ಕುಮಾರವ್ಯಾಸನ ಬೆಳಕು ಕಾಣದ ಕೃತಿ ‘ಐರಾವತ’

ಕುಮಾರವ್ಯಾಸ ಎಂದ ಕೂಡಲೇ ಥಟ್ ಎಂದು ನೆನಪಾಗುವುದು ಅವನ ಕೃತಿ `ಕರ್ಣಾಟ ಭಾರತ ಕಥಾ ಮಂಜರಿ’. ಆದರೆ ಈತ `ಕರ್ಣಾಟ ಭಾರತ’ ಅಲ್ಲದೆ `ಐರಾವತ’ ಎಂಬ ಕೃತಿಯನ್ನು ರಚನೆ ಮಾಡಿದ್ದಾನೆಂದು ಕನ್ನಡ ಸಾಹಿತ್ಯ ಚರಿತ್ರಕಾರರು ಅಭಿಪ್ರಾಯ ಪಡುತ್ತಾರೆ.

ಆರ್.ನರಸಿಂಹಾಚಾರ್ಯರು `ಕವಿಚರಿತೆ’ಯಲ್ಲಿ ಹೇಳುವಂತೆ, “ಕುಮಾರವ್ಯಾಸನು ‘ಐರಾವತ’ ಎಂಬ ಗ್ರಂಥವನ್ನು ಬರೆದಿರುವಂತೆ ತೋರುತ್ತದೆ’’, ಇವನ ಮುದ್ರಿತವಾದ ಭಾರತದಲ್ಲಿ ‘ಐರಾವತ’ಕ್ಕೆ ಸಂಬಂಧಿಸಿದ ಸಂಧಿಗಳಿಲ್ಲ ಎಂದು ಅಭಿಪ್ರಾಯಿಸಿದ್ದಾರೆ. ಆದರೆ ‘ಐರಾವತ’ ಕೃತಿ ಕುಮಾರವ್ಯಾಸ ಭಾರತದಷ್ಟು ಪ್ರಖ್ಯಾತಿಯನ್ನು ಪಡೆಯಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಬಹುಶಃ ಇದಕ್ಕೆ ಈ ಕೃತಿಯ ಹಸ್ತಪ್ರತಿಗಳು ಲಭ್ಯವಾಗದೇ ಇರುವ ಕಾರಣವೂ ಇದ್ದಿರಬಹುದು. ನಮ್ಮ ಕನ್ನಡ ಭಾಷೆಯು ಅಪಾರವಾದ ಸಾಹಿತ್ಯ ಸಂಪತ್ತನ್ನು ಹೊಂದಿದ್ದರೂ ಇಲ್ಲಿ ಇನ್ನೂ ಪೂರ್ತಿಯಾಗಿ ಲಭಿಸದ ಅನೇಕ ಪ್ರಾಚೀನ ಕೃತಿಗಳಿವೆ. ಸರಿಯಾಗಿ ಸಂಪಾದಿತವಾಗಿ ಬೆಳಕು ಕಾಣದ ಕೃತಿಗಳೂ ಇವೆ. ಅಂತಹ ಸಾಲಿನಲ್ಲಿ ‘ಐರಾವತ’ ಕೃತಿ ಎರಡನೆಯ ಗುಂಪಿನಲ್ಲಿ ನಿಲ್ಲುತ್ತದೆ ಎಂದರೆ ತಪ್ಪಾಗುವುದಿಲ್ಲ.

