ಕಾಂಗ್ರೆಸ್ ಮಾಡಿದ ಬಹುದೊಡ್ಡ ಅನ್ಯಾಯ

ಡಾ.ರಝಾಕ ಉಸ್ತಾದ

ಕಾಂಗ್ರೆಸ್ ಪಕ್ಷ ಮುಸ್ಲಿಂರ ತುಷ್ಟೀಕರಣ ಮಾಡುತ್ತಿದೆ ಎಂದು ಇತರೆ ಪಕ್ಷಗಳು ಆರೋಪಿಸುತ್ತಿವೆ. ಆದರೆ ಕಾಂಗ್ರೆಸ್ ಪಕ್ಷದ 70 ವರ್ಷಗಳ ಆಡಳಿತದಲ್ಲಿಯೇ ಮುಸ್ಲಿಂರು ಸ್ಥಿತಿಗೆ ತಲುಪಿದ್ದಾರೆ. ಕಾಂಗ್ರೆಸ್ ಮಾಡಿದ ಬಹುದೊಡ್ಡ ಅನ್ಯಾಯವೆಂದರೆ ಮುಸ್ಲಿಂ ಸಮುದಾಯಕ್ಕೆ ಶೈಕ್ಷಣಿಕ ಹಾಗೂ ನೇಮಕಾತಿಯಲ್ಲಿ ಮೀಸಲಾತಿ ನೀಡದೇ ಇರುವುದು.

ಸ್ವತಂತ್ರ ಭಾರತದಲ್ಲಿ ಮುಸ್ಲಿಂ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ತಳಸ್ತರದಲ್ಲಿ ಉಳಿದಿರುವುದನ್ನು ಸರಕಾರ ನೇಮಿಸಿರುವ ಹಲವಾರು ಸಮಿತಿಗಳ ವರದಿಗಳು ಸ್ಪಷ್ಟವಾಗಿ ಹೇಳುತ್ತಿವೆ. ಒಂದು ಸಮುದಾಯ ರೀತಿ ಹಿಂದುಳಿಯಲು ಹಲವು ಕಾರಣಗಳಿರಬಹುದು ಮತ್ತು ಸಾಮುದಾಯಿಕ ಇಚ್ಛಾಶಕ್ತಿಯ ಕೊರತೆಯೂ ಇರಬಹುದು. ಯಾವುದೇ ಸಮಾಜ ತಾನಿರುವ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನ ಮಾಡದೇ ಇರಲು ಸಾಧ್ಯವಿಲ್ಲ. ಆದರೆ ವ್ಯವಸ್ಥೆ ಅವರ ಬೆನ್ನಿಗೆ ನಿಲ್ಲಬೇಕಾಗುತ್ತದೆ. ಮುಸ್ಲಿಂ ಸಮುದಾಯದ ಜನ ಮೂಲಭೂತವಾದಿಗಳು, ಅವರು ಎಂದಿಗೂ ಬದಲಾವಣೆಯಾಗಲು ಬಯಸುವುದಿಲ್ಲ ಎಂದು ಆರೋಪ ಮಾಡಲಾಗುತ್ತಿದೆ. ವಾಸ್ತವವಾಗಿ ಅಂತಹ ಯಾವ ಉದ್ದೇಶಗಳು ಸಮುದಾಯದ ಒಳಗಡೆ ಇಲ್ಲ.

