ಕಿ.ರಂ.ನಾಗರಾಜ್ ಬಾಯಿಂದ ಬೇಂದ್ರೆ ಕಾವ್ಯವನ್ನು ಬಿಡುಗಡೆ ಮಾಡಬೇಕಿದೆ

ಕಿ.ರಂ.ನಾಗರಾಜ್ ಅವರ ಕವನ ವಿಗ್ರಹ ಭಂಜನೆಯ ಪರಿಣಾಮವಾಗಿ ಬೇಂದ್ರೆ ತಮ್ಮ ಕವನಗಳಲ್ಲಿ ಕಟ್ಟಿಕೊಡುವ ಯಾವ ಸುಂದರ ನೈಜ ಚಿತ್ರವೂ ಪಡಿಮೂಡುವುದಿಲ್ಲ.

 

‘ಮತ್ತೆ ಮತ್ತೆ ಬೇಂದ್ರೆ’ ಕಿ.ರಂ. ನಾಗರಾಜ್ ಅವರ ಒಂದು ಲೇಖನ ಮತ್ತು ನಾಲ್ಕು ಉಪನ್ಯಾಸಗಳು ಸಂಗ್ರಹಗೊಂಡಿರುವ ಒಂದು ಕಿರುಹೊತ್ತಿಗೆ. ಕೆ.ಅಕ್ಷತಾ ಕೃತಿಯ ಸಂಪಾದಕಿ. ಸಂಪಾದನೆ ಮತ್ತು ತಪ್ಪಿಲ್ಲದ ಮುದ್ರಣ ಚೆನ್ನಾಗಿದೆ. ಓ.ಎಲ್.ನಾಗಭೂಷಣಸ್ವಾಮಿ ಮುನ್ನುಡಿದಿದ್ದಾರೆ. ಕನ್ನಡದ ಬಹಳ ಮುಖ್ಯ ಕವಿಯಾದ ಬೇಂದ್ರೆಯವರ ನಲವತ್ತಕ್ಕಿಂತ ಹೆಚ್ಚು ಕವನಗಳು ಚರ್ಚೆಗೆ ಒಳಗಾಗಿವೆ.

ಬೇಂದ್ರೆಯವರನ್ನು ಕುರಿತ ಕಿ.ರಂ. ಅವರ ಕಳಕಳಿ ಅಸಾಧಾರಣವಾದುದು ಎಂಬುದರಲ್ಲಿ ಅನುಮಾನವಿಲ್ಲ. ಅವರು ಚರ್ಚಿಸಲು ಎತ್ತಿಕೊಳ್ಳುತ್ತಿರುವ ಕವಿತೆಗಳು ಕೂಡ ಯಾವುದೇ ವಿಮರ್ಶಕನಿಗೆ ಸವಾಲಿನವು ಎಂಬುದರಲ್ಲಿ ಸಹ ಎರಡು ಮಾತಿಲ್ಲ. ಒಂದು ಮಟ್ಟದಲ್ಲಿ ಭಕ್ತಿ ಭಾವದಿಂದ ಕೂಡಿರುವ ನಾಗರಾಜ್ ಅವರ ತನ್ಮಯಿತ ಉಪನ್ಯಾಸಗಳು ಒಟ್ಟಾರೆಯಾಗಿ ಏನನ್ನು ಹೇಳಲು ಪ್ರಯತ್ನಿಸುತ್ತಿವೆ ಎಂಬುದು ಮಾತ್ರ- ನನ್ನ ಮಟ್ಟಿಗಾದರೂ- ಒಂದು ಬಗೆಯ ಅಯೋಮಯ ಲೋಕಕ್ಕೆ ಸೇರಿದಂತಿವೆ. ಹೇಗೆಂದರೆ ಒಂದು ಸೃಜನಶೀಲ ಕಲಾಕೃತಿಯ ಆಲಂಕಾರಿಕ ಅಮೂರ್ತ ಭಾವನೆಗಳನ್ನು ಆ ಕೃತಿಯಲ್ಲಿಯೇ ಅಂತರ್ಗತವಾಗಿರುವ ಅದೇ ಕಲಾವಿದನ ಚಿಂತನಶೀಲತೆಯ ನೆರವಿನಿಂದ ಮೂರ್ತರೂಪಕ್ಕೆ ಇಳಿಸುವ ನೈಜ ಕಾರ್ಯದಿಂದ ಯಾವುದೇ ವಿಮರ್ಶಕ ನುಣುಚಿಕೊಳ್ಳುವಂತಿಲ್ಲ. ಈ ವಿಮರ್ಶನ ಕಾರ್ಯ ಈ ಕೃತಿಯಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ. ಈ ಅಂಶಗಳನ್ನು ರುಜುವಾತುಪಡಿಸಲಿಕ್ಕಾಗಿ ಸ್ವತಃ ಕಿ.ರಂ. ಅವರೆ ತುಂಬ ಮುಖ್ಯ ಎಂದುಕೊಂಡಿರುವ- ಪರಾಗ, ನಾನು ಮತ್ತು ಕಲ್ಪವೃಕ್ಷ ವೃಂದಾವನಗಳಲಿ- ಎಂಬ ಮೂರು ಕವಿತೆಗಳ ಮೂಲಕ ಪ್ರತಿಕ್ರಿಯಿಸಲು ಇಲ್ಲಿ ಪ್ರಯತ್ನಿಸುತ್ತಿದ್ದೇನೆ.

