ಕಾರ್ನಾಡ ‘ಖರೆ’ ನಾಟಕಕಾರರಾ….?

ಕಾರ್ನಾಡರ ನಿಧನಾನಂತರ ರಾಷ್ಟ್ರಮಟ್ಟದ ಇಂಗ್ಲಿಷ್ ಹಾಗೂ ಕೆಲವು ಕನ್ನಡ ಪತ್ರಿಕೆಗಳು ಅವರನ್ನು ‘ಹೊಗಳಿಕೆಯ ಹೊನ್ನಶೂಲ’ಕ್ಕೆ ಏರಿಸಿದವು. ಆದರೆ ಅವರು ಇವೆಲ್ಲವುಗಳಿಗೆ ಹೇಗೆ ಹೊರತಾಗಿದ್ದರು ಎಂಬುದನ್ನು ಪುಸ್ತಕದ ಹದಿನೆಂಟು ಅಧ್ಯಾಯಗಳಲ್ಲಿ ಆಧಾರ ಸಹಿತ ವಿವರಿಸಲಾಗಿದೆ.

ಉತ್ತರ ಕರ್ನಾಟಕದ ಜವಾರಿ ಭಾಷೆಯ ಪದ ‘ಖರೆ’. ಬೆಂಗಳೂರಿನ ಮಲ್ಲೇಶ್ವರ ನಿವಾಸಿ ಮೋಹನರಾಂ ಅವರು ಈ ಶಬ್ದವನ್ನು ಎರವಲು ಪಡೆದಿದ್ದಾರೆ. ಮನೋಹರ ಗ್ರಂಥಮಾಲೆಯ ಅಡಿಗಲ್ಲಾದ ಜಿ.ಬಿ.ಜೋಶಿಯವರು ಗಿರೀಶ್ ಕಾರ್ನಾಡರಿಗೆ ಒಮ್ಮೆ ಒಂದು ಸವಾಲು ಹಾಕುತ್ತಾರೆ. ಅದೆಂದರೆ ಸಮಕಾಲೀನ ಜೀವನದ ಬಗ್ಗೆ ಒಂದು ನಾಟಕ ಬರೆದರೆ ಮಾತ್ರ ನೀನು ‘ಖರೆ’ ನಾಟಕಕಾರ. ಎಪ್ಪತ್ತರ ವಯಸ್ಸನ್ನು ಸಮೀಪಿಸುತ್ತಿದ್ದ ಗಿರೀಶರು ‘ಮದುವೆ ಆಲ್ಬಂ’ ನಲ್ಲಿ ಈ ಆಹ್ವಾನದ ಬಗ್ಗೆ ಬರೆದುಕೊಂಡಿದ್ದಾರೆ (ಪುಟ 68). ಬಹುಶಃ ‘ಅಂಜು ಮಲ್ಲಿಗೆ’ ಸೋಲಿನ ಹಿನ್ನೆಲೆ ಇದಕ್ಕೆ ಕಾರಣವಾಗಿರಬಹುದು.

‘ಸತ್ತವರ ಬಗ್ಗೆ ಕೆಟ್ಟದ್ದನ್ನು ಬರೆಯಬಾರದು’ ಎಂದು ಲಂಕೇಶ್ ಎಲ್ಲಿಯೋ ದಾಖಲಿಸಿದ್ದಾರೆ. ಆದರೆ ಮೋಹನ್‌ರಾಂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ, ಲಂಕೇಶ್ ಹಾಗೂ ಈಗ ಗಿರೀಶ್ ಕಾರ್ನಾಡರ ಒಳಮುಖಗಳನ್ನು ವಿಚಿತ್ರವಾಗಿ ದಾಖಲಿಸಿದ್ದಾರೆ. ತಮ್ಮ ಪ್ರಯತ್ನ ತಪ್ಪು ಅಲ್ಲ ಎಂಬುದನ್ನು ಹಲವು ಕಾರಣಗಳ ಹಿನ್ನೆಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ವ್ಯಕ್ತಿಗಳ ಬಗ್ಗೆ ಇರುವ ‘ಪೊಳ್ಳು ಪ್ರತಿಷೆ’ ಇತಿಹಾಸವಾಗಬಾರದೆಂಬುದು ಅವರ ಆಶಯ.