ಸಾಮಾಜಿಕ ಬದಲಾವಣೆಗಳು ಎನ್ನುವದು ಒಂದೇ ದಿನದಲ್ಲಿ ಆಗಲು ಸಾಧ್ಯವಿಲ್ಲ ಮತ್ತು ಅದೊಂದು ನಿರಂತರ ಪ್ರಕ್ರಿಯೆಯ ಭಾಗ. ಹಿಂದೆ ಮುಸ್ಲಿಂರು ಜನಸಂಖ್ಯೆ ನಿಯಂತ್ರಣಕ್ಕೆ ಒಪ್ಪಿಕೊಳ್ಳುತ್ತಿಲ್ಲ ಎಂದು ಆರೋಪಿಸಲಾಗುತ್ತಿತ್ತು. ಆದರೆ ಈಗ ಮುಸ್ಲಿಂ ಸಮುದಾಯದ ಸುಶಿಕ್ಷಿತ ವರ್ಗದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿಲ್ಲ. ಅದೇ ರೀತಿ ಸಾಮಾಜಿಕವಾಗಿ ಹಿಂದುಳಿದ ಇತರೆ ಧರ್ಮಗಳಲ್ಲೂ ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಉದಾಹರಣೆಗಳಿವೆ. ಕ್ರಮೇಣ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತ ಬಂದಿದೆ. ಈಗಿನ ಮಕ್ಕಳ ವೃದ್ಧಿದರ ಪ್ರಮಾಣ 2001ರಲ್ಲಿ 2.5 ರಷ್ಟಿತ್ತು, 2021ರಲ್ಲಿ 2.1ಕ್ಕೆ ಇಳಿದಿರುವದೇ ಮಕ್ಕಳ ಸಂಖ್ಯೆ ಕಡಿಮೆಯಾಗಿರುದಕ್ಕೆ ಉದಾಹರಣೆ.

ಹಿಂದೆ ತ್ರಿವಳಿ ತಲಾಖ್ ಬಗ್ಗೆ ಸಾಕಷ್ಟು ಆರೋಪಗಳು ಮುನ್ನಲೆಯಲ್ಲಿ ಇದ್ದವು. ಆದರೆ ಕಳೆದ ಎರಡು ದಶಕಗಳಿಂದ ತ್ರಿಬಲ್ ತಲಾಖ ಪ್ರಕರಣಗಳು ಅಪರೂಪವಾಗಿವೆ. ಶೇ.99 ರಷ್ಟು ಮುಸ್ಲಿಂರ ವಿಚ್ಛೇದನ ಪ್ರಕರಣಗಳು ಕೋರ್ಟುಗಳಲ್ಲಿ ನಡೆಯುತ್ತಿವೆ. ಕೇವಲ 1% ಪ್ರಕರಣಗಳು ಮಾತ್ರ ತ್ರಿವಳಿ ತಲಾಖ್ ಮೂಲಕ ನಡೆದಿವೆ. ಅದನ್ನೇ ದೊಡ್ಡದಾಗಿ ಬಿಂಬಿಸಲಾಗಿದೆ. ದೇಶದಲ್ಲಿ ಮದರಸಾಗಳಲ್ಲಿ ಓದುವ ಮುಸ್ಲಿಂ ಮಕ್ಕಳ ಸಂಖ್ಯೆ ಕೇವಲ ಶೇ.1 ರಷ್ಟು ಮಾತ್ರ. ಇನ್ನುಳಿದ ಶೇ 99 ರಷ್ಟು ಮಕ್ಕಳು ಸರಕಾರ ನಿಗದಿಗೊಳಿಸಿದ ಶಾಲೆಗಳಲ್ಲಿಯೇ ಓದುತ್ತಿದ್ದಾರೆ ಎಂದು ನ್ಯಾ.ರಾಜೇಂದ್ರ ಸಾಚಾರ್ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಮದರಸಾಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುವಂತೆ ಮಾಡಲಾಗಿದೆ. ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸರಕಾರಿ ಶಾಲಾ ಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆ ಚರ್ಚೆಯೇ ಆಗುವದಿಲ್ಲ. ಮುಸ್ಲಿಂ ಸಮುದಾಯದ ಸರಕಾರಿ ಹುದ್ದೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಉನ್ನತ ಹುದ್ದೆಗಳಲ್ಲಿ ಶೇ.1ಕ್ಕಿಂತ ಕಡಿಮೆ ಎಂದು ಹೇಳಲಾಗಿದೆ.

