ಕುಮಾರಸ್ವಾಮಿ ಮಂಡಿಸಿದ 19-20ರ ರಾಜ್ಯ ಮುಂಗಡ ಪತ್ರ ಬೆಂಗಳೂರಿನ ಪ್ರಾಮುಖ್ಯತೆ ಅರಿತ ಬಜೆಟ್

ಕಳೆದ ಆರೆಂಟು ತಿಂಗಳುಗಳಲ್ಲಿ ವಿಧಾನ-ವಿಕಾಸ ಸೌಧಗಳ ಕಾರಿಡಾರಿನಲ್ಲಿ ಕಂಗಾಲು ವಾತಾವರಣ ಕಂಡುಬಂದಿತ್ತು. ಈ ಸರ್ಕಾರ ಇರುವುದೋ ಇಲ್ಲವೋ ಎಂಬ ಗಾಭರಿಯ ಜೊತೆಗೆ, ಈ ಸರ್ಕಾರದಲ್ಲಿ ಯಾವುದೇ ಕೆಲಸವಾಗುತ್ತಿಲ್ಲ ಹಾಗೂ ಯಾವುದೇ ಕೆಲಸಕ್ಕೆ ಹಣ ಬಿಡುಗಢೆ ಆಗುತ್ತಿಲ್ಲ ಎಂಬ ಅಳಲು ಎಲ್ಲರದ್ದಾಗಿತ್ತು. ಕುಮಾರಸ್ವಾಮಿಯವರ ಬಜೆಟ್ ಓದಿದ ಮೇಲೆ ಏಕೆ ಈ ಸರ್ಕಾರದ ಬಳಿ ಹಣಕ್ಕೆ ಈ ಪಾಟಿ ಮುಗ್ಗಟ್ಟು ಆಗಿದೆಯೆಂದು ಸ್ವಲ್ಪ ನಿಮಗೂ ಗೊತ್ತಾಗಬಹುದು.

ಮೊದಲಿಗೆ ಬಜೆಟ್‍ನ ಕೆಲವು ಗುಣಾತ್ಮಕ ಅಂಶಗಳನ್ನು ಗುರುತಿಸೋಣ. ಏನಿಲ್ಲವೆಂದರೂ ಈ ಮುಖ್ಯಮಂತ್ರಿ ಬೆಂಗಳೂರಿನ ಕೆಲವು ಮೂಲಭೂತ ಅಗತ್ಯಗಳನ್ನು ಗುರುತಿಸಲು ಸಮರ್ಥರಿದ್ದಾರೆ. ಸಿದ್ದರಾಮಯ್ಯನವರಿಗೆ ಅರ್ಥವಾಗದ ಅಥವಾ ಅವರ ತುರ್ತು ಗಮನಕ್ಕೆ ಬಾರದ ಬೆಂಗಳೂರಿನ ಕನಿಷ್ಠ ಆವಶ್ಯಕತೆಗಳಿಗೆ ಹಣ ನೀಡಲು ಕುಮಾರಸ್ವಾಮಿ ಮುಂದಾಗಿದ್ದಾರೆ.

•  ಸಿಲ್ಕ್‍ಬೋರ್ಡ್ ಜಂಕ್ಷನ್‍ನಿಂದ ಕೆ.ಆರ್.ಪುರಂ-ಹೆಬ್ಬಾಳ ಮಾರ್ಗವಾಗಿ ಔಟರ್ ರಿಂಗ್ ರೋಡ್-ಹೊಸ ಏರ್‍ಪೋರ್ಟ್ ರಸ್ತೆಯ ಅಭಿವೃದ್ಧಿಗೆ ಒಟ್ಟು ರೂ.16,579 ಕೋಟಿ.

•  ಪೆರಿಫೆರಲ್ ರಿಂಗ್ ರಸ್ತೆಯ ಅಭಿವೃದ್ಧಿಗೆ ಒಟ್ಟು ರೂ.17,200 ಕೋಟಿ. ಈ ವರ್ಷದಲ್ಲಿ ರೂ.1,000 ಕೋಟಿ.

•  ಬೆಂಗಳೂರಿಗೆ ನೀರು ತರುವ ಕಾವೇರಿ ಐದನೇ ಹಂತದ ಯೋಜನೆಗೆ ಚಾಲನೆ. ಈ ವರ್ಷದಲ್ಲಿ ರೂ.500 ಕೋಟಿ.

