ಕುರಿ ಕಾಮೇಗೌಡ ಕಟ್ಟೆ ಕಟ್ಟಿ ಕೆಟ್ಟರೇ..?

ಕುಂದನಿ ಬೆಟ್ಟ ಒಂದು ಪರಿಸರ ಪಾಠಶಾಲೆ ಇದ್ದಂತೆ. ಅಲ್ಲಿ ಹೋಗಿಯೇ ಕಾಮೇಗೌಡರ ಜೀವ-ಪರಿಸರ ಕಾಳಜಿಯ ಮಹತ್ವ ತಿಳಿಯಬೇಕು.

ಮಂಡ್ಯ ಜಿಲ್ಲೆ ದಾಸನಕೊಪ್ಪಲಿನ ಕಲ್ಲುಗುಡ್ಡದಲ್ಲಿ ಮೂಕಜೀವಿಗಳ ದಾಹ ತಣಿಸಲೆಂದು ಕಟ್ಟೆಗಳನ್ನು ತೋಡಿಸಿದ ಕಾಮೇಗೌಡ ಎಂಬ ಸಾಧಾರಣ ಕುರಿಯಜ್ಜನ ಬಗೆಗೆ ಅದೇ ಊರಿನ ‘ಉದಾರಿ’ ಹಿತಾಸಕ್ತರು ದೊಡ್ಡ ರಾದ್ಧಾಂತ ಮಾಡಿ ರಾಜ್ಯ ಮಟ್ಟದಲ್ಲಿ ಹೆಸರಾಗ ಹೊರಟಿದ್ದಾರೆ. ಚಾನಲ್ ಒಂದರಲ್ಲಿ ಜೋರು ದನಿಯಲ್ಲಿ ದೂರಿದ ಊರಿನ ಕೆಲ ಮಹನೀಯರು ಹಾಗೂ ಮಹಿಳೆಯರು ಕಾಮೇಗೌಡರ ಮೇಲೆ ಹೊರೆಸಿದ ಆರೋಪಗಳು:  

  • ಅವನು ಕಟ್ಟೆಗೇಂತ ಮಣ್ಣೆಲ್ಲಾ ಕೆರೆಸಿ ನಮ್ಮ ಆಡೂ ಕುರಿ ಮೇಯಾಕೆ ಜಾಗ ಇಲ್ಲದಂಗೆ ಮಾಡಿದ.
  • ಅವನು ಒಂದು ಕೆರೇನೂ ಮಾಡಿಲ್ಲ. ಎಲ್ಲಾ ಮೊದಲೇ ಇದ್ದೋವು.
  • ಮಾಡಿರೋವು 7-8 ಅಷ್ಟೆ; ಅವು ಕೆರೆ ಅಲ್ಲ, ಕಟ್ಟೆಗಳು ಮಾತ್ರ.
  • 2000 ಮರ ಹಾಕಿದ್ದೀನಿ ಅಂದವನೆ, ಸುಳ್ಳುಗಾರ; ಒಂದಿನ್ನೂರು ಇರಬಹುದು ಅಷ್ಟೇ.
  • ನಾವು ಗುಡ್ಡಕ್ಕೋದರೆ ಬಾಯಿಗೆ ಬಂದಂಗೆ ಬಯ್ತಾನೆ.
  • ತನ್ನ ಅಪ್ಪಅಮ್ಮ ಸತ್ತಾಗೇ ನೋಡಾಕೆ ಹೋಗಲಿಲ್ಲ; ಜನಕ್ಕೆ ಏನುಪಕಾರ ಮಾಡಿಯಾನು?
  • ಪತ್ರಿಕೇಲಿ ಬರೆದೋರು ಊರಲ್ಲಿ ನಮ್ಮನ್ನ ಕೇಳಿಲ್ಲ.

