ಕಾಡಿನಲ್ಲಿ ಚಿರತೆಯೇ..? ಅಥವಾ ಚಿರತೆಯಿದ್ದಲ್ಲಿ ಕಾಡೇ..?

-ಮೋಹನದಾಸ್

ಚಿರತೆಗಳ ಉಳಿವಿಗೆ ನೈಸರ್ಗಿಕ ಆವಾಸಸ್ಥಾನ ಮತ್ತು ದೊಡ್ಡ ಬಲಿ ಪ್ರಾಣಿಗಳ ಇರುವಿಕೆ ಬಹು ಅವಶ್ಯಕ: ಭಾರತದಲ್ಲಿ ಚಿರತೆಗಳ ಬಗ್ಗೆ ನಡೆದ ಅತೀ ದೊಡ್ಡ ಸಮೀಕ್ಷೆಯ ಫಲಿತಾಂಶ.

ಕಾಡುಗಳು ಮತ್ತು ಕಲ್ಲುಬಂಡೆಗಳಿರುವ ನೈಸರ್ಗಿಕ ಆವಾಸಸ್ಥಾನ, ಮತ್ತು ದೊಡ್ಡ ಬಲಿ ಪ್ರಾಣಿಗಳು (೨೦ ಕೆ.ಜಿಗಿಂತ ಹೆಚ್ಚಿರುವ, ಗೊರಸುಳ್ಳ ಪ್ರಾಣಿಗಳು) ಚಿರತೆಗಳ ಉಳಿವಿಗೆ ಬಹು ಅವಶ್ಯಕವೆಂದು ಹೊಸ ಅಧ್ಯಯನವೊಂದು ನಿರೂಪಿಸುತ್ತದೆ. ದಟ್ಟ ಜನವಸತಿ ಪ್ರದೇಶಗಳಲ್ಲಿ ಕೂಡ ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಜೀವಿಸುತ್ತವೆ ಎಂಬುದು ಸಾಮಾನ್ಯವಾಗಿರುವ ನಂಬಿಕೆ. ಆದರೆ ಅಂತಾರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆ ‘ಪಿಯರ್ ಜೆ’ನಲ್ಲಿ ಪ್ರಕಟಗೊಂಡ ಹೊಸ ಅಧ್ಯಯನವೊಂದು, ಚಿರತೆಗಳು ನೈಸರ್ಗಿಕ ಆವಾಸಸ್ಥಾನಗಳತ್ತ ಒಲವು ತೋರುತ್ತವೆಂದು ತಿಳಿಸುತ್ತದೆ. ನೇಚರ್ ಕನ್ಸರ್ವೇಷನ್ ಫೌಂಡೇಶನ್ ಸಂಸ್ಥೆಯ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಮತ್ತು ತಂಡದವರು ಈ ಸಂಶೋಧನೆ ಕೈಗೊಂಡಿದ್ದಾರೆ.

ಆಕ್ಯುಪೆನ್ಸಿ ಸರ್ವೇ ಎಂಬ ವೈಜ್ಞಾನಿಕ ಸಮೀಕ್ಷಾ ವಿಧಾನಶಾಸ್ತ್ರವನ್ನು ಉಪಯೋಗಿಸಿ ಸುಮಾರು ೨೪,೦೦೦ ಚದರ ಕಿಲೋಮೀಟರು ಪ್ರದೇಶದಲ್ಲಿ, ೨,೭೬೮ ಕಿಲೋಮೀಟರು ದೂರವನ್ನು ನಡಿಗೆಯಲ್ಲಿ ಕ್ರಮಿಸಿ ಈ ಸಂಶೋಧನೆಯನ್ನು ಕೈಗೊಳ್ಳಲಾಗಿದೆ. ಭೂಪ್ರದೇಶದ ವಿಸ್ತಾರವನ್ನು ಪರಿಗಣಿಸಿದರೆ ಈ ಅಧ್ಯಯನ, ಚಿರತೆಗಳ ಬಗ್ಗೆ ಭಾರತದಲ್ಲಿ ನಡೆಸಿರುವ ಅತ್ಯಂತ ದೊಡ್ಡ ಸಂಶೋಧನೆಯಾಗಿರಬಹುದು. ಈ ಅಧ್ಯಯನದ ಭೂವಿಸ್ತಾರ, ದೇಶದ ಎಂಟು ರಾಜ್ಯ ಮತ್ತು ಕೇಂದ್ರ ಆಡಳಿತ ಪ್ರದೇಶಗಳಷ್ಟು ದೊಡ್ಡದಿದೆ (ಸಿಕ್ಕಿಂ, ಗೋವಾ, ಅಂಡಮಾನ್ ಮತ್ತು ಲಕ್ಷದ್ವೀಪ್ ದ್ವೀಪಗಳು, ದೆಹಲಿ, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು, ಪುದುಚೇರಿ, ಮತ್ತು ಚಂಡೀಗಢ).

