ಕಾಂಗ್ರೆಸ್ ಪಕ್ಷದ ನಾಲ್ಕು ಸಂಕಟಗಳು

-ಸುಧೀಂದ್ರ ಕುಲಕರ್ಣಿ

ಇಂದು ಕೇವಲ ಕಾಂಗ್ರೆಸ್ ಪಕ್ಷ ಸಂಕಟಗ್ರಸ್ತವಾಗಿಲ್ಲ. ಭಾರತೀಯ ಪ್ರಜಾಪ್ರಭುತ್ವದ ಕಟ್ಟಡಕ್ಕೇನೇ ಬಿರುಕು ಬೀಳುತ್ತಿದೆ. ಇದೆಲ್ಲವೂ ಏಕೆ, ಹೇಗೆ ಆಗುತ್ತಿದೆ? ಇದನ್ನು ತಪ್ಪಿಸಲು, ಸರಿಪಡಿಸಲು ನಾಗರಿಕರ ಜವಾಬ್ದಾರಿ ಏನು?

ಬಹುಪಕ್ಷೀಯ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳ ಸ್ಥಿತಿಗತಿ ಬದಲಾಗುತ್ತಲೇ ಇರುತ್ತದೆ. ಇಂದು ಅಧಿಕಾರದಲ್ಲಿ, ನಾಳೆ ಅಧಿಕಾರದ ಹೊರಗಡೆ ಈ ಬದಲಾವಣೆ ನಡೆಯುತ್ತಲೇ ಇರುತ್ತದೆ. ಯಾವ ಪಕ್ಷವೂ, ಯಾವ ನಾಯಕನೂ ಶಾಶ್ವತವಾಗಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ. ಆದರೆ, ಪ್ರಜಾಪ್ರಭುತ್ವದ ಸಂರಚನೆ ಸುಭದ್ರವಾಗಿದ್ದರೆ ವಿವಿಧ ಪಕ್ಷಗಳ ಸ್ಥಾನಮಾನದಲ್ಲಿ ಏರುಪೇರುಗಳಾದರೂ ಕೂಡ ದೇಶದ ರಾಜ್ಯ ವ್ಯವಸ್ಥೆಯಲ್ಲಿ (STATESTRUCTURE) ಆ ಏರುಪೇರುಗಳು ಕಾಣಲಾರವು. ಏಕೆಂದರೆ ಸರಕಾರ ರಾಜ್ಯ ವ್ಯವಸ್ಥೆಯ ಒಂದು ಅಂಗ ಮಾತ್ರ. ಈ ವ್ಯವಸ್ಥೆಯ ಇತರ ಅಂಗಗಳಿಗೆ ಭಾರತೀಯ ಸಂವಿಧಾನವು ಸ್ವತಂತ್ರ ಸ್ಥಾನ ಹಾಗೂ ಅಧಿಕಾರ ಕೊಟ್ಟಿದೆ. ಶಾಸಕಾಂಗದ ಪಡಿಯಚ್ಚು, ಸ್ವತಂತ್ರ ನ್ಯಾಯಪಾಲಿಕೆ, ಸ್ವತಂತ್ರ ಚುನಾವಣಾ ಆಯೋಗ, ಅಗಿಅ, ಅIಅ ಮುಂತಾದ ಸಂಸ್ಥೆಗಳ ಸ್ವಾಯತ್ತತೆ- ಇವು ಸರಕಾರಗಳಲ್ಲಿ ನಡೆಯುವ ಬದಲಾವಣೆಗಳಿಂದ ಪ್ರಭಾವಿತಗೊಳ್ಳುವುದಿಲ್ಲ ಹಾಗೂ ಪ್ರಭಾವಿತಗೊಳ್ಳಬಾರದು. ಆಡಳಿತ ಪಕ್ಷ ಸರಕಾರದಲ್ಲಿಯ ತನ್ನ ಅಧಿಕಾರದ ದುರುಪಯೋಗದಿಂದ ಹಾಗೆ ಮಾಡಿದ್ದಾದರೆ ಪ್ರಜಾಪ್ರಭುತ್ವಕ್ಕೆ ಭಾರಿ ಗಂಡಾಂತರ. ಈಗ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರಕಾರ ಇದೇ ಕುಪ್ರಯತ್ನ ನಡೆಸಿದೆ ಹಾಗೂ ತನ್ನ ಪ್ರಯತ್ನಗಳಲ್ಲಿ ಸಾಕಷ್ಟು ಯಶಸ್ಸು ಗಳಿಸಿದೆ.

ಈ ತರಹದ ಅಧಿಕಾರದ ದುರಪಯೋಗ ಸಾಮಾನ್ಯವಾಗಿ ತುರ್ತುಪರಿಸ್ಥಿತಿಯ ಸಮಯದಲ್ಲಿ (emergence) ನಡೆಯುತ್ತದೆ. 1975-77ರ ಕಾಲದಲ್ಲಿ ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ಘೋಷಿಸಿ ಸಂವಿಧಾನದ ಹಲವಾರು ತತ್ವಗಳನ್ನು ಉಲ್ಲಂಘಿಸಿ ರಾಜ್ಯ ವ್ಯವಸ್ಥೆಯ ಅಡಿಪಾಯವನ್ನೇ ಅಲುಗಾಡಿಸಿದರು. 1976ರಲ್ಲಿ ನಡೆಯಬೇಕಾಗಿದ್ದ ಸಾರ್ವತ್ರಿಕ ಚುನಾವಣೆಯನ್ನೇ ಮುಂದೂಡಿ ಸಂಸತ್ತಿನ ಕಾಲಾವಧಿಯನ್ನು ಹೆಚ್ಚಿಸಿದರು. ಸರ್ವೋಚ್ಚ ನ್ಯಾಯಾಲಯದ ಸ್ವಾತಂತ್ರ್ಯವನ್ನು ಹಿಚುಕಿದರು. ವಿರೋಧಿ ಪಕ್ಷಗಳ ಸುಮಾರು ಎಲ್ಲ ದಿಗ್ಗಜ ನೇತಾರರನ್ನು ಜೈಲಿನಲ್ಲಿ ಬಂಧಿಸಿದರು. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕಾ ವ್ಯವಸ್ಥೆಯನ್ನೂ ಸೆನ್ಸಾರ್‌ಶಿಪ್ ಸಂಕೋಲೆಗಳಲ್ಲಿ ಕಟ್ಟಿ ಹಾಕಿದರು.

