‘ಕಾಂಗ್ರೆಸ್ಮುಕ್ತ ಭಾರತ’ ಘೋಷಣೆ ಆಳದ ಅರ್ಥ ಬೇರೆ ಇದೆ!

-ಡಿ.ಎಸ್.ನಾಗಭೂಷಣ

‘ಕಾಂಗ್ರೆಸ್‍ಮುಕ್ತ್ತ ಭಾರತ’ ಎಂಬ ಘೋಷಣೆ ಈಗ ಘೋಷಣೆಯಾಗಿ ಉಳಿಯದೆ ಒಂದು ರಾಜಕೀಯ ಕಾರ್ಯಕ್ರಮವಾಗಿ ನೇರ ಮತ್ತು ವಕ್ರ ಮಾರ್ಗಗಳ ಮೂಲಕ ಜಾರಿಗೆ ಬರುತ್ತಿದೆ. ಅದು ಸಂಪೂರ್ಣ ಯಶಸ್ವಿಯಾಗಬಲ್ಲದೆಂಬ ವಿಶ್ವಾಸ ಭಾಜಪಕ್ಕೂ, ನಂಬಿಕೆ ಸಾರ್ವಜನಿಕರಿಗೂ ಬಂದಿದೆ. ಈ ಕಾರ್ಯಕ್ರಮ ಕೇವಲ ಭಾಜಪದ್ದಾಗಿರದೆ ಸ್ವತಃ ಕಾಂಗ್ರೆಸ್ಸಿನದೇ ಆಗಿರುವಂತೆ ಕಾಣುತ್ತಿದೆ!

ಭಾರತೀಯ ಜನತಾ ಪಕ್ಷದ ‘ಕಾಂಗ್ರೆಸ್‍ಮುಕ್ತ ಭಾರತ’ ಎಂಬ ರಾಜಕೀಯ ಘೋಷಣೆ ಆ ಪಕ್ಷದ ಹೊಸ ಘೋಷಣೆಯೇನೂ ಅಲ್ಲ. ಈ ಪಕ್ಷ ಮೂಲತಃ ಭಾರತೀಯ ಜನಸಂಘವಾಗಿ ಹುಟ್ಟಿಕೊಳ್ಳಲು ಪ್ರೇರಣೆ ನೀಡಿದ ಹಿಂದೂ ಮಹಾಸಭಾ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಗುರಿ ಮತ್ತು ತಾತ್ವಿಕತೆಗಳೇ ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸುವುದಾಗಿದ್ದವು. ಅವು ರಾಜಕೀಯ ಪಕ್ಷಗಳಾಗಿರಲಿಲ್ಲವೆಂಬ ಕಾರಣದಿಂದ ಅವು ಈ ಘೋಷಣೆಯನ್ನು ಚಲಾವಣೆಗೆ ತರಲಿಲ್ಲವಷ್ಟೆ. ಆದರೆ ಅವು ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುವ ಪ್ರಯತ್ನವಾಗಿ ಭಾರತೀಯ ಜನಸಂಘ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದಾಗಲೂ ಈ ಘೋಷಣೆಯನ್ನು ಸಾರ್ವಜನಿಕವಾಗಿ ಚಲಾವಣೆಗೆ ತರಲು ಸಾಧ್ಯವಿರಲಿಲ್ಲ. ಏಕೆಂದರೆ, ಕಾಂಗ್ರೆಸ್‍ನ ಅಖಿಲ ಭಾರತ ವ್ಯಾಪ್ತಿ ಮತ್ತು ಶಕ್ತಿಗಳ ಎದುರು ಇವುಗಳ ವ್ಯಾಪ್ತಿ ಮತ್ತು ಶಕ್ತಿ ತೀರಾ ನಗಣ್ಯವಾಗಿದ್ದು, ಅಂತಹ ಘೋಷಣೆಯನ್ನು ಚಾಲ್ತಿಗೆ ತರುವ ಶಕ್ತಿಯಾಗಲೀ ನೈತಿಕ ಸ್ಥೈರ್ಯವಾಗಲೀ ಅವುಗಳಿಗೆ ಇರಲಿಲ್ಲ.