ದೇಶದಲ್ಲಿ ಚಿರತೆಗಳು ವ್ಯಾಪಕವಾಗಿ ನೆಲೆಸಿವೆಯಾದರೂ ಹಾಗೂ ಅವುಗಳ ಸಂಖ್ಯೆ ಗಣನೀಯವಾಗಿ ಇದ್ದರೂ, ಅವುಗಳ ಸಂಖ್ಯೆ ಮತ್ತು ಹಂಚುವಿಕೆಯ ಬಗ್ಗೆ ವೈಜ್ಞಾನಿಕ ಮಾಹಿತಿಯ ತೀವ್ರ ಕೊರತೆಯಿದೆ. ಅದರಲ್ಲೂ ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳಾಚೆಯ ಪ್ರದೇಶಗಳಲ್ಲಿ ಅವುಗಳ ಬಗೆಗಿನ ತಿಳಿವಳಿಕೆ ಅತ್ಯಲ್ಪ. ಚಿರತೆಗಳ ಇರುವಿನ ಸಂಭಾವ್ಯತೆ ಎಲ್ಲಿ ಹೆಚ್ಚಿರುತ್ತದೆಂದು ತಿಳಿಯಲು ವಿಜ್ಞಾನಿಗಳು, ಚಿರತೆಗಳ ಇರುವಿನ ಬಗ್ಗೆ ನೈಸರ್ಗಿಕ ಆವಾಸಸ್ಥಾನ (ಕಾಡು, ಕಲ್ಲುಬಂಡೆಗಳಿರುವ ಗುಡ್ಡಗಳು), ದಟ್ಟ ಜನವಸತಿ ಪ್ರದೇಶಗಳು (ಕಬ್ಬಿನಗದ್ದೆ, ಜೋಳದ ಹೊಲಗಳು ಮತ್ತಿತರ ಪ್ರದೇಶಗಳು) ಮತ್ತು ಮಿಶ್ರ ಪ್ರದೇಶಗಳನ್ನು (ನೈಸರ್ಗಿಕ ಆವಾಸಸ್ಥಾನ ಮತ್ತು ಜನವಸತಿ ಪ್ರದೇಶವಿರುವ ಮಿಶ್ರ ಪ್ರದೇಶಗಳು) ಹೋಲಿಸಿ ನೋಡಿದರು. ಯಾದ್ರಚ್ಚಿಕ ಮಾದರಿಯಲ್ಲಿ ಆಯ್ದ ೩೦ ಚದರ ಕಿಲೋಮೀಟರು ವ್ಯಾಪ್ತಿಯ ಗ್ರಿಡ್‌ಗಳಲ್ಲಿ ನಡೆದ ಸಂಶೋಧಕರು, ಚಿರತೆಗಳು, ಅವುಗಳ ಬಲಿಪ್ರಾಣಿಗಳು (ನೈಸರ್ಗಿಕ ಬಲಿಪ್ರಾಣಿಗಳು, ಹಾಗು ಜಾನುವಾರು ಮತ್ತು ನಾಯಿಗಳಂಥ ಸಾಕುಪ್ರಾಣಿಗಳು), ಮತ್ತು ಗಣಿಗಾರಿಕೆ, ಕಲ್ಲುಗುಣಿ ಮತ್ತು ಬೇಟೆಯಂತಹ ಅಪಾಯಗಳನ್ನು ದಾಖಲಿಸಿದರು. ನೈಸರ್ಗಿಕ ಆವಾಸಸ್ಥಾನ ಮತ್ತು ಸಾರಗ, ಕೊಂಡುಕುರಿ, ಕಡವೆ, ಕಾಡುಕುರಿ, ಕಾಡುಹಂದಿಯಂತಹ ದೊಡ್ಡ ನೈಸರ್ಗಿಕ ಬಲಿ ಪ್ರಾಣಿಗಳಿರುವಲ್ಲಿಯೇ ಚಿರತೆಗಳ ಇರುವಿಕೆ ಹೆಚ್ಚಿರುವುದು ತಿಳಿದುಬಂದಿದೆ.

