ಕಾಲ, ದೇಶದ ಹಂಗು ಮೀರಿ…

ಫೆಬ್ರವರಿ 21ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆದ

11ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ

ಕೆಲವು ಸಿನಿಮಾಗಳನ್ನು ಕುರಿತ ಟಿಪ್ಪಣಿಗಳು ಇಲ್ಲಿವೆ.

 

THREE FACES (ಮೂರು ಮುಖಗಳು)

ಆಕೆ ಹದಿಹರೆಯದ ಹುಡುಗಿ, ಮಾರ್ಜಿಯಾ. ಇರಾನ್‍ನ ದೂರದ, ಬೆಟ್ಟಗಾಡುಗಳ ತಪ್ಪಲಲ್ಲಿರುವ ಹಳ್ಳಿಯಲ್ಲಿ ತನ್ನ ಪೋಷಕರು ಮತ್ತು ಅಣ್ಣನೊಂದಿಗೆ ವಾಸಿಸುತ್ತಿರುತ್ತಾಳೆ. ಅದು ಸಂಪೂರ್ಣ ಕರ್ಮಠತನದ, ಸಾಂಪ್ರದಾಯಿಕವಾದ, ಪುರುಷಾಧಿಪತ್ಯದಲ್ಲಿ ತೇಕುತ್ತಿರುವ ಗ್ರಾಮ. ಆದರೆ ಮಾರ್ಜಿಯಾಗೆ ಟೆಹರಾನ್‍ನಲ್ಲಿ ಸಂಗೀತ ಅಭ್ಯಾಸ ಮಾಡಿ ಚಿತ್ರನಟಿಯಾಗುವ ಆಸೆ. ಆದರೆ ಆಕೆಯ ಗ್ರಾಮದ ಸಂಪ್ರದಾಯವಾದಿಗಳು ಈ ಸಿನಿಮಾ, ಸಂಗೀತ ಎಲ್ಲವೂ ಧರ್ಮವಿರೋಧಿ ಎಂದು ತಿರಸ್ಕರಿಸುತ್ತಾರೆ. ಮಾರ್ಜಿಯಾಳನ್ನು ತಲೆಕಟ್ಟವಳು, ಖಾಲಿ ತಲೆಯವಳು ಎಂದು ಹಂಗಿಸುತ್ತಾರೆ ಮತ್ತು ಆಕೆ ಗೃಹಬಂಧನದಲ್ಲಿರುತ್ತಾಳೆ.

ಮತ್ತೊಬ್ಬಾಕೆ ಕ್ರಾಂತಿಪೂರ್ವದ ಮಾಜಿ ಚಿತ್ರನಟಿ ಶಹರ್ಜಾದೆ. ತನ್ನ ಸಿನಿಮಾ ಬದುಕಿನ ಆ ಮೇರು ದಿನಗಳು ಕೊನೆಗೊಂಡು ನಿವೃತ್ತಿಯ ದಿನಗಳಲ್ಲಿ ಮಾರ್ಜಿಯಾಳ ಹಳ್ಳಿಗೆ ನೆಲೆಸಲು ಬರುತ್ತಾಳೆ. ವೈರುಧ್ಯವೆಂದರೆ ಈ ಮಾಜಿ ನಟಿಯನ್ನು ಆಕೆಯ ಸಿನಿಮಾಗಳನ್ನು ಆನಂದಿಸುವ, ಹೊಗಳುವ ಗ್ರಾಮಸ್ಥರು ವಾಸ್ತವ ಬದುಕಿನಲ್ಲಿ ಈ ನಟಿಯನ್ನು ತಿರಸ್ಕರಿಸುತ್ತಾರೆ. ಈಕೆ ತಮ್ಮ ಗ್ರಾಮವನ್ನು ಹಾಳು ಮಾಡಿಬಿಡುತ್ತಾಳೆ ಎಂದು ಅಪಪ್ರಚಾರ ಮಾಡುವ ಅಲ್ಲಿನ ಗಂಡಸರ ಯಾಜಮಾನಕಿ ಕಾರಣಕ್ಕೆ ಈ ಮಾಜಿ ನಟಿ ಬಹಿಷ್ಕಾರಕ್ಕೆ ಒಳಗಾಗುತ್ತಾಳೆ ಮತ್ತು ಊರ ಹೊರಗೆ ಏಕಾಂಗಿಯಾಗಿ ಬದುಕುತ್ತಾಳೆ.

