ಕಾಂಗ್ರೆಸ್ ನಾಯಕತ್ವ: ಬಡಕಲು ದೇಹಕ್ಕೆ ಚಿನ್ನದ ಹೊದಿಕೆ!

-ಸುಧೀಂದ್ರ ಬುಧ್ಯ

ಈಗಿನ ಸನ್ನಿವೇಶದಲ್ಲಿ ಕಾಂಗ್ರೆಸ್ ಪುನರುಜ್ಜೀವನ ಸಾಧ್ಯವೇ? ರಾಜಕಾರಣದಲ್ಲಿ ಎಲ್ಲವೂ ಸಾಧ್ಯವಾದ್ದರಿಂದ ಕಾಂಗ್ರೆಸ್ ವಿಷಯದಲ್ಲಿ ಪುನರುಜ್ಜೀವನ ಅಸಾಧ್ಯ ಎನ್ನುವಂತಿಲ್ಲ. ಆದರೆ ರಾಹುಲ್ ಗಾಂಧೀ ನಾಯಕತ್ವ ಮುಂದುವರೆದರೆ ಹಾದಿ ಕಠಿಣವೇ!

ಮೊದಲಿಗೆ ಒಂದು ಸಂಗತಿಯನ್ನು ಸ್ಪಷ್ಟಪಡಿಸಿಕೊಳ್ಳೋಣ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇವಲ ಒಂದು ಪಕ್ಷ ಅಥವಾ ಒಂದು ಸಿದ್ಧಾಂತಿಗಳ ಗುಂಪು ಹೆಚ್ಚಿನ ಬಲ ಪಡೆದುಕೊಂಡು, ಬದಲಿ ಆಯ್ಕೆ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿಬಿಟ್ಟರೆ ಅಂತಹ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ. ಹಾಗಾಗಿ ಭಾರತದ ಮಟ್ಟಿಗೆ ಕೇವಲ ಬಿಜೆಪಿ ರಾಷ್ಟçವ್ಯಾಪಿ ಬಲವರ್ಧನೆಗೊಂಡು, ಉಳಿದ ಪಕ್ಷಗಳು ನೆಲೆಕಳೆದುಕೊಂಡರೆ ಪ್ರಜಾಪ್ರಭುತ್ವದ ಸೌಂದರ್ಯ ಅಷ್ಟರಮಟ್ಟಿಗೆ ಮುಕ್ಕಾಗುತ್ತದೆ. ಅಂತಹ ಪರಿಸ್ಥಿತಿಯತ್ತ ನಾವು ಹೋಗುತ್ತಿದ್ದೇವೆಯೇ? ಇದಕ್ಕೆ ಹಿಂದಿನ ಮತ್ತು ಇತ್ತೀಚಿನ ಚುನಾವಣಾ ಫಲಿತಾಂಶದಲ್ಲಿ ಉತ್ತರ ಹುಡುಕಬಹುದು.

ಹಾಗಾದರೆ ಯಾಕೆ ಹೀಗಾಗುತ್ತಿದೆ? `ಕಾಂಗ್ರೆಸ್ ಮುಕ್ತ ಭಾರತ’ ಎನ್ನುವ ಬಿಜೆಪಿಯ ಘೋಷಣೆ ಎಷ್ಟರ ಮಟ್ಟಿಗೆ ಸರಿ? ಈ ಪ್ರಶ್ನೆಗೆ ಈಗಾಗಲೇ ಕೆಲವು ಬಿಜೆಪಿ ನಾಯಕರು `ಕಾಂಗ್ರೆಸ್ ಎಂದರೆ ಅದು ಕೇವಲ ಒಂದು ಪಕ್ಷವಲ್ಲ. ಬದಲಿಗೆ ಮನಸ್ಥಿತಿ. ವಂಶಪಾರOಪರ್ಯ ರಾಜಕಾರಣ ಮತ್ತು ಮತಕ್ಕಾಗಿ ತುಷ್ಟೀಕರಣ ಎನ್ನುವುದು ಅದರ ಹೆಗ್ಗುರುತು. `ಕಾಂಗ್ರೆಸ್ ಮುಕ್ತ ಭಾರತ’ ಎಂದರೆ ಈ ಮನಸ್ಥಿತಿಯಿಂದ ಮುಕ್ತವಾಗುವುದು’ ಎಂಬ ಸ್ಪಷ್ಟನೆಯನ್ನು ನೀಡಿದ್ದಾರೆ. ಅದೇನೇ ಇರಲಿ, ಒಂದು ಕಾಲದಲ್ಲಿ ಅತಿದೊಡ್ಡ ಪಕ್ಷವಾಗಿದ್ದ, `ಇಂಡಿಯಾ ಎಂದರೆ ಇಂದಿರಾ, ಇಂದಿರಾ ಎಂದರೆ ಇಂಡಿಯಾ’ ಎಂದು ಅವರ ಅನುಯಾಯಿಗಳು ಕೈ ಎತ್ತಿ ಕೂಗುವಷ್ಟು ದೇಶದ ರಾಜಕಾರಣವನ್ನು ಆಕ್ರಮಿಸಿಕೊಂಡಿದ್ದ ಪಕ್ಷ ಈಗ ಕಳೆಗುಂದಿರುವುದೇಕೆ? ಎಂಬುದನ್ನು ಮುಖ್ಯವಾಗಿ ನೋಡಬೇಕು.

