ಕಾಯುವ ನಾಯಿ ಬೊಗಳುವುದು ಮರೆತರೇ…!

ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸ್ವತಂತ್ರ ಮಾಧ್ಯಮಕ್ಕೆ ಹಾಗೂ ಆ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚಿನ ಹೊಡೆತ ಬಿದ್ದಿದೆ. ಈ ಬಗ್ಗೆ ಅನೇಕ ನಿದರ್ಶನಗಳಿವೆ.

-ಎಂ.ಕೆ.ಆನಂದರಾಜೇ ಅರಸ್

ಕೋವಿಡ್ ಎರಡನೆಯ ಅಲೆ ದೇಶದಲ್ಲಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಭಾರತ ಸರ್ಕಾರದ ನಾಯಕತ್ವವನ್ನು ಅತ್ಯಂತ ಮೊನಚಾಗಿ ಟೀಕಿಸುವ ವರದಿಗಳು ಮೊದಲು ವಿದೇಶಿ ಮಾಧ್ಯಮಗಳಲ್ಲಿ ಪ್ರಕಟಗೊಂಡವು. ಪಾಶ್ಚಿಮಾತ್ಯ ಉದಾರವಾದಿ ಲೇಖಕರಿಗೆ ಮೋದಿಯವರನ್ನು ಟೀಕಿಸುವುದೇ ಒಂದು ಅಭ್ಯಾಸ, ರಾಣಾ ಅಯೂಬ್, ಸ್ವಾತಿ ಚತುರ್ವೇದಿಯಂತಹ ಲೇಖಕರು ಮೋದಿಯ ಮೇಲೆ ಹೊರ ದೇಶಗಳ ಪತ್ರಿಕೆಗಳ ಮೂಲಕ ಆಕ್ರಮಣ ಮಾಡುತ್ತಿದ್ದಾರೆ ಎಂದು ವಾದಿಸಿದರು ಬಿಜೆಪಿ ವಕ್ತಾರರು ಹಾಗೂ ಆ ಪಕ್ಷದ ಬಗ್ಗೆ ಸಹಾನುಭೂತಿಯುಳ್ಳ ಲೇಖಕರು. ಆದರೆ ಈ ಬಾರಿ ಅಂತಾರಾಷ್ಟ್ರೀಯ ವರದಿಗಳು ಹಾಗೂ ಲೇಖನಗಳು ಉದಾರವಾದಿ-ಬಲಪಂಥೀಯ ಸೈದ್ಧಾಂತಿಕ ಹೋರಾಟದ ಗೆರೆಗಳನ್ನು ದಾಟಿ, ಟೀಕೆಗಳು ವ್ಯಾಪಕವಾಗಿದ್ದುದು ಸ್ಪಷ್ಟವಾಗಿತ್ತು.

ಆಸ್ಟ್ರೇಲಿಯಾ ಮೂಲದ `ದಿ ಆಸ್ಟ್ರೇಲಿಯನ್’ ದಿನಪತ್ರಿಕೆಯಲ್ಲಿ ಮೋದಿ ಭಾರತವನ್ನು ವೈರಲ್ ವಿನಾಶದತ್ತ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬರ್ಥದ ಶೀರ್ಷಿಕೆಯಡಿ, ಭಾರತದಲ್ಲಿ ಉಂಟಾಗಿರುವ ಈ ಮಹತ್ತರ ಬಿಕ್ಕಟ್ಟನ್ನು ಸೃಷ್ಟಿಸುವಲ್ಲಿ ಅಹಂಕಾರ, ಹೈಪರ್-ರಾಷ್ಟ್ರೀಯತೆ ಹಾಗೂ ಅಧಿಕಾರಶಾಹಿ ಅದಕ್ಷತೆಗಳು ಒಟ್ಟುಗೂಡಿವೆ ಎಂದು ಭಾರತದ ಪರಿಸ್ಥಿತಿಯನ್ನು ಬಣ್ಣಿಸಲಾಯಿತು. ಫಿಲಿಪ್ ಶೆರ್ವೆಲ್ ಅವರ ಈ ಲೇಖನವು ‘ದಿ ಟೈಮ್ಸ್’ ಪತ್ರಿಕೆಯಲ್ಲಿ ಏಪ್ರಿಲ್ 25 ರಂದು ಮೊದಲು ಪ್ರಕಟವಾಗಿ ನಂತರ ‘ದಿ ಆಸ್ಟ್ರೇಲಿಯನ್’ ದಿನಪತ್ರಿಕೆಯಲ್ಲಿ ಮರುಪ್ರಕಟವಾಗಿತ್ತು.

ದಿ ವಾಷಿಂಗ್‍ಟನ್ ಪೆÇೀಸ್ಟ್‍ನ ತಲೆಬರಹವೊಂದು ‘ಭಾರತದ ವಿನಾಶಕಾರಿ ಕೊರೋನವೈರಸ್ ಅಲೆಯಲ್ಲಿ ಮೋದಿಯ ಬಗ್ಗೆ ಕೋಪ ಹೆಚ್ಚಾಗುತ್ತಿದೆ’ ಎಂದು ಹೇಳಿತು. ಈ ಎಲ್ಲಾ ಶೀರ್ಷಿಕೆಗಳಲ್ಲಿ ಗಮನಿಸಬೇಕಾದ ಅಂಶವೆಂದರೆ, ಅವುಗಳಲ್ಲಿ ಮೋದಿಯ ಹೆಸರನ್ನು ಉಲ್ಲೇಖಿಸಿ ಮೋದಿಯೇ ದೇಶದ ನಾಯಕರಾಗಿರುವುದರಿಂದ ಅವರೇ ಇದಕ್ಕೆಲ್ಲಾ ಹೊಣೆ ಎಂದು ಹೇಳುತ್ತ ಯಾವುದೇ ಮುಲಾಜಿಲ್ಲದೇ ಉತ್ತರದಾಯಿಕತ್ವದ ಪ್ರಶ್ನೆ ಎತ್ತಲಾಗಿತ್ತು. ಈ ಮಾಧ್ಯಮಗಳ ಮೇಲೆ ನಾವು ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲವಾದುದ್ದರಿಂದ ಅವು ಯಾವುದೇ ಭೀತಿಯಿಲ್ಲದೆ ಬರೆಯುತ್ತವೆ ಎಂದು ನಾವು ಹೇಳಬಹುದು. ಭಾರತದ ಮಾಧ್ಯಮಗಳಲ್ಲಿ ಇಷ್ಟು ನೇರವಾಗಿ, ಆಕ್ರಮಣಕಾರಿಯಾಗಿ ಉತ್ತರದಾಯಿಕತ್ವದ ಪ್ರಶ್ನೆಯನ್ನು ಮುಖ್ಯವಾಹಿನಿಯಲ್ಲಿರುವ ಮಾಧ್ಯಮಗಳು ಸರ್ಕಾರದ ಬಗ್ಗೆ ಎತ್ತಿರುವ ಪ್ರಸಂಗಗಳು ಬಹಳ ವಿರಳವಾಗಿವೆ.

