ಕುಟುಂಬ ರಾಜಕಾರಣ: ಕಾರಣವೇನು?

ವಂಶ ಪಾರಂಪಾರ್ಯ ಆಡಳಿತವನ್ನು ಹುಟ್ಟುಹಾಕುವ ಕೌಟುಂಬಿಕ ರಾಜಕಾರಣಕ್ಕೂ ರಾಜಪ್ರಭುತ್ವಕ್ಕೂ ಹೆಚ್ಚಿನ ಅಂತರವಿಲ್ಲ. ಕೌಟುಂಬಿಕ ರಾಜಕಾರಣಕ್ಕೆ ಉತ್ತೇಜನ ಮತ್ತು ಸಮರ್ಥನೆಗಳು ಯಾವುದೇ ನೆಲೆಯಿಂದ ದೊರಕಲಿ, ಅದರ ಅಪಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಇಂದು ನಮಗಿದೆ.

ಇಂದಿನ ದಿನಗಳಲ್ಲಿ ಅಧಿಕಾರ ಮತ್ತು ಚುನಾವಣೆಗಳ ರಾಜಕಾರಣವು ಕೌಟುಂಬಿಕ ವ್ಯವಹಾರವಾಗಿ ಪರಿವರ್ತಿತವಾಗಿರುವುದು ಭಾರತೀಯ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿಕಾರಿ. ಈ ಮಾತನ್ನು ಒಪ್ಪುವವರೂ ಸಹ ಈ ವಿದ್ಯಮಾನವನ್ನು ಒಂದು ಅನಿವಾರ್ಯತೆಯಂತೆಯೆ ನೋಡುತ್ತಿದ್ದಾರೆ. ಇದು ಒಂದು ರಾಜ್ಯಕ್ಕೆ, ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿರುವ ವಿದ್ಯಮಾನವೇನಲ್ಲ. ಕೌಟುಂಬಿಕ ರಾಜಕಾರಣವನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಪ್ರಧಾನಿ ಮೋದಿಯವರ ಭಾರತೀಯ ಜನತಾ ಪಕ್ಷವೂ ಸಹ ಕೌಟುಂಬಿಕ ರಾಜಕಾರಣಕ್ಕೆ ಹೊರತಾಗಿಲ್ಲ.

ಗಾಬರಿ ಹುಟ್ಟಿಸುವ ವಿಚಾರವೆಂದರೆ ಪ್ರಗತಿಪರ ಚಳವಳಿಗಳ ಹಿನ್ನೆಲೆಯಿರುವ ರಾಜಕೀಯ ಪಕ್ಷಗಳೂ ಸಹ ಇಂತಹ ನೆಲೆಯಲ್ಲಿಯೆ ಕೆಲಸ ಮಾಡುತ್ತಿರುವುದು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಸ್ವರಾಜ್ ಇಂಡಿಯಾ ಪಕ್ಷವು ದರ್ಶನ್ ಪುಟ್ಟಣ್ಣಯ್ಯ ಅವರನ್ನು ಮೇಲುಕೋಟೆ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಸಿದಾಗ ಯಾರಿಗೂ ಇರಿಸು ಮುರಿಸಾದಂತೆ ತೋರಲಿಲ್ಲ. ದರ್ಶನ್ ಅವರ ವಿದ್ಯಾರ್ಹತೆ, ವೃತ್ತಿ ಮತ್ತು ಜೀವನಾನುಭವಗಳನ್ನು ಗಮನಿಸಿದರೆ ಅವರು ಕರ್ನಾಟಕ ವಿಧಾನಸಭೆಗೆ ಹೊಸದೊಂದು ಆಯಾಮವನ್ನು ಕೊಡುತ್ತಿದ್ದರು ಎನ್ನುವ ನಂಬಿಕೆ ನನ್ನಲ್ಲಂತೂ ಮೂಡಿತು. ಆದರೆ ಅವರನ್ನು ಅಭ್ಯರ್ಥಿಯಾಗಿಸಲು ಸ್ವರಾಜ್ ಇಂಡಿಯಾ ಪಕ್ಷಕ್ಕೆ ಇದಾವುದೂ ಕಾರಣವಾಗಲಿಲ್ಲ. ಬದಲಿಗೆ ದರ್ಶನ್ ಅವರು ಪುಟ್ಟಣ್ಣಯ್ಯನವರ ಮಗ ಎನ್ನುವುದಷ್ಟೆ ಕಾರಣವಾಯಿತು. ಇಲ್ಲದಿದ್ದರೆ ಮಂಡ್ಯ ಜಿಲ್ಲೆಯ ರೈತ ಚಳವಳಿಯಲ್ಲಿ ಸಕ್ರಿಯರಾಗಿದ್ದ ಯಾರಾದರೂ ಕಾರ್ಯಕರ್ತನನ್ನೊ ಅಥವಾ ಆರ್ಗಾನಿಕ್ ಮಂಡ್ಯದಂತಹ ಹೊಸಬಗೆಯ ಉದ್ದಿಮೆಯನ್ನು ಕಟ್ಟಲು ಪ್ರಯತ್ನಿಸುತ್ತಿರುವ ಮಧು ಚಂದನರಂತಹ ಹೊಸಪೀಳಿಗೆಯ ಯುವಕರನ್ನೋ ಸ್ವರಾಜ್ ಇಂಡಿಯಾ ಮುಂಚೂಣಿಗೆ ತರುವ ಪ್ರಯತ್ನವನ್ನು ಮಾಡಬಹುದಿತ್ತು.

