ಬೆಳದಿಂಗಳಲ್ಲಿ ರಮ್ಯಲೋಕ

ದು ನಟರಾಜ್ ಹುಳಿಯಾರ್ ಅವರ ಮೊದಲ ಕಾದಂಬರಿ. ಮೂರು ದಶಕಗಳ ಹಿಂದಿನ ಈಸ್ಟ್‍ಮನ್ ಕಲರ್ ಸಿನೇಮಾದಂತೆ ಸುರಳಿಸುರಳಿಯಾಗಿ ಬೆಚ್ಚಗೆ ಬಿಚ್ಚಿಕೊಳ್ಳುತ್ತ, ರಮ್ಯವೆನಿಸುತ್ತಲೇ ಓದಿಸಿಕೊಂಡು ಹೋಗುವ ಈ ಕಾದಂಬರಿ, ಪ್ರತಿ ಅಧ್ಯಾಯದ ಮುಕ್ತಾಯದಲ್ಲೂ ಮುಂಬರುವ ಅಧ್ಯಾಯದ ಆರಂಭದ ಕುತೂಹಲವನ್ನು ಓದುಗನಲ್ಲಿ ಕಾಪಿಡುವ ಗುಣದೊಂದಿಗೆ ಮುಂದೆ ಸಾಗುತ್ತದೆ. ಎಲ್ಲೂ ಯಾಕೋ ಈ ಅಧ್ಯಾಯ ತುಸು ಬೋರ್ ಆಯಿತು, ಜಂಪ್ ಮಾಡಿ ಮುಂದೆ ಹೋಗುವಾ ಎಂಬ ಭಾವ ಬರದಂತೆ ಪಾತ್ರ ಪೋಷಣೆ, ನಿರೂಪಣೆ, ಸನ್ನಿವೇಶ ಸಮನ್ವಯ, ತಂತ್ರಗಾರಿಕೆಯ ಕುಶಲತೆಯನ್ನು ಕಾದಂಬರಿಕಾರ ಅತ್ಯಂತ ಜಾಗೃತವಾಗಿ ಸಂಪೆಷಿಸಿದ್ದಾರೆ. ಕಾದಂಬರಿಯೊಂದರ ಸಣ್ಣಪುಟ್ಟ ಮಿತಿಗಳನ್ನು ಮೀರಿ, ಒಟ್ಟು ಸಾರ್ಥಕತೆಯನ್ನು ತೋರಬೇಕಾದ ಗುಣಗೌರವ ಅಡಕವಾದದ್ದೇ ಈ ಬಗೆಯ ಕಸಬುದಾರಿಕೆಯಲ್ಲಿ ಎನ್ನಬೇಕು.

ಯಾವುದೇ ಒಂದು ಕಾದಂಬರಿ, ಕತೆ, ನಾಟಕದ ಪಾತ್ರಗಳು ಯಾರೇ ಆ ಕೃತಿಯನ್ನು ಓದಿದಾಗಲೂ ಅಲ್ಲಿ ಸುತ್ತಿ ಸುಳಿಯುವ ಪಾತ್ರ ಮತ್ತು ಸನ್ನಿವೇಶಗಳು ತನ್ನ ಕಡೆಗೆ ಬೆರಳು ಮಾಡುತ್ತಿವೆಯಲ್ಲ..! ಎನ್ನುವ ಬೆರಗು ಮೂಡಿಸುವ ಪರಿಯೇ ಉತ್ತಮ ಕೃತಿಯೊಂದರ ಗುಣ ಲಕ್ಷಣ. ಈ ಕಾದಂಬರಿಯಲ್ಲಿ ಬರುವ ವೆಂಕಟೇಶ ಚಿತ್ರಮಂದಿರ, ಡಾ.ರಾಜಕುಮಾರ ಸಿನಿಮಾ, ಚಂದ್ರು, ನೀಲಕಂಠಸ್ವಾಮಿ, ಪಾದ್ರಿ ಪಾಲಣ್ಣ, ರಾಜಣ್ಣ, ಚಿನ್ನವ್ವ, ಶಾಂತಕ್ಕ, ಕಮಲಿ, ಭಾರತಿ, ರಾಮದಾಸ್ ಮೇಷ್ಟ್ರು, ಹುಶೇನಸಾಬ್, ಲಾಲಚಂದ್, ರಾಮಚಂದ್, ಹಾಲಕ್ಕಿ ರಾಮಯ್ಯ, ಫೆಮಿನಿಸ್ಟ್ ರಾಧಾ, ಈ ಮುಂತಾದ ಪಾತ್ರಗಳು ನಮ್ಮ ಬಾಲ್ಯದಲ್ಲಿ ನಮ್ಮ ಕಣ್ಣಳತೆಯಲ್ಲಿಯೇ ಗಿರಕೀ ಹೊಡೆದಂತೆ ಭಾಸವಾಗುತ್ತವೆ; ಹಾಗೆ ಬಿಂಬಿತವಾಗುವಲ್ಲಿಯೇ ಕಾದಂಬರಿಕಾರನ ಕ್ರಿಯಾಶೀಲತೆ ಅಡಕವಾಗಿದೆ.