ಮೂರನೆಯವಳು ಹಾಲಿ ಜನಪ್ರಿಯ ಸಿನಿಮಾ ತಾರೆ ಬೆಹನ್‍ಜ್ ಜಫಾರಿ. ಇರಾನ್‍ನ ಸಿನಿಮಾರಂಗದಲ್ಲಿ ಪ್ರಖ್ಯಾತಿ ಗಳಿಸಿದ ಜಫಾರಿ ಟಿವಿಯಲ್ಲೂ ಅಭಿನಯಿಸುವುದರ ಮೂಲಕ ಎಲ್ಲಡೆ ಚಿರಪರಿಚಿತಳು. ಈ ಜಫಾರಿಯ ಅಭಿಮಾನಿಯಾದ ಮಾರ್ಜಿಯಾ ಆಕೆಗೆ ಒಂದು ವಿಡಿಯೋ ಕಳುಹಿಸುವುದರ ಮೂಲಕ ಈ ಸಿನಿಮಾ ಆರಂಭವಾಗುತ್ತದೆ. ಆ ವಿಡಿಯೋದಲ್ಲಿ ಮಾರ್ಜಿಯಾ ತನ್ನ ಮನೆಯಲ್ಲಿ ತನಗಾಗುತ್ತಿರುವ ಕಿರುಕುಳ ಮತ್ತು ತಾನು ಚಿತ್ರನಟಿಯಾಗಲು ಈ ಸಂಪ್ರದಾಯವಾದಿಗಳು ತಡೆಯೊಡ್ಡುತ್ತಿರುವುದನ್ನು ವಿವರಿಸುತ್ತಾ ತಾನು ಜಫಾರಿಗೆ ಈ ಹಿಂದೆ ಅನೇಕ ಬಾರಿ ಕರೆ ಮಾಡಿದರೂ ಆಕೆ ಆ ಕರೆ ಸ್ವೀಕರಿಸದ ಕಾರಣಕ್ಕೆ ತಾನು ಭ್ರಮನಿರಶನ ಹೊಂದಿದ್ದೇನೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಚಿತ್ರೀಕರಿಸಿ ನಿರ್ದೇಶಕ ಜಾಫರ ಪನಾಹಿಗೆ ಕಳಿಸುತ್ತಾಳೆ.

ಇದನ್ನು ನೋಡಿದ ಬೆಹನ್‍ಜ್ ಜಫಾರಿ ಆತಂಕಗೊಳ್ಳುತ್ತಾಳೆ ಮತ್ತು ಗೆಳೆಯ, ನಿರ್ದೇಶಕ ಜಾಫರ್ ಪನಾಹಿ ಜೊತೆಗೆ ಆ ಬೆಟ್ಟಗುಡ್ಡಗಳ ಗ್ರಾಮಕ್ಕೆ ಪ್ರಯಾಣ ಮಾಡುತ್ತಾಳೆ. ಜಫಾರಿಗೆ ಆ ಹುಡುಗಿ ಮಾರ್ಜಿಯ ಆಟವಾಡುತ್ತಿದ್ದಾಳೆ ಎನ್ನುವ ಅನುಮಾನ. ಆದರೆ ಪನಾಹಿಗೆ ಇಲ್ಲ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ನಂಬಿಕೆ. ಇವರಿಬ್ಬರೂ ಆ ಹಳ್ಳಿಗೆ ಹೋದ ನಂತರ ಬೇರೆಯದೆ ಚಿತ್ರಣ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆ ಗ್ರಾಮದ ಇತರ ಮುಖಗಳು ಅನಾವರಣಗೊಳ್ಳುತ್ತವೆ.

ಈ ಮೂವರು ಮಹಿಳೆಯರ ಬದುಕಿನ ಕಥನ ಈ ಮೂರು ಮುಖಗಳು.

ಸ್ವತಃ ಅಭಿನಯಿಸಿ ನಿರ್ದೇಶಿಸುತ್ತಿರುವ ಜಾಫರ್ ಪನಾಹಿ ಇರಾನ್‍ನ ಸೂಕ್ಷ್ಮ ಸಂವೇದನಾಶೀಲ ನಿರ್ದೇಶಕ. ನವ-ವಾಸ್ತವತಾವಾದ ಸಿನಿಮಾಗಳನ್ನು ನಿರ್ದೇಶಿಸಿದ ಪನಾಹಿ ಇರಾನ್ ಸಿನಿಮಾರಂಗಕ್ಕೆ ಹೊಸ ಹೊಳಪು, ತೀಕ್ಷ್ಣತೆ, ಹೊಸ ಅಲೆಯನ್ನು ತಂದುಕೊಟ್ಟವನು. ಆದರೆ ಪ್ರಭುತ್ವವು ಈತನ ಸ್ವಾತಂತ್ರ್ಯ ಮತ್ತು ಬಂಡಾಯವನ್ನು ಸಹಿಸುತ್ತಿಲ್ಲ. ಈತನ ಮೇಲೆ 20 ವರ್ಷಗಳ ಕಾಲ ಸಿನಿಮಾ ನಿರ್ಮಾಣ, ನಿರ್ದೇಶನ ಮಾಡುವಂತಿಲ್ಲ ಎಂದು ನಿಷೇಧ ಹೇರಿದೆ. ಆ ನಿಷೇಧಕ್ಕೆ ಈಗ ಎಂಟು ವರ್ಷ. ಅಲ್ಲದೆ ಪನಾಹಿಗೆ ದೇಶ ಬಿಟ್ಟು ಹೋಗದಂತೆ ದಿಗ್ಬಂಧನ ವಿಧಿಸಿದೆ. ಈಗ ಆತ ಗೃಹಬಂಧನದಲ್ಲಿದ್ದಾನೆ. ಆದರೂ ಸಹ ಛಲ ಬಿಡದೆ ಕಳೆದ ಎಂಟು ವಷರ್ಗಳಲ್ಲಿ ನಾಲ್ಕು ಸಿನಿಮಾಗಳನ್ನು ಮಾಡಿದ್ದಾನೆ. ಇದರ ಮುಂದುವರೆದ ಭಾಗವಾಗಿ ‘ಮೂರು ಮುಖಗಳು’ ಸಿನಿಮಾ ನಿರ್ದೇಶಿಸಿದ್ದಾನೆ. ಇದರ ಕುರಿತು ಬರೆದರೆ ಅದು ಮತ್ತೊಂದು ಸಾಹಸದ ಕತೆಯಾಗುತ್ತದೆ.