ರಾಜದೀಪ್ ಸರದೇಸಾಯಿ

ದಿ ಆಸ್ಟ್ರೇಲಿಯನ್ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನಕ್ಕೆ ಅಸಮಾಧಾನದಿಂದ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾದಲ್ಲಿನ ಭಾರತದ ಡೆಪ್ಯುಟಿ ಹೈಕಮೀಷನರ್ ಪಿ.ಎಸ್.ಕಾರ್ತಿಗೇಯನ್ ಆ ಪತ್ರಿಕೆಯ ಮುಖ್ಯ ಸಂಪಾದಕ ಕ್ರಿಸ್ಟೋಫರ್ ಡೋರ್ ಅವರನ್ನು ದೂಷಿಸುತ್ತಾ ಕೋವಿಡ್ ಪಿಡುಗಿನೊಂದಿಗಿನ ಹೋರಾಟದಲ್ಲಿ ಸಾರ್ವತ್ರಿಕವಾಗಿ ಮೆಚ್ಚುಗೆ ಪಡೆದಿರುವ ಭಾರತ ಸರ್ಕಾರದ ವಿಧಾನವನ್ನು ಕಡೆಗಣಿಸುವುದೇ ಆ ಲೇಖನದ ಏಕಮಾತ್ರ ಉದ್ದೇಶವಾಗಿದೆ ಎಂದು ಹೇಳಿದರು. ಆ ಪತ್ರಿಕೆಗೆ ಬರೆದ ಆಕ್ಷೇಪಣಾ ಪತ್ರದಲ್ಲಿ ಭಾರತ ಸರ್ಕಾರವು ಕಳೆದ ವರ್ಷ ಮಾರ್ಚ್ ಲಾಕ್‍ಡೌನ್‍ನಿಂದ ಈವರೆಗೆ ಕೊರೋನಾ ಪಿಡುಗಿನ ವಿರುದ್ಧ ತೆಗೆದುಕೊಂಡಿರುವ ಕ್ರಮಗಳನ್ನು ಉಲ್ಲೇಖಿಸಿತು.

ಇಂತಹ ಆಕ್ಷೇಪಣೆಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮ ವಲಯಗಳಲ್ಲಿ ಕವಡೆ ಕಿಮ್ಮತ್ತಿಲ್ಲ ಎಂಬುದನ್ನು ಭಾರತದ ನಾಯಕತ್ವ ಅರಿಯಬೇಕು. ಅಮೆರಿಕಾದ ಹಾಗೂ ಯೂರೋಪಿನ ಪತ್ರಿಕೆಗಳಲ್ಲಿ, ಭಾರತದ ಕೋವಿಡ್ ಎರಡನೆಯ ಅಲೆಯ ನಿರ್ವಹಣೆಯನ್ನು ಅತ್ಯಂತ ಕಟುವಾಗಿ ಟೀಕಿಸುವ ಲೇಖನಗಳು ಪ್ರಕಟವಾದವು. ಭಾರತದೊಳಗೆ ಮಾಧ್ಯಮದ ಮೇಲೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಾಕಷ್ಟು ನಿಯಂತ್ರಣ ಸಾಧಿಸಿರುವ ಮೋದಿ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾನು ಯಾವುದೇ ಪ್ರಭಾವವನ್ನು ಬೀರಲು ಸಾಧ್ಯವಿಲ್ಲ ಎಂಬುದು ತಿಳಿದಿರಬೇಕು.

ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಕೋವಿಡ್ ಎರಡನೇ ಅಲೆಗೆ ಸಂಬಂಧಿದಂತೆ ಪ್ರಕಟವಾದ ಲೇಖನಗಳು ಮೋದಿ ಕಳೆದ ಏಳು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಕಟ್ಟಿಕೊಂಡಿದ್ದ ವರ್ಚಸ್ಸಿನ ಕೋಟೆಗೆ ದಕ್ಕೆ ಮಾಡಿವೆ. ಬಹುತೇಕ ಲೇಖನಗಳಲ್ಲಿ ಭಾರತದಲ್ಲಾಗುತ್ತಿರುವ ದುರಂತಕ್ಕೆಮೋದಿಯವರನ್ನು ನೇರವಾಗಿ ದೂರಲಾಗಿತ್ತು. ಇಂತಹ ಟೀಕೆಗಳಿಗೆ ಉತ್ತರ ನೀಡುವ ಹಾಗೂ ತನ್ನ ನಿಲುವುಗಳನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ಸರ್ಕಾರ ಈಗ ದೂರದರ್ಶನದ ಅಂತಾರಾಷ್ಟ್ರೀಯ ಸಂಚಿಕೆಯನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳುತ್ತಿದೆ. ಆದರೆ ಅಂತಹ ಪ್ರಯತ್ನದಿಂದ ಜಾಗತಿಕ ಮಟ್ಟದಲ್ಲಿ ಸ್ವತಂತ್ರ ಮಾಧ್ಯಮದ ವರದಿಗಳನ್ನಾಗಲಿ, ಅಭಿಪ್ರಾಯಗಳನ್ನಾಗಲಿ ಮೊಂಡು ಮಾಡಲು ಸಾಧ್ಯವಿಲ್ಲ.

ದೂರದರ್ಶನ ಅಂತಾರಾಷ್ಟ್ರೀಯ ಸಂಚಿಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಈ ವಾಹಿನಿಯನ್ನು ಬಿಬಿಸಿ ವರ್ಲ್ಡ್ ಸರ್ವೀಸ್ ಹಾಗೂ ಆಲ್-ಜಜೀರಾ ಮಾದರಿಯಲ್ಲಿ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಆದರೆ ಬಿಬಿಸಿ ವರ್ಲ್ಡ್ ಸರ್ವೀಸ್ ಸ್ವತಂತ್ರ ಸಂಸ್ಥೆಯಾಗಿದ್ದು ಅಲ್ಲ್ಲಿ ಯಾವುದೇ ಸರ್ಕಾರಿ ಹಸ್ತಕ್ಷೇಪವಿರುವುದಿಲ್ಲ. ಆಲ್-ಜಜೀರಾ ಮೀಡಿಯಾ ನೆಟ್‍ವರ್ಕ್ ಸ್ವತಂತ್ರ ಮಾಧ್ಯಮ ಸಂಸ್ಥೆಯಾಗಿದ್ದು ಕಟಾರ್ ಸರ್ಕಾರ ಸ್ವಲ್ಪ ಪಾಲುಗಾರಿಕೆ ಹೊಂದಿದೆ. ಈ ವಾಹಿನಿ ಮಾಡಿಕೊಂಡಿರುವ ಒಂದು ಒಪ್ಪಂದದ ಪ್ರಕಾರ ಸೌದಿ ಅರೇಬಿಯಾ ಸರ್ಕಾರದ ವಿರುದ್ಧ ಅಸಮಾಧಾನಗಳನ್ನು ವ್ಯಕ್ತಪಡಿಸುವಂತಿಲ್ಲ. ಒಂದು ಮಾಧ್ಯಮ ಸರ್ಕಾರದ ಹಿಡಿತದಲ್ಲಿದ್ದಾಗ ಅದು ಸರ್ಕಾರದ ಪ್ರಚಾರ ಸಾಧನವಾಗುವುದರಲ್ಲಿ ಕಿಂಚಿತ್ತು ಸಂದೇಹವಿಲ್ಲ. ವಸ್ತುನಿಷ್ಠ ವರದಿಗಳು ಒಂದು ಮಾಧ್ಯಮದ ಕೇಂದ್ರ ಶಕ್ತಿಯಾಗದಿದ್ದಾಗ ಅದಕ್ಕೆ ಯಾವುದೇ ಬೆಲೆಯೂ ಇರುವುದಿಲ್ಲ.

