ಕುಮಾರವ್ಯಾಸನ ಭಾರತ ಕಥಾಮಂಜರಿ ಅಹಂಕಾರ ನಿರಶನದ ರೂಪಕ

ಕುಮಾರವ್ಯಾಸನ ಪ್ರಕಾರ ಭೀಮನು ಅರಣ್ಯವನ್ನೇ ಬಗಿದು ಹೊಕ್ಕುಬಿಟ್ಟ. ಆದರೆ ಭೀಮನ ಈ ಬಲವು ಮುಂದೆ ಎದುರಾಗುವ ವಾನರನ ಬಾಲದ ಒಂದು ರೋಮವನ್ನು ಅಲ್ಲಾಡಿಸದಂತಾಯಿತು! ಆಂಜನೇಯನ ಬಾಲದ ರೋಮವು ಒಂದು ತೃಣ ತೂಕವಾದರೆ ಇತ್ತ ಭೀಮನ ಅಸದಳ ಆಡಂಬರ ಬೆಟ್ಟದಷ್ಟು. ಇವೆರಡರ ಬಲಾಬಲಗಳ ತುಲನೆ ಓದುಗರ ಕಣ್ಮುಂದೆಯೇ ಜರುಗುತ್ತದೆ.

ಕುಮಾರವ್ಯಾಸನು ತಾನು ಸೃಷ್ಟಿಸುವ ಪಾತ್ರಗಳನ್ನು ಸಾಮಾನ್ಯ ರೂಪಿನಲ್ಲಿಯೂ ಅಂತೆಯೇ ಅಸಾಮಾನ್ಯ ರೂಪದಲ್ಲಿಯೂ ನೋಡಬಲ್ಲವನಾಗಿರುತ್ತಾನೆ. ಸೌಗಂಧಿಕಾ ಪುಷ್ಪವನ್ನು ತರಲು ಹೊರಟ ಭೀಮನಿಗೆ ಅರಣ್ಯದಲ್ಲಿ ಕಂಡ ಕಪಿ ಮೊದಲಿಗೆ ಸಾಮಾನ್ಯ ರೂಪಿ. ತದನಂತರ ಭ್ರಾತೃ ಸ್ವರೂಪಿ. ಆಮೇಲೆ ಭೀಮನ ಮುಂದೆ ಅದೇ ಹನುಮಂತನು ತೋರಿಸಿದ ದಿವ್ಯರೂಪವು ಯೋಗ, ಅಧ್ಯಾತ್ಮ ಮತ್ತು ದೈವತ್ವದ ಅಂತಿಮ ದರ್ಶನ. ಕೃಷ್ಣ, ಹನುಮಂತ, ವಿದುರ, ಭೀಷ್ಮ, ದ್ರೌಪದಿ, ಕರ್ಣ, ಅಭಿಮನ್ಯು ಮುಂತಾದ ಪಾತ್ರಗಳನ್ನು ಕುಮಾರವ್ಯಾಸ ಸಾಮಾನ್ಯ, ಅಸಾಮಾನ್ಯ ಮತ್ತು ಯೌಗಿಕ ನೆಲೆಯಲ್ಲಿ ನೋಡಿರುವುದ ರಿಂದಲೇ ಆ ಕಾವ್ಯಕಥನವನ್ನು ಶ್ರೀಸಾಮಾನ್ಯರೆಲ್ಲ ಓದಬಯಸಿದರು.

ಭಾರತ ಕಥಾಮಂಜರಿ ಉಪಕಥೆಗಳಲ್ಲಿ ದೂರ್ವಾಸಾಥಿತ್ಯ, ಅರ್ಜುನ ಊರ್ವಶಿಪ್ರಣಯ, ಕಿರಾತಾರ್ಜುನೀಯ ಭಾಗ, ಧರ್ಮವ್ಯಾದನ ಕಥೆ, ಜಂಬೂಫಲ ಪ್ರಸಂಗವಲ್ಲದೆ ದ್ರೌಪದಿಯ ಸೌಗಂಧಿಕಾ ಪುಷ್ಪಾಪಚಯದ ಪ್ರಕರಣಗಳು ಪ್ರಸಿದ್ಧವಾದುದಾಗಿವೆ. ಕಿರಾತಾರ್ಜುನೀಯ ಪ್ರಸಂಗವು ಅರ್ಜುನನ ಪರಾಕ್ರಮಕ್ಕೆ ಸಂಬಂಧಿಸಿದ ಕಥನವಾದರೆ; ಸೌಗಂಧಿಕಾ ಪುಷ್ಪ ಸಂಗತಿಯು ಮಹಾಭಾರತದಾದ್ಯಂತ ನಿರಂತರ ದುಗುಡಕ್ಕೆ ಅದರಿಂದ ಹುಟ್ಟುವ ಸಿಟ್ಟಿಗೆ, ನಂತರದ ಸೇಡಿನ ಪ್ರತೀಕಾರಕ್ಕೆ ಕಾಯುವ ದ್ರೌಪದಿಯ ಮನೋಭಿಲಾಷೆಗೆ ಸಂಬಂಧಪಟ್ಟ ಅಪರೂಪದ ಆದ್ರ್ರಭಾವದ ಕಥನವಾಗಿ ಕಂಡುಬರುತ್ತದೆ. ಸೌಗಂಧಿಕಾ ಪುಷ್ಪಾಪಚಯದ ಕಥನದಲ್ಲಿ ಭೀಮನು ಹೂವು ತರಲು ಹೊರಡುತ್ತ ಆ ಮುಂದೆ ಮೂರು ಮುಖ್ಯ ಸಂಗತಿಗಳು ಅಡಕವಾಗಿರುತ್ತವೆ.