ನಿರ್ದೇಶಕ ಪನಾಹಿಯ ಕತೆ ಕಟ್ಟುವ ಜಾಣ್ಮೆ ಮತ್ತು ಮಾನವೀಯತೆ ಇಡೀ ಸಿನಿಮಾದ ನಿರೂಪಣೆಯುದ್ದಕ್ಕೂ ಎದ್ದು ಕಾಣುತ್ತದೆ. ಪನಾಹಿಯ ಈ ಕಥನದಲ್ಲಿ ಇರಾನ್‍ನ ಸೌಮ್ಯ, ಮೃದು ಗುಣಗಳು ಅನಾವರಣಗೊಳ್ಳುತ್ತಾ ಜೊತೆಜೊತೆಗೆ ಅಲ್ಲಿನ ಯಾಜಮಾನಕಿ ಹಿಡಿತವೂ ತೆರೆದುಕೊಳ್ಳುತ್ತಾ ಹೋಗುತ್ತದೆ. ಪನಾಹಿ ಎಂತಹ ನಿಪುಣ ನಿರ್ದೇಶಕನೆಂದರೆ ಇವೆರೆಡನ್ನೂ ಅತಿ ಸಲೀಸಾಗಿ ಬೆಸೆಯುತ್ತಾನೆ. ಇರಾನಿಗಳ ಆತಿಥ್ಯ ಸತ್ಕಾರ ಎಷ್ಟು ಜನಪ್ರಿಯವೋ ಹಾಗೆಯೆ ಅವರ ಪುರುಶಾಧಿಪತ್ಯವೂ ಸಹ. ಇದನ್ನು ಪನಾಹಿ ಯಾವುದೇ ಜಿಜ್ಞಾಸೆ, ದ್ವಂದ್ವವಿಲ್ಲದೆ ಹೇಳುತ್ತಾನೆ; ಈ ಹೆಣಿಗೆ ನಮ್ಮನ್ನು ಕಾಡುತ್ತದೆ. ತಾನು ಸ್ವತಃ ನಟಿಸುವುದರ ಮೂಲಕ ಇಡೀ ಸಿನಿಮಾಗೆ ಮಾರ್ಗದರ್ಶಿಯಂತೆಯೂ ಕಾಣುತ್ತಾನೆ.

ಇದರ ಜೊತೆಗೆ ವ್ಯಂಗ್ಯ ಮತ್ತು ವಿಡಂಬನೆಯನ್ನು ಹದವಾಗಿ ಬೆರೆಸುತ್ತಾನೆ. ಈ ಸಿನಿಮಾದ ಒಂದು ದೃಶ್ಯದಲ್ಲಿ ಮುದಿ ಗೂಳಿಯೊಂದು ದಾರಿಯಲ್ಲಿ ಕಾಲು ಮುರಿದುಕೊಂಡು ಬಿದ್ದಿರುತ್ತದೆ. ಆದರ ಮಾಲೀಕ ಈ ಗೂಳಿಯನ್ನು ಕಸಾಯಿಖಾನೆಗೆ ತಳ್ಳಲು ಒಪ್ಪುವುದಿಲ್ಲ. ಏಕೆಂದರೆ ಅದು ಬಂಗಾರದಂತಹ ಬೀಜಗಳನ್ನು ಹೊಂದಿದೆ. ಈ ಬೀಜಗಳು ಒಂದು ಕಾಲದಲ್ಲಿ ಒಂದು ರಾತ್ರಿಯಲ್ಲಿ 10 ಹಸುಗಳನ್ನು ಬಸಿರು ಮಾಡಿರುತ್ತದೆಯಂತೆ. ಈ ರೂಪಕವು ಇರಾನ್ ದೇಶದ ಪುರುಷಾಧಿಪತ್ಯದ ಜ್ವಲಂತ ದುರಂತವನ್ನೂ ಪರೋಕ್ಷವಾಗಿ ಬಿಚ್ಚಿಡುತ್ತದೆ.