ಮುಸ್ಲಿಂ ಸಮುದಾಯ ಸಾಮಾನ್ಯವಾಗಿ ನಗರ ಕೇಂದ್ರಿತ ನಿವಾಸಿಗಳು ಎನ್ನುವದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದಕ್ಕೆ ಮೂಲ ಕಾರಣ, ಮುಸ್ಲಿಂ ಸಮುದಾಯದಲ್ಲಿ ಕೃಷಿ ಜಮೀನು ಇರುವವರ ಸಂಖ್ಯೆ ಅತೀ ಕಡಿಮೆಯಾದ್ದರಿಂದ ಬದುಕು ಕಟ್ಟಿಕೊಳ್ಳಲು ನಗರ ಪ್ರದೇಶಗಳಿಗೆ ವಲಸೆ ಬಂದು ಕೋಳಗೇರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಯಾರೂ ಕೋಳಗೇರಿಗಳಲ್ಲಿ ವಾಸ ಮಾಡಲು ಬಯಸುವುದಿಲ್ಲ. ಆದರೆ ಆರ್ಥಿಕ ಪರಿಸ್ಥಿತಿ ಅವರನ್ನು ಕೋಳಗೇರಿಗಳಲ್ಲಿ ವಾಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗುವಂತೆ ಮಾಡಿದೆ. ಕ್ರಮೇಣ ಅವರ ಬದುಕು ಬದಲಾವಣೆ ಕಂಡು ಸಾಮಾನ್ಯ ಬದುಕಿನೆಡೆಗೆ ಬರುವಂತಾಗುತ್ತದೆ. ನಗರ ಪ್ರದೇಶದಲ್ಲಿ ಇರುವ ಯಾವುದೇ ಕೋಳಗೇರಿಗಳಲ್ಲಿ ಬಹುಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯ ಇರುವದು ಸಾಮಾನ್ಯವಾಗಿದೆ. ಅಲ್ಲದೇ ಮುಸ್ಲಿಂ ಸಮುದಾಯ ಶ್ರಮಜೀವಿಯಾಗಿ ಹಲವಾರು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಿರುವದನ್ನು, ಯಾವುದೇ ನಗರ ಪ್ರದೇಶದಲ್ಲಿ ಹಲವು ವೃತ್ತಿಗಳಲ್ಲಿ ತೊಡಗಿರುವುದನ್ನು ನಾವು ಕಾಣಬಹುದು.

ಭಾರತದಲ್ಲಿ ಮುಸ್ಲಿಂ ಸಮುದಾಯ ಹಿಂದುಳಿಯಲು ಕೇವಲ ಮುಸ್ಲಿಂ ಸಮುದಾಯ ಮಾತ್ರ ಕಾರಣವಲ್ಲ. ಮುಸ್ಲಿಂ ಸಮಾಜದಿಂದ ಮುಖ್ಯವಾಹಿನಿಗೆ ಬಂದಿರುವ ವ್ಯಕ್ತಿಗಳು ತನ್ನ ಸಮುದಾಯದ ಉನ್ನತಿಗಾಗಿ ಪ್ರಯತ್ನ ಮಾಡಬೇಕಾಗುತ್ತದೆ. ಅಲ್ಲದೇ ಸರಕಾರಗಳು ಸಮುದಾಯದ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಬೇಕು. ಆದರೆ, ಭಾರತದಲ್ಲಿ ಮುಸ್ಲಿಂ ಸಮುದಾಯದ ಬೆನ್ನಿಗೆ ಎರಡೂ ರೀತಿಯ ವ್ಯವಸ್ಥೆ ನಿಂತಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.