ವ್ಯಾಸಭಾರತದಲ್ಲಿ ಈ ಉಪಾಖ್ಯಾನವು ಸಾಕಷ್ಟು ದೀರ್ಘವಾಗಿಯೇ ಬಂದಿರುತ್ತದೆ. ಗಂಧಮಾದನ ಪರ್ವತದಿಂದ ತೂರಿ ಬಂದ ಸುವಾಸನೆಗೆ ಮನ ಸೋತ ದ್ರೌಪದಿ ಆ ಹೂವು ತನಗೆ ಬೇಕೆಂದು ಬಯಸುವಳು. ಅವಳ ಮನೋರಥ ಧರ್ಮರಾಯ, ನಕುಲ, ಸಹದೇವರ ಕೈಯಲ್ಲಿ ಈಡೇರದು. ಅರ್ಜುನ ಸಮೀಪದಲ್ಲಿಲ್ಲ. ದ್ರೌಪದಿಗೆ ನಿಜ ಗಂಡಸಾದ ಭೀಮನೇ ಆ ಕಾರ್ಯಭಾರದ ಮೇಲೆ ಹೊರಡುತ್ತಾನೆ.

ದ್ರೌಪದಿ ಸ್ತ್ರೀ ಸಹಜ ಭಾವದಿಂದ ಬಯಸಿದ ಹೂವನ್ನು ತರುವೆನೆಂದು ಅಷ್ಟೇ ಆದರದಿಂದಲೂ, ಪ್ರೀತಿಯಿಂದಲೂ ಭೀಮಸೇನನು ಗಂಧಮಾದನ ಪರ್ವತದ ಕಡೆಗೆ ನಡೆಯುವನು. ಇದು ಅಖ್ಯಾನದ ಆರಂಭದ ಒಂದಂಶವಾದರೆ ಎರಡನೆಯದು, ಕವಿಯು ಬೇಕೆಂತಲೇ ಭೀಮನ ಮಹಾಪರಾಕ್ರಮವನ್ನು ತೀವ್ರಗತಿಯಲ್ಲಿ ಚಿತ್ರಿಸುತ್ತಾನೆ. ಯಾಕೆಂದರೆ ಮುಂದೆ ಆತನ ದೈಹಿಕ ಪ್ರಾಬಲ್ಯವು ತೃಣ ಸಮಾನವಾಯಿತೆಂದು ಹೇಳಬೇಕಿದೆ. ಮೂರನೆಯದಾಗಿ ವಾನರ ರೂಪದಲ್ಲಿ ಸಾಮಾನ್ಯನಂತೆ ಅಡವಿಯ ಫಲಜೀವಿಯಾಗಿ ಕೂತ ಕಪಿಯು ತ್ರಿವಿಕ್ರಮ ಸ್ವರೂಪಿಯಾಗಿ ತನ್ನ ನಿಜ ಸ್ವರೂಪವನ್ನು ಭೀಮನಿಗೆ ತೋರಿಸುತ್ತಾನೆ. ಹೀಗೆ ತೋರಿಸುವುದಕ್ಕೆ ಮೊದಲೇ ಆಂಜನೇಯ ಕಲಿಯುಗ ಜನಸಮೂಹದ ಗುಣಲಕ್ಷಣಗಳನ್ನು ಹೇಳುವನು. ಇದು ಮೂಲ ಭಾರತದಲ್ಲಿಯೇ ನಿರೂಪಣೆಗೊಂಡಿದೆ.ಆದರೆ ಕುಮಾರವ್ಯಾಸನು ನಿರೂಪಿಸಿರುವ ಆಂಜನೇಯನ ಪಾತ್ರವು, ಆತನ ಮಾತಿನ ಕ್ರಮವೂ ವ್ಯಾಸಭಾರತಕ್ಕಿಂತಲೂ ಮಿಗಿಲಾಗಿ ಮನ ಮುಟ್ಟುವಂತಿದೆ.