ಈಗಿನ ಸ್ಥಿತಿಯನ್ನು ಆಗಿನ ಸ್ಥಿತಿಗೆ ಹೋಲಿಸಿದರೆ ಮೇಲ್ನೋಟಕ್ಕೆ ಭಿನ್ನತೆ ಕಾಣುತ್ತದೆ. ಆದರೆ ಬಿಜೆಪಿ ಸರಕಾರ ಅಧಿಕೃತವಾಗಿ ತುರ್ತುಪರಿಸ್ಥಿತಿ ಘೋಷಿಸದೇ ಇದ್ದರೂ ಕೂಡ ಪ್ರಜಾಪ್ರಭುತ್ವದ ಅಂತಃಸತ್ವವನ್ನೇ ನಾಶ ಮಾಡಲು ಆರಂಭಿಸಿದ್ದಾರೆ ಎಂಬುದು ದಿನದಿನಕ್ಕೆ ಸ್ಪಷ್ಟವಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯದ ಸ್ಥಿತಿ ತುರ್ತುಪರಿಸ್ಥಿತಿಯಲ್ಲೂ ಇಷ್ಟು ದಯನೀಯವಾಗಿರಲಿಲ್ಲ. ಚುನಾವಣಾ ಆಯೋಗ ಆಡಳಿತ ಪಕ್ಷದ ಕೈಗೊಂಬೆಯಾಗಿದೆ. ರಾಜ್ಯ ವ್ಯವಸ್ಥೆಯ ಸ್ವತಂತ್ರ ಸ್ವಾಯತ್ತ ಅಂಗಗಳು ಆಡಳಿತ ಪಕ್ಷದ ವಶೀಕರಣಕ್ಕೆ ಬಲಿಯಾಗಿವೆ.

ವಿರೋಧಿ ಪಕ್ಷಗಳು ಕೆಲವು ರಾಜ್ಯಗಳಲ್ಲಿ ಬಹುಮತಗಳಿಸಿ ಅಧಿಕಾರಕ್ಕೆ ಬಂದರೆ ಅವುಗಳ ವಿಧಾನಸಭಾ ಸದಸ್ಯರನ್ನು ಖರೀದಿಸಿ, ಕುತಂತ್ರದಿಂದ ತನ್ನ ಸರಕಾರ ಸ್ಥಾಪಿಸಿದ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಈ ಕುತಂತ್ರ ‘ಆಪರೇಶನ್ ಕಮಲ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಪತ್ರಿಕಾರಂಗ ತನ್ನ ಸ್ವಾತಂತ್ರ್ಯ ಕಳೆದುಕೊಂಡು ಒದ್ದಾಡುತ್ತಿತ್ತು. ಈಗ ಮಾಧ್ಯಮಗಳ ಒಂದು ದೊಡ್ಡ ಸೈನ್ಯ ಯಾವ ನಾಚಿಕೆಯೂ ಇಲ್ಲದೇ, ಪತ್ರಿಕಾ ವೃತ್ತಿಯ ಎಲ್ಲ ನೀತಿನಿಯಮಗಳನ್ನು ಗಾಳಿಗೆ ತೂರಿ, ಸರಕಾರದ ಮತ್ತು ಆಡಳಿತ ಪಕ್ಷದ ಲೌಡ್‌ಸ್ಪೀಕರ್ ಆಗಿ ಕೆಲಸ ಮಾಡುತ್ತಿವೆ.

ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿ ಹಾಗೂ ಇಂದಿನ ಪರಿಸ್ಥಿತಿ ಇವುಗಲ್ಲಿ ಕೆಲವು ಸಾಮ್ಯಗಳಿದ್ದರೂ ಕೂಡ ಕೆಲವು ಗಂಭೀರ ಭಿನ್ನತೆಗಳಿವೆ. ಒಂದು ಅತಿ ಅಪಾಯಕರ ಭಿನ್ನತೆ ಎಂದರೆ ಹಿಂದೂ- ಮುಸ್ಲಿಂ ಕೋಮುವಾದದಿಂದಾಗಿ ಸಮಾಜದಲ್ಲಿ ಬೆಳೆಯುತ್ತಿರುವ ವಿಭಜನೆ ಮತ್ತು ಆಡಳಿತ ಪಕ್ಷವನ್ನು ಅದರ ವಿಚಾರಧಾರೆಯನ್ನು, ಸರಕಾರದ ತಪ್ಪು ನಿರ್ಣಯಗಳನ್ನು ಟೀಕಿಸುವವರ ಮೇಲೆ ನಡೆದಿರುವ ದಬ್ಬಾಳಿಕೆ. ಸರಕಾರವನ್ನು, ಆಡಳಿತ ಪಕ್ಷವನ್ನು, ಪ್ರಧಾನಮಂತ್ರಿ ಮೋದಿಯವರನ್ನು ಕುರುಡಾಗಿ ಸಮರ್ಥಿಸುವ ಸಮಾಜದ ಒಂದು ವರ್ಗವೇ ರಾಜಕೀಯ ವಿರೋಧಿಗಳನ್ನು ರಾಷ್ಟçವಿರೋಧಿ ದೇಶದ್ರೋಹಿ ಎಂದು ದೂಷಿಸುವ ದುಷ್ಕೃತ್ಯದಲ್ಲಿ ತೊಡಗಿದೆ. ಈ ವರ್ಗಕ್ಕೆ ಸರಕಾರದ ಸಂರಕ್ಷಣೆಯೂ ಪ್ರಾಪ್ತವಾಗಿದೆ.

