ಕಾವ್ಯನಾಯಕನ ಆದರ್ಶದ ಬೆಳಕಿಗಾಗಿ ರಾಮಮಂದಿರ

ಭಾರತದ ಮಹಾಕಾವ್ಯವೊಂದರ ನಾಯಕನ ಆದರ್ಶದ ಬೆಳಕಿನಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಇದೇ ಮೊದಲು. ಬಹುಶಃ ಭಾರತದ ಯಾವ ದೇವಾಲಯಕ್ಕೂ, ದೇವರಿಗೂ ಇಂತಹ ಮಹಾಕಾವ್ಯದ ಹಿನ್ನೆಲೆಯಿಲ್ಲ.

ಗ.ನಾ.ಭಟ್ಟ

ಭಾರತದಲ್ಲಿ ಅಸಂಖ್ಯಾಕ ದೇವಾಲಯಗಳಿವೆ. ಒಂದೊಂದು ದೇವಾಲಯವೂ ಒಂದೊಂದು ಇತಿಹಾಸವನ್ನು, ಚರಿತ್ರೆಯನ್ನು, ದಂತಕಥೆಯನ್ನು, ಮಹಾತ್ಮ್ಯವನ್ನು ಹೇಳುತ್ತದೆ. ಭಕ್ತರೂ ಕೂಡಾ ತಂಡೋಪತಂಡವಾಗಿ ದೇವಾಲಯಗಳಿಗೆ ಭೇಟಿಯಿತ್ತು, ದೇವರ ದರ್ಶನ ಪಡೆದು, ತೀರ್ಥ-ಪ್ರಸಾದ ಸ್ವೀಕರಿಸಿ, ಧನ್ಯತೆಯನ್ನು ಪಡೆಯುತ್ತಾರೆ. ಆದರೂ ದೇವಾಲಯಗಳ ಕಟ್ಟಡ, ನಿರ್ಮಾಣ, ಪ್ರತಿಷ್ಠಾಪನೆ, ಪೂಜೆ, ಅರ್ಚನೆ, ಧ್ಯಾನ, ಭಜನೆ ಯಾವುದೂ ನಿಂತಿಲ್ಲ. ಬದಲಿಗೆ ಹೆಚ್ಚೇ ಆಗುತ್ತಿವೆ. ಅಂತಹ ಹೆಚ್ಚಿನ ಮಂದಿರ ನಿರ್ಮಾಣಗಳಲ್ಲಿ ಈಗ ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವುದು ಅಯೋಧ್ಯೆಯ ಶ್ರೀರಾಮಮಂದಿರ.

500 ವರ್ಷಗಳ ರಕ್ತಸಿಕ್ತ ಇತಿಹಾಸಕ್ಕೆ ತೆರೆ ಬಿದ್ದಿದೆ. 50 ವರ್ಷಗಳ ಕೋರ್ಟುವ್ಯಾಜ್ಯಕ್ಕೂ ಪೂರ್ಣವಿರಾಮ ದೊರೆತಿದೆ. ತೀರ್ಪು ನ್ಯಾಯಸಮ್ಮತವಾಗಿಯೇ ಬಂದಿದ್ದು ಇಡೀ ಭಾರತದಲ್ಲಿ ಹರ್ಷೋದ್ಗಾರದ ಮಳೆಯೇ ಸುರಿದಿದೆ. ಕಳೆದ ಆಗಸ್ಟ್ 5ರಂದು ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವೂ ಆಯಿತು. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಆದನ್ನು ನೆರವೇರಿಸಿ, ಭಾರತೀಯರ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದರು.

ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಕೆಲವರು ಆ ಜಾಗದಲ್ಲಿ ಆಸ್ಪತ್ರೆಯನ್ನೋ, ವಸ್ತುಸಂಗ್ರಹಾಲಯವನ್ನೊ, ಮಿಲಿಟರಿ ಠಾಣೆಯನ್ನೋ ಕಟ್ಟಬೇಕೆಂದು ಸಲಹೆ ಮಾಡಿದ್ದಾರೆ. ಇವರು ಅತ್ಯಾಧುನಿಕ ಪ್ರಗತಿಪರರು! ಇನ್ನು ಕೆಲವರಿಗಂತೂ ಮೋದಿ ಭೂಮಿಪೂಜೆ ಮಾಡಿದ್ದು ಸರಿಬರಲಿಲ್ಲ. “ಅವರು ಸರ್ವಾಧಿಕಾರಿಯಂತೆ ನಡೆದುಕೊಂಡರು. ಧಾರ್ಮಿಕ ಕಾರ್ಯಕಲಾಪವನ್ನು ಸರಿಯಾಗಿ ಆಚರಿಸಲಿಲ್ಲ. ಇದೊಂದು ಪಕ್ಕಾ ರಾಜಕೀಯ ಕಾರ್ಯಕ್ರಮದಂತಿತ್ತು. ಧಾರ್ಮಿಕ ಮುಖಂಡರನ್ನು ಕರೆದಿರಲಿಲ್ಲ. ಅವರೇ ಧಾರ್ಮಿಕ ಮುಖಂಡನAತೆ ನಡೆದುಕೊಂಡರು” ಎಂದು ಬಗೆಬಗೆಯಲ್ಲಿ ತಮ್ಮ ಅಸಹನೆಯನ್ನು ತೋಡಿಕೊಂಡರು. ಇಂತಹ ಒಂದು ದೊಡ್ಡ ಕಾರ್ಯಕ್ರಮ ನೆರವೇರಿಸುವಾಗ ಇಂಥಾದ್ದು ಸಹಜವಾಗಿಯೇ ಸಂಭವಿಸುತ್ತವೆ. ಅವಕ್ಕೆಲ್ಲಾ ಉತ್ತರ ಕೊಡುತ್ತಾ ಹೋದರೆ ಅವು ಮುಗಿಯದ ಕಥೆ. ಪ್ರಸ್ತುತ ರಾಮಮಂದಿರದ ಮುಖ್ಯ ಉದ್ದೇಶವನ್ನು ನೋಡೋಣ.

ಸಾವಿರಾರು ವರ್ಷಗಳಷ್ಟು ಕಾಲ ಪರರ ಆಕ್ರಮಣದಿಂದ ನಲುಗಿಹೋದ ದೇಶ ನಮ್ಮದು. ಈಗ ಎಲ್ಲವನ್ನೂ ಮರೆತಿದ್ದೇವೆ. ಸ್ವಾತಂತ್ರ್ಯ ಬಂದಂದಿನಿಂದ ಈ ಅರವತ್ತೊಂದು ವರ್ಷಗಳಲ್ಲಿ ನಾವು ನಮ್ಮ ‘ಸ್ವಂತಿಕೆ’ಯನ್ನೇ ಮರೆತುಬಿಟ್ಟಿದ್ದೇವೆ. ಈಗ ಏಳು ವರ್ಷಗಳಿಂದ ದೇಶ-ದೇಶಪ್ರೇಮ, ರಾಷ್ಟ್ರ-ರಾಷ್ಟ್ರಪ್ರೇಮ, ಸ್ವದೇಶೀ, ನಮ್ಮ ಸ್ವಂತಿಕೆ ಮುಂತಾದ ಮಾತುಗಳು ಕೇಳಿಬರುತ್ತಿವೆ. ಕಳೆದ 67 ವರ್ಷಗಳಿಂದ ಹೊಂದಿಕೊಂಡ ಆ ಮನಃಸ್ಥಿತಿಗೆ ಇವೆಲ್ಲವೂ ಹೊಸದಾಗಿ, ಆಶ್ಚರ್ಯಕರವಾಗಿ, ಭಯಾನಕವಾಗಿ ಕಾಣಿಸುತ್ತವೆ. ಜೀವನವಿಡೀ ಕತ್ತಲೆಯಲ್ಲಿದ್ದವನಿಗೆ ದಿಢೀರನೆ ಬೆಳಕು ಕಂಡಾಗ ಅದನ್ನು ತಡೆಯಲಾಗದೆ ಅದನ್ನೇ ದ್ವೇಷಿಸುವವನ ಸ್ಥಿತಿ ನಮ್ಮದಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ನಾವು ರಾಮಮಂದಿರವನ್ನು ನೋಡಬೇಕಾಗಿದೆ.

ಭಾರತದ ‘ಐಡೆಂಟಿಟಿ’ಗಾಗಿ, ‘ಸ್ವಂತಿಕೆ’ಗಾಗಿ, ತನ್ನ ಅಸ್ತಿತ್ವವನ್ನು ಸ್ಫುಟಪಡಿಸುವುದಕ್ಕಾಗಿ ರಾಮಮಂದಿರದ ಅವಶ್ಯಕತೆಯಿದೆ. ಇನ್ನೊಂದು ಬಹಳ ಮುಖ್ಯವಾದ ಸಂಗತಿಯಿದೆ. ಭಾರತದ ಮಹಾಕಾವ್ಯವೊಂದರ ನಾಯಕನ ಆದರ್ಶದ ಬೆಳಕಿನಲ್ಲಿ ಈ ಮಂದಿರವಾಗುತ್ತಿರುವುದು ಇದೇ ಮೊದಲು. ಬಹುಶಃ ಭಾರತದ ಯಾವ ದೇವಾಲಯಕ್ಕೂ, ದೇವರಿಗೂ ಇಂತಹ ಮಹಾಕಾವ್ಯದ ಹಿನ್ನೆಲೆಯಿಲ್ಲ.

ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥ, ಉಡುಪಿ ಕೃಷ್ಣ, ಮಧುರೆಯ ಮೀನಾಕ್ಷೀ, ಕಾಶೀ ವಿಶ್ವನಾಥ, ಮಥುರೆಯ ಕೃಷ್ಣ, ಪಂಡರೀಪುರದ ಪಾಂಡುರಂಗ ಯಾರಿಗೂ ಮಹಾಕಾವ್ಯದ ಹಿನ್ನೆಲೆಯಿಲ್ಲ. ಅದು ಇರುವುದು ಪ್ರಸ್ತುತ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರಕ್ಕೆ ಮಾತ್ರ. ಈ ಕಾರಣಕ್ಕಾದರೂ ಮಂದಿರ ನಿರ್ಮಾಣದ ಅವಶ್ಯಕತೆಯಿದೆ. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಇಡೀ ಭಾರತವೇ ರಾಮರಾಜ್ಯದ ಕನಸನ್ನು ಕಂಡಿತ್ತು. ಆದರೆ ಅದನ್ನು ನೆರವೇರಿಸುವ ಸಂಕಲ್ಪಶಕ್ತಿಯಾಗಲೀ ಅಥವಾ ಅದರ ಅರಿವಾಗಲೀ ಹೊಸದಾಗಿ ಪ್ರಧಾನಿಯಾದ ನೆಹರೂಗೆ ಇರಲಿಲ್ಲ. ಅವರಿಗೆ ರಾಮಾಯಣದ ಗಂಧವೂ ಇರಲಿಲ್ಲ ಅನ್ನುವುದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಹೀಗಿರುವಾಗ ರಾಮರಾಜ್ಯದ ಆದರ್ಶಕ್ಕೆ ಎಡೆಯೆಲ್ಲಿ?

ನಿಜಕ್ಕೂ ನಮಗಿಂದು ಸುಂದರ, ಸಮರ್ಥ ರಾಜ್ಯಾಡಳಿತಕ್ಕೆ ಮಹಾಕಾವ್ಯವೊಂದರ ಆದರ್ಶ ಅತ್ಯವಶ್ಯವಾಗಿ ಬೇಕಾಗಿದೆ. “ಮನುಷ್ಯಜೀವನದ ಒಂದು ರೂಪ ಕಾವ್ಯ; ಇನ್ನೊಂದು ರೂಪ ರಾಜ್ಯ” ಎಂದು ಬಲ್ಲವರು ಹೇಳುತ್ತಾರೆ. ಜೀವನ ಸ್ವಾರಸ್ಯವನ್ನು ವಾಕ್ಯರೂಪದಲ್ಲಿ ತೋರಿಸುವವನು ಕವಿಯಾದರೆ ಅದರ ಸ್ವಾರಸ್ಯವನ್ನು ಲೋಕವ್ಯವಸ್ಥೆಯಲ್ಲಿ ಪ್ರತ್ಯಕ್ಷಪಡಿಸಿ ಅನುಷ್ಠಾನಕ್ಕೆ ತರುವವನು ರಾಜಕಾರಣಿ ಅಥವಾ ರಾಜ್ಯಕರ್ಮಿ ಆಗಿರುತ್ತಾನೆ. ಪ್ರಪಂಚದ ಇತಿಹಾಸದಲ್ಲಿ ರಾಷ್ಟ್ರಸೇವೆಗೆ, ಉತ್ತಮ ಆಡಳಿತಕ್ಕೆ, ಆದರ್ಶ ರಾಜ್ಯಕ್ಕೆ ಮಹಾಕಾವ್ಯಗಳಿಂದ, ಮಹಾಕವಿಗಳಿಂದ ಪ್ರೇರಣೆ ಪಡೆದವರ ಪಟ್ಟಿಯೇ ಇದೆ.

