ಕಾಲಿಗೆ ಬೀಗ ಹಾಕುವ ಆನ್‌ಲೈನ್ ಕ್ರಾಂತಿ

ಗೋಡೆಯ ಕಿಂಡಿಯಿಂದ ಇಣುಕಿ ನೋಡುವ ಬೆಳಕು ಮತ್ತು ಮೊಬೈಲ್ ತರಂಗಗಳ ನಡುವೆ ಆಯ್ಕೆ ಎದುರಾದರೆ ನಾನಂತೂ ಬೆಳಕಿನತ್ತ ಚಲಿಸುವೆ!

ವರ್ಕ್ ಫ್ರಂ ಹೋಮ್, ನೆಟ್‌ಫ್ಲಿಕ್ಸ್, ಪ್ರೆಮ್, ಆನ್‌ಲೈನ್ ಕ್ಲಾಸ್‌ರೂಮ್, ಟೆಕ್ನಾಲಜಿ, ಇ-ಪುಸ್ತಕಗಳು, ಇ-ಕನ್‌ಸಲ್ಟಿಂಗ್, ಇ-ಪೇಮೆಂಟ್… ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ. ಬಹುಶಃ ಮನುಷ್ಯ ವಿಶ್ವದಾದ್ಯಂತ ಬಳಸಿದ ಪದಗಳ ಪಟ್ಟಿಗಳಲ್ಲಿ ಇವು ಇತ್ತೀಚೆಗೆ ಅತಿ ಹೆಚ್ಚು ಬಳಕೆಯಾದಂತಹವು ಎಂದರೆ ಅತಿಶಯೋಕ್ತಿಯಾಗಲಾರದು.

ಇದೀಗ ತಾನೇ ಶಾಲೆ ಮುಗಿಸಿ, ಬೇಸಿಗೆಯ ರಜೆಯಲ್ಲಿರಬೇಕಿದ್ದ ಮಗಳು ನಮ್ಮಿಬ್ಬರನ್ನೂ ದಿನವಿಡೀ ಮನೆಯಲ್ಲೇ ನೋಡಿ ಖುಷಿಪಟ್ಟಳು. ಶಾಲೆಯ ನಂತರ ಕೆಲವು ತಾಸು ಇರುತ್ತಿದ್ದ ಪ್ಲೇಹೋಮ್ ಕೂಡ ಇಲ್ಲದ್ದರಿಂದ ಅದೂ ಒಂದು ರೀತಿಯ ಆಶ್ಚರ್ಯ. ಗೆಳೆಯರೂ ಮನೆಗೆ ಬರಲೊಲ್ಲರು, ನಾವೇ ಆಟ ಆಡಿಸುತ್ತೇವೆ, ಓದಿಸುತ್ತೇವೆ. ಇಬ್ಬರ ಉದ್ಯೋಗವೂ ಐ.ಟಿ ಯಲ್ಲಿಯೇ ಆದ್ದರಿಂದ ದಿನನಿತ್ಯ ನಾವು ಮನೆಯಲ್ಲಿ ಬಳಸುವ ತಂತ್ರಜ್ಞಾನ ಸಂಬAಧಿ ವಸ್ತುಗಳಲ್ಲಿ ಬದಲಾವಣೆ ಏನೂ ಆಗಿಲ್ಲ.