ಆದರೆ ಈಗ ರಾಜಕೀಯ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ತನ್ನ ಮೂಲ ಗುರಿಯನ್ನು ಈ ಘೋಷಣೆಯ ಮೂಲಕ ಸಾರ್ವಜನಿಕವಾಗಿ ಸಾರುವಷ್ಟು ರಾಜಕೀಯ ಬಲ ಮತ್ತು ಸ್ಥೈರ್ಯವನ್ನು ಅದು ಭಾರತೀಯ ಜನತಾ ಪಕ್ಷವಾಗಿ ಬೆಳೆದು ಗಳಿಸಿಕೊಂಡಿದೆ. ‘ಕಾಂಗ್ರೆಸ್‍ಮುಕ್ತ್ತ ಭಾರತ’ ಎಂಬ ಘೋಷಣೆ ಈಗ ಘೋಷಣೆಯಾಗಿ ಉಳಿಯದೆ ಒಂದು ರಾಜಕೀಯ ಕಾರ್ಯಕ್ರಮವಾಗಿ ನೇರ ಮತ್ತು ವಕ್ರ ಮಾರ್ಗಗಳೆಲ್ಲವುಗಳ ಮೂಲಕವೂ ಜಾರಿಗೆ ಬರುತ್ತಿದ್ದು ಅದು ಸಂಪೂರ್ಣ ಯಶಸ್ವಿಯಾಗಬಲ್ಲದೆಂಬ ವಿಶ್ವಾಸ ಭಾಜಪಕ್ಕೂ, ನಂಬಿಕೆ ಸಾರ್ವಜನಿಕರಿಗೂ ಬಂದಿದೆ.

ಹಾಗೆ ನೋಡಿದರೆ ಈ ಕಾರ್ಯಕ್ರಮ ಕೇವಲ ಭಾಜಪದ್ದಾಗಿರದೆ ಸ್ವತಃ ಕಾಂಗ್ರೆಸ್ಸಿನದೇ ಆಗಿರುವಂತೆ ಕಾಣುತ್ತಿರುವುದು, ಈ ವಿಶ್ವಾಸ ಮತ್ತು ನಂಬಿಕೆಗಳನ್ನು ಬಲಪಡಿಸುತ್ತಿದೆ. 2014ರಲ್ಲಿ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಭಾರಿ ಸೋಲನ್ನನುಭವಿಸಿದ ನಂತರ ಅದು ತನ್ನ ಸೋಲನ್ನು ಅರಗಿಸಿಕೊಳ್ಳಲು ನಡೆಸಿರುವ ಪ್ರಯತ್ನಗOಳೆಲ್ಲ ವಿಫಲವಾಗುತ್ತಿರುವುದು ಇದನ್ನು ಸಾಬೀತುಪಡಿಸುತ್ತಿದೆ.

ಸ್ವಾತಂತ್ಯೋತ್ತರ ಭಾರತವನ್ನು ಬಹುಕಾಲ ಆಳಿದ ಕಾಂಗ್ರೆಸ್‍ನ ಚರಿತ್ರೆಯನ್ನು ಗಮನಿಸಿದಾಗ ಈ ‘ಕಾಂಗ್ರೆಸ್‍ಮುಕ್ತ ಭಾರತ’ ಘೋಷಣೆ ಮೇಲ್ನೋಟಕ್ಕಾದರೂ ಒಂದು ಪಕ್ಷ ತನ್ನ ರಾಜಕೀಯ ಹಕ್ಕಾಗಿ ಚಾಲ್ತಿಗೆ ತರಬಹುದಾದ ಸಕ್ರಮ ಘೋಷಣೆಯಾಗಿಯೇ ಕಾಣುತ್ತದೆ. ಆದರೆ ಇಂದಿನ ಭಾಜಪ ಕಾರ್ಯನಿರ್ವಹಿಸುತ್ತಿರುವ ರೀತಿಯನ್ನು ಗಮನಿಸಿದಾಗ ಅದರ ಈ ಘೋಷಣೆಯಲ್ಲಿನ ಕಾಂಗ್ರೆಸ್ ಎಂದರೆ ಬರೀ ಒಂದು ರಾಜಕೀಯ ಪಕ್ಷವಾಗಿರದೆ ಒಂದು ರಾಜಕೀಯ ಸಂಸ್ಕøತಿಯ ಮೌಲ್ಯ ಪರಂಪರೆ ಎಂಬುದು ಹೊಳೆದು ಈ ಘೋಷಣೆ ಅನುರಣಿಸುವ ಹಲವು ಅಪಾಯಗಳ ಸೂಚನೆಗಳು ನಮ್ಮನ್ನು ತಾಕುತ್ತವೆ.

