ಕಾಶ್ಮೀರ ಮೂಲನಿವಾಸಿಗಳ ವೇದನೆ, ನಿವೇದನೆ

ಪುಲ್ವಾಮಾ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ತಳಸ್ಪರ್ಶಿಯಾಗಿ ಮರುಪರಿಶೀಲಿಸುವ ಸಂದರ್ಭ ಸೃಷ್ಟಿಯಾಗಿದೆ. ಇತ್ತೀಚೆಗೆ ಕಣಿವೆರಾಜ್ಯಕ್ಕೆ ಅಧ್ಯಯನ ಪ್ರವಾಸ ಹೋಗಿದ್ದ ಲೇಖಕರು ಅಲ್ಲಿನ ಒಳಸುಳಿಗಳು, ಸ್ಥಳೀಯರ ಆಲೋಚನೆ, ಹಿರಿಯರ ವಿಷಾದ, ಕಿರಿಯರ ಆಕ್ರೋಶ ಕುರಿತು ಆಳನೋಟ ಬೀರಿದ್ದಾರೆ. ಈತನಕ ಹೊರಗಿನವರ ಗಮನಕ್ಕೆ ನಿಲುಕದ ಅನೇಕ ನಿಜಗಳು ಇಲ್ಲಿವೆ.

ಕಾಶ್ಮೀರ ಭೂಮಿಯ ಮೇಲಿನ ಸ್ವರ್ಗ. ಹಿಮಾಚ್ಛಾದಿತ ಗಿರಿ ಶಿಖರಗಳ ಸಾಲು, ಹಸಿರು ಹಾಸಿ ಹೊದ್ದ ಕಣಿವೆ ಕಾನನಗಳು, ಹಿಮಾಲಯದಿಂದ ಇಳಿದು ಬಂದು ಸಮೃದ್ದಿ ಸೃಷ್ಟಿಸಿ ವರ್ಷವಿಡಿ ಹರಿಯುವ ಜೀವನದಿಗಳು; ಸೇಬು, ಲಿಚ್ಚಿ, ಚೆರ್ರಿ ಹಣ್ಣಿನ ತೋಟಗಳು; ಕೇಸರಿ, ಸಾಸಿವೆ, ಬಾರ್ಲಿ-ಭತ್ತದ ಗದ್ದೆಯ ಬಣ್ಣಬಣ್ಣದ ಹೊಲಗಳು, ಸುಂದರ ಮನೆಗಳು… ಕಾಶ್ಮೀರದಲ್ಲಿ ದೃಶ್ಯಗಳೇ ಕಾವ್ಯಗಳು. ಆದರೆ ಇವೆಲ್ಲ ಹೊರಗಿನಿಂದ ಹೋಗಿಬಂದವರಿಗೆ ನಿಲುಕುವ ನೋಟಗಳಷ್ಟೆ. ಒಳಗಿನವರಿಗೆ ಸ್ವರ್ಗ ಬೇರೆಲ್ಲಿಯೋ ಇದೆ. ಅವರಿಗೆ ಇದುವೇ ನರಕ, ಬಿಡುಗಡೆಯ ಕನಸಿನ ತವಕ.

ಪಂಜಾಬಿನ ಅಮೃತಸರದಿಂದ ಹೆದ್ದಾರಿಯಲ್ಲಿ ಹೊರಟು ಗುರುದಾಸಪುರ, ಪಠಾಣ್‍ಕೋಟ್ ದಾಟಿಕೊಂಡು ಬಿಯಾಸ್ ನದಿ ಹಾದು ಮುಂದೆ ಸಾಗಿದರೆ ರಾವಿ ಅಡ್ಡ ಬರುತ್ತದೆ. ನದಿಯ ಬೃಹತ್ ಸೇತುವೆ, ಬ್ಯಾರೇಜ್ ದಾಟಿದರೆ ಜಮ್ಮು-ಕಾಶ್ಮೀರ ಸ್ವಾಗತ ಕಮಾನು-ಚೆಕ್‍ಪೋಸ್ಟ್. ಅದು ಮಾದೋಪುರ. ಅಲ್ಲಿಂದ ಭಾರತ ಮುಕುಟಪ್ರಾಯ ರಾಜ್ಯದ ಆರಂಭ. ಇಲ್ಲಿಂದ ಶುರುವಾಗುವ ನಾಡಿನ ಇನ್ನೊಂದು ತುದಿ ಮತ್ತೆಲ್ಲಿಯೋ ಇದೆ; ಮತ್ಯಾರ್ಯಾರ ಕೈಯಲ್ಲೊ, ಕಬಂಧ ಬಾಹುಗಳಲ್ಲೋ. ಪುರಾತನ ನಾಗರಿಕತೆಯ ತೊಟ್ಟಿಲಾಗಿ ಭರತಖಂಡವನ್ನು ಏಷ್ಯಾದೊಂದಿಗೆ ಜೋಡಿಸುವ ಭೂಭಾಗದ ಕೊಂಡಿ, ಸಾವಿರಾರು ವರ್ಷಗಳ ಹಿಂದೆ ರೇಷ್ಮೆ ಮಾರ್ಗದ ಮೂಲಕ ಭಾರತ ವಾಣಿಜ್ಯ ವ್ಯವಹಾರದ ನರನಾಡಿಯಾಗಿದ್ದ ಸಮೃದ್ಧ ನಾಡು ಜಮ್ಮು-ಕಾಶ್ಮೀರ ಹರಿದು ಹಂಚಿಹೋಗಿದೆ.

ಪಾಕ್ ವಶದಲ್ಲಿರುವ ಕಾಶ್ಮೀರದ ಮೇಲೆ ಭಾರತ ಹಕ್ಕು ಪ್ರತಿಪಾದಿಸುತ್ತಿದೆ; ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ) ಎಂದು ಹೆಸರಿಸಿ ಇಡೀ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಘೋಷಿಸಿದೆ. ಪಾಕಿಸ್ತಾನ ಭಾರತದ ಭಾಗವಾಗಿರುವ ಪ್ರದೇಶವನ್ನು ಇಂಡಿಯಾ ಆಕ್ರಮಿತ ಕಾಶ್ಮೀರ (ಐಓಸಿ) ಎನ್ನುತ್ತ ಜಮ್ಮು ಹೊರತುಪಡಿಸಿದ ಪ್ರದೇಶ ತನಗೆ ಸೇರಬೇಕಾದ್ದು ಎನ್ನುತ್ತಿದೆ.