1) ಮೊದಲಿಗೆ ಪರಾಗ ಕವನವನ್ನೇ ನೋಡೋಣ. ನಾಲ್ಕು ಸಾಲುಗಳ ಮೂರು ಪದ್ಯ ಘಟಕಗಳಿಂದ ಕೂಡಿರುವ ಈ ಕವನ ಈ ಕೆಳಗಿನಂತೆ ಇದೆ.

ಬಾ ಭೃಂಗವೆ ಬಾ, ವಿರಾಗಿಯಂದದಿ| ಭ್ರಮಿಸುವಿ ನೀನೇಕೆ?

ಕಂಪಿನ ಕರೆಯಿದು ಸರಾಗವಾಗಿರೆ| ಬೇರೆಯ ಕರೆ ಬೇಕೆ?

ಬರಲಿಹ ಕಾಯಿಯ ಪಾಡಿನ ರುಚಿಯೂ| ಇದರೊಳು ಮಡಗಿಹುದು

ನಾಳಿನ ಹಣ್ಣಿನ ರಸವಿಲ್ಲಿಯ ಮಕ| ರಂದದೊಳಡಗಿಹುದು

ಕವನ ಕೋಶದಿ ಕಮಲ ಗರ್ಭದಲಿ| ಪರಾಗವೊರಗಿಹುದು

ನಿನ್ನ ಮುಖಸ್ಪರ್ಶವೂ ಸಾಕು ಹೊಸ| ಸೃಷ್ಟಿಯೇ ಬರಬಹುದು

 

ಈ ಕವಿತೆಯನ್ನು ಕುರಿತು ನಾಗರಾಜ್ ಅವರ ಕೆಲವು ಅನಿಸಿಕೆಗಳನ್ನು ಗಮನಿಸಿ.

1) ಬೇಂದ್ರೆಯವರ ಬೆಳಗು ಕವಿತೆಯನ್ನೆ ತೆಗೆದುಕೊಂಡರೆ ಕವಿ ಬೆಳಗಿನ ಇರುವಿಕೆಯನ್ನೆ ಒಂದು ಶಬ್ದ ಶರೀರವನ್ನಾಗಿ, ಒಂದು ನಿರ್ಮಾಣವನ್ನಾಗಿ, ಒಂದು ಸೃಜನಶೀಲವನ್ನಾಗಿ ರೂಪಿಸಿದ್ದಾನೆ. ನಾನು ಆ ಕವಿತೆಯ ಮೂಲಕವಾಗಿ ನನ್ನ ಭಾವ ಒಂದನ್ನು ಪುನರ್ನಿರ್ಮಾಣ ಮಾಡಿಕೊಳ್ಳುವುದು ಕವಿತೆಯ ಓದಿನ ವಿಶಿಷ್ಟವಾದ ಫಲ. ಬೇಂದ್ರೆಯವರ ವಿಶಿಷ್ಟವಾದ ‘ಪರಾಗ’ ಕವಿತೆ ಇದನ್ನೇ ಹೇಳುತ್ತದೆ. ಅಂದರೆ ಕವಿ ಏನು ಹೇಳ್ತಾ ಇದ್ದಾನೆ ಅದನ್ನಲ್ಲ ಓದುಗ ತಿಳಿಯಬೇಕಾದ್ದು; ಅಂದರೆ ಆ ಕವಿತೆ ಏನನ್ನಾದರೂ ಕೊಡುವಂತೆ ಓದುಗ ಅದನ್ನು ಓದಬೇಕು ಎಂದು ಕವಿತೆ ಹೇಳುತ್ತದೆ. (ಪುಟ 22).

2) ಪರಾಗ ಕವಿತೆಯಲ್ಲಿ ಪರಾಗಸ್ಪರ್ಶ ಕ್ರಿಯೆಯನ್ನು ಕಾವ್ಯದ ಓದಿನೊಂದಿಗೆ ಸಮೀಕರಿಸಲಾಗಿದೆ. ಪರಾಗ ಸ್ಪರ್ಶ ಕ್ರಿಯೆಯಿಂದ ಹೂ ಕಾಯಾಗುತ್ತದೆ. ಕಾಯಿ ಹಣ್ಣಾಗುತ್ತದೆ ಮತ್ತು ಮುಂದಿನ ಪ್ರಕ್ರಿಯೆಗಳಿಗೆ ದಾರಿ ಮಾಡಿಕೊಡುತ್ತದೆ.

3) ಕವಿತೆಯ ಓದು ಕೆಲವೊಮ್ಮೆ over reading, over interpretation ಆದರೆ ಅದಕ್ಕೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕವಿತೆಯನ್ನು ಕರಾರುವಾಕ್ಕಾಗಿ ಇಷ್ಟಕ್ಕೆ ಸೀಮಿತಗೊಳಿಸಿಕೊಳ್ಳಬೇಕೆಂಬ ಯಾವುದೇ ನಿಯಮವಿಲ್ಲ. (ಪುಟ 26)

