ಕುಮಾರವ್ಯಾಸನ ವಿರಾಟಪರ್ವ

-ಮಹೇಶ್ವರಿ ಯು

ಕನ್ನಡ ಭಾಷೆ ಇರುವವರೆಗೆ ನೆನೆಯಬೇಕಾದ ಕವಿ ಕುಮಾರವ್ಯಾಸ. ಅವನ ಶಬ್ದ ಸಂಪತ್ತೊ, ಅವನ ನಿರರ್ಗಳತೆಯೊ, ಅವನ ದೇಸೀ ಪ್ರಿಯತೆಯೊ- ಯಾವುದನ್ನು ಹೇಳೋಣ? ಕನ್ನಡಕ್ಕೆ ಅವನ ಋಣ ಬಹಳ ದೊಡ್ಡದು. ಕನ್ನಡ ಮನಸ್ಸು ಈ ಕವಿಯನ್ನು ಸ್ವೀಕರಿಸಿದ ಬಗೆಯನ್ನು ನಾವಿಲ್ಲಿ ನೆನೆದುಕೊಳ್ಳಬೇಕು. ಕುಮಾರವ್ಯಾಸ ಭಾರತ, ಗದುಗಿನ ಭಾರತ, ಕನ್ನಡ ಭಾರತ, ಕರ್ಣಾಟ ಭಾರತ ಕಥಾ ಮಂಜರಿ ಎಂಬೆಲ್ಲ ಹೆಸರುಗಳಿಂದ ಗುರುತಿಸಲ್ಪಡುವ ಅವನ ಕೃತಿಯು ತನ್ನ ದೇಸಿ ನಡೆಯಿಂದಾಗಿ ಪಂಡಿತರಿಗೆ ಮಾತ್ರವಲ್ಲದೆ ಪಾಮರರಿಗೂ ಪ್ರಿಯವಾಗಿ ಜನಮಾನಸದಲ್ಲಿ ಹಿಂದಿನಿಂದಲೇ ಬೆರೆತಿರಬೇಕು.

ಹರಿದಾಸರ ಕೀರ್ತನೆಗಳನ್ನು ನೋಡಿದರೆ ಅದರಲ್ಲಿ ಕುಮಾರವ್ಯಾಸ ಭಾರತದಲ್ಲಿ ಬರುವ ಘಟನೆಗಳ ಸಾಕಷ್ಟು ಉದ್ಧರಣೆಗಳಿವೆ. ‘ದ್ರೌಪದಿಗೆ ಅಕ್ಷಯವಸನವನಿತ್ತೆ’ ಎಂದೋ ‘ಪಾಂಡವರ ಮನೆಯೊಳಗೆ ಕುದುರೆಗಳ ತಾತೊಳೆದು ಪುಂಡರೀಕಾಕ್ಷ ಹುಲ್ಲನು ತಿನಿಸಿದ’ ಎಂದೋ ಕೃಷ್ಣನನ್ನು ಲಕ್ಷಿಸಿ ದಾಸರು ಹೇಳುವುದನ್ನು ನಾವು ಉದಾಹರಿಸಬಹುದು. ವಿವರಣೆಯಿಲ್ಲದೆ ಉಲ್ಲೇಖಮಾತ್ರದಿಂದ ದಾಸರು ಮಹಾಭಾರತದ ಕತೆಗಳನ್ನು ಜನರಿಗೆ ನೆನಪಿಸಬಲ್ಲರಾದರೆ ಅದಕ್ಕೆ ಕುಮಾರವ್ಯಾಸ ಭಾರತದ ವಾಚನ ಪರಂಪರೆ ಹಿನ್ನೆಲೆಯಲ್ಲಿದ್ದಿರಬೇಕೆಂದು ನನ್ನ ಊಹೆ.

ನನ್ನ ಅಜ್ಜ ಅವರ ಹಿರಿಯರಿಂದ ಕಲಿತ 3-4ರ ನಡೆಯ ಭಾಮಿನಿಯ ಧಾಟಿಯನ್ನು ಹಿಡಿದು ಭಾರತ ವಾಚನ ಮಾಡುತ್ತಿದ್ದ ನೆನಪು ನನಗಿದೆ. ಹೀಗೆ ವಾಚನ ಪರಂಪರೆಯಲ್ಲಿ ಕನ್ನಡಿಗರಿಂದ ಸ್ವೀಕೃತನಾದ ಕವಿ ಕುಮಾರವ್ಯಾಸನ ಕೃತಿಯು ಕನ್ನಡ ನವೋದಯದ ಕಾಲಘಟ್ಟದಲ್ಲಿ ಗ್ರಂಥ ಸಂಪಾದನೆಯ ಶಾಸ್ತ್ರದ ವಿಧಿಗೆ ಒಳಪಟ್ಟು ಸಂಪಾದಿತವಾಗಿ ಮುದ್ರಣವನ್ನು ಕಂಡು 1940ರ ಹೊತ್ತಿಗೆ ಕುಮಾರವ್ಯಾಸಪ್ರಶಸ್ತಿ ಎಂಬ ಹೆಸರಿನ ರಸವಿಮರ್ಶೆಯ ಸಂಪುಟವೂ ಬಂದು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನವಿಷಯವಾಗಿಯೂ ಮನ್ನಣೆಯನ್ನು ಪಡೆದದ್ದು ಒಂದು ಮೈಲುಗಲ್ಲು. ಮುಂದೆ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸೂಚನೆಯ ಮೇರೆಗೆ ಸುಲಭಬೆಲೆಯ (ಕೇವಲ ಎರಡು ರೂಪಾಯಿ) ಜನಪ್ರಿಯ ಆವೃತ್ತಿಯಾಗಿ ಕುವೆಂಪು ಹಾಗೂ ಮಾಸ್ತಿಯವರ ಸಂಪಾದಕತ್ವದಲ್ಲಿ ಹಿರಿಯ ವಿಮರ್ಶಕರ ನುಡಿಮುತ್ತುಗಳನ್ನು ಕೋದ ತೋರಣನಾಂದಿಯೊಂದಿಗೆ ಪ್ರಕಟವಾದದ್ದು (1958) ಮತ್ತೊಂದು ಮೈಲುಗಲ್ಲು.