ಶಾಂತಿಯ ಬೀಡಾಗಿದ್ದ ಈ ಪ್ರದೇಶ ಭಾರತ ದೇಶದ ವಿಭಜನೆಯ ಜೊತೆಯಲ್ಲಿಯೇ ರಣಕಣವಾಗಿ ಮಾರ್ಪಟ್ಟು ಮೂಲನಿವಾಸಿಗಳ ನೆಮ್ಮದಿ ಕದಡಿತು. ನಿತ್ಯ ನಿರಂತರ ಬೀಭತ್ಸ ರಕ್ತಪಾತಗಳ ಮೂಲಕ ಸ್ವರ್ಗದಲ್ಲೊಂದು ನರಕ ಸೃಷ್ಟಿಸಲಾಯಿತು. ಆ ನರಕದಿಂದ ಅಲ್ಲಿನವರಿಗೆ ಮುಕ್ತಿ ಬೇಕು. ಅದು ಯಾವ ಮಾರ್ಗದಿಂದ ಸಿಗಲಿದೆ, ಸಿಗಬೇಕು ಎಂಬುದರ ಬಗ್ಗೆ ಅವರಲ್ಲಿ ಸ್ಪಷ್ಟತೆಯಿಲ್ಲ. ಅವರ ಚಿಂತನಾಶಕ್ತಿಯನ್ನೇ ಕಸಿದು ಮಾನವೀಯ ಸಂವೇದನೆಗಳನ್ನು ಹೊಸಕಿ ಹಾಕಲಾಗಿದೆ. ಅಸ್ಮಿತೆಗೆ ಹೋರಾಡೋಣವೆಂದು ಚಿತಾವಣೆ ಮಾಡಿ ಅವರೊಳಗಿನ ರಾಜಕೀಯ ಸ್ವಾರ್ಥಿಗಳು ಅವರೊಳಗೇ ನರರಾಕ್ಷಸರನ್ನು ತಯಾರು ಮಾಡಿದ್ದಾರೆ. ಮತ್ತದೇ ಸ್ವರ್ಗದ ಕನಸು ಬಿತ್ತಿ ಭಯೋತ್ಪಾದನೆಯ ಮೂಲಕ ನೆತ್ತರ ಹೊಳೆ ಹರಿಸಿ ಹುಲುಸಾದ ಅಶಾಂತಿಯ ಬೆಳೆ ತೆಗೆಯಲಾಗುತ್ತಿದೆ.

ಉಗ್ರವಾದ, ಹತ್ಯಾಕಾಂಡ, ಹಿಂಸಾಚಾರಗಳಿಗೆ ಬಾಹ್ಯ ದುಷ್ಟಶಕ್ತಿಗಳ ಕುಮ್ಮಕ್ಕು, ಮದ್ದತು. ಬಂದೂಕಿನಿಂದ ಬಾಯಿ ಮುಚ್ಚಿಸುವ ವಿಫಲ ಪ್ರಯತ್ನಗಳು. ಹಂಚಿಕೊಂಡಿರುವ ದೇಶಗಳಿಗೆ ಜನರ ಭಾವನೆ ಅರಿಯುವ ಮನಸ್ಸಿಲ್ಲ. ಹತಾಶೆ, ನಿರಾಸೆ, ಅಸಹಾಯಕತೆಯಿಂದ ಹುಟ್ಟಿದ ಆಕ್ರೋಶ ತಣಿಸಿ ಭರವಸೆಯ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳಿಲ್ಲ. ಈ ದೇಶಗಳಿಗೆ ಕಾಶ್ಮೀರವೆಂದರೆ ಭೂಮಿಯ ತುಂಡುಗಳಷ್ಟೆ. ಅಲ್ಲಿನ ವಾಸಿಗಳ ಮನಸ್ಸಿನ ತವಕ, ತಲ್ಲಣಗಳಿಗೆ ಮಿಡಿಯುವ ಹೃದಯಗಳಿಲ್ಲ.

ರಾಜಾಳ್ವಿಕೆಯಲ್ಲಿ ಸ್ವಾಯತ್ತ, ಸ್ವತಂತ್ರವಾಗಿದ್ದ ಜಮ್ಮು-ಕಾಶ್ಮೀರದ ಅರ್ಧ ಭಾಗದ ಮೇಲೆ ಭಾರತದ ಹಿಡಿತ. ಜಮ್ಮು, ಕಾಶ್ಮೀರ, ಲಡಾಕ್ ಪ್ರಾಂತ್ಯಗಳನ್ನೊಳಗೊಂಡ ಏಳೂವರೆ ಮಿಲಿಯನ್ ಜನಸಂಖ್ಯೆಯ 1,01,338 ಚದರ ಕಿ.ಮೀ. ಭೂಭಾಗದಲ್ಲಿ ಭಾರತದ ಆಳ್ವಿಕೆಯಿದೆ. ಸಿಯಾಚಿನ್ ನೀರ್ಗಲ್ಲು ಪ್ರದೇಶದ ಬಹುತೇಕ ಭಾಗವೂ ಭಾರತದ ವಶದಲ್ಲಿದೆ. ಉತ್ತರ, ವಾಯುವ್ಯ ಪ್ರಾಂತ್ಯವನ್ನು ಪಾಕಿಸ್ತಾನ ಕಬಳಿಸಿದೆ. ಆಜಾದ್ ಕಾಶ್ಮೀರ, ಗಿಲ್ಗಿಟ್-ಬಲೂಚಿಸ್ತಾನದ 85,846 ಚದರ ಕಿ.ಮೀ. ಪ್ರದೇಶದ 6 ಮಿಲಿಯನ್ ಜನಸಂಖ್ಯೆ ಹೊಂದಿರುವ ನೆಲ ಪಾಕಿಗಳ ಹಿಡಿತದಲ್ಲಿದೆ. ಜನವಸತಿಯಿಲ್ಲದ ಅಕ್ಸಾಯ್ ಚೀನ್, ಕಾರಕೋರಂ ವಲಯದ 37,555 ಚ.ಕಿ.ಮೀ. ಚೀನಾ ವಶದಲ್ಲಿದೆ. ಚೀನಾ ಪಾಕಿಸ್ತಾನದಿಂದ ಖರೀದಿಸಿದ ಕಾರಕೋರಂ ಪರ್ವತ ಪ್ರದೇಶ, ಅಕ್ಸಾಯ್ ಚೀನ್ ಮರುಭೂಮಿ, ಪಾಕ್ ವಶದಲ್ಲಿರುವ ಕಾಶ್ಮೀರದ ಮೇಲೆ ಭಾರತ ಹಕ್ಕು ಪ್ರತಿಪಾದಿಸುತ್ತಿದೆ; ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ) ಎಂದು ಹೆಸರಿಸಿ ಇಡೀ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಘೋಷಿಸಿದೆ. ಪಾಕಿಸ್ತಾನ ಭಾರತದ ಭಾಗವಾಗಿರುವ ಪ್ರದೇಶವನ್ನು ಇಂಡಿಯಾ ಆಕ್ರಮಿತ ಕಾಶ್ಮೀರ (ಐಓಸಿ) ಎನ್ನುತ್ತ ಜಮ್ಮು ಹೊರತುಪಡಿಸಿದ ಪ್ರದೇಶ ತನಗೆ ಸೇರಬೇಕಾದ್ದು ಎನ್ನುತ್ತಿದೆ. ಕಾಶ್ಮೀರದಲ್ಲಿ ಮುಸ್ಲಿಂ ಬಾಹುಳ್ಯವಿದೆ ಎನ್ನುವುದೇ ಕಾಶ್ಮೀರ ತನ್ನದೆನ್ನಲು ಪಾಕಿಗಳಿಗಿರುವ ಏಕೈಕ ಕಾರಣ.