ಕಾರ್ನಾಡರ ನಿಧನಾನಂತರ ರಾಷ್ಟ್ರಮಟ್ಟದ ಇಂಗ್ಲಿಷ್ ಹಾಗೂ ಕೆಲವು ಕನ್ನಡ ಪತ್ರಿಕೆಗಳು ಅವರನ್ನು ‘ಹೊಗಳಿಕೆಯ ಹೊನ್ನಶೂಲ’ಕ್ಕೆ ಏರಿಸಿದವು. ಆದರೆ ಅವರು ಇವೆಲ್ಲವುಗಳಿಗೆ ಹೇಗೆ ಹೊರತಾಗಿದ್ದರು ಎಂಬುದನ್ನು ಈ ಪುಸ್ತಕದ ಹದಿನೆಂಟು ಅಧ್ಯಾಯಗಳಲ್ಲಿ ಆಧಾರ ಸಹಿತ ವಿವರಿಸಲಾಗಿದೆ. ಪ್ರಾಚೀನ ಇತಿಹಾಸ ಹೊಂದಿದ ಕನ್ನಡ ಭಾಷೆಯ ವಿಕಾಸಕ್ಕೆ ತನ್ನದೇ ಆದ ಹಿನ್ನೆಲೆ ಇದೆ. ಹಲವಾರು ಜನರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ದೇಶ ವಿದೇಶಗಳಲ್ಲಿ ಸಂಚಾರಗೈದ ಕಾರ್ನಾಡರು ಕನ್ನಡದ ಏಕೈಕ ವಾರಸುದಾರರಂತೆ ಮೆರೆದರು. ಕನ್ನಡ ಕಟ್ಟಿದ ಮಹಾಪುರುಷರ ಹೆಸರುಗಳನ್ನು ನಾಜೂಕಾಗಿ ಮರೆಮಾಚುತ್ತಿದ್ದರು.

ಕಾರ್ನಾಡರು ಧಾರವಾಡದವರಾಗಿದ್ದರೂ ಉತ್ತರ ಕರ್ನಾಟಕದ ಗಂಡುಭಾಷೆಯನ್ನು ಸಮರ್ಥವಾಗಿ ಬಳಸಲು ಸಾಧ್ಯವಾಗಿರಲಿಲ್ಲ. ಅವರ ಬರವಣಿಗೆಯನ್ನು ತಿದ್ದುವ ಹೊಣೆ ಅಟ್ಟದ ‘ನಿಲಯ ಕಲಾವಿದ’ರಾದ ಕುರ್ತಕೋಟಿ ಹಾಗೂ ಆಮೂರರ ಹೆಗಲೇರಿತ್ತು. ಸರಿಯಾದ ಕನ್ನಡ ಕಲಿಯಬೇಕೆಂದೇ ಅವರು ಅಟ್ಟದ ಪಾವಟಿಗೆ ಏರಿದರು. ಏಕೆಂದರೆ ಕನ್ನಡದ ದಿಗ್ಗಜರು ಅಲ್ಲಿಗೆ ಬರುತ್ತಿದ್ದರು. ಗಿರೀಶರು ನಗರದ ಸೋಗಲಾಡಿ ಕನ್ನಡ ಬಯಸಿದ್ದರು. ಅವರು ನಿಜಬದುಕಿನ ಒಳಸುಳಿಯಲ್ಲಿ ಪ್ರವೇಶಿಸಲೇ ಇಲ್ಲ (ಪು 21-22).

ಲೇಖಕರು ಬೆಂಗಳೂರಲ್ಲಿ ವೈಯೆನ್ಕೆ ಸ್ಕಾಚ್ ಧಾರವಾಡದಲ್ಲಿ ಅಟ್ಟದ ‘ಸೂಡಾ’ ಎಂಬ ಪದ ಬಳಸಿದ್ದಾರೆ; ಅದು ಚೂಡಾ ಆಗಬೇಕಿತ್ತು. ಕಾರ್ನಾಡರು ವೈಯೆನ್ಕೆ ಕಂಪನಿಯಲ್ಲಿ ಎಂಜಿ ರೋಡ್ ಸಂಸ್ಕೃತಿಯನ್ನು ಕಲಿತರು, ಆದರೆ ಅಟ್ಟದ ಸಹವಾಸದಿಂದ ಉತ್ತರ ಕರ್ನಾಟಕದ ಗಂಡು ಕನ್ನಡ ಕಲಿಯಲಿಲ್ಲ. ಅವರ ಯಯಾತಿ ಹಾಗೂ ಹಯವದನದಲ್ಲಿ ಮೋಹನರಾಂ ಸ್ವತಃ ಭಾಗವಹಿಸಿದ್ದರಿಂದ ಕಾರ್ನಾಡರ ಒಳಮುಖದ ಪರಿಚಯ ಅವರಿಗಿತ್ತು.