ಇತ್ತೀಚೆಗೆ ನಾಲ್ಕು ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಪೋರಿಗೆ ಯಂತ್ರಗಳು, ಸ್ವಯಂಚಾಲಿತ ಕೆಲಸಗಳು, ಮನೆಕೆಲಸದವರು, ಅಡುಗೆಯವರು ಹೀಗೆ ಸಾಂದರ್ಭಿಕ ವಿಷಯಗಳ ಚರ್ಚೆ ಮಾಡುತ್ತಾ ಮನೆಯಲ್ಲೇ ಶಾಲೆ ಪ್ರಾರಂಭವಾಗಿಬಿಟ್ಟಿದೆ. ಮೊಬೈಲ್, ಟೀವಿ. ಲ್ಯಾಪ್‌ಟಾಪ್, ಟ್ಯಾಬ್ ಹೀಗೆ ಹತ್ತು ಹಲವಾರು ಗ್ಯಾಜೆಟ್‌ಗಳು ಸುತ್ತಲೇ ಇದ್ದರೂ ಕತೆ, ಕವನ, ಬಣ್ಣ, ಹಾಡು, ಟೆರೇಸಿನ ಮೇಲೆ ಆಡಿದ ಕ್ರಿಕೆಟ್, ಶಟಲ್‌ಕಾಕ್, ಜೂಟಾಟ ಇತ್ಯಾದಿ ಸಾಮಾನ್ಯಕ್ಕಿಂತ ಹೆಚ್ಚೇ ಇದ್ದದ್ದು ತೃಪ್ತಿ ತಂದಿದೆ. ಆದರೂ ಬಟ್ಟೆ ತೊಳೆದು, ಪೂರ್ಣ ಆರಿಸಿಕೊಡಬಲ್ಲ ವಾಷಿಂಗ್ ಮಷೀನಿಗೆ ಜೊತೆಯಾಗುವಂತೆ ಬಟ್ಟೆ ಮಡಿಸಿ ಇಡುವ ರೋಬೋಟ್ ಮಾಡಬೇಕಲ್ಲಾ ಎನ್ನುವ ನಮ್ಮ ಪುಟ್ಟಿಯ ಪ್ರಶ್ನೆ ಈಗಲೂ ನನ್ನನ್ನು ಚಕಿತನೂ, ಸಂದಿಗ್ಧನೂ ಆಗುವಂತೆ ಮಾಡುತ್ತದೆ.

ಕಾರಣ ಇಷ್ಟೇ, ತಂತ್ರಜ್ಞಾನವೇ ನಮ್ಮೆಲ್ಲ ಪ್ರಶ್ನೆಗಳಿಗೂ ಉತ್ತರ ಎನ್ನುವ ಮನುಷ್ಯನ ಗರ್ವಕ್ಕೆ ಕೊರೋನಾ ದೊಡ್ಡ ಪೆಟ್ಟುಕೊಟ್ಟು, ಈ ವಿಷಯವನ್ನು ಅವಲೋಕಿಸಿ ನೋಡಲು ಅವಶ್ಯವಾಗಿ ಬೇಕಿದ್ದ ಸಮಯ ಹಾಗೂ ಸಾವಕಾಶವನ್ನು ಎಲ್ಲರಿಗೂ ಒಮ್ಮೆಲೆ ಕೊಟ್ಟದ್ದು. ಇದೆಲ್ಲದರ ಮಧ್ಯೆ ತಂತ್ರಜ್ಞಾನ ಬಳಸಿಕೊಳ್ಳಲು ಸಾಧ್ಯವಾಗದೆ ಪ್ಲೇ-ಹೋಮ್ ಇಡೀ ವರ್ಷ ಮುಚ್ಚುತ್ತಿರುವುದಾಗಿ ಸುದ್ದಿ ಬಂದಿದೆ.

