ಕವಿತೆ

-ವಿ.ಹರಿನಾಥ ಬಾಬು ಸಿರುಗುಪ್ಪ

ಹಾಯ್ಕುಗಳು

1

ಶರಾಬಿನ ಅಂಗಡಿಯಿಂದ ಅವನು

ಈಗ ತಾನೆ ಹೊರಬಿದ್ದ

ಜೋಲಿ ಹೊಡೆಯುತಿದೆ ರಸ್ತೆ

2

ಅವಳ ನೆನಪಾಗಿ ಕುಡಿದೆ

ಎಂದುಸುರಿದ ಅವನು

ಪಾಪ ರಸ್ತೆ ಕಣ್ಣೀರಾಯ್ತು

3

ಯಾವ ಹಾದಿ ತುಳಿದರೂ

ಅದು ಅವಳ ಮನೆಗೆ ಕರೆದೊಯ್ಯುತ್ತದೆ

ಅವಳ ಮನೆಯೀಗ ಪ್ರೇಮ ಸ್ಮಾರಕ!

4

ನಾವಂದು ನಡೆದಾಡಿದ ರಸ್ತೆಗಳು

ಇಂದಿಗೂ ಹಾಗೇ ಇವೆ

ನಮ್ಮ ನೆನಪು ಯುವ ಪ್ರೇಮಿಗಳ ಎದೆಯಾಳದಲ್ಲಿ

5

ಅವಳ ನೆನಪುಗಳ ನೆರಳು

ಸುಡುವ ವಿರಹದ ತಲೆಯ ಕಾಯುತಿವೆ

ನೆಡುತೋಪು ಹೊತ್ತ ರಸ್ತೆಗೆ ಧನ್ಯವಾದಗಳು

6

ನೆನಪುಗಳ ಹೆಣ ಹೊತ್ತು

ಹಗಲಿರುಳು ನಡೆಯುತಲಿರುವೆ

ನೀನಿಲ್ಲದ ರಸ್ತೆ ನಿರ್ಜೀವ!

7

ನೆನಪ ತವರಿನ ಹಾದಿಯಲಿ

ಹುದುಲೊಳಗಿನ ಹೆಜ್ಜೆ

ರಸ್ತೆಗುಂಟಾ ಅವಳ ಕಣ್ಣೀರು!

8

ಒಂದು ಹೆಜ್ಜೆ ಆಕಾಶವನು

ಮತ್ತೊಂದು ಹೆಜ್ಜೆ ಭೂಮಿಯನು

ಅಳೆದ ಪಾದಕ್ಕೂ ಬೇಕು ರಸ್ತೆ

9

ಹೆಜ್ಜೆ ಗುರುತುಗಳ ಫೋಟೋ

ಇಂದಿನ ದಿನಪತ್ರಿಕೆಯ ಮುಖಪುಟದಲ್ಲಿ

ದಾರಿಯೇ ಇರದ ಊರಿಗೆ ಸಾಕ್ಷಿ ಸಿಕ್ಕಿದೆ

10

ಎದುರುಬದುರಾದ ಕಣ್ಣುಗಳು

ನೋಡುತ್ತಾ ಆಳಕ್ಕಿಳಿದು ಹೋದವು

ರಸ್ತೆ ತನ್ನನ್ನು ತಾನೆ ಮರೆತುಬಿಟ್ಟಿದೆ

11

ಅಗೋ ಆ ಬೆಟ್ಟಗಳು

ಅದರಾಚೆ ಆ ಮೋಡಗಳು

ನೋಡಲ್ಲಿ ಕೈಬೀಸಿ ಕರೆಯುತ್ತಿವೆ ದಾರಿಗಳು

12

ಕಣ್ಣು ತೆರೆದರೆ ಒಂದು

ಕಣ್ಣು ಮುಚ್ಚಿದರೆ ಹಲವು

ಕತ್ತಲು ಬೆಳಕಿನ ಹಾದಿಗಳು!

13

ಅದಾಗಲೆ ಮೇಯ್ದು ಹೋಗಿದ್ದಕ್ಕೆ

ರಸ್ತೆಯ ಮೇಲೆ ಹೆಜ್ಜೆಗಳು ಇನ್ನೂ ಹಸಿಯಾಗಿವೆ

ಗರಿಕೆ ಮತ್ತೆ ಚಿಗುರುತ್ತಿದೆ

14

ಗಾಳಿಯಂತೆ ನಾನು

ಕೆಲಸವಿಲ್ಲದ ಅಪಾಪೋಲಿ

ಪಾಪ ರಸ್ತೆ ನನ್ನ ಜೊತೆಗಿದೆ

15

ಬೀಸುವ ಗಾಳಿಯ ಜೊತೆಗೆ

ನಿನ್ನ ಹೆಸರು ನನ್ನ ಉಸಿರು ಪೈಪೋಟಿಗಿಳಿದಿವೆ

ರಸ್ತೆಯ ತುಂಬಾ ರಕ್ತದ ಕಲೆಗಳು

16

ಹೂಗಳನ್ನು ಮತ್ತೆ ಮತ್ತೆ ಕೀಳುತ್ತಿದ್ದೆ

ಹಟಕ್ಕೆ ಬಿದ್ದು ಅರಳತೊಡಗಿದವು

ಹಾದಿ ತುಂಬಾ ಹೂವಿನ ಘಮಲು

17

ಅವಳ ಹೆಜ್ಜೆಯ ಮೇಲೆ

ಅವನ ಹೆಜ್ಜೆಯ ಗುರುತು

ರಸ್ತೆಗೆ ಲೆಕ್ಕ ತಪ್ಪಿ ಹೋಗಿದೆ

18

ಆ ಕತ್ತಲೊಳಗೆ ಅವಳು ಬೆತ್ತಲಾದಳು

ಅವನು ಬೆಳಕು ಹೊತ್ತಿಸಿದ

ಬೀದಿಗೆ ಬಿದ್ದ ಕನಸುಗಳು

19

ಬೇಡವೆಂದೆ; ಹಿಂಬಾಲಿಸಿದಳು

ಬರಬಾರದೆ? ಮರೆಯಾದಳು

ನಿಂತಿರುವೆ: ಕಿವಿಯಿರದ ಬೀದಿಯ ನಡುವೆ!

20

ಸದಾ ಅವಳು ಮುಂದೆ ಮುಂದೆ

ನಾನವಳ ಹಿಂದೆ ಹಿಂದೆ

ರಸ್ತೆ ಸುರಂಗದೊಳಗೆ ತೂರಿಹೋಯ್ತು

 

Leave a Reply

Your email address will not be published.