ನಮ್ಮ ಜನರು ಪುಟ್ಟಣ್ಣಯ್ಯನವರ ಮಗನಿಗೆ ಮತ ಹಾಕಬಹುದು, ಆದರೆ ದರ್ಶನ್ ಅವರಂತಹ ವಿದ್ಯಾವಂತ ವೃತ್ತಿಪರನಿಗಲ್ಲ ಎನ್ನುವುದು ನಿಜವೇ ಇರಬಹುದು. ಆದರೆ ಅಂತಹ ನಂಬಿಕೆಯನ್ನು ಪ್ರಗತಿಪರ ಪಕ್ಷಗಳೂ ಅಂಗೀಕರಿಸಿಬಿಟ್ಟರೆ ಅದು ಬಹಳ ಅಪಾಯಕಾರಿ ಬೆಳವಣಿಗೆ. ಅಷ್ಟೇ ದೌರ್ಭಾಗ್ಯದ ಇನ್ನೊಂದು ಮಾತೆಂದರೆ ನಾಲ್ಕು ದಶಕಗಳ ಕಾಲ ಗಟ್ಟಿಯಾದ ಸಾಮಾಜಿಕ ಚಳವಳಿಯೊಂದನ್ನು ಮಂಡ್ಯ ಜಿಲ್ಲೆಯಲ್ಲಿ ನಡೆಸಿದ ನಂತರವೂ ರೈತ ಚಳವಳಿಯು ಪುಟ್ಟಣ್ಣಯ್ಯನವರ ಕೆಲಸವನ್ನು ಸಮರ್ಥವಾಗಿ ಮುಂದುವರಿಸಬಲ್ಲ ವ್ಯಕ್ತಿಯನ್ನು ರೂಪಿಸಲಿಲ್ಲ ಎನ್ನುವುದು.

ಕುಟುಂಬ ರಾಜಕಾರಣದ ಸಾರ್ವತ್ರಿಕತೆ ಮತ್ತು ವ್ಯಾಪಕತೆಗಳ ವಿವರಗಳನ್ನು ಸಮಾಜಮುಖಿಯ ಓದುಗರಿಗೆ ಕೊಡುವ ಅವಶ್ಯಕತೆಯಿಲ್ಲ. ಎಲ್ಲರಿಗೂ ಮೇಲ್ನೋಟಕ್ಕೆ ಪ್ರತಿಯೊಂದು ಜಿಲ್ಲೆಯಲ್ಲಿಯೂ ಕಂಡುಬರುವ ವಿದ್ಯಮಾನವಿದು. ಆದರೆ ಈ ವಿದ್ಯಮಾನವನ್ನು ಯಾಕೆ ಒಪ್ಪುತ್ತಿದ್ದೇವೆ ಮತ್ತು ಇದರ ಅಪಾಯಗಳೇನು ಎನ್ನುವುದರ ಬಗ್ಗೆ ಸ್ವಲ್ಪ ಗಂಭೀರವಾಗಿಯೆ ಚಿಂತಿಸಬೇಕು.