ಇಂಟರ್ನೆಟ್‌ನಲ್ಲಿ ಎಲ್ಲವೂ ದೊರೆಯುತ್ತದೆ -ಎಳೆಯರಿಂದ ಹಿಡಿದು ಮುದುಕರವರೆಗೂ ಈ ಸಾಲು ಉಪದೇಶ ವಾಕ್ಯವಾಗಿದೆ. ಈ ವಾಕ್ಯ ನಿಜವಲ್ಲ ಎಂದು ಹೇಳಬಹುದೆನಿಸಿದೆ. ಈಗ ಸ್ಕೂಲು ಮನೇಲೆ ಅಲ್ವೇ? ಮಕ್ಕಳಿಗೆ ಬೇಕಾದ ವಿಷಯಗಳ ಬಗ್ಗೆ ರಾಶಿ ರಾಶಿ ಮಾಹಿತಿ, ಅವಶ್ಯ ಸಂಪನ್ಮೂಲ ಇತ್ಯಾದಿಗಳನ್ನು ಹುಡುಕಿ ತೆಗೆದು, ಅದರಲ್ಲಿ ಕೆಲವನ್ನು ಅರ್ಥ ಮಾಡಿಕೊಂಡು ಹೇಳಿಕೊಡಲು ಪ್ರಯತ್ನಿಸಿ ಸೋತವರಿಂದ ನಮ್ಮ ಪಯಣ ಪ್ರಾರಂಭವಾಗಬಹುದು. ಕಲಿಯುವುದು ಮತ್ತು ಕಲಿಸುವುದು -ಎರಡಕ್ಕೂ ಶಾಲೆ ಮತ್ತು ಶಿಕ್ಷಕರು ಸೇತುವೆ ಅಲ್ಲವೇ? ಈಗ ಈ ಜಾಗ ತುಂಬಿಸುವುದಕ್ಕೆ ಪೋಷಕರೇ ನಿಲ್ಲಬೇಕಿದೆ.

ಆನ್‌ಲೈನ್‌ಕ್ಲಾಸ್ ಇದೆ ಎಂದಾಕ್ಷಣ ಎಲ್ಲಾ ಮಕ್ಕಳನ್ನೂ ಕಂಪ್ಯೂಟರಿನ ಮುಂದೆ ತಂದು ನಿಲ್ಲಿಸಿದರೆ ಸಾಲದು, ಅವರ ಗಮನ ಕಾಪಿಡುವ (ಅಟೆನ್ಷನ್ ಸ್ಪ್ಯಾನ್), ಅವರಿಗೆ ಅರಗಿಸಿಕೊಳ್ಳಲಾಗದ, ಆನ್‌ಲೈನ್ ಮಾತುಕತೆಯಲ್ಲೇ ಕಳೆದುಹೋದ ಮಾಹಿತಿಯನ್ನು ಮತ್ತೆ ವಿವರಿಸಿ ಹೇಳಬೇಕಾದ ಅವಶ್ಯಕತೆಗಳಿಗೆ ಒಬ್ಬರು ಜೊತೆಗೆ ನಿಲ್ಲಲೇಬೇಕಾಗುತ್ತದೆ. ಒಂದಕ್ಕಿAತ ಹೆಚ್ಚು ಮಕ್ಕಳು ಮನೆಯಲ್ಲಿದ್ದರೆ ಆ ಕ್ಷಣ ನೆನಪಿಸಿಕೊಳ್ಳಿ. ಪೋಷಕರಿಬ್ಬರೂ ಪೂರ್ಣಾವಧಿ ಕೆಲಸದಲ್ಲಿದ್ದಲ್ಲಿ ಹಾಗೂ ಬದುಕಿನ ನಿರ್ವಹಣೆಗೆ ಎರಡೂ ಸಂಬಳ ಅವಶ್ಯವಿದ್ದಲ್ಲಿ ನಿಮ್ಮ ಸಮಯದ ಹಂಚಿಕೆಯ ಪರಿಮಾಣ ಮಕ್ಕಳ ಶಿಕ್ಷಣದ ಕಡೆಗೆ ಎಷ್ಟು ಇರಬೇಕು ಹಾಗೂ ಇರುತ್ತದೆ?