ವಿವಿಧ ಆವಾಸಸ್ಥಾನಗಳನ್ನು ತುಲನೆ ಮಾಡಿ ಚಿರತೆಗಳ ಇರುವಿಕೆಯನ್ನು ಅಧ್ಯಯಿಸಿದ ಈ ಸಂಶೋಧನೆ, ಚಿರತೆಗಳ ನೆಲೆ ಮತ್ತು ಆಹಾರದ ಬಗ್ಗೆ ಇರುವ ಒಲವಿನ ಬಗ್ಗೆ ಹೊಸ ಮಾಹಿತಿಯನ್ನು ಕೊಟ್ಟಿದೆ. ಈ ಅಧ್ಯಯನದ ದತ್ತಾಂಶವನ್ನು ಮೂಲಾಧಾರವನ್ನಾಗಿಟ್ಟುಕೊಂಡು, ಚಿರತೆಗಳ ಇರುವಿಕೆಯ ಪ್ರದೇಶಗಳಲ್ಲಾಗುವ ಬದಲಾವಣೆಗಳನ್ನು ಮುಂದಿನ ದಿನಗಳಲ್ಲಿ ಹೋಲಿಸಿ ನೋಡಬಹುದು. ಹಾಗೆಯೇ ಚಿರತೆಗಳು ಹೊಸ ಪ್ರದೇಶಗಳಲ್ಲಿ ಕಂಡುಬರುತ್ತಿವೆಯೇ ಮತ್ತು ಸ್ಥಳೀಯವಾಗಿ ನಶಿಸುತ್ತಿವೆಯೇ ಎಂಬುದರ ಬಗ್ಗೆಯೂ ತಾಳೆ ನೋಡಬಹುದು.

ಹೆಚ್ಚಾಗಿ ರಕ್ಷಿತಾರಣ್ಯಗಳ ಆಚೆ, ಚಿರತೆಗಳ ಸಹಜ ಆವಾಸಸ್ಥಾನಗಳು, ಕಲ್ಲುಗುಣಿ, ಗಣಿಗಾರಿಕೆ, ಅಭಿವೃದ್ಧಿ ಯೋಜನೆಗಳು ಮತ್ತು ಅವುಗಳ ನೈಸರ್ಗಿಕ ಆಹಾರದ ಕೊರತೆಯಿಂದ ಅಪಾಯಕ್ಕೊಳಗಾಗಿವೆ. ಹಾಗಾಗಿ ಈ ಅಧ್ಯಯನದ ಫಲಿತಾಂಶಗಳು ಚಿರತೆಗಳ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಬಲ್ಲದು. “ರಕ್ಷಿತಾರಣ್ಯಗಳಾಚೆ ಚಿರತೆಗಳು ಉಳಿಯಬೇಕಾದರೆ ಅವುಗಳ ಸಂರಕ್ಷಣೆಗೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಹೊರತೆಗೆಯುವಿಕೆಗೆ ವೈಜ್ಞಾನಿಕವಾಗಿ ವಲಯಗಳನ್ನು ಗುರುತಿಸಿ ಚಿರತೆಗಳ ಸಂರಕ್ಷಣೆಗೆ ಆಧ್ಯತೆ ಕೊಡಬೇಕು” ಎನ್ನುತ್ತಾರೆ ಸಂಶೋಧನೆಯ ಪ್ರಧಾನ ಲೇಖಕ ಸಂಜಯ್ ಗುಬ್ಬಿ.

