: ಇನ್ನು ಕಡಿಮೆ

ಒಳಿತುಗಳನ್ನೂ ಕಳೆದುಕೊಂಡು ಇನ್ನೂ

ಪರಿಶುದ್ಧವಾಗಬೇಕು ಒಂದಕ್ಕೆ

ಹೋಲಿಸಿದರೆ ಇನ್ನೊಂದು ಕಡಿಮೆ

ಪುಣ್ಯ ಅದಕ್ಕೆ ಹೋಲಿಸಿದರೆ

ಇನ್ನೊಂದು ಕಡಿಮೆ ಪುಣ್ಯ ಹೀಗೆ

ಲೆಕ್ಕಾಚಾರ ಶುರುವಾಗಿ ಒಂದೊಂದಾಗಿ

ಒಂದೊಂದಾಗಿ ಎಲ್ಲವನ್ನೂ ಕಳೆದು

ಕೊಂಡುಕೊನೆಗೆ ಯಾವುದೂ ಇಲ್ಲದೆ

ಹೋಗಿ ಸೊನ್ನೆ ಒಂದು ಇಲ್ಲವಾಗಿ ಇಲ್ಲದುದರ

ಸಂಕೇತವಾಯಿತು

ಸೊನ್ನೆ ಎರಡು ಇದನ್ನು

ಅರಿತುಕೊಂಡಿತು ಪಾಠ ಕಲಿತಿತು ಇಲ್ಲಿ

ಯಾವುದೂ ಹೊಲ್ಲಅನ್ನುವುದು

ಸಲ್ಲ ಕರುಣೆಯ ಕಣ್ಣಿಗೆ ಯಾವುದೂ

ಪೂರ್ತಿ ಕೆಡುಕಲ್ಲ ಹೀಗಂತ

ತಾನು ಹಿಗ್ಗತೊಡಗಿ ಕರುಣೆಯ

ಪರಿಧಿಯಲ್ಲಿಎಲ್ಲವನ್ನೂ

ಒಳಗೊಳ್ಳತೊಡಗಿ ಎಲ್ಲವೂ

ತಾನಾಯಿತು ಎಲ್ಲವನ್ನೂ

ಮಹಾಕರುಣೆಯಿಂದ ತಡವಿ ಒಳ್ಳೆಯದರ

ಅಹಂಕಾರವನ್ನು ಕೆಟ್ಟದುರ

ನಕಾರವನ್ನೂ ಕರುಣೆಯಲ್ಲಿ ಕರುಣೆಯಾಗಿ

ಬದಲಾಯಿಸಿತು ಅವಲೋಕಿತನೆಂಬ

ಮಹಾಕರುಣೆಯ

ಮೂರ್ತಿಯಾಯಿತು ಅವನಿಯ

ಎಲ್ಲ ತಾಯಿಯರ

ತಾಯಾಯಿತು ಬುದ್ಧ, ಬೋಧಿಸತ್ವರ

ಬಾಯಾಯಿತು ತರತಮವಿರದೆ ಎಲ್ಲದರ

ಸಂಕೇತವಾಯಿತು

ಶ್ರೀ ಗುರು ಶಿವಲಿಂಗೇಶಾ ಎರಡು

ಸೊನ್ನೆಗಳು ನೀನೇ ನೀಡಿದ ಎರಡು

ಸನ್ನೆಗಳು ಎರಡು ನನ್ನಿಗಳು

ನಿನಗೆ ನನ್ನಿಗಳು

-ಎಚ್.ಎಸ್.ಶಿವಪ್ರಕಾಶ್

 

Leave a Reply

Your email address will not be published.