ಮಕ್ಕಳಿಗೆ ಬೋರ್ಡ್ ಮೇಲೆ ಬರೆಯುತ್ತಿದ್ದ ಮಾಹಿತಿಯನ್ನು ಕನ್ನಡ, ಹಿಂದಿ ಇತ್ಯಾದಿ ಭಾಷೆಗಳಲ್ಲಿ ಟೈಪಿಸಿ ಅದನ್ನು ಪೋಷಕರಿಗೆ ತಲುಪಿಸುವ ಕೆಲಸ, ನಂತರ ಆ ಮಾಹಿತಿ ಯುನಿಕೋಡ್‌ನಲ್ಲಿ ಇಲ್ಲದೆ, ಅದನ್ನು ತೆರೆದು ನೋಡಲು ಸಾಧ್ಯವಾಗುವಂತೆ ಬೇಕಿರುವ ತಾಂತ್ರಿಕ ಸಹಾಯ ನೀಡುವ ಸವಲತ್ತು ಶಿಕ್ಷಕರಿಗೆ, ಶಾಲೆಗಳಿಗೆ ಲಭ್ಯವಿರಬೇಕಾಗುತ್ತದೆ. ಇದೆಲ್ಲಕ್ಕೂ ಮುಂಚೆ ಸಾಮಾನ್ಯ ತರಗತಿಗಳಲ್ಲಿ ಪಾಠ ಮಾಡುವುದಕ್ಕೂ ಆನ್‌ಲೈನ್ ಪಾಠಗಳಿಗೂ ಬೇರೆಯದೇ ಪೂರ್ವಾಲೋಚನೆ ಮತ್ತು ಲಹರಿಯ ಅವಶ್ಯಕತೆ ಇದೆ. ಇದಕ್ಕೆ ಅವಶ್ಯಕವಾದ ತಂತ್ರಜ್ಞಾನ -ಮೊಬೈಲ್, ವಿಡಿಯೋ ತೆಗೆಯುವುದು, ವಿತರಣೆಗೆ ಎಲ್.ಎಂ.ಎಸ್. (ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಂ) ಇತ್ಯಾದಿ. ಕ್ಷಮಿಸಿ ನಾವು 4ಜಿ, 5ಜಿ ತಂತ್ರಜ್ಞಾನ ಬಳಸಿ, ಇಂಟರ್ನೆಟ್ ಸೌಲಭ್ಯ, ಮನೆಯಲ್ಲಿ ಎಲ್ಲರಿಗೂ ಒಂದರಂತೆ ಇರುವ ಮೊಬೈಲ್, ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳಿರುವ ಪರಿವಾರಗಳ ಬಗ್ಗೆ ಮಾತನಾಡುತ್ತಿದ್ದೇವಷ್ಟೆ. ಇದೇ ಸ್ಥಿತಿ ಬೆಂಗಳೂರಿನಾಚೆಯ ನಗರ ಹಾಗೂ ಹಳ್ಳಿ ಪ್ರದೇಶಗಳಿಗೂ ಇವೆಯೇ? ಅಲ್ಲಿನ ಶಾಲೆಗಳ ನಿರ್ವಹಣೆ, ಶಿಕ್ಷಕರ ತಾಂತ್ರಿಕ ಕೌಶಲ್ಯ, ಮಕ್ಕಳು ಮತ್ತು ಪೋಷಕರ ಆರ್ಥಿಕ ಪರಿಸ್ಥಿತಿ ಇವೆಲ್ಲಾ ಹೇಗಿವೆ?

ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಒಂದು ಅಸ್ತ್ರ ಶಿಕ್ಷಣ ಎಂದಾದರೆ, ಇಂದು ಇದೇ ವಿಷಯ ಹೊಸ ಅಸಮಾನತೆಯನ್ನು ನಮ್ಮ ಸಮಾಜದಲ್ಲಿ ಎತ್ತಿ ತೋರಿಸುತ್ತಿದೆ. ಶೇ 95ರಷ್ಟು ಕೆಲಸವನ್ನು ಸಾಮಾನ್ಯವಾಗಿ ಆನ್‌ಲೈನ್‌ನಲ್ಲೇ ಮುಗಿಸುವ ನನಗೆ ಈ ಅಸಮಾನತೆಯನ್ನು ಹೋಗಲಾಡಿಸಲು ತಂತ್ರಜ್ಞಾನ ಒಂದೇ ಉತ್ತರ ಆಗಲಾರದು ಎನಿಸುತ್ತದೆ.