ಎಪ್ಪತ್ತರ ದಶಕದ ತುರ್ತುಪರಿಸ್ಥಿತಿಯಲ್ಲಿ ಈ ರೀತಿ ಸಮಾಜದ ಒಂದು ಘಟಕವೇ ಪ್ರಜಾಪ್ರಭುತ್ವದ ಧ್ವಂಸಕ್ಕಾಗಿ ಸರಕಾರದ ಜೊತೆಗೂಡಿ ಆಕ್ರಮಣಕಾರಿಯಾಗಿರಲಿಲ್ಲ. ಇಂದಿರಾ ಗಾಂಧಿಯವರ ಪ್ರಜಾಪ್ರಭುತ್ವದ ಮೇಲಿನ ಆಕ್ರಮಣ ಸರಕಾರಿ ಯಂತ್ರಕ್ಕೆ ಮಾತ್ರ ನಡೆಸಿತ್ತು. ಈಗ ಮೋದಿ ಹಾಗೂ ಅಮಿತ್ ಶಾ ಅವರ ಕಾಲದಲ್ಲಿ ಸರಕಾರಿ ಯಂತ್ರಕ್ಕೆ ಮತ್ತು ಸಮಾಜದಲ್ಲಿ ಅವರನ್ನು ಬೆಂಬಲಿಸುವ ಲೋಕಶಕ್ತಿ ಎರಡೂ ಕೂಡ ಸುನಿಯೋಜಿತ ರೀತಿಯಲ್ಲಿ ಪ್ರಜಾಪ್ರಭುತ್ವದ ಕುತ್ತಿಗೆ ಹಿಚುಕುವ ಕೆಲಸ ನಡೆಸಿದ್ದಾರೆ. ಅವರಿಗೆ ಇಂದು ಬೇಕಾದದ್ದು-ಒಬ್ಬನೇ ಸರ್ವೇ ಸರ್ವಾ ಮಹಾನಾಯಕ, ಒಂದೇ ಪಕ್ಷದ ಅಧಿಕಾರ, ಒಂದೇ (ಹಿಂದುತ್ವ) ವಿಚಾರಸರಣಿಯ ವರ್ಚಸ್ಸು. ಇದಕ್ಕಾಗಿ ರಾಜ್ಯ ಸಂಸ್ಥೆಯ ಎಲ್ಲ ಘಟಕಗಳೂ ಗುಲಾಮನಾಗಲು ಸಿದ್ಧವಾಗಬೇಕು.

ಭಾರತೀಯ ಪ್ರಜಾಪ್ರಭುತ್ವಕ್ಕೆ ಇನ್ನೂ ಪೂರ್ಣಗ್ರಹಣವಾಗಿಲ್ಲ. ಆದರೆ, ಆ ಮಹಾಸಂಕಟ ಬರಲಿದೆ ಎಂಬುದನ್ನು ನಾವು ಕಡೆಗಣಿಸಬಾರದು.

ಹೀಗಿರುವಾಗ ಇಂದು ದೇಶದ ಮುಂದಿರವ ಅತಿ ಮಹತ್ವದ ಪ್ರಶ್ನೆ ಎಂದರೆ- ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕಟಿಬದ್ಧವಾದ, ಸಮರ್ಥವಾಗಿ ಈ ಸಂಕಟವನ್ನು ಸೋಲಿಸಲು ಸಂಘರ್ಷಕ್ಕೆ ತಯಾರಾದ ರಾಜಕೀಯ ಶಕ್ತಿ ಎಲ್ಲಿದೆ?

ದೇಶದಲ್ಲಿ ಇಂದು ವಿರೋಧಿ ಪಕ್ಷಗಳ ಸ್ಥಿತಿ ಶೋಚನೀಯವಾಗಿದೆ. ವಿಶೇಷವಾಗಿ ಬಿಜೆಪಿಯನ್ನು ಬಿಟ್ಟರೆ ಏಕೈಕ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಅಭೂತಪೂರ್ವ ಸಂಕಟಕ್ಕೆ ಒಳಗಾಗಿದೆ. ತನ್ನ ಸುದೀರ್ಘ ಇತಿಹಾಸದಲ್ಲಿ ಕಾಂಗ್ರೆಸ್ ಇಷ್ಟೊಂದು ಬಲಹೀನ ಸ್ಥಿತಿಯಲ್ಲಿ ಎಂದೂ ಇರಲಿಲ್ಲ. ಒಂದು ಕಾಲಕ್ಕೆ ಭಾರತೀಯ ರಾಜಕಾರಣದಲ್ಲಿ ವಟವೃಕ್ಷವಾಗಿ ನಿಂತಿದ್ದ ಈ ಪಕ್ಷ ತನ್ನ ಘನತೆಯನ್ನು ಕಳೆದುಕೊಂಡು, ಬಾಡಿ ಹೋಗುತ್ತಿರುವ ಹಳೆಯ ಮರವಾಗಿ ಕಾಣುತ್ತಿದೆ. 2014 ಮತ್ತು 2019ರಲ್ಲಿ ದಾರುಣ ಪರಾಭವ ಅನುಭವಿಸಿದ ಕಾಂಗ್ರೆಸ್ 2024ರಲ್ಲಾದರೂ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬರುವ ಸಂಕೇತಗಳು ಈಗಲಾದರೂ ಕಂಡುಬರುತ್ತಿಲ್ಲ.

ಕಾAಗ್ರೆಸ್ ಪಕ್ಷದ ಸದ್ಯದ ದುಃಸ್ಥಿತಿಯನ್ನು ವಿಶ್ಲೇಷಿಸುವಾಗ ಇದು ನಾಲ್ಕು ಗಂಭೀರ ಸಂಕಟಗಳಿOದಾಗಿ ದುರ್ಬಲವಾಗಿದೆ ಎಂದು ಸ್ಪಷ್ಟವಾಗುತ್ತದೆ. ಮೊದಲನೆಯದು: ನೇತೃತ್ವದ ಸಂಕಟ. ಎರಡನೆಯದು: ಸಂಘಟನಾತ್ಮಕ ಸಂಕಟ. ಮೂರನೆಯದು: ವಿಚಾರಧಾರೆಯ ಸಂಕಟ. ನಾಲ್ಕನೆಯದು: ಜನರಲ್ಲಿ ವಿಶ್ವಾಸ ಪಾತ್ರತೆಯ ಸಂಕಟ.