•  ಬೆಂಗಳೂರಿನ ಸಬ್-ಅರ್ಬನ್ ರೈಲು ಯೋಜನೆಗೆ ಒಟ್ಟು ರೂ.23,093 ಕೋಟಿ.

•  ಬೆಂಗಳೂರಿನ ಆರು ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಯೋಜನೆಗಳ ಒಟ್ಟು ರೂ.8,075 ಕೋಟಿ ರೂಗಳ ಕ್ರಿಯಾಯೋಜನೆ. ಈ ವರ್ಷಕ್ಕೆ ರೂ.2,300 ಕೋಟಿ ಬಿಡುಗಡೆ.

•  ಬೆಂಗಳೂರಿನಲ್ಲಿ 50 ಕಿಮೀ ರಸ್ತೆ ಪಾದಚಾರಿ ಸ್ನೇಹಿ ಮಾಡಲು ಹಣ ಬಿಡುಗಡೆ.

•  ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಮೆಟ್ರೋ ಸೇವೆ ಸಾಧ್ಯತೆಯ ಪರಿಶೀಲನೆಗೆ ವರದಿ ಇತ್ಯಾದಿ.

ಜೊತೆಗೆ ಬೆಂಗಳೂರು ಅಭಿವೃದ್ಧಿಗೆ ಪೂರಕ ಇನ್ನೂ ಹಲವು ಯೋಜನೆಗಳನ್ನು ಕುಮಾರಸ್ವಾಮಿ ಹೆಸರಿಸಿದ್ದಾರೆ. ಇದು ಶ್ಲಾಘನೀಯ. ದಕ್ಷಿಣ ಕರ್ನಾಟಕದಲ್ಲಿ ನದಿ ಮೂಲಗಳಿಂದ ನೀರೆತ್ತಿ ಹತ್ತಾರು ಕೆರೆ-ಕುಂಟೆಗಳಿಗೆ ನೀರು ತುಂಬಿಸುವ ಸಣ್ಣ ನೀರಾವರಿ ಯೋಜನೆಗಳಿಗೂ ನೀರು ನೀಡಿದ್ದಾರೆ. ಹಾಸನ, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಕುಡಿಯುವ ನೀರು ಯೋಜನೆಗಳಿಗೆ ಹಾಗೂ ನಗರಾಭಿವೃದ್ಧಿಗೂ ಹಣ ಮೀಸಲು ಇಟ್ಟಿದ್ದಾರೆ. ಎತ್ತಿನಹೊಳೆ ಯೋಜನೆಯಡಿ ಕುಡಿಯುವ ನೀರು ಪೂರೈಕೆಯನ್ನು ಹಾಸನ ಜಿಲ್ಲೆಗೂ ವಿಸ್ತರಿಸಿ ಈ ಯೋಜನೆಯ ಅನುಷ್ಠಾನವನ್ನು ಮತ್ತೊಮ್ಮೆ ಖಾತ್ರಿ ಮಾಡಿದ್ದಾರೆ. ಈ ಯೋಜನೆಗಳೆಲ್ಲದರ ಅನಿಷ್ಠಾನದಲ್ಲಿ ತಮ್ಮ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆಲ್ಲಾ ಸಾಕಷ್ಟು ಅನುದಾನ ಬಿಡುಗಡೆಯನ್ನೂ ಖಚಿತ ಮಾಡಿಕೊಂಡಿದ್ದಾರೆ.

ಟೇಬಲ್-1

ವಾರ್ಷಿಕ ಹಣಕಾಸಿನ ಮೂಲಗಳು ಮತ್ತು ಅದರ ಅನ್ವಯಿಸುವಿಕೆ / ಕ್ಯಾಪಿಟಲ್-ರೆವಿನ್ಯೂ ವಿಂಗಡಣೆ / ಕೋಟಿ ರೂ ಗಳಲ್ಲಿ.

