ಕುವೆಂಪು ಸ್ವತಃ ಕಂಡುಂಡ ಸಾಂಕ್ರಾಮಿಕ ರೋಗಗಳು

ಕುವೆಂಪು ಅವರು ತಮ್ಮ ಸುತ್ತಲಿನ ಪರಿಸರದಲ್ಲಿ ಹಬ್ಬುತ್ತಿದ್ದ ಸಾಂಕ್ರಾಮಿಕ ರೋಗಗಳ ಹಾವಳಿಯನ್ನು ಬಹಳ ಹತ್ತಿರದಿಂದ ನೋಡುತ್ತಾ ಬಾಲ್ಯ ಕಳೆದವರು; ಸ್ವತಃ ವಿಷಮಶೀತ ಜ್ವರಕ್ಕೆ ತುತ್ತಾಗಿ ಸಾವು ಜಯಿಸಿ ಬಂದವರು. ಅವರ ಸಾಂಕ್ರಾಮಿಕ ರೋಗಗಳೊಂದಿಗಿನ ಮುಖಾಮುಖಿ ಅನುಭವಗಳು, ವಿವರಗಳು ಅವರ ಆತ್ಮ ಚರಿತ್ರೆ ‘ನೆನಪಿನ ದೋಣಿಯಲ್ಲಿ’ ದಾಖಲಾಗಿವೆ. ಈ ಕೃತಿಯಿಂದ ಆಯ್ದ ಕೆಲವು ಭಾಗಗಳು, ಸಮಾಜಮುಖಿ ಓದುಗರಿಗಾಗಿ.

ಮೊದಲನೆಯ ಮಹಾಯುದ್ಧದ ಭಯಂಕರತೆ ಆಟಗುಳಿಗಳಾಗಿದ್ದ ತೀರ್ಥಹಳ್ಳಿಯ ಶಾಲಾಬಾಲಕರಿಗೆ ವಾರ್ತಾರೂಪದ ವಿನೋದದ ವಿಷಯವಾಗಿತ್ತಷ್ಟೆ! ಆದರೆ ಆ ಯುದ್ಧ ಮುಗಿಯುವ ಹೊತ್ತಿಗೆ ಅದರ ಪರಿಣಾಮವಾಗಿಯೊ ಏನೊ ಅದರ ರಭಸದ ಕ್ಲೇಶ ಮಲೆನಾಡಿನ ಮೂಲೆಗೂ ತಟ್ಟಿತ್ತು. ಪದಾರ್ಥಗಳ ಬೆಲೆ ಏರಿ ಸೀಮೆ ಎಣ್ಣೆ ಮುಂತಾದವುಗಳಿಗೆ ಕ್ಯೂ ನಿಂತು ರೇಷನ್ ಪಡೆಯುವುದೊಂದೇ ನಮ್ಮಂತಹ ಹುಡುಗರಿಗೆ ಗೊತ್ತಾಗುತ್ತಿದ್ದ ತೊಂದರೆ. ಏಕೆಂದರೆ ಅನೇಕ ವೇಳೆ ಆಟದ ಹೊತ್ತನ್ನೆಲ್ಲ ಕ್ಯೂ ನಿಂತು ನಮ್ಮ ಪಾಲಿನ ಪದಾರ್ಥ ತರುವುದರಲ್ಲಿಯೆ ಕಳೆಯಬೇಕಾಗುತ್ತದಲ್ಲಾ ಎಂದು.

