ಕವಿತೆ

 

-ಮೂಡ್ನಾಕೂಡು ಚಿನ್ನಸ್ವಾಮಿ

 

 

 

ಇರುವೆಗಳಿಗೇಕೆ ಸಕ್ಕರೆ?

ಬೆಳ್ಳಂಬೆಳಿಗ್ಗೆ

ಬಚ್ಚಲ ಬದಿ ಸಾಗುವ ಸಾಲು

ಇರುವೆಗಳಿಗೆ ಸಕ್ಕರೆ ಹಾಕುತ್ತಾರೆ

ವಾಯುನಡಿಗೆಯಲ್ಲಿ

ರಸ್ತೆ ಬದಿಯ ಬಿಡಾಡಿ ನಾಯಿಗಳಿಗೆ

ಬಿಸ್ಕೆಟ್ ಹಾಕುತ್ತಾರೆ

 

ತಮ್ಮ ಹಿತ್ತಲ ಸಂಡಾಸು

ತೊಳೆದು ದಣಿದವನಿಗೆ ನೀರು

ಕೊಡಲು ನಿರಾಕರಿಸುತ್ತಾರೆ

 

ಪಾರಿವಾಳಗಳಿಗೆ ಕಾಳು ಹಾಕುತ್ತಾರೆ

ಗೋವಿಗೆ ಹಣ್ಣು ಹಂಪಲು ನೀಡುತ್ತಾರೆ

ವಿಷದ ಹಾವಿಗೂ ಹಾಲೆರೆಯುತ್ತಾರೆ

 

ಹಾವು ಗೋವು ಪವಿತ್ರವಾಗಿರುವ ಈ ನಾಡಲ್ಲಿ

ಮನುಷ್ಯ ಮಾತ್ರ ಅಪವಿತ್ರನಾಗಿದ್ದಾನೆ

ಮುಟ್ಟಿಸಿಕೊಳ್ಳದವನಾಗಿದ್ದಾನೆ

 

 

-ಸಿದ್ಧಲಿಂಗ ಪಟ್ಟಣಶೆಟ್ಟಿ

 

 

 

ನೆಮ್ಮದಿ

ಬಹಳ ಕಾಲವಾಗಿತ್ತು

ಮನೆ ಬಿಟ್ಟು ಹೊರಗೆ ಹೋಗಿರಲಿಲ್ಲ,

ಇಂದು ಅಲೆದಾಡಿದೆ

ಹುಡುಹುಡುಕಿ ಸುತ್ತಾಡಿ ಬಂದೆ

ಎಲ್ಲ ಪರಿಚಿತರ ಮನೆ ಮನ ಸಂದಿಗೊOದಿ

 

ಮಾತಾಡಿಸಿದೆ

ಕಂಡೆ ಅನುಭವ ಬಂಡೆ ಬಂಡೆ

ಒಂದೊOದು ಮನೆಯೂ ಮನವೂ ಚಲನವೂ

ಒಂದೊOದು ಚೆಂದ

ತನ್ನದೇ ರೀತಿ ಪ್ರತಿಯೊಂದು ಕಡೆಯಲ್ಲಿ

ಕತಕತ ಕುದಿವ ನೀರಲ್ಲಿ

ಕಾಲು ಇಳಿಬಿಟ್ಟು ಕುಳಿತಿದೆ

ಕೆಂಡದ ಪಿಂಡ ನಿಗಿನಿಗಿ ಕುಣಿಯುತ್ತಿದೆ

ಚುರುಗುಡುವ ಹಂಚಿನಲಿ

ಕನಸಿನ ಕಡಲೆ ಹುರಿಯುತ್ತಿದೆ

ನಾಲಗೆಯ ಪದಪದಾತಿ ದಳದ ಎದೆ ಮೇಲೆ

ಅಗ್ನಿಮಂತ್ರ ಮಣಮಣಿಸುತ್ತಿದೆ

 

ಏನಿದು? ಹತ್ತು ಕಡೆ ಹತ್ತುತ್ತ

ಏರುತ್ತ ನೂರು ಬಗೆ

ಕನಲುತ್ತ ಬಂದೆ ಯೋಚಿಸಿದೆ

ಆ ಈ ಆ ಕಡೆಗಿನ್ನು ಹೋಗಲಾರೆ

ಉಳಿದಿಲ್ಲ ಹೊಂಚುತ್ತ ಗಣಿಸುವ ಶಕ್ತಿ

ಮನೆ ತಲುಪಿದೆ

ಬಾಗಿಲು ತೆರೆದೇ ಇತ್ತು

ಧಿಗ್ಗನೇ ಹೊತ್ತುರಿದ ಪದಮೂಲ ಬೆಂಕಿ

ಚಟ್ಟನೇ ಬೂದಿ ಹಾರಿಸಿತು ಬೋಧಿಸಿತು

ಎಲ್ಲಿಗೂ ಹೋಗಬೇಡ, ಹುಡುಕಾಡಬೇಡ

ವಯಸ್ಸಾಗಿದೆ ನಿನಗೆ

ಆ ಆ ಎಲ್ಲವೂ ಇಲ್ಲಿಯೇ

ಕಣ್ಣ ಎದುರಲ್ಲಿಯೇ

ಮನೆಯಲ್ಲಿಯೇ ಮನೋಪಟಲದೆದುರಲ್ಲೆ

ಕಾಣು ಕಲ್ಪಿಸು ಬದುಕು

 

ಬೆಚ್ಚಿ ದಿಟ್ಟಿಸಿದೆ ಬೆಂದ ಬದುಕಿನ ಭೂತ

ಮಂತ್ರಿತ ಅಗ್ನಿ ಪೂತ

ಹಣೆ ಹಚ್ಚಿ ನಿಂತೆ ಅಸಹಾಯ ಒಪ್ಪಿದೆ

ಉರಿಯ ಹಲ ಮಜಲುಗಳು

ಮನೆಯಲ್ಲಿ ಮನದಲ್ಲಿ ಕನಸಲ್ಲಿ

 

ಈಗ ಅನಿವಾರ್ಯ ದಿವ್ಯ ಸುಖ

ತಳಮಳವಿಲ್ಲ ಕಳವಳವಿಲ್ಲ

ಹಳವಂಡಗಳಿಲ್ಲ

ಎಲ್ಲ ನಾನೇ ನಾನೇ

ನಿಶ್ಚಿಂತೆ ನೆಮ್ಮದಿ ನನಗೆ.

Leave a Reply

Your email address will not be published.