ಕಾರ್ನಾಡರು ಬರೆದದ್ದು ಒಟ್ಟು ಹದಿನೈದು ನಾಟಕಗಳನ್ನು. ಆದರೆ ಕೆ.ಮರುಳಸಿದ್ಧಪ್ಪನವರು ಹೇಳುವಂತೆ ‘ಸ್ವತಃ’ ಕಾರ್ನಾಡರು ಮಾನಿಷಾದ ಹಾಗೂ ಹಿಟ್ಟಿನ ಹುಂಜ ನಾಟಕಗಳ ಬಗ್ಗೆ ‘ಅಲರ್ಜಿ’ ಹೊಂದಿದ್ದರು (ಪು. 29). ನಾಟಕದ ಯಶಸ್ಸು ಅದು ಒಳಗೊಂಡ ಸಾಹಿತ್ಯದಿಂದಲೇ ಅಥವಾ ರಂಗ ಪ್ರಯೋಗದಿಂದಲೇ ಎಂಬ ಪ್ರಶ್ನೆ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಮೋಹನರಾಂ ಪ್ರಕಾರ ರಂಗಪ್ರಯೋಗ ನಾಟಕದ ಯಶಸ್ಸಿನ ಅಳತೆಗೋಲಾಗಿದೆ. ಏಕೆಂದರೆ ವ್ಯಕ್ತಿ ಹಾಗೂ ಆತನ ಬರಹಗಳ ನಡುವೆ ತಳಕು ಹಾಕುವುದು ಸಮಂಜಸವಲ್ಲ. ಕಾರ್ನಾಡರು ಬರೆದ ಎಲ್ಲ ನಾಟಕಗಳಲ್ಲಿ ಖರೆ ನಾಟಕಗಳೆಂದರೆ ಯಯಾತಿ, ತುಘಲಕ್ ಹಾಗೂ ತಲೆದಂಡ; ಉಳಿದವು ವಿವಿಧ ಖಯಾಲಿಗೆ ಬರೆದವುಗಳು. ಆದರೆ ‘ಅಗ್ನಿ ಮತ್ತು ಮಳೆ’ ಹಾಗೂ ‘ಹಯವದನ’ ಉತ್ತಮ ನಾಟಗಳೆಂದು ಕೆಲವರ ಅಭಿಪ್ರಾಯ (ಪು. 30-31).

ರಷಿಯಾದ ಸಾಮಂತ ಅರಸನಾದ ಐವಾನನು ಸಾಮ್ರಾಟನಾದ ಮೇಲೆ ಆತನ ವ್ಯಕ್ತಿತ್ವದಲ್ಲಿ ವಿಚಿತ್ರ ಬದಲಾವಣೆಗಳಾಗುತ್ತವೆೆ. ಕ್ರಮೇಣ ಐವಾನ ಯಾರನ್ನು ನಂಬಲಾರದ ಎಲ್ಲರನ್ನು ಸಂದೇಹಿಸುವ ವ್ಯಕ್ತಿಯಾಗುತ್ತಾನೆ. ಮಗ ಹಾಗೂ ಮೊಮ್ಮಗನನ್ನು ಮತ್ತು ತನ್ನ ಕೆಲವು ಹೆಂಡಂದಿರನ್ನು ಕೊಲ್ಲುವ ಗುಣ ಹೊಂದಿದ್ದ. ತುಘಲಕ್ ಪಾತ್ರದ ಮೇಲೆ ಐವಾನ ದೊರೆಯ ದಟ್ಟ ಪ್ರಭಾವ ಇದೆ. ಚಾಲಾಕುತನದಿಂದ ಕಾರ್ನಾಡರು ಎಲ್ಲಿಯೂ ದೊರೆಯ ಹೆಸರನ್ನು ಹೇಳಿಲ್ಲ (ಪು 41-42). ಆದರೆ ಚಿಂತನೆಗಳು ಸಾಮಾನ್ಯವಾಗಿ ಏಕರೂಪದಲ್ಲಿರಬಹುದು.

ಹಯವದನ ನಾಟಕ ದಿಲ್ಲಿಯಲ್ಲಿ ಪ್ರದರ್ಶನಗೊಂಡಾಗ ಆಗಿನ ಪ್ರಧಾನಿ ಇಂದಿರಾಗಾಂಧಿ ನಾಟಕ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ (ಪು. 46). ಈ ಪ್ರದರ್ಶನ ಗಿರೀಶರಿಗೆ ಚಿಮ್ಮುಹಲಿಗೆಯಾಯಿತು. ಇದರ ಪರಿಣಾಮವಾಗಿ ಹಲವು ಹುದ್ದೆ, ಪದವಿಗಳು ಅವರನ್ನು ಹುಡುಕಿಕೊಂಡು ಬಂದವು. ಈ ನಾಟಕದ ಬಗ್ಗೆ ವಸ್ತುನಿಷ್ಠ ವಿಮರ್ಶೆ ಬರೆದ ಅನಂತಮೂರ್ತಿ ಹಾಗೂ ಲಂಕೇಶರ ವಿಚಾರಗಳನ್ನು ಗಿರೀಶರು ಗಾಳಿಗೆ ತೂರಿದರು. ಹಯವದನದ ಯಶಸ್ಸಿಗೆ ಕಾರಣ ಕಾರಂತರ ಹಾಡುಗಳೇ ಹೊರತು ಗಿರೀಶರ ಸಾಹಿತ್ಯವಲ್ಲ.