ಕಾಂಗ್ರೆಸ್ ಪಕ್ಷ ಮುಸ್ಲಿಂರ ತುಷ್ಟೀಕರಣ ಮಾಡುತ್ತಿದೆ ಎಂದು ಇತರೆ ಪಕ್ಷಗಳು ಆರೋಪಿಸುತ್ತಿವೆ. ಆದರೆ ಕಾಂಗ್ರೆಸ್ ಪಕ್ಷದ 70 ವರ್ಷಗಳ ಆಡಳಿತದಲ್ಲಿಯೇ ಮುಸ್ಲಿಂರು ಸ್ಥಿತಿಗೆ ತಲುಪಿದ್ದಾರೆ. ಕಾಂಗ್ರೆಸ್ ಮಾಡಿದ ಬಹುದೊಡ್ಡ ಅನ್ಯಾಯವೆಂದರೆ ಮುಸ್ಲಿಂ ಸಮುದಾಯಕ್ಕೆ ಶೈಕ್ಷಣಿಕ ಹಾಗೂ ನೇಮಕಾತಿಯಲ್ಲಿ ಮೀಸಲಾತಿ ನೀಡದೇ ಇರುವದು. ಇಂದಿಗೂ ಯಾವುದೇ ಮೀಸಲಾತಿ ಇಲ್ಲದೇ ಸಾಮಾನ್ಯ ಅಭ್ಯರ್ಥಿ ಕೋಟಾದಡಿಯಲ್ಲಿ ಮುಂದುವರೆಯುವ ಅನಿವಾರ್ಯತೆಯಲ್ಲಿ ಮುಸ್ಲಿಂ ಸಮುದಾಯವಿದೆ ಎಂದರೆ ಯಾರೂ ಒಪ್ಪದೇ ಇರಬಹುದು. ಆದರೆ ಅದು ಸತ್ಯ. ಕರ್ನಾಟಕದಲ್ಲಿ ಮಾತ್ರ ಮುಸ್ಲಿಂ ಸಮುದಾಯಕ್ಕೆ ಶೇ.4 ರಷ್ಟು ಮೀಸಲಾತಿ ಇದೆ.

ಸಂವಿಧಾನದ ಅನುಚ್ಛೇದÀ 15 ಹಾಗೂ 16ರಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ನಾಗರಿಕರಿಗೆ ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಗಳ ಜನರಿಗೆ ಮೀಸಲಾತಿ ನೀಡುವ ಬಗ್ಗೆ ಉಲ್ಲೇಖವಿದೆ. ಇದರಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಅವಕಾಶವಿಲ್ಲ ಎಂದು ವಾದ ಮಾಡಲಾಗುತ್ತಿದೆ. ಮುಸ್ಲಿಂ ಸಮುದಾಯವು ಸಹ ದೇಶದಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದರಿಂದ ಅದೇ ಅನುಚ್ಛೇಧದಡಿಯಲ್ಲಿ ಮುಸ್ಲಿಂ ಸಮುದಾಯಕ್ಕೂ ಮೀಸಲಾತಿ ನೀಡಲು ಅವಕಾಶವಿದೆ. ಆದರೆ, ಮುಸ್ಲಿಂರ ತೃಷ್ಟೀಕರಣದಲ್ಲಿ ತೊಡಗಿಕೊಂಡಿರುವ ಕಾಂಗ್ರೆಸ್ ಪಕ್ಷ ಇದನ್ನು ಮಾಡಲು ಪ್ರಯತ್ನ ಮಾಡಿಲ್ಲ. ಹಲವಾರು ಅಯೋಗಗಳು ಸಮುದಾಯ ಹಿಂದುಳಿದಿದೆ ಎಂದು ವರದಿ ನೀಡಿವೆ.

