ಕಾಲ ಬದಲಾಗಿದೆ, ಆದರೆ ಪರಿಸ್ಥಿತಿ ಕೆಟ್ಟಿಲ್ಲ

-ಪಾ.ಚಂದ್ರಶೇಖರ ಚಡಗ

ನವೆಂಬರ್ ತಿಂಗಳ ಸಮಾಜಮುಖಿಯಲ್ಲಿ ಎತ್ತಿದ ‘ಈ ಸಹಸ್ರಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ?’ ಎಂಬ ಮುಖ್ಯಚರ್ಚೆಯ ಪ್ರಶ್ನೆ ಸಮಯೋಚಿತವಾಗಿದೆ. ಇದಕ್ಕೆ ಉತ್ತರ ಮಾತ್ರ ಜಟಿಲ. ಪ್ರತಿಯೊಂದು ಪೀಳಿಗೆಯೂ ಹಿಂದಿನ ಪೀಳಿಗೆಯನ್ನು ಹೊಗಳಿ, ‘ಇಂದಿನ ಪೀಳಿಗೆ ಕವಲುದಾರಿಯಲ್ಲಿ ನಡೆಯುತ್ತಿದೆ’ ಎನ್ನುವುದು ಸಾಮಾನ್ಯ. ನಮ್ಮ ಮಕ್ಕಳು ಇಂದು ತಂದೆ ತಾಯಂದಿರ ಅಥವಾ ಗುರುಹಿರಿಯರಿಂದ ಪ್ರಭಾವಿತರಾಗದೆ ಅಂತರ್ಜಾಲದಲ್ಲಿ ದೊರೆಯುವ ಮಾಹಿತಿಗೆ ಮನಸೋಲುವುದರಿಂದ ಮಕ್ಕಳನ್ನು ರೂಪಿಸುವಲ್ಲಿ ನಾವು ಅಶಕ್ತರೂ ಹಾಗೂ ಅಸಫಲರೂ ಆಗುತ್ತಿದ್ದೇವೆ ಎಂಬ ಮಾತು ಅರ್ಧಸತ್ಯ.

ಸುಮಾರು 60-70 ವರ್ಷಗಳ ಹಿಂದೆ ತಂದೆ ತಾಯಂದಿರು ಮಕ್ಕಳ ಬೆಳವಣಿಗೆಗೆ ಹೆಚ್ಚು ಗಮನ ನೀಡುತ್ತಿದ್ದರೇ ಎಂಬ ಪ್ರಶ್ನೆಗೆ, ಅಂದಿನ ದಿನಗಳಲ್ಲಿ ತಂದೆ ತಾಯಿಯರಿಗೆ ವಿದ್ಯಾಭ್ಯಾಸ ಇಲ್ಲದಿರುವುದರಿಂದ ಅವರು ಮಕ್ಕಳನ್ನು ರೂಪಿಸುವಲ್ಲಿ ಅಸಮರ್ಥರಾಗುತ್ತಿದ್ದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸದಾ ತಮ್ಮ ಉದ್ಯೋಗದಲ್ಲಿ ತಲ್ಲೀನರಾಗಿರುವವರನ್ನು ಬಿಟ್ಟರೆ ಬಹುತೇಕ ತಂದೆ ತಾಯಿಗಳು, ಅದರಲ್ಲೂ ಮಧ್ಯಮ ವರ್ಗದ ತಂದೆ ತಾಯಂದಿರು ಮಕ್ಕಳಿಗೆ ತಮ್ಮ ಅಭ್ಯಾಸದಲ್ಲಿ ನೆರವಾಗುತ್ತಿದ್ದಾರೆ. ಮಕ್ಕಳು ತಂದೆಯಂದಿರೊಡನೆ ಮಾತನಾಡಲು ಭಯಪಡುವ ಕಾಲವೊಂದಿತ್ತು. ಇಂದಿನ ಮಕ್ಕಳು ಯಾವುದೇ ಭಯ, ಸಂಕೋಚವಿಲ್ಲದೆ ತಂದೆ ತಾಯಂದಿರೊಡನೆ ಬೆರೆಯುತ್ತಾರೆ. ನಾಚಿಕೆಯಿಂದ ನಲುಗುತ್ತಿದ್ದ ಹೆಣ್ಣುಮಕ್ಕಳೀಗ ಪೂರ್ಣಸ್ವಾತಂತ್ರ್ಯದ ಗಾಳಿಯನ್ನು ಸೇವಿಸುತ್ತಿದ್ದಾರೆ.

ಇನ್ನು ಮಿತಿಮೀರಿ ಮೊಬೈಲ್ ಬಳಕೆಯಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮಗಳು ಆಗುತ್ತಿವೆ ಎನ್ನುವುದು ನಿಜವಾದರೂ ಮಿತವಾಗಿ ಬಳಸಿದರೆ ಮೊಬೈಲ್ ವಿದ್ಯಾರ್ಥಿಗಳಿಗೆ ಸಹಕಾರಿಯಾಗಬಲ್ಲದು. ಗೂಗಲ್‍ನ ನೆರವಿನಿಂದ ಎಷ್ಟೆಲ್ಲಾ ಮಾಹಿತಿಗಳನ್ನು ಪಡೆಯಬಹುದು.

ಶಿಕ್ಷಣದ ಸಾರ್ವತ್ರೀಕರಣದಿಂದ ಸಮಾಜದ ಕೆಳಸ್ತರದ ಕೆಲವರಾದರೂ ತಮ್ಮ ಪ್ರತಿಭೆಯಿಂದ ಉನ್ನತ ಸಾಧನೆಗಳನ್ನು ಮಾಡುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ ಪರಿಸ್ಥಿತಿ ನಾವು ತಿಳಿದಷ್ಟು ಕೆಟ್ಟಿಲ್ಲ.

Leave a Reply

Your email address will not be published.