ಅಂತಾರಾಷ್ಟ್ರೀಯ ಮಾಧ್ಯಮಗಳ ಮುಕ್ತ ಟೀಕಾಪ್ರಹಾರಗಳ ಹಿನ್ನೆಲೆಯಲ್ಲಿ ಏಳುವ ಪ್ರಶ್ನೆ ಭಾರತದ ಮಾಧ್ಯಮಗಳಲ್ಲಿ ಈ ತೀಕ್ಷ್ಣತೆಯಾಗಲಿ ಅಥವಾ ಧೈರ್ಯವಾಗಲಿ ಏಕಿಲ್ಲ, ಅಂತಹ ಭೀತಿ ಪರಿಸ್ಥಿತಿ ನಿರ್ಮಾಣವಾಗಿದೆಯೇ, ನಮ್ಮ ಮಾಧ್ಯಮಗಳು ಹೇಡಿಗಳೇ, ಸ್ವತಂತ್ರ ಮಾಧ್ಯಮಗಳು ಎಷ್ಟರ ಮಟ್ಟಿಗೆ ಕುಸಿದಿವೆ ಮತ್ತು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಇದು ಎಷ್ಟರ ಮಟ್ಟಿಗೆ ಅಪಾಯ ಒಡ್ದುತ್ತಿದೆ ಎಂಬುದಾಗಿರುತ್ತದೆ.

ಯಾವುದೇ ಮಾಧ್ಯಮದ ಸಂಪಾದಕನಿಗೆ ಅಥವಾ ಮಾಲೀಕನಿಗೆ ಸೈದ್ಧಾಂತಿಕವಾಗಿಯೋ, ರಾಜಕೀಯವಾಗಿಯೋ ಅಥವಾ ಆರ್ಥಿಕವಾಗಿಯೋ ಒಂದು ನಿಷ್ಠೆಯಿರುತ್ತದೆ. ಕೆಲವೊಮ್ಮೆ ಇವೆಲ್ಲಾ ಕೂಡಿಕೊಂಡಿರುತ್ತವೆ. ಇಲ್ಲಿ ಸ್ವತಂತ್ರ ಮಾಧ್ಯಮಗಳು ಎಲ್ಲಿವೆ ಎಂಬ ಪ್ರಶ್ನೆ ಏಳುತ್ತದೆ. ನಾರದ ಟೇಪ್ ಹಗರಣವನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಿ. ತೆಹೆಲ್ಕಾ ಜಾಲತಾಣವು 2014ರಲ್ಲಿ ಈ ಸ್ಟಿಂಗ್ ಕಾರ್ಯಾಚರಣೆಗೆ ಮುಂದಾದಾಗ ಆ ಪತ್ರಿಕೆಯ ಅಂದಿನ ನಿರ್ವಾಹಕ ಸಂಪಾದಕ ಮ್ಯಾಥಿವ್ ಸಾಮ್ಯುಯೆಲ್ ಅವರಿಗೆ ಆರಂಭದಲ್ಲಿ ತೆಹೆಲ್ಕಾ ಜಾಲತಾಣದಲ್ಲಿ ಪಾಲುದಾರಿಕೆ ಹೊಂದಿದ್ದ ಹಾಗೂ ಅಂದು ಟಿಎಂಸಿ ಪಕ್ಷದಿಂದ ಸಂಸತ್ ಸದಸ್ಯರಾಗಿದ್ದ ಕೆ.ಡಿ.ಸಿಂಗ್ ಅವರ ಬೆಂಬಲವಿರುತ್ತದೆÉ. ಆದರೆ ಕಾರ್ಯಾಚರಣೆ ಮುಗಿದಾಗ, ಆ ಹಗರಣದ ಬಯಲಿನಿಂದುಂಟಾಗಬಹುದಾದ ರಾಜಕೀಯ ಪರಿಣಾಮಗಳ ಬಗ್ಗೆ ಯೋಚಿಸುವ ಕೆ.ಡಿ.ಸಿಂಗ್ ಅದರ ಪ್ರಕಟಣೆಗೆ ಮುಂದಾಗುವುದಿಲ್ಲ.

ನವೀಕಾ ಕುಮಾರ್

ನಂತರ ಈ ಟೇಪ್‍ಗಳ ಬಯಲಿಗೆ ಬೇರೆಲ್ಲೂ ಅವಕಾಶ ಸಿಗದಿದ್ದಾಗ ಸಾಮ್ಯುಯೆಲ್ ನಾರದ ನ್ಯೂಸ್ ಎಂಬ ಜಾಲತಾಣ ಸೃಷ್ಟಿಸಿ ಅದರಲ್ಲಿ ಪ್ರಕಟಿಸುತ್ತಾರೆ. ಟಿಎಂಸಿ ಪಕ್ಷವನ್ನೇ ಏಕೆ ಆಯ್ಕೆಮಾಡಿಕೊಂಡಿರಿ ಎಂದು ಕೇಳುವ ಪ್ರಶ್ನೆಗೆ ಅವರು, ‘ಆಪರೇಷನ್ ವೆಸ್ಟ್‍ಎಂಡ್ ಒಳಗೊಂಡಂತೆ ನಮ್ಮ ಬಹುತೇಕ ಸ್ಟಿಂಗ್ ಕಾರ್ಯಾಚರಣೆಗಳು ಬಿಜೆಪಿಯ ವಿರುದ್ಧವೇ ಆಗಿದ್ದವು. ಈಗಲೂ ಅದನ್ನೇ ಮಾಡಿದರೆ ನಾವು ಒಂದು ಮಾಧ್ಯಮವಾಗಿ ಬಿಜೆಪಿಯ ವಿರುದ್ಧವೇ ಯಾವಾಗಲೂ ಕಾರ್ಯಾಚರಣೆಗಳನ್ನು ಮಾಡುತ್ತಿದ್ದೇವೆ ಎಂಬ ಅಭಿಪ್ರಾಯ ಬರುತ್ತಿತ್ತು. ಆದ್ದರಿಂದ ಬಿಜೆಪಿಯೇತರ ಪಕ್ಷದ ಮೇಲೆ ಮಾಡಲು ನಿರ್ಧರಿಸಿದೆವು’ ಎಂದು ಹೇಳುತ್ತಾರೆ. ಆದರೆ ಕಾರ್ಯಾಚರಣೆಯ ಸಮಯ ಹಾಗೂ ಆ ಟೇಪ್‍ಗಳನ್ನು 2016ರ ಪಶ್ಚಿಮ ಬಂಗಾಳದ ಚುನಾವಣೆಗೂ ಮುನ್ನ ಬಿಡುಗಡೆ ಮಾಡುವುದರ ಬಗ್ಗೆ ಪ್ರಶ್ನೆಗಳು ಏಳುತ್ತವೆ.