ಇಲ್ಲಿಯ ಮೊದಲನೆಯ ಉದಾಹರಣೆಯಲ್ಲಿ ಕಿರಂ ಏನನ್ನು ಹೇಳುತ್ತಿದ್ದಾರೋ ಅದು ಸ್ಪಷ್ಟವಾಗುವುದಿಲ್ಲ. ಬೆಳಗು ಕವಿತೆ ಕಿರಂ ಅವರಿಗೆ ಯಾವ ಭಾವವನ್ನು ಪುನಾನಿರ್ಮಿಸಿತು ? ಅದರ ವಿಶಿಷ್ಟತೆ ಯಾವುದು? ಗೊತ್ತಾಗುವುದಿಲ್ಲ. ಹಾಗೆಯೇ ಪರಾಗ ಕವಿತೆಯಲ್ಲಿ ಕವಿ ಏನನ್ನು ಹೇಳುತ್ತಿದ್ದಾನೋ ಅದನ್ನೇ ನಿರಾಕರಿಸಿದ ಮೇಲೆ ಅದರಿಂದ ಓದುಗ ಮತ್ತೇನನ್ನಾದರೂ ಪಡೆಯುವುದಾದರೂ ಹೇಗೆ? ಎರಡನೆಯ ಉದಾಹರಣೆಗೆ ಕವನದ ನನ್ನ ವಿವರಣೆಯಲ್ಲಿ ಉತ್ತರಿಸಲು ಪ್ರಯತ್ನಿಸುತ್ತೇನೆ. ಇನ್ನು ಮೂರನೇ ಉದಾಹರಣೆಯನ್ನು ಎದುರಿಸಲು ಕವಿತೆಯ ಸೃಷ್ಟಿಕರ್ತ ಆ ಪರಿಬ್ರಹ್ಮನೇ ಬರಬೇಕಾಗುತ್ತದೆ. ಒಂದು ಕವಿತೆಗೆ ಕವಿ ನಿರ್ಮಿತ ಶಬ್ದ ಶರೀರವಿದೆ ಎಂದ ಮೇಲೆ ಅದಕ್ಕೆ ತಕ್ಕ ಹಾಗೆ ಅದೇ ಕವಿ ದಯೆಗರೆದ ಒಂದು ಮನಸ್ಸೂ ಇರಬೇಕಲ್ಲವೇ?

ಓದುಗನ ‘over reading’ ನಿಂದ, ‘over interpretation’ ನಿಂದ ಆ ಕವಿತೆಯ ನೋವು ನಲಿವುಗಳು ನಲುಗುವುದಿಲ್ಲವೇ? ಅಂದರೆ ಒಂದು ಕವಿತೆಯನ್ನು ಯಾವ ವಯಸ್ಸಿನಲ್ಲಿಯಾಗಲಿ, ಯಾವ ಮನಃಸ್ಥಿತಿಯಲ್ಲಿಯೇ ಆಗಲಿ ಓದಬೇಕಾದರೆ ಆ ಕವಿತೆಯಲ್ಲಿಯೇ ಅಂತರ್ಗತವಾಗಿರುವ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸೃಷ್ಟಿಯಲ್ಲಿ ಯಾವುದೂ ನಿಯಮಾತೀತವಲ್ಲ.

ಈಗ ಕವಿತೆಯನ್ನೇ ಓದಿ ನೋಡಿ. ಅದರಲ್ಲಿ ಎರಡು ಭಾಗಗಳಿರುವುದು ಖಚಿತವಾಗಿ ಗೊತ್ತಾಗುತ್ತದೆ. ಒಂದರಲ್ಲಿ ನೈಸರ್ಗಿಕ ಪುಷ್ಪ ಮಕರಂದವನ್ನು ತುಂಬಿಕೊಂಡು ಬೃಂಗವೊಂದರ (ಪದ)ಸ್ಪರ್ಶಕ್ಕಾಗಿ ಹಂಬಲಿಸುತ್ತಿರುವ ಚಿತ್ರಣವಿದ್ದರೆ ಮತ್ತೊಂದರಲ್ಲಿ ಕವಿ ನಿರ್ಮಿತ ಕವನ ಕೋಶದ ಕಮಲ ಗರ್ಭದಲ್ಲಿ ಪರಾಗವೊರಗಿಸಿಕೊಂಡು ಸಹೃದಯ ದುಂಬಿಯ ಮುಖಸ್ಪರ್ಶಕ್ಕಾಗಿ ಹಂಬಲಿಸುತ್ತಿರುವ ದೃಶ್ಯವಿದೆ. ನೈಸರ್ಗಿಕ ಪುಷ್ಪಕ್ಕೆ ಭೃಂಗದ ಪದಸ್ಪರ್ಶದಿಂದ ಫಲವತ್ತತೆಯುಂಟಾದರೆ ಕವಿನಿರ್ಮಿತ ಕವನ ಕಮಲ ಫಲಿಸಬೇಕಾದರೆ ಸಹೃದಯ ಭೃಂಗದ ಮುಖಸ್ಪರ್ಶ ಅನಿವಾರ್ಯ. ಪರಾಗ ಕವಿತೆಯ ಸಂದರ್ಭದಲ್ಲಿ ಮಕರಂದ ಪರಾಗಗಳನ್ನು ಅದಲು ಬದಲು ಮಾಡಿ ಅರ್ಥೈಸಿಕೊಳ್ಳಲಾಗುವುದಿಲ್ಲ. ಹಾಗೆಯೇ ವಿರಾಗ-ಪರಾಗಗಳನ್ನು ಮತ್ತು ವಿರುದ್ಧಾರ್ಥಕ ಶಬ್ದಗಳಾಗಿ ಗ್ರಹಿಸಬೇಕು. ಕವನ ಕೋಶದ ಕಮಲ ಗರ್ಭದಲ್ಲಿ ಅಂತರ್ಯಾಮಿಯಾಗಿರುವ ಪರಾಗ ಬ್ರಹ್ಮಸೃಷ್ಟಿಯನ್ನೆ ನೆನಪಿಸುವಂತಿದೆ. ಕಾರಯಿತ್ತೀ ಪ್ರತಿಭೆಯ ಸಹೃದಯನೊಬ್ಬ ಈ ಕವಿತೆಯನ್ನು ಓದಿ ಪ್ರಭಾವಿತನಾದರೆ ಇದಕ್ಕಿಂತ ಹೆಚ್ಚು ಪರಿಪಕ್ವಗೊಂಡ ಹೊಸ ಸೃಷ್ಟಿ ಖಂಡಿತ ಸಾಧ್ಯ. ಇದಕ್ಕೆ ಗೋಪಾಲಕೃಷ್ಣ ಅಡಿಗರ ‘ಕೆಂದಾವರೆ’ ಒಂದು ಅದ್ಭುತ ಸಾಕ್ಷಿಯಾಗಿದೆ. ಭಾವಯಿತ್ತೀ ಪ್ರತಿಭೆಯೊಂದು ಯಾವುದೇ ಕಾವ್ಯವನ್ನು ಓದಿದರೆ ಹೊಸ ಸೃಷ್ಟಿ ಸಾಧ್ಯವಾಗುತ್ತದೆ. ಇದಕ್ಕೆ ಕುವೆಂಪು ಅವರ ಸರೋವರದ ಸಿರಿಗನ್ನಡಿಯಲ್ಲಿ ಉಜ್ವಲ ಉದಾಹರಣೆಯಾಗಿದೆ.

