ಕವಿತೆ

ಋತುಸ್ರಾವ

ಎಸ್.ಎಸ್ ಅಲಿ ತೋರಣಗಲ್ಲು

ನನ್ನ ಕವಿತೆಗೀಗ

ಋತುಸ್ರಾವವಾಗಿದೆ

ಜೊತೆಗೆ ಭಯವೂ

ಅಡ್ಡ ಕಸುಬಿನವರೆಲ್ಲಾ

ಉದ್ದುದ್ದಾ ದಿಟ್ಟಿಸುತ್ತಿದ್ದಾರೆ

ಮಗು ನನ್ನದಲ್ಲವೇ

ಅದಕ್ಕೂ ಕಟ್ಟಪ್ಪಣೆ ಕೊಟ್ಟಿದ್ದೇನೆ

ಎಚ್ಚರ…!

ಎಲ್ಲಿಯೂ ನಗುವ ಹಾಗಿಲ್ಲ

 

ಅವ್ವಳಿಗೆ ಗೊತ್ತಿಲ್ಲ

ಮಗಳ ಭಾವನೆಗಳು ನೆರೆದಿದ್ದು

ಹೇಳಿದರೆ

ಮತ್ತೊಂದು

ಠರಾವು ಹೊರಡಿಸುತ್ತಾಳೆ

ಎದೆಯುಬ್ಬಿಸದೇ ತಲೆ ತಗ್ಗಿಸಿ ನಡೆಯೋದು

ಮೈ ಮೇಲೊಂದು ದಾವಣಿ ಕಡ್ಡಾಯ

 

ಹಾಂ!

ನನಗೀಗ ಭಯವೇ ಭಯ

ಬದುಕಿನ ವಸಂತವನ್ನೇ 

ದೋಚುವ ನೀಚರ ನಡುವೆ

ನನ್ನೊಡಲ ಕುಡಿ

ಅರಳುತ್ತಿರುವಾಗ

ಬೆತ್ತಲ ಹಾಳೆಗೆ

ರವಿಕೆ ತೊಡಿಸುತ್ತಲೇ ಇದ್ದೆ

 

ಛೇ!

ಕಾಲ ಕವಿತೆಯನ್ನೀಗ ವೇಶ್ಯೆಯಾಗಿಸಿದೆ

ಮುಟ್ಟಾಗಿದ್ದೇ ತಡ

ದರ ದುಪ್ಪಟ್ಟಾಗಿದೆ

ಮರ್ಯಾದಸ್ತ ಗಿರಾಕಿಗೆ

ದೇಹದ ತುಂಬೆಲ್ಲಾ

ಚಿತ್ರ ಬರೆಯಲು

ಹದವಾದ ಹಾಳೆ ದೊರೆತಂತಿದೆ

 

ಓಯ್…

ಚಿಂತಿಸಬೇಡ

ಮುಟ್ಟಿನ ರಕ್ತದಲಿ ಮಿಂದೆದ್ದ

ಕಾಗದಗಳೇನು ಮೈಲಿಗೆಯಾಗಿಲ್ಲ

ಹಾಗೆನಿಸಿದರೆ

ನೀರು ಕುಡಿದು ಮುಕ್ಕಳಿಸಿ ಮತ್ತೊಮ್ಮೆ ಓದಿಕೊಳ್ಳಬಹುದು

ಅಗ್ರಹಾರದ ನಿಯಮದಲಿ

ಅದು ಸಹಜವಲ್ಲವೇ?

 

ಶ್ವೇತ ವಸ್ತ್ರ ಹೊದ್ದ ಕವಿತೆಯ

ಪಲ್ಲಂಗದ ಕೆಳಗೆ

ನಿತ್ಯವೂ ನರಳಾಡಿದ

ರಕ್ತಸಿಕ್ತ ಪುಟಗಳು

ಅಂಗಾತ ಮಲಗಿವೆ

ಈಗೀಗ ನನ್ನ ಕವಿತೆ ದಿನನಿತ್ಯ

ಬಲತ್ಕಾರಕ್ಕೊಳಪಟ್ಟಿದ್ದು

ಗುಪ್ತಾಂಗಗಳಿಗೆ ಆದ ಗಾಯ

ಕುರುಡು ಕಣ್ಣುಗಳಿಗೆ ಕಾಣಲೇ ಇಲ್ಲ

ಜನಿಸಿದ ಜನನಾಂಗಕ್ಕೆ ಮಗನೇ ಆಸೆಪಡುವಾಗ

ಸ್ಯಾನಿಟರಿ ಪ್ಯಾಡ್ ಶವಪೆಟ್ಟಿಗೆ ಏರಿತ್ತು

ಕವಿತೆಯ ದೇಹ ಮಸಣದ ಕಡೆ ಮುಖ ಮಾಡಿತ್ತು.


ದುಃಖ

ಅನುವಾದ: ಮಲರ್ ವಿಳಿ ಕೆ

ತಮಿಳು ಮೂಲ:  ತಮಿಳ್‌ಸೆಲ್ವನ್

 

 

ಸುರಿದು ತುಂಬಲು

ಏನಿದೆ ಇನ್ನು?

 

ಸಂಕಟಗಳ ನೋವು ನೆರೆದ

ಹೃದಯದ ಬಟ್ಟಲಲಿ

ಒಂಟಿತನದ ದುಃಖವ

ಹೀರುತ್ತೇನೆ

 

ಇನ್ನು

ಎಂದೆಂದಿಗೂ ಸಾಧ್ಯವಾಗದು

ಬೋಳು ಮರದಲಿ

ಒಂದು ಗಿಳಿಯಂತಹ ನಿನ್ನ ಸ್ನೇಹ

 

ಬರಿದಾದ ಬಟ್ಟಲನು

ಯಾರು ಬಯಸುವರು

 

ಸಾಧ್ಯವಾದರೆ

ಬೇಕಾದರೆ ನೀ ಬಂದು

ದುಃಖವ ಸುರಿ

ಒರಟಾದ ಬಿರಿದ

ಬರಡು ನೆಲದ ಬಿರುಕಿನಲಿ

ಕಾಣುತ್ತಿದೆ

ಅಪ್ಪನ ಪಾದದ ಬಿರುಕು

 

ಅಟ್ಟದ ಮೇಲಿನ

ಕುಳದಲಿ

ತಾತನ ನೆನಪು

 

ನನ್ನ ಮಗಳಿಗಾಗಿ

ಹಿಡಿದ ಚಿಟ್ಟೆ

ನನ್ನ ಬೆರಳುಗಳಲಿ

ಬಿಟ್ಟು ಹೋಯಿತು

ವನಗಳನ್ನು.

Leave a Reply

Your email address will not be published.