ಕುಮಾರವ್ಯಾಸಭಾರತವು ಉನ್ನತ ಶಿಕ್ಷಣದಲ್ಲಿ ಪಠ್ಯವಿಷಯವಾಗಿರುತ್ತ ಬೇರೆ ಬೇರೆ ಪರ್ವಗಳು ಬಿಡಿಬಿಡಿಯಾಗಿ ವಿಮರ್ಶಾತ್ಮಕ ಪ್ರಸ್ತಾವನೆಯೊಂದಿಗೆ ಪ್ರಕಟವಾದದ್ದನ್ನೂ ಇಲ್ಲಿ ನೆನೆಯಬೇಕು. ಜನಮಾನಸಕ್ಕೆ ಈ ಕೃತಿಯನ್ನು ತಲಪಿಸುವಲ್ಲಿ ಗಮಕಿಗಳ ಪಾತ್ರ ಬಲು ದೊಡ್ಡದು. ‘ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’ ಎಂದು ಕುವೆಂಪು ಹೇಳಿದರೆ ವಿನಾ ಕುಮಾರವ್ಯಾಸನನ್ನು ‘ಓದಿದರೆ’ ಎಂದು ಹೇಳಲಿಲ್ಲ ಎಂಬುದನ್ನು ಗಮನಿಸಬೇಕು. ಅಧ್ಯಯನಗ್ರಂಥವಾಗಿ ಕೃತಿಯ ಬಗ್ಗೆ ವಿಮಶೆಯ ಬರಹಗಳೂ ಪ್ರತ್ಯೇಕ ಸಂಪುಟಗಳೂ ಬಂದಿದ್ದು ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದ ಕುಮಾರವ್ಯಾಸ ಸಾಂಸ್ಕøತಿಕ ಮುಖಾಮುಖಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿ ಹೊರತಂದ ಕುಮಾರವ್ಯಾಸನ ಕನ್ನಡ ಭಾರತ ಗಮನ ಸೆಳೆಯುತ್ತವೆ. ಇಲ್ಲಿನ ಬರಹಗಳನ್ನು ಗಮನಿಸುವಾಗ ಈ ಕೃತಿಯು ಮತ್ತೆ ಮತ್ತೆ ಹೊಸ ಓದಿಗೆ ಹೇಗೆ ಒಡ್ಡಿಕೊಳ್ಳುತ್ತದೆ, ತನ್ನ ಸತ್ವದಿಂದಾಗಿ ನಿಚ್ಚಂಪೊಸತಾಗಿ ಹೇಗೆ ಕಂಗೊಳಿಸುತ್ತದೆ ಎಂದು ವೇದ್ಯವಾಗುತ್ತದೆ.

ಗದುಗಿನ ವೀರನಾರಾಯಣನ ಭಕ್ತನಾದ ನಾರಣಪ್ಪ ತನ್ನನ್ನು ಕುಮಾರವ್ಯಾಸನೆಂದು ಕರೆದುಕೊಂಡದ್ದರಲ್ಲಿ ಆತ್ಮಪ್ರತ್ಯಯವೂ ಇದೆ, ವಿನಮ್ರತೆಯೂ ಇದೆ. ವ್ಯಾಸಭಾರತವನ್ನು ಕರ್ಣಾಟಭಾರತ ಕಥಾಮಂಜರಿಯಾಗಿ ಕನ್ನಡಿಸಿದ ಕವಿ ತನ್ನ ಯೋಗ್ಯತೆಯಿಂದಲೇ ಹಾಗೆ ಕರೆದುಕೊಂಡಿದ್ದಾನೆ. ಮತ್ತೊಂದೆಡೆ ವ್ಯಾಸಮುನಿಯ ಪ್ರತಿಭಾಸಮುದ್ರದೆದುರು ತಾನು ಕಿರಿಯ ಎಂಬ ವಿನಯವಿದೆ. ಆತ ತನ್ನನ್ನು ಪ್ರತಿವ್ಯಾಸನೆಂದುಕೊಳ್ಳಲಿಲ್ಲ! ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಎಂದು ಹೇಳುತ್ತಲೇ ಆ ಸಾಮಥ್ರ್ಯವಿರುವುದು ವೀರನಾರಾಯಣನ ಕಿಂಕರನಾದ ತನಗೆ, ಆತನೆ ಕವಿ ತಾನು ಲಿಪಿಕಾರ ಮಾತ್ರ- ಎನ್ನುವಲ್ಲಿಯೂ ಈ ಆತ್ಮವಿಶ್ವಾಸ ಮತ್ತು ವಿನಯವನ್ನು ಸಮತೋಲನದಿಂದ ಕೊಂಡೊಯ್ಯುವ ಅವನ ರೀತಿಯನ್ನು ಕಾಣಬಹುದು.