ಚುನಾವಣೆಗಳಲ್ಲಿ ಗೆಲ್ಲಲು ಈ ವಿದ್ಯಾವಂತರು ಸಹ ಹಳೆಯ ಜಾತಿ ಸಮೀಕರಣ ಮತ್ತು ಇತರೆ ಫಲದಾಯಕವಾದ ಆಮಿಷಗಳನ್ನು ಒಡ್ಡುವ ಕೆಲಸವನ್ನೇ ಮಾಡುತ್ತಾರೆ.

ಹಲವು ವರ್ಷಗಳ ಹಿಂದೆ ನನ್ನ ಕಾಲೇಜು ಸಹಪಾಠಿಯಾಗಿದ್ದ ಪ್ರಖ್ಯಾತ ಪತ್ರಕರ್ತರೊಬ್ಬರು ತಮ್ಮ ಅಂಕಣದ ಲೇಖನವೊಂದರಲ್ಲಿ ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡಿದ್ದು ನೆನಪಾಗುತ್ತಿದೆ. ಅವರ ತರ್ಕವಿಷ್ಟೆ: ರಾಜಕಾರಣಿಗಳ ಕುಟುಂಬದ ಸದಸ್ಯರು ಜನರೊಡನೆ ತಮ್ಮ ಬಾಲ್ಯದಿಂದಲೂ ಒಡನಾಡಿರುತ್ತಾರೆ ಮತ್ತು ಜನರ ಸಮಸ್ಯೆಗಳನ್ನು ಅರಿತಿರುತ್ತಾರೆ. ಹೀಗೆ ಅವರು ಪಡೆಯುವ ಅನೌಪಚಾರಿಕ ತರಬೇತಿಯು ಅವರನ್ನು ಇತರರಿಗಿಂತ ಹೆಚ್ಚು ಸಮರ್ಥರನ್ನಾಗಿ, ದಕ್ಷರನ್ನಾಗಿ ಮಾಡುತ್ತದೆ. ಹಾಗಾಗಿ ಜನರಲ್ಲಿಯೂ ಸಹ ರಾಜಕೀಯ ಕೌಟುಂಬಿಕ ಹಿನ್ನೆಲೆಯವರೆ ಸಾರ್ವಜನಿಕ ಜೀವನದ ಮುಂಚೂಣಿಯಲ್ಲಿದ್ದರೆ ತಮಗೂ ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯ ಮೂಡುತ್ತದೆ. ನನ್ನ ಪತ್ರಕರ್ತ ಮಿತ್ರ ಈ ವಾದವನ್ನು ಹಲವಾರು ಉದಾಹರಣೆಗಳನ್ನು ನೀಡುತ್ತ 800 ಪದಗಳ ತನ್ನ ಅಂಕಣದುದ್ದಕ್ಕೂ ಬರೆದಿದ್ದರು.

ನೂರಾರು ರಾಜಕಾರಣಿಗಳನ್ನು ವಿವಿಧ ಸುದ್ದಿವಾಹಿನಿಗಳಿಗೆ ಸಂದರ್ಶಿಸಿ, ಸಿನಿಮಾ ಕ್ಷೇತ್ರದಲ್ಲಿಯೂ ಕಾಲಿಟ್ಟಿದ್ದ ಈ ಪತ್ರಕರ್ತ ಮಿತ್ರ ಅಪಾರ ಜೀವನಾನುಭವವನ್ನು ಹೊಂದಿದ್ದ ಬುದ್ಧಿವಂತ. ಆದರೆ ಅವನ ಚಿಂತನೆಯಲ್ಲಿದ್ದ ಸೋಮಾರಿತನ ನನ್ನನ್ನು ಇಂದಿಗೂ ಕಾಡುತ್ತಿದೆ. ವಂಶ ಪಾರಂಪರ್ಯ ಆಡಳಿತವನ್ನು ಹುಟ್ಟುಹಾಕುವ ಕೌಟುಂಬಿಕ ರಾಜಕಾರಣ ಕ್ಕೂ ರಾಜಪ್ರಭುತ್ವಕ್ಕೂ ಹೆಚ್ಚಿನ ಅಂತರವಿಲ್ಲ. ಆದರೆ ರಾಜಪ್ರಭುತ್ವದ ಬಗ್ಗೆ ನನ್ನ ಪತ್ರಕರ್ತ ಮಿತ್ರನನ್ನೂ ಸೇರಿದಂತೆ ಹಲವರಲ್ಲಿ ಆತಂಕವೇನಿಲ್ಲ. ಇಂತಹ ಸೋಮಾರಿ ಚಿಂತನೆಯಿಂದ ಪ್ರಜಾಪ್ರಭುತ್ವಕ್ಕೆ ಗಟ್ಟಿಯಾದ ಬುನಾದಿಯನ್ನು ಹಾಕುವ ನಮ್ಮ ಎಲ್ಲ ಪ್ರಯತ್ನಗಳಿಗೂ ಅಪಾಯ ಕಟ್ಟಿಟ್ಟದ್ದು ಎನ್ನುವುದಂತೂ ಸುಸ್ಪಷ್ಟ.