ಹದಿನೈದನೆಯ ಶತಮಾನದಲ್ಲಿ ಪ್ರಚಾರಕ್ಕೆ ಬರುತ್ತಿದ್ದ ಭಕ್ತಿ ಮತ್ತು ದೈವಪಾರಮ್ಯ, ಅಧ್ಯಾತ್ಮದ ಪ್ರತಿರೂಪವಾಗಿ ಕುಮಾರವ್ಯಾಸ ಈ ಪ್ರಸಂಗವನ್ನು ನಿರ್ವಹಿಸುತ್ತಾನೆ. ವ್ಯಾಸನಲ್ಲಿಯೂ ಸಹ ಭೀಮನಿಗೆ ವಾನರ ರೂಪಿ ಹನುಮಂತ ತನ್ನ ನಿಜ ಸ್ವರೂಪವನ್ನು ತೋರಿಸುತ್ತಾನೆ. ಆದರೆ ಅಲ್ಲಿ ಭೀಮ ಮತ್ತು ಹನುಮಂತನ ಸಂಭಾಷಣೆ, ಪಾತ್ರ ಬೆಳವಣಿಗೆ, ಸೋಲು ಗೆಲುವು ಮತ್ತು ಅಹಂಕಾರ ನಿರಶನದ ಹಿನ್ನೆಲೆಯಲ್ಲಿ ಬೆಳೆಯುತ್ತ ಹೋಗುವುದಿಲ್ಲ. ಬದಲಾಗಿ ಸೌಗಂಧಿಕಾ ಪುಷ್ಪ ಪ್ರಕರಣದಲ್ಲಿ ‘ಹನುಮದ್ರಾಮಾಯಣ’ವೆಂಬ ಸಂಕ್ಷಿಪ್ತ ಅಥವ ಪ್ರಕ್ಷಿಪ್ತ ಇರಬಹುದಾದ ರಾಮಾಯಣ ಕಥನವೂ ಸೇರಿಕೊಂಡು ಮುಖ್ಯ ಸಂಗತಿಯ ಪ್ರಾಮುಖ್ಯವನ್ನು ನುಂಗಿಹಾಕಿರುವಂತಿದೆ.

ಪಂಪಭಾರತದಲ್ಲಿ ಸೌಗಂಧಿಕಾ ಪುಷ್ಪ ತರುವುದರ ಉಲ್ಲೇಖವಿಲ್ಲ. ಅರ್ಜುನನ ವ್ಯಕ್ತಿತ್ವದ ಹಿರಿಮೆಯ ಪ್ರದರ್ಶನಕ್ಕೆ ಎಲ್ಲಿ ಅವಕಾಶವಿದೆಯೋ ಅಲ್ಲೇ ಕಥನ ವಿಸ್ತಾರಕ್ಕೆ ಅವಕಾಶವೀಯುವುದು ಪಂಪನ ಮುಖ್ಯ ಉದ್ದೇಶ. ಜತೆಗೆ ಪಂಪ ಸ್ತ್ರೀ ಪಾರಮ್ಯವನ್ನು ಒಪ್ಪಿಕೊಂಡವನಲ್ಲ. ಅವರ ಸಂಕಷ್ಟಗಳನ್ನು ಕಾಣುವುದಕ್ಕಿಂತ ಅವರನ್ನು ಭೋಗದ ವಸ್ತುವಾಗಿಯೇ ನೋಡಿದ್ದು ಹೆಚ್ಚು. ವಿಕ್ರಮಾರ್ಜುನ ವಿಜಯದಲ್ಲಿ ಪಂಪ ನಾಯಕಿಯ ನ್ನಾಗಿ ನೋಡಿರುವುದು ಸುಭದ್ರೆಯನ್ನು. ಅದರಿಂದ ದ್ರೌಪದಿ ಕೇಳಿದ ಸೌಗಂಧಿಕಾ ಪುಷ್ಪ ತರುವುದನ್ನು ವಿವರಿಸಲು ಪಂಪನಿಗೆ ಸಮಯವಿಲ್ಲ. ಆದರೆ ಪಂಪ ಸ್ವತಃ ಪುಷ್ಪಪ್ರಿಯ.