ಈ ಕವಿ ಗದುಗಿನ ಸಮೀಪದ ಕೋಳಿವಾಡದವನು ಎಂಬ ಬಗ್ಗೆ ವಿದ್ವಾಂಸರಲ್ಲಿ ಸಾಕಷ್ಟು ಸಹಮತ ಇದೆ. ಆದರೆ ಆತನ ಕಾಲದ ಬಗ್ಗೆ ಹಾಗೂ ಮತದ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆ. ಮಂಜೇಶ್ವರ ಗೋವಿಂದ ಪೈಯವರು ಆತ ಹದಿಮೂರನೆಯ ಶತಮಾನಕ್ಕೆ ಸೇರಿದವನೆಂದು ಆಂತರಿಕ ಪ್ರಮಾಣಗಳ ಆಧಾರದಲ್ಲಿ ಸಾಧಿಸಿದ್ದಾರೆ. ಆತ ವೈಷ್ಣವನೆಂದೂ ಶೈವನೆಂದೂ ವಾದ ಹೂಡಿದವರಿದ್ದಾರೆ. ಆದರೆ ಆತ ಹರಿಹರರಲ್ಲಿ ಭೇದವೆಣಿಸದ ಭಾಗವತಮನೋಧರ್ಮದ ಕವಿಯಾಗಿರುವುದು ನಿಜ.

ವ್ಯಾಸಭಾರತವನ್ನು ಇತಿಹಾಸವೆಂಬ ದೃಷ್ಟಿಯಿಂದಲೂ ನೋಡಬಹು ದಾದರೆ ಪಂಪಭಾರತವು ಅರಿಕೇಸರಿಯ ಜೊತೆ ಕಥಾನಾಯಕನ ಸಮೀಕರಣದಿಂದ ವಿಕ್ರಮಾರ್ಜುನ ವಿಜಯವಾಗಿ ವಿಖ್ಯಾತವಾಯಿತು. ಈ ಎರಡೂ ಕೃತಿಗಳಲ್ಲೂ ಕೃಷ್ಣ ಕಥಾನಾಯಕನಲ್ಲ. ಆದರೆ ಕುಮಾರವ್ಯಾಸ ಸ್ಪಷ್ಟವಾಗಿ ಸಾರುತ್ತಾನೆ- ‘ತಿಳಿಯಹೇಳುವೆ ಕೃಷ್ಣಕತೆಯನು ಇಳೆಯ ಜಾಣರು ಮೆಚ್ಚುವಂದದಿ’. ಕೃಷ್ಣ ಮೆಚ್ಚುವಂತೆ ಆತನ ಸೂತ್ರಧಾರತ್ವವನ್ನು ಕೇಂದ್ರೀಕರಿಸಿ ಹೇಳುವಾಗಲೂ ಅರಸುಗಳಿಗೆ ವೀರವಾಗಿ ದ್ವಿಜರಿಗೆ ಪರಮವೇದದ ಸಾರವಾಗಿ ಮಂತ್ರಿಜನಕೆ ಬುದ್ಧಿಗುಣವಾಗಿ- ಹೀಗೆ ಹಲವು ನೆಲೆಗಳಲ್ಲಿ ಉಪಯುಕ್ತವಾಗುವಂತೆ ಹೇಳುವ ಗುರಿಯೂ ಇತ್ತು.

‘ಚಾರುಕವಿತೆಯ ಬಳಕೆಯಲ್ಲ, ಬರಿಯ ತೊಳಸಿಯ ಉದಕದಂತಿರೆ ಇದರಲಿ ನೋಳ್ಪುದು ಪದುಮನಾಭನ ಮಹಿಮೆ’ ಎನ್ನುವ ಈ ಕವಿಗೆ ಸ್ಪಷ್ಟವಾದ ಕಾವ್ಯೋದ್ದೇಶವಿತ್ತು. ‘ಕೇಳುವ ಸೂರಿಗಳು ಜಂಗಮ ಜನಾರ್ದನರು’ ಎಂಬ ಅವನ ಹೇಳಿಕೆಯಲ್ಲಿ ಕಾಲಕಾಲಾಂತರದ ಶ್ರೋತೃಗಳಿಗೆ ಅವನ ಕಾವ್ಯ ಸಲ್ಲುವ ವಿಶ್ವಾಸವಿತ್ತು. ಹಾಗೆ ಸಲ್ಲಬೇಕಾದ ಕೃತಿ ಲೌಕಿಕಭಾವಗಳನ್ನು ವ್ಯಂಜಿಸುವಲ್ಲಿಯೂ ಗೆಲ್ಲಬೇಕೆಂಬ ಸಹಜ ಅರಿವೂ ಅವನಿಗಿತ್ತು.

ಹತ್ತು ಪರ್ವಗಳ ಕುಮಾರವ್ಯಾಸ ಭಾರತದಲ್ಲಿ ಒಂದೊಂದು ಪರ್ವವೂ ವಿಶಿಷ್ಟವೇ. ಪ್ರಸ್ತುತ ವಿರಾಟ ಪರ್ವವನ್ನು ಕೇಂದ್ರೀಕರಿಸಿ ಒಂದು ವಿವೇಚನೆಯನ್ನು ಮಾಡಲಾಗಿದೆ. ಕೀಚಕವಧೆ ಮತ್ತು ಉತ್ತರನ ಪ್ರಸಂಗವೆಂಬ ಸ್ವಾರಸ್ಯಕರ ಭಾಗಗಳನ್ನೊಳಗೊಂಡ  ವಿರಾಟಪರ್ವವನ್ನೆ ನಿರ್ದಿಷ್ಟವಾಗಿ ಆರಿಸಿಕೊಳ್ಳಲು ಕಾರಣಗಳಿವೆ. ಪಾಂಡವರ ಜೀವಿತದಲ್ಲಿ ಈ ಅಜ್ಞಾತದ ಅವಧಿಗೆ ಬಹಳ ಮಹತ್ವವಿದೆ. ತಮ್ಮದಾದ ರಾಜತೇಜಸ್ಸನ್ನು ಕಳೆದುಕೊಂಡು ಸ್ವಧರ್ಮವನ್ನು ಮರೆತು ಮತ್ತೊಬ್ಬರಾಗಿ ಬಾಳುವ ಸವಾಲು ಅವರ ಮುಂದೆ.