ಇವೆಲ್ಲಾ ಕೇವಲ ಕುತ್ಸಿತ ಟೀಕೆಗಳೆಂದು ವಿವೇಚನೆ ಇರೋ ಯಾರಿಗಾದರೂ ಅನ್ನಿಸುತ್ತದೆ. ಹಳೇ ಕಟ್ಟೆಗೇ ಬಿಲ್ಲು ಮಾಡಿ ಹಣ ಹೊಡೆಯೋಕೆ ಅವನೇನು ಅಂಥಾ ಕಸುಬಿನಲ್ಲಿ ಜೀವನ ಮಾಡೋ ವ್ಯಕ್ತಿನಾ? ಆತ ಮಾಡಿದ್ದು 15-20 ಬೇಡ, 10 ಇದ್ದರೂ ಅದು ದೊಡ್ಡ ಕೆಲಸ ಅಲ್ಲವೇ? ಸಾಮಾನ್ಯವಾಗಿ ದೊಡ್ಡ ಹೊಂಡಗಳನ್ನೂ ಕೆರೆ ಎಂದೇ ಹೇಳಿಕೊಳ್ಳುವುದುಂಟು. ಆತ ಮಾಡಿದ್ದರಲ್ಲಿ ಕೆಲವೆಡೆ ಹೊಂಡಗಳಿವೆ, ಜಾಗ ಇದ್ದಲ್ಲಿ ದೊಡ್ಡ ಕಟ್ಟೆಗಳಾಗಿವೆ. ಯಾರೋ ಕೆರೆ ಎಂದು ಬರೆದಿದ್ದರೆ, ಸಂಖ್ಯೆಯಲ್ಲಿ ವ್ಯತ್ಯಾಸಗಳಾಗಿದ್ದರೆ ಅದಕ್ಕೆಲ್ಲಾ ಆ ಕುರಿಗಾಹಿ ಹೊಣೆಯೇ?

ಹೊರಜಗತ್ತನ್ನು ಕಾಣದ, ಲೋಕೋಪಕಾರ, ಸಾಧನೆ ಎಂದರೇನೆಂಬುದರ ಅರಿವಿರದೆ, ವ್ಯಕ್ತಿಯ ದೊಡ್ಡಸ್ಥಿಕೆ,  ಲಾಭ ಅಷ್ಟೇ ನೋಡುವವರು,  ತಮ್ಮ ಮುಂದಿನ ಸಾಧಾರಣ ವ್ಯಕ್ತಿಗೆ ಹೀಗೇನೋ ದೊಡ್ಡ ಪ್ರಚಾರ ಬಂದಾಗ ತಲ್ಲಣಿಸುವುದು, ತಿರುಗಿ ಬೀಳುವುದು ತೀರಾ ಸಾಧಾರಣ. ಪುರಸ್ಕಾರ ಬಂದಾಗ ಸಾಲುಮರದ ತಿಮ್ಮಕ್ಕ ಸಹ ಹೀಗೇ ಅಳಲು ತೋಡಿಕೊಂಡಿದ್ದರು.

ನಾನು ಕಾಮೇಗೌಡರನ್ನು ನೋಡಬೇಕೆಂದಾಗ ಗುಡ್ಡದಲ್ಲಿ ಎಲ್ಲವರೋ, ಕುರಿ ಜತೆ ವಾಪಸು ಬರೋದೇ ಸಂಜೆಗೆ ಎಂದು ಜತೆಗಿದ್ದ ಎಂ.ಟಿ.ಶಿವಕುಮಾರ್ ತಡೆದಿದ್ದರು. ಈ ಅಜ್ಜನ ಬಾಯಿ ತುಸು ಜೋರು. ಹಿರಿತನ, ಕೆಲಸ ಮಾಡಿದ ಅಹಮಿಕೆ ಜೊತೆಗೆ ತನ್ನ ಸದುದ್ದೇಶದ ಕೆಲಸ ಕೆಲ ಕಾಲ ಉಳಿಯಬೇಕೆಂಬ ಸಹಜ ಕಾಳಜಿ ತನಗೆ ತೊಂದರೆ ಮಾಡುವವರ ವಿರುದ್ಧ ಒರಟಾಗಿ ಮಾತಾಡಿಸಿದ್ದರೆ ಅಚ್ಚರಿ ಏನಲ್ಲ.