ಈ ನಾಲ್ಕೂ ಸಂಕಟಗಳಲ್ಲಿ ಸ್ಪಷ್ಟವಾಗಿ ದಿಗ್ಗೋಚರವಾಗುತ್ತಿರುವುದು ನೇತೃತ್ವದ ಸಂಕಟ. 2019ರಲ್ಲಿಯ ಸತತ ಎರಡನೆ ಬಾರಿ ಸೋಲುಂಡ ನಂತರ ಒಂದೂವರೆ ವರ್ಷ ಕಳೆದರೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಕಾಲೀನ ಅಧ್ಯಕ್ಷ ಇನ್ನೂ ಕೂಡ ಇಲ್ಲ. ತಾತ್ಪೂರ್ತಿಕ ಅಧ್ಯಕ್ಷರಾಗಿ ಮರಳಿ ಜವಾಬ್ದಾರಿ ವಹಿಸಿದ ಸೋನಿಯಾ ಗಾಂಧಿ ಅವರ ಆರೋಗ್ಯ ಸರಿಯಾಗಿಲ್ಲ. ಚುನಾವಣೆ ಸೋಲಿನ ನಂತರ ನೈತಿಕ ಹೊಣೆ ಸ್ವೀಕರಿಸಿ ಅಧ್ಯಕ್ಷ ಪದ ಬಿಟ್ಟುಕೊಟ್ಟ ರಾಹುಲ ಗಾಂಧಿ ಒಂದು ಆದರ್ಶವನ್ನೇನೋ ಸ್ಥಾಪಿಸಿದರು. ನೆಹರೂ-ಗಾಂಧಿ ಪರಿವಾರದ ಹೊರಗಿನವರೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ಅವರು ನಿಷ್ಠುರವಾಗಿ ಹೇಳಿದರೂ ಕೂಡ ಪಕ್ಷದಲ್ಲಿ ಅಂಥ ನಿರ್ಣಯ ತೆಗೆದುಕೊಳ್ಳುವ ಸಾಹಸವಿಲ್ಲ. ಹೀಗಾಗಿ ಅತೀವ ಅನಿಶ್ಚಿತತೆ ಹಾಗೂ ನಿಷ್ಕ್ರಿಯತೆ ಪಕ್ಷದಾದ್ಯಂತೆ ಪಸರಿಸಿದೆ. ಆಗಾಗ ಹಿರಿಯ ಕಾಂಗ್ರೆಸಿಗರಿOದ ಟೀಕೆ-ಟಿಪ್ಪಣೆಗಳೂ ಬಹಿರಂಗವಾಗಿ ಕೇಳಿ ಬರುತ್ತಿವೆ. ಇದರಿಂದ ಪಕ್ಷದಲ್ಲಿ ನಿರಾಶೆ ಕೂಡ ಬೆಳೆದಿದೆ. ಮೋದಿ-ಶಾ ಅವರ ಯಾವ ಆಕ್ರಮಣಕ್ಕೂ ಕಾಂಗ್ರೆಸ್ ಎದುರು ನಿಂತು ಯಶಸ್ವಿಯಾಗಿ ಮರು ಆಕ್ರಮಣ ಮಾಡುತ್ತಿರುವ ದೃಶ್ಯ ಕಾಣುತ್ತಿಲ್ಲ.

ಹೀಗಿದ್ದರೂ ಕೂಡ ಮೋದಿ-ಶಾ ವಿರುದ್ಧ ಹೋರಾಟಕ್ಕೆ ನಾನು ಹಿಂದೆ ಸರಿಯಲಾರೆ ಎಂಬ ದೃಢ ನಿಶ್ಚಯ ತೋರಿಸುತ್ತಿರುವ ಏಕೈಕ ಕಾಂಗ್ರೆಸ್ ನಾಯಕರೆಂದರೆ ರಾಹುಲ ಗಾಂಧಿಯೇ. ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲಿ ಇಂದಿಗೂ ಕೂಡ ಇತರೆಲ್ಲ ನಾಯಕರಿಗಿಂತ ರಾಹುಲ ಗಾಂಧಿಯವರ ಬಗ್ಗೆ ಹೆಚ್ಚು ವಿಶ್ವಾಸವಿದೆ. ರಾಹುಲ ಒಬ್ಬ ಪ್ರಾಮಾಣಿಕ, ನಿಷ್ಕಪಟಿ, ಸುವಿಚಾರಿ ಹಾಗೂ ಸದುದ್ದೇಶಪೂರ್ಣ ವ್ಯಕ್ತಿ ಎಂದು ನನ್ನ ನಂಬಿಕೆ ಕೂಡ. ಆದರೆ ಪಕ್ಷವನ್ನು ಗಂಡಾOತರದಿOದ ಉಳಿಸಿ ಮತ್ತೆ ಬೆಳೆಸುವ ಸಾಮರ್ಥ್ಯ ಅವರಿನ್ನು ತೋರಿಸಿಲ್ಲ. ಸತತವಾಗಿ ದೇಶದ ಮೂಲೆ-ಮೂಲೆಗಳಲ್ಲಿ ಪ್ರವಾಸ ಮಾಡಿ, ಪಕ್ಷದ ಎಲ್ಲ ಮಟ್ಟಗಳ ಮುಖಂಡ-ಕಾರ್ಯಕರ್ತರ ಜೊತೆಯಲ್ಲಿ ಸ್ಪಂದಿಸಿ, ಜನಸಾಮಾನ್ಯನೊಂದಿಗೆ ಸಂವಾದಿಸಿ, ಅವಶ್ಯಕತೆ ಇದ್ದಾಗ ಹೋರಾಟ ನಡೆಸಿ ತಾನೊಬ್ಬ ಜನನಾಯಕ ಎಂಬ ಚಿತ್ರವನ್ನು ರಾಹುಲ ಇನ್ನೂ ಮೂಡಿಸಿಲ್ಲ.