ನಿಜಜೀವನದಲ್ಲಿ ದಿಗ್ಬಂಧನಕ್ಕೆ ಒಳಗಾದರೂ ಪಲಾಯನವಾದಿಯಾಗಲು ನಿರಾಕರಿಸುವ ಪನಾಹಿ ‘ಮೂರು ಮುಖಗಳು’ ಸಿನಿಮಾದಲ್ಲಿ ಆ ಸ್ವಾತಂತ್ರ್ಯದ ಓಟವನ್ನು ಮುಂದುವರೆಸುತ್ತಾನೆ. ಅತ್ಯಂತ ಮುಕ್ತವಾಗಿ ಮತ್ತು ಸ್ತ್ರೀವಾದಿ ಸಿನಿಮಾವನ್ನು ರೂಪಿಸುತ್ತಾನೆ. ಆತನ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಹೆಚ್ಚಿನ ಕಸುವುಳ್ಳ ಸಿನಿಮಾ ಎನಿಸುತ್ತದೆ. ಪಂಜರದಲ್ಲಿ ಬಂದಿಯಾದ ಪನಾಹಿ ಗಿಣಿಯಂತೆ ಪ್ರಭುತ್ವದ ಬಾಯಿಪಾಠವನ್ನು ಒಪ್ಪಿಸಲು ನಿರಾಕರಿಸುತ್ತಾನೆ. ಆದರೆ ಅಭಿವ್ಯಕ್ತಿಗೆ ತನ್ನದೆ ಆದ ದಾರಿಯನ್ನು ಕಂಡುಕೊಳ್ಳುತ್ತಾನೆ. ಸಿನಿಮಾ ಕೂಡಾ ಭರವಸೆ ಮತ್ತು ಆಶಾವಾದದೊಂದಿಗೆ ಮುಗಿಯುತ್ತದೆ.

THIRD WIFE (ಮೂರನೇ ಹೆಂಡತಿ)

ವಿಯೆಟ್ನಾಂ ದೇಶದ ‘ಮೂರನೇ ಹೆಂಡತಿ’ ಸಿನಿಮಾವನ್ನು ನಿರ್ದೇಶಿಸಿದವರು ಆಶ್ ಮೈಫೇರ್. ಇದು 19ನೇ ಶತಮಾನದ ಕತೆ. ವಿಯೆಟ್ನಾಂನ ಗ್ರಾಮೀಣ ಭಾಗದ ಕತೆ. ತನ್ನ ಕುಟುಂಬದ ಇತಿಹಾಸವನ್ನು ಚಿತ್ರಕತೆಯಾಗಿ ರೂಪಿಸಿದ ಮೈಫೇರ್ ತನ್ನ ಮೊದಲ ನಿರ್ದೇಶನದಲ್ಲಿ ಸ್ತ್ರೀವಾದದ ಹೊಸ ಆಯಾಮಗಳನ್ನು ಪರಿಚಯಿಸಿದ್ದಾಳೆ. ತನ್ನ 14ನೇ ವಯಸ್ಸಿನಲ್ಲಿ ಜಮೀನ್ದಾರ ಹಂಗ್‍ನ ಮೂರನೇ ಹೆಂಡತಿಯಾಗಿ ಬರುವ Nauyen Phuong Tra My ಆರಂಭದಲ್ಲಿ ತನ್ನ ಗಂಡನ ಅಮಾನುಷ ವರ್ತನೆಗೆ ನಲುಗುತ್ತಾಳೆ. ಕ್ರಮೇಣ ಆ ಯಾಜಮಾನಕಿ ಜಗತ್ತಿಗೆ ಹೊಂದಿಕೊಳ್ಳುತ್ತಾಳೆ. ಮುಖದಲ್ಲಿ ಸದಾ ನಿಗೂಢ ನಗುವನ್ನು ಹೊರಸೂಸುತ್ತ ಗಂಡು ಮಗುವಿಗಾಗಿ ಹಂಬಲಿಸುತ್ತಾಳೆ (ಏಕೆಂದರೆ ಆ ಮೂಲಕ ಆ ಯಾಜಮಾನಕಿ ಕುಟುಂಬವನ್ನು ಹಿಡಿತಕ್ಕೆ ತೆಗೆದುಕೊಳ್ಳಬಹುದೆನ್ನುವ ಆಸೆ).