ಯಾವುದೇ ಪೈಪೋಟಿಯ ವಾತಾವರಣದಲ್ಲಿ ಒಂದು ಗುಂಪು ಮತ್ತೊಂದರ ವಿರುದ್ಧ ಮಾತನಾಡುವಾಗ ನಿನ್ನನ್ನು ಇಲ್ಲದಂತೆ ಮಾಡುತ್ತೇನೆ ಎನ್ನುವುದು ಒಂದು ಸಹಜ ಅಭಿವ್ಯಕ್ತಿ. ಅದು ಸ್ಪರ್ಧೆ ಎಂಬುದು ಅತಿರೇಕಕ್ಕೆ, ವೈಷಮ್ಯದ ಹಂತಕ್ಕೆ ಹೋಗಿದೆ ಮತ್ತು ಹೀಗೆ ಹೇಳುವ ಗುಂಪಿಗೆ, ತನ್ನ ಬಲದ ಬಗ್ಗೆ ಒಂದು ಸಣ್ಣ ಅಹಂಕಾರ ಬೆಳೆದಿದೆ ಎಂಬುದರ ಸೂಚನೆ. ಆದರೆ ಹೀಗೆ ಹೇಳಿದಾಕ್ಷಣ ಅದನ್ನು ಸಾಧಿಸಲು ಸಾಧ್ಯವೇ? ವ್ಯಾಪಾರ ರಂಗದಲ್ಲಿ ಒಂದು ಸಂಸ್ಥೆ ಹೀಗೆ ಹೇಳಿದರೆ, ಅಂತಿಮವಾಗಿ ಅದನ್ನು ಕಾರ್ಯಗತ ಮಾಡಬೇಕಾದ್ದು ಗ್ರಾಹಕರು. ಅಂತೆಯೇ ರಾಜಕಾರಣದಲ್ಲಿ `ಕಾಂಗ್ರೆಸ್ ಮುಕ್ತ ಭಾರತ’ ಎಂಬುದು ಆಗಬೇಕಾದ್ದು ಮತದಾರನಿಂದ. ಹಾಗಾದರೆ ಮತದಾರ ಕಾಂಗ್ರೆಸ್ಸಿನಿAದ ದೂರಸರಿಯುತ್ತಿದ್ದಾನೆ ಎನಿಸಿದರೆ ಆ ಪಕ್ಷ ಎಡವಿದ್ದೆಲ್ಲಿ? ಅದು ಪ್ರತಿಪಾದಿಸಿಕೊಂಡು ಬಂದ ತತ್ವಗಳು ಸರಿಯಿಲ್ಲವೇ, ದ್ವಂದ್ವಗಳನ್ನು ಮೀರಲಾಗದ್ದು ಮಿತಿಯೇ, ಆಡಳಿತದ ಅಶಿಸ್ತು, ಅಲ್ಪಸಂಖ್ಯಾತರ ತುಷ್ಟೀಕರಣ, ಭ್ರಷ್ಟಾಚಾರ, ವಂಶಪಾರOಪರ್ಯ ರಾಜಕಾರಣ ಹೀಗೆ ಒಟ್ಟಾರೆಯಾಗಿ ಅದರ ಕಾರ್ಯವೈಖರಿ ಮತದಾರನಲ್ಲಿ ರೇಜಿಗೆ ಹುಟ್ಟಿಸಿತೇ? ಸಾಮಾನ್ಯವಾಗಿ ಕಾಂಗ್ರೆಸ್ ವಿರೋಧಿಸುವವರು ಏರುದನಿಯಲ್ಲಿ ಹೇಳುವ ಮಾತು, ಅದು ಒಂದು ಕುಟುಂಬಕ್ಕೆ ಅಧೀನವಾದ ಪಕ್ಷ ಎಂಬುದು. ಆ ಮಾತು ನಿಜವೂ ಹೌದು.