ಮನುಷ್ಯ ಶರೀರವೆಂಬುದು ಅಪಜಯದ ಆಗರ ಎಂಬ ಮಾತಿನಲ್ಲಿ ಚರಿತ್ರೆಯ ಎಲ್ಲ ಪರಾಕ್ರಮಿಗಳ ಗೆಲುವು ಮತ್ತು ಅದರೊಂದಿಗೇ ಇರುವ ಸೋಲು ಅಡಗಿದೆ! ಜಯವೆಂಬ ಮರೀಚಿಕೆಯ ಹಿಂದೆ ನಡೆದ ರಾಜ ಮಹಾರಾಜರೆಲ್ಲರಿಗೂ ದೊರಕಿದ್ದು ಅಪಜಯದ ಬಿರುದು. ಜಗತ್ತನ್ನು ಆಳುವವರಿಗೆ ತಮ್ಮ ಮನೆಯ ಒಳಗನ್ನು, ಅಂತರಂಗವನ್ನು ಅರಿಯಲು ಸಮಯವಿರುವುದಿಲ್ಲ.

ಭೀಮನ ನಡಿಗೆಯಿಂದ ಅರಣ್ಯ ಅದುರುತ್ತದೆ. ಕಾಡು, ನಾಡಿನ ಜನಸಮೂಹವನ್ನು ಹೆದರಿಸುವ ವಾತಾವರಣವುಳ್ಳದ್ದು. ಆದರೆ ನಾಡಿನವನಾದ ಭೀಮನ ಪರಾಕ್ರಮಕ್ಕೆ ಕಾಡೇ ನಡುಗುತ್ತದೆ. ಭೀಮನು ಇಡುವ ಹೆಜ್ಜೆಗಳಿಂದ ನೆಲವು ಗುಳಿ ಬೀಳುತ್ತದೆ. ನಡಿಗೆಯ ರಭಸಕ್ಕೆ ಅರಣ್ಯದ ಪ್ರಾಣಿಗಳು ಬಿದ್ದು ಓಡುತ್ತವೆ. ಕುಮಾರವ್ಯಾಸನ ಪ್ರಕಾರ ಭೀಮನು ಅರಣ್ಯವನ್ನೇ ಬಗಿದು ಹೊಕ್ಕುಬಿಟ್ಟ. ಆದರೆ ಭೀಮನ ಈ ಬಲವು ಮುಂದೆ ಎದುರಾಗುವ ವಾನರನ ಬಾಲದ ಒಂದು ರೋಮವನ್ನು ಅಲ್ಲಾಡಿಸದಂತಾಯಿತು! ಆಂಜನೇಯನ ಬಾಲದ ರೋಮವು ಒಂದು ತೃಣ ತೂಕವಾದರೆ ಇತ್ತ ಭೀಮನ ಅಸದಳ ಆಡಂಬರ ಬೆಟ್ಟದಷ್ಟು. ಇವೆರಡರ ಬಲಾಬಲಗಳ ತುಲನೆ ಓದುಗರ ಕಣ್ಮುಂದೆಯೇ ಜರುಗುತ್ತದೆ. ಬಾಲದ ಭಂಗವ್ಯಾಪ್ತಿ ಭೀಮನ ಬಲವನ್ನು ನಗಣ್ಯವಾಗಿಸಿಬಿಟ್ಟಿತು. ಆಗ ಭೀಮನ ಬಾಯಿಂದ ಬರುವ ಮಾತು- `ತೊಡಕೆ ಕೆಟ್ಟುದು ಕಾರ್ಯ ದುರ್ಬಲನೊಡನೆ ಭಂಗವ್ಯಾಪ್ತಿ, ಈ ಮನುಷ್ಯ ಶರೀರವಪಜಯ ಧಾಮವಲ್ಲಾ, ನಿಸ್ಸೀಮ ಕಪಿ ನೀನಾರೆನುತ ಪವನಜನ ಬೆಸಗೊಂಡ’ – ಮನುಷ್ಯ ಶರೀರವೆಂಬುದು ಅಪಜಯದ ಆಗರ ಎಂಬ ಮಾತಿನಲ್ಲಿ ಚರಿತ್ರೆಯ ಎಲ್ಲ ಪರಾಕ್ರಮಿಗಳ ಗೆಲುವು ಮತ್ತು ಅದರೊಂದಿಗೇ ಇರುವ ಸೋಲು ಅಡಗಿದೆ! ಜಯವೆಂಬ ಮರೀಚಿಕೆಯ ಹಿಂದೆ ನಡೆದ ರಾಜ ಮಹಾರಾಜರೆಲ್ಲರಿಗೂ ದೊರಕಿದ್ದು ಅಪಜಯದ ಬಿರುದು. ಜಗತ್ತನ್ನು ಆಳುವವರಿಗೆ ತಮ್ಮ ಮನೆಯ ಒಳಗನ್ನು, ಅಂತರಂಗವನ್ನು ಅರಿಯಲು ಸಮಯವಿರುವುದಿಲ್ಲ.