 

 3) “ಬೇಂದ್ರೆಯವರ ‘ನಾನು’ ಕವಿತೆಯ ಈ ಸಾಲುಗಳನ್ನು ಗಮನಿಸಿ.

ವಿಶ್ವಮಾತೆಯ ಗರ್ಭಕಮಲ ಜಾತ ಪರಾಗ-

ಪರಮಾಣು ಕೀರ್ತಿ ನಾನು

ಭೂಮಿತಾಯಿಯ ಮೈಯ್ಯ ಹಿಡಿಮಣ್ಣ ಗುಡಿಗಟ್ಟಿ

ನಿಂತಂಥ ಮೂರ್ತಿ ನಾನು

“ಈ ಕವಿತೆಯಲ್ಲಿ ಬರುವ ‘ನಾನು’ ಅನ್ನುವುದು ಕವಿ ಅಲ್ಲ. ನಾನು ಅನ್ನುವುದನ್ನು ಬೇಂದ್ರೆಯವರಿಗೆ ಅನ್ವಯ ಮಾಡಬೇಕಿಲ್ಲ, ಬದಲಿಗೆ ಆ ಕವಿತೆಯನ್ನು ಓದುತ್ತಿರುವ ಓದುಗನೇ ‘ನಾನು’ ಆ ಕವಿತೆಯನ್ನು ಕವಿತೆಯನ್ನಾಗಿ ಮಾಡಿಕೊಳ್ಳುತ್ತಿರುವವನು ಓದುಗನೇ ಆಗಿರುವುದರಿಂದ ಇಲ್ಲಿ ‘ನಾನು’ ಎನ್ನುವುದನ್ನು ಓದುಗನಿಗೆ ಅನ್ವಯಿಸಬೇಕೇ ವಿನಃ ಕವಿಗೆ ಅಲ್ಲ.” (ಪುಟ 27)

  1. ‘ಈ ಕವಿತೆಯನ್ನು ಎಷ್ಟೆಷ್ಟು ಒಡೆದರೂ ಸಹ ಬೇರೆ ಬೇರೆ ರಚನೆಗಳು ಇದರೊಳಗಡೆಯಿಂದ ನಿರ್ಮಾಣವಾಗುತ್ತಿರುತ್ತವೆ. ಈ ಕವಿತೆಯನ್ನು ಆ ಕಡೆಯಿಂದ ಈ ಕಡೆಗೆ ಓದಿಕೊಂಡು ಬಂದರೂ, ಈ ಕಡೆಯಿಂದ ಆ ಕಡೆಗೆ ಬಂದರೂ, ಮಧ್ಯದಿಂದಲೇ ಪ್ರಾರಂಭಿಸಿದರೂ ಏನೂ ವ್ಯತ್ಯಾಸವಾಗುವುದಿಲ್ಲ. (ಪುಟ 88)

ಹೀಗೆಯೇ ಅನೇಕವಾಗಿರುವ ಉದಾಹರಣೆಗಳ ನಡುವೆ ಈ ಕಣ್ಣಿಗೆ ಕಂಡ ಈ ಮೂರರಲ್ಲಿ ಇಲ್ಲಿಯ ಮೊದಲಿನದನ್ನು ಹೇಗೆ ಅರ್ಥಮಾಡಿಕೊಳ್ಳಬೇಕೋ ಗೊತ್ತಾಗುವುದಿಲ್ಲ. ಇದನ್ನು ಡಾ.ಜಿ.ಎಸ್.ಅಮೂರ ಅವರು ‘ಅಹಂಭವ್ಯತೆ’ಗೆ ಉದಾಹರಿಸಿದ್ದಾರೆ. ಈ ದೃಷ್ಟಿಯಿಂದ ಬೇಂದ್ರೆಯವರ ‘ನಾನು’ ಕವಿತೆಯ ಅರ್ಥವ್ಯಾಪ್ತಿ ಸ್ವಯಂ ಕಿ.ರಂ. ಅವರಿಗೇ ಅನ್ವಯವಾಗುವುದಿಲ್ಲ.