ಎ.ಕೆ.ರಾಮಾನುಜನ್ ಎಂಬ ಅಪ್ರತಿಮ ಸಾಹಿತಿ ಹೇಳಿದ ಒಂದು ಜಾನಪದ ಕತೆಯನ್ನು ಕಂಬಾರರು ಸಿರಿಸಂಪಿಗೆ ಹಾಗೂ ಕಾರ್ನಾಡರು ನಾಗಮಂಡಲ ಬರೆದು ಕೈತೊಳೆದುಕೊಂಡರು. ಎರಡೂ ಪ್ರದರ್ಶನಗಳು ಸೋತವು. ಕಂಬಾರರ ಯಶಸ್ಸಿನ ಗುಟ್ಟು ಎಂದರೆ ಅವರ ಜಾನಪದ ಹಾಡು ಹಾಗೂ ಉತ್ತರ ಕರ್ನಾಟಕದ ಗಂಡು ಭಾಷೆಯ ಬಳಕೆ. ಹೀಗಾಗಿ ಬೆಂಗಳೂರಿನ ಹವ್ಯಾಸಿ ಕಲಾವಿದರಿಗೆ ಹಾಗೂ ಪ್ರೇಕ್ಷಕರಿಗೆ ಒಂದು ರೀತಿ ಭ್ರಮೆ ಹುಟ್ಟಿಸಿತು. ಇದರಿಂದ ಅವರ ನಾಟಕದ ಪ್ರತಿ ಎಪಿಸೋಡ್ ನಂತರ ಚಪ್ಪಾಳೆ ತಟ್ಟುವ ರೆಡಿಮೇಡ್ ಗುಂಪು ಕಲಾಕ್ಷೇತ್ರದಲ್ಲಿತ್ತು. ಕಾರ್ನಾಡರ ಪೊಳ್ಳು ಪ್ರತಿಷ್ಠೆಯನ್ನು ದಾಖಲಿಸುವುದು ಅವಶ್ಯಕ.

ಗೋಪಾಲ ವಾಜಪೇಯಿಯವರು ಬರೆದ ಹಾಡುಗಳನ್ನು ಗಿರೀಶರು ನಾಗಮಂಡಲದಲ್ಲಿ ಬಳಸಿದ್ದರು. ಆದರೆ ಅವರ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ವಾಜಪೇಯಿ ನ್ಯಾಯಾಲಯದ ಮೊರೆಹೋದರು.  ಕೊನೆಕೊನೆಗೆ ಅವರ ಹಾಡುಗಳನ್ನು ಬಳಸಲಿಲ್ಲ. ಈ ಹಂತದಲ್ಲಿ ಕಾರ್ನಾಡರೊಂದಿಗೆ ತೆಕ್ಕೆ ಬೀಳುವುದು ಯಾರಿಗೂ ಸಾಧ್ಯವಿರಲಿಲ್ಲ. ಏಕೆಂದರೆ ರಾಷ್ಟಮಟ್ಟದ ಖ್ಯಾತಿ ಅವರಿಗಿತ್ತು.

ತಲೆದಂಡ ಗಿರೀಶರ ಯಶಸ್ವೀ ನಾಟಕಗಳಲ್ಲಿ ಒಂದು ಎಂದು ಕೆಲವರ ಅಭಿಪ್ರಾಯ. ಲಿಂಗಾಯತ ಧರ್ಮಸ್ಥಾಪಕ ಬಸವಣ್ಣನ ಬದುಕಿನ ಸುತ್ತ ಹೆಣೆದ ಕತೆ ಇದಾಗಿದೆ. ಹನ್ನೆರಡನೆಯ ಶತಮಾನ ಹಲವು ಸಾಹಿತಿಗಳನ್ನು ಇಂದಿಗೂ ಆಕರ್ಷಿಸುತ್ತಿರುವುದು ಅಷ್ಟೇ ಸತ್ಯ. ನಿಖರ ದಾಖಲೆಗಳ ಕೊರತೆ ಅನುಭವಿಸುತ್ತಿರುವ ಈ ಸಂದರ್ಭಕ್ಕೆ ಕೇವಲ ವಚನಗಳೇ ಆಧಾರ. ಕಾಲಕಾಲಕ್ಕೆ ಇವುಗಳ ಪರಿಷ್ಕರಣೆ ಸಾಗಿ ಬಂದಿದೆ.

