ಕವಿತೆ

ನೆಲದ ಸೂತಕ ಆಕಾಶಕ್ಕೂ

-ಲಕ್ಷ್ಮಿಕಾಂತ ಮಿರಜಕರ

ಮಬ್ಬು ಕತ್ತಲು ಕವಿದು

ಆಕಾಶದ ಬೋಗಣಿ ಖಾಲಿಯಾದಂತೆ

ಮಳೆ ಸುರಿದು ಅಹೋರಾತ್ರಿ

ನೆಲದ ಮೇಲೆಲ್ಲ ಜಲಪ್ರಳಯ

 

ನೀರದೇವಿ ಮಹಾಪೂರವಾಗಿ ಹರಿಯುತ್ತ

ಉಧೋ ಉಧೋ ಎನ್ನುತ್ತ

ಬೇನಾಮಿ ಅಲೆಗಳು ಕಳ್ಳಹೆಜ್ಜೆ ಇಟ್ಟುಕೊಂಡು

ರಾತ್ರೋರಾತ್ರಿ ಬಂದು ಧುಮ್ಮುಕ್ಕಿ

ದಾರಿ ಮಧ್ಯೆ ಸಿಕ್ಕ

ಹಳ್ಳಿ, ಹೊಲ, ಮನೆಮಠ, ಆಸ್ತಿಪಾಸ್ತಿ

ಜನಜಾನುವಾರು, ವಸ್ತು ಒಡವೆ ವಗೈರೆ

ಎಲ್ಲವೂ ಜಲದೇವತೆಯ ಬಾಯಿಗೆ ಆಪೋಷಣ

 

ಸೂರ್ಯ ಉದಯದ ವೇಳೆಯ ರೊಟ್ಟಿ ಬಡಿಯುವ ಸದ್ದು

ಅಂಗಳ ಕಸಗೂಡಿಸುವ ಕರಕರ ಶಬ್ದ

ಕೋಳಿಕೂಗಿನ ಅಲಾರಾಮ್

ಪಕ್ಷಿಗಳ ಇಂಚರ, ಹಸುಕರುಗಳ ಮಾರ್ದನ

ಕೇಳುತ್ತಿಲ್ಲ ಯಾವುದೂ ಮೂರಾಬಟ್ಟೆ ಬದುಕಿನ

ಸ್ಮಶಾನ ಮೌನದ ನೀರವತೆಯಲ್ಲಿ

 

ಬದುಕು ಸ್ಥಳಾಂತರಗೊಂಡಿದೆ

ನಿರಾಶ್ರಿತ ಶಿಬಿರಗಳ ಮೂಲೆಮೂಲೆಗೆ

ಎಲ್ಲ ಕಳೆದುಕೊಂಡು ಅನ್ನಸಾರಿನ ತಟ್ಟೆ ಹಿಡಿದ

ಅಮಾಯಕ ಜೀವಗಳ ಕತ್ತಲೆಯ ಸ್ಥಿತಿಗೆ

ಪ್ಲ್ಯಾಷ್ ಲೈಟ್ ಬೀರುತ್ತಿವೆ

ಕ್ಯಾಮರಾ ಕಣ್ಣುಗಳು

ಟಿಆರ್‍ಪಿ ಭೂತದ ಹಸಿವ ನೀಗಿಸಲು

 

ನೆರೆಪರಿಹಾರದ ಲಡ್ಡು ಬಾಯಿಗೆ ಬೀಳುವ ಖುಷಿಯಲ್ಲಿ

ದೊರೆಗಳು ಸಂಭ್ರಮಾಚರಣೆಯಲ್ಲಿ ನಿರತ

ಅಧಿಕಾರಿಗಳು ಪ್ರತಿಶತ ಲೆಕ್ಕಾಚಾರದಲ್ಲಿ

 