ಕಾಮೇಗೌಡ ಸುಳ್ಳು ಮಾಹಿತಿ ನೀಡಿ ಪುರಸ್ಕಾರ ಪಡೆದಿದ್ದಾನೆ ಎನ್ನುವವರೂ ಒಂದು ಗಮನಿಸಬೇಕು- ಅವರು ತಾನಾಗಿ ಅರ್ಜಿ ಬರೆದು ಪುರಸ್ಕಾರ ಪಡೆದಿಲ್ಲ. ಇವರ ಮಾನವೀಯ ಕೆಲಸದ ಬಗ್ಗೆ ತಿಳಿದವರು ಬಂದು ನೋಡಿ, ಮಾತಾಡಿಸಿ, ಮೆಚ್ಚಿ ಅದು ಇತರರಿಗೂ ಸ್ಫೂರ್ತಿಯಾಗಲಿ, ನಮ್ಮ ಜಿಲ್ಲೆಗೂ ದೊಡ್ಡ ಹೆಸರು ತರಲಿ ಎಂದು ಪತ್ರಿಕೆಯಲ್ಲಿ ಬರೆದಿರುತ್ತಾರೆ. ಅದಾಗಿ ಕೆಲವು ವರ್ಷಗಳೇ ಸಂದಿವೆ. ಪ್ರಧಾನಿಯವರ ಮನ್ ಕೀ ಬಾತಲ್ಲಿ ಹೊಗಳಿಕೆ ಬಂದಾಕ್ಷಣವೇ ಊರ ಕೆಲವರಲ್ಲಿ ಅದು ಸುಳ್ಳು ಎಂದು ಕಿಡಿಯಾಗಿ ಸ್ಫೋಟಿಸಿದೆ!

ಕಾಮೇಗೌಡರು ಏನಾದರೂ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಅವರ ಬಗೆಗೆ ಬಂದಿರುವ ಚಿತ್ರ-ಲೇಖನ, ಪುಸ್ತಕ, ಸಾಕ್ಷ್ಯಚಿತ್ರಗಳನ್ನು ನೋಡಿ ತಿಳಿಯಬಹುದು. ಎಂ.ಟಿ.ಶಿವಕುಮಾರ್ ಹೇಳುವಂತೆ, ಅವರಂತಹವರು ಅಲ್ಲಿ ತೆಗೆದ ಚಿತ್ರಗಳಲ್ಲಿ ಅಂದಂದಿನ ವಾಸ್ತವದ ದಾಖಲೆಗಳಿರುತ್ತವೆ. ಯಾವುದೋ ಊರಿನ ಕೆರೆ ಕಟ್ಟೆ ತೋರಿಸಿ ಇದು ದಾಸನಕೊಪ್ಪಲಿನ ಗುಡ್ಡದ್ದು ಎಂದು ಹೇಳಲು ಆಗುವುದಿಲ್ಲವಲ್ಲ. ಇವರೇನೂ ರಾಜಕಾರಣಿಗಳೋ, ಮಹಾಸ್ವಾಮಿಗಳೋ, ಉದ್ದಿಮೆದಾರರೋ ಅಲ್ಲ, ಹಣ ಕೊಟ್ಟು ಪ್ರಚಾರ ಪಡೆಯೋಕೆ.

ಕಾಮೇಗೌಡರ ಬಗ್ಗೆ ಸಾಕ್ಷ್ಯಚಿತ್ರ ಮಾಡಿದ ಟಿ.ಕೆಂಪಣ್ಣಗೆ ಕುರಿಯಜ್ಜ ಹೇಳಿದ್ದು: ‘ಒಂದು ದಿನಕ್ಕಾನಾ ಒಂದು ಹಣ್ಣು ತಗೊಂಡು ತಿಂದ ಪಾಪಿ ಅಲ್ಲ, ನಾನು. ಸಂಪಾದಿಸಿದ್ದೆಲ್ಲಾ ಈ ಕಟ್ಟೆಗಳಿಗೆ ಖರ್ಚು ಮಾಡಿದೆ.’  ತನ್ನ ಫೋಟೋ ತೆಗೆಯಲು ಹತ್ತಿರ ಬಂದವಗೂ ಹೇಳಿದ್ದು: ‘ಅಯ್ಯಯ್ಯೋ ದೂರಾನೇ ನಿಲ್ಲಿ. ಸ್ನಾನ ಮಾಡಿ ವಾರ ಆಯಿತು; ಬಟ್ಟೆಯೆಲ್ಲಾ ಕಿಮಟ ಹತ್ತಿ ವಾಸನೆ ಹೊಡೀತಾವೆ.’ ಕುರಿ ಮಾರಿದ ಹಣದಲ್ಲಿ ಕಟ್ಟೆಗಳನ್ನು ಮಾಡಿಸ ಹೊರಟಾಗ ಜಗಳ ಮಾಡಿದ ಮನೆಯವರಿಗೆ ಹೇಳಿದ್ದು: ‘ನನ್ನ ಕುರಿ, ನನ್ನಿಷ್ಟ.’ ಮೊಮ್ಮಕ್ಕಳಿಗೆ ಹೇಳಿದ್ದೂ ಮಿಕ್ಕವರಿಗೆ ಮಾದರಿ: ‘ನಿಮಗೆ ದುಡ್ಡು ಕೊಡೊಲ್ಲ; ನಿಮ್ಮ ಹೆಸರಲ್ಲಿ ಒಂದೊಂದು ಕಟ್ಟೆ ಕಟ್ಟಿಸುತ್ತೇನೆ!’ ಹಾಗೇ ಕಟ್ಟೆಗಳಿಗೆ ಮೊಮ್ಮಕ್ಕಳ ಹೆಸರಿಟ್ಟಿದ್ದಾರೆ.