ಭೀಮ, ಹನುಮಂತರ ಮುಖಾಮುಖಿಯ ವೇಳೆ ಇವರ ಪರಸ್ಪರ ಸಂಭಾಷಣೆಯ ಅಂತರವನ್ನು ಗಮನಿಸಬೇಕು. ತನ್ನ ಪರಾಕ್ರಮಕ್ಕೆ ಎದುರಾದ ಬಾಲವನ್ನು ತೆಗೆಯಲು ಭೀಮ ಹೇಳಿದರೆ ಹನುಮಂತನು ಕೊಡುವ ಉತ್ತರ, ‘ನಾವು ವಾನರರು, ಅಡವಿಯಲಿ ಫಲಜೀವಿಗಳು, ನಿಸ್ಸತ್ವರು, ಇಲ್ಲಿಯ ಠಾವ ಬಿಡಲನ್ಯತ್ರ ಗಮನ ತ್ರಾಣವಿಲ್ಲ, ನೀವು ಮಹಾಸಂಭಾವಿತರು’ ಎಂಬೆಲ್ಲ ಮಾತುಗಳು ಭೀಮನಿಗೆ ಮೊದಲ ಸುತ್ತಿಗೆ ಅರ್ಥವಾಗುವುದಿಲ್ಲ. ಬಕ, ಹಿಡಿಂಬರ ಸಂಹಾರ ಮಾಡಿದ ಭೀಮನಿಗೆ ತನಗಡ್ಡವಾದ ಯಃಕಶ್ಚಿತ್ ಕಪಿಯ ಬಾಲದ ರೋಮವನ್ನು ಮಿಡುಕಿಸಲಾಗುತ್ತಿಲ್ಲ ಎಂಬ ಅವಮಾನವೇ ಹಿರಿದಾಗಿ ಕಾಡುತ್ತಿದೆ.

ಮಹಾಭಾರತದಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ದ್ಯೂತದ ನಂತರ ಅರಣ್ಯ ಸೇರಿದ ಪಾಂಡವರು ಅಲ್ಲಿ ಸಂಪೂರ್ಣ ನಾಶವಾಗಿಬಿಡುತ್ತಾರೆ ಎಂದುಕೊಂಡವನು ದುರ್ಯೋಧನ. ಆದರೆ ಪಾಂಡವರು ಅರಣ್ಯದಲ್ಲಿ ದೇಹಶಕ್ತಿ ಮತ್ತು ಋಷಿಮುನಿಗಳ ಸಹವಾಸದ ಅಧ್ಯಾತ್ಮದ ಹಿನ್ನಲೆಯಿಂದ ಮತ್ತಷ್ಟು ಬಲಗೊಂಡರು. ಈ ಹಿಂದೆಯೇ ಗಮನಿಸಿದಂತೆ ಅರ್ಜುನ ಶಿವನಿಂದ ಪಾಶುಪತಾಸ್ತ್ರವನ್ನು ಪಡೆದ. ಮುಂದಿನ ಕುರುಕ್ಷೇತ್ರ ಯುದ್ಧ ಸಂದರ್ಭದಲ್ಲಿ ಕೃಷ್ಣಾರ್ಜುನರ ರಥದ ಧ್ವಜ ಚಿಹ್ನೆಯಾಗಿರುತ್ತೇನೆಂಬ ಭರವಸೆಯನ್ನು ಆಂಜನೇಯ ಭೀಮನಿಗೆ ನೀಡಿದ. ಹೀಗೆ ಅರಣ್ಯದಲ್ಲಿ ಬಲ ಸಂವರ್ಧನೆಗೊಂಡ ಪಾಂಡವರು ವಿರಾಟ ನಗರದಲ್ಲಿ ತಮ್ಮ ಪರಾಕ್ರಮದ ಸಂಕೇತಗಳನ್ನು ಮೂಟೆ ಕಟ್ಟಿ ಮರದ ಮೇಲೆ ಅಡಗಿಸಿಟ್ಟರು. ವಿರಾಟನಲ್ಲಿ ಅಜ್ಞಾತರಾಗಿ ಬದುಕಿ ಮನುಷ್ಯತ್ವದ ಸಾಮಾನ್ಯತೆಯನ್ನೂ ಅರಿತರು. ಹೀಗೆ ಪರಾಕ್ರಮದ ಸಾರ್ಥಕತೆ ಎಷ್ಟು ಎನ್ನುವ ಪ್ರಶ್ನೆ ಅರಣ್ಯ ಪರ್ವದಲ್ಲಿ ಆರಂಭವಾಗಿ ವಿರಾಟ ಪರ್ವದಲ್ಲಿ ಮುಕ್ತಾಯವಾಗುತ್ತದೆ. ರಾಜ ಮಹಾರಾಜರ ದೈಹಿಕ ಶಕ್ತಿಯನ್ನು ಪಂಪನು ಆದಿಪುರಾಣದಲ್ಲೂ, ಕುಮಾರವ್ಯಾಸ, ವ್ಯಾಸರು ಯಕ್ಷ ಪ್ರಶ್ನೆಯ ಸಂದರ್ಭದಲ್ಲಿ ಇನ್ನೂ ಮಾರ್ಮಿಕವಾಗಿ ಚಿತ್ರಿಸಿರುವಂತೆ ತೋರುತ್ತದೆ. ದರ್ಭೆಗೆ ಬಾಯಿ ಹಾಕಿದ ಜಿಂಕೆಯೊಂದನ್ನು ಹಿಂಬಾಲಿಸಿಕೊಂಡು ಬಂದ ಪಾಂಡವರು ಬಾಯಾರಿಕೆಯಿಂದ ಬಳಲಿ ಕೆರೆಯ ಬಳಿ ಯಕ್ಷನ ಪ್ರಶ್ನೆಗೆ ಉತ್ತರ ಕೊಡಲಾಗದೇ ನೀರು ಕುಡಿದು ಸತ್ತರು. ಜೀವದ್ರವ್ಯವಾದ ನೀರಿನ ದಾಹವು ನಾಲ್ವರು ಶೂರರಿಗೆ ಆ ಕ್ಷಣಕ್ಕೆ ಸಾವನ್ನು ತಂದಿತು. ಆದರೆ ಧರ್ಮರಾಯನ ಸಂಯಮ, ಜ್ಞಾನ, ಆತ್ಮವಿದ್ಯೆ ಅವನನ್ನಲ್ಲದೆ ಸತ್ತ ಸಹೋದರರನ್ನೂ ಬದುಕಿಸಿತು. ಅಂದರೆ ರಾಜ್ಯ ಸಾಧಕರ ಪರಾಕ್ರಮವು ಒಮ್ಮೊಮ್ಮೆ ತೃಣಸಮಾನವಾಗಿಬಿಡುತ್ತವೆಂಬ ಅರ್ಥದಲ್ಲಿ ಈ ಉಪಾಖ್ಯಾನಗಳು ಬರುತ್ತವೆ.