ಇದೇ ಕಾರಣವಿಟ್ಟುಕೊಂಡೇ ಪಾಕಿಸ್ತಾನ ದೇಶ ವಿಭಜನೆಯ ಕಾಲದಿಂದ ಈ ಕ್ಷಣದವರೆಗೂ ಭಾರತದ ಭೂಭಾಗ ಕೈವಶ ಮಾಡಿಕೊಳ್ಳುವ ಅನೇಕ ವ್ಯರ್ಥ ಕಸರತ್ತು ನಡೆಸಿ ವಿಫಲವಾದ ನಂತರ ಕುತಂತ್ರದ ಆಟ ಆರಂಭಿಸಿ, ಉಗ್ರವಾದದ ಪ್ರಯೋಜಕತ್ವ ವಹಿಸಿ ಕಣಿವೆಯ ಶಾಂತಿ ಕದಡಿದೆ.

ಅತ್ತ ಗಿಲ್ಗಿಟ್-ಬಲೂಚಿಸ್ತಾನದಲ್ಲೂ ಸ್ವತಂತ್ರಕ್ಕಾಗಿ ಬಾವುಟ ಹಿಡಿಯುವ ಮೂಲವಾಸಿಗಳನ್ನು ಕ್ರೌರ್ಯ, ದಬ್ಬಾಳಿಕೆಯ ಮೂಲಕವೇ ಹತ್ತಿಕ್ಕುತ್ತಾ ಬಂದಿದೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ತನ್ನೊಳಗೆ ಸೇರಿಸಿಕೊಳ್ಳುವ ಭಾರತದ ಪ್ರಯತ್ನಗಳೂ ಈವರೆಗೆ ಫಲ ನೀಡಿಲ್ಲ. ಗುಂಡಿನ ಮೂಲಕ ಕಾಶ್ಮೀರ ಜನರ ಧ್ವನಿ ಅಡಗಿಸುತ್ತಿದೆ ಎಂಬ ಆರೋಪ. ಅದರಿಂದಾಗಿಯೇ ಯುವ ಸಮುದಾಯ ಉಗ್ರಗಾಮಿಗಳ ಆಕರ್ಷಣೆಗೊಳಗಾಗುತ್ತಿದೆ ಎನ್ನುವ ಕೂಗು. ನಂಬಿಕೆ, ವಿಶ್ವಾಸದ ಮೂಲಕ ಜನಮನ ಗೆಲ್ಲುವ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿಲ್ಲವೆಂಬ ಮಾತುಗಳು ಇಲ್ಲಿನ                      ಒಳಗಿನಿಂದಲೇ ಕೇಳಿಬರುತ್ತಿವೆ.

ಎಂದಾದರೊಂದು ದಿನ ಪಿಓಕೆ ತನ್ನದಾಗುತ್ತದೆಂಬ ವಿಶ್ವಾಸದಿಂದ ಪಾಕ್ ಅಕ್ರಮಿತ ಕಾಶ್ಮೀರದ 24 ವಿಧಾನಸಭಾ ಕ್ಷೇತ್ರಗಳನ್ನು ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಖಾಲಿ ಬಿಟ್ಟುಕೊಂಡು ಭಾರತ ಕಾಯುತ್ತಿದೆ. ಕಣಿವೆಯ ಮೇಲೆ ಕಣ್ಣು ಹಾಕಿ ಪಾಕಿಸ್ತಾನ ನಡೆಸುವ ನೇರ, ಪರೋಕ್ಷ ಸಮರ ಹತ್ತಿಕ್ಕುತ್ತಾ ತನ್ನ ನೆಲ ಕಾಯ್ದುಕೊಂಡಿದೆ. ಅತ್ತ ಚೀನಾ ಬ್ರಿಟಿಷರ ಪುರಾತನ ಒಪ್ಪಂದಗಳನ್ನು ಒಪ್ಪದೆ ಅಕ್ಸಾಯ್ ಚೀನ್ ನುಂಗಿ ಕಾರಂಕೋರಂ ಪ್ರದೇಶವನ್ನೂ ಪಾಕಿಸ್ತಾನದಿಂದ ಖರೀದಿಸಿ ಆಯಕಟ್ಟಿನ ಜಾಗ ಹಿಡಿದಿದೆ. ಅಪರೂಪಕ್ಕೆ ಲಡಾಕ್ ಪ್ರಾಂತ್ಯ ಪಶ್ಚಿಮ ಟಿಬೆಟ್‍ನ ಭಾಗವೆಂದು ಮೆಲುದನಿಯಲ್ಲಿ ಹೇಳಿಕೊಳ್ಳುತ್ತ ಹಕ್ಕು ಸಾಧಿಸಲು ಹವಣಿಸುತ್ತದೆ.