ಬೇಸಗೆಯ ಬಿರುಬಿಸಿಲಲ್ಲಿ ಏದುಸಿರು ಬಿಡುತ್ತಿದ್ದ ಕುರಿಗಳ ಕಂಡು ಕಾಮೇಗೌಡರಿಗೆ ಅನ್ನಿಸಿತಂತೆ: ‘ಬಾಯಾರಿತೆಂದು ನಾನೇನೋ ಮನೆಗೋಗಿ ನೀರು ಕುಡಿದೆ. ಆದರೆ ಮೂಕ ಜೀವಗಳು ಯಾರಿಗೆ ಕೇಳಬೇಕು!’ ಆ ಕ್ಷಣದಲ್ಲೇ ಅವರಿಗೆ ಅಂತಃಪ್ರೇರಣೆಯಾಯಿತು: ‘ಈ ಬೋಳು ಗುಡ್ಡದಲ್ಲಿ ಕಟ್ಟೆಗಳನ್ನು ಕಟ್ಟಬೇಕು; ಹರಿಯೋ ನೀರು ನಿಲ್ಲಿಸಿ ಸಕಲ ಜೀವಕ್ಕೆ ಉಣಿಸುವಂತಾಗಬೇಕು.’

ಕಾಮೇಗೌಡ ಅವರಂತಹವರು ಅಪರೂಪದ ಮನುಷ್ಯ ಮಾದರಿಗಳು; ನೆಲದ ಮರೆಯ ನಿಧಾನಗಳು. ಇವರನ್ನು ನಡೆದಾಡುವ ದೇವರು ಅನ್ನದಿದ್ದರೂ ಪರವಾಯಿಲ್ಲ, ನಿಜದ ಮನುಷ್ಯರು ಅಂದರೆ ಅದೇ ದೊಡ್ಡ ನೆಮ್ಮದಿ. ಇಷ್ಟಾಗಿಯೂ ಮಾಡಿದವರಿಗಿಂತ ಆಡಿಕೊಳ್ಳುವವರ ದನಿಯೇ ದೊಡ್ಡದಾದರೆ ಹೇಗೆ?

ಈ ಹಿಂದೆಯೇ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇತರ ಇಲಾಖಾಧಿಕಾರಿಗಳು ಪರಿಶೀಲಿಸಿ, ಊರವರೊಂದಿಗೂ ಮಾತನಾಡಿ, ದೂರಿನಲ್ಲಿ ಹುರುಳಿಲ್ಲ; ಅದು ತಪ್ಪು ಕಲ್ಪನೆಯಿಂದ ಆದದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಅರಣ್ಯ ಇಲಾಖೆ ಸಹ ಮೆಚ್ಚುಗೆ ಪತ್ರ ನೀಡಿದೆ.

