ಕಾಲರಾ ರೋಗಕ್ಕೆ ಬಲಿಯಾದ ‘ಎಡ್ಮಂಡ್ ಸಿಬ್ಸನ್’

ವಿಪತ್ತು ಎದುರಿಸಲು ಇಂಗ್ಲೆಂಡಿನಿಂದ ಬಂದ ಎಡ್ಮಂಡ್ ಸಿಬ್ಸನ್ ಸಾಂಕ್ರಾಮಿಕ ಪಿಡುಗಿಗೆ ಬಲಿಯಾಗಿ ಶಿಗ್ಗಾವಿಯಲ್ಲಿ ಮಣ್ಣಾಗಿದ್ದು ವಿಪರ್ಯಾಸ.

ಕ್ರಿ.ಶ. 1876-1878ರ ಕ್ಷಾಮವು ಭಾರತ ದೇಶವನ್ನೇ ಕಿತ್ತು ತಿಂದಿತು. ಅದಕ್ಕಿಂತ ಎರಡು ವರ್ಷಗಳ ಹಿಂದೆ (1874) ಬಿದ್ದ ಅಪಾರ ಮಳೆಯಿಂದಾಗಿ ಆಹಾರ ಧಾನ್ಯಗಳು ನೀರು ಪಾಲಾಗಿದ್ದವು. ಆ ಬರಗಾಲದಿಂದಾಗಿ ಭಾರತದ ಜನಸಂಖ್ಯೆ 5.5 ಮಿಲಿಯನ್ (ಕ್ರಿ.ಶ. 1871ರ ಜನಗಣತಿಯ ಪ್ರಕಾರ) ಕಡಿಮೆಯಾಯಿತೆಂದರೆ ಅದರ ತೀವ್ರತೆಯನ್ನು ಊಹಿಸಬಹುದು.

ಬರಗಾಲದ ಪರಿಸ್ಥಿತಿ ಕರ್ನಾಟಕದ ಬಿಜಾಪುರ, ಬಳ್ಳಾರಿ, ಕೋಲಾರ ಹಾಗೂ ಹಾವೇರಿ ಭಾಗದಲ್ಲಿ ಅತಿಯಾಗಿತ್ತು. ಆಹಾರವಿಲ್ಲದೆ ಜನರು ಬಡಕಲು ದೇಹದವರಾಗಿದ್ದರು, ದೇಹದೊಳಗಿನ ಎಲಬುಗಳು ಹೊರಗಡೆ ಬಂದಿದ್ದು ಅವುಗಳನ್ನು ಸುಲಭವಾಗಿ ಎಣಿಸಬಹುದಾಗಿತ್ತು.

ಅದೇ ಸಂದರ್ಭದಲ್ಲಿ ಜನರನ್ನು ಕಾಲರಾ, ಪ್ಲೇಗು ಖಾಯಿಲೆಗಳು ಬಾಧಿಸಿದವು. ಬ್ರಿಟಿಷ್ ಸರಕಾರ ಈ ವಿಪತ್ತನ್ನು ಎದುರಿಸಲು ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವಿಗೆ ಇಂಗ್ಲೆಂಡಿನಿಂದ 28ರ ಪ್ರಾಯದ ಇಂಜಿನಿಯರ್ ಎಡ್ಮಂಡ್ ಸಿಬ್ಸನ್‌ನನ್ನು ನೇಮಕ ಮಾಡಿತು. ಇಲ್ಲಿಯ ಬರಿದಾದ ಕಪ್ಲಿಬಾವಿಗಳನ್ನು, ಒಣಗಿದ ತತ್ರಾಣಿಗಳನ್ನು, ಖಾಲಿಯಾದ ವಾಡೆಗಳನ್ನು (ದವಸ ಧಾನ್ಯಗಳನ್ನು ಸಂಗ್ರಹಿಸಲು ಬಳಸುವ ಬೃಹತ ಮಡಿಕೆ), ಆಹಾರವಿಲ್ಲದೆ ದಾರಿಯಲ್ಲಿ ಅರ್ಧ ಕಣ್ಣುಗಳನ್ನು ತೆರೆದು ಮಲಗಿದ್ದ ಬಡಕಲು ದೇಹದ ಬಡವರನ್ನು ನೋಡಿ ಈ ಅಧಿಕಾರಿ ದುಃಖದಿಂದ ಕಣ್ಣೀರಾದ. ಈ ಗಂಭೀರ ಪರಿಸ್ಥಿತಿಗೆ ಜನರು ಸೆಟೆದು ನಿಲ್ಲಬೇಕು ಅಂದರೆ ಅವರಿಗೆ ಆಹಾರ ಹಾಗೂ ನೀರನ್ನು ಕೊಡುವ ಕೆಲಸ ತಮ್ಮ ಸರಕಾರ (ಇಂಗ್ಲಿಷ್ ಸರಕಾರ) ಮಾಡಬೇಕು ಎಂಬ ನಿರ್ಧಾರವನ್ನು ಎಡ್ಮಂಡ್ ಸಿಬ್ಸನ್ ಪ್ರಕಟಿಸಿದನು.