 

ಇನ್ನು ಎರಡನೇ ಉದಾಹರಣೆ, ಕುರಿಯನ್ನು ಎದುರಿಗೆ ನಿಲ್ಲಿಸಿ ಕಟುಕನ ಕೈಗೆ ಮಚ್ಚು ಕೊಟ್ಟರೆ ಏನಾಗುತ್ತದೋ ಅದಾಗಿದೆ. ಬೇಂದ್ರೆಯವರಿಗೆ ಅಷ್ಟೂ ಬುದ್ಧಿಯಿರಲಿಲ್ಲವೇ? ಕಿರಂ ಹೇಳುವ ರೀತಿಯಲ್ಲಿ ಕವಿಯೇ ಕವಿತೆಯನ್ನು ಕಲಸಿ ಬಿಡಬಹುದಿತ್ತಲ್ಲ! ಹಾಗೆ ಬೇಂದ್ರೆ ಮಾಡಲಿಲ್ಲ. ಯಾಕಂದರೆ ಅವರು ದೊಡ್ಡ ಮೇಧಾವಿ. ಅದರ ಸಹಾಯದಿಂದ ಪ್ರಕೃತಿ ವಿಕಾಸ ತತ್ತ್ವದ ಮಾದರಿಯನ್ನು ಉಪಯೋಗಿಸಿಕೊಂಡು ತಮ್ಮ ‘ನಾನು’ ಕವಿತೆಯನ್ನು ಒಂದು ಸುಂದರ ಸಾವಯವ ಶಿಲ್ಪವನ್ನಾಗಿ ಕಡೆದು ನಿಲ್ಲಿಸಿದ್ದಾರೆ. ಅದರಿಂದ ಒಂದು ಇಟ್ಟಿಗೆಯನ್ನು ಕೀಳಲಿಕ್ಕಾಗುವುದಿಲ್ಲ. ಕವನವನ್ನು ಪೂರ್ತಿಯಾಗಿ ಓದಿ ನೋಡಿ. ಅದು ಹೇಗೆ ಭವ್ಯ ಬಂಧುರವಾಗಿದೆ ಎಂಬುದು ತಿಳಿಯುತ್ತದೆ. ಈಗಾಗಲೇ ಎರಡು ಚಿತ್ರಗಳು ಈ ಮೇಲೆ ಮೂಡಿಬಂದಿದೆ. ಉಳಿದ ಕೆಲವು ಸಾಲುಗಳು ಈ ಕೆಳಗಿನವು.

ಭರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ

ಬೆಳಗುತಿಹ ಜ್ಯೋತಿ ನಾನು

ಕನ್ನಡದ ತಾಯಿ ತಾವರೆಯ ಪರಿಮಳವುಂಡು

ಬೀರುತಿಹ ಗಾಳಿ ನಾನು

ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ

ಜೀವಂತ ಮಮತೆ ನಾನು

ಈ ಐದು ಐದೆಯರ ಪಂಚಪ್ರಾಣಗಳಾಗಿ

ಈ ಜೀವ ದೇಹನಿಹನು

ಹೃದಯಾರವಿಂದದೊಳಗಿರುವ ನಾರಾಯಣನೆ

ತಾನಾಗಿ ದತ್ತ ನರನು

ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ

ಅಂಬಿಕಾತನಯನಿವನು

ಇಷ್ಟೊಂದು ಕ್ರಮಬದ್ಧವಾಗಿ ರೂಪುವಡೆದಿರುವ ಅರ್ಥವತ್ತಾದ ಈ ಕವನವನ್ನು ಹೇಗೆ ತಾನೆ ಮನಸ್ವಿ ಓದಲು ಸಾಧ್ಯ?

ಬೇಂದ್ರೆಯವರ ಶ್ರೇಷ್ಠ ಕವನಗಳಲ್ಲಿ ಒಂದಾದ ‘ಕಲ್ಪವೃಕ್ಷ ವೃಂದಾವನಂಗಳಲಿ’ ಕುರಿತು ಕಿ.ರಂ.ನಾಗರಾಜ್ ಸಹೃದಯ ಪ್ರತಿಭೆ ತಕ್ಕಮಟ್ಟಿಗೆ ಕೆಲಸ ಮಾಡಿದೆ. ಕವನ ಏನನ್ನು ಹೇಳಲು ಪ್ರಯತ್ನಿಸುತ್ತಿದೆಯೋ ಅದನ್ನು ಕಿ.ರಂ. ಒಟ್ಟಾರೆಯಾಗಿ ಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ನಾಗರಾಜ್ ಗಂಭೀರ ಸಹಜ ವಿಮರ್ಶಕರಲ್ಲದಿರುವುದರಿಂದ ಕವಿತೆಯ ಹನ್ನೊಂದು ಸ್ವತಂತ್ರ ವ್ಯಕ್ತಿತ್ವವುಳ್ಳ ಪದ್ಯ ಘಟಕಗಳನ್ನು ಲಹರಿ ಬಂದಂತೆ ಒಂದರಿಂದ ಎರಡು ಸಾಲು, ಮತ್ತೊಂದರಿಂದ ನಾಲ್ಕು ಸಾಲುಗಳನ್ನು ಜೋಡಿಸಿಕೊಂಡು ಬೇರೊಂದು ಕೃತಕ ಘಟಕವನ್ನಾಗಿ ಮಾರ್ಪಡಿಸಿ ಅದಕ್ಕೆ ತಮ್ಮ ಅರ್ಥ ತುರುಕಲು ಪ್ರಯತ್ನಿಸುತ್ತಾರೆ. ಅಲ್ಲಿ ಬೇಂದ್ರೆ ಸಹಜವಾಗಿಯೇ ಕಳೆದುಹೋಗಿ ಕಿರಂ ವಿಜೃಂಭಿಸಲು ಆರಂಭಿಸುತ್ತಾರೆ. ಉದಾಹರಣೆಗೆ ಈ ಕೆಳಗಿನ ಎರಡು ಚಿತ್ರಣಗಳನ್ನು ಗಮನಿಸಿ.