ಕೆರೆ ಕಟ್ಟಿಸೋದು, ಮರ ಬೆಳೆಸೋದು, ನಮ್ಮ ಸಂಸ್ಕೃತಿಯ ಹಿರಿಮೆ ಎಂದು ಜೋರು ಪ್ರಚಾರ ಮಾಡುತ್ತಲೇ ಸರಕಾರೀ ಹಣದಲ್ಲಿ ಮಾಡಿಸಿದ್ದಕ್ಕೆ ತಮ್ಮ ಫೋಟೋ ಹಾಕಿಸಿಕೊಳ್ಳುವ ರಾಜಕಾರಣಿಗಳು, ಧಾರ್ಮಿಕರನ್ನು ಕೊಂಡಾಡುತ್ತಲೇ, ಕಾಮೇಗೌಡರಂತಹವರನ್ನು ಇನ್ನಿಲ್ಲದಂತೆ ಮಾಧ್ಯಮಗಳಲ್ಲಿ ಹೀಯ್ಯಾಳಿಸುತ್ತೇವೆ; ದುರುದ್ದೇಶದಿಂದ ಯಾರಾರೋ ಹೇಳಿದ್ದೇ ನಿಜ ಎಂಬ ಭಾವನೆ ಬರುವಂತೆ ಮಾಧ್ಯಮಗಳಲ್ಲಿ ಬರೆದು ನಾವೆಷ್ಟು ಸಾಮಾಜಿಕ ಹೊಣೆಗಾರಿಕೆ ಇರದವರು ಎಂಬುದನ್ನೂ ತೋರಿಸಿಕೊಳ್ಳುತ್ತೇವೆ.

ಕಾಮೇಗೌಡರ ಕಟ್ಟೆ ಕಾಯಕ ಕೇವಲ ಪುರಸ್ಕಾರ ಬಂದ ಮೇಲೆ ಪ್ರಾರಂಭವಾದದ್ದಲ್ಲ. ಹತ್ತಿರದಿಂದ ಕಂಡವರ ಪ್ರಕಾರ ಸು. 30-40 ವರ್ಷಗಳ ಹಿಂದೆಯೇ ಕುರಿಗಳಿಗಾಗಿ ಅಲ್ಲಲ್ಲಿ ತಾನೇ ಸಣ್ಣ ಗುಂಡಿ ತೆಗೆದಿದ್ದಾರೆ. ಮರು ವರ್ಷ ಅವನ್ನು ಹಿಗ್ಗಿಸಿದ್ದಾರೆ. ನೀರು ತುಂಬದವನ್ನು ಬಿಟ್ಟು ರೇವು ನೋಡಿ ಹೊಸ ಹೊಂಡ ಮಾಡಿದ್ದಾರೆ. ಹಣ ದೊರೆತಾಗ ಜೆಸಿಬಿ ಬಳಸಿ ದೊಡ್ಡ ಹೊಂಡವೋ, ಕಟ್ಟೆಯೋ ಮಾಡಿಸಿದ್ದಾರೆ. ಇದೊಂದು ನಿರಂತರ ಕಾಯಕ, ಪರಿಶ್ರಮ. ಆಗೆಲ್ಲಾ ಅವರ ಜೊತೆ ಕೈ ಜೋಡಿಸದ, ಅವರನ್ನು ಕುಹಕವಾಡಿ ನಿರ್ಲಕ್ಷ್ಯ ಮಾಡಿದವರೇ ಇಂದು ಸಡ್ಡು ಹೊಡೆದಿದ್ದಾರೆ. ಕಾಮೇಗೌಡ ಬಗೆಗಿನ ಕೆಲವರ ವಿರೋಧದಲ್ಲಿ ವೈಯಕ್ತಿಕ ದ್ವೇಷವಲ್ಲದೆ ಅದು ಕ್ರಮೇಣ ಜಾತಿ-ಸಮುದಾಯವನ್ನೂ ಮೀರಿ ಈಗ ರಾಜಕೀಯ ಹಿತಾಸಕ್ತಿಗೂ ಬಲಿಯಾಗಿದೆ ಎಂಬ ಅಭಿಪ್ರಾಯಗಳೂ ಇವೆ. ಆ ಎಲ್ಲಾ ವಿಷಾಸ್ತ್ರಗಳಿಗೆ 85ರ ಅಜ್ಜ ಮೈ ಮನ ಕೊಡಬೇಕಾದದ್ದು ಅಮಾನವೀಯತೆಯ ನಿದರ್ಶನವಾಗಿದೆ.