ಸೈನ್ಯಕ್ಕೆ ಮಾತ್ರ ಮೀಸಲಾಗಿದ್ದ ಅಲೊಪತಿ ವೈದ್ಯರನ್ನು ಜನರ ಸೇವೆಗಾಗಿ ಬಳಸಿಕೊಂಡು ಆಸ್ಪತ್ರೆ ನಿರ್ಮಾಣ ಮಾಡಿದನು. ತನ್ನ ಹೆಂಡತಿ ಮಕ್ಕಳನ್ನು ಇಂಗ್ಲೆಂಡಿನಲ್ಲಿಯೇ ಬಿಟ್ಟುಬಂದಿದ್ದ ಈ ಅಧಿಕಾರಿ ಬಡರೋಗಿಗಳನ್ನು ಹಾಗೂ ಆಹಾರವಿಲ್ಲದ ಬಡವರನ್ನು ತನ್ನ ಮಕ್ಕಳಂತೆ ಉಪಚರಿಸಿದನು. ಪ್ರತಿದಿನ ಜನರು ಮಾಡಿದ ಕೆಲಸಕ್ಕೆ ಕೂಲಿಯಂಬಂತೆ 43 ಗ್ರಾಂ ಬೆಳೆ ಹಾಗೂ 570 ಗ್ರಾಂ ಧಾನ್ಯಗಳ ಪೊಟ್ಟಣವನ್ನು ಕೊಡಲಾರಂಭಿಸಿ ಪ್ರಾಣ ಬಿಡುತ್ತಿದ್ದ ಜೀವಿಗಳಿಗೆ ನವ ಉತ್ಸಾಹವನ್ನು ತುಂಬಿದನು.

ದಾರುಣ ಸಂಗತಿಯೆಂದರೆ ಕ್ರಿ.ಶ 1877ರ ಎಪ್ರಿಲ್ 26 ರಂದು ಎಡ್ಮಂಡ್ ಸಿಬ್ಸನ್ ಸ್ವತಃ ಕಾಲರಾ ರೋಗಕ್ಕೆ ತುತ್ತಾದ. ಪ್ರೀತಿಯ ಮಕ್ಕಳು ಮತ್ತು ಹೆಂಡತಿಯನ್ನು ಕೊನೆಯ ಕ್ಷಣದಲ್ಲಿಯು ನೋಡಲಾಗದೆ ಏಕಾಂಗಿಯಾಗಿ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಪ್ರಾಣ ಬಿಡುತ್ತಾನೆ.

ಕಾಲರಾ ರೋಗಕ್ಕೆ ತುತ್ತಾಗಿದ್ದ ನೂರಾರು ಜೀವಗಳು ಇವನ ಸಹಾಯದಿಂದ ಬದುಕುಳಿದಿದ್ದವು. ಎಡ್ಮಂಡ್ ಸಿಬ್ಸನ್ ಸಾವಿನಿಂದಾಗಿ ಈ ಜೀವಗಳು ಜರ್ಜರಿತರಾಗುತ್ತಾರೆ. ಕ್ರಿಸ್ಚಿಯನ್ ಕೆಥೋಲಿಕ್ ಪಂಗಡಕ್ಕೆ ಸೇರಿದ್ದ  ಎಡ್ಮಂಡ್ ಸಿಬ್ಸನ್‌ನ ಅಂತ್ಯಕ್ರಿಯೆಯನ್ನು ಕೆಥೋಲಿಕ್ ಸಂಪ್ರದಾಯದಂತೆ ಇಂಗ್ಲಿಷ್ ಸರಕಾರದ ಒಪ್ಪಿಗೆಯ  ಮೇರೆಗೆ ಶಿಗ್ಗಾಂವಿಯಲ್ಲಿಯೇ ನೆರವೇಸಿ ಸಿಲುಬೆ ನಿಲ್ಲಿಸುತ್ತಾರೆ. ಈಗಲೂ ಬಿ.ಬಿ.ದೇಸಾಯಿ ಪದವಿಪೂರ್ವ ಕಾಲೇಜು ಮುಂಭಾಗದಲ್ಲಿರುವ ಮೌಲಾಯಿ ನಗರದ ಸ್ಮಶಾನದಲ್ಲಿ ಈತನ ಸಮಾದಿ

ವಿಪತ್ತು ಎದುರಿಸಲು ಇಂಗ್ಲೆಂಡಿನಿಂದ ಬಂದ ಎಡ್ಮಂಡ್ ಸಿಬ್ಸನ್ ಸಾಂಕ್ರಾಮಿಕ ಪಿಡುಗಿಗೆ ಬಲಿಯಾಗಿ ಶಿಗ್ಗಾವಿಯಲ್ಲಿ ಮಣ್ಣಾಗಿದ್ದು ವಿಪರ್ಯಾಸ. 