ಹನ್ನೆರಡು ವರ್ಷ ವನವಾಸದಲ್ಲಿದ್ದಾಗ ಅವರು ರಾಜ್ಯಭ್ರಷ್ಟರಾಗಿದ್ದರು, ನಿಜ. ಆದರೆ ಅವರು ಕ್ಷತ್ರಿಯ ಧರ್ಮವನ್ನು ಪಾಲಿಸಬಹುದಿತ್ತು. ದುಷ್ಟರನ್ನು ನಿವಾರಿಸುವ, ಸಜ್ಜನರಿಗೆ ರಕ್ಷಣೆಯನ್ನು ನೀಡುವ ಅವರ ಸಂಕಷ್ಟಗಳಿಗೆ ನೆರವಾಗುವ ಕರ್ತವ್ಯವನ್ನು ಆಯುಧಪಾಣಿಗಳಾದ ಅವರು ಮಾಡುತ್ತಲೇ ಬಂದಿದ್ದರು. ಅಜ್ಞಾತವಾಸದ ಸವಾಲು ಮಾತ್ರ ಅತ್ಯಂತ ಕಷ್ಟಕರವಾದದ್ದು. ಗೌಪ್ಯತೆಯನ್ನು ಕಾಪಾಡುವುದು ಮತ್ತು ಅದಕ್ಕಾಗಿ ಸ್ವಧರ್ಮವನ್ನು ಮರೆತು ಬಾಳುವುದು ಲೋಕೈಕವೀರರಿಗೆ ಅದೆಂತಹ ಕಠಿಣ ಸವಾಲು!

ವಿರಾಟಪರ್ವಕ್ಕೆ ಮೊದಲು ಅರಣ್ಯಪರ್ವದ ಕೊನೆಗೆ ಸಂಭವಿಸುವ ಮಹತ್ವದ ಘಟನೆ ಯಕ್ಷಪ್ರಶ್ನೆಯದು. ಕಥಾಸಂವಿಧಾನದ ದೃಷ್ಟಿಯಿಂದ ಇದರ ಔಚಿತ್ಯವನ್ನು ನೆನೆದರೆ ಕೆಲವೊಂದು ಅಂಶಗಳು ಹೊಳೆಯುತ್ತವೆ. ಬಳಲಿದ ಕಾರಣದಿಂದ ಯಕ್ಷನ ಪ್ರಶ್ನೆಗೆ ಉತ್ತರಿಸುವ ವ್ಯವಧಾನ ತೋರದೆ ದುಡುಕಿ ಕೊಳದ ನೀರು ಕುಡಿದು ಒಬ್ಬೊಬ್ಬರಾಗಿ ಮಡಿದ ಸಹೋದರರನ್ನು ಯಕ್ಷಪ್ರಶ್ನೆಗೆ ತಾಳ್ಮೆಯಿಂದ ಉತ್ತರಿಸಿದ ಬಳಿಕ ಮರುಜೀವವನ್ನು ಕೇಳಿ ಪಡೆಯುವ ಧರ್ಮರಾಯನ ಪಾತ್ರಕ್ಕೆ ಇಲ್ಲಿ ಮಹತ್ವ. ಅಣ್ಣನ ಕುರಿತಾಗಿ ಉಳಿದ ಪಾಂಡವ ಸಹೋದರರಿಗೆ ಮೊದಲೇ ಇದ್ದ ನಿಷ್ಠೆಯನ್ನು ಈ ಜೀವದ ಋಣವು ಮತ್ತಷ್ಟು ದೃಢಪಡಿಸುತ್ತದೆ.

ವಿರಾಟಪರ್ವದ ಆರಂಭದಲ್ಲಿ ಬರುವ ಸನ್ನಿವೇಶ -ತಮ್ಮಂದಿರಿಗೆ ತನ್ನಿಂದಾಗಿ ಒದಗಿದ ಕಷ್ಟಗಳು, ಅಜ್ಞಾತವಾಸವನ್ನು ನಿರ್ವಿಘ್ನವಾಗಿ ಪೂರೈಸಬೇಕಾದ ಕಠಿಣ ಸವಾಲು- ಇವುಗಳನ್ನು ಹೇಳಿಕೊಂಡು ಪರಿತಪಿಸುವ ಧರ್ಮರಾಯ ಅಲ್ಲಿ ಕಾಣಿಸಿಕೊಳ್ಳುತ್ತಾನೆ. ಅಣ್ಣನಾಗಿ ಹಾಗೆ ಹೊಣೆಗಾರಿಕೆಯನ್ನು ಹೊತ್ತು ಮುಜುಗರಪಟ್ಟುಕೊಳ್ಳುವುದು ಒಂದು ಮೌಲ್ಯ. ಆದರೆ ಅದೇ ಹೊತ್ತಿಗೆ ಅಣ್ಣನನ್ನು ಆ ಮುಜುಗರದಿಂದ ಪಾರುಮಾಡುವ ತಮ್ಮಂದಿರಿದ್ದಾರೆ. ಅವರು ಕೂಡ ಒಂದು ಮೌಲ್ಯವನ್ನು ಎತ್ತಿಹಿಡಿಯುತ್ತಾರೆ. ತಾವು ಧರ್ಮರಾಯನ ನೆರಳಿನಂತಿದ್ದು ಅವನ ಮತವೇ ತಮ್ಮ ಮತವಾಗಿರುವುದನ್ನು ಅವರು ಸ್ಪಷ್ಟಪಡಿಸುತ್ತಾರೆ. ಎಲ್ಲ ಕಾಲಗಳಲ್ಲಿಯೂ ನಾವು ಕಾಣಬಹುದಾದ ಇದರ ಇನ್ನೊಂದು ಮುಖವಿದೆ.