ಇಂದಿನ ಕಾಂಗ್ರೆಸ್ ಪಕ್ಷ ಈ ಮೌಲ್ಯಗಳ ಸಾಕಾರ ರೂಪವಾಗಿಲ್ಲದಿರಬಹುದು. ಆ ಮೌಲ್ಯ ಪರಂಪರೆಯನ್ನು ವಾಸ್ತವ ರಾಜಕಾರಣದ ಏಳುಬೀಳುಗಳಲ್ಲಿ ಕಳೆದುಕೊಂಡಿರಬಹುದು. ಅದಕ್ಕಾಗಿ ಈಗಾಗಲೇ ಅದು ಜನತೆಯಿಂದ ಎರಡು ರಾಷ್ಟ್ರೀಯ ಚುನಾವಣೆಗಳಲ್ಲಿ ಸಾರಾ ಸಗಟಾಗಿ ತಿರಸ್ಕರಿಸಲ್ಪಟ್ಟು ದೊಡ್ಡ ಬೆಲೆ ತೆತ್ತಿದೆ. ‘ಕಾಂಗ್ರೆಸ್‍ಮುಕ್ತ ಭಾರತ’ ಘೋಷಣೆ ಇಂದು ಸಾರ್ವಜನಿಕ ಸಾಧುತ್ವ ಪಡೆಯುತ್ತಿರುವುದೇ ಈ ದೊಡ್ಡ ಬೆಲೆಯಾಗಿದೆ. ಆದರೆ ಇದರರ್ಥ ಈ ಪಕ್ಷ ವಾರಸುದಾರಿಕೆ ಪಡೆದು ಅದನ್ನು ಸರಿಯಾಗಿ ನಿರ್ವಹಿಸದ ಮೌಲ್ಯ ಪರಂಪರೆಯೂ ಸೋತಿದೆ ಅಥವಾ ಜನರಿಂದ ತಿರಸ್ಕøತವಾಗಿದೆ ಎಂದಲ್ಲ.

ಈ ಮೌಲ್ಯಗಳಾದರೂ ಯಾವುವು? ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಆಧಾರ ಮೌಲ್ಯಗಳಾದ ಪ್ರಜೆಯ ಮೂಲಭೂತ ಹಕ್ಕುಗಳ ಸಂರಕ್ಷಣೆ, ಸರ್ವ ಸಮುದಾಯಗಳ ಸಮಾನತೆಗೆ ಬದ್ಧತೆ, ಪಾರದರ್ಶಕ ನ್ಯಾಯದಾನ ಮತ್ತು ಪಾರದರ್ಶಕ ಚುನಾವಣಾ ಪದ್ಧತಿಗಳು ಹಾಗೂ ಎಲ್ಲಕ್ಕೂ ಮುಖ್ಯವಾಗಿ ಇವುಗಳಲ್ಲಿ ಯಾವುದಾದರಲ್ಲೂ ವ್ಯತ್ಯಯವಾದಾಗ ಅದನ್ನು ಪ್ರಶ್ನಿಸಿ ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ಪ್ರತಿಭಟಿಸಿ ಆ ವ್ಯತ್ಯಯವನ್ನು ಸರಿಪಡಿಸುವ ಹಕ್ಕು. ಈ ಎಲ್ಲ ಮೌಲ್ಯಗಳು ಒಂದಲ್ಲ ಒಂದು ರೂಪದಲ್ಲಿ ನಮ್ಮ ಸಂವಿಧಾನದಲ್ಲಿ ಅಳವಡಿಕೆಯಾಗಿವೆ. ಭಾಜಪವೂ ಈ ಸಂವಿಧಾನದ ಅಡಿಯಲ್ಲಿಯೇ ಸ್ಥಾಪಿತವಾದ ಪಕ್ಷವಾದ್ದರಿಂದ ಈ ಮೌಲ್ಯಗಳನ್ನು ಈ ಪಕ್ಷವೂ ಸಂರಕ್ಷಿಸಲು ಬದ್ಧವಾಗಿದೆ ಎಂಬ ನಂಬಿಕೆಯಿಂದಲೇ ಜನ ಈ ಪಕ್ಷವನ್ನು ಕಾಂಗ್ರೆಸ್‍ಗೆ ಪರ್ಯಾಯವಾಗಿ ಆರಿಸಿದ್ದಾರೆ. ಜನ ಈ ಪಕ್ಷವನ್ನು ಆರಿಸಿರುವುದು ಇದೇ ಮೊದಲಲ್ಲ. 1999ರಲ್ಲಿ ಈ ಪಕ್ಷದ ನೇತೃತ್ವದ ಮೈತ್ರಿಕೂಟವನ್ನು ಗೆಲ್ಲಿಸಿತ್ತು. ನಂತರದ ಚುನಾವಣೆಗಳಲ್ಲಿ ಜನತೆ ಅದನ್ನು ಸೋಲಿಸಿತಾದರೂ ಅದಕ್ಕೆ ಕಾರಣ ಪ್ರಜೆಗಳ ಮೂಲಭೂತ ಹಕ್ಕುಗಳಲ್ಲಿ ಅಥವಾ ಪ್ರಜಾಪ್ರಭುತ್ವದ ಆಧಾರಗಳಲ್ಲಿ ವ್ಯತ್ಯಯವಾಯಿತು ಎಂಬ ಕಾರಣದಿಂದಲ್ಲ. ಆ ಮೈತ್ರಿಕೂಟ ಅನುಸರಿಸಿದ ಆರ್ಥಿಕ ನೀತಿಯ ಕೆಲ ಅಂಶಗಳನ್ನು ಜನತೆ ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ.