ಬಸವಣ್ಣ ಬಿಜ್ಜಳನ ಪ್ರಧಾನಿಯಾಗಿದ್ದ, ಆತನ ಮೇಲೆ ಹಲವು ಆರೋಪಗಳಿದ್ದರೂ ಬಿಜ್ಜಳ ಬಸವಣ್ಣನ ಬಗ್ಗೆ ಜಾಣಮೌನ ವಹಿಸುತ್ತಾನೆ. ಇದಕ್ಕೆ ಮುಖ್ಯ ಕಾರಣವೆಂದರೆ ಸಾಮಂತನಾದ ಬಿಜ್ಜಳ ಸಾರ್ವಭೌಮ ದೊರೆಯಾಗುತ್ತಾನೆ. ಬಸವಣ್ಣ ಕಟ್ಟಿದ ಶರಣರ ಪಡೆಯು ಬಿಜ್ಜಳನ ಸಾರ್ವಭೌಮತ್ವಕ್ಕೆ ಕಾರಣ ಎಂದು ಕಾರ್ನಾಡರು ನಾಟಕದಲ್ಲಿ ಪ್ರಸ್ತಾಪಿಸಿದ್ದಾರೆ. ಇಲ್ಲಿ ಕಾರ್ನಾಡರ ಇನ್ನೊಂದು ತಂತ್ರವನ್ನು ದಾಖಲಿಸಬೇಕು. ಬಿಜ್ಜಳ ಶೈವ ಬ್ರಾಹ್ಮಣ ಎಂಬ ನಂಬಿಕೆಯೊಂದಿಗೆ ಆತ ಜೈನ ಧರ್ಮಕ್ಕೆ ಸೇರಿದಾತ ಎಂಬ ವಾದವೂ ಇದೆ. ತಲೆದಂಡ ನಾಟಕದಲ್ಲಿ ಬಿಜ್ಜಳ ಕ್ಷೌರಿಕ ಸಮುದಾಯಕ್ಕೆ ಸೇರಿದ್ದಾನೆ. ಧಾರವಾಡದ ವಿಮರ್ಶಕರೊಬ್ಬರು ಕಾಡು ಹರಟೆಯಲ್ಲಿ ಹೇಳಿದಂತೆ, ಜ್ಞಾನಪೀಠ ಪ್ರಶಸ್ತಿ ಕೊಡುವವರು ಜೈನ ಧರ್ಮದ ಅನುಯಾಯಿಗಳು. ಬಿಜ್ಜಳ ಜೈನನೆಂದರೆ ಪ್ರಶಸ್ತಿಕೊಡುವವರ ಮನಸ್ಸು ಘಾಸಿಗೊಳ್ಳುತ್ತದೆ. ಈ ದೂರಾಲೋಚನೆ ಹೊಂದಿದ ಕಾರ್ನಾಡರು ಬಿಜ್ಜಳನನ್ನು ಕ್ಷೌರಿಕ ಸಮುದಾಯಕ್ಕೆ ಸೇರಿಸಿದ್ದಾರೆ.

ಬಿಜ್ಜಳ ಕ್ಷೌರಿಕ ಎಂಬ ವಿಚಾರ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಆ ವರ್ಷ ಪುರಭವನದಲ್ಲಿ ಜರುಗಿದ ಈ ಸಮುದಾಯದ ಸಮಾವೇಶದ ಫ್ಲೆಕ್ಸ್ ಬೋರ್ಡಿನಲ್ಲಿ ‘ಸಾರ್ವಭೌಮ ಬಿಜ್ಜಳ ಮಹಾರಾಜನ ವಂಶಸ್ಥರಾದ… ಸಮಾವೇಶ’ ಎಂಬುದು ದಾಖಲೆಯಾಯಿತು. ಕಾರ್ನಾಡರ ಇತ್ತೀಚಿನ ನಾಟಕ ರಾಕ್ಷಸ ತಂಗಡಗಿ ಎಂಬ ಹೆಸರೇ ವಿಚಿತ್ರವಾಗಿದೆ. ರಕ್ಕಸಗಿ ಎಂಬ ಗ್ರಾಮದ ಹೆಸರಿನ ಬದಲಾಗಿ ರಾಕ್ಷಸ ಎಂಬ ಶಬ್ದದ ಬಳಕೆಯ ಔಚಿತ್ಯವೇನು?