ಮನುಷ್ಯನು ತನ್ನ ಮಿತಿಯನ್ನು ಮರೆತು ಬರಿದೆ ಭ್ರಮೆಯೆನಿಸುವ, ನಿಧಾನವಾಗಿ ಕರಗಿಬಿಡುವ ದೈಹಿಕ ಶಕ್ತಿಯನ್ನು ನಂಬಿಕೊಂಡಲ್ಲಿ ಅಥವಾ ಇದಕ್ಕಿಂತಲೂ ಹೀನಗುಣಗಳನ್ನು ಅನುಸರಿಸಿದಾಗಲೆಲ್ಲ ಮಹತ್ತಾದುದು ಕಣ್ಣಿಗೆ ಕಾಣಿಸಿದಂತಾಗಿಬಿಡುತ್ತದೆಂಬ ಆಶಯ ಮಹಾಭಾರತದ ಅನೇಕ ಉಪಾಖ್ಯಾನಗಳಲ್ಲಿ ಹುದುಗಿದೆ. ಮನುಷ್ಯನ ಗುಣ ಸಮೂಹವನ್ನು ಕುಮಾರವ್ಯಾಸ ಹನುಮಂತನ ಮುಖೇಣ ಹೀಗೆ ಹೇಳಿಸುತ್ತಾನೆ. ಇದು ವ್ಯಾಸನಲ್ಲಿಯೂ ಇದೆ –

ಹೀನಸತ್ವರು ಸತ್ಯ ಧರ್ಮವಿ
ಹೀನರರ್ಥಪರಾಯಣರು ಕು
ಜನಾನುರಕ್ತರು, ವರ್ಣಧರ್ಮಾಶ್ರಯ ವಿದೂಷಕರು |
ದಾನಿಗಳು ದುಷ್ಪಾತ್ರರಲಿ ಗುಣ
ಮೌನಿಗಳು ಗರ್ವಿತರು ಮಿಥ್ಯಾ
ಜ್ಞಾನಿಗಳು ಕಲಿಯುಗದ ಮನುಜರು ಭೀಮ ಕೇಳೆಂದ ||
ಹನುಮಂತನು ತನ್ನ ತ್ರೇತಾಯುಗದ ರೂಪವನ್ನು ತೋರಿಸಬೇಕೆಂದು