ಇಲ್ಲಿ ಎದ್ದು ಕಾಣುವುದು ವಾಜಪೇಯಿಯವರ ಭಾಜಪಕ್ಕೂ ಇಂದಿನ ನರೇಂದ್ರ ಮೋದಿಯವರ ಭಾಜಪಕ್ಕೂ ಇರುವ ವ್ಯತ್ಯಾಸ. ವ್ಯತ್ಯಾಸವೆಂದರೆ ನೆಹರೂ ಅಭಿಮಾನಿಯಾಗಿ ಅರೆ ಕಾಂಗ್ರೆಸ್ಸಿಗರೇ ಆಗಿದ್ದ ವಾಜಪೇಯಿ ನೇತೃತ್ವದ ಭಾಜಪ ಇತರ ಕಾಂಗ್ರೆಸ್ಸೇತರ ಪಕ್ಷಗಳ ಮೈತ್ರಿಕೂಟದ ಮೂಲಕ ಒಂದು ರೀತಿಯಲ್ಲಿ ಸುಧಾರಿತ ಕಾಂಗ್ರೆಸ್ ಪಕ್ಷದ ಆಡಳಿತದ ಭಾವನೆ ಹುಟ್ಟಿಸಿದ್ದರೆಂದು ಹೇಳಬೇಕು. ಹಾಗಾಗಿಯೇ ವಾಜಪೇಯಿ ಮೈತ್ರಿಕೂಟ 2004ರಲ್ಲಿ ಸೋತ ನಂತರವೂ ಭಾಜಪದ ಅಧ್ಯಕ್ಷರಾಗಿ ಅಡ್ವಾಣಿಯವರು ಪಾಕಿಸ್ತಾನಕ್ಕೆ ಹೋದಾಗ ಜಿನ್ನಾ ಸ್ಮಾರಕಕ್ಕೆ ಭೇಟಿ ನೀಡುವುದಲ್ಲದೆ ಅಲ್ಲಿ ಜಿನ್ನಾರನ್ನು ಸೆಕ್ಯುಲರ್ ರಾಜಕಾರಣಿ ಎಂದು ದಾಖಲಿಸಬಲ್ಲವರಾಗಿದ್ದರು. ಆದರೆ ಆ ಹೊತ್ತಿಗೆ ಪಕ್ಷದೊಳಗೇ ವಾಜಪೇಯಿ-ಅಡ್ವಾಣಿ ಜೋಡಿಯ ಮಾರ್ಗದರ್ಶನದಲ್ಲಿ ಪಕ್ಷ ತನ್ನ ಮೂಲ ಚಹರೆಗಳನ್ನು ತೊರೆಯುತ್ತಿರುವ ಬಗ್ಗೆ ಶುರುವಾಗಿದ್ದ ಆಕ್ರೋಶ ಈಗ ಒಂದು ನೆಪ ಸಿಕ್ಕಂತೆ ಸ್ಫೋಟಿಸಿ ಅಡ್ವಾಣೀಯವರ ಅಧ್ಯಕ್ಷ ಸ್ಥಾನಕ್ಕೇ ಮುಳುವಾಯಿತು.