ಹಾಗೆ ನೋಡಿದರೆ, ಗಾಂಧೀ ಕುಟುಂಬದಿAದಾಚೆಗೆ ಪಕ್ಷವನ್ನು ಬೆಳೆಸುವ ಅವಕಾಶ ಇಂದಿರಾ ಮತ್ತು ರಾಜೀವ ಹತ್ಯೆಯ ಬಳಿಕ ಎರಡು ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಒದಗಿತ್ತು. 1984ರ ಹೊತ್ತಿಗೆ ಇಂದಿರಾ ಸಂಪುಟದಲ್ಲಿ ಎರಡನೆಯ ಸ್ಥಾನದಲ್ಲಿ ಪ್ರಣವ್ ಮುಖರ್ಜಿ ಇದ್ದರು. ನೆಹರು ನಂತರ ಯಾರು? ಎಂಬ ಪ್ರಶ್ನೆಯಂತೆಯೇ ಇಂದಿರಾ ನಂತರ ಯಾರು? ಎಂಬ ಪ್ರಶ್ನೆಯೂ ಎದ್ದಿತ್ತು. ಪ್ರಣವ್ ಮುಖರ್ಜಿ ಕೊಂಚ ಉತ್ಸಾಹ ತೋರಿ, ಪತ್ರಕರ್ತರ ಪ್ರಶ್ನೆಗೆ `ನಾನಿದ್ದೇನಲ್ಲ’ ಎಂಬ ಧಾಟಿಯಲ್ಲಿ ಉತ್ತರಿಸಿದ್ದರು. ಅಲ್ಲಿಂದ ಪ್ರಣವ್ ಕಾಂಗ್ರೆಸ್ಸಿನ ಕುಟುಂಬ ಆರಾಧಕ ಪಡೆಯ ವಿರೋಧ ಎದುರಿಸಬೇಕಾಯಿತು.

ರಾಜೀವ್ ಗಾಂಧಿ ಪ್ರಧಾನಿಯಾದಾಗ ಅವರ ಜೊತೆಯಲ್ಲೇ ಪ್ರಣವ್ ಮುಖರ್ಜಿ, ಪಿ.ವಿ.ನರಸಿಂಹರಾವ್, ಪಿ.ಶಿವಶಂಕರ್ ಮತ್ತು ಬೂಟಾ ಸಿಂಗ್ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದರು. ಆಡಳಿತದಲ್ಲಿ ಅನನುಭವಿಯಾಗಿದ್ದ ರಾಜೀವ್ ಗಾಂಧಿ ಅವರಿಗೆ ಪ್ರಣವ್ ಮುಖರ್ಜಿ ಮತ್ತು ಪಿವಿಎನ್ ಅವರ ರಾಜಕೀಯ ಅನುಭವ ಅಗತ್ಯವಾಗಿತ್ತು. ಸಿಖ್ಖರ ಮೇಲಿನ ದಾಳಿಗೆ ಮುಲಾಮು ಹಚ್ಚಲು ಬೂಟಾ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಪ್ರಣವ್ ಮುಖರ್ಜಿ ಪತ್ರಕರ್ತರ ಮುಂದೆ `ನಾನಿದ್ದೇನೆ’ ಎಂದಿದ್ದನ್ನು ರಾಜೀವ್ ಗಾಂಧಿ ಮರೆಯುವುದು ಸಾಧ್ಯವಾಗಲಿಲ್ಲ. ಒಂದು ರೀತಿಯಲ್ಲಿ ತಮ್ಮ ಪ್ರತಿಸ್ಪರ್ಧಿಯಂತೆಯೇ ಅವರನ್ನು ನೋಡಿದರು. ಒಂದು ಹಂತದಲ್ಲಿ ಕೇಂದ್ರ ಸಂಪುಟದ ಎರಡನೆಯ ಸ್ಥಾನದಲ್ಲಿದ್ದ ನಾಯಕನನ್ನು, ಪಶ್ಚಿಮ ಬಂಗಾಳದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳಲು ಕಳುಹಿಸಲಾಯಿತು. ನಂತರ ಪಕ್ಷದಿಂದ ಉಚ್ಛಾಟಿಸಲಾಯಿತು. ಪ್ರಣವ್ ತಮ್ಮದೇ ಪಕ್ಷ ಕಟ್ಟುವ ಪ್ರಯತ್ನ ಮಾಡಿ ಸೋತರು. ನಂತರ ಪುನಃ ಕಾಂಗ್ರೆಸ್ಸಿಗೆ ಹಿಂದಿರುಗಿದರಾದರೂ ನೆಹರು ಕುಟುಂಬಕ್ಕೆ ಸ್ಪರ್ಧಿಯಾಗಿ, ರಾಜಕೀಯ ಬೆಳವಣಿಗೆ ಸಾಧಿಸುವುದು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದರು. 1998ರಲ್ಲಿ ಸೋನಿಯಾರ ಮನವೊಲಿಸಿ ಪಕ್ಷಕ್ಕೆ ಕರೆತಂದವರಲ್ಲಿ ಪ್ರಣವ್ ಮುಖರ್ಜಿ ಪ್ರಮುಖರು!