ಅಣ್ಣನಾದವನ ನಡವಳಿಕೆಯಿಂದ ಸಹೋದರರಿಗೆ ಪರಮನ್ಯಾಯವಾಗಿದ್ದರೂ ಅದಕ್ಕಾಗಿ ಕಿಂಚಿತ್ತೂ ಪರಿತಪಿಸದ ಹಿರಿಯಣ್ಣನಿರುತ್ತಾನೆ. ಅಂತೆಯೇ ಅಣ್ಣ ತನ್ನಿಂದಾದ ತಪ್ಪಿಗೆ ಪಶ್ಚಾತ್ತಾಪಪಡುತ್ತಿರುವಾಗಲೂ ಮಾತಿನ ಹಂಗಣೆಯ ಚಾಕುವಿನಿಂದ ಚುಚ್ಚಿ ನೋಯಿಸುವ ತಮ್ಮಂದಿರೂ ಇರುತ್ತಾರೆ. ನಮ್ಮ ರಾಮಾಯಣ ಮಹಾಭಾರತಗಳ ಕಥಾನಕಗಳು ಕೌಟುಂಬಿಕ ಮೌಲ್ಯಗಳನ್ನು, ಭ್ರಾತೃಪ್ರೇಮದಂತಹ ಆದರ್ಶಗಳನ್ನು ಕೇಂದ್ರೀಕರಿಸಿರುವುದನ್ನು ನಾವು ಕಾಣುತ್ತೇವೆ. ಆದ್ದರಿಂದಲೇ ದ್ರೌಪದಿ ಬಂದು ಏಕಾಂತದಲ್ಲಿ ಭೀಮನನ್ನು ಕಂಡು ಕೀಚಕವಧೆಗೆ ಪ್ರೇರೇಪಿಸುವ ಸಂದರ್ಭ ಬಹಳ ಮುಖ್ಯವಾಗುತ್ತದೆ.

ಭೀಮನಿಗೆ ಮಾನಿನಿಯಾದ ಮಡದಿ ದ್ರೌಪದಿಯನ್ನು ಕಾಡುವ ಕೀಚಕಕುನ್ನಿಯನ್ನು ಮುಗಿಸಲು ನೂರಕ್ಕೆ ನೂರಒಂದು ಎನ್ನುವಷ್ಟು ತುಡಿತವಿದೆ. ಆದರೆ ‘ಅಣ್ಣನಾಜ್ಞೆಯ ಕಣ್ಣಿಯಲಿ ಸಿಲುಕಿ’ ಆತ ಧರ್ಮಸಂಕಟದಲ್ಲಿ ಸಿಲುಕಿದ್ದಾನೆ. ‘ಹೆಣ್ಣಹರಿಬಕ್ಕೋಸುಗವೆ ಅಣ್ಣನಾಜ್ಞೆಯ ಮೀರಿ ಕುಂತಿಯ ಚಿಣ್ಣ ಬದುಕಿದನೆಂದು’ ಜನರು ಹೇಳುವರೆಂಬ ಆತಂಕ. ಆಯ್ಕೆಯ ಈ ಧರ್ಮಸೂಕ್ಷ್ಮದ ಪ್ರಶ್ನೆಗೆ ಉತ್ತರವನ್ನು ಕೊನೆಗೂ ಕಂಡುಕೊಳ್ಳುತ್ತಾನೆ. ಗೌಪ್ಯವನ್ನು ಕಾಪಾಡಿಕೊಂಡು ಮಡದಿಯ ಮಾನರಕ್ಷಣೆಗಾಗಿ ಕೀಚಕನನ್ನು ವಧಿಸುವ ದಾರಿಯನ್ನು ಆಯ್ದುಕೊಳ್ಳುತ್ತಾನೆ. “ಅಣ್ಣನಾಜ್ಞೆಯ ಗೆರೆಯ ದಾಂಟಿದೆ ದಾಂಟಿದೆ” ಎಂದು ಘೋಷಿಸಿಕೊಂಡು ಕೀಚಕವಧೆಯ ನಿರ್ಧಾರವನ್ನು ತಳೆಯುವ, ದ್ರೌಪದಿಗೆ ಅಭಯವನ್ನು ಕೊಡುವ ಭೀಮನ ಪಾಲಿಗೆ ಆ ಘಳಿಗೆ ಎಷ್ಟು ಕಠಿಣತರವಾಗಿತ್ತೆನ್ನುವುದನ್ನು ಸಾರುತ್ತದೆ.