ರಕ್ಕಸಗಿ ಹಾಗೂ ತಂಗಡಗಿ ಗ್ರಾಮಗಳು ಕೃಷ್ಣಾ ನದಿಯ ಎಡದಂಡೆಯ ಮೇಲೆ ಇವೆ.  ರಕ್ಕಸಗಿ ಈಗ ಬಸವಸಾಗರದ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಇದಕ್ಕೆ ತಾಳಿಕೋಟೆ ಯುದ್ಧ (1565) ಎಂದೂ ಕರೆಯುತ್ತಾರೆ. ರಕ್ಕಸಗಿ ಹೊಲಗಳಲ್ಲಿ ರಂಟೆ ಹೊಡೆದರೆ ಬಂಗಾರದ ಆಭರಣಗಳು ದೊರಕುತ್ತಿದ್ದವು ಎಂಬ ಪ್ರತೀತಿ ಇತ್ತು. ಈ ಯುದ್ಧದ ಪಳೆಯುಳಕೆಯಾಗಿ ಇಲ್ಲಿ ಆನಿಹಳ್ಳ, ಜೂಲಗುಡ್ಡ, ಜೂಲಕಟ್ಟಿ ಎಂಬ ಸ್ಥಳಗಳಿವೆ. ರಾಕ್ಷಸ-ತಂಗಡಗಿ ಎಂಬ ನಾಟಕದ ರಂಗಪ್ರಯೋಗದ ಹಿನ್ನೆಲೆಯಲ್ಲಿ ರೋಚಕ ಇತಿಹಾಸವಿದೆ.

1970ರ ಅವಧಿ ಕಾರ್ನಾಡ ಬದುಕಿನಲ್ಲಿ ಸುವರ್ಣ ಯುಗವೆಂದು ಹೇಳುತ್ತಾ, ಅವರನ್ನು ಅರಸಿಬಂದ ಪ್ರಶಸ್ತಿ ಹಾಗೂ ಅಲಂಕರಿಸಿದ ಸ್ಥಾನಗಳನ್ನು ಮೋಹನರಾಂ ದಾಖಲಿಸಿದ್ದಾರೆ. ಇಲ್ಲಿ ಸಾಂದರ್ಭಿಕವಾಗಿ ಗೋಪಾಲಕೃಷ್ಣ ಅಡಿಗ ವರ್ಸಸ್ ಕಾರ್ನಾಡರ ಬಗ್ಗೆ ವಿವರಣೆ ಇದೆ. ಅಡಿಗರು ನಿರಂತರವಾಗಿ ಆರ್‌ಎಸ್‌ಎಸ್ ವಿರೋಧಿಗಳಾಗಿದ್ದರು. ಯಾವುದೋ ಚಿತಾವಣೆಗೆ ಬಲಿಯಾಗಿ ಜನಸಂಘದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತರು. ಇದ್ದ ನೌಕರಿಗೆ ರಾಜೀನಾಮೆ ಕೊಟ್ಟಿದ್ದರಿಂದ ಜನಸಂಘದ ಕಚೇರಿಗೆ ಜೀವನಾಂಶ ತರಲು ಹೋಗಬೇಕಾದರೆ ಮೈಯೆಲ್ಲಾ ಮುಟಿಗೆ ಮಾಡಿಕೊಂಡು ಹೋಗುತ್ತಿದ್ದರಂತೆ. ಕವಿಯಾಗಿ ಅಡಿಗರು ಇನ್ನೂ ಜನಮಾನಸದಲ್ಲಿ ಉಳಿದಿದ್ದಾರೆ. ಆದರೆ ಆರಡಿ ಎತ್ತರದ ಕಾರ್ನಾಡರು ಅಡಿಗರ ಮುಂದೆ ಕುಬ್ಜರಾದ ವಿವರಗಳಿವೆ (ಪು. 88-89).

ಕಾರ್ನಾಡರು ಸುಳ್ಳಿನ ಸರದಾರ ಎನ್ನುವುದಕ್ಕೆ ಹಲವು ಉದಾಹರಣೆಗಳನ್ನು ಒಂಬತ್ತನೇ ಅಧ್ಯಾಯದಲ್ಲಿ ಕೊಟ್ಟಿದ್ದಾರೆ. ಅದರಲ್ಲಿ ಕೆಲವನ್ನು ಗಮನಿಸಬಹುದು. ಸಂಸ್ಕಾರ ಚಿತ್ರಕ್ಕೆ ರಾಷ್ಟçಪತಿ ಪ್ರಶಸ್ತಿ ಬಂತು, ನಿಜ. ಇದು ಕಾರ್ನಾಡರ ಅಭಿನಯಕ್ಕೆ ಅಲ್ಲ. ಆದರೆ ಅವರ ರೆಜ್ಯುಮ್‌ನಲ್ಲಿ ಸಂಸ್ಕಾರದ ದಾಖಲೆ ಇದೆ. ಈ ಕಥಾನಕ ರೂಪಗೊಳ್ಳುವಲ್ಲಿ ಸಿಂಗೀತಂ ಅವರ ಅಪಾರ ಶ್ರಮವಿದೆ. ಸಂಸ್ಕಾರ ಚಲನಚಿತ್ರವಾಗಿ ರೂಪುಗೊಳ್ಳುವಲ್ಲಿ ಲೊಹಿಯಾ, ಗೋಪಾಲಗೌಡ, ಪಟ್ಟಭಿರಾಮರೆಡ್ಡಿ ಅವರಂತಹ ದೊಡ್ಡಪಡೆಯ ಬೆಂಬಲ ಇತ್ತು, ಇದೆಲ್ಲದರ ವಿವರ ಇಲ್ಲಿ ಅಪ್ರಸ್ತುತ.