ಕೌಟುಂಬಿಕ ರಾಜಕಾರಣಕ್ಕೆ ಉತ್ತೇಜನ ಮತ್ತು ಸಮರ್ಥನೆಗಳು ಯಾವುದೇ ನೆಲೆಯಿಂದ ದೊರಕಲಿ. ಅದರ ಅಪಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಇಂದು ನಮಗಿದೆ. ಕೌಟುಂಬಿಕ ರಾಜಕಾರಣದ ಬಗ್ಗೆ ನಮ್ಮಲ್ಲಿರಬೇಕಾದ ಆತಂಕಗಳು ಎರಡು ಬಗೆಯವು.

ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಅಥವಾ ಸುಮಲತಾರಿಗಾಗಲಿ ಹಾಸನ-ಮಂಡ್ಯಗಳ ಜನರನ್ನು ಹಿಡಿದಿಡಬಹುದಾದ ಹೊಸ ಕನಸು, ಕಲ್ಪನೆ, ಯೋಜನೆಗಳನ್ನು ಮುಂದಿಡಬೇಕಾದ ಅನಿವಾರ್ಯತೆಯಾದರೂ ಏನು?

ಮೊದಲಿಗೆ, ನಮ್ಮ ಸಮಾಜದಲ್ಲಿ, ಸಾರ್ವಜನಿಕ ನೀತಿಯಲ್ಲಿ ಅಗತ್ಯವಾಗಿ ತರಬೇಕಾಗಿರುವ ಬದಲಾವಣೆಗಳನ್ನು ಮಾಡಲು ಕೌಟುಂಬಿಕ ರಾಜಕಾರಣವು ಬಿಡುವುದಿಲ್ಲ. ಎರಡನೆಯ ತಲೆಮಾರಿನ ರಾಜ ಕಾರಣಿಗಳು, ಅವರ ವ್ಯಕ್ತಿತ್ವ ಮತ್ತು ಶೈಕ್ಷಣಿಕ ಸಾಧನೆಗಳು ಎಂತಹದೇ ಇರಲಿ, ನಿಜವಾದ ಬದಲಾವಣೆಯನ್ನು ತರುವವರಲ್ಲ. ಉದಾಹರಣೆಗೆ, ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಸಚಿನ್ ಪೈಲಟ್ ಮತ್ತು ಜ್ಯೋತಿ ರಾದಿತ್ಯ ಸಿಂಧಿಯಾರಂತಹವರ ಬಗ್ಗೆ ಉತ್ಸಾಹದಿಂದ ಮಾತನಾಡುವ ಪತ್ರಕರ್ತರು, ಬುದ್ಧಿಜೀವಿಗಳು ಇದ್ದಾರೆ. ಇದಕ್ಕೆ ಕಾರಣವೆಂದರೆ ಅಮೆರಿಕ ಮತ್ತು ಯೂರೋಪುಗಳ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಇವರು ಅಧ್ಯಯನ ಮಾಡಿದ್ದಾರೆ ಮತ್ತು ಆಧುನಿಕ ಜಗತ್ತನ್ನು ತಕ್ಕ ಮಟ್ಟಿಗೆ ಬಲ್ಲ ಇವರು ಸುಲಲಿತವಾಗಿ ಇಂಗ್ಲಿಷ್ ಮಾತನಾಡುತ್ತಾರೆ ಎನ್ನುವುದು. ಇಂತಹದೇ ಮಾತನ್ನು ಬಿಜೆಪಿಯ ಜಯಂತ್ ಸಿನ್ಹಾರಂತಹವರ ಬಗ್ಗೆ ಕೂಡ ಹೇಳಬಹುದು.