ಇಲ್ಲಿ ಆ ಜಮೀನ್ದಾರನ ಇನ್ನಿಬ್ಬರು ಪತ್ನಿಯರ ಕತೆಯೂ ಇದೆ. ಅವರಲ್ಲೊಬ್ಬಳ ಜೊತೆ Nauyen Phuong Tra My ದೈಹಿಕ ಸಂಬಂಧದ ಅಕರ್ಷಣೆಯ ಉಪಕತೆಯೂ ಇದೆ. ಈ ಜಮೀನ್ದಾರನ ಮುಂಗೋಪಿ ಮಗನ ಮದುವೆ ಬಾಲಕಿಯೊಬ್ಬಳೊಂದಿಗೆ ನಿಶ್ಚಯವಾಗಿರುತ್ತದೆ. ಪ್ರೌಢಾವಸ್ಥೆಯಲ್ಲಿರುವ ಜಮೀನ್ದಾರನ ಮಗಳು ಆ ಕುಟುಂಬದ ಪುರುಷಾಧಿಕಾರದ ವಿರುದ್ಧ ನಡೆಸುವ ಬಂಡಾಯದ ಕತೆಯೂ ಇದೆ.

ಕಲೋನಿಯಲ್ ಪೂರ್ವ 19ನೇ ಶತಮಾನದ ಗ್ರಾಮೀಣ ಭಾಗದ ವಿಯೆಟ್ನಾಂ ಅನ್ನು ಸೊಗಸಾಗಿ ಕಟ್ಟಿರುವ ಮೈಯರ್ ಇಡೀ ಚಿತ್ರಕತೆಯನ್ನು ಮೆಲೋಡ್ರಾಮದಲ್ಲಿಯೂ ತೇಲಿಸುತ್ತ, ಅನೇಕ ಕಡೆ ದೃಶ್ಯಕಾವ್ಯದಂತೆ ಚಿತ್ರಿಸುತ್ತ ‘ಮೂರನೇ ಹೆಂಡತಿ’ ಸಿನಿಮಾವನ್ನು ಪಳಗಿದ ನಿರ್ದೇಶಕಳಂತೆ ನಿರೂಪಿಸಿದ್ದಾಳೆ. ಇಡೀ ಸಿನಿಮಾದಲ್ಲಿನ ಮಹಿಳಾ ಪಾತ್ರಗಳು ಪ್ರೇಕ್ಷಕರನ್ನು ಕಾಡುತ್ತವೆ. ಅವರ ಹೋರಾಟದ ಸಂಕೀರ್ಣತೆ ಅಸಂಗತ ಶೈಲಿಯಲ್ಲಿ ನಿರೂಪವಾಗಿದೆ. ತನ್ನ ನಿರ್ದೇಶನದ ಮೊದಲ ಸಿನಿಮಾದಲ್ಲಿ ಮೈಯರ್ ಗೆದ್ದಿದ್ದಾಳೆ

UNREMEMBER (ನೆನಪಿಟ್ಟುಕೊಳ್ಳಬಾರದು)

ಹದಿಹರೆಯದ ಬಂಡಾಯಗಾರ್ತಿ ಜೋನಾ (ಜೀನೆ ಬೌಡಿಯೆರ್) ಮತ್ತು ಆಕೆಯ ಇಬ್ಬರು ಮಲತಮ್ಮಂದಿರು ಪ್ಯಾರಿಸ್‍ನ ಬಹುಸಂಸ್ಕೃತಿಯಲ್ಲಿ ಬೆಳೆದಿರುತ್ತಾರೆ. ಜೋನಾಳ ಎಡಪಂಥೀಯ ಅಮ್ಮ (ಸಾರಾ) ಮತ್ತು ಆಕೆಯ ಸಮಾನಮನಸ್ಕ ಸಂಗಾತಿ ಚಿಲಿ ದೇಶದ ಲೂಯಿಸ್ ಹಠಾತ್ತನೆ ಮರಳಿ ತಮ್ಮ ತವರೂರು ಬ್ರೆಜಿಲ್‍ಗೆ ಮರಳಲು ತೀರ್ಮಾನಿಸುತ್ತಾರೆ. ಅದು 1979ರ ಕಾಲಘಟ್ಟ. ಬ್ರೆಜಿಲ್‍ನಲ್ಲಿ ಮಿಲಿಟರಿ ಸರ್ವಾಧಿಕಾರವಿರುತ್ತದೆ. ಈ ಪ್ರಭುತ್ವವು ಅಮ್ನೆಸ್ಟಿ ಕಾನೂನು ಮೂಲಕ ದೇಶಭ್ರಷ್ಟರಾದ ರಾಜಕೀಯ ಹೋರಾಟಗಾರರಿಗೆ ತಮ್ಮ ದೇಶಕ್ಕೆ ಮರಳಲು ಅವಕಾಶ ಕೊಟ್ಟಿರುತ್ತಾರೆ. ಈ ಹಿನ್ನೆಲೆಯಲ್ಲಿ ಜೋನಾಳ ಪೋಷಕರು ಬ್ರೆಜಿಲ್‍ಗೆ ಮರಳಲು ನಿರ್ಧರಿಸುತ್ತಾರೆ. ಆದರೆ ಜೋನಾಳಿಗೆ ವರ್ಣರಂಜಿತ ಪ್ಯಾರಿಸ್ ತೊರೆಯಲು ಇಷ್ಟವಿಲ್ಲ. ಆದರೆ ಕೊನೆಗೂ ಅಮ್ಮಳ ಬಲವಂತಕ್ಕೆ ಮಣಿದು ಕುಟುಂಬದೊಂದಿಗೆ ಬ್ರೆಜಿಲ್‍ಗೆ ಮರಳುತ್ತಾಳೆ.

