ಕವಿತೆ

ಪಾಟಿ ಪೇಣೆ

 

ನೆನಪಿದೆ ನನಗೆ ಸ್ಪಷ್ಟ
ನಿನ್ನ ಮಗು ನಾನು ಎಂದೇ ಭಾವಿಸಿದ್ದಿ
ಅಂದು ಮಂಗಳವಾರ. ಸಂತೆ. ಹೋಗಿದ್ದಿ.
ಪಾಟಿ ಪೇಣೆ ನನಗಾಗಿ ಕೊಂಡು ತಂದಿದ್ದಿ.
ಸಿಕ್ಕಷ್ಟೆ ಸಮಯದಲಿ ನಿನಗೆ ತಿಳಿದಷ್ಟು
ಕಲಿಸಿದಿ ಹಾದಿ ತೋರಿಸಿದಿ ತೀಡಿಸಿದಿ
ಕೈ ಹಿಡಿದು

ಅಕ್ಷರಗಳೇ ಹಾದಿಯಾದುವು ಬೆಳಕಾದುವು
ಈಗ ಕಲಿಯುತ್ತಿರುವೆ ಅಷ್ಟಷ್ಟೆ ಬರೆಯುತ್ತಿರುವೆ
ನಾನು ಕಲಿಕಲಿತಂತೆ ನೀ ಮರೆತೆ ನಿನ್ನನ್ನೆ
ಬರೆಯುವುದು ಅರಿಯುವುದು ಎಲ್ಲವನ್ನೂ

ನೀ ಬರೆಯ ಹೇಳಿದ್ದಿ
ಅರ್ಥ ಅಕ್ಷರಗಳುಣಿಸಿದ್ದಿ ಈಗ
ಎತ್ತ ಹಾರಲಿ ನಾಳೆ
ಯಾವ ಗಗನದ ಯಾ ಮೂಲೆ ಸೇರಲಿ
ಕೈ ಮುಗಿದು ಈ ಪಾಟಿ ಪೇಣೆ ಜಾಣ ಅಕ್ಷರಗಳನ್ನು
ಯಾರ ಕೈಗಿಕ್ಕಿ ನಡೆಯಲಿ?

ನಿನ್ನ ಪ್ರತಿನಿಧಿ ನಾನು ಉಳಿದಿರುವೆ ಉಳಿವೆ
ನನ್ನನ್ನು ಮುಂದೆ ಉಳಿಸುವುದು ಯಾರು?
ನೀನು ಕಲಿಸಿದ ನನ್ನ ಅಕ್ಷರಗಳೆ? ನೀ
ಅಲ್ಲವೆ?

– ಸಿದ್ಧಲಿಂಗ ಪಟ್ಟಣಶೆಟ್ಟಿ


 

ಉಗಾದಿ

 

ಉಗಾದಿ ಅಂಗಳಕೆ ಬಂದು ನಿಂತಾಗ
ರಂಗೋಲಿ ಹಾಕಿ ಸಿಂಗರಿಸಿ ಬರಮಾಡಿಕೊಂಡೆ

ವಿಶ್ವಾಸವಿತ್ತು
ನಾಲ್ಕು ಹನಿಗಳ ಕಣ್ಣಿನಲ್ಲಾದರೂ ಜತನ ಮಾಡಿಕೊಂಡು ತಂದಿರಬಹುದೆಂದು
ಕಾಳು ಕಡಿಯ ಗಂಟು ತಲೆಯ ಮೇಲೆ ಹೊತ್ತು ಬಂದಿರಬಹುದೆಂದು
ಹಾಗಾಗಿ
ಇದ್ದ ನಾಲ್ಕು ಕಾಳಲ್ಲಿ ಎರಡನ್ನು ಮಣ್ಣಲ್ಲಿ ಮುಚ್ಚಿ ಬಂದೆ
ಹಸಿವಾದರೆ ಇರಲೆಂದು ಇನ್ನೆರಡನು ನಾಳೆಗೆ ತೆಗೆದಿರಿಸಿದೆ