ಇಂಗ್ಲೆಂಡಿನ ಗ್ಲಾಡ್‌ಸ್ಟನ್‌ನು ತನ್ನ ರಾಜ್ಯಸೇವೆಗೆ ಸ್ಫೂರ್ತಿಯನ್ನು ಹೋಮರ್, ಷೇಕ್ಸ್ಪಿಯರ್, ಮಿಲ್ಟನ್ ಮೊದಲಾದ ಕವಿಗಳಿಂದ ಪಡೆದಿದ್ದನೆಂದೂ, ಅಮೆರಿಕಾದ ಲಿಂಕನ್ ತನ್ನ ರಾಷ್ಟ್ರ ಪೋಷಣವ್ರತಕ್ಕೆ ತಕ್ಕ ಸತ್ವಶುದ್ಧಿಯನ್ನು, ಬೈಬಲ್‌ನಿಂದ, ಮತ್ತು ಷೇಕ್ಸ್ಪಿಯರ್‌ನ ನಾಟಕಗಳಿಂದ ಸಂಪಾದಿಸಿದ್ದನೆಂದೂ, ಇಟಲಿಯ ಮೆಟ್ಸಿನಿಯು ತನ್ನ ರಾಜ್ಯಾಡಳಿತ ದಕ್ಷತೆಗೆ ಮಹಾಕವಿ ಡಾಂಟೆಯಿದ ಬೆಳಕು ಕಂಡಿದ್ದನೆಂದೂ, ನಮ್ಮ ಗಾಂಧೀಜಿ ಶ್ರೀರಾಮನಿಂದ ಕಂಡಿದ್ದರೆಂದೂ ಡಿ.ವಿ.ಜಿ.ಯವರು ತಮ್ಮ ಪ್ರಬಂಧವೊಂದರಲ್ಲಿ ಉಲ್ಲೇಖಿಸಿದ್ದಾರೆ. ಸ್ವಾಮಿ ವಿವೇಕಾನಂದರು ವೇದೋಪನಿಷತ್ತುಗಳಿಂದ, ಬಾಲಗಂಗಾಧರ ತಿಲಕರು ಛತ್ರಪತಿ ಶಿವಾಜಿಯಿಂದ, ನೇತಾಜಿ ಸುಭಾಷ್‌ಚಂದ್ರ ಬೋಸರು ಭಗವದ್ಗೀತೆಯಿಂದ ರಾಜ್ಯ ಸೇವೆಗೆ ಪ್ರೇರಣೆ ಪಡೆದಿದ್ದರು.

ಹೀಗಿರುವಾಗ ಭಾರತದಲ್ಲಿ ಮತ್ತೆ ರಾಮನ ಆದರ್ಶವೇ ಮರುಕಳಿಸುತ್ತದೆಯೆಂದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ? ಅದಕ್ಕಾಗಿಯೇ ಅಲ್ಲವೇ, ಶ್ರೀರಾಮ ಮಂದಿರದ ಶಿಲಾನ್ಯಾಸದ ಸಂದರ್ಭದಲ್ಲಿ ಮತ್ತು ಕೋರ್ಟು ತೀರ್ಪು ನಮ್ಮ ಪರವಾಗಿ ಬಂದ ಸಂದರ್ಭದಲ್ಲಿ ಇಡೀ ದೇಶವೇ ಸಂಭ್ರಮಪಟ್ಟಿದ್ದು, ಮನೆಮನೆಯಲ್ಲೂ ಪೂಜೆ ಆರತಿ ಬೆಳಗಿದ್ದು! ಈ ನೆಲೆಯಲ್ಲೇ ನಾವಿಂದು ರಾಮಮಂದಿರವನ್ನು ನೋಡಬೇಕಿದೆ; ರಾಮನನ್ನು ಕಾಣಬೇಕಿದೆ.

ವಾಲ್ಮೀಕಿ ಮಹರ್ಷಿ ತನ್ನ ಕಾವ್ಯದ ಆರಂಭದಲ್ಲೇ ತನ್ನ ಮನಸ್ಸಿನಲ್ಲಿ ಮೂಡಿಸಿಕೊಂಡ ಆದರ್ಶ ವ್ಯಕ್ತಿಯನ್ನು ಪರಿಚಯಿಸಿಕೊಡುತ್ತಾನೆ. ಅಂತಹ ವ್ಯಕ್ತಿಯೇ ಶ್ರೀರಾಮ ಅನ್ನುವುದು ಅವನಿಗೆ ಗೊತ್ತಿತ್ತು. ಆದರೂ ಅದನ್ನು ದೃಢಪಡಿಸಿಕೊಳ್ಳುವುದಕ್ಕೆ ನಾರದರ ಬಳಿ ಪ್ರಶ್ನೆ ಕೇಳುತ್ತಾನೆ.