1991ರಲ್ಲಿ ರಾಜೀವ್ ಹತ್ಯೆಯ ಬಳಿಕ ಮತ್ತೊಮ್ಮೆ ನಿರ್ವಾತ ಉಂಟಾಗಿತ್ತು. ಸೋನಿಯಾರಿಗೆ ರಾಜಕೀಯದ ಸ್ವರವ್ಯಂಜನಗಳ ಅರಿವಿರಲಿಲ್ಲ. ಶರದ್ ಪವಾರ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಅಗಾಧ ರಾಜಕೀಯ ಅನುಭವವಿದ್ದ, 70 ವರ್ಷದ, ಮೂರು ಬಾರಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದ, ಪಿ.ವಿ.ನರಸಿಂಹರಾವ್ ಹೆಗಲಿಗೆ ಬಿತ್ತು! ಒಂದೆಡೆ ಸ್ವತಃ ಕಾಂಗ್ರೆಸ್ಸಿಗರೇ ರಾವ್ ವಿರುದ್ಧ ಸೆಟೆದು ನಿಂತರು. ನೆಹರೂ ತತ್ವಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಸಿಟ್ಟಾದರು. ಅರ್ಜುನ್ ಸಿಂಗ್, ವಯಲಾರ ರವಿ ಬಂಡಾಯ ಘೋಷಿಸಿದರು. ಪಕ್ಷದೊಳಗಿನ ಭಿನ್ನಮತದ ವಾಸನೆ ಗ್ರಹಿಸಿದ ರಾವ್, ತಿರುಪತಿಯ ಕಾಂಗ್ರೆಸ್ ಅಧಿವೇಶನದಲ್ಲಿ `ದಿ ಟಾಸ್ಕ್ ಅಹೆಡ್’ ಎಂಬ ತಮ್ಮ ಮಹತ್ವದ ಭಾಷಣ ಮಾಡಿ, ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿ ಮತ್ತು ನೆಹರೂ ಪ್ರಣೀತ ಸಮಾಜವಾದದ ನಡುವಿನ ಮಧ್ಯಮ ಮಾರ್ಗದಲ್ಲಿ ನಡೆಯಬೇಕಾದ ಜರೂರಿದೆ ಎಂದು ವಿವರಿಸಿದರು. ನೆಹರೂ, ಇಂದಿರಾ, ರಾಜೀವರ ಚಿಂತನೆಗಳನ್ನು ತಾವು ಬಿಟ್ಟುಕೊಟ್ಟಿಲ್ಲ ಎಂದು ಮನವರಿಕೆ ಮಾಡಿದರು.

ರಾವ್ ಇಟ್ಟ ದಿಟ್ಟ ಹೆಜ್ಜೆಗಳಿಂದ, ದೇಶ ಕೇವಲ ದಿವಾಳಿಯಂಚಿನಿOದ ಪಾರಾಗಿದ್ದಲ್ಲ. ಖಾಸಗೀಕರಣ ಮತ್ತು ಜಾಗತೀಕರಣಗಳ ಪರಿಣಾಮವಾಗಿ ಉದ್ಯೋಗ/ತಂತ್ರಜ್ಞಾನದ ಕ್ರಾಂತಿಯಾಯಿತು. ಹೆಚ್ಚೆಂದರೆ ನೂರು, ಸಾವಿರದಲ್ಲಿ ಮಾತನಾಡುತ್ತಿದ್ದ ಕೆಳಮಧ್ಯಮವರ್ಗ, ಲಕ್ಷಗಳನ್ನು ನೋಡುವಂತಾಯಿತು. ಮೊಬೈಲ್ ಅಗ್ಗವಾಯಿತು. ಪ್ಲಾಸ್ಟಿಕ್ ಮನಿ ಚಾಲ್ತಿಗೆ ಬಂತು. ಸಾಮಾನ್ಯರೂ ಕಾರು ಕೊಳ್ಳುವಂತಾಯಿತು. ಕಂಪ್ಯೂಟರ್ ಗಗನ ಕುಸುಮವಾಗದೇ ಹಿತ್ತಲಿನ ಜಾಜಿಯಾಯಿತು. ಇದೆಲ್ಲವೂ ಸಾಧ್ಯವಾಗಿದ್ದು ಪಿವಿಎನ್ ಮತ್ತು ಮನಮೋಹನ್ ಸಿಂಗ್ ಜೋಡಿ ತೆಗೆದುಕೊಂಡ ಮಹತ್ವದ ನಿರ್ಣಯಗಳಿಂದ ಎನ್ನುವುದನ್ನು ಕಾಂಗ್ರೆಸ್ ಉತ್ಸಾಹದಿಂದ ಎತ್ತಿ ಹಾಡಲೇ ಇಲ್ಲ! ಬದಲಿಗೆ 1996ರ ಚುನಾವಣೆಯಲ್ಲಿ ಸೋಲು ಕಂಡಾಗ, ಪಿವಿಎನ್ ನೆಹರು ಪ್ರಣೀತ ಸಮಾಜವಾದದ ಹಾದಿ ಬಿಟ್ಟು ಆರ್ಥಿಕ ಸುಧಾರಣಾ ಕ್ರಮ ಕೈಗೊಂಡಿದ್ದೇ ಸೋಲಿಗೆ ಕಾರಣ ಎಂದು ವ್ಯಾಖ್ಯಾನಿಸಿತು.