ಆದರೆ ತಮ್ಮ ಹಿರಿಯರು ಮಾಡಿದ ಬಗೆಯ ಜಾತಿ-ಧರ್ಮಗಳ ರಾಜಕಾರಣವನ್ನೇ ಮುಂದುವರೆಸುವ ಇಂತಹ ವಿದ್ಯಾವಂತರು ಯಾವುದೇ
ಹೊಸತನವನ್ನು ತಮ್ಮ ರಾಜಕಾರಣದಲ್ಲಿ ತರುತ್ತಿಲ್ಲ. ಯಾಕೆಂದರೆ ಚುನಾವಣೆಗಳಲ್ಲಿ ಗೆಲ್ಲಲು ಈ ವಿದ್ಯಾವಂತರು ಸಹ ಹಳೆಯ ಜಾತಿ ಸಮೀಕರಣ ಮತ್ತು ಇತರೆ ಫಲದಾಯಕವಾದ ಆಮಿಷಗಳನ್ನು ಒಡ್ಡುವ ಕೆಲಸವನ್ನೇ ಮಾಡುತ್ತಾರೆ. ಆದರೆ ನಮಗೆ ಇಂದು ಅಗತ್ಯವಿರುವ ಬಗೆಯ ಹೊಸ ರಾಜಕೀಯ ವಾದಗಳನ್ನು ಮಾಡಲು ಇವರಿಗೆ ಬೌದ್ಧಿಕ ಮತ್ತು ಶೈಕ್ಷಣಿಕ ಸಿದ್ಧತೆ ಇರಬಹುದು. ಆದರೆ ರಾಜಕೀಯ ಯಶಸ್ಸನ್ನು ಗಳಿಸಲು ಅಂತಹ ವಾದಗಳನ್ನು ಮಾಡುವ ಅಗತ್ಯವಿಲ್ಲ.

ಎರಡನೆಯ ತಲೆಮಾರಿನ ರಾಜಕಾರಣಿಗಳು, ಅವರ ವ್ಯಕ್ತಿತ್ವ ಮತ್ತು ಶೈಕ್ಷಣಿಕ ಸಾಧನೆಗಳು ಎಂತಹದೇ ಇರಲಿ, ನಿಜವಾದ ಬದಲಾವಣೆಯನ್ನು ತರುವವರಲ್ಲ.

ಸ್ಥಳೀಯ ಉದಾಹರಣೆಗಳನ್ನೇ ತೆಗೆದುಕೊಳ್ಳುವುದಾದರೆ, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಅಥವಾ ಸುಮಲತಾರಿಗಾಗಲಿ ಹಾಸನ-ಮಂಡ್ಯಗಳ ಜನರನ್ನು ಹಿಡಿದಿಡಬಹುದಾದ ಹೊಸ ಕನಸು, ಕಲ್ಪನೆ, ಯೋಜನೆಗಳನ್ನು ಮುಂದಿಡಬೇಕಾದ ಅನಿವಾರ್ಯತೆಯಾದರೂ ಏನು? ಹೀಗಾಗಿ ಜಾತಿ-ಧರ್ಮ-ಹಣ ಇತ್ಯಾದಿ ಸಾಂಪ್ರದಾಯಿಕ ಚುನಾವಣಾ ರಾಜಕಾರಣದ ಪಥಗಳನ್ನೇ ಮುಂದುವರೆಸುವ ಇಂತಹ ಅಭ್ಯರ್ಥಿಗಳು ಹೊಸ ಚಿಂತನೆಯನ್ನು ಎಲ್ಲಿಂದ ತಂದಾರು? ಹೊಸ ಚಿಂತನೆಗಳಿಲ್ಲದೆ, ಅವುಗಳನ್ನು ಜನರ ಮುಂದಿಡುವ ಧೈರ್ಯವಿರುವ ವ್ಯಕ್ತಿಗಳಿಲ್ಲದೆ ನಾವು ಇಂದು ಎದುರಿಸುತ್ತಿರುವ ಗಂಭೀರ ಸವಾಲುಗಳಿಗೆ ಪರಿಹಾರಗಳಾದರೂ ಎಲ್ಲಿಂದ ಬರುತ್ತವೆ?