ಬೆಳಗಿನ ಜಾವ ಹಾಲು ತರುವುದಕ್ಕೆ, ಪೇಪರ್, ತರಕಾರಿ ಇತ್ಯಾದಿಗಳಿಗೆ ಖರ್ಚು ಮಾಡಲು ಇಂದು ನಮ್ಮಲ್ಲಿ ಅನೇಕರು ಪೇಟಿಎಮ್, ಭೀಮ್ ಇತ್ಯಾದಿ ಬಳಸುತ್ತಿದ್ದೇವೆ. ಇದೇ ಸಮಯದಲ್ಲಿ ದಿನನಿತ್ಯ ಸಂತೆಯಿAದ ಹಣ್ಣು ತರಕಾರಿ ತಂದು ನಮ್ಮ ಮನೆ ಬಾಗಿಲಿಗೆ ಮಾರುತ್ತಿದ್ದ ಜನ ಚಪ್ಪಲಿ ಸವೆಸಿ ಊರಿನ ತಮ್ಮ ಮನೆ ಸೇರಿ ಆಗಿದೆ. ಅವರಿಗೆ ತಮ್ಮ ಪೇಟಿಎಮ್‌ನಲ್ಲಿನ ಹಣ ತೆಗೆದುಕೊಳ್ಳುವುದಕ್ಕೆ ಬ್ಯಾಂಕ್ ಇತ್ಯಾದಿ ಕೆಲಸ ಮಾಡಿದರೂ ಸಾಕು ಅಥವಾ ಅವರ ಊರಿನಲ್ಲೂ ಇಂಟರೆನೆಟ್ ಇದ್ದು ಬಳಕೆ ಸಾಧ್ಯವಾದರೆ ಸಮಾಧಾನ. ನಗರಗಳಲ್ಲಿ ಅಮೇಜಾನ್, ರಿಲಯನ್ಸ್, ಬಿಗ್‌ಬಜಾರ್ ಇತ್ಯಾದಿಗಳಿಗೆ ಜನ ಗುಳೇ ಹೋದದ್ದಾಗಿದೆ. ತನ್ನ ಕಾಲ ಮೇಲೆ ತಾನೇ ನಿಲ್ಲಬೇಕು ಎಂದುಕೊಂಡವನ ಅದೆಷ್ಟೋ ಕನಸುಗಳು ತಾಂತ್ರಿಕತೆಯಿಂದ ತಳಪಾಯ ಹಿಡಿದಿವೆ. ಇವುಗಳ ಮಧ್ಯೆ ಅಲ್ಲೊಂದು ಆಶಾಕಿರಣ ಎಂದರೆ -ಹೈಪರ್ ಲೋಕಲ್ ಡೆಲಿವೆರಿ- ನಿಮ್ಮ ಸುತ್ತಮುತ್ತಲಿನ ಕಿರಾಣಿ ಅಂಗಡಿಗಳಿಂದಲೇ ನಿಮ್ಮ ಮನಗೆ ಅವಶ್ಯಕತೆ ಪೂರೈಸುವ ಸಾಧ್ಯತೆ. ಆದರೆ ತಳ್ಳುಗಾಡಿಯವ, ಆ ತರಕಾರಿ-ತರಕಾರಿ ಧ್ವನಿ -ನಿಮಗೆ ಎಷ್ಟು ಕೇಳುತ್ತಿದೆ?