‘ದೇವರ ಗೆದ್ದ ಮಾನವ’ ಸಿನಿಮಾ ಸಾಯೋದರೊಳಗೆ ನೋಡಬೇಕೆಂದು ಹಂಬಲಿಸುವ ಶಾಂತಕ್ಕ, ಆ ಕಾಲದ ಸಿನಿಮಾಗಳ ಉದಾತ್ತತೆಯ ಜೊತೆಜೊತೆಗೆ ಜನಸಾಮಾನ್ಯನ ಸಹಜ ಕನಸು, ಹಂಬಲವನ್ನು ಅಲ್ಲಿ ಕಾದಂಬರಿಕಾರ ಸಮೀಕರಿಸಿದ್ದಾರೆ. ವೆಂಕಟೇಶ್ವರ ಟೂರಿಂಗ್ ಟಾಕೀಜ್ ಕೇವಲ ಒಂದು ಸಿನಿಮಾ ಥಿಯೇಟರ್ ಮಾತ್ರವಾಗಿರದೇ ಆ ಕಾಲದ, ಊರ ಜನತೆಯ ಲವಲವಿಕೆಯನ್ನು ಕಾದಿಡುವ ತಾಣವಾಗಿರುತ್ತಿತ್ತು.

ಚಂದ್ರ ಮೈಸೂರಿಗೆ ಓದಲು ಹೋದ ನಂತರ ಕತೆ ಮಗ್ಗಲು ಬದಲಾಯಿಸಿದರೂ ಓದುಗರ ರಸಸ್ವಾದಕ್ಕೆ ಭಂಗ ಬರದಂತೆ ಸಾಗಿಕೊಂಡು ಹೋಗುತ್ತದೆ. ಕಾದಂಬರಿಯ ಭಾಷೆ ಮತ್ತು ಚಿತ್ರಕಶಕ್ತಿಯ ಸತ್ವವೇ ‘ಕಾಮನ ಹುಣ್ಣಿಮೆ’ಯ ಶಕ್ತಿಯೂ ಹೌದು. ಹುಣ್ಣಿಮೆಯ ದಿನವೇ ಚಂದ್ರನ ಮದುವೆ. ಹಾಗೆ ನೋಡಿದರೆ ಅದೊಂದು ಆದರ್ಶ ಮದುವೆ. ಕೇವಲ 10-12 ಜನ ಸೇರುವ, ಮಂತ್ರಮಾಂಗಲ್ಯದ ಮದುವೆ.

ಭಾರತಿ ಎಂಬ ವಿಧವೆಯನ್ನು ಮದುವೆಯಾಗುವ ತೀರ್ಮಾನದ ಹಿಂದೆಯೂ ಒಂದು ಮೌಲ್ಯವಿದೆ. ಚಂದ್ರು ತಂದೆ ಮಿಲಿಟರಿಯಿಂದ ಹಿಂತಿರುಗಿ ಬರುವುದೇ ಇಲ್ಲ. ಆತ ಬಂದೇಬರುತ್ತಾನೆಂಬ ಭರವಸೆ ಕೊಡುವವರ ನಡುವೆ ನೀಲಕಂಠಸ್ವಾಮಿಯೂ ಒಬ್ಬ. ಆತ ಚಂದ್ರು ಕುಟುಂಬದೊಂದಿಗೆ ಆರಂಭದಿಂದಲೂ ಒಡನಾಟ ಹೊಂದಿದವನು. ಈ ಸ್ವಾಮಿ ಮುಂದೆ ಸಂಶೋಧನೆ ಮಾಡಿ ಡಾ.ನೀಲಗಂಗಯ್ಯ ಆದದ್ದು, ಶಾಂತಕ್ಕನಿಗೆ ಬಾಳು ಕೊಡಲು ಮುಂದಾದದ್ದು ಕಾದಂಬರಿಯ ಮಹತ್ವದ ತಿರುವು.

ಕಾದಂಬರಿಯ ಕೊನೆಯ ಈ ಸಾಲುಗಳು ಕಾದಂಬರಿಯ ಒಟ್ಟು ಪರಿಣಾಮ ಮತ್ತು ಸಾರ್ಥಕತೆಯನ್ನು ಅನಾವರಣಗೊಳಿಸುತ್ತವೆ. ‘ತಾನು ಮೈಸೂರಿನ ಹೊರವಲಯದಲ್ಲಿ ಹಿಡಿದಿರುವ ಪುಟ್ಟ ಬಾಡಿಗೆ ಮನೆಯಲ್ಲಿ ಭಾರತಿ ಮತ್ತು ಅವಳ ಪುಟ್ಟ ಮಗಳೊಡನೆ ಇಷ್ಟರಲ್ಲೇ ಹೂಡಲಿರುವ ಸಂಸಾರಕ್ಕಿಂತ, ಕುವೆಂಪು ನಗರದಲ್ಲಿ, ನೀಲಗಂಗಯ್ಯನವರ ಮನೆಯಲ್ಲಿ ಮುಂದೆ ಎಂದಾದರೊಂದು ದಿನ ಹೂಡಬಹುದಾದ ಅವ್ವನ ಹೊಸ ಸಂಸಾರದ ಸಡಗರವೇ ಚಂದ್ರನೊಳಗೆ ಉಕ್ಕಿಉಕ್ಕಿ ಹರಿಯತೊಡಗಿತು’.

ಕಾಮನ ಹುಣ್ಣಿಮೆ
ನಟರಾಜ್ ಹುಳಿಯಾರ್
ಪುಟ: 218, ಬೆಲೆ: ರೂ.180
ಪಲ್ಲವ ಪ್ರಕಾಶನ
ಚನ್ನಪಟ್ಟಣ, ವಯಾ ಎಮ್ಮಿಗನೂರು
ಬಳ್ಳಾರಿ-583113. ದೂ: 9480353507

Leave a Reply

Your email address will not be published.