ಇವು ಬ್ರೆಜಿಲ್‍ನ ಅನ್‍ರಿಮೆಂಬರ್ ಸಿನಿಮಾದ ಆರಂಭದ ದೃಶ್ಯಗಳು. ಇದು ಫ್ಲವೇಯಾ ಕ್ಯಾಸ್ಟ್ರೋಳ ನಿರ್ದೇಶನದ ಮೊದಲ ಸಿನಿಮಾ. ಇಡೀ ಸಿನಿಮಾ ಎಪ್ಪತ್ರರ ದಶಕದ ಬ್ರೆಜಿಲ್‍ನ ಸರ್ವಾಧಿಕಾರಿ ಆಡಳಿತ, ಇದರ ಪ್ರತಿರೋಧವಾಗಿ ಎಡಪಂಥೀಯ ಸಂಘಟನೆಗಳ ಭೂಗತ ಹೋರಾಟವನ್ನು ಒಂದು ಹಿನ್ನೆಲೆಯಾಗಿ ಬಳಸಿಕೊಂಡು ಹದಿಹರೆಯದ ಜೋನಾಳ ದ್ವಂದ್ವ, ಜಿಜ್ಞಾಸೆ. ತಳಮಳ ಇಡೀ ಸಿನಿಮಾದ ಕೇಂದ್ರವಾಗುತ್ತದೆ. ಇದು ಒಂದು ಬಗೆಯಲ್ಲಿ ಕ್ಯಾಸ್ಟ್ರೋಳ ಆತ್ಮಕತೆಯ ಭಾಗವೂ ಹೌದು.

ರೈ ಡಿ ಜನೈರೋದ ಅಪಾರ್ಟಮೆಂಟ್ ಒಂದರಲ್ಲಿ ಆಶ್ರಯ ಪಡೆಯುವ ಈ ಕುಟುಂಬ ಒಂದು ರೀತಿಯಲ್ಲಿ ಅನೇಕ ಸಂಕರಗಳ ಗೂಡು. ಒಂದು ಮಗುವಿಗೆ ಲೂಯಿಸ್ ತಂದೆಯಾದರೆ ಮತ್ತೊಂದು ಮಗುವಿಗೆ ಜೋನಾಳ ಅಮ್ಮ ತಾಯಿ. ತಾನು ಬಯಸದ ಬ್ರೆಜಿಲ್‍ಗೆ ವಲಸೆ ಬರುವ ಜೋನಾ ಕ್ರಮೇಣ ಅಲ್ಲಿನ ರಾಜಕೀಯ ಸ್ಥಿತ್ಯಂತರಕ್ಕೆ ಮುಖಾಮುಖಿಯಾಗುತ್ತಾಳೆ. ತಾನು ಆರು ವರ್ಷದವಳಿರುವಾಗ ಕಾಣೆಯಾಗುವ ತನ್ನ ತಂದೆಯ ಕುರಿತು ಅಮ್ಮನನ್ನ ಕೇಳಿದಾಗ ಅಕೆ ಸೂಕ್ತವಾಗಿ ಉತ್ತರಿಸುವುದಿಲ್ಲ. ಜೋನಳ ಅಪ್ಪ ಅಂದರೆ ತನ್ನ ಗಂಡ ಸರ್ವಾಧಿಕಾರಿ ಜುಂಟಾ ಪ್ರಭುತ್ವದ ವಿರುದ್ಧ ಹೋರಾಡುತ್ತ ಸಾವನ್ನಪ್ಪಿದ್ದಾನೆ ಎಂದಷ್ಟೇ ಹೇಳುತ್ತಾಳೆ.

ಆದರೆ ಬ್ರೆಜಿಲ್‍ನಲ್ಲಿ ಜೋನ ತನ್ನ ಈ ಬಂಡಾಯಗಾರ ಅಪ್ಪನ ಹುಡುಕಾಟದಲ್ಲಿ ಆತನ ತಾಯಿ ಅಂದರೆ ತನ್ನ ಅಜ್ಜಿ (ಎಲೈನೆ ಗಿಯಾರ್ಡಿನಿ)ಯನ್ನು ಭೇಟಿಯಾಗುತ್ತಾಳೆ. ಕ್ರಮೇಣ ಅಜ್ಜಿಯೊಂದಿಗೆ ಹತ್ತಿರವಾಗುತ್ತ ತನ್ನ ಬಾಲ್ಯದ ಆ ಓಣಿಗಳಲ್ಲಿ ಹುಡುಕಾಡುತ್ತಾಳೆ. ಅಜ್ಜಿಯು ತನ್ನ ಮಗ ಯಾವ ಜಾಗದಲ್ಲಿ ಕೊಲೆಯಾದ ಎನ್ನುವ ಮಾಹಿತಿಯ ಹುಡುಕಾಟದಲ್ಲಿದ್ದಾಳೆ. ಇಡೀ ಸಿನಿಮಾದ ಆತ್ಮವಿರುವುದೆ ಈ ಭಾಗದಲ್ಲಿ. ಜೋನಾಳಿಗೆ ತನ್ನ ತಂದೆ ಬದುಕಿರಬಹುದೆ ಎನ್ನುವ ಭ್ರಮೆ. ಇಡೀ ಸಿನಿಮಾ ಈ ನಿಜ-ಭ್ರಮೆಗಳ ತಾಕಲಾಟದಲ್ಲಿ ತೊಳಲಾಡುತ್ತದೆ.