ಪ್ರಸ್ತುತ ಕುಮಾರವ್ಯಾಸ ರಚಿಸಿದನೆಂದು ಹೇಳಲಾಗುವ `ಐರಾವತ’ ಕೃತಿಯನ್ನು ಆರ್.ಎಸ್.ಪಂಚಮುಖಿ ಅವರು ಧಾರವಾಡ ಸಂಶೋಧನ ಸಂಸ್ಥೆಯ ಮೂಲಕ ಪ್ರಕಟಮಾಡುವುದರ ಮೂಲಕ ಸಾಹಿತ್ಯಾಸಕ್ತರಿಗೆ ನೀಡಿದ್ದಾರೆ. ಈ ಕೃತಿಯನ್ನು ಮೂರು ಹಸ್ತಪ್ರತಿಗಳ ಸಹಾಯದಿಂದ ಸಂಪಾದಿಸಿದ್ದಾರೆ. ‘ಐರಾವತ’ ಕೃತಿಯು ಭಾಮಿನಿ ಷಟ್ಪದಿಯಲ್ಲಿ ರಚನೆಯಾಗಿರುವ ಎಂಟು 8 ಸಂಧಿಗಳು ಮತ್ತು ಒಟ್ಟು 441 ಪದ್ಯಗಳನ್ನು ಒಳಗೊಂಡಿವೆ. ಕುಮಾರವ್ಯಾಸ ಭಾರತಕ್ಕೆ ಮೂಲ ಆಕರ ವ್ಯಾಸರ ಮಹಾಭಾರತವಾಗಿದೆ. ಆದರೆ ‘ಐರಾವತ’ ಕೃತಿಯ ಮೂಲ ಆಕರ ಯಾವುದೆಂದು ತಿಳಿದುಬಂದಿಲ್ಲ. ಆದರೆ ಈ ಕೃತಿಯ ವಸ್ತು ಮಹಾಭಾರತದ ವಸ್ತುವನ್ನೇ ಆಧರಿಸಿದೆ.

ಕಥಾವಸ್ತು:

ವೇದವ್ಯಾಸರು ಒಮ್ಮೆ ಹಸ್ತಿನಾಪುರಕ್ಕೆ ಆಗಮಿಸಿ ಗಾಂಧಾರಿಗೆ ಮಣ್ಣಿನಿಂದ ಮಾಡಿದ ಕರಿ(ಆನೆ)ಯನ್ನು ನಿರ್ಮಿಸಿ ಗಜಗೌರೀ ವ್ರತ (ನೋಂಪಿ) ಮಾಡಲು ಹೇಳುತ್ತಾರೆ. ಅದರಂತೆ ಗಾಂಧಾರಿ ತನ್ನ ನೂರು ಮಕ್ಕಳಿಂದ ಮೃತ್ತಿಕೆ (ಮಣ್ಣು) ತರಿಸಿ, ಅದರಿಂದ ಆನೆಯನ್ನು ನಿರ್ಮಿಸಿ ವ್ರತವನ್ನು ಮಾಡುತ್ತಾಳೆ. ಆದರೆ ಈ ವ್ರತಕ್ಕೆ ಕುಂತಿಗೆ ಆಹ್ವಾನ ನೀಡಿರುವುದಿಲ್ಲ. ಇತ್ತ ಕುಂತಿ ತನ್ನ ಅಕ್ಕ ತನ್ನನ್ನು ಗಜಗೌರೀವ್ರತಕ್ಕೆ ಆಹ್ವಾನ ನೀಡುತ್ತಾಳೆ ಎಂಬ ನಂಬಿಕೆಯಿಂದ ಕಾಯುತ್ತಿರುತ್ತಾಳೆ. ಆದರೆ ಕೊನೆಗೂ ಅವಳನ್ನು ಕರೆಯದೆ ವ್ರತ ಮುಗಿದುಹೋದದ್ದು ತಿಳಿದು ಕುಂತಿ ದುಃಖಿತಳಾಗುತ್ತಾಳೆ.

ತನ್ನ ಮಕ್ಕಳಾದ ಪಾಂಡವರ ಮುಂದೆ ನೋವನ್ನು ವ್ಯಕ್ತಪಡಿಸುತ್ತಾಳೆ. ತಾನು ಬಡವಳು ಎಂಬ ಕಾರಣಕ್ಕೆ ಆಹ್ವಾನ ಬಂದಿಲ್ಲ, ತನ್ನ ಪತಿ ಹೋದ ಹಿಂದೆಯೇ ಸಿರಿತನವೂ ಹೊರಟುಹೋಯಿತು ಎಂದು ಅತೀವ ದುಃಖ ಪಡುತ್ತಿರುವಾಗ ಅರ್ಜುನ ತಾಯಿಯನ್ನು ಸಮಾಧಾನ ಪಡಿಸಿ ತಾನು ಐರಾವತವನ್ನೇ ಭೂಮಿಗೆ ಕರೆಯಿಸಿ ನಿನ್ನಿಂದ ವ್ರತ ಮಾಡಿಸುವೆ ಎಂದು ತಾಯಿಗೆ ಸಾಂತ್ವನ ಹೇಳುತ್ತಾನೆ. ಅದರಂತೆ ಇಂದ್ರನಿಗೆ ಶರ ಪತ್ರ ಕಳುಹಿಸಿ, ಐರಾವತ ಕಳುಹಿಸಿಕೊಡಲೇಬೇಕು, ಇಲ್ಲವಾದಲ್ಲಿ ನಿನ್ನ ಲೋಕವನ್ನು ನಾಶಮಾಡುವುದಾಗಿ ಬೆದರಿಕೆ ಒಡ್ಡುತ್ತಾನೆ. ಇದನ್ನು ಕಂಡ ಇಂದ್ರ ಸ್ವರ್ಗಕ್ಕೆ ಬಟ್ಟೆ (ದಾರಿ)ಯನ್ನು ಮಾಡಿದರೆ ಐರಾವತ ಕಳುಹಿಸುವುದಾಗಿ ಹೇಳುತ್ತಾನೆ.