ಭಾಜಪಾ ರಾಮಜನ್ಮಭೂಮಿ ಹೋರಾಟವನ್ನು ಮುನ್ನಲೆಗೆ ತಂದು, ಜನರ ಭಾವನಾತ್ಮಕ ಬೆಂಬಲದೊAದಿಗೆ ಮೇಲೇರಿದ್ದ ಸಂದರ್ಭ ಅದು. ಭಾಜಪಾದ ಈ ನಿಲುವಿಗೆ ತಾನು ಹೇಗೆ ಪ್ರತಿಕ್ರಿಯಿಸಬೇಕು, ತನ್ನ ಕಾರ್ಯತಂತ್ರವನ್ನು ಹೇಗೆ ಬದಲು ಮಾಡಿಕೊಳ್ಳಬೇಕು ಎಂಬುದನ್ನು ವಿವೇಚಿಸದೇ ಕೇವಲ ಪಿವಿಎನ್ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿತು. ಈ ಎರಡೂ ಸಂದರ್ಭದಲ್ಲೂ ಕಾಂಗ್ರೆಸ್ಸಿಗೆ ಸವಾಲೆಸೆಯುವ ದೊಡ್ಡ ಪಕ್ಷವೊಂದು ಇರಲಿಲ್ಲ ಮತ್ತು ಗಾಂಧೀ ಕುಟುಂಬದಾಚೆ ಪಕ್ಷವನ್ನು ವಿಸ್ತರಿಸಲು ಕಾಲ ಮತ್ತು ಸನ್ನಿವೇಶಗಳು ಪಕ್ವವಾಗಿದ್ದವು. ಆದರೆ ಕುಟುಂಬ ನಿಷ್ಠೆಯ ಪಟ್ಟಭದ್ರ ನಾಯಕರ ಕಾರಣದಿಂದ ಪಕ್ಷ ಈ ಅವಕಾಶವನ್ನು ಕೈಚೆಲ್ಲಿತು.

ಕಾಂಗ್ರೆಸ್ ಬಗ್ಗೆ ಇರುವ ಇನ್ನೊಂದು ಮುಖ್ಯ ಆರೋಪ ಎಂದರೆ ಅದು ಎರಡನೇ ಹಂತದ ನಾಯಕರನ್ನು ಬೆಳೆಸುವ ಪರಿಪಾಟ ಹೊಂದಿಲ್ಲ ಎಂಬುದು. ಇತ್ತೀಚೆಗೆ ಜ್ಯೋತಿರಾದಿತ್ಯ ಸಿಂಧ್ಯಾ ಎಂಬ ಪ್ರಭಾವಿ ಯುವ ನಾಯಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಬೇಕಾಗಿ ಬಂದದ್ದು ಏಕೆ? ಸಚಿನ್ ಪೈಲಟ್ ಗುಂಪು ಬಂಡಾಯದ ಬಾವುಟ ಹಿಡಿದು ನಿಂತದ್ದು ಏಕೆ? ಅಷ್ಟೇಕೆ, ಇದೀಗ ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಹೆಚ್ಚು ಕ್ರಿಯಾಶೀಲರಾಗಿರುವ, ಕೊರೊನಾ ಏರುಗತಿಯಲ್ಲಿದ್ದಾಗ ಚಟುವಟಿಕೆಯಿಂದ ಕೆಲಸ ಮಾಡಿ ಜನಮೆಚ್ಚುಗೆಯನ್ನೂ ಗಳಿಸಿದ ಆರೋಗ್ಯ ಸಚಿವ ಸುಧಾಕರ್ ಬಿಜೆಪಿಯಿಂದ ರಾಜಕೀಯ ಆರಂಭಿಸಿದವರಲ್ಲ. ಹಾಗಾದರೆ ಅವರನ್ನು ಬಳಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದ್ದು ಏಕೆ? ಎಂಬುದನ್ನು ಕಾಂಗ್ರೆಸ್ಸಿಗರು ಪ್ರಶ್ನಿಸಿಕೊಂಡು ಉತ್ತರ ಹುಡುಕಬೇಕು.