ಒಂದು ಸಂಜೆ ಆದ ಮೈದಾನದಲ್ಲಿ ಚೆಂಡಾಟ ಮುಗಿಸಿ ಹುಡುಗರೆಲ್ಲ ಗುಂಪು ಕುಳಿತು ಹರಟೆ ಹೊಡೆಯುತ್ತಿದ್ದಾಗ ಒಬ್ಬ (ಅವನು ಡಾಕ್ಟರ ಮಗನಿರಬಹುದು) ಹೇಳಿದ “ಅಲ್ಲೋ ಇಲ್ಲಿ ಕೇಳು. ಆರ್ಮನಿಯಿಂದ ಒಂದು ಕಾಯಿಲೆ ಬಂದಿದೆಯಂತೆ ಅವರೇ ಇಂಗ್ಲಿಷರ ಮೇಲೆ ಕಳಿಸಿದ್ದಂತೋ! ಬೀಸುಬಡಿಗೆ ಜ್ವರ ಅಂತಾರೆ. ಬೀಸಿ ಬಡಿಗೆ ಹೊಡೆದರೆ ಹೆಂಗೆ ಸಾಯ್ತಾರೋ ಹಂಗೆ ಸಾಯ್ತಾರಂತೆ ಅದು ಬಂದ್ರೆ ಜನ! ಆದರೆ ದೊಡ್ಡೋರಿಗೇ ಅಂತೆ ಕಣೋ ಅದು ಹೆಚ್ಚಾಗಿ ಬಡಿಯೋದು; ನಮ್ಮ ಹಾಂಗಿರುವ ಹುಡುಗರಿಗೆ ಬೆಳಿಗ್ಗೆ ಜ್ವರ ಬಂದು, ಒಂದು ದಿನ ಇದ್ದು, ಬಿಟ್ಟು ಹೋಗ್ತದಂತೆ” ಮಕ್ಕಳೆಂದರೆ ಎಲ್ಲರಿಗೂ ಅಕ್ಕರೆ ತಾನೆ!

ಅದರ ನಿಜಾಂಶ ಏನೇ ಇರಲಿ, ನಮಗಂತೂ ಹಾಗೇ ಆಯ್ತು. ನಮ್ಮ ಗುಂಪಿನ ಹುಡುಗರಿಗೆ ‘ಇನ್ ಫ್ಲೂಯನ್ ಜಾ’ ಎಂದು ತರುವಾಯ ಕುಪ್ರಸಿದ್ಧ ಹೆಸರು ಪಡೆದ ಆ ಜ್ವರ ಸ್ವಲ್ಪ ಬಂದು, ಹೆಚ್ಚು ತೊಂದರೆ ಕೊಡದೆ, ಬಿಟ್ಟೆಹೋಯಿತು. ಆದರೆ ನಾಡಿಗಾದ ಗತಿಯೆ ಬೇರೆ!

ಆ ಮಹಾರೋಗದ ದೆಸೆಯಿಂದ ಮನೆಮನೆಗಳೇ ನಾಶವಾದವು. ಇಡೀ ಸಂಸಾರಗಳೇ ಸತ್ತುಹೋದುವು!

ಶಾಲೆಗಳಿಗೆಲ್ಲ ರಜಾ ಘೋಷಿಸಿದರು. ನಾವು ಪೇಟೆಯಿಂದ ಮನೆ, ಕುಪ್ಪಳಿಗೆ, ಹೋದೆವು. ಪ್ಲೇಗು ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳ ಹೆಸರನ್ನು ಮಾತ್ರ ಕೇಳಿದ್ದರು ಅತ್ತ ಕಡೆಯ ಜನರು. ಆ ರೋಗಗಳೆಲ್ಲ ದೊಡ್ಡ ದೊಡ್ಡ ನಗರಗಳಿಗೇ ಮೀಸಲು. ನಮ್ಮತ್ತಕಡೆ ಅವು ತಲೆಹಾಕುವುದೇ ಇಲ್ಲ ಎಂಬುದು ನಮ್ಮ ನಂಬುಗೆಯಾಗಿತ್ತು. ಆದರೆ ಈ ಹೊಸರೀತಿಯ ಸಾಂಕ್ರಾಮಿಕದಿಂದ ಜನ ಕಂಗೆಟ್ಟು ಹೋದರು.