ಅದರಂತೆ ಅರ್ಜುನ ಮೂರು ಲೋಕಗಳು ಆಶ್ಚರ್ಯ ಪಡುವಂತೆ ಶರಗಳ ಮೂಲಕ ಧರೆ ಮತ್ತು ಗಗನದ ನಡುವೆ ದಾರಿಯನ್ನು ನಿರ್ಮಿಸುತ್ತಾನೆ. ಕುಂತಿಗಾಗಿ ಐರಾವತವನ್ನು ಭೂಮಿಗೆ ಕರೆಯಿಸಿ ತಾಯಿಯಿಂದ ವ್ರತವನ್ನು ಮಾಡಿಸಲಾಗುತ್ತದೆ. ಈ ವ್ರತವನ್ನು ಶ್ರೀಕೃಷ್ಣ, ವೇದವ್ಯಾಸ ಮೊದಲಾದವರು ಉತ್ಸಾಹದಿಂದ ಮುಂದೆನಿಂತು ನಡೆಸಿಕೊಡುತ್ತಾರೆ. ಗಾಂಧಾರಿ ಕುಂತಿಯ ಆಹ್ವಾನವನ್ನು ಸ್ವೀಕರಿಸುವುದಿಲ್ಲ. ಇದು ಕೌರವರಿಗೆ ಅತೀವವಾದ ಅವಮಾನವನ್ನು ಉಂಟು ಮಾಡುತ್ತದೆ.

ನೂರು ಮಕ್ಕಳು ಜನಿಸಿ ತನ್ನನ್ನು|

ಯೇರಿಸಿದರೈ ಮಣ್ಣ ಗುಡ್ಡೆಯ|

ವೀರರೈವರು ತನಯರಿಂದ್ರನ ದಿವ್ಯ ಮದಗಜವ||

ನೇರಿಸಿದರೀ ಕೊಂತಿ ದೇವಿಗೆ|

ದಾರು ಸರಿ ಸ್ವರ್ಗವನು ಇಹದಲಿ|

ಸೂರೆಗೊಂಡದು ಪುಣ್ಯವೆಂದಳಲಿದಳು ಗಾಂಧಾರಿ||

(ಐರಾವತ-ಎಂಟನೇ ಸಂಧಿ ಪದ್ಯ ಸಂಖ್ಯೆ:21)

ಈ ಅಪರೂಪವಾದ ವ್ರತಾನುಷ್ಠಾನದಿಂದ ಪಾಂಡವರಿಗೆ ಕೀರ್ತಿ ಸಂಪತ್ತುಗಳು ಒದಗುವ ಕತೆಯನ್ನು ‘ಐರಾವತ’ ಕೃತಿಯು ಒಳಗೊಂಡಿದೆ.