ಕಾಮೇಗೌಡ ಬಗ್ಗೆ ಪುಸ್ತಕ ಬರೆದ ಯೋಗೀಶ ಅವರು ಹೇಳಿದಂತೆ: ಈತ ದೇವರಿಗೂ ಕೈ ಮುಗಿಯದವ, ಯಾರ ಮದುವೆ, ತಿಥಿಗಳಿಗೂ ಹೋಗದವ. ರಾತ್ರಿಯೂ ತನ್ನ ಕುರಿ ಮಂದೆಯೊಂದಿಗೇ ಮಲಗುವ ಜೀವ ಕಕ್ಕುಲಾತಿ. ಕಟ್ಟಿಸಿದ ಕಟ್ಟೆಗಳ ಬಳಿ ಒಂದೊಂದು ಗೋಕಲ್ಲು ನಿಲ್ಲಿಸಿದ್ದಾನೆ, ನೀರು ಕುಡಿದ ದನ, ಎಮ್ಮೆಗಳು ತಮ್ಮ ಮೈಯನ್ನು ಉಜ್ಜಿಕೊಳ್ಳಲಿ ಎಂದು. ಅಂತಹವನು ಇತರರ ದನ, ಎಮ್ಮೆಗಳಿಗೆ ಅಡ್ಡಿ ಮಾಡಿದ ಎಂದರೆ ಅವರು ಅಲ್ಲಿ ಮಾಡುವ ಏನೋ ಕಿಡಿಗೇಡಿತನವೇ ಕಾರಣ. ಅವ ಕಟ್ಟಿದ ಕೆಲವು ಕಟ್ಟೆಗಳನ್ನು ಮುಚ್ಚಿದ, ಏರಿಗಳನ್ನು ಒಡೆದ ನಿದರ್ಶನಗಳೂ ಇವೆ. ಅಂತಹವುಗಳಿಂದ ಆತ ರೋಸಿ, ಕೆಲವರ ವಿರುದ್ಧ ಕಠಿಣವಾಗಿ ಮಾತಾಡಿದರೆ ಅಚ್ಚರಿ ಏನಿಲ್ಲ.

ಆ ಕುಂದನಿ ಬೆಟ್ಟ ಒಂದು ಪರಿಸರ ಪಾಠಶಾಲೆ ಇದ್ದಂತೆ. ಅಲ್ಲಿ ಹೋಗಿಯೇ ಕಾಮೇಗೌಡರ ಜೀವ-ಪರಿಸರ ಕಾಳಜಿಯ ಮಹತ್ವ ತಿಳಿಯಬೇಕು. ಆತ ಕಲ್ಲುಗಳ ಮೇಲೆ ‘ಕಣ್ಣಿನ ಆರೋಗ್ಯ ಇಲ್ಲ ಅವನಿಗೆ, ಕಟ್ಟೆ ತೋಡಿಸುವುದು ಸಾಧ್ಯವೇ. ಎಷ್ಟೇ ಜನ ದುರ್ಜನರು ಬಂದರೂ ಎದುರಿಸಿದರೂ ಕಾಮೇಗೌಡ ಹೆದರುವುದಿಲ್ಲ. ಅವನ ಧರ್ಮ ಕಾರ್ಯವನ್ನು ಮುಂದುವರಿಸುವುದನ್ನು ನಿಲ್ಲಿಸುವುದಿಲ್ಲ. ಪಾಂಡವರು ವನವಾಸ ಮಾಡುವಾಗಲೂ ಕೆರೆ ಕಟ್ಟೆ ಕಟ್ಟಿಸಿದರು…’ ಹೀಗೆ ಬರೆದಿದ್ದಾರೆ. ಈ ತಿಳಿವಳಿಕೆ ನಮ್ಮ ಗ್ರಾಮೀಣರಿಗೆ ತಲೆಮಾರಿನಿಂದ ಬಂದ ಮಹಾ ಪಾಠ.