ರಾಹುಲ ಗಾಂಧಿಯವರಲ್ಲಿ ಕಂಡುಬರುವ ಇನ್ನೊಂದು ಕೊರತೆ ಎಂದರೆ ಇತರ ವಿರೋಧಿ ಪಕ್ಷಗಳ ಮುಖಂಡರ ಜೊತೆ ಸತತ ಸಂಪರ್ಕ-ಸOವಾದದ ಅಭಾವ. ಇಂದಿನ ಪರಿಸ್ಥಿತಿಯಲ್ಲಿ ಕೇವಲ ತನ್ನ ಬಲದಿಂದ ಕಾಂಗ್ರೆಸ್ ಬಿಜೆಪಿಗೆ ಪರ್ಯಾಯವಾಗಿ ನಿಲ್ಲಲಾರದು. ಅನೇಕ ಮಹತ್ವಪೂರ್ಣ ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ಜನಾಧಾರ ಕುಗ್ಗಿದೆ. ಹೀಗಿದ್ದಾಗ ಹೊಂದಾಣಿಕೆ ರಾಜಕಾರಣಂದಲೇ (alliance politics) ಕಾಂಗ್ರೆಸ್ ಬಿಜೆಪಿ ಪ್ರಾಬಲ್ಯವನ್ನು ಕಡಿಮೆ ಮಾಡಲು ಸಾಧ್ಯ. ಇಂಥ ಒಕ್ಕೂಟ ಕೇವಲ ಚುನಾವಣೆಗೆ ಮುನ್ನ ಮಾಡಿದರೆ ಅದಕ್ಕೆ ಯಶಸ್ಸು ಸಿಗಲಾರದು. ಒಕ್ಕೂಟದ ರಾಜಕಾರಣಕ್ಕಾಗಿ ಒಂದು ಸಾಮೂಹಿಕ ಕಾರ್ಯಕ್ರಮದ ಆಧಾರದ ಮೇಲೆ ಎಲ್ಲ ಮಿತ್ರ ಪಕ್ಷಗಳು ಜನಸಾಮಾನ್ಯರಲ್ಲಿ ಬೆರೆತು ಸತತವಾಗಿ ಸುದೀರ್ಘ ಕಾಲದವರೆಗೆ ಕಾರ್ಯ ಮಾಡಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಆದರೆ ಇದಕ್ಕೆ ಬೇಕಾದ ಮಾನಸಿಕ ತಯಾರಿ, ಇಚ್ಛಾಶಕ್ತಿ, ಕಾರ್ಯಪದ್ಧತಿಗಳನ್ನು ರಾಹುಲ ಗಾಂಧಿಯಾಗಲಿ, ಕಾಂಗ್ರೆಸ್ ಪಕ್ಷವಾಗಲಿ ಬೆಳೆಸಿಕೊಂಡಿಲ್ಲ.

ಜನೆವರಿ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷ ಹೊಸ ಅಧ್ಯಕ್ಷರನ್ನು ಚುನಾಯಿಸುವ ಸುದ್ದಿ ಬಂದಿದೆ. ಅಧ್ಯಕ್ಷ ಪದಕ್ಕೆ ಯಾರೇ ಬಂದರೂ ಕೂಡ ನೇತೃತ್ವದ ಸಂಕಟ ಬಹುಕಾಲದವರೆಗೆ ಕಾಡಲಿದೆ. ಹಲವು ದಶಕಗಳಿಂದ ನೆಹರೂ-ಗಾಂಧಿ ಪರಿವಾರದ ಮೇಲೆಯೇ ನೇತೃತ್ವಕ್ಕಾಗಿ ಅವಲಂಬಿಸಿದ ಪಕ್ಷ ಇಂದು ಯಾವ ಸ್ಥಿತಿಯಲ್ಲಿದೆ ಎಂದರೆ ಈ ಪರಿವಾರವನ್ನು ಪೂರ್ತಿಯಾಗಿ ಕೈಬಿಟ್ಟು ಬೇರೆ ನೇತೃತ್ವದ ಅಡಿಯಲ್ಲಿ ಮುಂದೆ ಹೋಗಲೂ ಸಾಧ್ಯವಿಲ್ಲ ಹಾಗೂ ಪರಿವಾರವೇ ಪಕ್ಷದ ಶಾಶ್ವತ ನೇತೃತ್ವ ಎಂಬ ನಂಬಿಕೆಯಿOದ ಕಾಂಗ್ರೆಸ್ಸಿನ ಪುನರುಜ್ಜೀವನವೂ ಸಾಧ್ಯವಿಲ್ಲ.

ಕಾಂಗ್ರೆಸ್ ಪಕ್ಷವನ್ನು ಕ್ಷೀಣಗೊಳಿಸಿದ ಮತ್ತೊಂದು ಸಂಕಟವೆOದರೆ ನಿಷ್ಕಿçಯವಾಗಿರುವ, ಕರಗಿ ಹೋಗುತ್ತಿರುವ ಪಕ್ಷ ಸಂಘಟನೆ. ಹೊಸ ರಕ್ತ ಪಕ್ಷ ಸಂಘಟನೆಯಲ್ಲಿ ಪ್ರವೇಶಿಸುತ್ತಿಲ್ಲ. ಹಳಬರು ಹೆಚ್ಚು ಹಳಬರಾಗುತ್ತ ನಡೆದಿದ್ದಾರೆ. ಕೇಂದ್ರದಲ್ಲಿ, ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದಾಗ ಸಂಘಟನೆಯನ್ನು ಬೆಳೆಸುವ, ಬಲಪಡಿಸುವ, ಇದ್ದ ಜನಾಧಾರವನ್ನು ಗಟ್ಟಿಗೊಳಿಸುವ ಮತ್ತು ಹೊಸ ಜನಾಧಾರ ನಿರ್ಮಿಸುವ ಮಹತ್ವದ ಕಾರ್ಯವನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯಾಗಲಿ, ಇತರೆ ಮುಖಂಡರಾಗಲಿ ದುರ್ಲಕ್ಷಿಸಿದರು. ಅಧಿಕಾರದಲ್ಲಿದ್ದಾಗ ಸ್ವಾರ್ಥಪರ ಶಕ್ತಿಗಳದೇ ಕೈ ಮೇಲಾಯಿತು.