ಮುಖ್ಯವಾಗಿ ಕಾಂಗ್ರೆಸ್ ತನ್ನ ಏಳಿಗೆಗಾಗಿ ನಿರ್ದಾಕ್ಷಿಣ್ಯ ನಿಲುವು ಪ್ರಕಟಿಸುವುದನ್ನೇ ಮರೆತುಬಿಟ್ಟಿದೆ. ಇತ್ತ ಬಿಜೆಪಿ ತನ್ನ ಹಲವು ನಾಯಕರು ಮುನಿಸಿಕೊಳ್ಳುತ್ತಾರೆ ಎಂಬ ಅರಿವಿದ್ದರೂ ಚುನಾವಣೆಗೆ ಸ್ಪರ್ಧಿಸಲು, ಮಂತ್ರಿಯಾಗಲು ವಯಸ್ಸಿನ ಮಿತಿ ತಂದಿತು. ಒಂದು ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿದ್ದ ಅನಂತಕುಮಾರ್ ತೀರಿಕೊಂಡಾಗ ಸಂಘಟನೆಯಲ್ಲಿ ಕೆಲಸ ಮಾಡಿದ್ದ ಒಬ್ಬ ಯುವಕನನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿ ಗೆಲ್ಲಿಸಿತು. ಒಂದು ಕ್ಷೇತ್ರದಲ್ಲಿ ಪಕ್ಷದ ವರ್ಚಸ್ಸು ಉತ್ತಮವಾಗಿದ್ದು, ತನ್ನ ಅಭ್ಯರ್ಥಿ ಗೆಲ್ಲುತ್ತಾನೆ ಎಂಬ ಖಾತರಿ ಇದ್ದಾಗ ಅಲ್ಲಿ ಅನುಕಂಪದ ಅಲೆಯ ಮೇಲೆ ಹೋಗಬೇಕಾದ ಅನಿವಾರ್ಯತೆ ಯಾವುದೇ ಪಕ್ಷಕ್ಕೆ ಇರುವುದಿಲ್ಲ. ಹೊಸ ಪ್ರಯೋಗಗಳನ್ನು ಮಾಡುತ್ತಾ ಪಕ್ಷಕ್ಕೆ ಚೈತನ್ಯ ತುಂಬಬಹುದು. ಇದು ಕಾಂಗ್ರೆಸ್ಸಿಗೆ ಇನ್ನೂ ಮನವರಿಕೆಯಾದಂತಿಲ್ಲ!

ಹಾಗಾದರೆ ಈಗಿನ ಸನ್ನಿವೇಶದಲ್ಲಿ ಕಾಂಗ್ರೆಸ್ ಪುನರುಜ್ಜೀವನ ಸಾಧ್ಯವೇ? ರಾಜಕಾರಣದಲ್ಲಿ ಎಲ್ಲವೂ ಸಾಧ್ಯವಾದ್ದರಿಂದ ಕಾಂಗ್ರೆಸ್ ವಿಷಯದಲ್ಲಿ ಪುನರುಜ್ಜೀವನ ಅಸಾಧ್ಯ ಎನ್ನುವಂತಿಲ್ಲ. ಆದರೆ ಸುಧಾರಣೆಗೆ ತೆರೆದುಕೊಳ್ಳದಿದ್ದರೆ ಸುಲಭವಲ್ಲ ಎನ್ನಬಹುದು. ರಾಹುಲ್ ಗಾಂಧೀ ನಾಯಕತ್ವ ಮುಂದುವರೆದರೆ ಹಾದಿ ಕಠಿಣವೇ. ಕಳೆದ ಎರಡು ಚುನಾವಣೆಯಲ್ಲಿ ಪಕ್ಷವನ್ನು ಅವರು ಮುನ್ನಡೆಸಲು ಸೋತಿರುವುದರಿಂದ ಮತ್ತು ಅವರು ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ ಸ್ವಭಾವದವರು, ಅನುಭವದ ಕೊರತೆಯಿರುವವರು ಎಂಬ ಅಭಿಪ್ರಾಯ ಸರಿಯೋ ತಪ್ಪೋ ಜನಜನಿತವಂತೂ ಆಗಿದೆ.