ಕುಪ್ಪಳಿಯ ಮನೆ ಒಂದು ರೀತಿಯ ಆಸ್ಪತ್ರೆಯಂತೆ ತೋರುತ್ತಿತ್ತು. ನಾವು ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿ ಮಾತ್ರ ನೋಡಿದ್ದ ಭೂತಾಕಾರದ ಶೀಸಗಳ ಪಂಕ್ತಿಯಲ್ಲಿ ಬಣ್ಣಬಣ್ಣದ ನೀರೌಷಧಿಗಳು ನಮ್ಮ ಭಯಭರಿತ ಗೌರವಕ್ಕೆ ಪಾತ್ರವಾಗಿ ರಂಜಿಸುತ್ತಿದ್ದುವು. ಹಳ್ಳಿಗಳು ಏಳು ಎಂಟು ಮೈಲಿಗಳಿಗಿಂತಲೂ ತೀರ್ಥಹಳ್ಳಿಗೆ ದೂರವಾಗಿದ್ದು, ಆ ದೂರದಿಂದ ರೋಗಿಗಳು ದಿನವೂ ಆಸ್ಪತ್ರೆಗೆ ಬರುವುದು ಸಾಧ್ಯವಿರಲಿಲ್ಲವಾದ್ದರಿಂದ(ಅದರಲ್ಲಿಯೂ ಮಾರ್ಗಗಳೆ ಇಲ್ಲದೆ ಆ ಕಾಡು ಮಲೆಗಳ ದುರ್ಗಮ ದಾರಿಯಲ್ಲಿ) ಹಳ್ಳಿಗಳ ಪ್ರತಿಷ್ಠಿತ ಮನೆಗಳಿಗೆ ಔಷಧಿಗಳನ್ನು ಹಂಡೆಗಟ್ಟಲೆ ಸರಬರಾಜು ಮಾಡಿದ್ದರು. ಆ ಮನೆಗಳಲ್ಲಿದ್ದ ತುಸು ವಿದ್ಯಾವಂತರಾದ ಸೇವಾಮನೋಧರ್ಮದ ಯುವಕರು ಆ ಔಷಧಿಗಳನ್ನೂ ತಮ್ಮ ಮನೆಯಲ್ಲಿಯೇ ತಯಾರಿಸಿದ ಗಂಜಿ ಮುಂತಾದ ಪಥ್ಯಗಳನನ್ನೂ ಹೊತ್ತುಕೊಂಡು ಹೋಗಿ, ಡಾಕ್ಟರು ತಿಳಿಸಿದ ಕ್ರಮದಲ್ಲಿ ರೋಗಿಗಳಿಗೆ ನೀಡುತ್ತಿದ್ದರು.