ಛಿದ್ರಗೊಂಡ ಜಮ್ಮು ಕಾಶ್ಮೀರದ ಭೂ ತುಣುಕುಗಳಲ್ಲಿ ಪ್ರಜಾಪ್ರಭುತ್ವ, ಪ್ರಜಾಭಿಪ್ರಾಯಕ್ಕೆ ಮನ್ನಣೆಯೇ ಇಲ್ಲ. ಪಾಕಿಸ್ತಾನದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರವೇ ಸೇನೆಯ ಅಡಿಯಾಳು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆ ಸೇನೆಯಿಂದ ನಿತ್ಯ ನಿರಂತರ ಮಾನವ ಹಕ್ಕುಗಳ ದಮನ. ಭಾರತ ಭೂಭಾಗದ ಕಾಶ್ಮೀರವೂ ಪ್ರಜಾಸತ್ತೆಗೆ ಪೂರ್ಣವಾಗಿ ತೆರೆದುಕೊಂಡಿಲ್ಲ. ಚೀನಾ ಹಿಡಿತದ ಪ್ರದೇಶಗಳಲ್ಲಿ ಹೊರಗಿನ ನರಮನುಷ್ಯರಿಗೆ ಪ್ರವೇಶವೇ ಇಲ್ಲ. ಆ ದೇಶಕ್ಕೆ ಈ ಭಾಗದ ಸಿಲ್ಕ್ ಪಥ, ಅರ್ಥಿಕ ಕಾರಿಡಾರ್ ಮೂಲಕ ವಿಶ್ವವನ್ನೇ ಒಂದು ಮಾಡಿ ಲಾಭ ಪಡೆಯುವ ಆತುರ.

*
ಶ್ರೀನಗರದಲ್ಲಿ ನಾವು ಉಳಿದುಕೊಂಡಿದ್ದ ಹೊಟೇಲ್‍ನ ರೂಂ ಬಾಯ್, ಮ್ಯಾನೇಜರ್, ‘ನೀವು ಹಿಂದೂಸ್ತಾನದಿಂದ ಬಂದಿದ್ದೀರಾ? ನಿಮಗೆ ಸುತ್ತಾಡಲು ಕಾರು ಬೇಕಾ’ ಮುಂತಾಗಿ ಮಾತನಾಡಿಸಿದರು. ಅರೇ ನೀವು ಇರುವುದೂ ಹಿಂದೂಸ್ತಾನದಲ್ಲೇ ಅಲ್ಲವೇ ಅಂದಿದ್ದಕ್ಕೆ ಬಲವಂತದ ನಗುವೇ ಅವರ ಉತ್ತರವಾಗಿತ್ತು. ಮಧ್ಯಾಹ್ನ ದಾಲ್ ಸರೋವರದ ಬೋಟಿಂಗ್‍ಗೆ ಹೋದಾಗ ‘ಪ್ಲೂಟಿಂಗ್ ಮಾರ್ಕೆಟ್’ನಲ್ಲಿ ಯಾಕೂಬ್ ದುನ್ನು ಎಂಬುವವರನ್ನು ಪರಿಚಯಿಸಿಕೊಂಡೆವು. ಆತ ಬೋಟ್ ಹೌಸ್ ಡಿನ್ನರ್ ಮಾಡಿ ಎಂದು ಬಲವಂತ ಮಾಡಿದ. ನಾವೂ ಬಲವಂತವಾಗಿ ಭಾರತ, ಪಾಕಿಸ್ತಾನ ಭಯೋತ್ಪಾದನೆ ವಿಚಾರ ಪ್ರಸ್ತಾಪಿಸಿ ಅವನ ಮನದಿಂಗಿತ ಅರಿಯಲು ಯತ್ನಿಸಿದೆವು. ಆತ ತೇಲಿಸಿದಂತೆ, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದನೇ ಹೊರತು ಮನಬಿಚ್ಚಲಿಲ್ಲ. ಅವನು ಅಷ್ಟು ಮಾತನಾಡಿದ್ದೂ ಕೂಡಾ ಗಿರಾಕಿ ಹುಟ್ಟುತ್ತದೆಂಬ ಕಾರಣಕ್ಕೆ. ಆತನೂ ಹಿಂದೂಸ್ತಾನಿಗಳು ಎಂದು ಇತರೆ ಪ್ರವಾಸಿಗರಿಗೆ ಸಂಬೋಧಿಸುತ್ತಿದ್ದ. ಪಟ್ಟುಬಿಡದೇ ಮಾತಿಗೆಳೆದಾಗ ‘ನಾನು ದೆಹಲಿ, ಇಂಡಿಯಾ ನೋಡಿಲ್ಲ. ನನ್ನದು ಬಂಡಿಪೋರಾ ಬಳಿಯ ಗ್ರಾಮ. ದೋಣಿಯಿದೆ. ಬೋಟ್ ಹೌಸ್ ಗೆ ಗಿರಾಕಿ ಕೊಡುವೆ. ಕಫ್ರ್ಯೂ, ಗಲಾಟೆ ನಡೆದಾಗ ಜೀವನ ಕಷ್ಟ’ ಎಂದ.