     ವಿವರಗಳು           17-18    ಸುಧಾರಿತಅಂದಾಜು           17-18
          ಅಂತಿಮ
         18-19
  ಬಜೆಟ್ ಅಂದಾಜು
          18-19
  ಸುಧಾರಿತ ಅಂದಾಜು
       19-20
 ಬಜೆಟ್ ಅಂದಾಜು  
ಹಣಕಾಸಿನ ಮೂಲಗಳು
ರೆವಿನ್ಯೂ ಆದಾಯ/ಜಮೆಗಳು     1,46,032      1,46,999    1,62,764    1,65,896   1,81,862
ಸಾಲ ಮತ್ತು ಮುಂಗಡ ವಸೂಲಾತಿ         62           137         129         129         194
ಇತರೆ ಕ್ಯಾಪಿಟಲ್ ಜಮೆಗಳು         75           4         75          75          80
ಸಾರ್ವಜನಿಕ ಸಾಲ/ಋಣ       28,916        16,852      28,242      34,943     38,636
ನಿವ್ವಳ ಸಾರ್ವಜನಿಕ ಲೆಕ್ಕದಲ್ಲಿ ಋಣ        6,156       14,872        6,652       4,326        2,901
          ಒಟ್ಟು     1,81,252     1,78,865    1,97,863    2,05,376      2,23,680
ಹಣಕಾಸಿನ ಅನ್ವಯಿಸುವಿಕೆ
ರೆವಿನ್ಯೂ ವೆಚ್ಚ      1,45,649      1,42,482     1,62,637       1,65,702     1,81,605
ಅಭಿವೃದ್ಧಿ /ಇತರೆ ಕಾರ್ಯಕ್ಕೆ ಸಾಲ          4,623      5,092        5,766       4,644       2,503
ಕ್ಯಾಪಿಟಲ್ ವೆಚ್ಚ         31,230      30,666      29,691      35,920     40,080
ಕ್ಯಾಶ್ ಬ್ಯಾಲೆನ್ಸ್‍ನಲ್ಲಿ ಹೆಚ್ಚಳ /ಕಡಿತ        -251         623       -231      -897        -513
           ಒಟ್ಟು     1,81,252    1,78,865      1,97,863     2,05,376    2,23,680

 

ಟೇಬಲ್-2

ಒಟ್ಟು ಸಾಲಗಳ ಮತ್ತು ದಾಯಿತ್ವದ ನಿರೂಪಣೆ / ಕೋಟಿ ರೂ ಗಳಲ್ಲಿ

ಸಾಲ / ದಾಯಿತ್ವಗಳು            17-18
 ಸುಧಾರಿತ ಅಂದಾಜು
    17-18
    ಅಂತಿಮ
       18-19
 ಬಜೆಟ್ ಅಂದಾಜು
        18-19
ಸುಧಾರಿತ ಅಂದಾಜು
      19-20
ಬಜೆಟ್ ಅಂದಾಜು
ಕೇಂದ್ರ ಸರ್ಕಾರಕ್ಕೆ ಬಾಕಿ    14,381    14,554     15,240    14,308    14,264
ಮುಕ್ತ ಮಾರುಕಟ್ಟೆ ಸಾಲಗಳು    1,37,780   1,25,707    1,66,680   1,62,021   2,02,148
ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಸಾಲಗಳು     23,037     22,873     31,240    31,059    34,508
ಒಟ್ಟು ಸಾರ್ವಜನಿಕ ಸಾಲಗಳು    1,75,199   1,63,135    2,03,441   1,98,079   2,36,715
ರಾಜ್ಯ ಭವಿಷ್ಯ ನಿಧಿಗಳಿಗೆ ದಾಯಿತ್ವ       27,914    27,729    31,240   31,059    34,508
ಬಡ್ಡಿ ಸಹಿತ ಠೇವಣಿ / ಋಣಗಳು        1,578       382     1578       382       385
ಬಡ್ಡಿ ರಹಿತ ಋಣಗಳು / ಮೀಸಲು ನಿಧಿಗಳು      34,084      41,809     34,889     40,280     37,209
ಟ್ಟು ದಾಯಿತ್ವಗಳು        63,578     69,922     67,701     71,719     72,104
ಸಾಲಗಳ / ದಾಯಿತ್ವದ ಒಟ್ಟು ಮೊತ್ತ    2,38,778   2,33,057     2,71,143    2,69,798   3,08,819

 

ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಯವ್ಯಯ ರಚನೆ ಹಾಗೂ ಮಂಡನೆಯ ಪ್ರಕ್ರಿಯೆಯನ್ನೇ ಒಂದು ಅರ್ಥರಹಿತ ಅಭ್ಯಾಸವನ್ನಾಗಿ ಮಾಡಿದ್ದರೆ. ಬಜೆಟ್ ಪತ್ರದಲ್ಲಿ ಸರ್ಕಾರದ ನಿರ್ದಿಷ್ಟ ಹಾಗೂ ದೀರ್ಘಾವಧಿ ಗೊತ್ತುಗುರಿಗಳ ಪ್ರಸ್ತಾಪವಿಲ್ಲ. ಕರ್ನಾಟಕದ ನಗರಾಭಿವೃದ್ಧಿ, ನೀರಾವರಿ ಅಥವಾ ಶಿಕ್ಷಣ-ಆರೋಗ್ಯ-ಉದ್ಯೋಗ ಸಮಸ್ಯೆಗಳ ಬಗ್ಗೆ ಯಾವುದೇ ದೂರದರ್ಶಿ ಗುರಿಯಿಲ್ಲ. ಸರ್ಕಾರದ ಆದಾಯ-ವೆಚ್ಚಗಳ ಬಗ್ಗೆಯಾಗಲೀ ಅಥವಾ ಆಸ್ತಿ-ದಾಯಿತ್ವಗಳ ಬಗ್ಗೆ ಜವಾಬ್ದಾರಿಯುತ ಹೇಳಿಕೆಗಳಿಲ್ಲ. ಕೊರತೆ, ಸಾಲ, ಎಸ್‍ಜಿಡಿಪಿ, ಋಣ, ದಾಯಿತ್ವ, ಆರ್ಥಿಕ ಶಿಸ್ತು ಮತ್ತಿತರ ಪದಗಳನ್ನು ಅರ್ಥ ಆಡಿಕೊಳ್ಳುವ ಗೋಜಿಗೇ ಹೋದಂತಿಲ್ಲ. ನಿಜಕ್ಕೂ ಹೇಳಬೇಕೆಂದರೆ ಈ ಗಹನ ವಿಷಯಗಳ ಬಗ್ಗೆ ಆರೇಳು ಪುಟಗಳ ಹೊರತಾಗಿ ಯಾವುದೇ ಉಲ್ಲೇಖವಿಲ್ಲ. ಸುದೀರ್ಘ 150 ಪುಟಗಳ ಬಜೆಟ್ ಭಾಷóಣದಲ್ಲಿ ಕರ್ನಾಟಕದ ಛಪ್ಪನ್ನೈವತ್ತಾರು ಪಿಂಜರಾಪೋಲು ಮಠ-ಮಾನ್ಯರಿಗೆ ನೀಡಿದ ಕೊಡುಗೆಗಳ ವಿವರಗಳ ಜೊತೆಗೆ ಜೆಡಿಎಸ್ ಶಾಸಕರ ಕ್ಷೇತ್ರಗಳ ಬೇಡಿಕೆಗನ್ವಯ ನೀಡಿರುವ ಸಣ್ಣಪುಟ್ಟ ಅನುದಾನದ ದಾಖಲೆಯಿದೆ. ಒಟ್ಟಾರೆ ಹೇಳಬೇಕೆಂದರೆ ರಾಜ್ಯ ಬಜೆಟ್ ಮಂಡನೆ ಯಾವುದೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಡಿಸಿದ ವಾರ್ಷಿಕ ವರದಿಯಂತಿದೆ. ಯಾರೋ ಬರೆದುಕೊಟ್ಟ ಭಾಷಣವನ್ನು ಓದಿಮುಗಿಸಿದರೆ ಸಾಕೆಂಬ ತರದಲ್ಲಿದೆ.

ಸರ್ಕಾರದ ಸಾಲವನ್ನು ರಾಜ್ಯ ಜಿಡಿಪಿಯ ಅನುಪಾತದಲ್ಲಿ ಸಮರ್ಥಿಸಿಕೊಳ್ಳುವುದು ಎಷ್ಟು ಸಮಂಜಸ ಎಂದು ನಾವು ಪ್ರಶ್ನೆ ಮಾಡಬೇಕಿದೆ.