ಪ್ರಧಾನಿಯವರು ಹೇಳಿದ ಒಂದು ಮಾತನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು: ‘ಕಾಮೇಗೌಡರು ಕಟ್ಟಿಸಿದ್ದು ದೊಡ್ಡ ಕೆರೆ ಅಲ್ಲದಿರಬಹುದು; ಅವು ಬಹಳವೂ ಅಲ್ಲದಿರಬಹುದು. ಆದರೆ ಅವರ ಕಾರ್ಯದ ಸದುದ್ದೇಶ ಬಹಳ ಮುಖ್ಯ. ಅದನ್ನು ನಾವು ಗೌರವಿಸಬೇಕು..’

ಅವರನ್ನು ಹತ್ತಿರದಿಂದ ಕಂಡವರು ಹೇಳಿದ್ದು: ‘ಕಾಮೇಗೌಡ ಮೊದಲಿಂದಲೂ ಊರವರ ಪ್ರತಿರೋಧ ಎದುರಿಸಿದ್ದಾರೆ. ಆದರೆ ಈಗ ಮಾಧ್ಯಮಗಳ ಮೂಲಕವೂ ಕೆಲವರು ದಾಳಿಗೆ ಮುಂದಾಗಿರುವುದು ಖಂಡಿತಾ ದುರುದ್ದೇಶದ್ದಾಗಿದೆ. ಈ ಅನವಶ್ಯಕ ವಿವಾದ ಯಾರಿಗೂ ಒಳ್ಳೆಯದಲ್ಲ’.

ಕಾಮೇಗೌಡ ಏನೂ ಮಾಡಿಲ್ಲ ಎನ್ನುವವರಿಗೆ ದೊಡ್ಡ ಅವಕಾಶಗಳಂತೂ ಇವೆ. ಅವರೆಲ್ಲಾ ಮುಂದಾಗಿ ಸರಕಾರೀ ಗೋಮಾಳದಲ್ಲೇ ದೊಡ್ಡ ಕೆರೆ ಕಟ್ಟೆಗಳನ್ನು ಮಾಡಲಿ. ತಮ್ಮೂರ ಸರ್ಕಾರಿ ಶಾಲೆಗಳನ್ನು ಖಾಸಗೀ ಶಾಲೆಗಳನ್ನು ಮೀರಿಸುವಂತೆ ನವೀಕರಿಸಿ, ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಸವಲತ್ತುಗಳನ್ನು ಒದಗಿಸಲಿ. ‘ಗುಡ್ಡದ ಮೇಲೇ ದೇವಸ್ಥಾನ ಕಟ್ಟಿಸಲು ಹಠ ಮಾಡುವ ಧರ್ಮಾತ್ಮರು ಗುಡ್ಡಗಳನ್ನು ಪಡ್ಡೆಗಳ ಅಡ್ಡೆ ಮಾಡದೆ, ಊರಲ್ಲಿನ ಗುಡಿಗಳನ್ನು ಸ್ವಚ್ಛವಾಗಿರಿಸಿಕೊಳ್ಳಲಿ; ಸರಕಾರದ ಆದೇಶವನ್ನೂ ಧಿಕ್ಕರಿಸಿ ಗುಡ್ಡಕ್ಕೆ ಬಹಿರ್ದೆಸೆಗೆ ಹೋಗುವ ಮಹನೀಯರು ಸರಕಾರ ಕೊಟ್ಟ ಧನಸಹಾಯದಲ್ಲಿ ಮನೆಗಳಲ್ಲಿಯೇ ಶೌಚಾಲಯ ಕಟ್ಟಿಸಿಕೊಳ್ಳಲಿ, ಆ ಮೂಲಕ ತಮ್ಮ ಹೆಣ್ಣುಮಕ್ಕಳ ಗೌರವ ಕಾಪಾಡಿಕೊಳ್ಳಲಿ; ಆರೋಗ್ಯವನ್ನೂ ಉಳಿಸಿಕೊಳ್ಳಲಿ. ಕೊರೊನಾದಂತಹ ಸಾಂಕ್ರಾಮಿಕ ಬಂದಿರುವ ಹೊತ್ತಿನಲ್ಲಿ ಒಂದಿಷ್ಟು ಸಾಮಾಜಿಕ ಪ್ರಜ್ಞೆ ಉಳಿಸಿಕೊಳ್ಳಲಿ.

Leave a Reply

Your email address will not be published.