ಮರುದಿನ ಬೆಳಿಗ್ಗೆ ನಮ್ಮ ಗೈಡ್ ಝಾಕೀರಾ, ಹಜರತ್ ಬಲ್ ನಲ್ಲಿರುವ ಕಾಶ್ಮೀರ ವಿಶ್ವವಿದ್ಯಾಲಯಕ್ಕೆ ಕರೆದೊಯ್ದರು. ಅಲ್ಲಿನ ಕೆಫೆಟೋರಿಯಾದಲ್ಲಿ ಸಿಕ್ಕ ಮೂರ್ನಾಲ್ಕು ಯುವಕರು ಮಾತ್ರ ಬೀಡು ಬೀಸಾಗಿ ಮಾತನಾಡಿದರು. ‘ನಮ್ಮದು ಕಾಶ್ಮೀರ. ಭಾರತದ ಭಾಗ ನಾವಲ್ಲ. ಪಾಕಿಸ್ತಾನವೂ ಸಂಬಂಧವಿಲ್ಲ. ಪ್ರತ್ಯೇಕ ದೇಶಕ್ಕಾಗಿ ನಮ್ಮ ಹೋರಾಟ. ನಮ್ಮ ಹೋರಾಟವನ್ನು ಪಾಕಿಸ್ತಾನ ಬೆಂಬಲಿಸುತ್ತೆ ಮತ್ತು ಆಜಾದ್ ಕಾಶ್ಮೀರವನ್ನೂ ಬಿಟ್ಟುಕೊಟ್ಟು ಸಹಕರಿಸುತ್ತೆ’ ಅಂದರು. ‘ಇಲ್ಲಿ ಉಗ್ರರೇ ಇಲ್ಲ. ಅವರೆಲ್ಲ ಸ್ವತಂತ್ರ ಹೋರಾಟಗಾರರು. ನಿಮ್ಮ ಭಾರತದ ಸೇನೆ, ರಾಜಕಾರಣಿಗಳು ನಮ್ಮನ್ನು ಬಲಿ ಹಾಕುತ್ತಿದ್ದಾರೆ. ನಾವು ಹೆದರಲ್ಲ ಬೆದರಲ್ಲ, ಸಾಧಿಸುತ್ತೇವೆ’ ಮುಂತಾಗಿ ಬಡಬಡಿಸಿದರು. ಅದೇ ದಿನ ಸಿಕ್ಕ ಹಲವಾರು ಯುವಕರ ಮಾತುಗಳು ಇದಕ್ಕೆ ಭಿನ್ನವಾಗಿರಲಿಲ್ಲ.

ಆದರೆ ಚಹಾ ಗೂಡಂಗಡಿಯ ರಫೀಕ್ ಮಾತುಗಳು ಅಶ್ಚರ್ಯ ತಂದವು. ‘ಭಾರತದಲ್ಲಿದ್ದರೆ ನಮಗೆ ಲಾಭ ಸಾಹಿಬ್. ನಮ್ಮವರಿಗೆ ಬುದ್ಧಿ ಕಮ್ಮಿ. ಆ ನಮಕ್ ಹರಾಮ್ ಗಳನ್ನು ನಂಬಿದರೆ ಬರ್ಬಾದ್ ಆಗ್ತೀವಿ. ಅವರಿಂದ ಈಗ ನಾವು ಅನುಭವಿಸ್ತಿರೋದು ಸಾಕು. ಒಂದು ಬ್ಲಾಸ್ಟ್ ಆದರೆ ಮುಂದಿನ ಒಂದು ತಿಂಗಳು ನಮ್ಮ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕ್ಕೋ ಬೇಕು’ ಅಂದ. ಅವನ ಮಾತುಗಳಲ್ಲಿ ಪ್ರಬುದ್ಧತೆ ಕಾಣಿಸಿತು. ನಾವು ಕಂಡಹಾಗೇ ಕಣಿವೆಯಲ್ಲಿ ಅಂತಹ ಯುವಕರು ವಿರಳ. ಕೆಲವರು ಪಾಕಿಸ್ತಾನ ಹೊಗಳಿ ಭಾರತ ಬೈದು ನಾವು ಪಾಕ್ ಜೊತೆ ಇರೋದೆ ಇಷ್ಟ ಅಂದರೆ, ಇನ್ನೂ ಕೆಲವರು ನಮಗೆ ಯಾರ ಉಸಾಬರಿ ಬೇಡ ಮೊದಲಿನಂತೆ ನಮ್ಮನ್ನು ಬಿಡಬೇಕು ಅನ್ನುತ್ತಿದ್ದರು. ಮಧ್ಯ ವಯಸ್ಕರು, ಹಿರಿಯರು ಭಾರತದ ಬಗ್ಗೆ ಬೇಸರವಿದ್ದರೂ ಪಾಕಿಸ್ತಾನದ ಸಹವಾಸ ನಮಗೆ ಬೇಡ ಅನ್ನುತ್ತಿದ್ದರಲ್ಲದೆ ಭಾರತದ ಸರ್ಕಾರ ಉದ್ದೇಶಿಸಿ ಉದ್ದುದ್ದ ಬೇಡಿಕೆಗಳ ಪಟ್ಟಿ ಮಂಡಿಸುತ್ತಿದ್ದರು.

ಕೊನೆಯ ದಿನ ಕಣಿವೆ ಇಳಿದುಬಂದು ಜಮ್ಮುವಿನಲ್ಲಿ ಗೆಳೆಯ ರಾಕೇಶ್ ಸಿಂಗ್ ಅವರ ಭೇಟಿಯಾದಾಗ ಕಾಶ್ಮೀರಿಗರ ಮೇಲೆ ಅವರು ಕೆಂಡದ ಮಳೆಯನ್ನೇ ಸುರಿಸಿಬಿಟ್ಟರು. ಚೂತಿಯಾ ಲೋಗ್ ಎಂಬಲ್ಲಿಂದ ಆರಂಭಿಸಿ. ಅವರೇ ಉಗ್ರರಿಗೆ ಕುಮ್ಮಕ್ಕು. ನಮ್ಮ ದೇಶದ ಸವಲತ್ತು, ಸೌಕರ್ಯ ತಿನ್ನುತ್ತ ಬೆನ್ನಿಗೆ ಚೂರಿ ಹಾಕುವ ಅವರಿಗೆ ನಾವು ಬುದ್ಧಿ ಕಲಿಸಲೇಬೇಕು ಎಂದು ಆಕ್ರೋಶಭರಿತ ಮಾತುಗಳನ್ನಾಡಿದರು. ಉಗ್ರರು ಜಮ್ಮುವಿನ ಹಿಂದೂ ನಾಯಕರನ್ನು ಟಾರ್ಗೆಟ್ ಮಾಡ್ತಾರೆ. ಅದರೆ ಇಲ್ಲಿ ನಾವು ಬಾಲ ಬಿಚ್ಚೋಕೆ ಬಿಡಲ್ಲ ಅಂದರು. ನಿತ್ಯ ಮನೆಯ ಮುಂದಿನ ರಕ್ತಪಾತ, ರಾಷ್ಟ್ರದ್ರೋಹ ಕಂಡ ದೇಶಪ್ರೇಮಿಯ ಆಕ್ರೋಶದ ನುಡಿಗಳಿವು.