ಇಂಡಿಯನ್ ಎಕ್ಸಪ್ರೆಸ್ ದೇಶ ಕಂಡ ಅತ್ಯಂತ ನಿರ್ಭೀತ ಸ್ವತಂತ್ರ ದಿನಪತ್ರಿಕಾ ಸಮೂಹ. ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದು ನಿಂತ ಪತ್ರಿಕೆ. ಇಂದಿರಾಗಾಂಧಿಯ ಬೆದರಿಕೆಗೆ ಸೊಪ್ಪು ಹಾಕದೆ ತುರ್ತುಪರಿಸ್ಥಿತಿಯನ್ನು ನಿರಂತರವಾಗಿ ಈ ಪತ್ರಿಕೆಯಲ್ಲಿ ಟೀಕಿಸಲಾಗುತ್ತದೆ. ಇಂಡಿಯನ್ ಎಕ್ಸಪ್ರೆಸ್ ಅನ್ನು ಮಟ್ಟಹಾಕಲು ಸರ್ಕಾರ ನಿರಂತರವಾಗಿ ಒಂದಲ್ಲಾ ಒಂದು ಕಿರುಕುಳದ ಮೂಲಕ ಒತ್ತಡ ಹೇರುತ್ತದೆ. ಆದರೆ ಯಾವುದಕ್ಕೂ ಮಣಿಯದ ಪತ್ರಿಕೆಯ ಮಾಲೀಕ ರಾಮನಾಥ್ ಗೊಯೆಂಕಾ ತಮ್ಮ ಪತ್ರಿಕೆಯ ನಿಷ್ಠುರ, ವಸ್ತುನಿಷ್ಠ ಲೇಖನಗಳ ಮೂಲಕ ಇಂದಿರಾ ನೇತೃತ್ವದ ಕಾಂಗ್ರೆಸ್‍ನ ಅಕ್ರಮಗಳನ್ನು ಹೊರತರುತ್ತಾರೆ ಹಾಗೂ 1977ರ ಚುನಾವಣೆಯ ಇಂದಿರಾ ಸೋಲಿನಲ್ಲಿ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ಪಾತ್ರವು ಗಮನಾರ್ಹವಾಗಿರುತ್ತದೆ.

ಇಂಡಿಯನ್ ಎಕ್ಸ್‍ಪ್ರೆಸ್ ಹಾಗೂ ಗೊಯೆಂಕಾ ಅವರನ್ನು ಸ್ವತಂತ್ರ ಭಾರತದ ಸ್ವತಂತ್ರ ಮಾಧ್ಯಮದ ಪ್ರವರ್ತಕರೆಂದು ಕರೆಯಬಹುದು. ಪ್ರಜಾಪ್ರಭುತ್ವದ ಉಳಿವಿಗೆ ಮಾಧ್ಯಮದ ಪಾತ್ರ ಎಂತಹದು ಎಂಬುದನ್ನು ಇಡೀ ದೇಶಕ್ಕೆ ಗೊಯೆಂಕಾ ಅಂದು ಸ್ಪಷ್ಟಪಡಿಸಿದರು. ಇಂದು ಗೊಯೆಂಕಾ ಹೆಸರಿನಲ್ಲಿ ಸಾಧಕ ಪತ್ರಕರ್ತರಿಗೆ ನೀಡುವ ಪ್ರಶಸ್ತಿ ದೇಶದಲ್ಲಿ ಪತ್ರಕರ್ತರಿಗೆ ನೀಡುವ ಅತ್ಯಂತ ಶ್ರೇಷ್ಠ ಪ್ರಶಸ್ತಿಯಾಗಿದೆ.

ರಾಮನಾಥ್ ಗೊಯೆಂಕಾ

ರಾಮನಾಥ್ ಗೊಯೆಂಕಾ ಅವರಷ್ಟು ದಿಟ್ಟತನ, ಛಲ, ಧೈರ್ಯವಿರುವ ಮತ್ತೊಬ್ಬ ವ್ಯಕ್ತಿಯನ್ನು ಈಗ ಕಾಣುವುದು ಹುಲ್ಲಿನ ಮೆದೆಯಲ್ಲಿ ಸೂಜಿಯನ್ನು ಹುಡುಕಿದಂತೆ. ವ್ಯವಸ್ಥೆಯ ವಿರುದ್ಧ ಸದಾ ಗುಡುಗುತ್ತಿದರು. ಪತ್ರಿಕೆಯ ಮಾಲೀಕರ ಮಟ್ಟದಲ್ಲಿ ಸರ್ಕಾರದ ವಿರುದ್ಧ, ಕಾರ್ಪೋರೇಟ್ ಅವ್ಯವಹಾರಗಳ ವಿರುದ್ಧ ಅವರಷ್ಟು ಎದೆಗಾರಿಕೆಯಿಂದ ಹೋರಾಡಿದವರು ವಿರಳ. ಇಂದು ಸಹ ಅವರ ಆದರ್ಶಗಳ ಹಾದಿಯಲ್ಲಿ ನಡೆಯುತ್ತಿರುವ ನಿರ್ಭೀತ ಪತ್ರಿಕೆ ಎಂಬ ಹೆಗ್ಗಳಿಕೆ ಇಂಡಿಯನ್ ಎಕ್ಸ್‍ಪ್ರೆಸ್‍ಗಿದೆ.

ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸ್ವತಂತ್ರ ಮಾಧ್ಯಮಕ್ಕೆ ಹಾಗೂ ಆ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚಿನ ಹೊಡೆತ ಬಿದ್ದಿದೆ. ಈ ಬಗ್ಗೆ ಅನೇಕ ನಿದರ್ಶನಗಳಿವೆ. ಕೇವಲ ಬೆರಳೆಣಿಕೆಯ ಮಾಧ್ಯಮಗಳು ಮಾತ್ರ ಸೈದ್ಧಾಂತಿಕವಾಗಿ ಸ್ವತಂತ್ರ ಮಾಧ್ಯಮದ ಲಾಂಛನವನ್ನು ಎತ್ತಿಹಿಡಿಯಲು ಸೆಣಸಾಡುತ್ತಿವೆ.