ಕೋನ್ವಸ್ಮಿನ್ ಸಾಂಪ್ರತ ಲೋಕೇ ಗುಣವಾನ್ ಕಶ್ಚ ವೀರ್ಯವಾನ್ |

ಧರ್ಮಜ್ಞಶ್ಚ ಕೃತಜ್ಞಶ್ಚ ಸತ್ಯವಾಕ್ಯೋ ದೃಢವ್ರತಃ |

ಚಾರಿತ್ರೇಣ ಚ ಕೋ ಯುಕ್ತಃ ಸರ್ವಭೂತೇಷು ಕೋ ಹಿತಃ |

ವಿದ್ವಾನ್ ಕಃ ಕಃ ಸಮರ್ಥಶ್ಚ ಕಶ್ಚೆಕಪ್ರಿಯದರ್ಶನಃ |

ಆತ್ಮವಾನ್ ಕೋ ಜಿತಕ್ರೋಧೋ ದ್ಯುತಿಮಾನ್ ಕೋsನಸೂಯಕಃ |

ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಷಸ್ಯ ಸಂಯುಗೇ |

ಏತದಿಚ್ಛಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ |

ಮಹರ್ಷೇ ತ್ವಂ ಸಮಥೋಸಿ ಜ್ಞಾತುಂ ಏವಂವಿಧ ನರಮ್ ||

“ಈ ಲೋಕದಲ್ಲಿ ಗುಣವಂತ, ವೀರ್ಯವಂತ, ಧರ್ಮವಂತ, ಕೃತಜ್ಞ, ಸತ್ಯವಾದಿ, ದೃಢವ್ರತ, ಚಾರಿತ್ರ್ಯವಂತ, ಸಕಲಪ್ರಾಣಿಗಳಿಗೂ ಹಿತವನ್ನು ಬಯಸುವವ, ವಿದ್ವಾಂಸ, ಸಮರ್ಥ, ಸುಂದರ, ಆತ್ಮವಂತ, ಕ್ರೋಧವನ್ನು ಗೆದ್ದವ, ವರ್ಚಸ್ವೀ, ಅಸೂಯೆ ಇಲ್ಲದವ, ಯುದ್ಧದಲ್ಲಿ ಮುನಿದು ನಿಂತರೆ ದೇವತೆಗಳೂ ಹೆದರುತ್ತಾರೋ ಅಂತಹ ನರಶ್ರೇಷ್ಠನನ್ನು ಕುರಿತು ತಿಳಿಯುವ ಕುತೂಹಲ ನನಗುಂಟಾಗಿದೆ. ದಯವಿಟ್ಟು ಅಂತಹವನನ್ನು ತಿಳಿಸಿಕೊಡಿ” ಎಂದು ವಾಲ್ಮೀಕಿ ನಾರದರನ್ನು ಕೇಳುತ್ತಾರೆ. ಅಂತಹವನೇ ‘ರಾಮ’ ಎಂದು ನಾರದರು ಹೇಳುತ್ತಾರೆ.

ವಾಲ್ಮೀಕಿಯ ಈ ಹದಿನಾರು ಗುಣಗಳ ಪಟ್ಟಿಯಲ್ಲಿ ದೇಶವನ್ನಾಳುವವನು ‘ಚಾರಿತ್ರ್ಯವಂತ’ (‘ಚಾರಿತ್ರೇಣ ಚ ಕೋ ಯುಕ್ತಃ) ಆಗಿರಬೇಕು ಅನ್ನುವುದು ಒಂದು. ರಾಜಕಾರಣಿಗಳಲ್ಲಿ ಮುಖ್ಯವಾಗಿರಬೇಕಾದ ಗುಣ ಇದು. ಚಾರಿತ್ರ್ಯಯವೆಂದರೆ ಸದ್ಗುಣಗಳ ರಾಶಿ. ಸಭ್ಯತೆ, ಸುಶಿಕ್ಷಿತತೆ, ಸಂಸ್ಕಾರ, ಯಾವುದೇ ವ್ಯಸನವಿಲ್ಲದಿರುವುದು, ಇಂದ್ರಿಯಗಳ ಮೇಲೆ ಹತೋಟಿ ಇರುವುದು, ಲಂಚರುಷುವತ್ತುಗಳಿಗೆ ಬಲಿಯಾಗದಿರುವುದು, ಭ್ರಷ್ಟಾಚಾರ ಮುಕ್ತನಾಗಿರುವುದು ಹೀಗೆ ಹಲವು ಗುಣಗಳ ಮಿಶ್ರಣ ಅದು. ಶ್ರೀರಾಮ ಬಹುದೊಡ್ಡ ಚಾರಿತ್ರ್ಯವಂತನಾಗಿದ್ದ. ಅವನಲ್ಲಿ ಯಾವುದೇ ವ್ಯಸನವಾಗಲೀ, ಲಾಂಪಟ್ಯವಾಗಲೀ ಏನೂ ಇರಲಿಲ್ಲವಾಗಿತ್ತು. ಶ್ರೀರಾಮ ಆಡಳಿತದಲ್ಲಿ ಅತ್ಯಂತ ಸಮರ್ಥನಾಗಿದ್ದ. ದಕ್ಷನಾಗಿದ್ದ. ನ್ಯಾಯಪರನಾಗಿದ್ದ. ಅವನ ಸೈನ್ಯ ಸುಸಜ್ಜಿತವಾಗಿತ್ತು. ಆತ ಇಂದ್ರಿಯಗಳ ಮೇಲೆ ಸಾಕಷ್ಟು ಹಿಡಿತ ಸಾಧಿಸಿದ್ದ.