ಫಾರೂಕ್ ಅಜ್ಜ ಬಿಚ್ಚಿಟ್ಟ ಕಾಶ್ಮೀರದ ಅಂತರಾಳ

“ಕಾಶ್ಮೀರ ಭಾರತದಲ್ಲೇ ಇರಲಿ. ಉಗ್ರರಿಗೆ ಸೇನೆ ಪಾಠ ಕಲಿಸಲಿ. ನಮ್ಮದಿಲ್ಲಿಗೆ ಮುಗಿಯಿತು. ನಮ್ಮ ಮುಂದಿನ ಪೀಳಿಗೆ ಶಾಂತಿಯಿಂದ ಬದುಕಲು ಯುವಕರಿಗೊಂದು ಮಾರ್ಗ ಮಾಡಲಿ.”

ಅನಂತನಾಗ್ ಜಿಲ್ಲೆಯ ಸಿಫಾನ್ ಗ್ರಾಮ ಹೊರವಲಯದ ಆ ಮನೆಯ ಆರಾಮ ಕುರ್ಚಿಯಲ್ಲಿ ಕೂತಿದ್ದ ಸುಮಾರು ಎಪ್ಪತ್ತರ ಪ್ರಾಯದ ಉಮರ್ ಫಾರೂಕ್ ಅಳೆದೂ ತೂಗಿ ಮಾತನಾಡುತ್ತಿದ್ದರು. ಅವರ ಧ್ವನಿಯಲ್ಲಿ ಏರಿಳಿತಗಳಿರಲಿಲ್ಲ. ಕೆಂಪನೆಯ ಮುಖದಲ್ಲಿ ವಿಷಾದ, ಬೇಸರದ ಭಾವ. ಮನದಲ್ಲಿ ಕದಲುತ್ತಿದ್ದ ನೆನಪುಗಳು ಆಗಾಗ ಕಣ್ಣಲ್ಲಿ ನೀರಾಡಿಸುತ್ತಿದ್ದವು. ನಮ್ಮತ್ತ ಇಟ್ಟಿದ್ದ ದೃಷ್ಟಿ ಕದಲಿಸದೆ ಅವರು ಸಂವಾದಕ್ಕಿಳಿದಿದ್ದರು.

ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದರ ಸಂಪರ್ಕದಿಂದ ನಾವು ಅವರನ್ನು ಭೇಟಿ ಮಾಡಿದ್ದೆವು. ಝೇಲಂ ನದಿಯನ್ನು ಉಪನದಿಯೊಂದು ಕೂಡುವ ಸಂಗಮದ ಸುಂದರ ಗ್ರಾಮವದು. ನದಿ ದಂಡೆಗೆ ಕೂಗಳತೆ ದೂರದ ಮನೆ ಮೌನವನ್ನೇ ಹಾಸುಹೊದ್ದು ಮಲಗಿತ್ತು. ನೀರವತೆ ಸೀಳುತ್ತಿದ್ದ ನಮ್ಮ ಹೆಜ್ಜೆಯ ಸಪ್ಪಳ ಕೇಳಿಯೇ ವೃದ್ಧರು ಹೊರಬಂದರು. ನಾವು ಬಂದ ಉದ್ದೇಶ ಅವರಿಗೆ ತಿಳಿದಿತ್ತು. ನಗುಮುಖದಿಂದ ಸ್ವಾಗತಿಸಿದರು. ನಮ್ಮ ಸ್ಥಳ, ಪರಿಚಯ ಕೇಳಿ ದಕ್ಷಿಣ ಭಾರತದ ಹೈದ್ರಾಬಾದ್‍ಗೆ ಒಮ್ಮೆ ಬಂದಿದ್ದೆ ಎನ್ನುತ್ತ ಒಳಗೆ ಕರೆದೊಯ್ದರು.

ಸಹಾಯಕ ತಂದಿಟ್ಟ ಬಿಸಿಬಿಸಿ ಕುರಿಮಾಂಸದ ಹುರಿದ ತುಂಡುಗಳ ತಟ್ಟೆ ಮುಂದಿಟ್ಟವರೇ ಅಸ್ಖಲಿತ ಹಿಂದಿಯಲ್ಲಿ ಮಾತಿಗಿಳಿದುಬಿಟ್ಟರು. ‘ಕಣಿವೆ ಶಾಂತವಾಗಿಯೇ ಇದೆ. ಅಶಾಂತಿ ಯಾರಿಗೆ ಬೇಕಿದೆ ಅಲ್ಲವೇ. ಅದು ಬೇಕಿರುವುದು ದೆಹಲಿಯಲ್ಲಿ ಕೂತ, ಶ್ರೀನಗರದಲ್ಲಿ ಕೂತ ರಾಜಕಾರಣಿಗಳಿಗೆ, ಗಡಿಯಾಚೆಗಿನ ಕಳ್ಳರಿಗೆ ಮಾತ್ರ. ಇಲ್ಲಿನ ಯುವಕರು ದಾರಿ ತಪ್ಪಿರುವುದು ನಿಜ. ದಾರಿ ತಪ್ಪುವ ವಯಸ್ಸೇ ಅಲ್ಲವೇ ಅದು. ನಮ್ಮ ಕಾಶ್ಮೀರದಲ್ಲಿ ನಾವೇ ಪರಕೀಯರಾದ ನಂತರದ ನಾಲ್ಕನೇ ತಲೆಮಾರು ಅದು. ಏನು ಕಂಡಿದೆ; ಹಿಂಸೆಯ ಹೊರತಾಗಿ. ಅವರ ಮನಸ್ಸಿಗೆ ಹುಳಿ ಹಿಂಡುವುದು ಗಡಿಯಾಚೆಯಿಂದ ಬಂದವರಿಗೆ ಅರೆಕ್ಷಣದ ಕೆಲಸ. ಈಗೇನು ಇಂಟರ್ ನೆಟ್, ವಾಟ್ಸಾಪ್, ಫೇಸ್ ಬುಕ್ ಬಂದು ಬಿಟ್ಟಿದೆಯೆಲ್ಲ. ಸದಾ ಅದರಲ್ಲೇ ಮುಳುಗಿರುವವರಿಗೆ ಕೆಡಕು ತುಂಬುವುದು ಕಷ್ಟವೇ?’ ಎಂದು ತಲೆ ಎತ್ತಿದರು ಫಾರೂಕ್ ಸಾಹೇಬರು.