ವಿದೇಶಿ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಜಮ್ಮು ಹಾಗೂ ಕಾಶ್ಮೀರದ ಸುದ್ದಿಗೆ ಸಂಬಂಧಿಸಿದಂತೆ ಪ್ರಖ್ಯಾತ ಪತ್ರಕರ್ತ ಹಾಗೂ ಹೆಡ್‍ಲೈನ್ಸ್ ಟುಡೆಯ ರಾಜ್‍ದೀಪ್ ಸರ್ದೇಸಾಯಿ “ನಾವು ದೊಡ್ಡ ಸುದ್ದಿಗೆ ನ್ಯಾಯ ಒದಗಿಸಲಿಲ್ಲ. ನಾವು ಅಲ್ಲಿಗೆ ಹೋಗಿ ಅಲ್ಲಿರುವ ಪರಿಸ್ಥಿತಿಯನ್ನು ದಿಟ್ಟವಾಗಿ ಹಾಗೂ ಸ್ವತಂತ್ರವಾಗಿ ವರದಿ ಮಾಡಬೇಕಿತ್ತು” ಎಂದು ಹೇಳುತ್ತಾರೆ. ಮುಂದುವರೆದು “ಭಾರತದ ಬಹುತೇಕ ಮಾಧ್ಯಮ ಈಗ ವಾಚ್‍ಡಾಗ್ (ಕಾವಲು ನಾಯಿ) ಆಗಿಲ್ಲ, ಲ್ಯಾಪ್‍ಡಾಗ್ (ಮಡಿಲಿನಲ್ಲಿನ ನಾಯಿ) ಆಗಿದೆ ಎನ್ನುತ್ತಾರೆ.

ಕೆಲವು ಮಾಧ್ಯಮ ಸಂಸ್ಥೆಗಳು ಮೋದಿಯವರ ಹಿಂದೂ ರಾಷ್ತ್ರೀಯತೆಯ ಪರವಾಗಿ ಸ್ಪಷ್ಟವಾಗಿಯೇ ಗುರುತಿಸಿಕೊಂಡಿವೆ. ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಹೇಳುತ್ತಾರೆ, “ನಾವು ಭಾರತದ ಪ್ರಮುಖ ಸುದ್ದಿ ಪ್ರಸಾರಕರು. ಈ ಸಮಯದಲ್ಲಿ ತಪ್ಪುಗಳ ಮೇಲೆ ಗಮನ ಹರಿಸುವುದಕ್ಕಿಂದ ನಾವು ದೇಶದ ಸರ್ಕಾರದ ಜೊತೆ ಗಟ್ಟಿಯಾಗಿ ನಿಲ್ಲುವುದು ಮುಖ್ಯವಾಗುತ್ತದೆ.” ಅರ್ಬನ್ ಗೋಸ್ವಾಮಿ ಸರ್ಕಾರದ ಪರ ಸಹಾನುಭೂತಿಯುಳ್ಳ ಮಾಧ್ಯಮಗಳ ಮುಂಚೂಣಿಯಲ್ಲಿರುವ ಪ್ರಮುಖ ಪತ್ರಕರ್ತ.

ಟೈಮ್ಸ್ ನೌನ ನವಿಕಾ ಕುಮಾರ್ ಅಮಿತಾ ಶಾ ಅವರ ಜೊತೆ ನಡೆಸಿದ ಸಂದರ್ಶನದಲ್ಲಿ ನಿಷ್ಠುರ ಪ್ರಶ್ನೆಗಳನ್ನು ಕೇಳುವ ಬದಲು ಪೆಚ್ಚುಪೆಚ್ಚಾಗಿ ನಗುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಸಂದರ್ಭದಲ್ಲಿ ಚುನಾವಣಾ ರ್ಯಾಲಿಗಳನ್ನು ನಡೆಸಿದ್ದರ ಔಚಿತ್ಯದ ಬಗ್ಗೆ ನವಿಕಾ ಪ್ರಶ್ನಿಸಿದಾಗ ಅಮಿತ್ ಶಾ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಚುನಾವಣೆ ರ್ಯಾಲಿ ಇರಲಿಲ್ಲ, ಆದರೂ ಏಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿದೆ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ನವಿಕಾ ಕುಮಾರ್ ತಬ್ಬಿಬ್ಬಾಗಿ ಶಾಲಾ ಮಗುವಿನಂತೆ ಕಾಣುತ್ತಾರೆ. ‘ಅರೇ ಅಮಿತ್ ಶಾ, ಮಹಾರಾಷ್ಟ್ರ, ದೆಹಲಿ ಒಂದು ಕಡೆ ಬದಿಗಿಡಿ, ಪಶ್ಚಿಮ ಬಂಗಾಳದಲ್ಲಿ ಬೃಹತ್ ರ್ಯಾಲಿಗಳಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಲಕ್ಷಾಂತರ ಜನ ಭಾಗವಹಿಸಿದ್ದು ಕೋವಿಡ್ ಸೂಕ್ತ ನಡವಳಿಕೆಯಾಗಿತ್ತೆ’ ಎಂದು ಪ್ರಶ್ನಿಸಬಹುದಾಗಿತ್ತು. ದೇಶದ ಒಂದು ಪ್ರಮುಖ ಸುದ್ದಿವಾಹಿನಿಯೆಂದು ಗುರುತಿಸಿಕೊಂಡಿರುವ ಟೈಮ್ಸ್ ನೌನ ಮುಖ್ಯಸ್ಥೆ ನವಿಕಾ ಕುಮಾರ್ ದಿಟ್ಟವಾಗಿ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗದಿದ್ದರೆ ಭಾರತದಲ್ಲಿ ಸುದ್ದಿ ಮಾಧ್ಯಮ ವೆಂಟಿಲೇಟರ್‍ನಲ್ಲಿದೆ ಎಂದೇ ಹೇಳಬೇಕು.

ಮೋದಿಯವರು ಒಬ್ಬ ಪ್ರಧಾನ ಮಂತ್ರಿಯಾಗಿ ಮಾಧ್ಯಮಗಳಿಂದ ಪ್ರಶ್ನೆಗಳನ್ನು ಸ್ವೀಕರಿಸಬೇಕು. ಆದರೆ ಅವರು ಪ್ರಧಾನ ಮಂತ್ರಿಯಾದ ನಂತರ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಅತ್ಯಗತ್ಯ. ಇಂತಹದೊಂದು ಬೆಳವಣಿಗೆಯನ್ನು ಅಮೆರಿಕಾದಲ್ಲಿ, ಯು.ಕೆ. ದೇಶಗಳಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಮಾದಗಳ ಮೇಲೆ ಪ್ರಮಾದಗಳನ್ನು ಮಾಡುತ್ತಿದ್ದ ಟ್ರಂಪ್ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಹಲವಾರು ಪತ್ರಿಕಾಗೋಷ್ಠಿಯನ್ನು ನಡೆಸಿದರು. ಧೈರ್ಯದಿಂದ ಪ್ರಶ್ನೆಗಳನ್ನು ಸ್ವೀಕರಿಸಿದರು. 