2004ರಲ್ಲಿ ವಾಜಪೇಯಿ ನೇತೃತ್ವದ ಮೈತ್ರಿಕೂಟ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಸೋಲಲು ಪಕ್ಷದೊಳಗೇ ಬುಸುಗುಡುತ್ತಿದ್ದ ಈ ಆಕ್ರೋಶವೂ ಕಾರಣವಿದ್ದೀತು. ಇದರಿಂದ ತಿಳಿಯಬೇಕಾದ ಪಾಠವೆಂದರೆ ಭಾಜಪದ ನಿಜ ನಿಯಂತ್ರಣ ಆ ಪಕ್ಷದ ಚುನಾಯಿತ ನಾಯಕರಲ್ಲಿ ಇಲ್ಲದೆ ಬೇರೆಲ್ಲೋ ಇದೆ ಎಂಬುದು. ಅದು ತನ್ನ ಗುರಿ ಈಡೇರಿಸಿಕೊಳ್ಳಲು ಕಾಂಗ್ರೆಸ್ಸೇತರ ಪಕ್ಷಗಳನ್ನು ಏಣಿಯಾಗಿ ಬಳಸಿಕೊಳ್ಳಬಯಸುವುದೇ ಹೊರತು ಅವುಗಳನ್ನು ಬೆಳೆಯಲು ಬಿಡುವುದಿಲ್ಲವೆಂಬುದು. ಏಕೆಂದರೆ ಈ ಬಹುತೇಕ ಕಾಂಗ್ರೆಸ್ಸೇತರ ಪಕ್ಷಗಳೆಲ್ಲವೂ ಮೂಲತಃ ಕಾಂಗ್ರೆಸ್‍ನಿಂದ ಕೆಲ ಸಾಂದರ್ಭಿಕ/ವೈಯಕ್ತಿಕ ಕಾರಣಗಳಿಂದಾಗಿ ಒಡೆದು ಬಂದಿರುವ ಕಾಂಗ್ರೆಸ್ ತುಂಡುಗಳೇ. ಹಾಗಾಗಿ ಬಿಜೆಪಿಯ ‘ಕಾಂಗ್ರೆಸ್‍ಮುಕ್ತ ಭಾರತ’ ಘೋಷಣೆಯ ದೂರಗಾಮಿ ಅರ್ಥವೇನೆಂದು ಈ ಪಕ್ಷಗಳೂ ಯೋಚಿಸಬೇಕಾಗಿದೆ.

ಅದೇನೇ ಇರಲಿ, 2004ರ ಸೋಲು ಮತ್ತು 2005ರ ಅಡ್ವಾಣಿ ಹೇಳಿಕೆ ನಂತರ ಭಾಜಪದ ಖದರೇ ಬದಲಾಯಿತು. ತನ್ನದೇ ಭಾರತದ ಕನಸಿನ ಸಾಕಾರಕ್ಕಾಗಿ ರೂಪಿಸಿದ್ದ ಭಾಜಪದ ಮೇಲೆ ಸದಾ ನಿಗಾ ಇಟ್ಟಿರುವ ಆರೆಸ್ಸೆಸ್, ಪಕ್ಷದ ವಾಜಪೇಯೀಕರಣದ ಲಾಭಗಳೆಲ್ಲ ಮುಗಿದು ನಷ್ಟದ ದಿನಗಳು ಆರಂಭವಾದಂತಿದೆÉ ಎಂಬ ಅರಿವಿಗೆ ಬಂದಿದ್ದು ಹೊಸ ತಲೆಮಾರಿನ ನಾಯಕತ್ವದ ಪ್ರಯೋಗವನ್ನು ಆರಂಭಿಸಿತ್ತು. ಆ ಪ್ರಯೋಗ ಗುಜರಾತ್‍ನಲ್ಲಿ ನರೇಂದ್ರ ಮೋದಿ ಎಂಬ ನಿಷ್ಠಾವಂತ ಸ್ವಯಂಸೇವಕನ ಆಡಳಿತ ರೂಪದಲ್ಲಿ ಅಭೂತಪೂರ್ವವಾಗಿ ‘ಯಶಸ್ವಿ’ಯೂ ಆಗತೊಡಗಿತ್ತು. ಅಲ್ಲಿಂದ ಭಾಜಪದ ಹೊಸ ಶಕೆ ಆರಂಭವಾಯಿತೆನ್ನಬೇಕು. ಹಾಗೇ ಆರೆಸ್ಸೆಸ್ಸಿನ ‘ಕಾಂಗ್ರೆಸ್‍ಮುಕ್ತ ಭಾರತ’ದ ಕನಸೂ ನನಸಾಗುವ ಹತ್ತಿರದ ದಿನಗಳ ಸೂಚನೆಗಳೂ ದೊರೆಯತೊಡಗಿದವು. ಕೇವಲ ಆರೆಸ್ಸೆಸ್-ಬಿಜೆಪಿಗೆ ಅಲ್ಲ. ರಾಷ್ಟ್ರದ ಜನತೆಗೂ. ಇದರ ಭಾಗವಾಗಿ ಆ ರಾಜ್ಯದಲ್ಲಿ 2002ರಲ್ಲಿ ರಕ್ತದ ಕೋಡಿಯೇ ಹರಿಯುವಂತಾದಾಗ, ಇಂತಹ ನಾಯಕತ್ವದ ಬೆಳವಣಿಗೆಯನ್ನು ‘ರಾಜಧರ್ಮ’ದ ಹೆಸರಲ್ಲಿ ತಡೆಯಲು ಮಾಡಿದ ವಾಜಪೇಯಿಯವರ ಪ್ರಯತ್ನವನ್ನು ವಿಫಲಗೊಳಿಸಿದವರು ಅಡ್ವಾಣಿಯವರೇ ಎಂಬುದು ಒಂದು ವಿಪರ್ಯಾಸ.