ಕಾರ್ನಾಡರು ಫಿಲ್ಮ್ ಇನ್ಸ್ಟಿಟ್ಯೂಟ್‌ಗೆ ನಾಮಕರಣಗೊಂಡದ್ದು ಗುಜ್ರಾಲ್ ಎಂಬ ಮಂತ್ರಿಗಳ ಸಲಹೆ ಹಾಗೂ ಇಂದಿಗಾಗಾಂಧಿ ಆಶೀರ್ವಾದದಿಂದ. ಗಿರೀಶರು “ನಾನು ಫಿಲ್ಮ್ ಇನ್ಸ್ಟಿಟ್ಯೂಟಿಗೆ ರಾಜೀನಾಮೆ ನೀಡಿದೆ” ಎಂದು ಬರೆದಿದ್ದಾರೆ. ಜ್ಞಾನಪೀಠಿಗಳ ಸುಳ್ಳಿನ ಕಂತೆ ಇದು. 1994ರ ಸುಮಾರಿಗೆ ಗೋದ್ರಾ ಹಾಗೂ ಬಾಬರಿ ಮಸೀದಿ ಹಗರಣ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಈ ಎರಡೂ ಸಂದರ್ಭ ಬಳಸಿಕೊಂಡು ಕಾರ್ನಾಡರು ಪ್ರತಿಭಟನೆ ಹಾಗೂ ಪತ್ರಿಕಾಗೋಷ್ಠಿ ನಡೆಸಬಹುದಿತ್ತು ಆದರೆ ಅವರು ಗ್ಲೀಸರಿನ ಕಣ್ಣೀರು ಸುರಿಸಿದರು (ಪು. 121-26). ಈ ‘ಅರ್ಬನ್ ನಕ್ಸಲೈಟ್’ ಫೋಟೋ ಸೆಶನ್ ಮುಗಿದಾಕ್ಷಣ ಮಾಯವಾಗುತ್ತಿದ್ದರು.

ಧಾರವಾಡದಲ್ಲಿ ಬೇರು ಹೊಂದಿದ್ದ ರಾಜೇಂದ್ರ ಚೆನ್ನಿಯವರು ‘ನಮ್ಮೊಳಗಿದ್ದೂ ನಮ್ಮಂತಾಗಲಾರದ’ ಗಿರೀಶರ ಬಗ್ಗೆ ಹೇಳಿದ ಕೆಲವು ಮಾತುಗಳನ್ನು ಮೋಹನರಾಂ ದಾಖಲಿಸಿದ್ದಾರೆ. ಅವು ಇಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತದೆ. “…ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಾಗೂ ಕಡಪಾ ಮೈದಾನದಲ್ಲಿ ದಿನಕ್ಕೊಂದರಂತೆ ನಡೆಯುತ್ತಿದ್ದ ಪ್ರತಿಭಟನೆಗಳಲ್ಲಿ ಅವರು ಎಂದೂ ಕಾಣಿಸಿಕೊಂಡಿರಲಿಲ್ಲ….” ಅವರು ತಮ್ಮೊಳಗೆ ವೈರಿಯನ್ನು ಸೃಷ್ಟಿಸಿಕೊಂಡಿದ್ದರು.

ಅವರಿಗೆ ಬೆಂಗಳೂರಿನ ವಲಯವೆಂದರೆ ಬೆಂಗಳೂರಿನಲ್ಲಿದ್ದೂ ಕನ್ನಡ ಮಾತನಾಡಲಾರದ ರಾಮಚಂದ್ರ ಗುಹಾ ಹಾಗೂ ಇತರರು. ಧಾರವಾಡಕ್ಕೆ ಬಂದರೆ ಅಟ್ಟದ ಮಾಧ್ವಮಂಡಳ ಮತ್ತು ಶೂದ್ರರಾದ ಗಿರಡ್ಡಿ ಹಾಗೂ ಕಂಬಾರರೊಂದಿಗೆ ಒಳಮುಚಗ ಒಡನಾಟ. ಆದರೆ ಒಂದು ಮಾತನ್ನು ಇಲ್ಲಿ ದಾಖಲಿಸಲೇ ಬೇಕು. ಕಾರ್ನಾಡರ ‘ಆಡಾಡತಾ ಆಯುಷ್ಯ’ ಎಂಬ ಪುಸ್ತಕ ಮಾರಾಟಕ್ಕೆ ಉತ್ತರ ಕರ್ನಾಟಕದ ಎಲ್ಲ ಲಿಂಗಾಯತ ಸಂಸ್ಥೆಗಳನ್ನು ಪ್ರಕಾಶಕರು ಹಾಗೂ ಲೇಖಕರು ಬಂಡವಾಳ ಮಾಡಿಕೊಂಡರು. ಅವರ ವ್ಯಾಪಾರಿ ಬುದ್ಧಿ ಹೇಗೆ ಕೆಲಸ ಮಾಡಿದೆ ಎಂಬುದನ್ನು ಗಮನಿಸಬಹುದು.