ಹಿರಿಯರೇಕೆ ಅವರನ್ನು ತಿದ್ದಬಾರದು, ಅದು ಅವರ ಹೊಣೆಯಲ್ಲವೇ? ಹೊರಗಿನವರ ಕುಮ್ಮಕ್ಕಿನಿಂದ ದೇಶದ ವಿರುದ್ಧ ನಿಲ್ಲುವುದು ದ್ರೋಹವಲ್ಲವೇ ಎಂಬ ಪ್ರಶ್ನೆಗೆ ಶಾಂತಚಿತ್ತರಾಗಿಯೇ ಪ್ರತಿಕ್ರಿಯಿಸತೊಡಗಿದರು.

‘ಯಾರು ಹಿರಿಯರು. ಹಿರಿಯರ ಸ್ಥಾನದಲ್ಲಿ ನಿಂತು ಕಣಿವೆಯಲ್ಲಿ ಶಾಂತಿ, ಬದುಕುವ ಸಹ್ಯ ವಾತಾವರಣ ಮೂಡಿಸಬೇಕಾದುದು ಭಾರತದ ಆಡಳಿತಗಾರರ ಹೊಣಿಯಾಗಿತ್ತು. ಅದನ್ನು ಅವರು ಸಮರ್ಪಕವಾಗಿ ನಿಭಾಯಿಸಿದ್ದಾರೆಯೇ? ತಮ್ಮ ಹೊಣೆ ಮರೆತವರಿಗೆ ಇನ್ನೊಬ್ಬರ ಜವಾಬ್ದಾರಿ ನೆನಪಿಸುವ ಅರ್ಹತೆ ಇದೆಯೇ?”

‘ನಮ್ಮ ತಲೆಮಾರಿನವರಿಗೆ ಅಷ್ಟಿಷ್ಟು ಶಿಕ್ಷಣ ಸಿಕ್ಕಿತು. ಪಂಡಿತರು ಬಿಟ್ಟುಹೋದ ಹೊಲಗದ್ದೆಗಳು ಸಿಕ್ಕವು. ಅನುಕೂಲಸ್ಥ ಕಾಶ್ಮೀರಿಗಳು ದೆಹಲಿ, ಚಂಡೀಘಡ, ಪಂಜಾಬ್ ಗೆ ಕಳುಹಿಸಿ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿದರು. ಅಂತಹವರು ಉದ್ಯೋಗ ಹಿಡಿದು ಶಾಶ್ವತವಾಗಿ ದೂರವಾದರು. ಇಲ್ಲಿರುವ ಬಡವರ ಮಕ್ಕಳು ಚಿಕ್ಕಂದಿನಿಂದಲೂ ನೋಡಿದ್ದು ರಕ್ತಪಾತ. ಕೇಳಿದ್ದು ಬಂದೂಕು, ಬಾಂಬುಗಳ ಮೊರೆತ. ಅರ್ಧಂಬರ್ಧ ಓದಿದವರಿಗೆ ಕಣಿವೆ ಹೊರಗೆ ಉದ್ಯೋಗ ಹಿಡಿಯುವುದು ಸಾಧ್ಯವೇ? ನಿರುದ್ಯೋಗಿಗಳೆಲ್ಲ ಇಲ್ಲಿಯೇ ಉಳಿದರು. ಕುಟುಂಬಕ್ಕೆ ಹೊರೆಯಾದರು. ಅವರ ಬಗ್ಗೆ ತಂದೆ ತಾಯಿಗಳಲ್ಲೂ ಅನಾದರಣೆ ಬೆಳೆದು ಅನಾಥ ಪ್ರಜ್ಞೆ ಕಾಡಿದರೆ ಬಾಚಿ ತಬ್ಬಿಕೊಂಡು ಸಂತೈಸುವವರು ಸಿಕ್ಕಾಗ ಬಿಡುತ್ತಾರೆಯೇ. ನಾಟಕವಾದರೂ ಸರಿಯೇ ಅವರ ಹಿಂದೆಯೇ ಹೋಗುವರು. ಇಲ್ಲಾಗುತ್ತಿರುವುದು ಅದೇ’ ಎನ್ನುತ್ತ ದೀರ್ಘ ಉಸಿರೆಳೆದುಕೊಂಡರು ವೃದ್ಧರು.

‘ಕಾಶ್ಮೀರಕ್ಕಿರುವ ವಿಶೇಷ ಸ್ಥಾನಮಾನದ ಬಗೆಗಿನ ಚರ್ಚೆ ನಾನು ಗಮನಿಸಿದ್ದೇನೆ. ಅದರಿಂದ ಲಾಭವಾಗಿರುವುದು ಮತ್ತದೇ ರಾಜಕಾರಣಿಗಳು, ಅನುಕೂಲಸ್ಥರಿಗೆ ಮಾತ್ರ. ಬಡವರ ಸ್ಥಿತಿ ಶೋಚನೀಯವಾಗಿದೆ’ ಎಂದರು ಉಮರ್ ಫಾರೂಕ್.