ಇದರ ಒಟ್ಟು ಪರಿಣಾಮವೆಂದರೆ ಬಿಜೆಪಿ ಆರೆಸ್ಸೆಸ್ಸಿನ ರಾಜಕೀಯ ಮುಖವಾಗಿರುವ ಅಗತ್ಯವೇ ಇಲ್ಲದೆ ಆರೆಸ್ಸೆಸ್ಸೇ ಬಿಜೆಪಿಯಾಯಿತು. ಅಡ್ವಾಣಿ, ಜಸವಂತ್ ಸಿಂಗ್, ಮುರಳೀ ಮನೋಹರ ಜೋಷಿ, ಯಶವಂತ್ ಸಿಂಗ್ ಮುಂತಾದ ಹಿರಿಯ ಬಿಜೆಪಿ ನಾಯಕರಿದ್ದರೂ ನರೇಂದ್ರ ಮೋದಿಯವರನ್ನು ರಾಷ್ಟ್ರದ ಪ್ರಧಾನಿ ಸ್ಥಾನದ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರ ಹಿಂದಿನ ರಾಜಕಾರಣ ಇದಕ್ಕೆ ಸಾಕ್ಷಿ. ಆ ರಾಜಕಾರಣದ ಯಶಸ್ಸಿನ ಫಲವೇ `ಕಾಂಗ್ರೆಸ್‍ಮುಕ್ತ ಭಾರತ’ ಎಂಬ ತೆರೆದ ಘೋಷಣೆ. ಜೊತೆಗೇ ಆಡಳಿತದ ಇಕ್ಕಟ್ಟಿನಲ್ಲಿ  ಮೋದಿಯವರು ಎಲ್ಲಿ ತನ್ನ ತತ್ವ ಮತ್ತು ಗುರಿಗಳ ವಿಷಯದಲ್ಲಿ ರಾಜಿ ಮಾಡಿಕೊಂಡಾರೋ ಎಂಬ ಎಚ್ಚರಿಕೆಯ ಭಾಗವಾಗಿ ಸರ್ಕಾರದಲ್ಲಿ ಆರೆಸ್ಸೆಸ್ ತನ್ನ ಇನ್ನೋರ್ವ ನಿಷ್ಠಾವಂತ ಪ್ರತಿನಿಧಿ ಅಮಿತ್ ಶಾರನ್ನು ಗೃಹ ಮಂತ್ರಿಯನ್ನಾಗಿ ನೇಮಿಸಿ ಇರಿಸಿದೆ ಎಂಬುದನ್ನು ನಾವು ಗಮನಿಸಬೇಕು. ಹಾಗಾಗಿ ಈ ಘೋಷಣೆಗೆ ಪಕ್ಷವೊಂದರ ನಾಶ ಎಂಬುದಕ್ಕಿಂತ ಆಳದ ಅರ್ಥವಿದೆ.

ಈ ಆಳದ ಅರ್ಥವನ್ನು ಅರಿಯಲು ನಾವು ಆರೆಸ್ಸೆಸ್ ಯಾವಾಗ ಏಕೆ ಸ್ಥಾಪಿತವಾಯಿತು ಎಂಬುನ್ನು ಗಮನಿಸಬೇಕು. ಕಾಂಗ್ರೆಸ್ ಆಂದೋಲನದಲ್ಲಿ ಉಗ್ರವಾದಿ ತಿಲಕರ ಅನುಯಾಯಿಗಳ ಗುಂಪು ಹಿನ್ನೆಲೆಗೆ ಸರಿದು ಖಿಲಾಫತ್ ಚಳವಳಿ ಚದುರಿಹೋದ ನಂತರ ಭಾರತದ ಮುಸ್ಲಿಂ ಸಮುದಾಯದ ಪ್ರತಿನಿಧಿಗಳಂತಿದ್ದ ಅಲಿ ಸೋದರರು ತೋರಿದ ಮತೀಯವಾದಿ ನಿಲುವುಗಳ ನಂತರವೂ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ ಗಾಂಧಿ ನಾಯಕತ್ವ ಭದ್ರವಾಗಿ ಬೇರೂರತೊಡಗಿದಾಗ 1925ರ ಸೆಪ್ಟಂಬರ್ 25ರಂದು ಆರೆಸ್ಸೆಸ್ ಸ್ಥಾಪಿತವಾಯಿತು. ಅದು ಸ್ಥಾಪಿತವಾಗಿದ್ದು ಹಿಂದೂ ಮಹಾಸಭಾದ ನಾಯಕ ಮೂಂಜೆಯವರ ನೆರವಿನೊಂದಿಗೆ ಕಲ್ಕತ್ತಾದಲ್ಲಿ. ವೈದ್ಯಕೀಯ ಶಿಕ್ಷಣದ ಜೊತೆಗೆ ಬಂಗಾಳದ ಉಗ್ರಗಾಮಿ ‘ಅನುಶೀಲನ’ ಗುಂಪಿನಲ್ಲಿ ತರಬೇತಿ ಪಡೆದ ಕೇಶವ ಬಲಿರಾಂ ಹೆಡ್ಗೆವಾರ್ ಎಂಬ ತರುಣ ವೀರೋತ್ಸಾಹಿಯಿಂದ.