ಇದಲ್ಲದೇ ‘ಹೈಕಮಾಂಡ್’ ಸಂಸ್ಕೃತಿ ಬೇರೂರಿ ಬಿಟ್ಟಿದ್ದರಿಂದ ಮೇಲಿನವರನ್ನು ಖುಷ್ ಇಡುವುದು, ಅವರ ಕೃಪಾದೃಷ್ಟಿ ಸಂಪಾದಿಸುವುದು ಇದೇ ಕೆಳಗಿನವರಿಗೆ ಪಕ್ಷ ಸೇವೆಯಾಗಿ ಬಿಟ್ಟಿತು. ಹಾಗೂ ತಮಗೆ ಬೇಕಾದ ಕೆಳಗಿನವರ ಗುಂಪಿಗೆ ಅಧಿಕಾರದ ಸಿಹಿಯೂಟದ ಕೆಲವು ತಿಂಡಿತಿನಿಸುಗಳನ್ನು ಕೊಡುತ್ತಿರುವುದೇ ತಮ್ಮ ಪಕ್ಷ ಸೇವೆ ಎಂದು ಮೇಲಿನವರು ತಿಳಿದುಕೊಂಡಾಯಿತು. ಆದರೆ, ಕೇಂದ್ರದಲ್ಲಿ ಅಧಿಕಾರ ಹೋದ ಮೇಲೆ ಹಾಗೂ ಹಲವಾರು ರಾಜ್ಯಗಳಲ್ಲಿ ಕೂಡ ಕಾಂಗ್ರೆಸ್ ಅಧಿಕಾರದಿಂದ ದೂರ ಹೋದ ಮೇಲೆ ಅನೇಕ ಮೇಲಿನವರ ‘ಪಕ್ಷ ಸೇವೆ’ಯೂ ನಿಂತು ಹೋಯಿತು. ಹಾಗೂ ಅನೇಕ ಕೆಳಗಿನವರ ‘ಪಕ್ಷ ಸೇವೆ’ ಕೂಡ ಮುಕ್ತಾಯಗೊಂಡಿತು.

ಕಾAಗ್ರೆಸ್ ಸಂಘಟನೆ ಸಂಕುಚಿತಗೊಳ್ಳಲು ಮತ್ತೊಂದು ಮಹತ್ವದ ಕಾರಣವನ್ನು ಇಲ್ಲಿ ನಮೂದಿಸಬೇಕು. 1969ರಲ್ಲಿ ಮೊದಲ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಒಡಕು ಬಿದ್ದ ನಂತರ ಹಲವು ಬಾರಿ ಕಾಂಗ್ರೆಸ್ ಪರಿವಾರದಲ್ಲಿ ವಿಘಟನೆಯ ಪ್ರಸಂಗಗಳು ನಡೆದವು. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್, ಮಹಾರಾಷ್ಟçದಲ್ಲಿ ಶರದ್ ಪವಾರ ಅವರ ನೇತೃತ್ವದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್, ಆಂಧ್ರಪ್ರದೇಶದಲ್ಲಿ ರಾಜಶೇಖರ ರೆಡ್ಡಿಯವರ ಮುಖಂಡತ್ವದಲ್ಲಿ ವೈ.ಎಸ್.ಆರ್. ಕಾಂಗ್ರೆಸ್ ಈ ರೀತಿ ಪ್ರಬಲವಾದ ಪ್ರಾದೇಶಿಕ ಕಾಂಗ್ರೆಸ್ ಪಕ್ಷಗಳು ಹುಟ್ಟಿಕೊಂಡವು. ವ್ಹಿ.ಪಿ.ಸಿಂಗ, ಬಿಜು ಪಟ್ನಾಯಕ, ರಾಮಕೃಷ್ಣ ಹೆಗಡೆಯವರಂಥ ಜನಪ್ರಿಯ ನಾಯಕರನ್ನು ಕಾಂಗ್ರೆಸ್ ಕಳೆದುಕೊಂಡಿತು.

ಇದಕ್ಕೆ ತದ್ವಿರುದ್ಧವಾಗಿ ಸಂಘ ಪರಿವಾರ ಒಕ್ಕಟ್ಟಿನಿಂದ ಒಂದಾಗಿಯೇ ಉಳಿದಿದೆ. 1980ರಲ್ಲಿ ಸ್ಥಾಪನೆಗೊಂಡ ಭಾರತೀಯ ಜನತಾ ಪಾರ್ಟಿಯಲ್ಲಿ ಇದುವರೆಗೂ ಯಾವ ದೊಡ್ಡ ಒಡಕೂ ಆಗಿಲ್ಲ. ಈ ರೀತಿ ವಿಘಟಿತವಾಗಿ ಚೆಲ್ಲಾಪಿಲ್ಲಿಯಾಗಿ ಹೋದ ಕಾಂಗ್ರೆಸ್ ಪರಿವಾರ ಒಂದು ಕಡೆ, ಸುಸಂಘಟಿತವಾಗಿ, ಒಗ್ಗಟ್ಟಿನಿಂದ, ಕಾರ್ಯಕರ್ತರ ಪಡೆ (cadre-based-organisation) ಕಟ್ಟಿಕೊಂಡು ಉದ್ದೇಶ ಪ್ರಾಪ್ತಿಗಾಗಿ (ಆ ಉದ್ದೇಶ ಅದೆಷ್ಟೋ ದೋಷಪೂರ್ಣವಾಗಿರಲಿ) ಪರಿಶ್ರಮಿಸುವ ಸಂಘ ಪರಿವಾರ ಇನ್ನೊಂದು ಕಡೆ. ಈ ತುಲನಾತ್ಮಕ ದೃಶ್ಯವನ್ನು ನೋಡಿದಾಗ ಇಂದು ಭಾರತದ ರಾಜಕಾರಣದಲ್ಲಿ ಬಿಜೆಪಿಯ ವರ್ಚಸ್ಸು ಏಕೆ ಹಾಗೂ ಹೇಗೆ ಬೆಳೆದಿದೆ ಎಂದು ಗೊತ್ತಾಗುತ್ತದೆ.