ಟೀಕೆ-ವಿಮರ್ಶೆಗಳಿಗೆ ಸೈರಣೆಯನ್ನು ಹೊಂದಿಲ್ಲದ ಕೇಂದ್ರ ಸರ್ಕಾರ ಮಾಧ್ಯಮಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಹಾಗೂ ನಿಷ್ಪಕ್ಷಪಾತವಾಗಿರುವ ಸ್ವತಂತ್ರ ಮಾಧ್ಯಮವನ್ನು ಹತ್ತಿಕ್ಕಲು ತನ್ನ ಅಧಿಕಾರ-ಪ್ರಭಾವವನ್ನು ಯಾವುದೇ ನಾಚಿಕೆಯಿಲ್ಲದೇ ಬಳಸುತ್ತಿರುವುದು ವಿಶ್ವದ ದೊಡ್ದ ಪ್ರಜಾಪ್ರಭುತ್ವವಾಗಿರುವ ಭಾರತಕ್ಕೆ ಶೋಭೆ ತರುವ ವಿಚಾರವಲ್ಲ. ಭಾರತದ ಮಾಧ್ಯಮ ಉದ್ದಿಮೆ ಬಹುಶಃ ಇಡೀ ಪ್ರಪಂಚದಲ್ಲಿಯೇ ಅತಿ ದೊಡ್ದದಾಗಿದೆ. ಸುಮಾರು 17,000ಕ್ಕೂ ಹೆಚ್ಚು ಪತ್ರಿಕೆಗಳು, 1 ಲಕ್ಷಕ್ಕೂ ಹೆಚ್ಚು ನಿಯತಕಾಲಿಕೆಗಳು, ಸುಮಾರು 200 ಸುದ್ದಿವಾಹಿನಿಗಳು ಹಾಗೂ ಅಸಂಖ್ಯಾತ ಸುದ್ದಿ ಜಾಲತಾಣಗಳಿವೆ. ಭಾರತದ ದಿನಪತ್ರಿಕೆಗಳ ಸರಾಸರಿ ಬೆಲೆ 3 ರಿಂದ 5 ರೂಪಾಯಿಗಳು. ವಿತರಣೆ ಖರ್ಚು, ಕಮಿಷನ್ ಇತ್ಯಾದಿಗಳನ್ನು ಕಳೆದರೆ ಒಂದು ಪ್ರತಿಗೆ 2 ರಿಂದ 3 ರೂಪಾಯಿಗಳು ಸಿಗಬಹುದು. ಆದರೆ 14 ರಿಂದ 24 ಬ್ರಾಡ್‍ಶೀಟ್‍ಗಳಿರುವ ದಿನಪತ್ರಿಕೆಯ ಒಂದು ಪ್ರತಿ ಹೊರತರಲು ಸುಮಾರು 6 ರಿಂದ 12 ರೂಪಾಯಿಗಳಾಗುತ್ತವೆ.

ಇದರಿಂದ ಸುದ್ದಿಪತ್ರಿಕೆಗಳು ತಮ್ಮ ಉಳಿವಿಗಾಗಿ ಜಾಹೀರಾತಿನ ಮೇಲೆ ಅವಲಂಬಿತವಾಗಿರುತ್ತವೆ. ಜಾಹೀರಾತಿನ ಮೇಲೆ ಹೆಚ್ಚು ಅವಲಂಬನೆಯಾದಂತೆಲ್ಲಾ ಈ ಪತ್ರಿಕೆಗಳಿಗೆ ಜಾಹೀರಾತು ನೀಡುವ ಕಾಪೆರ್Çೀರೇಟ್ ಹಿತಾಸಕ್ತಿಗಳಿಂದ ಸ್ವಾಯತ್ತತೆ ಸಿಗುವುದಿಲ್ಲ. ಜೊತೆಗೆ ಸರ್ಕಾರ ಸಹ ಮುಖ್ಯ ಜಾಹೀರಾತುದಾರನಾಗಿರುವುದರಿಂದ ಇಲ್ಲಿ ಪತ್ರಿಕೆಯ ಸ್ವಾಯತ್ತತೆ ಹಾಗೂ ಉಳಿವಿನ ನಡುವೆ ಸಂಘರ್ಷ ಉಂಟಾಗುತ್ತದೆ.

ಇಂತಹದೊಂದು ಪರಿಸ್ಥಿತಿ ಮೋದಿಯವರು ಪ್ರಧಾನಿಯಾದ ನಂತರ ಉದ್ಭವವಾಗಿದೆ ಎಂದು ವಾದಿಸಿದರೆ ಅದು ತಪ್ಪಾಗುತ್ತದೆ. ಹಿಂದೆಯೂ ಸಹ ಇಂತಹ ಪರಿಸ್ಥಿತಿಯಿತ್ತು. ಆದರೆ ಪ್ರಸ್ತುತ ಕೇಂದ್ರ ನಾಯಕತ್ವ ಒಂದು ಹೆಜ್ಜೆ ಮುಂದೆಯೇ ಹೋಗಿದೆ. ತನಗೆ ಒಗ್ಗದ ಸ್ವತಂತ್ರ ಮಾಧ್ಯಮಗಳನ್ನು ಅವರಿಗಿರುವ ಧನಮೂಲದ ದಾರಿಯನ್ನು ಮುಚ್ಚುವ ಮೂಲಕ ಮಣಿಸಲು ಹೆಚ್ಚು ಹೆಚ್ಚಾಗಿ ಕಾಪೆರ್Çರೇಟ್ ಸಂಸ್ಥೆಗಳ ಮೇಲೆ ಅವಲಂಬಿತವಾಗುತ್ತಿದೆ. ಭಾರತ ವಿಶ್ವದ ದೊಡ್ಡ ಪ್ರಜಾಪ್ರಭುತ್ವವೆಂದು ಪ್ರಧಾನ ಮಂತ್ರಿಯವರು ತಮ್ಮ ಭಾಷಣಗಳಲ್ಲಿ ಬಣ್ಣಿಸುತ್ತಾರೆ. ರಿಪೋಟರ್ಸ್ ವಿಥೌಟ್ ಬಾರ್ಡರ್ಸ್ ಪ್ರೆಸ್ ಫ್ರಿಡಮ್ ಇನ್‍ಡೆಕ್ಸ್‍ನಲ್ಲಿ 180 ದೇಶಗಳ ಪೈಕಿ ಭಾರತದ ಸ್ಥಾನ 140 ಕ್ಕೆ ಇಳಿದಿದೆ. ಇದು ಏನನ್ನು ಹೇಳುತ್ತದೆ ಎಂದು ಸರ್ಕಾರ ತನ್ನನ್ನು ತಾನೇ ಕೇಳಿಕೊಳ್ಳಬೇಕಾಗಿದೆ.