ಫ್ಲವೇಯಾ ಕ್ಯಾಸ್ಟ್ರೋ ತನ್ನ ಮೊದಲ ಪ್ರಯತ್ನದಲ್ಲಿಯೆ ಅತ್ಯಂತ ಪ್ರಬುದ್ಧತೆಯಿಂದ ನಿರ್ದೇಶಿಸಿದ್ದಾಳೆ. ಇಡೀ ಸಿನಿಮಾ ಸಂಪೂರ್ಣ ರಾಜಕೀಯದ ಹೇಳಿಕೆಯೂ ಆಗದೆ ಮತ್ತೊಂದೆಡೆ ಕುಟುಂಬದ ಮೆಲೋಡ್ರಾಮವೂ ಆಗದೆ ಮನುಷ್ಯನ ಬದುಕಿನ ಪಯಣದ ಕಥನವಾಗಿದೆ. ನಿರೂಪಣೆಯು ಭಾವನಾತ್ಮಕತೆಯನ್ನು ತನ್ನೊಳಗೆ ತುಂಬಿಕೊಳ್ಳುತ್ತಲೆ ಸಂಯಮದಿಂದ ಜೋನಾಳ ತೊಳಲಾಟವನ್ನು ಒಂದು ದಣಿವರಿಯದ, ಕೊನೆಯಿಲ್ಲದ ನೆನಪಿನ ಮೂಲಕ ಪಯಣಿಸುತ್ತದೆ. ಎಪ್ಪತ್ತರ ದಶಕದ ರಾಕ್ ಸಂಗೀತ ಇಡೀ ಪಯಣದ ಉದ್ದಕ್ಕೂ ಸಾಥ್ ನೀಡುತ್ತದೆ.

THE GUILTY (ತಪ್ಪಿತಸ್ಥ)

ಇದು ಪೋಲಿಸ್ ಇಲಾಖೆಯ ತುರ್ತು ಸೇವಾ ಕೇಂದ್ರದ ಎರಡು ಕೋಣೆಯೊಳಗೆ ನಡೆಯುವ ಸಿನಿಮಾ. ನಿರಂತರ ಫೋನು ಕರೆಗಳ ಮೂಲಕವೆ ನಿರೂಪಿಸಲ್ಪಡುವ ‘ದಿ ಗಿಲ್ಟಿ’ ನಿರ್ದೇಶಕ ಗುಸ್ತವ್ ಮೊಲಿಯೆರ್‍ನ ಮೊದಲ ಸಿನಿಮಾ. ಅತ್ಯಂತ ಬಿಗಿಯಾದ ಚಿತ್ರಕತೆಯನ್ನು ಹೆಣೆದಿರುವ ಮೊಲಿಯೆರ್ ಕೇವಲ ಪರದೆಯ ಮೇಲೆ ಮಾತ್ರವಲ್ಲ ಪ್ರೇಕ್ಷಕನ ಮನಸ್ಸಿನಲ್ಲಿಯೂ ಕ್ಷಣಕ್ಷಣಕ್ಕೂ ಊಹೆಗಳನ್ನು ಬದಲಾಯಿಸುತ್ತಾನೆ. ಇಲ್ಲಿ ತುರ್ತು ಸೇವಾ ಕೇಂದ್ರ 911ರಲ್ಲಿ ಡ್ಯಾನಿಶ್ ಪೋಲಿಸ್ ಅಧಿಕಾರಿ ಅಸ್ಗರ್ ಹೋಮ್ ಡೆಪ್ಯುಟೇಶನ್ ಮೇಲೆ ಕೆಲಸ ಮಾಡುತ್ತಿರುತ್ತಾನೆ. ಈಗಿನ ಈ ಉದ್ಯೋಗ ಈತನಿಗೆ ಹಿಂಬಡ್ತಿಯಾಗಿರುತ್ತದೆ. ಇಡೀ ಸಿನಿಮಾದಲ್ಲಿ ಈತನೊಬ್ಬನೆ ಪಾತ್ರಧಾರಿ. ಈತನ ಜೊತೆಗೆ ಸಹೋದ್ಯೋಗಿಗಳು ಇರುತ್ತಾರೆ. ಅವರು ಕಾಣಿಸುವುದು ಸೆಕೆಂಡುಗಳಲ್ಲಿ ಮಾತ್ರ.