ಭೀಮನು ಕೇಳಿಕೊಳ್ಳುವಲ್ಲಿ, ಕಲಿಯುಗದ ಜನ ಸಮೂಹವು ತನ್ನ ರೂಪನ್ನು ನೋಡಲು ಶಕ್ತರಲ್ಲ ಎಂಬುದಕ್ಕೆ ಮೇಲಿನ ಕಾರಣಗಳನ್ನು ಕೊಡುವವನಾಗುತ್ತಾನೆ. ಇಲ್ಲಿ ಹೇಳಿದ ಮನುಷ್ಯಮಾತ್ರರ ಗುಣವು ಕೇವಲ ಕಲಿಯುಗಕ್ಕೆ ಮಾತ್ರ ಸೀಮಿತವಾದದ್ದೇನಲ್ಲ.

ಭೀಮನ ಪುನರಾವರ್ತನೆಯ ಕೋರಿಕೆಯ ನಂತರ ಹನುಮಂತನು ತನ್ನ ನಿಜಸ್ವರೂಪವನ್ನು ತೋರಿಸುತ್ತಾನೆ. ಈ ಸಂದರ್ಭವು ಸೌಗಂಧಿಕಾ ಪುಷ್ಪವನ್ನು ತರುವುದರ ಮುಖ್ಯ ಉದ್ದೇಶವನ್ನೇ ಮರೆಸುವಂತೆ ಇದೆ. ಕುಮಾರವ್ಯಾಸನು ಮಾನವೀಯ ಸಂದರ್ಭಗಳನ್ನು ಅದೆಷ್ಟು ಸಹಜವಾಗಿ ಚಿತ್ರಿಸುವನೋ, ಕೃಷ್ಣನ ಇಲ್ಲವೇ ಆಂಜನೇಯನ ವಿರಾಟ್ ಸ್ವರೂಪವನ್ನು ನಿರ್ವಹಿಸುವಲ್ಲಿ ಒಂದು ಸಹಜ ಸ್ವರೂಪದ್ದೇ, ಅಂತರಂಗಕ್ಕಿಳಿಸಿಕೊಂಡು ಪರಿಭಾವಿಸಬೇಕಾದದ್ದೇ ಎನಿಸುವ ಅಗಾಧತೆಯಲ್ಲಿ ಓದುಗರ ಮುಂದಿಡುತ್ತಾನೆ. ಆ ಪದ್ಯಗಳ ಯಥಾವತ್ತನ್ನು ಓದುಗರ ಗಮನಕ್ಕೆ ತರುವುದು ಅಗತ್ಯವೆನಿಸುತ್ತದೆ –

ಆದಡಿನ್ನು ನಿರೀಕ್ಷಿಸೆನುತ ನಿ
ನಾದದಲಿ ನೆಲಬಿರಿಯೆ ಬಾಲದ
ಬೀದಿವರಿ ಬಾಸಣಿಸೆ ಘನ ನಕ್ಷತ್ರ ಮಂಡಲವ|
ಮೇದಿನಿಯ ಹೊರೆಗಾರರಳ್ಳೆದೆ
ಯಾದರಳುಕಿದವದ್ರಿಗಳು ಸ
ಪ್ತೋದದಿಗಳಂಜಿದವೆನಲು ಹೆಚ್ಚಿದನು ಕಲಿ ಹನುಮ ||
ಮೇರುವಿನ ತಪ್ಪಲಲಿ ಬೆಳೆದ ಬ
ಲಾರಿಚಾಪವೋ ಮೇಣ್ ತ್ರಿವಿಕ್ರಮ
ನಾರುಭಟೆಯಲಿ ಜಡಿವ ಜೋತಿರ್ಗಣದ ಬಲು ಮಿಳಿಯೋ |
ಚೂರಿಸುವ ಬಲುಬಾಲವೋ ಜಂ
ಭಾರಿ ಭವನವಳ್ಳಿರಿಯೆ ತ್ರಿಪು
ರಾರಿಯೊಡ್ಡಿದ ಹೊಳಹಿನಲಿ ಹೊಳೆಹೊಳೆದನಾ ಹನುಮ||
ನೋಡಿದನು ನಡುಗಿದನು ಕಂಗಳ
ಕೋಡಿಯಲಿ ನೀರೊರೆದು ಹರುಷದ
ರೂಢಿಯಲಿ ಜೊಮ್ಮೆದ್ದು ಮನ ಡೆಂಡಣಿಸಿ ಭೀತಿಯಲಿ
ಬಾಡು ಮೋರೆಯನೆತ್ತಿ ಕೈಗಳ
ನೀಡಿ ಕಂಗಳ ಮುಚ್ಚಿ ಮರಳಿದು
ನೋಡಿ ಶಿವಶಿವಾಯೆನುತ ಬೆಚ್ಚಿದನಡಿಗಡಿಗೆ ಭೀಮ ||
ಸಾಕು ಸಾಕಂಜಿದೆನು ಮನುಜರು
ಕಾಕು ಬಲರು ನಿಜ ಸ್ವಭಾವವ
ನೇಕೆ ಬಿಡುವೆವು ತಿಳಿದು ತಿಳಿಯೆವು ಕಂಡೊಡಂಜುವೆವು
ಸಾಕು ಪೂರ್ವದ ರೂಪಿನಲಿ ನಿ
ವ್ರ್ಯಾಕುಲನ ಮಾಡೆನಲು ಪವನಜ
ನಾ ಕಪೀಶ್ವರ ನಗುತ ಮುನ್ನಿನ ರೂಪ ಕೈಕೊಂಡ ||