ಕಾರ್ನಾಡರ ಕುದುರೆ ಹೇಗೆ ಪಕ್ಷಾತೀತವಾಗಿ ಮೆಯ್ದಿದೆ ಎಂಬುದಕ್ಕೆ ಲೇಖಕರು ದೊಡ್ಡಪಟ್ಟಿಯನ್ನೇ ಕೊಟ್ಟಿದ್ದಾರೆ. ವಾಜಪೇಯಿ, ಇಂದಿರಾಗಾಂಧಿ, ರಾಜೀವ್‌ಗಾಂಧಿ, ನರಸಿಂಹರಾವ್, ದೇವೇಗೌಡ, ಜೆ.ಎಚ್.ಪಟೇಲ್ ಮುಂತಾದವರ ನೆರಳಿನಾಶ್ರಯದ ವಿವರಗಳಿವೆ. ಶಬಾನಾ ಆಜ್ಮಿ ಒಂದು ಕಡೆ ದಾಖಲಿಸಿದಂತೆ “…ನೋಡಲು ಚೆನ್ನಾಗಿದ್ದೀರಿ. ಹೀಗಾಗಿ ನಿಮ್ಮ ನಟನೆ ಸರಿಯಾಗಿರದಿದ್ದರೂ ಕ್ಷಮಿಸಬಹುದು” ಎಂದಾಗ ಜೋರಾಗಿ ನಕ್ಕುಬಿಡುತ್ತಿದ್ದರಂತೆ (ಪು. 247). ಈ ಪುಸ್ತಕದ ಲೇಖಕರು ಕೇಳಬಾರದ ಪ್ರಶ್ನೆ ಕೇಳಿ ಅವರಿಂದ ದೂರವಾದ ಬಗೆಯನ್ನು ಹದಿನಾರನೆ ಅಧ್ಯಾಯದಲ್ಲಿ ವಿವರಿಸಿದ್ದಾರೆ. ಕಾರ್ನಾಡರಿಗೆ ಟೀಕೆ-ಸಹಿಸದ ಆತ್ಮರತಿ ಇತ್ತು (ಪು. 48-52). ಕೊನೆಯ ಅಧ್ಯಾಯದಲ್ಲಿ ಕಾರ್ನಾಡರು ಲಂಕೇಶರನ್ನು ಹೇಗೆ ಉದ್ದೇಶಪೂರ್ವಕವಾಗಿ ಅವಮಾನಿಸಿದರು ಎಂಬ ವಿಸ್ತೃತ ವಿವರಣೆ ಇದೆ.

ಕಾರ್ನಾಡರ ಬಗ್ಗೆ ಈ ಪುಸ್ತಕದಲ್ಲಿಯ ವಿವರಣೆ ಸತ್ಯವಾಗಿರಬಹುದು. ಆದರೆ ಅಪ್ರಿಯವಾದ ಸತ್ಯ ಹೇಳಬಾರದೆಂಬ ಮಾತು ಲೇಖಕರಿಗೆ ಪರಿಚಿತವಲ್ಲ. ಮುಚ್ಚಿಡಬೇಕಾದ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಕಾರಣವೆಂದರೆ ಅದು ಐತಿಹಾಸಿಕ ಪ್ರಮಾದವಾಗಬಾರದೆಂಬ ಎಚ್ಚರಿಕೆ ಇದೆ. ಈಗಾಗಲೇ ಜಯಲಲಿತಾ, ಲಂಕೇಶ್ ಹಾಗೂ ಈಗ ಕಾರ್ನಾಡರ ಬಗ್ಗೆ ಬರೆದು ದಕ್ಕಿಸಿಕೊಂಡಿದ್ದಾರೆ.

ಇಂತಹ ಟೀಕಾ ಸಾಹಿತ್ಯ ಕನ್ನಡದಲ್ಲಿ ಅಪರೂಪ. ಟೀಕೆ ಜನಾಕರ್ಷಣೀಯವಾಗಿರುತ್ತದೆ. ದೊಡ್ಡವರು ಹೀಗೂ ಇದ್ದರೆ…! ಎಂದು ಒಂದು ಕ್ಷಣ ಚಿಂತಿಸಬಹುದು. ಮನುಷ್ಯ ಪರಿಪೂರ್ಣನಲ್ಲ ಎಂಬ ಅಳಕು ಅಂತರಂಗದಲ್ಲಿರಬೇಕು.

Leave a Reply

Your email address will not be published.