ಸರ್ಕಾರದ ಪರವಿರುವ ಮಾಧ್ಯಮಗಳಿಗೆ ಯಾವತ್ತೂ ಸರ್ಕಾರಿ ಜಾಹೀರಾತಿನ ಒಂದು ಪಾಲು ಹೆಚ್ಚು ಸಿಗುತ್ತಿತ್ತು. ಈ ಕಾರಣದಿಂದಲೇ ಯಾವಾಗಲೂ ಸಾಮಾನ್ಯವಾಗಿ ವ್ಯವಸ್ಥೆಯ ವಿರುದ್ಧ ನಿಲ್ಲುವ, ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಪ್ರೋತ್ಸಾಹಿಸುವ ಇಂಡಿಯನ್ ಎಕ್ಸ್‍ಪ್ರೆಸ್ ತನ್ನ ವ್ಯೂಹತಂತ್ರಗಳನ್ನೇ ಬದಲಿಸಿಕೊಳ್ಳುತ್ತದೆ. ಶೇಖರ್ ಗುಪ್ತ ಪ್ರಧಾನ ಸಂಪಾದಕರಾಗಿದ್ದಾಗ ಇಂಡಿಯನ್ ಎಕ್ಸ್‍ಪ್ರೆಸ್ ತನ್ನ ಪ್ರಸರಣ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುತ್ತದೆ. ಇದರಿಂದ ನ್ಯೂಸ್‍ಪ್ರಿಂಟ್ ಮೇಲಿನ ವೆಚ್ಚ ಕಡಿಮೆಯಾಗುತ್ತದೆ. ಜೊತೆಗೆ ಸ್ಟಾಟುಟರಿ ಜಾಹೀರಾತುಗಳ ದರವನ್ನು ಕಡಿಮೆ ಮಾಡಿ ಸರ್ಕಾರ ತನಗೆ ಜಾಹೀರಾತುಗಳನ್ನು ನೀಡುವುದನ್ನು ಖಚಿತ ಮಾಡಿಕೊಳ್ಳುತ್ತದೆ. ಮಾನವ ಸಂಪನ್ಮೂಲದ ಬಳಕೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ ತನ್ನ ಸಿಬ್ಬಂದಿಯ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುತ್ತದೆ. ಈ ಕ್ರಮಗಳಿಂದ ಖರ್ಚು ಕಡಿಮೆ ಮಾಡಿಕೊಂಡು, ಲಾಭ ಗಳಿಸಿ, ಸ್ವತಂತ್ರ ಮಾಧ್ಯಮವಾಗಿ ಉಳಿದು ತನ್ನ ಸ್ಥಾಪಿತ ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗಲು ಆ ಪತ್ರಿಕೆಗೆ ಸಾಧ್ಯವಾಗಿದೆ.

ಈಗ ಸರ್ಕಾರವೇ ಮಾಧ್ಯಮಗಳು ಹೇಗೆ ವರ್ತಿಸಬೇಕೆಂದು ಪಾಠ ಹೇಳಲು ಆರಂಭಿಸಿದೆ. ಕೇರಳದ ಸುದ್ದಿವಾಹಿನಿಗೆ ಸಂಬಂಧಿಸಿದ ಘಟನೆಯೊಂದರಲ್ಲಿ ಪ್ರಸರಣಾ ಸಚಿವ ಜಾವಡೆಕರ್ `ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದ ಸ್ವಾತಂತ್ರ್ಯ ಸ್ಪಷ್ಟವಾಗಿ ಅಗತ್ಯವಾದದ್ದು. ಆದರೆ ಅದು ಜವಾಬ್ದಾರಿಯುತ ಸ್ವಾತಂತ್ರ್ಯವಾಗಿರಬೇಕು ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ,” ಎಂದು ಹೇಳುತ್ತಾರೆ.

ಸದ್ಯ ದೇಶದಲ್ಲಾಗುತ್ತಿರುವ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಪೂರಕವಾಗಿದೆಯೇ ಹಾಗೂ ಸರ್ಕಾರದ ಕಾರ್ಯವನ್ನು ಕಟು ವಿಮರ್ಶೆಗೊಡ್ಡುವ ಮಾಧ್ಯಮಗಳ ಕೈತಿರುಚುವುದು ಜವಾಬ್ದಾರಿಯುತ ಆಳ್ವಿಕೆಯೇ ಎಂದು ಜಾವಡೆಕರ್ ಅವರಿಗೆ ಪ್ರಶ್ನಿಸಬೇಕಾಗುತ್ತದೆ. ಈಗಿರುವ ಆಂಗ್ಲ ಸುದ್ದಿವಾಹಿನಿಗಳ ಪೈಕಿ ವಸ್ತುನಿಷ್ಠವಾಗಿ ವರದಿ ಮಾಡುತ್ತಿರುವ ಎನ್.ಡಿ.ಟಿ.ವಿ. ಸರ್ಕಾರದ ಅವಕೃಪೆಗೆ ಪಾತ್ರವಾಗಿದೆ. ಈ ವಾಹಿನಿಗೆ ಸರ್ಕಾರದಿಂದ ಬರುವ ಜಾಹೀರಾತುಗಳು ವಿರಳವಾಗಿವೆ. ಈ ವಾಹಿನಿಯ ಮೇಲೆ ತೆರಿಗೆಗೆ ಸಂಬಂಧಿಸಿದಂತೆ ಹಲವಾರು ಮೊಕದ್ದಮೆಗಳನ್ನು ಹೂಡಲಾಗಿದೆ. “ಹುಷಾರ್ ನಮ್ಮ ಪರವಾಗಿ ಮಾತನಾಡಿದರೆ, ಬರೆದರೆ ಸರಿ, ಇಲ್ಲದಿದ್ದರೆ…” ಎಂಬ ಸಂದೇಶವನ್ನು ಸರ್ಕಾರ ಮಾಧ್ಯಮಗಳಿಗೆ ಆಗಾಗ್ಗೆ ರವಾನಿಸುತ್ತಿರುತ್ತದೆ.

ಬಿಜೆಪಿಯ ಪ್ರಚಾರ ಯಂತ್ರ ಎಲ್ಲಾ ಸಮಯದಲ್ಲೂ ಯಶಸ್ವಿಯಾಗುತ್ತಿಲ್ಲ. ಬಿಜೆಪಿಯ ಪ್ರಚಾರ ಪಡೆ ಮೋದಿಯವರನ್ನು ಕರೋನಾಗೆ ಸಂಬಂಧಿಸಿದ ಟೀಕೆ, ಕಟು ವಿರ್ಮರ್ಶೆಗಳಿಂದ ಸಂರಕ್ಷಿಸಲು ಹಲವಾರು ಪ್ರಚಾರ ತಂತ್ರಗಳನ್ನು ಬಳಸುತ್ತಿದೆ. ಆದರೆ ಇಂತಹದೊಂದು ತಂತ್ರ ನಿರಂಕುಶ ಆಡಳಿತಗಳಲ್ಲಿ ಕೆಲಸ ಮಾಡುವಷ್ಟು ಪರಿಣಾಮಕಾರಿಯಾಗಿ ಪ್ರಜಾಪ್ರಭುತ್ವದಲ್ಲಿ ಮಾಡುವುದಿಲ್ಲ ಎಂಬುದರ ಅರಿವು ಈ ಪ್ರಚಾರ ಪಡೆಗಿರಬೇಕು.

ಪ್ರಜಾಪ್ರಭುತ್ವದ ಯಶಸ್ಸಿಗೆ ಮುಖ್ಯವಾಗಿ ಪಾರದರ್ಶಕ ಸರ್ಕಾರ, ಸ್ವತಂತ್ರ ಮಾಧ್ಯಮ, ನಿಷ್ಪಕ್ಷಪಾತಿ ನ್ಯಾಯಾಂಗ, ಸಮರ್ಥ ಅಧಿಕಾರಶಾಹಿ ಆಧಾರಸ್ತಂಭಗಳು. ಆದರೆ ಈ ಆಧಾರಸ್ತಂಭಗಳೆಲ್ಲಾ ಒಂದೊಂದಾಗಿ ಕಳಚಿಬಿದ್ದಿವೆ. ಈ ಸ್ತಂಭಗಳನ್ನು ಮತ್ತೆ ಸರಿಪಡಿಸಿ ನಿಲ್ಲಿಸುವವರೆಗೆ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಇದ್ದೇ ಇರುತ್ತದೆ.