ಎರಡನೆಯದಾಗಿ, ಕೌಟುಂಬಿಕ ರಾಜಕಾರಣವು ಹೊಸ ಬಗೆಯ ಸಾಮಾಜಿಕ ಸಮೀಕರಣಗಳನ್ನು ಮಾಡಲು ನಮಗೆ ಅವಕಾಶ ನೀಡುತ್ತಿಲ್ಲ. ದೇವೇಗೌಡರು ಅಥವಾ ಯಡ್ಯೂರಪ್ಪನವರು ತಾವು ಅನುಸರಿಸುತ್ತಿರುವ ಕೌಟುಂಬಿಕ ರಾಜಕಾರಣವನ್ನು ಸಮರ್ಥಿಸಿಕೊಳ್ಳುತ್ತ, ತಾವು ಜನರ ಮಧ್ಯೆ ಕೆಲಸ ಮಾಡದಂತೆ ಮತ್ತು ಚಳವಳಿಗಳನ್ನು ನಡೆಸದಂತೆ ಯಾರನ್ನೂ ತಡೆಯುತ್ತಿಲ್ಲ ಎನ್ನಬಹುದು. ಅದೇನೂ ಸಂಪೂರ್ಣ ಸುಳ್ಳಲ್ಲ. ಆದರೆ ಅವರ ಬಳಿ ಹಲವು ಬಗೆಯ, ಅಪಾರ ಪ್ರಮಾಣದ ಸಂಪನ್ಮೂಲಗಳಿವೆ. ಈ ಸಂಪನ್ಮೂಲಗಳನ್ನು ಅವರು ಕ್ರೋಡೀಕರಿಸಿ ರುವುದು ಸಹ ಅಧಿಕಾರದಲ್ಲಿ ಇದ್ದಾಗಲೆ. ಇಂತಹ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ಎದುರಾಳಿಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ಇವರು ಮಾಡುತ್ತಾರೆ ಎನ್ನುವುದರಲ್ಲಿ ಅನುಮಾನಗಳಿಲ್ಲ. ಹಾಗಾಗಿ ಹೊಸ ಸಾಮಾಜಿಕ ಸಮೀಕರಣಗಳನ್ನು ಮಾಡಲು ಅಗತ್ಯವಿರುವ ರಾಜಕೀಯ ಅವಕಾಶಗಳು ಸೀಮಿತವಾಗುತ್ತವೆ ಎನ್ನುವುದು ಸುಸ್ಪಷ್ಟ.

ಈ ಎಲ್ಲ ವಿಶ್ಲೇಷಣೆಯ ಮಾತುಗಳು ಒಂದೆಡೆ ಇರಲಿ. ಕೆಲವು ಸರಳ ಪ್ರಶ್ನೆಗಳನ್ನು ಕೇಳಿಕೊಳ್ಳಿ: ಏಪ್ರಿಲ್ 2019ರ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಕುಟುಂಬಗಳ ಹಿನ್ನೆಲೆಯ ಅಭ್ಯರ್ಥಿಗಳ ಸಂಖ್ಯೆ ಎಷ್ಟಿತ್ತು? ಹೊಸಮುಖಗಳು ಎಷ್ಟಿದ್ದವು? ಹೊಸ ವಿಚಾರ, ಜೀವನ ಮತ್ತು ವೃತ್ತಿ ಅನುಭವಗಳನ್ನು ತರಬಲ್ಲ ಅಭ್ಯರ್ಥಿಗಳ ಸಂಖ್ಯೆ ಎಷ್ಟಿತ್ತು?

ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಎಲ್ಲರಿಗೂ ತಿಳಿದಿವೆ. ಇದರ ಬಗ್ಗೆ ನಾವು ಆತಂಕಿತರಾಗಬೇಕೆ? ಹೊಸ ಮುಖಗಳನ್ನು ಸಾರ್ವಜನಿಕ ಜೀವನಕ್ಕೆ, ಚುನಾವಣಾ ರಾಜಕಾರಣಕ್ಕೆ ತರುವತ್ತ ನಾವು ಕಾರ್ಯಶೀಲರಾಗಬೇಕೆ? ಈ ಪ್ರಶ್ನೆಗಳಿಗೆ ಈ ದೇಶದ ಪ್ರಜೆಗಳಾಗಿ ಉತ್ತರ ಕಂಡುಕೊಳ್ಳಬೇಕಿದೆ. 

Leave a Reply

Your email address will not be published.