ಐರಾವತ ಇಂದ್ರನ ವಾಹನ. ಇದು ಇಲ್ಲಿ ಶ್ರೀಮಂತಿಕೆ, ಪ್ರತಿಷ್ಠೆಯ ಸಂಕೇತವು ಆಗಿದೆ. ಕುಂತಿಯನ್ನು ವ್ರತಕ್ಕೆ ಕರೆಯದ ಗಾಂಧಾರಿ ಮತ್ತು ಅವರ ಮಕ್ಕಳ ಎದುರಿಗೆ ಅರ್ಜುನನಿಗೆ ಸ್ವಾಭಿಮಾನದ ಸಂಕೇತವಾಗಿ ನಿಲ್ಲುತ್ತದೆ. ಕುಂತಿಯು ಸಿರಿತನವಿಲ್ಲದ ಕಾರಣ ಗಾಂಧಾರಿ ತನ್ನನ್ನು ವ್ರತಕ್ಕೆ ಕರೆದಿಲ್ಲವೆಂದು ಗೋಳಾಡುತ್ತಾಳೆ. ‘ತನ್ನ ಗಂಡನೊಂದಿಗೆ ತನ್ನ ಸಿರಿತನವೂ ನಾಶವಾಯಿತು’ ಎಂಬಲ್ಲಿ, ಕೃತಿಕಾರ ಹೆಣ್ಣಿನ ಸಿರಿತನವಾದ ಗಂಡ ಅವಳ ಮುತ್ತೈದೆತನವು ಇಲ್ಲದ ಅವಳ ದುರದೃಷ್ಟತನದ ಬಗ್ಗೆ ಗೋಳಾಡುವ ಪ್ರಸಂಗದ ಮೂಲಕ ಅಂದಿನ ಸಮಾಜದಲ್ಲಿ ನೆಲೆನಿಂತ ಸಾಮಾಜಿಕ ನಂಬಿಕೆಗಳನ್ನು ಚಿತ್ರಿಸಿರುವುದನ್ನು ಕಾಣಬಹುದು.

ಇಲ್ಲಿ ಕೃತಿಕಾರ ಅರ್ಜುನನ ಪರಾಕ್ರಮವನ್ನು ಎತ್ತಿಹಿಡಿದಿರುವುದನ್ನು ಗಮನಿಸಬಹುದು. ಅರ್ಜುನ ಇಂದ್ರನ ವರದಿಂದ ಜನಿಸಿದವನು. ಮೊದಲನೆಯ ಸಂಧಿಯಲ್ಲೇ ಅರ್ಜುನ (ಮಗ) ಮತ್ತು ಇಂದ್ರರ (ತಂದೆ) ನಡುವೆ ನಡೆಯುವ ವಾಕ್‌ಸಮರವನ್ನು ಚಿತ್ರಿಸಿದ್ದಾನೆ. ಇಂದ್ರನಿಗೆ, ‘ಐರಾವತವನ್ನು ಕಳುಹಿಸಲೇ ಬೇಕು’ ಎನ್ನುವ ಅರ್ಜುನ, ‘ಕಳುಹಿಸುವೆ, ಆದರೆ ನೀನು ದಾರಿಯನ್ನು ನಿರ್ಮಿಸಿದರೆ ಮಾತ್ರ’ ಎಂದು ಹೇಳುವ ಇಂದ್ರನ ಪ್ರಸಂಗ ವಿಶೇಷವಾಗಿದೆ. 

ಐರಾವತ ಕತೆ ಮಹಾಭಾರತಕ್ಕೆ ಹೊರತಾದ ಕತೆಯೇನಲ್ಲ. ಇಲ್ಲಿ ಬರುವ ಪುರಾಣದ ಪಾತ್ರಗಳಾದ ಗಾಂಧಾರಿ, ಕುಂತಿ, ಅರ್ಜುನ, ಇಂದ್ರನ ಮೂಲಕ ಅಂದಿನ ಸಮಾಜದಲ್ಲಿ ಜನಮಾನಸದಲ್ಲಿ ನೆಲೆನಿಂತಿದ್ದ ನಂಬಿಕೆ, ಸಾಮಾಜಿಕ ಸ್ಥಿತಿ, ಜಾನಪದೀಯ ಅಂಶಗಳನ್ನು ಅಳವಡಿಸಿಕೊಂಡು ಕೃತಿ ನಿರ್ಮಿತವಾಗಿದೆ. ಕುಂತಿ ಮೊದಲಿನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹೆಣ್ಣು. ಆಕೆಯ ಗಂಡ ಸತ್ತಿದ್ದಾನೆ, ರಾಜ್ಯವನ್ನು ನೀಡದೆ ಆಕೆ ಮತ್ತು ಮಕ್ಕಳನ್ನು ಹೊರಗಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ತನ್ನ ಅಕ್ಕನ ಮನೆಯಲ್ಲಿ ನಡೆಯುತ್ತಿರುವ ಗಜಗೌರಿ ವ್ರತಕ್ಕೆ ತನ್ನನ್ನು ಕರೆದಿಲ್ಲ ಎಂಬ ಕುಂತಿಯ ನೋವು, ಜೊತೆಗೆ ಗಾಂಧಾರಿಗೆ ಕುಂತಿಯ ಮೇಲಿನ ಮಾತ್ರ‍್ಯ ಹೀಗೆ ಜನಸಮಾನ್ಯರಲ್ಲಿರುವ ಗುಣಗಳನ್ನು ಪುರಾಣ ಪಾತ್ರಗಳಿಗೆ ಅಳವಡಿಸಿದ್ದಾನೆ ಕೃತಿಕಾರ.