ಈ ಲೇಖನದೊಂದಿಗಿನ ಕೋಷ್ಟಕಗಳನ್ನು ನೋಡಿ. ರಾಜ್ಯ ತೆರಿಗೆ ಸಂಗ್ರಹದಲ್ಲಿ 12,000 ಕೋಟಿ ಹಾಗೂ ಕೇಂದ್ರ ತೆರಿಗೆ ಪಾಲಿನಲ್ಲಿ 3,000 ಕೋಟಿ ರೂಗಳ ಹೆಚ್ಚಳದ ಭರವಸೆಯಲ್ಲಿ ಬಜೆಟ್ ಗಾತ್ರ ಹಿಗ್ಗಿದೆ. ಮೀಸಲಿಟ್ಟಿರುವ ರೂ.40,080 ಕ್ಯಾಪಿಟಲ್ ವೆಚ್ಚದಲ್ಲಿ ರೂ.12,000 ಸಾನ ಮನ್ನಾ ನಿಗದಿತ ಹಣವನ್ನು ತೆಗೆದಿಟ್ಟರೆ, ಕಳೆದ ವರ್ಷಕ್ಕೆ ಹೋಲಿಕೆಯಲ್ಲಿಯೂ ಕೂಡಾ ಈ ವರ್ಷ ಕಡಿಮೆ ಕ್ಯಾಪಿಟಲ್ ಖರ್ಚು ಮಾಡುವ ಉದ್ದೇಶವಿದೆ. ಈ ನಿವ್ವಳ ರೂ.28,000 ಕ್ಯಾಪಿಟಲ್ ಖರ್ಚಿಗೆ ಹಣ ಹೊಂದಿಸಲು ಕಳೆದ ವರ್ಷಕ್ಕಿಂತ (ರೂ.38,919) ರೂ 41,537 ಹೆಚ್ಚು ಸಾಲ ಮಾಡುವ ಯೋಜನೆಯಿದೆ. ಸಾಲದ ಮೇಲಿನ ಬಡ್ಡಿಯ ಮೊತ್ತ ರೂ.19,060 ಆಗಲಿದೆ. ರಾಜ್ಯದ ಒಟ್ಟು ಸಾಲ/ದಾಯಿತ್ವ ದಾಖಲೆಯ ರೂ.3,08,819 ದಾಟುವ ನಿರೀಕ್ಷೆಯೂ ಇದೆ.

ರಾಜ್ಯದ ಸಾಲ ಹೆಚ್ಚಾಗಿಲ್ಲ ಎನ್ನುವ ಬಗ್ಗೆ ಬಜೆಟ್‍ನಲ್ಲಿ ಸಮಜಾಯಿಷಿ ಒಂದಿದೆ. ಈ ವರ್ಷದ ಸಾಲ ರಾಜ್ಯ ಜಿಡಿಪಿಯ ಶೇಕಡಾ 3ಕ್ಕಿಂತ ಕಡಿಮೆ ಹಾಗೂ ಒಟ್ಟು ಸಾಲ ರಾಜ್ಯ ಜಿಡಿಪಿಯ ಶೇಕಡಾ 20ಕ್ಕಿಂತ ಕಡಿಮೆಯಿದ್ದು ಇದು ಆರ್ಥಿಕ ಶಿಸ್ತು ಹಾಗೂ ಹೊಣೆಗಾರಿಕೆಗೆ ಬದ್ಧವಾಗಿದೆ ಎಂದು ಹೇಳಲಾಗಿದೆ. ಆದರೆ ಸಾಲ ಮತ್ತು ಬಡ್ಡಿಯ ಮೊತ್ತಗಳು ನೈಜ ಸಂಖ್ಯೆಗಳಾದರೆ, ರಾಜ್ಯಜಿಡಿಪಿ ಲೆಕ್ಕಾಚಾರವು ಅಂದಾಜಿನದ್ದು. ಮೇಲಾಗಿ ಐಟಿ/ಬಿಟಿ/ಸೇವಾಕ್ಷೇತ್ರದಲ್ಲಿ ಮಾತ್ರ ಮುಂದಿರುವ ರಾಜ್ಯ ಆರ್ಥಿಕತೆಯು ಸಮತೋಲನ ಕಳೆದುಕೊಂಡಿದೆ. ಈ ವಲಯಗಳಿಂದ ರಾಜ್ಯಕ್ಕೆ ಬರುವ ತೆರಿಗೆ ಆದಾಯ ಅತ್ಯಲ್ಪ. ಆದರೆ ಈ ಕ್ಷೇತ್ರಗಳಿಗೆ ಬೇಕಿರುವ ಹೂಡಿಕೆ ಅಗಾಧವಾಗಿದೆ. ಹೀಗಾಗಿ ಸರ್ಕಾರದ ಸಾಲವನ್ನು ರಾಜ್ಯ ಜಿಡಿಪಿಯ ಅನುಪಾತದಲ್ಲಿ ಸಮರ್ಥಿಸಿಕೊಳ್ಳುವುದು ಎಷ್ಟು ಸಮಂಜಸ ಎಂದು ನಾವು ಪ್ರಶ್ನೆ ಮಾಡಬೇಕಿದೆ.

-ಪುರುಷೋತ್ತಮ ಆಲದಹಳ್ಳಿ

Leave a Reply

Your email address will not be published.