ವ್ಯಾಸ, ಕುಮಾರವ್ಯಾಸರು ಈ ಉಪಾಖ್ಯಾನದಲ್ಲಿ ದೈಹಿಕ ಬಲವನ್ನೂ, ಸಂಯಮದ ಆತ್ಮಬಲವನ್ನೂ ಮುಖಾಮುಖಿ ಮಾಡಲೆತ್ನಿಸಿರುತ್ತಾರೆ. ಯಾವುದು ಶಕ್ತಿ ಸಾಮಥ್ರ್ಯ, ನಿಜ ಪರಾಕ್ರಮ ಎಂಬುದೋ ಅದನ್ನು ಹನುಮಂತನಂಥ ಸಚ್ಚಾರಿತ್ರ್ಯ, ತ್ಯಾಗ ಪುರುಷನ, ವಿರಾಟ್ ಸ್ವರೂಪಿ ಆತ್ಮಬಲವುಳ್ಳವನ ಮುಂದೆ ತಂದು ನಿಲ್ಲಿಸುತ್ತಾರೆ. ಕುಮಾರವ್ಯಾಸ ಇಲ್ಲೊಂದು ಪದ ಬಳಸಿರುವುದನ್ನು ಗಮನಿಸಬೇಕು. `ಮೇದಿನಿಯ ಹೊರೆಗಾರರಳ್ಳೆದೆಯಾದರು’ ಎನ್ನುತ್ತಾನೆ. ಈ ಭೂಮಿಯನ್ನು ಆಳುವವರ ಎದೆ ಎಷ್ಟು ಶಕ್ತಿಯುಳ್ಳದ್ದು, ಅದು ಎಂದಾದರೂ ಪ್ರಕೃತಿಯ ಎದುರು ಅಲುಗಾಡಿ ಬೀಳದೆ? ಬಲ, ಆತ್ಮಬಲ, ಶಾಶ್ವತ, ಅಶಾಶ್ವತ ಶಕ್ತಿ ಸಂಗತಿಯ ತೀರ್ಮಾನಕ್ಕೆ ಕಾರಣವಾದದ್ದು ದ್ರೌಪದಿ ಬಯಸುವ ಒಂದು ಹೂವು!

ಭೀಮನ ಪರಾಕ್ರಮದಿಂದ ಸೌಗಂಧಿಕ ಪುಷ್ಪಾಪಚಯದ ಉಪಾಖ್ಯಾನವು ಆರಂಭವಾಗಿ ಅದು ದೈಹಿಕ ಪರಾಕ್ರಮದ ಪರಾಕಾಷ್ಠೆಯನ್ನು ಮುಟ್ಟಿ, ಅದರ ಬಲವೆಲ್ಲವೂ ಬಸಿಯುವ ಸ್ವೇದಜಲದಲ್ಲಿ ಕರಗಿ ಹೋಗಿ, ಕೊನೆಗೆ ವಿನಯದ ಶಿರಬಾಗುವಿಕೆಗೆ ಬಂದು ನಿಂತು; ಅದೇ ದೇಹಾಡಂಬರದ ಭೀಮನ ಕಣ್ಣುಗಳಿಗೆ ಆತ್ಮಬಲದ ವಿರಾಟ್ ಸ್ವರೂಪವು ಗೋಚರವಾಗುವ ಪ್ರಸಂಗವಾಗುತ್ತದೆ. ಸರಸ ಸೌಗಂಧಿಕ ಪುಷ್ಪ ಪರಿಮಳದ ಈ ಆಖ್ಯಾನವು ಎಲ್ಲ ಕಾಲದ ಮನುಷ್ಯಮಾತ್ರರ ಅಹಂಕಾರ ನಿರಶನಕ್ಕೆ ಒಂದು ರೂಪಕದಂತಿದೆ.

Leave a Reply

Your email address will not be published.