ಮನಮೋಹನ್ ಸಿಂಗ್ ಅವರ ಎರಡು ಅವಧಿಯಲ್ಲಿ ರಾಹುಲ್ ಗಾಂಧಿ, `ಯುವರಾಜ’ ಎಂದು ಬಿಂಬಿತರಾದರೇ ಹೊರತು, ಪಕ್ಷದ ಸಂಘಟನೆಯ ದೃಷ್ಟಿಯಿಂದಾಗಲೀ, ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳುವ ನಿಟ್ಟಿನಲ್ಲಿಯಾಗಲೀ ಅವರು ಕೆಲಸ ಮಾಡಲಿಲ್ಲ. ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು ಮತ್ತು ಹಿರಿಯ ನಾಯಕರು ಸೋನಿಯಾರಿಗೆ ನೀಡುವಷ್ಟೇ ಮನ್ನಣೆಯನ್ನು ರಾಹುಲ್ ಅವರಿಗೂ ನೀಡಲು ಆರಂಭಿಸಿದರು ಖರೆ. ಆದರೆ ಈ ಗೌರವ ಹೈಕಮಾಂಡ್ ಒಲಿಸಿಕೊಳ್ಳುವ ತೋರಿಕೆಯಾಗಿತ್ತೇ ಹೊರತು ಪಕ್ಷವನ್ನು ಮುನ್ನಡೆಸಲು ರಾಹುಲ್ ಸಮರ್ಥರೇ, ಅವರು ಸಂಘಟನೆಯ ನಿಟ್ಟಿನಲ್ಲಿ ಏನೆಲ್ಲಾ ಜವಾಬ್ದಾರಿ ತೆಗೆದುಕೊಳ್ಳಬೇಕು, ಮನಮೋಹನ ಸಿಂಗ್ ಅವರಂತಹ ಮುತ್ಸದ್ದಿಯ ಸಂಪುಟದಲ್ಲಿ ಒಂದಿಷ್ಟು ಅನುಭವ ಪಡೆದರೆ, ಮುಂದೆ ಅವರ ರಾಜಕೀಯ ಬೆಳವಣಿಗೆಗೆ ಅದು ಪೂರಕವಾಗಬಲ್ಲದೇ ಎಂದು ಯಾರೂ ಯೋಚಿಸಲಿಲ್ಲ. ಒಂದೊಮ್ಮೆ ಯೋಚಿಸಿದ್ದರೂ ಅದನ್ನು ನಿಷ್ಠೂರವಾಗಿ ಹೈಕಮಾಂಡಿಗೆ ತಿಳಿಸಿ ಹೇಳುವ ಪ್ರಯತ್ನ ನಡೆಸಿದಂತಿಲ್ಲ.

ಇನ್ನು, ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಸಮರ್ಥ ವಿರೋಧಿ ಒಕ್ಕೂಟವಾಗಿ ಹೊರಹೊಮ್ಮುವುದು ಸಾಧ್ಯವೇ? ಅದೊಂದು ಸುಂದರ ಕನಸು ಎಂಬುದೇ ಉತ್ತರ. ಒಂದು ದೊಡ್ಡ ಪಕ್ಷ ಬಹುಮತಕ್ಕೆ ಬೇಕಾದ ಅರ್ಧಕ್ಕಿಂತ ಹೆಚ್ಚಿನ ಸೀಟು ಗೆದ್ದು, ಅಧಿಕಾರ ಹಿಡಿಯಲು ಒಕ್ಕೂಟ ರಚಿಸಿಕೊಳ್ಳುವ ಪ್ರಕ್ರಿಯೆಯೇ ಬೇರೆ ಮತ್ತು ಚದುರಿದಂತೆ ಅಲ್ಲಲ್ಲಿ ಗೆದ್ದ ಹತ್ತಾರು ಪಕ್ಷಗಳು ಕೈಹಿಡಿದು ಒಟ್ಟಿಗೆ ನಿಲ್ಲುವ ಪ್ರಕ್ರಿಯೆಯೇ ಬೇರೆ. ಮೊದಲ ಸಂದರ್ಭದಲ್ಲಿ ಹೆಚ್ಚಿನ ಸೀಟು ಗೆದ್ದ ಪಕ್ಷಕ್ಕೆ ಸಹಜವಾಗಿ ಹೆಚ್ಚಿನ ಹಿಡಿತ ಇರುತ್ತದೆ ಮತ್ತು ಆ ಕಾರಣದಿಂದಲೇ ಅದು ಇತರ ಪಕ್ಷಗಳ ನಾಯಕನಾಗಿ ನಿಂತು ಸರ್ಕಾರ ರಚನೆಯ ಪ್ರಕ್ರಿಯೆಗೆ ಚಾಲನೆ ಕೊಡುತ್ತದೆ. ಹೀಗಾದಾಗ ಇತರ ಪಕ್ಷಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕನಾದ ಬೇಡಿಕೆ ಇಟ್ಟು ನಾಯಕನ ಹಿಂದೆ ನಡೆಯುತ್ತವೆ.