ಹಾಗಾಗಿಯೇ ಅದು ಆಗ ಇಟಲಿಯಲ್ಲಿ ಪ್ರಚಲಿತಕ್ಕೆ ಬರುತ್ತಿದ್ದ ಫ್ಯಾಸಿವಾದದ ಪ್ರಭಾವದಲ್ಲಿ ಸೈನಿಕ ಶಿಸ್ತು ಶಸ್ತ್ರ ಮತ್ತು ತರಬೇತಿಯ ದೀಕ್ಷಾಬದ್ಧ ಹಿಂದೂ ಧರ್ಮ ರಕ್ಷಣಾ ಪಡೆಯಾಗಿ ರೂಪುಗೊಂಡಿತು. ಮುಂದೆ ಇದು ಇದೇ ಗುಂಪಿನ ಸಾವರ್ಕರ್ ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ರೂಪಿಸಿದ ಮತಾಧಾರಿತ ಶ್ರೇಣೀಕರಣದ ಪ್ರಜೆತನವನ್ನಾಧರಿಸಿದ ‘ಹಿಂದುತ್ವ ಎಂಬ ಉಗ್ರ ಮತೀಯವಾದಿ ರಾಷ್ಟ್ರೀಯತೆಯನ್ನು ತನ್ನ ರಾಷ್ಟ್ರೀಯತೆಯ ಸಿದ್ಧಾಂತವನ್ನಾಗಿ ಒಪ್ಪಿಕೊಳ್ಳುವ ಹೊತ್ತಿಗೆ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ರೂಪಿಸುತ್ತಿದ್ದ ಹಿಂದೂ ಧರ್ಮದ ಸನಾತನ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಿ ಬಹುತ್ವದ ಅಹಿಂಸಾತ್ಮಕ ರಾಷ್ಟ್ರೀಯತೆ ಒಂದು ದೊಡ್ಡ ಮುಖಾಮುಖಿಯನ್ನು ಈ ರೂಪದಲ್ಲಿ ಎದುರಿಸಬೇಕಾಯಿತು.