ಮೈಸೂರಿನ ಹಾರ್ಡ್ವಿಕ್ ಕಾಲೇಜಿನಲ್ಲಿ (ಅದು ಬರಿಯ ಸ್ಕೂಲ್ ಆಗಿದ್ದರೂ ಅದನ್ನು ಅವರೆಲ್ಲ ಕಾಲೇಜ್ ಎಂದು ಏಕೆ ಕರೆಯುತ್ತಿದ್ದರೊ? ಅದರಲ್ಲಿ ಹಾಸ್ಟೆಲ್ಲೂ ಇದ್ದು ಅಲ್ಲಿಯೆ ಊಟ ಬಟ್ಟೆ ಪಡೆಯುತ್ತಿದ್ದರಂತೆ) ಪ್ರಾಥಮಿಕ ನಾಲ್ಕನೆಯ ಕ್ಲಾಸಿನವರೆಗೆ ಓದಿ ಬಂದಿದ್ದ ಐಯಪ್ಪಗೌಡರ ಆ ಆಸುಪಾಸಿಗೆ ಆಧುನಿಕ ವಿದ್ಯಾವಂತರಾಗಿದ್ದು ಈ ಔಷಧಿ ಹಂಚುವ ಡಾಕ್ಟರ್ ಕಮ್ ಕಾಂಪೌಂಡರ್ ಕೆಲಸದ ಮುಂದಾಳಾಗಿದ್ದರು. ಅವರಿಗೆ ಲೆಫ್ಟಿನಂಟ್ ಆಗಿ ಪುಟ್ಟಣ್ಣ ಕೆಲಸ ಮಾಡುತ್ತಿದ್ದ. ಕುಪ್ಪಳಿಯ ಪಟೇಲ್ ರಾಮೇಗೌಡರು ಮೇಲ್ವಿಚಾರಕರಾಗಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ನಮ್ಮ ಜೀತದಾಳುಗಳಾಗಿದ್ದ ಬೇಲರ ಕೇರಿ, ಒಕ್ಕಲುಗಳಾಗಿದ್ದ ಹಳೆಪೈಕದ ಮತ್ತು ಮರಾಠಿಗರ ಮನೆಗಳು, ಕೆಳಕುಪ್ಪಳಿಯ ಕಿಲಸ್ತರ ಒಕ್ಕಲು ಮನೆಗಳು, ಬೆಕ್ಕನೂರು, ಕರ್ಕಿಬೈಲು, ಹೊಸಮನೆ, ಅಲೆಮನೆ, ತಟ್ಟಾಪುರ ಮುಂತಾದ ಸಮೀಪದ ಹಳ್ಳಿಗಳು ಇವರ ಸೇವಾ ವಲಯಗಳಾಗಿದ್ದುವು. ಬೆಳಿಗ್ಗೆ ಮತ್ತು ಸಂಜೆ ಔಷಧಿ ಮತ್ತು ಪಥ್ಯಗಳನ್ನು ಹೊತ್ತೂ ಹೊರಿಸಿಕೊಂಡೂ ಹೋಗಿ, ಮನೆಮನೆಗಳಲ್ಲಿ, ಗುಡಿಸಲು ಗುಡಿಸಲುಗಳಲ್ಲಿ ರೋಗಿಗಳನ್ನು ವಿಚಾರಿಸಿ, ಯಾರುಯಾರಿಗೆ ಯಾವಯಾವ ಔಷಧಿ ಕೊಡಬೇಕೊ ಅವುಗಳನ್ನು ಕೊಟ್ಟು, ಪಥ್ಯಗಳನ್ನು ಹಂಚಿ ಬರುತ್ತಿದ್ದರು. ಕೊನೆಕೊನೆಗೆ ಹೆಣಗಳನ್ನು ಹೊತ್ತು ಅವರವರ ಜಾತಿಯ ರೂಢಿಯಂತೆ ಸುಡುವರನ್ನು ಸುಟ್ಟು, ಹೂಳುವರನ್ನು ಹೂಳಿಯೂ ಬರಬೇಕಾಯಿತು. ಕೆಲವೆಡೆ ಒಂದು ಸಂಸಾರದಲ್ಲಿ ಒಬ್ಬರೂ ಉಳಿಯದಂತೆ ಖಾಲಿಯಾದದ್ದೂ ಉಂಟು. ಕೆಲವು ಮನೆತನಗಳಲ್ಲಿ ದುಡಿಯುವವರೆಲ್ಲ ಸತ್ತು ಮಕ್ಕಳು ಮುದುಕರು ಮಾತ್ರ ಉಳಿದು, ಅವರ ತರುವಾಯದ ರಕ್ಷಣೆಯ ಮತ್ತು ಆರೈಕೆಯ ಹೊಣೆಗೂ ಇವರು ಭಾಜನರಾಗಬೇಕಾಗಿ ಬಂದಿಂತಂತೆ.