ಸಂಘಟಿತ ಶಕ್ತಿಯೇ ಯಾವುದೇ ರಾಜಕೀಯ ಪಕ್ಷದ ಬೆನ್ನೆಲುಬು. ಕಾಂಗ್ರೆಸ್ ಪಕ್ಷದ ವೈಚಾರಿಕ ಸಂಕಟವೂ ಅದರ ದುರ್ಬಲತೆಗೆ ಕಾರಣವಾಗಿದೆ. ಕಾಂಗ್ರೆಸ್ಸಿನ ಮೂಲ ವಿಚಾರಧಾರೆಯಲ್ಲಿ ಯಾವ ದೋಷವೂ ಇಲ್ಲ ಎಂಬುದು ನನ್ನ ನಂಬಿಕೆ. ಆದರೆ, ಕಾಲಕ್ರಮೇಣ ಜಗತ್ತಿನಲ್ಲಿ, ದೇಶದಲ್ಲಿ ಆಗುವ ಸ್ಥಿತ್ಯಂತರಗಳ ಬೆಳಕಿನಲ್ಲಿ ತನ್ನ ಸಿದ್ಧಾಂತರಗಳ ಪ್ರಭಾವಶಾಲಿ ಪುನರ್‌ಮಂಡನೆ ಕಾಂಗ್ರೆಸ್ ಮಾಡುತ್ತಿಲ್ಲ. ಇದರಿಂದಾಗಿ ಧರ್ಮನಿರಪೇಕ್ಷತೆ ಅಂದರೆ ಏನು? ಭಾರತದ ರಾಷ್ಟ್ರೀಯತೆಯ ಅರ್ಥ ಏನು? ಸಮಾಜವಾದ ಕಾಲಬಾಹ್ಯವಾಗಿದೆಯೋ ಅಥವಾ ಇಂದಿಗೂ ಅವಶ್ಯಕವಾಗಿದೆಯೋ? ಪ್ರಜಾಪ್ರಭುತ್ವದಲ್ಲಿ ಜನಭಾಗಿದಾರಿ ಬೆಳೆಸಿ ಅದನ್ನು ಹೆಚ್ಚು ಗಟ್ಟಿಗೊಳಿಸುವುದು ಹೇಗೆ? ಭ್ರಷ್ಟಾಚಾರದ ಗಂಗೋತ್ರಿಯಾಗಿರುವ ಸದ್ಯದ ಚುಣಾವಣಾ ಪದ್ಧತಿಯಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ತರುವುದು ಹೇಗೆ? ಶಾಸನ ವ್ಯವಸ್ಥೆಯಲ್ಲಿ ನೌಕರಶಾಹಿಗಳ ಪ್ರಭುತ್ವ ಪ್ರಜಾಪ್ರಭುತ್ವವನ್ನೇ ಮೊಟಕುಗೊಳಿಸುವ ಅವಸ್ಥೆ ಬಂದಾಗ ಇದರಲ್ಲಿ ಸಂವೇದನಶೀಲತೆ, ಕಾರ್ಯತತ್ಪರತೆ, ಸಾಮಾನ್ಯ ಜನರ ಸಮಸ್ಯೆಗಳ ನಿವಾರಣೆಗಾಗಿ ಕಳಕಳಿ ತರುವುದು ಹೇಗೆ? ಈ ಮುಂತಾದ ಮೂಲಭೂತ ಪ್ರಶ್ನೆಗಳಿಗೆ ಉತ್ತರಗಳನ್ನು ಕಾಂಗ್ರೆಸ್ ಪಕ್ಷ ಬುದ್ಧಿಜೀವಿಗಳಿಗೆ, ಜನಸಾಮಾನ್ಯರಿಗೆ ಸರಿ ಎನಿಸುವ ರೀತಿಯಲ್ಲಿ ಕೊಡುತ್ತಿಲ್ಲ.

ಇದಲ್ಲದೇ ಅತಿವೇಗದಿಂದ ಬದಲಾಗುತ್ತಿರುವ ಜಗತ್ತಿನಲ್ಲಿ ಪ್ರಚಲಿತ ಸಮಸ್ಯೆಗಳಿಗೆ ಭಾರತ ತನ್ನ ಸ್ವತಂತ್ರ ಶಕ್ತಿಯನ್ನು ಬಳಸಿಕೊಂಡು, ತನ್ನ ಚಿರಂತನ ಮೌಲ್ಯಗಳ ಆಧಾರದ ಮೇಲೆ ಯಾವ ಉತ್ತರ ಕೊಡಬೇಕು? ಭಾರತದ ನೆರೆಹೊರೆಯಲ್ಲಿ ಶಾಂತಿ, ಸಹಕಾರ, ಪ್ರಗತಿ ಬೆಳೆಸಲು ಪಾಕಿಸ್ತಾನ ಮತ್ತು ಚೀನಾ ಜೊತೆಯಲ್ಲಿ ಏಳು ದಶಕಗಳಿಂದ ನಡೆದುಬಂದಿರುವ ಈಗ ಹೆಚ್ಚು ಉಲ್ಬಣಗೊಳ್ಳುತ್ತಿರುವ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷದ ಪರಿಹಾರ ಏನು? ಕಾಶ್ಮೀರ ಸಮಸ್ಯೆಯನ್ನು ಅಂತಿಮ ರೂಪದಲ್ಲಿ ನಾವು ಬಗೆಹರಿಸುತ್ತಿದ್ದೇವೆ ಎಂದು ಮೋದಿ-ಶಾ ದರ್ಪದಿಂದ ಸಾರುತ್ತಿದ್ದಾರೆ. ಅದಕ್ಕಾಗಿ ಎಲ್ಲ ರೀತಿಯ ಸಂವಿಧಾನ-ವಿರೋಧಿ, ಪ್ರಜಾಪ್ರಭುತ್ವ-ವಿರೋಧಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಮಹತ್ವದ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಕಾಂಗ್ರೆಸ್ ಪಕ್ಷದ ನಿಲುವು ಏನು?

ಈ ಮುಂತಾದ ಪ್ರಶ್ನೆಗಳ ಬಗ್ಗೆ ಕೂಡ ಕಾಂಗ್ರೆಸ್ ಪಕ್ಷದಲ್ಲಿ ವೈಚಾರಿಕ ಸ್ಪಷ್ಟತೆಯ ಅಭಾವ ಇದೆ. ಇದರಿಂದಾಗಿ ಈ ವಿಷಯಗಳ ಕುರಿತು ಬಿಜೆಪಿ ಮಾಡುತ್ತಿರುವ ಪ್ರತಿಪಾದನೆಯೇ ಭಾರತದ ರಾಷ್ಟ್ರೀಯ ಪ್ರತಿಪಾದನೆ ಎಂಬ ದೃಶ್ಯ ಮೂಡಿಬಂದಿದೆ.