ಇಂತಹ ಧರ್ಮಸೂಕ್ಷ್ಮದ ಜಟಿಲ ಸನ್ನಿವೇಶಗಳಲ್ಲಿ ವ್ಯಕ್ತಿ ಯಾವ ಆಯ್ಕೆಯನ್ನು ಮಾಡುತ್ತಾನೆ ಎನ್ನುವುದರಲ್ಲಿ ವ್ಯಕ್ತಿತ್ವದ ಘನತೆ ಮೆರೆಯುತ್ತದೆ ಅಥವಾ ಕುಸಿಯುತ್ತದೆ. ಈ ಸಂದರ್ಭದಲ್ಲಿ ಗೌಪ್ಯತೆಯನ್ನು ಉಳಿಸಿಕೊಂಡೇ ಅಣ್ಣನಾಜ್ಞೆಯನ್ನು ಮೀರಿ ಮಡದಿಯ ಮಾನ ಕಾದದ್ದರಿಂದಲೇ ಭೀಮನ ವ್ಯಕ್ತಿತ್ವ ಬೆಳಗುತ್ತದೆ. ನಮ್ಮ ಕಾವ್ಯಗಳು ಬದುಕಿನಲ್ಲಿ ಎದುರಾಗುವ ಧರ್ಮಸೂಕ್ಷ್ಮದ ಸಂಕಟಗಳನ್ನೂ ಅವುಗಳನ್ನು ಎದುರಿಸುವ ಬಗೆಗಳನ್ನೂ ನಿರೂಪಿಸುತ್ತ ಸಂಸ್ಕøತಿಯ ಪಾಠಗಳನ್ನು ರವಾನೆ ಮಾಡುವುದು ಹೀಗೆ.

ದ್ರೌಪದಿಗೆ ಸಂಬಂಧಿಸಿ ಕುಮಾರವ್ಯಾಸ ಒಂದು ಮಾತನ್ನು ಹೇಳುತ್ತಾನೆ- ‘ಕಂಗಳ ಬೆಳಗು ತಿಮಿರವ ಕೆಡಿಸೆ’ಮಿಡುಕುಳ್ಳ ಗಂಡನಾದ ಕಲಿಭೀಮನ ಬಳಿಗೆ ಅವಳು ಕತ್ತಲಲ್ಲಿ ಬರುತ್ತಾಳಂತೆ. ಕಣ್ಣಿನಬೆಳಕು ಕತ್ತಲೆಯನ್ನು ಕೆಡಿಸಿತು ಎನ್ನುವಲ್ಲಿ ವಾಚ್ಯಾರ್ಥ ತಿರಸ್ಕøತವಾದರೂ ವ್ಯಂಗ್ಯಾರ್ಥದ ಸೊಗಸು ಮನಮುಟ್ಟುತ್ತದೆ. ದ್ರೌಪದಿಯ ಆತ್ಮಸ್ಥೈರ್ಯ, ಗಾಂಭೀರ್ಯ ಮತ್ತು ಕ್ರಿಯಾಶೀಲತೆಗೆ ಈ ವರ್ಣನೆ ಬಹಳ ಹೊಂದುತ್ತದೆ. ದ್ರೌಪದಿ ನಿರಾಕರಿಸಿದರೂ ಮಧುವನ್ನು ತರಲು ತಮ್ಮನಾದ ಕೀಚಕನ ಬಳಿಗೆ ಸುದೇಷ್ಣೆ ಕಳುಹಿಸುತ್ತಾಳೆ. ಆತನ ದುರ್ವರ್ತನೆಯಿಂದ ಭಂಗಿತಳಾಗಿ ಬಂದ ವೇಳೆ ಬಾಯುಪಚಾರದ ಸಮಾಧಾನದ ಮಾತುಗಳನ್ನು ಹೇಳ ಬಂದ ಸುದೇಷ್ಣೆಯ ಯಾಜಮಾನ್ಯದ ಧೋರಣೆಗೆ ದ್ರೌಪದಿ ಮಾತಿನ ಪ್ರತಿರೋಧವನ್ನು ತೋರುವುದು ಕೂಡ ಅವಳ ಅಂತಹ ವ್ಯಕ್ತಿತ್ವಕ್ಕೆ ಶೋಭಿಸುತ್ತದೆ.

ಕತೆಗೆ ಕತೆ ಖೊಕ್ ಕೊಡುವ ಕಥಾಸಂವಿಧಾನದಂತೆ ಕೀಚಕವಧೆಯ ವೃತ್ತಾಂತವೇ ವಿರಾಟನ ಗೋಗ್ರಹಣಕ್ಕೆ ನಿಮಿತ್ತವಾಗುತ್ತದೆ. ಬವರವನ್ನು ಏಕಾಂಗವೀರನಾಗಿ ಜಯಿಸಿದ ಅರ್ಜುನನಿಗೆ ಪಾರಿತೋಷಕವಾಗಿ ಉತ್ತರೆಯನ್ನು ಮದುವೆ ಮಾಡಿಕೊಡಲು ವಿರಾಟನು ಮುಂದಾಗುವುದು, ಆಕೆಯಲ್ಲಿ ಶಿಷ್ಯವಾತ್ಸಲ್ಯ ಮಾತ್ರವಿದ್ದ ಅರ್ಜುನ ತನ್ನ ಮಗನಾದ ಅಭಿಮನ್ಯುವಿಗೆ ಅವಳನ್ನು ಸೂಚಿಸುವುದು ಅಂತೆಯೇ ಅಭಿಮನ್ಯುವಿನ ವಿವಾಹದಲ್ಲಿ ವಿರಾಟಪರ್ವ ಮಂಗಳವಾಗುತ್ತದೆ. ಮುಂದೆ ಯುದ್ಧಸಿದ್ಧತೆ, ಯುದ್ಧ, ಸಾವು ನೋವುಗಳಾಗುತ್ತವೆ. ಯುದ್ಧಾನಂತರ ಪಾಂಡವರ ಉತ್ತರಾಧಿಕಾರಿಯಾಗಿ ಉಳಿಯುವುದು ಉತ್ತರೆಯ ಗರ್ಭದಲ್ಲಿದ್ದ ಅಭಿಮನ್ಯುವಿನ ಕುಡಿ ಎಂಬುದರಿಂದಲೂ ವಿರಾಟಪರ್ವದ ಮಹತ್ವವನ್ನು ಮನಗಾಣಬಹುದು.