ನಾನು ದಿನವೂ ಬೆಳಿಗ್ಗೆ ಮುಂಚೆ ಆಧ್ಯಾತ್ಮಿಕ ಸಾಧನೆಯ ಅಂಗವಾಗಿ, ಈಗ ‘ಕವಿಶೈಲ’ ಎಂದೇ ಪ್ರಸಿದ್ಧವಾಗಿರುವ, ಮನೆಯ ಹಿಂದಣ ಬೆಟ್ಟದ ನೆತ್ತಿಯ ಕಲ್ಲು ಬಂಡೆಗೆ ಹೋಗಿ ಅಲ್ಲಿ ವ್ಯಾಯಾಮ, ಪ್ರಾಣಾಯಾಮ ಮತ್ತು ಧ್ಯಾನಗಳಲ್ಲಿ ತೊಡಗುತ್ತಿದ್ದೆ. ಮಳೆ ಬಿದ್ದರೂ ಹೋಗುತ್ತಿದ್ದೆ, ಮಂಜು ದಟ್ಟಯಿಸಿದ್ದರೂ ಹೋಗುತ್ತಿದ್ದೆ. ಪ್ರಕೃತಿ ಸೌಂರ‍್ಯವೂ ಒಂದು ಪ್ರಬಲ ಆಕರ್ಷಣೆಯಾಗಿರುತ್ತಿತ್ತು. ಬಹುಶಃ ಮಂಜು ಬೀಳುತ್ತಿದ್ದ ಸಮಯದಲ್ಲಿಯೂ ಪ್ರಾಣಾಯಾಮದಲ್ಲಿ ತೊಡಗಿದುದರಿಂದಲೋ ಏನೊ ನನಗೆ ನ್ಯೂಮೋನಿಯಾ ತಗುಲಿತು. ಮೊದಮೊದಲು ಜ್ವರಕ್ಕಾಗಲಿ ಕೆಮ್ಮು ಕಫಗಳಿಗಾಗಲಿ ಹೆದರಲಿಲ್ಲ. ಅದರೆ ಜ್ವರ ಬಿಡಲಿಲ್ಲ. ಮಾತ್ರವಲ್ಲ, ದಿನದಿನಕ್ಕೂ ಹೆಚ್ಚಾಯಿತು. ದೇವಂಗಿ ಆಸ್ಪತ್ರೆಯಿಂದ ಔಷಧಿ ತರಿಸಿ ಕುಡಿಯುತ್ತಿದ್ದರೂ. ಕಡೆಗೆ ಹಾಸಿಗೆ ಹಿಡಿದೆ. ನಾನು ಜ್ವರತಪ್ತನಾಗಿ ಮಲಗಿದ್ದಾಗಲೆ ನನಗೆ ಮೈಸೂರಿಂದ ಮಿತ್ರರ ಕಾಗದ ಬಂತು, ನಾನು ಎರಡು ಭಾಗದಲ್ಲಿಯೂ ಎರಡನೆ ಕ್ಲಾಸಿನಲ್ಲಿ ತೇರ್ಗಡೆಯಾಗಿದ್ದೇನೆಂದೂ, ನನಗೆ ಹಿಗ್ಗು. ಮನೆಯವರಿಗೂ ನಂಟರಿಗೂ ಬಂಧುಮಿತ್ರರಿಗೂ ತಮ್ಮವನೊಬ್ಬನು ಬಿ.ಎ. ಪಾಸಾದನಲ್ಲಾ ಎಂದು ಹೆಮ್ಮೆ. ಆಗಿನ ಕಾಲದಲ್ಲಿ ಅಲ್ಲಿಯ ಹಿಂದುಳಿದ ಪಂಗಡಗಳಲ್ಲಿ ಲೋವರ್ ಸೆಕೆಂಡರಿ ಅಥವಾ ಎಸ್.ಎಸ್.ಎಲ್.ಸಿ. ಪಾಸ್ ಮಾಡುವುದೇ ಒಂದು ಮಹತ್ವವಾಗಿತ್ತು! ನನ್ನ ಬಿ.ಎ. ಪಾಸಿನಿಂದ ಯಾರಿಗೂ ಮೂರು ಕಾಸಿನ ಪ್ರಯೋಜನವಾಗದಿದ್ದರೂ ಎಲ್ಲರೂ ಸಂತೋಷಪಟ್ಟರು.