ಈ ಎಲ್ಲಾ ಗುಣಗಳನ್ನೂ ಸಮರ್ಥಿಸುವಂತೆ ಚಾಣಕ್ಯನೂ ಒಂದು ಮಾತನ್ನು ಹೇಳುತ್ತಾನೆ. “ಇಂದ್ರಿಯವಶವರ್ತೀ ಚತುರಂಗವಾನಪಿ ವಿನಶ್ಯತಿ”. “ಇಂದ್ರಿಯಗಳಿಗೆ ವಶನಾದವನು ಅವು ಕುಣಿದಂತೆ ಕುಣಿಯುವವನು ಸ್ವಬುದ್ಧಿಯಿಲ್ಲದವನು ಚಪಲಚಿತ್ತನು ಆನೆ., ಕುದುರೆ, ರಥ, ಕಾಲಾಳು ಎಂಬ ನಾಲ್ಕು ವಿಧದ ಸೈನ್ಯವಿದ್ದರೂ ಖಂಡಿತವಾಗಿಯೂ ನಾಶವಾಗುತ್ತಾನೆ” ಎಂದು.

ನಮ್ಮ ರಾಜಕಾರಣಿಗಳಲ್ಲಿ ‘ಚಾರಿತ್ರ್ಯವಂತರು’ ಎಷ್ಟು ಮಂದಿ ಇದ್ದಾರೆ. ನೂರಕ್ಕೆ ಐದು ಮಂದಿ ಸಿಗುವುದೂ ಕಷ್ಟ. Sex Scancleಲ್ಲಿ, ಲಂಚರುಷುವತ್ತುಗಳಲ್ಲಿ, ಭ್ರಷ್ಟಾಚಾರಗಳಲ್ಲಿ ಸಿಕ್ಕಿಬಿದ್ದವರೇ ಬಹಳಮಂದಿ ಇದ್ದಾರೆ. ಅನ್ಯಾಯಮಾರ್ಗದಲ್ಲಿ ಬ್ರಹ್ಮಾಂಡದಷ್ಟು ಹಣ ಗಳಿಸಿದವರು ಎಲ್ಲೆಲ್ಲೂ ಸಿಗುತ್ತಾರೆ. ಚೀನಾ ನಮ್ಮ “ಅಕ್ಸಾಯಿಚಿನ್”ನ್ನು  ಆಕ್ರಮಿಸಿದಾಗ “ಅದು ಹೋದರೆ ಹೋಗಲಿ, ಅಲ್ಲಿ ಏನೂ ಬೆಳೆಯುವುದಿಲ್ಲ” ಅಂತ ಹೇಳಿದವರು ನಮ್ಮನ್ನಾಳುವ ಒಬ್ಬ ಇಂದ್ರಿಯಗುಲಾಮರೇ ಆಗಿರಲಿಲ್ಲವೆ? ಇಂಥವರಿಂದ ದೇಶದ ಸುರಕ್ಷೆ ಹೇಗೆ ಸಾಧ್ಯ? ಇತಿಹಾಸದಲ್ಲಿ ಇಂಥವರು ಬಹಳಮಂದಿ ಸಿಗುತ್ತಾರೆ. ಈಗ ಹೇಳಿ. ನಮಗೆ ರಾಮನಂತಹ ಚಾರಿತ್ರ್ಯವಂತ, ಸತ್ಯವಾದಿ, ದೃಢವ್ರತ, ಧರ್ಮಜ್ಞ ಬೇಕೇ? ಆಥವಾ ಸರಕಾರದ ದುಡ್ಡಿನಲ್ಲಿ ಮಜಾ-ಮೋಜು ಮಾಡುತ್ತಾ, ಸುಳ್ಳು ಭರವಸೆ ಕೊಡುತ್ತಾ, ಮತಗಳಿಕೆಗಾಗಿ ಎಂತಹ ಪುಂಡುಪೋಕರಿಗಳನ್ನೂ, ದುಷ್ಕರ್ಮಿಗಳನ್ನೂ ಓಲೈಸುವ, ಚಾರಿತ್ರ್ಯಭ್ರಷ್ಟ ರಾಜಕಾರಣಿಗಳು ಬೇಕೆ? ಇಲ್ಲಿ ನಾವು ಯೋಚಿಸುವುದು ಬಹಳ ಇದೆ.