ಇನ್ನು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ನೀಡಬಹುದಾಗಿತ್ತು. ಆದರೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ಪ್ರಯತ್ನ ಮಾಡಲಿಲ್ಲ. ನಮ್ಮ ಸಂವಿಧಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮೀಸಲಾತಿ ನೀಡುವ ಸಂದರ್ಭದಲ್ಲಿ ಮೀಸಲಾತಿಯು ಆಯಾ ಸಮುದಾಯದ ಪ್ರಾತಿನಿಧ್ಯವೇ ವಿನಾ ಯಾರೊಬ್ಬರ ಹಕ್ಕು ಕಸಿದುಕೊಳ್ಳುವ ಪ್ರಕ್ರಿಯೆಯಲ್ಲ ಎಂದು ಹೇಳಿದ್ದಾರೆ. ಮೀಸಲಾತಿ ಎನ್ನುವದು ಒಂದು ಸಮುದಾಯ ಅಥವಾ ಒಂದು ಸಮಾಜವನ್ನು ಈಗಿರುವ ಸ್ಥಿತಿಗತಿಯಿಂದ ಮುಖ್ಯವಾಹಿನಿಗೆ ತರುವ ಪ್ರಕ್ರಿಯೆಯ ಒಂದು ಭಾಗ ಮಾತ್ರ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನ ಅನುಚ್ಛೇಧ 15 ಹಾಗೂ 16 ರಲ್ಲಿ ಕೇವಲ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಕ್ಕೆ ಮಾತ್ರ ಮೀಸಲಾತಿ ನೀಡಬೇಕೆಂದಿದ್ದನ್ನು, ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೂ ಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿ ಮಾಡಿ ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಶೇ 10 ರಷ್ಟು ಮೀಸಲು ನೀಡಿದ್ದಾರೆ. ಅದೇ ರೀತಿ ಮುಸ್ಲಿಂ ಸಮುದಾಯಕ್ಕೂ ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ನೀಡಬಹುದಾಗಿತ್ತು, ಕೆಲಸ ಕಾಂಗ್ರೆಸ್ ಪಕ್ಷ ಕಳೆದ ಎಪ್ಪತ್ತು ವರ್ಷಗಳಿಂದ ಮಾಡಿಲ್ಲ ಎನ್ನುವದೇ ಸೋಜಿಗದ ಸಂಗತಿ.

ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಸರಕಾರಗಳಿಂದ ಯಾವುದೇ ವಿಶೇಷ ಯೋಜನೆಗಳು ಇರದೇ ಇರುವುದರಿಂದ ಇಂದಿಗೂ ಸಮುದಾಯ ತನ್ನ ಆರ್ಥಿಕ ಸ್ಥಿತಿಗತಿಯಿಂದ ಹೊರಬರಲು ಸಾಧ್ಯವಾಗಿಲ್ಲ. ನ್ಯಾ.ರಾಜೇಂದ್ರ ಸಾಚಾರ್ ಸಮಿತಿ ಹಾಗೂ ನ್ಯಾ.ರಂಗನಾಥ ಮಿಶ್ರಾ ಆಯೋಗದ ವರದಿಗಳು ಸರಕಾರದಲ್ಲಿ ಇದ್ದರೂ ಯಾವುದೇ ಸರಕಾರ ವರದಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವದಾಗಲೀ ಅಥವಾ ಯೋಜನೆಗಳನ್ನು ರೂಪಿಸುವದಾಗಲಿ ಮಾಡಲಿಲ್ಲ. ನ್ಯಾ.ರಾಜೇಂದ್ರ ಸಾಚಾರ್ ಸಮಿತಿಯ ವರದಿಯ ಮೇಲೆ ಕೆಲವು ಕ್ರಮಗಳನ್ನು ಜರುಗಿಸಲಾಗಿದ್ದರೂ ಅದನ್ನು ಸಮುದಾಯದ ಜನರಿಗೆ ಮುಟ್ಟಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಸಫಲವಾಗಲಿಲ್ಲ.