“ಸಾಮಾನ್ಯವಾಗಿ ‘ಕಾಡು’ ಎಂದು ಗುರುತಿಸದ ಕುರುಚಲು ಪ್ರದೇಶಗಳು, ಕಲ್ಲುಬಂಡೆಗಳಿರುವ ಗುಡ್ಡಗಾಡು ವಲಯಗಳು ಮತ್ತು ಅಲ್ಲಿ ವಾಸಿಸುವ ಎಲ್ಲ ಪ್ರಾಣಿಪ್ರಭೇದಗಳ ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಚಿರತೆಗಳನ್ನು ಆಶ್ರಯ ಪ್ರಭೇದಗಳು (ಅಂಬ್ರೆಲಾ ಸ್ಪೀಸೀಸ್) ಎಂದು ಗುರುತಿಸಿ, ಒಂದು ಭೂಹರುವಿನ (ಲ್ಯಾಂಡ್ಸ್ಕೇಪ್) ದೃಷ್ಟಿಕೋನದಲ್ಲಿ ಸಂರಕ್ಷಣಾ ಯೋಜನೆಗಳನ್ನು ತೆಗೆದುಕೊಳ್ಳುವುದು ಬಹು ಮುಖ್ಯ” ಎಂದು ಲೇಖಕರು ವಾದಿಸುತ್ತಾರೆ. ಚಿರತೆಗಳು ಹೆಚ್ಚು ಜನದಟ್ಟಣೆಯಿರುವ ಪ್ರದೇಶಗಳಲ್ಲಿ ಕಂಡು ಬಂದರೂ ಕೂಡ, ಅಲ್ಲಿ ಅವುಗಳ ಇರುವಿಕೆ ಜಾನುವಾರುಗಳ ನಷ್ಟದಿಂದ ಸಾಧ್ಯವಾಗುತ್ತಿದೆ. ಆದ್ದರಿಂದ ನೈಸರ್ಗಿಕ ಬಲಿಪ್ರಾಣಿಗಳ ಸಂರಕ್ಷಣೆ, ಮಾನವ-ಚಿರತೆ ಸಂಘರ್ಷವನ್ನು ಕಡಿಮೆಗೊಳಿಸುವಲ್ಲಿ ಕೂಡ ಸಹಕಾರವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, ಸಂಜಯ್ ಗುಬ್ಬಿ, ಈಮೇಲ್: sanjaygubbi@gmail.com

ಮೇಲೆ ಉಲ್ಲೇಖಿಸಿರುವುದು ಚಿರತೆಗಳ ಬಗೆಗಿನ ಅಧ್ಯಯನದ ಪತ್ರಿಕಾ ಪ್ರಕಟಣೆ. ಇದನ್ನು ನಿಮ್ಮ ಓದು ಮತ್ತು ಚಿಂತೆನೆಗಾಗಿ ನೀಡಲಾಗಿದೆ. ಈ ಅಧ್ಯಯನದ ಪೂರ್ಣ ವರದಿ ಇಲ್ಲಿ ಲಭ್ಯ: hಣಣಠಿs://ಠಿeeಡಿರಿ.ಛಿom/ಚಿಡಿಣiಛಿಟes/೧೦೦೭೨/  ಸದ್ಯಕ್ಕೆ ಈ ಅಧ್ಯಯನದ ಬಗ್ಗೆ ಕೆಲವು ಆಕ್ಷೇಪಗಳನ್ನು ಈ ಕೆಳಕಂಡಂತೆ ನೀಡಲಾಗಿದೆ. ಆಸಕ್ತರು, ತಜ್ಞರು ಈ ಕುರಿತ ಚರ್ಚೆ ಮುಂದುವರೆಸಬಹುದು.

  1. ಕಾಡಿನ ಹೊರಗೆ, ವಿಶೇಷವಾಗಿ ಕಬ್ಬಿನ ಗದ್ದೆಗಳು, ಜೋಳದ ಹೊಲಗಳು, ಪೊದೆಗಳು ಇತ್ಯಾದಿ ಕೃಷಿ-ಜನವಸತಿಯ ಪ್ರದೇಶಗಳಲ್ಲಿ ಕೂಡಾ ಚಿರತೆಯ ಆವಾಸಸ್ಥಾನವಾಗಬಹುದೆಂದು ದಾಖಲಿಸಾಗಿದೆ. ಈ ಜನವಸತಿಯ ಪ್ರದೇಶದಲ್ಲಿನ ಮಕ್ಕಳು ಮತ್ತು ನಿರ್ಬಲರ ಮೇಲೆ ಅದೇ ಚಿರತೆಗಳು ಮಾರಣಾಂತಿಕ ಹಲ್ಲೆಯಿಟ್ಟರೆ ಏನು ಮಾಡಬೇಕು..? ಯಾರು ಹೊಣೆ..? ಜನವಸತಿಯ ಪ್ರದೇಶದಲ್ಲಿ ಸಹಾ ಚಿರತೆಗಳ ಸಮೀಕ್ಷೆ ಮಾಡಿರುವ ಅಧ್ಯಯನವು ಮಾನವ ಪ್ರಾಣಿ ಹಾನಿಯ ಬಗ್ಗೆ ಯಾವುದೇ ಮಾತನಾಡದಿರುವುದು ಆಕ್ಷೇಪಾರ್ಹವಲ್ಲವೇ..?