ಜಿಲ್ಲೆಗೆ 1818 ಹಾಗೂ 1858ರ ನಂತರ ಬಂದ ಕಾಲರಾ, 1862ರ ನಂತರ ಮೇಲಿಂದ ಮೇಲೆ ಬಂದ ಚಳಿಜ್ವರ (ಮಲೇರಿಯಾ), 1898ರ ಪ್ಲೇಗು, 1876-77ರ ಭೀಕರ ಕ್ಷಾಮ ಹಾಗೂ 1918ರಲ್ಲಿ ಬಂದ ಗುದ್ದವ್ವನ ಬೇನೆಯನ್ನು (influenza) ವೈದ್ಯರ ಹಾಗೂ ಸಿಬ್ಬಂದಿಯವರ ಸಹಕಾರ ಹಾಗೂ ಶ್ರಮದಿಂದಾಗಿ ಜಯಿಸಲು ಸಾಧ್ಯವಾಯ್ತು.

ಆಗ ಲಸಿಕೆ ಹಾಕಿಸಿಕೊಳ್ಳಲೂ ಹೆದುರುತ್ತಿದ್ದ ನಮ್ಮವರ ಮನಸ್ಸನ್ನು ಪರಿವರ್ತಿಸಲು ವೈದ್ಯರು ಹರಸಾಹಸ ಪಡಬೇಕಾಯಿತು. ಜಾತ್ರೆಗಳಲ್ಲಿ ಬಂದ ಜನರನ್ನು ಪೊಲೀಸರ ಮುಖಾಂತರ ಹಿಡಿದುಕೊಂಡು ಬಂದು ಲಸಿಕೆ ಹಾಕಿ ರೋಗಗಳನ್ನು ತಹಬಂದಿಗೆ ತಂದರು. ಬ್ರಿಟಿಷ್ ಸರಕಾರ ಜಿಲ್ಲೆಯ ಜನರಿಗೆ (ಅಖಂಡ ಧಾರವಾಡ ಜಿಲ್ಲೆ) ಆರೋಗ್ಯಕರ ವಾತಾವರಣ ನೀಡಲು ಕ್ರಿ.ಶ 1878ರಲ್ಲಿ ಮುನ್ಸಿಪಲ್ ಡಿಸ್ಪೆನ್ಸರಿಯನ್ನು ಹಾವೇರಿಯಲ್ಲಿ ಪ್ರಾರಂಭಿಸಿತು.

ಅಂದು ಈ ಡಿಸ್ಪೇನ್ಸರಿ ದಕ್ಷಿಣ ಧಾರವಾಡ ಭಾಗದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿತ್ತು. ಮುಂದೆ ಇದಕ್ಕೆ 1962ರಲ್ಲಿ ಹೊಸ ಕಟ್ಟಡವನ್ನು ಕಟ್ಟಲಾಯಿತು. ರಾಣೇಬೆನ್ನೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಮುನ್ಸಿಪಲ್ ಡಿಸ್ಪೆನ್ಸರಿಯನ್ನು 26 ಜೂನ್ 1937ರಲ್ಲಿ ಧಾರವಾಡ ಕಲೆಕ್ಟರ್ ವಿ.ಎಸ್.ಬೀಡೆ ಅವರು ಉದ್ಘಾಟಿಸಿದರು. ಸವಣೂರಿನಲ್ಲಿ 1893 ರಂದು ತ್ಯಾಬ್ರಜ್ ಆಸ್ಪತ್ರೆ ಪ್ರಾರಂಭವಾಯಿತು. 1933ರಲ್ಲಿ ಬ್ಯಾಡಗಿಯಲ್ಲಿ, 1905 ರಂದು ಹಿರೇಕೆರೂರನಲ್ಲಿ ಹಾಗೂ ಶಿಗ್ಗಾಂವಿಯಲ್ಲಿ 1940 ರಂದು ಸಮುದಾಯ ಆರೋಗ್ಯ ಕೇಂದ್ರಗಳು ಪ್ರಾರಂಭವಾದವು.

ಖಾಸಗಿ ಅನುದಾನ ಆಸ್ಪತ್ರೆಗಳು ಬ್ಯಾಡಗಿ ಹಾಗೂ ಹೊಸರಿತ್ತಿಯಲ್ಲಿ ಪ್ರಾರಂಭವಾದವು. 1934ರಲ್ಲಿ SMP ಗಳು ತಡಸ, ಹುಲಗೂರು, ದುಂಡಶಿ, ಮೆಡ್ಲೇರಿ, ಕುಪ್ಪೇಲೂರ, ತುಮ್ಮಿನಕಟ್ಟಿ, ತಸವಳ್ಳಿ, ಬೊಮ್ಮನಹಳ್ಳಿ, ಆಡೂರು, ಕುಸಗೂರು, ಗುತ್ತಲ, ಸೂರಣಿಗಿ, ಹಂಸಬಾವಿ, ಕುನ್ನೂರು, ಸೂಡಂಬಿ, ಮಾಸೂರು ಹಾಗೂ ತಡಕನಹಳ್ಳಿಗಳಲ್ಲಿ ಪ್ರಾರಂಭವಾದವು.

Leave a Reply

Your email address will not be published.