ನ್ಯಾ.ರಾಜೇಂದ್ರ ಸಾಚಾರ್ ಸಮಿತಿಯ ವರದಿಯ ಮೇಲೆ ಜಾರಿಗೊಳಿಸಲಾದ ವಿದ್ಯಾರ್ಥಿವೇತನ ಮಾತ್ರ ಅತ್ಯಂತ ಯಶಸ್ವಿಯಾಗಿ ಸಮುದಾಯದ ಮಕ್ಕಳಿಗೆ ತಲುಪಿರುವದರಿಂದ ಕಳೆದ ಒಂದು ದಶಕದಿಂದ ಶಾಲಾ ಕಾಲೇಜು ಬಿಡುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಉನ್ನತ ಶಿಕ್ಷಣ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವದು ಸಂತೋಷದಾಯಕ ವಿಷಯವಾಗಿದೆ. ಇತ್ತೀಚೆಗೆ ಸಿದ್ದರಾಮಯ್ಯನವರ ಸರಕಾರವಿದ್ದಾಗ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಅದರಿಂದ ಸಮುದಾಯಕ್ಕೆ ಸ್ವಲ್ಪಮಟ್ಟಿಗೆ ಅನುಕೂಲವಾಗಿತ್ತು.

ಉದಾಹರಣೆಗೆ, ವಿದ್ಯಾಸಿರಿ, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಾಲ ನೀಡುವ ಯೋಜನೆ (ಅರಿವು), ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ವಿದೇಶದಲ್ಲಿ ಉನ್ನತ ಶಿಕ್ಷಣ ಸಹಾಯಧನ, ಕಾಲೋನಿ ಅಭಿವೃದ್ಧಿ ಯೋಜನೆ, ಗೂಡ್ಸ್ ವಾಹನ, ಟ್ಯಾಕ್ಸಿ ಲಘು ವಾಹನ, ಮುಖ್ಯಮಂತ್ರಿಗಳ 12 ಅಂಶಗಳ ಕಾರ್ಯಕ್ರಮ ಇತ್ಯಾದಿ. ಆದರೆ ಈಗಿನ ಬಿಜೆಪಿ ಸರಕಾರ ಎಲ್ಲ ಯೋಜನೆಗಳನ್ನು ತಡೆ ಹಿಡಿದಿರುವದರಿಂದ ಮತ್ತೆ ಅದೇ ರಾಗ ಅದೇ ಹಾಡು ಎನ್ನುವಂತಾಗಿದೆ.

ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕ ಸುಧಾರಣೆಗೆ ಮೊದಲಿನಿಂದಲೂ ಆಂತರಿಕವಾಗಿ ಪ್ರಯತ್ನ ವಾಗುತ್ತಲೇ ಬಂದಿದೆ. ಇತ್ತೀಚಿಗೆ ಪ್ರಯತ್ನ ತೀವ್ರಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಸರಕಾರಗಳು ಸಹ ಸಹಕಾರ ನೀಡುವದರ ಮೂಲಕ ಯೋಜನೆಗಳನ್ನು ರೂಪಿಸಬೇಕು ಮತ್ತು ಅನುಷ್ಠಾನಗೊಳಿಸುವ ಕೆಲಸವಾಗಬೇಕು. ಮುಸ್ಲಿಂ ಸಮುದಾಯ ಸಾಮಾಜಿಕ ಸುಧಾರಣೆಗೆ ಅತ್ಯಂತ ವೇಗವಾಗಿ ತನ್ನನ್ನು ತಾನು ತೆರೆದುಕೊಳ್ಳಲು ತಯಾರಾಗಿದೆ ಎಂದು ಹೇಳಲು ಕಳೆದ ಒಂದು ದಶಕದಲ್ಲಿ ಕೇವಲ ಶೇ 1 ರಷ್ಟಿದ್ದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಇಂದು ಶೇ 13 ರಷ್ಟು ಆಗಿದ್ದೇ ಉದಾಹರಣೆಯಾಗಿದೆ.

*ಲೇಖಕರು ಗುಲಬರ್ಗಾ ವಿವಿಯಿಂದ ಎಂ.ಎಸ್ಸಿ., ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ಪ್ರಾಧ್ಯಾಪಕರು, ಸಾಮಾಜಿಕ ಹೋರಾಟಗಾರರು. ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರು. ರಾಯಚೂರು ನಿವಾಸಿ.

Leave a Reply

Your email address will not be published.