ಪಾಂಡವರ ಅಜ್ಞಾತವಾಸದ ಅವಧಿಯನ್ನು ಒಂದು ವರುಷವೆಂದು ಹೇಳಿದರೆ ಅದು ಕಿರಿದು ಅವಧಿಯಾಗಿ ಕಾಣಬಹುದು. ಅದನ್ನೇ 365 ದಿನವೆಂದೂ 8760 ಗಂಟೆಯೆಂದೂ 535600 ನಿಮಿಷವೆಂದೂ ಲೆಕ್ಕಹಾಕಿದರೆ! ಪಾಂಡವರು ಹಾಗೆ ಲೆಕ್ಕ ಹಾಕಿರಬೇಕೆಂದು ಅನಿಸುತ್ತದೆ. ಗೋಗ್ರಹಣದ ಸಂದರ್ಭದಲ್ಲಿ ಅಧಿಕಮಾಸದ ಲೆಕ್ಕಾಚಾರವನ್ನು ಭೀಷ್ಮರು ಮಾತ್ರವೇ ಮಾಡಿದ್ದಲ್ಲ, ಪಾಂಡವರೂ ಲೆಕ್ಕ ಹಾಕಿರಬೇಕು. ಅವಧಿತೀರಲಿ ಮೇಣು ಮಾಣಲಿ ಎಂದು ಧರ್ಮರಾಯ ಹೇಳಿದರೂ ತುರುಗೋಳಿನ ಸುದ್ದಿಕೇಳಿದ ಬಳಿಕ ಉದಕವನ್ನು ಸಹ ತೆಗೆದುಕೊಳ್ಳಲಾರೆನು. ವಿರಾಟನ ಆಪತ್ತಿನಲ್ಲಿ ನೆರವಾಗಬೇಕೆಂದು ತಮ್ಮಂದಿರಿಗೆ ಹೇಳಿ ತಾನೂ ಸಿದ್ಧನಾಗುತ್ತಾನೆ.  ಆತನ ಆದೇಶದ ಮೇರೆಗೆ ಬೃಹನ್ನಳೆ ಯುದ್ಧವೀರನಾಗಿ ಮೆರೆಯಲು ಮುಂದಾಗುತ್ತಾನೆ. ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ ಧರ್ಮರಾಯನಂತೂ ಲೆಕ್ಕ ಹಾಕಿದ್ದ ಎನಿಸುತ್ತದೆ.

ಕುಮಾರವ್ಯಾಸನ ಉತ್ತರನ ಪಾತ್ರದ ಬಗ್ಗೆ ಬಹಳಷ್ಟು ಲೇಖನಗಳು ವಿಮರ್ಶೆಗಳು ಬಂದಿವೆ. ಉತ್ತರನ ಪಾತ್ರದಲ್ಲಿ ಕೇವಲ ಹಾಸ್ಯವನ್ನು ನೋಡದೆ ಪೂರ್ವೋತ್ತರಗಳೆರಡನ್ನೂ ನೋಡಬೇಕಾಗುತ್ತದೆ. ಉತ್ತರ ಎಂಬ ಶಬ್ದಕ್ಕೆ ದಾಟು ಎಂಬ ಅರ್ಥವೂ ಇದೆ. ರಣರಂಗದಲ್ಲಿ ಆತ ಭ್ರಮೆಯನ್ನು ಕಳಚಿಕೊಂಡು “ಸ್ವ”ದ ಅರಿವನ್ನು ಪಡೆಯುವುದು ಒಂದು ದಾಟುವಿಕೆಯೇ ಸರಿ. ಉತ್ತರನು ತಾನು ಕಲಿಯೆಂದು ಬಗೆದಿದ್ದ. ಆದರೆ ತಾನೇನೆಂಬ ನಿಜ ಉತ್ತರನಿಗೆ ಅರಿವಾದ ಬಳಿಕ ಅರ್ಜುನ ಆತನನ್ನು “ಕಲಿಮಾಡಿ” ಸಾರಥಿಯನ್ನಾಗಿಸಿ ತಾನು ಯುದ್ಧ ಮಾಡುತ್ತಾನೆ. ಈ “ಕಲಿ ಮಾಡಿದ್ದು” ತಾತ್ಕಾಲಿಕವಾಗಿರದೆ ಮುಂದೆ ಮಹಾಭಾರತದಲ್ಲಿ ಆತ ಹೋರಾಡಿ ವೀರಮರಣವನ್ನಪ್ಪಿದ ವಿಚಾರ ಬರುತ್ತದೆ. ಅರ್ಜುನನ ಸಾರಥಿಯಾಗಿ ಕೌರವ ವೀರರನ್ನು ಗೆಲ್ಲಲು ಸಹಕರಿಸಿದ ಬಳಿಕ ಹಿಂದಿರುಗುವ ಉತ್ತರ ಹೆಂಗಳೆಯರ ಮುಂದೆ ಪೌರುಷವನ್ನು ಕೊಚ್ಚಿಕೊಂಡ ಆ ಉತ್ತರನಲ್ಲ. ಆತ ಹೊಗಳುಭಟರನ್ನು ನಿವಾರಿಸುತ್ತಾನೆ. ವೀರೋಚಿತ ಸ್ವಾಗತ ಅವನಿಗೆ ರುಚಿಸುವುದಿಲ್ಲ. ಉತ್ತರಕುಮಾರ ಮತ್ತು ಅಭಿಮನ್ಯು (ವಿರಾಟ ಪರ್ವದಲ್ಲಿ ಮದುವಣಿಗನಾಗಿ ಆತನ ಪ್ರವೇಶವಾಗುತ್ತದೆ.) -ಇವರಲ್ಲಿ ಹೇಡಿತನದ ಮತ್ತು ವೀರತೆಯ ಪರಾಕಾಷ್ಠೆಯ ಎರಡು ಮಾದರಿಗಳನ್ನು ನೀಡುವ ಕುಮಾರವ್ಯಾಸನಿಗೆ ವ್ಯಕ್ತಿ ಸ್ವಧರ್ಮವನ್ನು ಬೆಳಗುವ ಹಾಗೂ ನಿರಾಕರಿಸುವ ಪ್ರತ್ಯೇಕ ಕ್ರಿಯೆಗಳ ಅಂತರವನ್ನು ಮನಗಾಣಿಸುವುದು ಮುಖ್ಯವಾಗುತ್ತದೆ.