ವಿಶ್ವಾಸವಿತ್ತು
ಹೆತ್ತ ಕಂದಮ್ಮಗಳ ಹಸಿದ ಒಡಲಿಗೆ ಕಿಚ್ಚು ಹಚ್ಚುವುದಿಲ್ಲವೆಂದು
ಕಟ್ಟಿಕೊಂಡವನ ಹೆಗಲ ಭಾರವ ತುಸು ಇಳಿಸಬಹುದೆಂದು
ಹಾಗಾಗಿ
ತೇಪೆ ಹಚ್ಚಿದ ಹರಿದ ಸೀರೆಯನುಟ್ಟು ಸಂಭ್ರಮ ಪಟ್ಟೆ
ಎಣ್ಣೆತೀರಿದ ಪಣತಿಯಲ್ಲಿಯೇ ಬ್ರಹ್ಮಾಂಡ ಬೆಳಕ ಕಂಡೆ

ವಿಶ್ವಾಸವಿತ್ತು
ಎತ್ತು ಎಮ್ಮೆ ದನಕರ ಕುರಿಗಳ ನೀರು ಮೇವು ಕಸಿಯುವುದಿಲ್ಲವೆಂದು
ಗುಬ್ಬಿ ಗಿಳಿ ಗೊರವಂಕ ಕಾಗೆಗಳ ನೆಮ್ಮದಿಯ ಗೂಡು ಕೆಡಿಸುವುದಿಲ್ಲವೆಂದು
ಹಾಗಾಗಿ
ಇದ್ದೊಂದು ರೊಟ್ಟಿಯ ಸಮನಾಗಿ ಹರಿದು ಹಂಚಿಕೊಟ್ಟೆ
ಬೊಗಸೆ ನೀರನೆ ಕುಡಿದು ಖಾಲಿ ಹೊಟ್ಟೆ ತುಂಬಿಸಿಕೊಂಡೆ

ವಿಶ್ವಾಸವಿತ್ತು
ಊರು ಕೇರಿಗಳೆಲ್ಲಾ ಅಕ್ಕ ತಂಗಿಯರಂತೆ ಕೂಡಿ ಬಾಳಬಹುದೆಂದು
ಬೀದಿ ಬಯಲುಗಳಲ್ಲಿ ಭಾವೈಕ್ಯತೆಯ ಮೆರವಣಿಗೆ ಹೊರಡಬಹುದೆಂದು
ಹಾಗಾಗಿ
ಅಳುವ ಕಂದನ ಆಡಲೆಂದು ಬೀದಿಯಲಿ ಬಿಟ್ಟಿದ್ದೆ
ಕುರುಡು ದೇವರ ಕೈಯೊಳಗೆ ಕಂದೀಲ ಕೊಟ್ಟಿದ್ದೆ

ವಿಶ್ವಾಸವಿತ್ತು
ಉಗಾದಿ, ನೀನು ಈ ಬಾರಿಯಾದರೂ ಕಾಳು ಕಟ್ಟಿದತೆನೆಯಂತೆ
ತುಂಬಿ ಹರಿವ ಹೊಳೆಯಂತೆ ತೊನೆದುತೂಗಾಡಿ ಸಂಭ್ರಮಿಸಬಹುದೆಂದು
ಆದರೆ
ವರ್ಷದಿಂದ ವರ್ಷಕ್ಕೆ ನೀನೂ ಊಸರವಳ್ಳಿ ನಮ್ಮೂರ ರಾಜಕಾರಣಿಯಾಗುತ್ತಿರುವೆ
ಕೊಟ್ಟ ಮಾತು ಇಟ್ಟ ನಂಬಿಕೆಗಳು ಸುಳಿಗಾಳಿಗೆ ಸಿಕ್ಕ ತರೆಗಲೆಗಳಂತೆ ಹಾರಿ ಹೋಗುತ್ತಿವೆ
ವಿಶ್ವಾಸ ಹೇಗಿಡಲಿ?
ಬೇವು ಬೆಲ್ಲಗಳೆರಡು ಕೈ ಹಿಡಿದು ನಡೆವ ಹಾದಿಯಲಿ ಬರೀ ಬೇವೇ ತುಂಬಿದೆ
ಬೆಲ್ಲವ ಹುಡುಕಲೆಲ್ಲಿ?
ಜಾತಿಮತಗಳ ಸಾಮರಸ್ಯದ ತೊಟ್ಟಿಲಲ್ಲಿ ಬರೀ ವಿಷದ ಮುಳ್ಳುಗಳೇ ನೆಟ್ಟಿವೆ
ನಿಜ ಶರಣನ ಕಾಣಲೆಲ್ಲಿ?

– ವಿ.ಹರಿನಾಥ ಬಾಬು ಸಿರುಗುಪ್ಪ

Leave a Reply

Your email address will not be published.