ಮಾಲೀಕರಿಗೆ ಬೇಡವಾದ ನಿರ್ಭೀತ ನಿರೂಪಕರು

ಸರ್ಕಾರವನ್ನು ನಿರ್ಭಯವಾಗಿ ಟೀಕೆ ಮಾಡುವ ಪತ್ರಕರ್ತರು ಅದಕ್ಕಾಗಿ ಅಪಾರ ಬೆಲೆ ತೆರಬೇಕಾಗುತ್ತದೆ.  ಕಾರ್ಯಕ್ರಮವೊಂದರಲ್ಲಿ ಹಿಂದಿ ಸುದ್ದಿವಾಹಿನಿ ಆನಂದ್ ಬಜಾರ್ ಪತ್ರಿಕಾ ವಾಹಿನಿಯ (ಎಬಿಪಿ) ನಿರೂಪಕ ಪುಣ್ಯ ಪ್ರಸುನ್ ಬಾಜಪೇಯಿ ಪ್ರಧಾನ ಮಂತ್ರಿಗಳು ಬಡ ರೈತರ ಸಹಾಯಕ್ಕಾಗಿ ತೆಗೆದುಕೊಂಡಿರುವ ಉಪಕ್ರಮಗಳ ಬಗ್ಗೆ ಪ್ರಶ್ನಿಸುತ್ತಾರೆ. ಈ ಕಾರ್ಯಕ್ರಮ ಪ್ರಸಾರವಾದಾಗಲೆಲ್ಲಾ ಅದರ ಸ್ಯಾಟಿಲೈಟ್ ಪ್ರಸರಣಕ್ಕೆ ಅಡಚಣೆಯಾಗುತಿತ್ತು. ವಾಹಿನಿಯ ಮಾಲೀಕರು ಕಡೆಗೆ ನಿರೂಪಕ ಬಾಜಪೇಯಿ ಅವರಿಂದ ರಾಜೀನಾಮೆ ಪಡೆದುಕೊಂಡರು. ಇದಾದ ನಂತರ ಪ್ರಸರಣದ ಅಡಚಣೆಗಳು ನಿಲ್ಲುತ್ತವೆ.

ಪ್ರಸುನ್ ಬಾಜಪೇಯಿ ಅವರೇ ಹೇಳುವಂತೆ ತಾವು ಉದ್ಯೋಗಿಯಾಗಿದ್ದ ಎಬಿಪಿ ಸಂಸ್ಥೆಯ ಮಾಲೀಕರೊಡನೆ 2018ರ ಜುಲೈ 14ರಂದು ನಡೆಸಿದ ಸಂವಾದದ ಸಣ್ಣ ತುಣುಕು ಇಲ್ಲಿದೆ.

ಮಾಲೀಕ: ನೀವು ಪ್ರಧಾನ ಮಂತ್ರಿಯವರ ಹೆಸರನ್ನು ಉಲ್ಲೇಖಿಸುವುದನ್ನು ತಡೆಯಲು ಸಾಧ್ಯವಾಗುತ್ತದೆಯೇ? ಅವರ ಮಂತ್ರಿಗಳ ಹೆಸರನ್ನು ಉಲ್ಲೇಖಿಸಿ; ನಿಮಗೆ ಬೇಕಿದ್ದರೆ ಸರ್ಕಾರದ ನೀತಿಯಲ್ಲಿ ಏನಾದರೂ ಸರಿಯಲ್ಲದಿದ್ದರೆ ಅದನ್ನು ಎತ್ತಿ ತೋರಿಸಿ, ಅದಕ್ಕೆ ಸಂಬಂಧಪಟ್ಟ ಸಚಿವಾಲಯದ ಹೆಸರನ್ನು ಹೇಳಿ. ಆದರೆ ಪ್ರಧಾನ ಮಂತ್ರಿ ಮೋದಿಯವರ ಹೆಸರನ್ನು ಎಲ್ಲೂ ಪ್ರಸ್ತಾಪಿಸಬೇಡಿ.

ನನ್ನ ಪ್ರತಿಕ್ರಿಯೆ: ಆದರೆ ಪ್ರಧಾನ ಮಂತ್ರಿ ಮೋದಿಯೇ ಪ್ರತಿ ಸರ್ಕಾರಿ ಯೋಜನೆಯನ್ನು ಘೋಷಿಸಿದಾಗ, ಪ್ರತಿ ಸಚಿವಾಲಯ ಕಾರ್ಯದಲ್ಲಿ ಅವರೇ ತೊಡಗಿಸಿಕೊಂಡಾಗ ಹಾಗೂ ಪ್ರತಿ ಮಂತ್ರಿಯೂ ಯಾವುದೇ ಸರ್ಕಾರಿ ಯೋಜನೆ ಅಥವಾ ನೀತಿಯ ಬಗ್ಗೆ ಮಾತನಾಡುವಾಗ ಮೋದಿಯವರ ಹೆಸರನ್ನು ಹೇಳುವಾಗ, ಮೋದಿಯವರ ಹೆಸರನ್ನು ಹೇಳದಿರಲು ಹೇಗೆ ಸಾಧ್ಯ?

ಮಾಲೀಕ: ನಾವು ಹೇಳುತ್ತಿದ್ದೇನೆ, ಒತ್ತಾಯ ಮಾಡುವುದನ್ನು ನಿಲ್ಲಿಸಿ. ಇದು ಹೇಗಾಗುತ್ತದೋ ಕೆಲವು ದಿನ ನೋಡೋಣ. ವಾಸ್ತವವಾಗಿ ನೀವು ಸರಿಯಾದ ಕೆಲಸವನ್ನೆ ಮಾಡುತ್ತಿದ್ದೀರಾ. ಆದರೆ ಸ್ವಲ್ಪ ದಿನದ ಮಟ್ಟಿಗೆ ಇದನ್ನು ಬಿಟ್ಟುಬಿಡಿ.

ಎಬಿಪಿಯ ಮತ್ತೊಬ್ಬ ನಿರೂಪಕ ಅಭಿಸಾರ್ ಶರ್ಮ ಮೋದಿಯವರನ್ನು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಲೈವ್ ಕಾರ್ಯಕ್ರಮದಲ್ಲಿ ಟೀಕೆ ಮಾಡುತ್ತಾರೆ. ನಂತರ ಅವರನ್ನು ಕಾರ್ಯಕ್ರಮದಿಂದ ತೆಗೆಯಲಾಗುತ್ತದೆ ಹಾಗೂ ಅವರಿಂದಲೂ ರಾಜೀನಾಮೆ ಪಡೆದುಕೊಳ್ಳಲಾಗುತ್ತದೆ.

Leave a Reply

Your email address will not be published.