ಹೊಟ್ಟೆಯ ಮೇಲೆ ನೆರೆಯ ಬರೆ

ಕೊಚ್ಚಿ ಹೋದ ಬದುಕು ಮತ್ತೆ ಕಟ್ಟುವ ಚಿಂತೆ

ದುಃಖ ದಳ್ಳುರಿಯಾಗಿ ಎದೆಯಲ್ಲಿ ಭುಗಿಲೆದ್ದು

ತಲೆ ಮೇಲೆತ್ತಿ ಬೀರಿದರೆ ಶೂನ್ಯದೃಷ್ಟಿ

ನೆಲದ ಸೂತಕ ಈಗ ಆಕಾಶಕ್ಕೂ

 

ಸೂರ್ಯನ ಹೆಣ ತೇಲುತ್ತಿತ್ತು

ಊರ ತುಂಬ ನಿಂತ ನೆರೆನೀರಿನಲ್ಲಿ

 

ಚೂರುಗನಸುಗಳು

-ಚಿಂತಾಮಣಿ ಕೊಡ್ಲೆಕೆರೆ

ಯಾವುದೋ ಊರಿನ ಯಾವುದೋ ಹಾಸ್ಟೆಲ್

ಬೆಳಗಿನ ಹೊತ್ತಲ್ಲಿ

ಬಟ್ಟೆ, ಬಕೆಟ್ಟು ಹಿಡಿದು ಹೊರಟಿರುವೆ

ಬಚ್ಚಲುಮನೆ ಎಲ್ಲಿ?

 

ನಡುವೆ ಸಿಕ್ಕುವರು ಊರಿನ ಹಿರಿಯರು

ಇವರಿಲ್ಲಿಗೆ, ಹೇಗೆ?

ಮಾತನಾಡುವರು ಯಾವುದೋ ಭಾಷೆ

ಅರ್ಥವಿರದ ಹಾಗೆ

 

ಅದು ಅಷ್ಟೇ, ಸರಿ, ಮುಂದಿನ ತುಣುಕು

ಗಣಿತ ಪರೀಕ್ಷೆಯದು

ಲೆಕ್ಕ ಬಿಡಿಸಿಲ್ಲ, ಕ್ಲಾಸಿಗೆ ಹೋಗಿಲ್ಲ

ಬೆವರಿಳಿದಿಳಿಯುವುದು

 

ಏನೋ ಕಳೆದಿದೆ, ಚಡಪಡಿಸುತ್ತ

ಹುಡುಕುವೆ ಎಲ್ಲೆಲ್ಲೂ

ಕಾಣದೂರುಗಳು. ಅಲೆಯುತಲಿರುವೆ

ಮಧ್ಯರಾತ್ರಿಯಲ್ಲೂ

ಅಗಲಿದ ಅಪ್ಪ, ಅಜ್ಜ, ಅಮ್ಮ

ಎದುರಾಗುವುದುಂಟು

ಮಾತನಾಡುವರು, ಅದೇ ಸಮಸ್ಯೆ,

ಭಾಷೆಯೆ ಕಗ್ಗಂಟು

 

ತುಂಡುಗನಸುಗಳ ತಂಡವೆ ಬರುವುದು

ನಿದ್ದೆಯಲ್ಲಿ, ರಾತ್ರೆ

ಅಪೂರ್ಣ ಅನಿಸಿದೆ ನನ್ನೀ ಜೀವನ

ಅರ್ಥಹೀನ ಯಾತ್ರೆ!

ಮಾತಿನ್ನೂ ಇದೆ, ಎಲ್ಲೊ ಇಟ್ಟಿರುವೆ

ಅರೆತೆರೆದಿದೆ ಕಿಟಕಿ

ಏನೋ ಕೊರತೆ ಏನೋ ದಿಗಿಲು

ಚಕ್ರಸುಳಿಗೆ ಸಿಲುಕಿ

 

ಹಗಲಿದು ನನ್ನದು, ಎದ್ದು ಕುಳಿತಿರುವೆ

ವಿಚಾರ ಸುಸ್ಪಷ್ಟ

ಇದು ಇಷ್ಟೇ ಸರಿ, ಮಿಕ್ಕುದು ದಕ್ಕದು

ಸಿಕ್ಕರೆ ಅದೃಷ್ಟ

-ಚಿಂತಾಮಣಿ ಕೊಡ್ಲೆಕೆರೆ

Leave a Reply

Your email address will not be published.