ಪಾಂಡವರು ರಾಜ ವಂಶದಲ್ಲಿ ಹುಟ್ಟಿದ್ದರು ರಾಜ್ಯವಿಲ್ಲ, ಬದಲಿಗೆ ಬಡತನವಿದೆ. ಕುಂತಿ ತನ್ನ ನೋವನ್ನು ಯಾರ ಬಳಿ ಹೇಳಿಕೊಳ್ಳುತ್ತಾಳೆ? ತನ್ನ ಗಂಡನಿಲ್ಲದ ಸಂದರ್ಭದಲ್ಲಿ ಮಕ್ಕಳ ಬಳಿ ಹೇಳಿಕೊಂಡಾಗ ಮಗ ಅವಳ ಆಸೆಯನ್ನು ಈಡೇರಿಸಲು ಮತ್ತು ನೋವನ್ನು ಹೋಗಲಾಡಿಸಲು ಮುಂದಾಗುತ್ತಾನೆ. ಹೆಣ್ಣಿನ ನೋವು, ಹೆಣ್ಣಿನ ಅಸಹನೆ, ನಿರ್ಲಕ್ಷ್ಯ ಒಂದು ಕಡೆಯಾದರೆ ಅರ್ಜುನ ತಾಯಿಯ ನೋವಿಗೆ ಸ್ಪಂದಿಸುತ್ತಾನೆ. ಮನುಷ್ಯನಲ್ಲಿರುವ ಅಸೂಯೆ ಗುಣಗಳು, ಸಮಾಜದಲ್ಲಿರುವ ಬಡತನ, ವರ್ಗವ್ಯವಸ್ಥೆಯ ಪರಿಣಾಮಗಳನ್ನು ಸಾಮಾನ್ಯ ನೆಲೆಯಲ್ಲಿಟ್ಟು ಕೃತಿ ರಚಿಸಿರುವುದು ವಿಶೇಷವಾಗಿದೆ.

ಗಾಂಧಾರಿ ಯಾವ ಉದ್ದೇಶಕ್ಕಾಗಿ ವ್ರತ ಮಾಡಿದಳು ಎಂಬುದು ಗೊತ್ತಿಲ್ಲ. ಆದರೆ ಕುಂತಿಯ ನೋವು ಅರ್ಜುನನಿಗೆ ಸ್ವಾಭಿಮಾನದ ಪ್ರಶ್ನೆಯಾಗಿ ಕಾಡಿ ನಿಜವಾದ ಐರಾವತವನ್ನು ಭೂಮಿಗೆ ಇಳಿಸುತ್ತಾನೆ. ಇಲ್ಲಿ ವ್ರತ ಪ್ರತಿಷ್ಠೆಯ ಕಣವಾಗಿರುವುದನ್ನು ಕಾಣಬಹುದು. ಜಗತ್ತೇ ಆಶ್ಚರ್ಯ ಪಡುವ ರೀತಿಯಲ್ಲಿ ಐರಾವತ ವ್ರತವನ್ನು ಮಾಡುತ್ತಾರೆ.

ಕೃತಿಯ ಶೈಲಿ:

ಕುಮಾರವ್ಯಾಸ ಭಾರತದ ವಿಶೇಷತೆಯೆಂದರೆ, ಸಂಧಿಯ ಪ್ರಾರಂಭದ ಮೊದಲ ಪದ್ಯದಲ್ಲಿಯೇ ಇಡೀ ಸಂಧಿಯಲ್ಲಿ ಯಾವ ವಿಷಯದ ಬಗ್ಗೆ ಹೇಳಲಾಗುತ್ತಿದೆ ಎಂಬುದು ತಿಳಿದುಬಿಡುತ್ತದೆ. ಅಂತೆಯೇ ಐರಾವತ ಕೃತಿಯ ಪ್ರಾರಂಭದಲ್ಲಿ ಬರುವ ಮೂರು ಸಾಲಿನ ಪದ್ಯ. ಇದನ್ನು `ಪದ’ ಎಂದು ಹೇಳಲಾಗಿದೆ. ಈ ಪದದಲ್ಲಿಯೇ ಒಟ್ಟು ಸಂಧಿಯಲ್ಲಿನ ಕತೆ/ಸನ್ನಿವೇಶ ಏನೆಂಬುದು ತಿಳಿಯುವುದು ವಿಶೇಷವಾಗಿದೆ.