2     ಕಾಡಿನ ಒಳಗೆ ಚಿರತೆಯು ಬೇಟೆಯಾಡಿ ತಿನ್ನುವ ಕಾಡುಹಂದಿ, ಕಾಡುಕುರಿ, ಕಡವೆ, ಸಾರಂಗ ಮುಂತಾದ ಬಲಿಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಚಿರತೆಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಕಾರಣ ಎಂದು ಹೇಳಲಾಗಿದೆ. ಆದರೆ ಕಾಡಿನೊಳಗೆ ಈ ಬಲಿಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಕಾರಣ ಹುಡುಕುವ ಗೋಜಿಗೆ ಸಂಶೋಧಕರು ಹೋಗಿಲ್ಲ. ಇದಕ್ಕೆ ನಮ್ಮ ಕಾಡುಗಳಲ್ಲಿ ಕ್ರಮೇಣ ಹುಲ್ಲುಗಾವಲುಗಳ ವಿಸ್ತಾರ ಕುಂದುವಿಕೆ ಹಾಗೂ ಜಾಲಿ-ಲಾಂಟಾನ ಮತ್ತಿತರ ಬೆಳೆಗಳ ಹೆಚ್ಚುವಿಕೆಯ ಪ್ರಸ್ತಾಪವೂ ಇಲ್ಲ.

  1. ಚಿರತೆಗಳ ಸಂಖ್ಯೆ ಹಾಗೂ ಆವಾಸಸ್ಥಾನ ಕುಂದುವಿಕೆಗೆ ಕಲ್ಲುಗಣಿ, ಗಣಿಗಾರಿಕೆ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಹೆಸರಿಸಲಾಗಿದೆ. ಆದರೆ ಘೋಷಿತ ಅಭಯಾರಣ್ಯ ಪ್ರದೇಶಗಳಲ್ಲಿ ಈಗಾಗಲೇ ಗಣಿಗಾರಿಕೆ ಹಾಗೂ ಅಭಿವೃದ್ಧಿ ಯೋಜನೆಗಳನ್ನು ನಿಷೇಧಿಸಲಾಗಿದೆ. ಯಾವುದೇ ಅಂಕಿಅಂಶವಿಲ್ಲದೆ ಚಿರತೆಗಳ ಸೀಮಿತ ಸಂಖ್ಯೆಗೆ ಅಭಿವೃದ್ಧಿ ಯೋಜನೆಗಳನ್ನು ಕಾರಣವಾಗಿ ನೀಡುವುದರ ಔಚಿತ್ಯವಾದರೂ ಏನು..?
  2. ೨೦೧೪ ರಲ್ಲಿ ನಡೆಸಿದ ಗಣತಿಯ ಪ್ರಕಾರ ದೇಶದಲ್ಲಿ ೧೨ ರಿಂದ ೧೪ ಸಾವಿರ ಚಿರತೆಗಳಿವೆಯೆಂದು ಹೇಳಲಾಗಿದೆ. ೨೦೧೮ ರಲ್ಲಿ ನಡೆಸಿದ ಚಿರತೆ ಗಣತಿಯ ಫಲಿತಾಂಶವಿನ್ನೂ ಹೊರಬಂದಿಲ್ಲ. ೨೪,೦೦೦ ಕಿಮೀ ಪ್ರದೇಶದಲ್ಲಿ ನಡೆಸಿದ ಈ ಅಧ್ಯಯನದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳ, ಸಹಜ ಸಾವು, ಮಾನವ ಸಂಘರ್ಷದ ಕಾರಣಕ್ಕೆ ಸಾವು ಮತ್ತಿತರ ಯಾವುದೇ ಅಂಕಿಅಂಶಗಳನ್ನು ನೀಡಿಲ್ಲ. ಹೀಗೆ ಈ ಅಧ್ಯಯನದ ಫಲಿತಾಂಶವು ವನ್ಯಜೀವಿಗಳ ಬಗ್ಗೆ ತಿಳಿಹೇಳುವ ಸಾಮಾನ್ಯ ಮಾಹಿತಿಯಂತಿದೆ. ಅಧ್ಯಯನದ ಫಲಿತಾಂಶದಲ್ಲಿ ಯಾವುದೇ ನಿಖರತೆ, ಮೊನಚು ಹಾಗೂ ಉಪಯುಕ್ತತೆ ಇಲ್ಲವಾಗಿದೆ.

 

 

 

Leave a Reply

Your email address will not be published.