ಕವಿತೆ

ವಿಧಾನಸಭೆಯಲ್ಲೊಂದು ಹಕ್ಕಿ

 

ನಿಧಾನ ಎಚ್ಚರಗೊಂಡ ವಿಧಾನಸಭೆಯಲ್ಲಿ

ದೀಪಗಳು ಧಗ್ಗೆಂದು ಹೊತ್ತಿ ಫ್ಯಾನುಗಳು ಗರಗರ ಸುತ್ತಿ

ಖದ್ದರುಗಳೆಲ್ಲ ಸುಖಾಸನಗಳ ಹತ್ತಿ 

ಶೋಭಾಯಮಾನವಾಗಿರುವಾಗ 

 

ಕಣ್ಣುಕುಕ್ಕುವ ಷಾಂಡ್ಲರುಗಳ ಬೆಳಕಿಗೆ ಬೆಳುದಿಂಗಳು

ಬಿದ್ದ ಸುನೇರಿಯ ಹಾಗೆ, ರಾಳದ ಬೆಳಕು

ಮೀಯಿಸಿದ ಬೇಗಡೆಯ ಹಾಗೆ, ಮಿಡಿನಾಗರ ಮಿಡಿದ ಹಾಗೆ

ಪ್ರತ್ಯಕ್ಷವಾಯಿತೊಂದು ಹಕ್ಕಿ ಎಲ್ಲರ ಕಣ್ಣು ಕುಕ್ಕುತ್ತ

 

ಉರುಳುಗಾಲಿಯ ಹಾಗೆ ಹೊರಳುತ್ತಿರುವ ಕಣ್ಣು

ಚೂರಿಮೊನೆಯಷ್ಟು ಚೂಪಾದ ಕೊಕ್ಕು;

ಗರಿಗಳ ಗಲಗಲವೆನ್ನಿಸುವ ರೆಕ್ಕೆ

ತೆಳು ಗುಲಾಬಿಯ ಪೊರೆಯಿರುವ ಕೋಲು ಕಾಲು,

ಬೂದುಬಣ್ಣದುಗುರುಗಳ ಪಾದ

 

ಒಮ್ಮೆಗೇ ಮೈಯಿಗೆ ಮೈಯೇ ಅದುರಿಸಿದ ಹಕ್ಕಿ

ಹಾರಿ ಮೇಲೇರಿ ಬಡಿದು ಸಭಾಪತಿಗಳ ಕನ್ನಡಕಕ್ಕೆ

ಬೀಳಿಸಿತೆರಡು ಪುಕ್ಕ ಕೆಳಕ್ಕೆ

 

ಸ್ತಬ್ಧರಾದವರು ಸಭಾಸದರಷ್ಟೇ ಅಲ್ಲ, ಮಾರ್ಷಲ್ಲುಗಳು ಕೂಡ

 

ಭಳಾರೆ ವಿಚಿತ್ರಂ!  

ಇದೇನು ಹೇಂಟೆಯೋ ಕುಕ್ಕುಟವೋ

ನಾಟಿಯೋ ಬ್ರಾಯ್ಲರೋ

ಅಥವಾ

ಗೂಬೆಯೋ ಹೆಣ್ಣು ನವಿಲೋ 

           

ಹಕ್ಕಿಯಂತೂ ಹೌದು

ಯಾರಿಗೆ ಗೊತ್ತು ಎಂಥ ಮೊಟ್ಟೆ ಇಟ್ಟೀತೆಂದು?

 

ಹೊರಹೋಗುವ ದಾರಿಯರಸುತ್ತ

ಹತ್ತಾರು ಸುತ್ತು ರಂಕುರಾಟಣವಾಡಿತು ಹಕ್ಕಿ

ಅದರ ಉಗುರಿಗೆ ಸಿಕ್ಕಿ

ಗಾಳಿಪಟವಾಡಿತೊಂದು ಗಾಂಧಿಟೋಪಿ. 

 

ಆಮೇಲೆ ಅಲ್ಲೇ ಬದಿಯಲ್ಲೇ ಕೂತಿದ್ದ ಸಚಿವರ ತಲೆಗೆ

ಮೂರು ಸುತ್ತುಹಾಕಿತು. ಅವರ ಕೈಯಲ್ಲಿದ್ದ ಯಾರೋ

ಮಂತ್ರಿಸಿ ಕೊಟ್ಟ ನಿಂಬೆಹಣ್ಣುಗಳನ್ನು ನೋಡಿದ್ದೆ

ದಿಕ್ಕುತಪ್ಪಿದಂತಾಗಿ

ಪುಕ್ಕಗಳುದುರಿಸಿ

ಹಿಕ್ಕೆಯ ಜಾರಿಸಿ

ಗರಗರ ಗರಗರ ತಿರುತಿರುಗುತ್ತಿರೆ

 

ಗೋಡೆ ಮೇಲಿನ ಗಾಂಧಿ ನೆಹರು

ಕರ್ಟನ್ ಮೇಜು ಕುರ್ಚಿ ಕಡತ ಸ್ಪೀಕರು

ಷಾಂಡ್ಲಿಯರು ಮಿನರಲ್ ವಾಟರು 

ಲಿಫ್ಟು ಮೊಗಸಾಲೆ ಎಲ್ಲ ಅಪ್ಪಾಲೆತಿಪ್ಪಾಲೆ ಸುತ್ತುತ್ತ ಸುತ್ತುತ್ತ

ಓಡಿಸಿಬಿಟ್ಟವು ಹಕ್ಕಿಯನ್ನು ಹೊರಕ್ಕೆ

 

ಪಕ್ಷವಿಪಕ್ಷವಿಲ್ಲದೆ ಜೊತೆಜೊತೆಗೇ ಹಿಂಬಾಲಿಸಿದ ಸಭಾಸದರೋ

ನಿಂತುಬಿಟ್ಟರು ಹೊರಗೆ ಗಕ್ಕೆಂದು ಅವಾಕ್ಕಾಗಿ.

 

ಅಲ್ಲಿ ಕೆಳಗಿಳಿಸುವ ಮೆಟ್ಟಿಲು ವನರಾಜಿ ಗದ್ದಲ ಗೌಜಿ ಹೆದ್ದಾರಿ

ವಾಹನಗಳ ಭರಾಟೆ ಅದೇ ಅಠಾರಾ ಕಚೇರಿ ಬೀದಿಭಿಕಾರಿ

 

ಅರೆ ಹಕ್ಕಿಯೂ ಇಲ್ಲ ಅದರ ನೆರಳೂ ಇಲ್ಲ

 

ಹೋಯಿತಾದರೂ ಎತ್ತ? ಎಡಕ್ಕೋ ಬಲಕ್ಕೋ?

 

ಜನರಷ್ಟೇ ನೆರಳುಗಳಂತೆ ಜರುಗಿ ಬರುತ್ತಿರುವುದ ಕಂಡು

ಹೆದರಿಕೊಂಡ ಅಷ್ಟೂ ಮಂದಿ

ಮೆಟ್ಟಿಲಿಳಿಯದೆ ಗಡಬಡಿಸಿ ದೌಡಾಯಿಸಿದರು

ಸಭಾಸದನಕ್ಕೆ

ಸಿಕ್ಕಬಹುದೆಂದು ಹಕ್ಕಿಯದೊಂದು ಪುಕ್ಕವಾದರೂ

ತಮ್ಮ ಪುಣ್ಯಕ್ಕೆ 

 

ಎಸ್. ದಿವಾಕರ್

Leave a Reply

Your email address will not be published.