‘ಐರಾವತ’ ಕೃತಿಯ ಪ್ರಾರಂಭದಲ್ಲಿ ಕುಮಾರವ್ಯಾಸ ಭಾರತದ ರೀತಿಯಂತೆಯೇ `ಕೇಳು ಜನುಮೇಜಯ ಧರಿತ್ರೀ| ಪಾಲ’ ಎಂದು ಪ್ರಾರಂಭವಾಗುತ್ತದೆ ಹಾಗೂ ಕೃತಿಯ ಅಂತ್ಯದಲ್ಲಿ `ವೀರ ನಾರಾಯಣನ ಕರುಣದ|’ ಎಂಬಲ್ಲಿ ಗದುಗಿನ ವೀರನಾರಾಯಣ ಅಂಕಿತ ಬಳಸಿರುವುದು ಕಾಣಬಹುದು.

ಈ ಕತೆ ಮೂಲ ಮಹಾಭಾರತದಲ್ಲಿ ಇಲ್ಲ. ಹಾಗಾಗಿ ಕುಮಾರವ್ಯಾಸ ಈ ಕತೆಯನ್ನು ಆಧರಿಸಿ ಕೃತಿ ರಚಿಸಿರುವುದು ಬಹಳ ವಿಶೇಷವಾಗಿದೆ. ಅಂದಿನ ಜನಮಾನಸದಲ್ಲಿ ಪ್ರಚಾರದಲ್ಲಿ ಇದ್ದಿರಬಹುದಾದ ಈ ಕತೆಯನ್ನು ಕುಮಾರವ್ಯಾಸ ಕೃತಿಯಾಗಿಸಿದ್ದಿರಬಹುದು. ಅಷ್ಟೇ ಅಲ್ಲದೆ ಪ್ರಸ್ತುತ ಸಂದರ್ಭದಲ್ಲಿಯೂ ಯಕ್ಷಗಾನ ಪ್ರಸಂಗಗಳಲ್ಲಿ `ಐರಾವತ ಪ್ರಸಂಗ’ ಎಂಬ ಹೆಸರಿನಲ್ಲಿಯೂ ಮತ್ತು ಹರಿಕತೆಯಲ್ಲಿ “ಗಜಗೌರಿವ್ರತ’’ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಉದಾಹರಣೆಗೆ ಗುರುರಾಜಲು ನಾಯ್ಡು ಅವರ ದನಿಯಲ್ಲಿ ಗಜಗೌರಿ ವ್ರತ ಪ್ರಖ್ಯಾತಿಯನ್ನು ಪಡೆದಿದೆ.

ಸಮಕಾಲೀನ ಭಾಷೆ ಮತ್ತು ಸಂಸ್ಕೃತಿ, ಜೀವನ ಈ ಕಾವ್ಯವನ್ನು ಪ್ರಭಾವಿಸಿದೆ. ಪುರಾಣದ ಕತೆಯನ್ನು ತನ್ನ ಆಡುಭಾಷಾ ಶೈಲಿ ಮತ್ತು ಸಮಕಾಲೀನ ಸಾಮಾಜಿಕ ಚೌಕಟ್ಟಿನೊಳಗಿಟ್ಟು ಕೃತಿ ರಚಿಸಿದ್ದಾನೆ. ಇದು ರಾಜರ ಕತೆಯಲ್ಲ ಸಾಮಾಜಿಕ ನೆಲಗಟ್ಟಿನಲ್ಲಿ ಕುಟುಂಬಗಳ ನಡುವೆ ನಡೆಯುವ ಮತ್ಸರವೇ ಕಾರಣವಾಗಿ ನಡೆಯುವ ಒಂದು ಆಚರಣೆಯ ಕತೆಯಾಗಿದೆ.

*ಲೇಖಕರು ಕೋಲಾರ ಜಿಲ್ಲೆಯ ಮಾಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.