ಇಂತಹ ಒಳಿತು-ಕೆಡುಕುಗಳನ್ನು ಅರ್ಥೈಸಿ, ಸನ್ಮಾರ್ಗದಲ್ಲಿ ಸಾಗುವುದಕ್ಕೆ ನಮಗೆ ರಾಮನ ಆದರ್ಶ ಬೇಕು. ಅದನ್ನು ಉದ್ದೀಪಿಸುವುದಕ್ಕೆ ಪ್ರೇರಣೆಯೊದಗಿಸುವುದಕ್ಕೆ, ಒಂದು ಉಪಕರಣವಾಗಿ ರಾಮಮಂದಿರವೂ ಬೇಕು. ರಾಜಕೀಯ ಅನ್ನುವುದು ಲಕ್ಷ ಲಕ್ಷ ಮಂದಿಗಳ, ಇಷ್ಟ-ಅನಿಷ್ಟಗಳ ಹಿತ-ಅಹಿತಗಳ ಒಂದು ಸಂಘಾತ. ಅದರಲ್ಲಿ ಒಬ್ಬನಿಗಾದ ಸಿಹಿ ಮತ್ತೊಬ್ಬನಿಗೆ ಕಹಿಯಾಗುತ್ತದೆ. ಒಬ್ಬನಿಗೆ ಆದ ಹೂಮಾಲೆ ಇನ್ನೊಬ್ಬನಿಗೆ ನೇಣುಹಗ್ಗವಾಗುತ್ತದೆ. ಇದರಲ್ಲಿ ಅನ್ಯೋನ್ಯ ಸಂಘರ್ಷ, ಆಘಾತ, ಕೊಳೆ, ಕೆಸರು, ಆತ್ಮಪ್ರಶಂಸೆ, ಪರನಿಂದೆ ಸದಾ ನಡೆಯುತ್ತಿರುತ್ತದೆ.

ಇಂತಹ ಸಂದರ್ಭದಲ್ಲಿ ರಾಜ್ಯ ಅಥವಾ ದೇಶಕ್ಷೇಮದ ಹೊಣೆ ಹೊತ್ತವನಿಗೆ ಹಿತಾಹಿತದ ವಿವೇಕ, ನ್ಯಾಯಾನ್ಯಾಯದ ಸ್ವರೂಪಜ್ಞಾನ ಇರಬೇಕಾಗುತ್ತದೆ. ಅದನ್ನು ತಿಳಿಸಿಕೊಡುವುದು ಮಹಾಕಾವ್ಯಗಳು. ಆ ನೆಲೆಯಲ್ಲಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಒಂದು ಹೊಸ ಅರಿವನ್ನು ಮೂಡಿಸುವುದಕ್ಕೆ, ಒಳಿತನ್ನು ಸಾಧಿಸುವುದಕ್ಕೆ ರಾಮಾಯಣ, ರಾಮ, ರಾಮಮಂದಿರ ಎಲ್ಲವೂ ಬೇಕಾಗುತ್ತವೆ.

ಇವಿಷ್ಟನ್ನೂ ಹೇಳಿದ್ದು ಕಾವ್ಯಾನುಸಂಧಾನದ ನೆಲೆಯಲ್ಲಿ ಮತ್ತು ಕಾವ್ಯಗಳಲ್ಲಿ ದೊರಕುವ ಜೀವನಮೌಲ್ಯಗಳ ಹಿನ್ನೆಲೆಯಲ್ಲಿ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಯಾರೂ ಕಾವ್ಯಗಳನ್ನು ಓದುವುದಿಲ್ಲ. ಕೃಷ್ಣನಿರಲಿ, ರಾಮನಿರಲಿ, ಈಶ್ವರನಿರಲಿ ಬಹುಸಂಖ್ಯಾತರು ದೇವರನ್ನು ನೋಡುವುದು ಭಕ್ತಿಯ ಭಾವದಲ್ಲಿ; ರೂಢಿಗತವಾದ ಧಾರ್ಮಿಕ ಆಚರಣೆಯಲ್ಲಿ, ಈಗ ನಿರ್ಮಾಣಗೊಳ್ಳುತ್ತಿರುವ ರಾಮನನ್ನೂ, ರಾಮಮಂದಿರವನ್ನು ನೋಡುವುದು ಇದೇ ದೃಷ್ಟಿಯಲ್ಲಿ. ಇದರಲ್ಲಿ ತಪ್ಪೇನೂ ಇಲ್ಲ. ಈ ದೃಷ್ಟಿಯಲ್ಲಿ ನೋಡುವುದಕ್ಕೂ ಅವಕಾಶವಿದೆ.

ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ |

ವೇದಃ ಪ್ರಾಚೇತಸಾದಾಸೀತ್ ಸಾಕ್ಷಾದ್ರಾಮಾಯಣಾತ್ಮನಾ ||

“ಮಹಾವಿಷ್ಣುವು ಶ್ರೀರಾಮನಾಗಿ ಮನುಷ್ಯರೂಪದಲ್ಲಿ ಅವತರಿಸಿದನು; ತದನುಸಾರವಾಗಿ ವೇದವು ರಾಮಾಯಣ ರೂಪದಲ್ಲಿ ಅವತರಿಸಿತು. ಶ್ರೀರಾಮನು ಮನುಷ್ಯನಾಗಿ ಹುಟ್ಟಿ ಮಹಾವಿಷ್ಣು ಪದವಿಗೆ ಏರಿದನು; ತದನುಸಾರವಾಗಿ ವಾಲ್ಮೀಕಿಪ್ರಣೀತ ರಾಮಾಯಣ ವೇದಪ್ರಾಯವಾಯಿತು.” ಇವೆರಡೂ ಬೇರೆ ಬೇರೆ ದೃಷ್ಟಿಗಳು. ಮೊದಲನೆಯದರಲ್ಲಿ ಅನುಗ್ರಹಾಪೇಕ್ಷೆಯ ದೃಷ್ಟಿ ಇದ್ದರೆ ಎರಡನೆಯದರಲ್ಲಿ ಅರ್ಹತಾ ಸಂಪಾದನೆಯ ದೃಷ್ಟಿ ಇದೆ. ಎರಡೂ ಗ್ರಾಹ್ಯವೇ. ಪರಸ್ಪರ ವಿರೋಧಿಗಳಲ್ಲ. ಹಾಲೂ ತುಪ್ಪ ಬೆರೆತಂತೆ; ಜೇನೂ ಹಲಸೂ ಒಂದುಗೂಡಿದಂತೆ.

ಮೊದಲನೆಯ ದೃಷ್ಟಿಯಲ್ಲಿ ಪ್ರಸಾದನಿರೀಕ್ಷೆಯ ಮುಖ್ಯ ಆಶಯ ಇದೆ. ಶ್ರೀರಾಮನು ಭಗವಂತನ ಪ್ರತ್ಯಕ್ಷಮೂರ್ತಿ. ಆತ ಕೃಪಾಳು. ಅವನನ್ನು ನಂಬಿದರೆ, ಆಶ್ರಯಿಸಿದರೆ ನಮ್ಮ ಇಷ್ಟಾರ್ಥ ನೆರವೇರುತ್ತದೆ. ಅವನ ಮೇಲಿನ ಭಕ್ತಿ ಶ್ರೇಯಸ್ಸಾಧಕ. ಆದ್ದರಿಂದ ಅವನನ್ನು ನಂಬಿದರೆ ಅಪಾಯವಿಲ್ಲ. ಅದಕ್ಕಾಗಿ ನಾವು ಅವನ ಮೊರೆ ಹೊಗಬೇಕು.

ಎರಡನೆಯ ದೃಷ್ಟಿಯಲ್ಲಿ ಪ್ರಯತ್ನದಾರ್ಢ್ಯ ಮುಖ್ಯ ಆಶಯವಾಗಿದೆ. ಶ್ರೀರಾಮನು ಮಾನುಷಸತ್ವಕ್ಕೆ ಆದರ್ಶಮೂರ್ತಿ. ಆತ ಭಗವಂತನ ಅವತಾರವಾದರೂ ಮನುಷ್ಯಬೊಧೆಗಾಗಿ ಮಡಿದವ. ಮನುಷ್ಯನು ಹೇಗೆ ಆತ್ಮಸಂಯಮದಿಂದ, ಆತ್ಮಪರೀಕ್ಷೆಯಿಂದ, ಶಿಕ್ಷಣದಿಂದ, ಶೌರ್ಯದಿಂದ ಮೇಲಕ್ಕೇರಬಹುದು, ಲೋಕಜೀವನದ ಕಷ್ಟಕಾರ್ಪಣ್ಯಗಳಿಂದ ಪಾರಾಗಿ ಪರಮಪದವಿಗೆ ಏರಬಹುದು ಅನ್ನುವುದಕ್ಕೆ ಇಲ್ಲಿ ನಿದರ್ಶನವಿದೆ. ಇದು ಕಾವ್ಯಾನುಸಂಧಾನದ ದೃಷ್ಟಿಯೂ ಹೌದು. ಶ್ಲೋಕದ ಮೊದಲರ್ಧ ಭಕ್ತಕೋಟಿಗೆ ಆಪ್ಯಾಯಮಾನವಾದರೆ ಎರಡನೆಯ ಅರ್ಧ ಕಾವ್ಯಜಿಜ್ಞಾಸುಗಳಿಗೆ ಆಪ್ಯಾಯಮಾನವಾಗಿದೆ.

*ಲೇಖಕರು ಮೂಲತಃ ಶಿರಸಿಯವರು; ನಿವೃತ್ತ ಸಂಸ್ಕೃತ ಅಧ್ಯಾಪಕರು, ತಾಳಮದ್ದಳೆ ಅರ್ಥಧಾರಿ, ಮೈಸೂರಿನಲ್ಲಿ ನೆಲೆಸಿದ್ದಾರೆ. ಬರಹ, ಚಿಂತನೆ, ವಿಮರ್ಶೆ, ಪ್ರವಚನ, ಭಾಷಣ, ಸಂಘಟನೆಯಲ್ಲಿ ಆಸಕ್ತಿ.

Leave a Reply

Your email address will not be published.