ವಿರಾಟನಿಗೆ ಗೋಗ್ರಹಣಯುದ್ಧದಲ್ಲಿ ಜಯವನ್ನು ತಂದಿತ್ತ ಪಾಂಡವರು ಮರುದಿನ ಆತನ ಸಿಂಹಾಸನವನ್ನು ಏರಿ ಸ್ವಧರ್ಮದಿಂದ, ರಾಜತೇಜದಿಂದ- ಬೆಳಗುವ ಬಗೆಯನ್ನು ಕುಮಾರವ್ಯಾಸ ವರ್ಣಿಸಿದ ಬಗೆ ಬಲುಸೊಗಸು. ಅವರ ಮಜ್ಜನವನ್ನು, ಅಲಂಕಾರವನ್ನು ಪ್ರತ್ಯೇಕವಾಗಿ ಬಣ್ಣಿಸಿದ್ದು ಅರ್ಥಪೂರ್ಣ.

ತಮದ ಗಂಟಲನೊಡೆದು ಮೂಡುವ

ದ್ಯುಮಣಿ ಮಂಡಲದಂತೆ ಜೀವ

ಭ್ರಮೆಯ ಕವಚವ ಕಳೆದು ಹೊಳೆಹೊಳೆವಾತ್ಮನಂದದಲಿ

ವಿಮಳ ಬಹುಳಕ್ಷತ್ರರಶ್ಮಿಗ

ಳಮಮ ದೆಸೆಗಳ ಬೆಳಗೆ ರಾಜೋ

ತ್ತಮ ಯುಧಿಷ್ಠಿರ ದೇವನೆಸೆದನು ರಾಜ ತೇಜದಲಿ

ಎಂಬ ಈ ಪದ್ಯವನ್ನು ಗಮನಿಸಿ. ಕೃಷ್ಣನ ಪ್ರತ್ಯಕ್ಷ ನೆರವು ಇಲ್ಲದಿದ್ದಾಗಲೂ ಸಮಸ್ಯೆಗಳನ್ನು ಎದುರಿಸಿ ಗೋಗ್ರಹಣ ಯುದ್ಧದಲ್ಲಿ ಪಾಂಡವರು ವಿಜಯಿಗಳಾಗಿ ಮುಂದಣ ಮಹಾಭಾರತ ಯುದ್ಧದ ಗೆಲುವಿಗೆ ಮುನ್ನುಡಿಯನ್ನು ಬರೆಯುವುದು ವಿರಾಟ ಪರ್ವದ ಮಹತ್ವದ ಘಟನೆ. ಇನ್ನೊಂದು ವಿಚಾರವೆಂದರೆ ಕರ್ನಾಟಕದ ಕೆಲವು ಭಾಗಗಳಲ್ಲಿ ವಿರಾಟಪರ್ವವು ಜನಪ್ರಿಯವಾಗಿದ್ದು ಅದನ್ನು ಓದಿದರೆ ಮಳೆ ಬರುತ್ತದೆಯೆಂಬ ಪ್ರತೀತಿಯಿದೆಯಂತೆ. ಸಕಾಲದಲ್ಲಿ ಮಳೆ ಬಾರದಿದ್ದಾಗ ವಿರಾಟಪರ್ವವನ್ನು ಓದಿಸುವ ರೂಢಿ ಉಂಟಂತೆ. ಕ್ಷತ್ರಿಯರಾದ ಪಾಂಡವರು ಆಳುಗಳಾಗಿ ದುಡಿದ ಕಥೆಯನ್ನು, ಅಂತಿಮವಾಗಿ ಆ ಊಳಿಗದ ಬದುಕಿನಿಂದ ಬಿಡುಗಡೆಯನ್ನು ಪಡೆಯುವ ಕಥೆಯನ್ನು ಕೇಳುವುದೆಂದರೆ ಸಾಮಾನ್ಯರಿಗೆ ಇಷ್ಟವಾಗುವುದರಲ್ಲಿ ವಿಶೇಷವೇನೂ ಇಲ್ಲ ಎನಿಸುತ್ತದೆ. ಯಾಕೆಂದರೆ ಅದು ಅವರ ಬದುಕಿನ ಬವಣೆಯು ಕೊನೆಗೊಳ್ಳುವುದೆಂಬ ಭರವಸೆ (ಅದು ಹುಸಿಯೇ ಆಗಿರಬಹುದು)ಯನ್ನು ಹೊತ್ತಕಥೆ.

*ಲೇಖಕರು ಕನ್ನಡ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಎಂ.ಎ. ಹಾಗೂ ಪಿ.ಎಚ್.ಡಿ. ಮಾಡಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹಲವು ಕೃತಿಗಳು ಪ್ರಕಟಗೊಂಡಿವೆ.

Leave a Reply

Your email address will not be published.