ಈತನ ಭೂತಕಾಲದಲ್ಲಿ ಒಂದು ವಿವಾದವಿದೆ. ಮರುದಿನ ಅದರ ಸಂಬಂಧಿತ ನ್ಯಾಯಾಲಯಕ್ಕೆ ಹಾಜರಾಗಬೇಕಿರುತ್ತದೆ. ಈ ಕಾರಣಕ್ಕೆ ಒತ್ತಡದಲ್ಲಿರುತ್ತಾನೆ. ಇದು ಸಿನಿಮಾ ಸಾಗುತ್ತ ಕಡೆಯ ದೃಶ್ಯಗಳಲ್ಲಿ ಪ್ರೇಕ್ಷಕನಿಗೆ ಗೊತ್ತಾಗುತ್ತ ಹೋಗುತ್ತದೆ. ಆದರೆ ಅಸ್ಗರ್‍ನ ಈ ಗತಕಾಲಕ್ಕೂ ಮತ್ತು ಈ ಸಿನಿಮಾದ ವರ್ತಮಾನ ಕತೆಗೂ ಇರುವ ತಾತ್ವಿಕ ಮತ್ತು ನೈತಿಕ ಸಂಬಂಧವೇ ಇಡೀ ಸಿನಿಮಾದ ಆತ್ಮವೂ ಹೌದು. ಜೀವ ಉಳಿಸುವ ಸೇವೆ ಒದಗಿಸುವ ಕರ್ತವ್ಯದಲ್ಲಿರುವ ಅಸ್ಗರ್ ಅನೇಕ ಸಂದರ್ಭಗಳಲ್ಲಿ ತನ್ನ ಕೆಲಸದ ಮಿತಿಯನ್ನು ಮೀರಿ ನಿರ್ಣಾಯಕವಾಗಿ ವರ್ತಿಸುತ್ತಾನೆ. ಆ ಕಡೆ ಸೇವೆ ಬಯಸುವವರ ಬದುಕಿನ ಆಳಕ್ಕೂ ಹೋಗಿ ಸಲಹೆ, ಸೂಚನೆಗಳನ್ನು ನೀಡುತ್ತಾನೆ.

ಇಂತಹದೆ ಒಂದು ಸಂದರ್ಭದಲ್ಲಿ ಮಹಿಳೆಯೊಬ್ಬಳು ತಾನು ಅಪಹರಣಕ್ಕೊಳಗಾಗಿದ್ದೇನೆ ಎಂದು ತುರ್ತು ಕರೆ ಮಾಡುತ್ತಾಳೆ. ಆಕೆಯ ಕರೆಯ ಜಾಡು ಹಿಡಿದು ಸಾಗುವ ಅಸ್ಗರ್‍ನ ಮುಂದೆ ಬೆಚ್ಚಿ ಬೀಳಿಸುವ ಸಂಗತಿಗಳು ಹರಡಿಕೊಳ್ಳಲಾರಂಭಿಸುತ್ತವೆ. ಕತೆ ತಿರುವುಗಳನ್ನು ಪಡೆಯುತ್ತ ಹೋಗುತ್ತದೆ. ಈ ಕುತೂಹಲಕರ ತಿರುವುಗಳನ್ನು ನಿರ್ದೇಶಕ ಮೊಲಿಯರ್ ನಿಭಾಯಿಸಿರುವ ರೀತಿ ಅದ್ಭುತವಾಗಿದೆ. ಧ್ವನಿಯ ಸಂಕಲನವೂ ಇಲ್ಲಿ ಮುಖ್ಯ ಪಾತ್ರವಹಿಸುತ್ತದೆ. ನಿರ್ದೇಶಕ ಮೊಲಿಯೆರ್ ಕ್ಲೈಮಾಕ್ಸ್ ನಲ್ಲಿ ಅಸ್ಗರ್ ಖಳನೆ ಅಥವಾ ಹೀರೋನೆ ಎನ್ನುವ ದ್ವಂದ್ವವನ್ನು ಪ್ರೇಕ್ಷಕನಿಗೆ ಬಿಡುತ್ತಾನೆ.

*ಲೇಖಕರು ವೃತ್ತಿಯಿಂದ ಇಂಜಿನಿಯರು; ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯ. ದಲಿತರ ಸ್ವಾವಲಂಬನೆ, ಪರ್ಯಾಯ ಆರ್ಥಿಕ ಸಾಧ್ಯತೆ ಕುರಿತು ಕಮ್ಮಟ, ಅಧ್ಯಯನ ನಡೆಸುತ್ತಾರೆ. ‘ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ’ದ ಸಂಚಾಲಕರು. ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

Leave a Reply

Your email address will not be published.