ಯಾವುದೇ ದೇಶದ ಸಮಾಜದಲ್ಲಿ, ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗಬೇಕಾದರೆ ಅದಕ್ಕೆ ಶಕ್ತಿಶಾಲಿಯಾದ, ಸುಸಂಗತವಾದ, ಜನರನ್ನು ಪ್ರೇರೇಪಿಸುವಂತಹ ವಿಚಾರಗಳ ಸಂಚಯ ಬೇಕು. ಈ ವಿಚಾರಗಳಿಗೆ ಆದರ್ಶಗಳ ಜೀವಂತ ಮತ್ತು ಆಳವಾದ ಬೇರುಗಳು ಬೇಕು. ಅಷ್ಟೇ ಅಲ್ಲದೆ ಈ ವಿಚಾರ ಮತ್ತು ಆದರ್ಶಗಳಿಗೆ ಅನುಗುಣವಾಗಿ ತಮ್ಮ ಆಚಾರಗಳನ್ನು ಬೆಳೆಸಿಕೊಂಡಿರುವ ನೇತಾರರ ಸಂಘಟಿತ ಕಾರ್ಯ ಬೇಕು. ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಈ ತರಹದ ಸಂಘಟನೆಯಾಗಿತ್ತು. ವಿಶಾಲ ಭಾರತದ ವೈವಿಧ್ಯಗಳಿಂದ ತುಂಬಿದ ಸಮಾಜದ ಎಲ್ಲ ಘಟಕಗಳಿಗೂ ಪ್ರೇರಣೆ ನೀಡುವ ಮಾರ್ಗದರ್ಶನ ಮಾಡುವ ತಾಕತ್ತು ಆಗಿನ ಕಾಂಗ್ರೆಸ್ಸಿನಲ್ಲಿ ಇತ್ತು. ಜನರ ವಿಶ್ವಾಸ ಗಳಿಸಿದ್ದರಿಂದಲೇನೇ ನಮ್ಮ ಸ್ವಾತಂತ್ರ್ಯ ಆಂದೋಲನ ಜನ ಆಂದೋಲನವಾಗಿ ಪರಿವರ್ತಿತಗೊಂಡಿತು.

ಆಗ ಗಳಿಸಿದ ಜನರ ವಿಶ್ವಾಸದ ಬಂಡವಾಳ ಕ್ರಮೇಣ ಕರಗಿ ಹೋಗಿದ್ದರಿಂದಲೇ ಕಾಂಗ್ರೆಸ್ ಪಕ್ಷ ಇಂದು ತನ್ನ ನಾಲ್ಕನೇ ಸಂಕಟಕ್ಕೆ ಬಲಿಯಾಗಿದೆ.

ನಿಸರ್ಗದಲ್ಲಾಗಲೀ ರಾಜಕಾರಣದಲ್ಲಾಗಲೀ ನಿರ್ವಾತಕ್ಕೆ ಸ್ಥಾನವಿಲ್ಲ. ಕುಗ್ಗುತ್ತಿರುವ ಕಾಂಗ್ರೆಸ್ ಪಕ್ಷದ ಸ್ಥಾನವನ್ನು ಬಿಜೆಪಿ ಆವರಿಸಿದೆ. ಬಿಜೆಪಿಗೆ ಸಮಾಜದ ಒಂದು ದೊಡ್ಡ ಘಟಕದ ಬೆಂಬಲ ಪ್ರಾಪ್ತವಾಗಿದೆ. ಇದರಲ್ಲಿ ಸಂಶಯವೇ ಇಲ್ಲ. ಆದರೆ ಅಧಿಕಾರಕ್ಕೆ ಬಂದ ನಂತರ, ಹಾಗೂ ಅಧಿಕಾರ ಗಳಿಸುವುದಕ್ಕಾಗಿ ಸದ್ಯದ ಬಿಜೆಪಿ ಏನೇನು ಅನಾಚಾರ ಮಾಡುತ್ತಿದೆ, ಪ್ರಜಾಪ್ರಭುತ್ವದ ಬೇರುಗಳನ್ನು ಕಿತ್ತೊಗೆಯಲು ಹೇಗೆ ದುರಾಚಾರ ಮಾಡುತ್ತಿದೆ ಎಂಬುದು ದಿನದಿನಕ್ಕೆ ಸ್ಪಷ್ಟವಾಗುತ್ತಿದೆ.

ಅಧಿಕಾರ-ಸರಕಾರ ಯಾರದೇ ಇರಲಿ ಭಾರತದ ಪ್ರಜಾಪ್ರಭುತ್ವದಕ್ಕೆ ಧಕ್ಕೆಯಾಗಬಾರದು. ನಮ್ಮ ಪ್ರಜಾಪ್ರಭುತ್ವ ದೋಷರಹಿತವಾಗಿಲ್ಲ. ಇನ್ನೂ ಪರಿಪಕ್ವವಾಗಿಲ್ಲ. ಅದನ್ನು ಸಂರಕ್ಷಿಸುವ, ಪೋಷಿಸುವ ಜವಾಬ್ದಾರಿ ಎಲ್ಲ ರಾಜಕೀಯ ಪಕ್ಷಗಳದ್ದು. ದೇಶದ ಪ್ರಬುದ್ಧ ಜನಸಮುದಾಯದ ಜವಾಬ್ದಾರಿ ಇನ್ನೂ ಹೆಚ್ಚು. ಕಾಂಗ್ರೆಸ್ ಪಕ್ಷ ಇನ್ನು ಐತಿಹಾಸಿಕ ಜವಾಬ್ದಾರಿಯನ್ನು ಅರಿತುಕೊಂಡು ಸ್ವ-ಸುಧಾರಣೆ ಮಾಡುತ್ತ ಹೋದರೆ ಅದಕ್ಕೆ ಬುದ್ಧಿಜೀವಿಗಳ ಬೆಂಬಲವೂ ಸಿಗುತ್ತದೆ, ಜನತಾ-ಜನಾರ್ದನನ ಬೆಂಬಲವೂ ಮರಳಿ ಪ್ರಾಪ್ತವಾಗುತ್ತದೆ. ಇದರಲ್ಲಿ ಸಂದೇಹವಿಲ್ಲ.

*ಲೇಖಕರು ಮೂಲತಃ ಕರ್ನಾಟಕದವರು, ಮುಂಬೈಯಲ್ಲಿ ನೆಲೆಸಿದ್ದಾರೆ; ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಕಟವರ್ತಿಯಾಗಿ ಸೇವೆ ಸಲ್ಲಿಸಿದ್ದರು. ಗಾಂಧಿ ವಿಚಾರದ ಪ್ರಸಾರಕ್ಕೆ ಬದ್ಧರು.

Leave a Reply

Your email address will not be published.