ಕತ್ತಲಲ್ಲಿ ಕಣ್ಣಾಗಿ ನೋಡುತ್ತಿದೆ/ ನೂರು ಇಂದ್ರರಂತೆ

ಮನದ ಚಿತ್ರಗಳೆ ಮೈಯತಾಳಿದೊಲು/ ಗೆಳತಿ ಗೆಳೆಯರಾಗಿ

 

ಈ ಸಾಲುಗಳಿಗೆ ಕಿ.ರಂ. ವಿವರಣೆ ಇಂತಿದೆ.

ಒಂದು ಇಂದ್ರಿಯನ ಅನುಭವ ಸೂಕ್ಷ್ಮತೆ, ಮತ್ತೊಂದು ಇಂದ್ರಿಯಾನುಭವದೊಂದಿಗೆ ಬೆರೆಯುವ ಈ ಪ್ರಕ್ರಿಯೆ ಒಬ್ಬೊಬ್ಬ ಓದುಗನಲ್ಲಿಯೂ ವಿಭಿನ್ನ ಅನುಭವಗಳಿಗೆ ಕಾರಣವಾಗುತ್ತದೆ. ಒಂದೊಂದು ಚಿತ್ರಗಳಿಗೂ ಇರುವ ಉದ್ದೀಪನ ಶಕ್ತಿ ಒಂದೊಂದು ರೀತಿಯದು. (ಪುಟ 77)

2 ಮನದ ಚಿತ್ರಗಳೆ ಮೈಯ ತಾಳಿದೊಲು| ಗೆಳತಿ ಗೆಳೆಯರಾಗಿ

  ಕಾಮನ ಬಿಲ್ಲಿಗೆ ಬಾಣ ಹೂಡಿದೊಲು| ಕಂಗಳೆಸೆಯುತಿಹವು

  ತೋಳು ತೋಳಿನಲಿ ಕಸೆಯ ಮಾಡಿದೊಲು| ಎದೆಯ ಬೆಸೆಯುತಿಹವು

 

ಈ ಸಾಲುಗಳಿಗೆ ನಾಗರಾಜ್ ವಿವರಣೆ ಇಂತಿದೆ.

“ಇಲ್ಲಿ ತಾಳಿದೊಲು, ಹೂಡಿದೊಲು, ಮಾಡಿದೊಲು ಎಂಬ ಶಾಬ್ದಿಕ ರೂಪಗಳನ್ನು ಗಮನಿಸಿ. ಇದನ್ನು ತಾಳಿದ+ಒಲು, ಹೂಡಿದ+ಒಲು, ಮಾಡಿದ+ಒಲು ಎಂದು ಓದಿಕೊಂಡಾಗ ಒಲು ಗೆಳತಿ ಗೆಳೆಯರಾಗಿ ಒಲು ಕಂಗಳೆಸೆಯುತಿಹವು, ಒಲು ಎದೆಯ ಬೆಸೆಯುತಿಹವು ಎಂಬ ಸುಂದರ ರಚನಾ ವಿನ್ಯಾಸಗಳನ್ನು ಕಾಣುತ್ತೇವೆ. ಕವಿತೆಯ ಆಶಯಕ್ಕೆ ಒಪ್ಪುವಂತೆ ಒಲುಮೆಯ ಗೆಳತಿ ಗೆಳೆಯರಾಗುವ ಒಲುಮೆಯ ಕಂಗಳಾಗುವ ಬಗೆ ಕವಿತೆಯ ಸಂದರ್ಭದ ಮಾರ್ಮಿಕ ನೆಲೆಯ ಸೂಕ್ಷ್ಮಗಳನ್ನೇ ಧ್ವನಿಸುವಂತೆ ತೋರುತ್ತದೆ. (ಪುಟ 79)

 

ಇಲ್ಲಿಯ ಮೊದಲನೆಯ ಉದಾಹರಣೆಯಲ್ಲಿ ಯಾವ ಇಂದ್ರಿಯ ಅನುಭವ ಸೂಕ್ಷ್ಮತೆ ಮತ್ಯಾವ ಇಂದ್ರಿಯಾನುಭವದೊಂದಿಗೆ ಬೆರೆತು ಯಾವ ವಿಭಿನ್ನ ಅನುಭವಗಳನ್ನು ಹುಟ್ಟಿಸುತ್ತವೆ? ಬೇರೆ ಬೇರೆ ಓದುಗನಲ್ಲಿ ಅವು ಉಂಟುಮಾಡುವ ಅನುಭವಗಳ ಸ್ವರೂಪವನ್ನು ಇದು ಯಾವುದೂ ಇಲ್ಲಿ ತಿಳಿಯದ ಒಂದು ಜಾಳು ಹೇಳಿಕೆಯಂತೆ ಕಾಣಿಸುತ್ತಿದೆಯಲ್ಲವೇ? ಕನಿಷ್ಟ ತಮ್ಮ ಮೇಲಾದ ಆ ‘ವಿಭಿನ್ನತೆ’ಯನ್ನಾದರೂ ಹೇಳಬಹುದಿತ್ತಲ್ಲವೇ? ಮೂಲ ಕಾವ್ಯ ಒಂದು ವೇಳೆ ಹೇಳಿಕೆಯಂತೆ ಕಂಡರೂ ವಿಮರ್ಶೆ ಹೇಳಿಕೆಯಂತಿರಬಾರದು, ಸಮರ್ಥನೀಯವಾಗಿರಬೇಕು. ಅದು ಈ ಕೃತಿಯಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ.