‘ಕಾಶ್ಮೀರಿಗಳಿಗೆ ಕಣಿವೆಯ ಹೊರಗೆ ಬದುಕಿಲ್ಲ. ಭವಿಷ್ಯವೂ ಇಲ್ಲ. ಬದುಕಿದರೂ ಇಲ್ಲಿಯೇ ಸತ್ತರೂ ಇಲ್ಲಿಯೇ. ನಮ್ಮಂತಹ ಕೆಲವರು ಕಣಿವೆ ತೊರೆದರೂ ಬಾಂಧವ್ಯದ ಕೊಂಡಿ ಕಳಚಿಕೊಂಡಿಲ್ಲ. ಪಂಡಿತರೊಬ್ಬರ ಕುಟುಂಬ ನಮ್ಮ ತಂದೆಗೆ ಹತ್ತಾರು ಎಕರೆ ತೋಟ, ಹೊಲ ಗದ್ದೆ ಮನೆಗಳನ್ನು ರೂಪಾಯಿ ಕೇಳದೆ ಬಿಟ್ಟು ಹೋಯಿತು. ಎಂತದ್ದೊ ಲ್ಯಾಂಡ್ ರಿಫಾರ್ಮ್ ಆಕ್ಟ್ ಅಂತೆ. ತುಂಡು ಭೂಮಿ ಇಲ್ಲದೆ ಅವರ ಬಳಿಯೇ ಕೂಲಿ ಮಾಡುತ್ತಿದ್ದ ನನ್ನಜ್ಜನ ಸೇವೆಗೆ ಸಂತುಷ್ಟರಾಗಿದ್ದ ಅವರು ಅದೊಂದು ದಿನ ತಂದೆಗೆ ಎಲ್ಲವನ್ನೂ ಬರೆದು ಹೋದರು. ನಾವು ಅನುಕೂಲಸ್ಥರಾದೆವು. ನಮ್ಮ ಮಕ್ಕಳು ದೆಹಲಿಯಲ್ಲಿದ್ದಾರೆ. ಕಣಿವೆಯ ಹೊರಗೇ ಮದುವೆ ಮಾಡಿಕೊಂಡಿದ್ದಾರೆ. ಕಾಶ್ಮೀರದೊಂದಿಗೆ ಗುರುತಿಸಿಕೊಳ್ಳಲೊಲ್ಲರು. ಅದರೆ ಕಣಿವೆಯಲ್ಲೇ ಕೊಳೆಯುತ್ತಿರುವವರ ಸ್ಥಿತಿ ನೀವೇ ನೋಡುತ್ತಿದ್ದೀರಲ್ಲ’ ಎನ್ನುತ್ತ ನಿಡುಸುಯ್ದರು.

‘ಭಾರತದ ಮೇಲೆ ಕಾಶ್ಮೀರಿಗಳಿಗೆ ದ್ವೇಷವಿಲ್ಲ. ಅಸಹನೆಯಿರಬಹುದು. ಅದು ಅನೇಕ ಕಾರಣಗಳಿಗೆ ಹಂತಹಂತವಾಗಿ ಹುಟ್ಟಿಕೊಂಡಿದ್ದು. ಯುವಕರಿಗೆ ಆಕ್ರೋಶವಿದೆ. ಹತಾಶೆಯಿದೆ. ದೇಶದ ಮುಖ್ಯವಾಹಿನಿಯಿಂದ ಹೊರಗಿಟ್ಟರುವುದಕ್ಕೆ ಮೂಡಿರುವ ಆವೇಶ ಅದಿರಬಹುದು. ಸೇನಾ ಕ್ರಮಗಳ ಮೇಲಿನ ಸಿಟ್ಟು ಇರಬಹುದು. ಆ ಸಿಟ್ಟು, ಆಕ್ರೋಶವನ್ನು ಅಸ್ತ್ರವಾಗಿ ಬಳಸಿಕೊಂಡು ಪಕ್ಕದ ದೇಶ ನಮ್ಮವರ ಕೈಯಲ್ಲಿ ದುಷ್ಕೃತ್ಯಗಳನ್ನು ಮಾಡಿಸುತ್ತಿರುವುದು ಸತ್ಯ’.

ಅವರ ಮಾತುಗಳಲ್ಲಿ ಎಲ್ಲಿಯೂ ಕೋಪತಾಪಗಳಿರಲಿಲ್ಲ. ಒಂದೂವರೆ ತಾಸಿನ ಮಾತುಕತೆಯಲ್ಲಿ ತಣ್ಣಗಿನ ದನಿಯಲ್ಲಿಯೇ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡರು. ಕೆಲವನ್ನು ಎಲ್ಲಿಯೂ ಬರೆಯಕೂಡದು ಪ್ರಸ್ತಾಪಿಸಬಾರದು ಎಂಬ ಷರತ್ತಿನೊಂದಿಗೆ ಹೇಳಿಕೊಂಡರು. ಅವರ ಮಾತಿನಲ್ಲೆಲ್ಲಿಯೂ ಭಾರತದ ಬಗ್ಗೆ ನಂಜು ಕಾಣಿಸಲಿಲ್ಲ. ಸಾತ್ವಿಕ ಆಕ್ರೋಶವಿತ್ತು. ಪಾಕಿಸ್ತಾನದ ಬಗ್ಗೆ ತಿರಸ್ಕಾರವಿತ್ತು. ಕಾಶ್ಮೀರವನ್ನು ಭಾರತ ನಿರ್ಲಕ್ಷಿಸುತ್ತಿದೆ. ಜನರ ಭಾವನೆಗಳಿಗೆ ಸ್ಪಂದಿಸುವ ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವ ಪ್ರಯತ್ನವಾಗುತ್ತಿಲ್ಲ ಎಂಬ ಅಳಲು ಇತ್ತು. ಕಾಶ್ಮೀರಿ ಪಂಡಿತರು ಕಣಿವೆ ತೊರೆದು ಹೋಗಿದ್ದು ನೆನೆದು ಹಲವು ಬಾರಿ ಅಜ್ಜ ಕಣ್ಣೀರಾದರು. ಪ್ರತ್ಯೇಕತಾವಾದಿಗಳಲ್ಲಿ ಹಲವರು ನನಗೆ ಸಂಬಂಧಿಕರಿದ್ದಾರೆ. ಎಲ್ಲರೂ ಸ್ವಾರ್ಥಿಗಳು. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಮಂದಿ. ಆದರೆ ಇಲ್ಲಿನ ರಾಜಕಾರಣಿಗಳಿಗೆ ಹೋಲಿಸಿದರೆ ಅವರೇ ನೂರು ಪಾಲು ಉತ್ತಮ ಎಂದು ನೇರವಾಗಿ ಹರಿಹಾಯ್ದರು.

Leave a Reply

Your email address will not be published.