ತಿಂಡಿ ಊಟಕ್ಕೂ ಆನ್‌ಲೈನ್ ಇದೆಯಲ್ಲಾ? ತಿಂದು ಕೆಲಸ ಮಾಡಲು 3×3 ಜಾಗ, ಇಂಟರ್ನೆಟ್, ಮಕ್ಕಳ ಗದ್ದಲದಿಂದ ಸ್ವಲ್ಪ ದೂರವಾದರೆ 8 ಗಂಟೆ ಕೆಲಸ ಮಾಡಿ ಮುಗಿಸಬಹುದಲ್ಲವೇ? ಏನು ಮಹಾ. ಟ್ರಾಫಿಕ್‌ನಲ್ಲಿ ಸವೆಸುತ್ತಿದ್ದ 3-4 ತಾಸು ಉಳಿಸಿಬಿಟ್ಟಿದ್ದೇವೆ ಎಂದು ಕೊಂಡರೆ, ಸಾಧ್ಯವೇ ಇಲ್ಲ. 12-14 ಗಂಟೆ ಸಾಮಾನ್ಯವಾಗಿ ನೀವು ಕಂಪ್ಯೂಟರಿನ, ಫೋನಿನ ಪರೆದೆಯ ಮೇಲೆ ವ್ಯಯಿಸುವ ಅವಧಿ. ಈ ಸಮಯದ ಹೆಚ್ಚಳಿಕೆಗೆ ನಮ್ಮ ತಂತ್ರಜ್ಞಾನದ ಕೊಡುಗೆ ಹಾಗೂ ಆನ್‌ಲೈನ್ ಕೆಲಸಕ್ಕೆ ಪೂರ್ಣ ಪ್ರಮಾಣದಲ್ಲಿ ತರಬೇತುಗೊಂಡಿರದ ಮಾನವ ಸಂಪನ್ಮೂಲ ಮತ್ತು ಅದರ ನಿರ್ವಹಣೆಗೆ ಆಡಳಿತ ವರ್ಗಕ್ಕೆ ಇರುವ ವಿಶ್ವಾಸಾರ್ಹತೆಯ ಮಟ್ಟ ಕಾರಣವಿರಬಹುದು.

ಇವೆಲ್ಲದರ ಮಧ್ಯೆ ಆಟೋಮೇಷನ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ತಾಂತ್ರಿಕ ಸಾಧ್ಯತೆಗಳಲ್ಲದೆ ಸಾಂಸ್ಥಿಕ ಆರ್ಥಿಕತೆಯ ಮೇಲೆ ಹೊಡೆತ, ಮಾರುಕಟ್ಟೆಯ ಕುಸಿತ ಇತ್ಯಾದಿಗಳ ಕಾರಣದಿಂದ ಕೆಲಸ ಕಳೆದುಕೊಂಡವರ ಹಾಗೂ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಏರುತ್ತಿದೆ. 20 ರಿಂದ 30 ವರ್ಷದ 27ಮಿಲಿಯನ್ ಭಾರತೀಯ ಯುವಕರು ಹಾಗೂ 37 ಮಿಲಿಯನ್ ಅಮೇರಿಕನ್ನರು ಕೆಲಸ ಕಳೆದುಕೊಂಡಿದ್ದಾರೆ. ವರ್ಡ್ ಎಕನಾಮಿಕ್ ಫೋರಂ ಪ್ರಕಾರ ಕಳೆದುಕೊಂಡ 5 ರಲ್ಲಿ 2 ಕೆಲಸ ಮತ್ತೆ ಸಿಗದೆ ಹೋಗಬಹುದು.