 

ಇನ್ನು ಉದಾಹರಣೆ ಎರಡನ್ನು ನೋಡಿ, ಮೊದಲನೆ ಉದಾಹರಣೆಯ ಎರಡನೇ ಭಾಗ ಇಲ್ಲಿ ಮೊದಲನೆಯ ಭಾಗವಾಗಿ ಮುಂದುವರಿದಿದೆ. ‘ಮನದ ಚಿತ್ರಗಳೆ ಮೈಯ ತಾಳಿದೊಲು’ ಈ ಉಪನ್ಯಾಸದ ಶೀರ್ಷಿಕೆ ಕೂಡ ಅದೊಂದು ಅದ್ಭುತ ಮತ್ತು ಅಮೋಘ ಪರಿಕಲ್ಪನೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಅಡಿಗರ ‘ಚಿಂತಾಮಣಿಯಲ್ಲಿ ಕಂಡ ಮುಖ’ದಂಥ ಮನೋಜ್ಞ ಕವನಕ್ಕೆ ಕಾರಣವಾಗಿರುವುದು ಬೇಂದ್ರೆಯವರ ಈ ಮಹಾಪರಿಕಲ್ಪನೆ ಎಂಬುದನ್ನು ನೆನೆದರೆ ಯಾರಿಗಾದರೂ ಗೌರವ ಮೂಡದಿರದು. ಆದರೆ ನಾಗರಾಜ್ ಅದಕ್ಕೆ  ಕೊಟ್ಟಿರುವ ವಿವರಣೆಯಾದರೂ ಏನು? ಆ ಸುಂದರ ಚಿತ್ರಗಳಿಗೆ ದೃಷ್ಟಿಬೊಟ್ಟಿಟ್ಟಂತೆ ಅಭಾಸಪೂರ್ಣವಾಗಿದೆ. ‘ಒಲು’ ಎಂಬ ಉಪಮಾ ಪ್ರತ್ಯಯವನ್ನು ಬಳಸಿರುವ ರೀತಿ ಭಾಷೆಯ ಗಂಭೀರ ನಡಿಗೆಗೆ ಕುಂದುಂಟಾಗುವಂತಿದೆ. ‘ಒಲು’ ಪ್ರತ್ಯಯದಿಂದ ‘ಒಲುಮೆ’ ಎಂಬ ನಾಮಪದ ಮೂಡಿಸಿಕೊಳ್ಳುತ್ತಿರುವುದು ಅಶಾಸ್ತ್ರೀಯವಾಗಿದೆ. ಕವನದ ಆಶಯವೇನೊ ಒಲುಮೆಯ ವಿಕಾಸವೆ ನಿಜ. ಆದರೆ ಅದನ್ನು ಸಾಧಿಸುವುದು ಈ ಪರಿಯಲ್ಲ.

ಈ ಮೇಲಿನ ಉದಾಹರಣೆಗಳ ಕವನ ಭಾಗಗಳನ್ನು ಮೂಲ ಕಲ್ಪವೃಕ್ಷ ವೃಂದಾವನAಗಳಲ್ಲಿರುವAತೆ ಓದಿದರೆ ಸಿಗುವ ಅರ್ಥದ ಸೊಗಸು ಏನು ಎಂಬುದನ್ನು ಮುಂದೆ ನೋಡೋಣ.

ಕತ್ತಲಲ್ಲಿ ಕಣ್ಣಾಗಿ ನೋಡುತಿದೆ/ ನೂರು ಇಂದ್ರರಂತೆ

ಬೆಳಕು ನಾಯಿ ಮೈಮೂಸಿ ಬರುತಲಿದೆ/ ಶುಕ್ರ ಚಂದ್ರರಂತೆ

ಕಂಪೇ ಕಂಪಲ್ಲಿ ಗಾಳಿ ಹೂತಿತೊ/ ಏನೊ ಎನ್ನುವಂತೆ

ಎಷ್ಟು ಸೊಗಸಾದ ‘ಜೀವ ಕಾಮ’ ಇಲ್ಲಿ ಮೈಮನ ಪಡೆದಿದೆ ಎಂಬುದಿಲ್ಲಿ ಗಮನಾರ್ಹ. ಗಾಳಿಯೇ ಹೂಬಿಟ್ಟಂತೆ ಗಮಗಮಿಸುವ ಚಿತ್ರ ಅಪೂರ್ವ. ಇಂದ್ರ ಗೌತಮ ಅಹಲ್ಯೆಯರ ಮುಪ್ಪುರಿಯಲ್ಲಿ ಜೀವ-ದೈವ ಕಾಮಗಳ ನೆಲೆ ಸೆಲೆ ಇರುವುದು ಗಮನಾರ್ಹ.