ಎರಡನೇ ಸನ್ನಿವೇಶದಲ್ಲಿ ಒಂದು ಪಕ್ಷ ಹೀಗೆ ನಾಯಕನಾಗಿ ಹೊರಹೊಮ್ಮುವುದು ಕಷ್ಟ, ಅನುಕೂಲ ಸಿಂಧು ಮೈತ್ರಿ ಏರ್ಪಟ್ಟು ಎಲ್ಲ ಬಗೆಯ ತಿಣುಕಾಟ ಮುಗಿಸಿ ಅಧಿಕಾರ ಹಿಡಿದರೂ ಎಲ್ಲ ಪಕ್ಷಗಳೊಂದಿಗೆ ದೀರ್ಘಕಾಲ ಸಮತೋಲನ ಸಾಧಿಸುವುದು ಕಠಿಣ ಎನಿಸಿಬಿಡುತ್ತದೆ. ಇದು ಹಿಂದೆ ಸಾಬೀತಾಗಿರುವ ಸಂಗತಿ. ಹಾಗಾಗಿ ಕಾಂಗ್ರೆಸ್ ಪುನರುಜ್ಜೀವನಕ್ಕೆ, ಹೊಸ ಮುಖವೊಂದರ ಅಗತ್ಯವಿದೆ. ಗಾಂಧೀ ಕುಟುಂಬದ ಹೊರಗಿನ ವ್ಯಕ್ತಿಗೆ ಸದ್ಯದ ಮಟ್ಟಿಗೆ ಎಲ್ಲರನ್ನೂ ಹಿಡಿದಿಡುವುದು ಕಷ್ಟವಾದ್ದರಿಂದ, ಸೋನಿಯಾ ಗಾಂಧೀ ಅವರೇ ಇನ್ನೊಂದಿಷ್ಟು ವರ್ಷ ನೊಗಹೊರಬೇಕಾಗಬಹುದು, ಇಲ್ಲವೇ ಪ್ರಿಯಾಂಕ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತರಲು ಸಾಧ್ಯವೇ ಎಂಬ ಪ್ರಯತ್ನಕ್ಕೆ ಕೈಹಾಕಬಹುದು.

ಒಟ್ಟಿನಲ್ಲಿ ಅಧಿಕಾರ ಹಿಡಿಯುವುದಕ್ಕೆ ಸುಲಭದ ಮಾರ್ಗ ಎಂಬುದು ಇರುವುದಿಲ್ಲ. ಪಕ್ಷದ ಸಂಘಟನೆಯನ್ನು ಆದ್ಯತೆಯಾಗಿಸಿಕೊಂಡು, ಕಾಲಕಾಲಕ್ಕೆ ಪರ್ಯಾಯ ನಾಯಕತ್ವ ಬೆಳೆಸುವ ಪಕ್ಷ ಸಹಜವಾಗಿಯೇ ಅಧಿಕಾರದ ಸನಿಹದಲ್ಲಿ ಇರುತ್ತದೆ ಎಂಬುದು ಕಾಂಗ್ರೆಸ್ಸಿಗೆ ಮನವರಿಕೆ ಆಗಬೇಕಿದೆ. ನಿರ್ದಾಕ್ಷಿಣ್ಯ ಕ್ರಮಗಳಿಂದ ಪಕ್ಷ ಮುರಿದು ಬಿದ್ದರೂ ಸರಿಯೇ, ಅಧಿಕಾರ ತಡವಾದರೂ ಸರಿಯೇ, ಹೊಸದಾಗಿ ಪಕ್ಷ ಕಟ್ಟುತ್ತೇನೆ ಎಂದು ಹೊರಡುವ ನಾಯಕ ಮಾತ್ರ ಕಾಂಗ್ರೆಸ್ಸಿಗೆ ಮರುಜೀವ ನೀಡಬಲ್ಲ. ಪಕ್ಷದ ನಾಯಕತ್ವ ಎಂಬುದು ಅಲಂಕಾರಿಕ ಹುದ್ದೆಯಲ್ಲ. ಬಡಕಲು ದೇಹಕ್ಕೆ ಚಿನ್ನದ ಹೊದಿಕೆಯಿದ್ದಾಕ್ಷಣ ಚೈತನ್ಯ ಮೂಡುವುದಿಲ್ಲ.

*ಲೇಖಕರು ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರಿನವರು; ಸಮಕಾಲೀನ ವಿದ್ಯಮಾನಗಳ ವಿಶ್ಲೇಷಕರು, ಅಂಕಣಕಾರರು, ಪ್ರಸ್ತುತ ಬೆಂಗಳೂರು ವಾಸಿ.

 

Leave a Reply

Your email address will not be published.