ಭಾರತದಲ್ಲಿ ಸಣ್ಣಪುಟ್ಟ ಸ್ಟಾರ್ಟಪ್ಪುಗಳಲ್ಲಿ ಕೆಲಸ ಮಾಡುವವರಿಗೆ ತಮ್ಮ ಗ್ರಾಹಕನನ್ನು ಮುಖತಃ ಭೇಟಿ ಮಾಡುವ ಅವಶ್ಯಕತೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹೊಸದಾಗಿ ಕೆಲಸಕ್ಕೆ ಸೇರುವ ಇಂಟರ್ನ್ ಗಳಿಂದ ಹಿಡಿದು ಅದೆಷ್ಟೋ ವಿಷಯಗಳಿಗೆ ವಿಡಿಯೋಕಾಲ್ ಪರ್ಯಾಯ ಆಗಲಾರದು. ಸಂಶೋಧನೆಯಿAದ ಹಿಡಿದು ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರಲು ಅಖಾಡಕ್ಕೆ ಇಳಿಯಲೇಬೇಕು. ಲಾಕ್ಡೌನ್ ಶಾಶ್ವತ ಅಲ್ಲದಿದ್ದರೂ, ಅದು ಈಗಾಗಲೇ ಸೃಷ್ಟಿಸಿರುವ ಕಂಪನ ಸಂಸ್ಥೆಗಳ, ಗ್ರಾಹಕರ, ಕೆಲಸ ಹುಡುಕುವರರ ಉದ್ವೇಗ ಹೆಚ್ಚಿಸಿದೆ. ಅರಳಿಕಟ್ಟೆಯ ಸುತ್ತಲಿನ ಹರಟೆಯೊಳಗಿನ ಕೆಲಸಗಳು, ಕಾಫಿ ಡೇ, ಉಪಾಹಾರ ದರ್ಶಿನಿಯಲ್ಲಿನ ವ್ಯವಹಾರಗಳು ಫೇಸ್‌ಬುಕ್, ವಾಟ್ಸಾಪ್ ಅಂಗಳಕ್ಕಿಳಿದರೂ -ವ್ಯವಹಾರ ಕುದುರಿಸಲು ಪರದೆಯ ಹೊರಗೆ ತಲೆ ಹಾಕಲೇ ಬೇಕಿದೆ.

ಯಾಂತ್ರಿಕವಾದ ಬದುಕಿನ ನಡುವೆ ದೊರೆತ ಈ ಕಾಲ ಅನೇಕರಿಗೆ ತಮ್ಮ ಕನಸುಗಳನ್ನು ಸಾವಕಾಶವಾಗಿ ನೋಡಿ, ಅದರ ಬೆಂಬತ್ತಲು ಇಂಬು ನೀಡಿರಬಹುದು. ಜೊತೆಗೇ ಅವನ್ನು ನನಸಾಗಿಸಲು ಬೇಕಿರುವ ಕೌಶಲ್ಯಗಳನ್ನು ದೃಢಪಡಿಸಿಕೊಳ್ಳಲು, ಮತ್ತಷ್ಟು ಕಲಿತು ಗಟ್ಟಿಗೊಳ್ಳಲು ಅವಕಾಶ ನೀಡಿರಬಹುದು. ಯೂಟ್ಯೂಬ್, ಗೆಳೆಯರೊಂದಿಗಿನ ವಾಟ್ಸ್ಆಪ್, ಫೇಸ್‌ಟೈಮ್‌ಗಳು, ಹತ್ತಾರು ಮೂಕ್ (MooC) ಮಾರ್ಗದರ್ಶಿಗಳಾಗಿಯೂ ಕೆಲಸ ಮಾಡಿರಬಹುದು. ಇದೇ ಸಂದರ್ಭ ಸಾಧ್ಯಾಸಾಧ್ಯತೆಗಳನ್ನು ಮತ್ತೆ ಮತ್ತೆ ಒರೆಗೆ ಹಚ್ಚಿ ನೋಡಲು ಅವಶ್ಯವಾದ ಟೆಸ್ಟ್ಬೆಡ್ ಅನ್ನುವ ಪ್ರಯೋಗಾತ್ಮಕ ವೇದಿಕೆ ನೀಡಿದೆ. ಇದೆಲ್ಲದರ ನಡುವೆ ಖಿನ್ನತೆಯ ಭೂತ ಕೂಡ ಬೆನ್ನ ಹಿಂದೆ ಬಿದ್ದಿದೆ. ಆನ್‌ಲೈನ್ ಕೌನ್ಸಲಿಂಗ್ ಎನ್ನುವ ಹೊಸ ತಾಲೀಮು ಅಂಗೈ ಹಿಡಿದು ಭರವಸೆಯ ಬಿಗಿ ಅಪ್ಪುಗೆ ನೀಡುವಷ್ಟು ಸೌಖ್ಯವೆನಿಸಿಲ್ಲ.