ಮನದ ಚಿತ್ರಗಳೆ ಮೈಯ ತಾಳಿದೊಳು/ ಗೆಳತಿ ಗೆಳೆಯರಾಗಿ

ಸರಸ ವಚನಗಳ ಕರಗಿಸುತ್ತಿರಲು/ ಜೀವರಸಗಳಾಗಿ

ಹೊಮ್ಮಿತದರ ಸವಿ ಪ್ರಣವನಾದದೊಳು/ ಪ್ರಣಯನಾದವಾಗಿ

ಇದು ದ.ರಾ.ಬೇಂದ್ರೆ, ಇದು ವರಕವಿ ಬೇಂದ್ರೆ, ಇದು ಮಹಾಕವಿ ಬೇಂದ್ರೆ. ಎಲ್ಲಕ್ಕಿಂತ ಮಿಗಿಲಾಗಿ ಇದು ಅಂಬಿಕಾತನಯದತ್ತ ಭಾವಗೀತೆಯ ಲೆಕ್ಕದಲ್ಲಿ ಕನ್ನಡವನ್ನು ವಿಶ್ವದರ್ಜೆಗೇರಿಸಿದ ಈ ವರಪುತ್ರನನ್ನು ಕರುಣಿಸಿದ ಆ ಮಹಾತಾಯಿ ‘ಅಂಬಿಕೆ’ಗೆ ಕನ್ನಡಿಗೆರೆಲ್ಲರ ವಂದನೆಗಳು ಸಲ್ಲಬೇಕು. ಬೇಂದ್ರೆಯವರು ಒಂದು ಕಡೆ ಚಿತ್ರಿಸಿಕೊಂಡಿರುವಂತೆ,

 

ನೀ ತೊಗಲಚೀಲಾ, ಅಲ್ಲಾ ಬೇಂದ್ರೆ

ತೊಗಲಚೀಲಾ, ಅದು ಹೆಗಲಚೀಲಾ

ಹಸಬೀಯೊಳಗೆ ತುಂಬ್ಯದ ಹದಿನೆಂಟು ಸರಕು ಸಾಮಾನಾ

(ಬೇಂದ್ರೆ ಸಮಗ್ರ ಕಾವ್ಯ ಸಂಪುಟ, ಪುಟ 2, 46)

ಬೇಂದ್ರೆಯವರಿಗೆ ತಾನು ಯಾರು ಎಂಬುದು ಚೆನ್ನಾಗಿ ತಿಳಿದಿತ್ತು. ಆದ್ದರಿಂದಲೇ ‘ನಾನು’ ಎಂಬ ಕವನ ಅವರಿಗೆ ಮಾತ್ರ ಸೀಮಿತ ಮತ್ತು ಮೀಸಲು ಇರಲಿ.

ಈ ಮೇಲಿನ ಉದಾಹರಣೆಯಲ್ಲಿ ಕಡೆಯ ಸಾಲು ‘ಹೊಮ್ಮಿತದರ ಸವಿ ಪ್ರಣವನಾದದೊಳು ಪ್ರಣಯನಾದವಾಗಿ’ ಇದೆಯಲ್ಲ ಅದು ಇಡೀ ಕವನದ ತಿರುಳು. ಇದೊಂದು ಅಧ್ಯಾತ್ಮಯಾನದ ಕಥನ ಕವನ. ಕವನದ ಆರಂಭದಲ್ಲಿಯೇ ಜೋಡಿಯಾಗುವ ಗೆಳತಿ ಗೆಳೆಯರು ಮೊದಲ ನಾಲ್ಕು ಚರಣಗಳಲ್ಲಿ ಜೀವ ಕಾಮವಾಗಿ ಕಾಣಿಸಿಕೊಂಡು ಎರಡನೆಯ ನಾಲ್ಕು ಚರಣಗಳಲ್ಲಿ ದೇವಕಾಮವಾಗಿ ಬೆಳೆದು ಕಡೆಯ ಮೂರು ಚರಣಗಳಲ್ಲಿ ಮನೋಭಿಲಾಷೆ ತುಂಬಿ ಬಂದಂತೆ ರಾಧಾಕೃಷ್ಣರಾಗಿ ಐಕ್ಯಗೊಳ್ಳುವ ಸನಾತನ ಸಹಜ ದೃಶ್ಯ ಮೂಡಿ ಕಂಗೊಳಿಸುತ್ತದೆ.

ಕಿ.ರಂ.ನಾಗರಾಜ್ ಅವರ ಕವನ ವಿಗ್ರಹ ಭಂಜನೆಯ ಪರಿಣಾಮವಾಗಿ ಬೇಂದ್ರೆ ತಮ್ಮ ಕವನಗಳಲ್ಲಿ ಕಟ್ಟಿಕೊಡುವ ಯಾವ ಸುಂದರ ನೈಜ ಚಿತ್ರವೂ ಪಡಿಮೂಡುವುದಿಲ್ಲ. ಹಾಗಾಗಿ ಕಿ.ರಂ. ಬಾಯಿಂದ ಬೇಂದ್ರೆ ಕಾವ್ಯವನ್ನು ಬಿಡುಗಡೆ ಮಾಡಬೇಕಿದೆ. ಬೇರೆ ದಾರಿಯಿಲ್ಲ.

Leave a Reply

Your email address will not be published.