ಈ ಮುಖಾಮುಖಿ ಅಂತಿಮವಾಗಿ ಗಾಂಧಿ ಕೊಲೆಯಲ್ಲಿ ಪರ್ಯಾವಸಾನವಾದರೂ, ಗಾಂಧಿ ರೂಪಿಸಿಕೊಟ್ಟ ರಾಷ್ಟ್ರೀಯತೆ ಮತ್ತು ಅದು ಪ್ರತಿನಿಧಿಸುವ ಮೌಲ್ಯಗಳೇ ಸ್ವತಂತ್ರ ಭಾರತದ ಅಧಿಕೃತ ಮೌಲ್ಯಗಳಾದವು. ಅವುಗಳ ಸಾರ ನಮ್ಮ ಸಂವಿಧಾನದಲ್ಲಿಯೂ ಅಳವಡಿಕೆಯಾಯಿತು. ಆದರೆ ಆರೆಸ್ಸೆಸ್ ಇದನ್ನು ಸವಾಲಾಗಿ ಸ್ವೀಕರಿಸಿದಂತೆ ಗಾಂಧಿ ಮೌಲ್ಯಗಳ ಪ್ರತಿನಿಧಿಯಂತಿದ್ದ ಕಾಂಗ್ರೆಸ್‍ಗೆ ಪರ್ಯಾಯವಾಗಿ (ಮುಂದೆ ಭಾಜಪವಾಗಿ ರೂಪಾಂತರಗೊಂಡ) ಭಾರತೀಯ ಜನಸಂಘವನ್ನು ಸ್ಥಾಪಿಸಿ ಬೆಳೆಸತೊಡಗಿತು. ಮುಂದಿನಿದೆಲ್ಲ ಚರಿತ್ರೆ. ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಕ್ರಮೇಣ ವ್ಯಾವಹಾರಿಕ/ಸ್ಪರ್ಧಾತ್ಮಕ ರಾಜಕಾರಣ ಇತ್ಯಾದಿ ಒಂದಲ್ಲ ಒಂದು ನೆಪದಲ್ಲಿ ಗಾಂಧಿ ಮೌಲ್ಯಗಳನ್ನು ಕೈಬಿಡುತ್ತಾ ಅವುಗಳನ್ನು ಅಪಮೌಲ್ಯ ಮತ್ತು ಅಪ್ರಸ್ತುತಗೊಳಿಸುತ್ತಾ ಹೋಗಿ ಅದೇ ಕಾರಣದಿಂದ ಒಂದು ರಾಜಕೀಯ ಪಕ್ಷವಾಗಿ ಕೂಡ ಅಪಮೌಲ್ಯ ಮತ್ತು ಅಪ್ರಸ್ತುತಗೊಂಡಿದೆ. ಇಂದಿನ ಸಂದರ್ಭದಲ್ಲಿ ‘ಕಾಂಗ್ರೆಸ್‍ಮುಕ್ತ ಭಾರತ’ದ ಘೋಷಣೆ’ಯು ಹೊಸ ತಲೆಮಾರೇ ಬಹುಸಂಖ್ಯಾತರಾಗಿರುವ ಪ್ರಜಾ ಸಮುದಾಯದ ನಡುವೆ ಮತ್ತು ಜಗತ್ತಿನ ಹಲವೆಡೆ ಏಕಪಕ್ಷ ಪ್ರಜಾಪ್ರಭುತ್ವ ಎಂಬ ಅರೆ ಫ್ಯಾಸಿಸಂ ತಲೆ ಎತ್ತಿರುವಾಗ ಅಪಾಯಕಾರಿಯಾಗಿ ಕಾಣದಿರುವುದರಲ್ಲಿ ಆಶ್ಚರ್ಯವೇನು?

ಇದಕ್ಕೆ ಪರಿಹಾರವಿಲ್ಲವೆ? ಪರಿಹಾರದ ಮೊದಲ ಮೂಲವನ್ನು ನಾನು ಕಾಣುವುದು ಹಲವಾರು ಕಾರಣಗಳಿಂದಾಗಿ ಭಾಜಪದಲ್ಲೇ ಸುಪ್ತವಾಗಿ ಇರುವ ಪ್ರಜಾಸತ್ತಾತ್ಮಕ ಶಕ್ತಿಗಳ ಜಾಗೃತಿ. ಇದಕ್ಕೆ ಪೂರಕವಾಗಿ ಗಾಂಧಿಯನ್ನು ಅವರ ಚಲನಶೀಲತೆಯೊಂದಿಗೆ ಪೂರ್ಣ ಪ್ರಮಾಣದಲ್ಲಿ ಪುನರುಜ್ಜೀವನಗೊಳಿಸುವುದು. ಕೆಲವರು ಕಾಂಗ್ರೆಸ್ ಪಕ್ಷದ ಪುನರುಜ್ಜೀವದ ಮೂಲಕವೂ ಆಗಬಹುದು ಎನ್ನುತ್ತಾರೆ. ಆದರೆ ಆ ಪಕ್ಷವನ್ನು ಗಾಂಧಿಯವರೇ ವಿಸರ್ಜಿಸುವ ತೀರ್ಮಾನ ಮಾಡಿದ್ದರು ಎಂದ ಮೇಲೂ ಅದು ಈವರೆಗೆ ಬದುಕುಳಿದಿರುವುದೇ ಗಾಂಧಿಯನ್ನು ಅಂಚಿಗೆ ತಳ್ಳುತ್ತಾ. ಆದರೆ ಅದು ತನ್ನ ಈ ಪಾಪದ ಪ್ರಾಯಶ್ಚಿತ್ತವಾಗಿಯಾದರೂ ಮಾಡಬಹುದಾದ ಗಾಂಧಿಯ ಪುನರುಜ್ಜೀವನದ ಪ್ರಾಮಾಣಿಕ ಪ್ರಯತ್ನವೇ ಆ ಪಕ್ಷದ ಮರುಜನ್ಮದ ರೂಪದಲ್ಲಿ ಸಾಕಾರವಾಗುವುದಾದರೆ ಬೇಡವೆನ್ನುವವರು ಯಾರು?

*ಲೇಖಕರು ಹಿರಿಯ ಸಮಾಜವಾದಿ ಚಿಂತಕರು; ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ನಂತರ ಆಕಾಶವಾಣಿಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ, ಶಿವಮೊಗ್ಗೆಯಲ್ಲಿ ವಾಸ.

 

Leave a Reply

Your email address will not be published.