ಸಬ್‌ಸ್ಕ್ರೈಬ್ ಮಾಡಿದ ಜಿಮ್ ಮೆಂಬರ್‌ಶಿಪ್‌ಗಳು, ಆನ್‌ಲೈನ್ ಕ್ಲಾಸುಗಳು ಎಲ್ಲದಕ್ಕೂ ಪ್ರಕೃತಿಯ ಟಚ್ ಬೇಕೇ ಬೇಕು. ವ್ಯಾಪಾರಿ ಮತ್ತು ಗ್ರಾಹಕರ ನಡುವಿನ ಸಂಬಂಧ ಕೇವಲ ಹಣಕಾಸಿನದ್ದಾಗಿರದೆ, ಸಾಮಾಜಿಕ ಸಮುದಾಯದ ಭಾವನಾತ್ಮಕ ಸಂಬಂಧವೂ ಆಗಿದೆ. ನಮ್ಮ ವ್ಯವಹಾರದ ಮಧ್ಯೆ ದಿನದ ಹಸಿವೆ ನಿವಾರಿಸುವ ಕೈಗಳಿಗೆ ನಮ್ಮ ಬೆರಳ ಮೊಬೈಲ್ ಟಚ್‌ಗಳು ಮಂತ್ರದಂಡ ಅಥವಾ ಅಕ್ಷಯ ಪಾತ್ರೆ ಆಗಲಾರವು. ಅದೇ ಬೆರಳು ಬಣ್ಣಗಳ, ಪುಸ್ತಕಗಳ, ಮಣ್ಣಿನ ಮೊರೆ ಹೋದರೆ, ಹೊಸ ಸಾಧ್ಯತೆಗಳ ಆಗರವೇ ನಮ್ಮ ಮುಂದೆ ಬಂದು ನಿಲ್ಲಬಲ್ಲದು. ನನ್ನ ಮಗಳ ಜೊತೆಗೆ ಬಣ್ಣಗಳ ಮೊರೆ ಹೋದ ನನಗೆ ಮುಂದಿನ ದಿನಗಳ ಕೆಲವು ಪುಟಗಳಲ್ಲಿಯಾದರೂ ಹೊಸ ಆಯ್ಕೆಗಳ, ಆಯಾಮಗಳ, ಯೋಜನೆಗಳ ಚಿತ್ರಣ ಚಿತ್ರಿಸಲು ಸಾಧ್ಯವಾಗಿದೆ.

ನಾಲ್ಕು ಗೋಡೆಗಳ ಸಖ್ಯ ಸಾಕೆನಿಸಿದಾಗ, ಗೊತ್ತು ಗುರಿಯಿಲ್ಲದ ಮನಸ್ಸಿಗೆ ಒಂದು ಬ್ರೇಕ್ ನೀಡಲು ಒಬ್ಬಂಟಿಗನಾಗಿಯೋ, ಮನೆಯವರ ಜೊತೆಗೋ, ಗೆಳೆಯರ ಜೊತೆಗೋ ಹೊರನಡೆಯುತ್ತಿದ್ದ ಕಾಲುಗಳಿಗೀಗ ಬೀಗ ಬಿದ್ದಂತಾಗಿದೆ.

 

*ಲೇಖಕರು ಐಟಿ ತಂತ್ರಜ್ಞರಾಗಿ 20 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದು, ಕನ್ನಡ ಭಾಷಾ ತಂತ್ರಜ್ಞಾನ, ಡಿಜಿಟಲೀಕರಣದ ಸುತ್ತ ಕೆಲಸ ಮಾಡುತ್ತಿರುವ ಲಾಭರಹಿತ ಸಂಸ್ಥೆಗಳಾದ ಸಂಚಿ ಫೌಂಡೇಷನ್ ಹಾಗೂ ಸಂಚಯದ ಸಹ-ಸಂಸ್ಥಾಪಕರಾಗಿದ್ದಾರೆ.

 

 

Leave a Reply

Your email address will not be published.