ದಿನದಿನಕ್ಕೆ ಕಾಯಿಲೆ ಹೆಚ್ಚಾಗುತ್ತಾ ಕಡೆಗೆ ಜ್ವರ ಮೂರ್ಛೆಗೆ ಶುರುವಾಯಿತು. ಉಪ್ಪರಿಗೆಯ ಮೇಲಿಂದಿಳಿದು ಮಲಮೂತ್ರ ವಿಸರ್ಜನೆಗೆ ಹೋಗುವುದು ಆಯಾಸಕರವಾಗಿ, ಕೆಳಗೆ ಜಗಲಿಯಲ್ಲಿ ಹಾಸಿಗೆ ಹಾಸಿದರು. ದೇವಂಗಿ ಇಂಗ್ಲಾದಿಗಳಿಂದ ಬಂದು ನೋಡಿದ ಮಿತ್ರರಿಗೆ, ವೆಂಕಟಯ್ಯ, ಹಿರಿಯಣ್ಣ ಇವರಿಗೆ, ನನ್ನ ಸ್ಥಿತಿ ಉಲ್ಬಣಿಸಿದ್ದನ್ನು ಕಂಡು ದಿಗಿಲಾಯಿತು. ದೊಡ್ಡ ಚಿಕ್ಕಪ್ಪಯ್ಯನವರಿಗೂ ಅವರೆಲ್ಲರ ಅಭಿಪ್ರಾಯ ತಿಳಿದು ನಾನು ಬದುಕುವುದು ಸಂದೇಹಾಸ್ಪದವಾಗಿ ತೋರಿರಬೇಕು. ಒಡನೆಯೇ ಅವರು ಶಿವಮೊಗ್ಗಕ್ಕೆ ಟೆಲಿಗ್ರಾಂ ಕೊಡುವಂತೆ ತಿಳಿಸಿದರು. ಹೊಸಮನೆ ಮಂಜಪ್ಪಗೌಡರು, ಮಾನಪ್ಪ ಆಗ ಅಲ್ಲಿ ಅಡಕೆಮಂಡಿ ನೋಡಿಕೊಳ್ಳುತ್ತಿದ್ದರು. ತಂತಿ ಕೊಟ್ಟಿದ್ದರ ಉದ್ದೇಶ ನನ್ನನ್ನು ಮೋಟಾರು ಕಾರು ತಂದು ಶಿವಮೊಗ್ಗಕ್ಕೆ ವಿಶೇಷ ವೈದ್ಯಕೀಯ ಸೌಲಭ್ಯವಿರುವಲ್ಲಿಗೆ ಸಾಗಿಸಲೆಂದು. ಆಗ ಅಲ್ಲಿ ಎಲ್ಲಿಯೂ ಕಾರುಗಳಿರಲಿಲ್ಲ.

ಅಂದು ಹಗಲು ಹೇಗೊ ಕಳೆಯಿತು. ಜ್ವರದ ಅಧಿಕ್ಯದಿಂದಲೊ ಏನೊ ನನಗೆ ಹಿಂದಿನ ದಿನದಿಂದಲೆ ಮಾತಾಡುವ ಶಕ್ತಿ ಉಡುಗಿ ಹೋಗಿತ್ತು. ಪ್ರಜ್ಞೆ ಬಂದಾಗ ಮಾತನಾಡಬೇಕೆಂದು ಎಷ್ಟು ಪ್ರಯತ್ನಿಸಿದರೂ ನನ್ನಿಂದ ಧ್ವನಿ ಹೊರಡುತ್ತಿರಲಿಲ್ಲ. ಮನೆಯವರು, ನನ್ನ ತಂಗಿಯರಿಬ್ಬರೂ ಸೇರಿ, ಅತ್ಯಂತ ಖಿನ್ನರಾಗಿ ದುಃಖಿತರಾಗಿ ಸುತ್ತ ಅಲ್ಲಲ್ಲಿ ನಿಂತೊ ಕುಳಿತೊ ತಮ್ಮ ತಮ್ಮ ರೀತಿಯಲ್ಲಿ ದೇವರಿಗೆ ಮೊರೆಯಿಡುತ್ತಿದ್ದರೆಂದು ತೋರುತ್ತದೆ. ನನಗೆ ತಿಳಿಯದಂತೆ, ಏಕೆಂದರೆ ನಾನು ಆ ಮೂಢಾಚಾರಗಳನ್ನೆಲ್ಲ ಖಂಡಿಸುತ್ತಿದ್ದೆ, ತೋಟದಾಚೆಯ ಭೂತರಾಯನಿಗೊ, ತಿರುಪತಿ ತಿಮ್ಮಪ್ಪಗೊ ಧರ್ಮಸ್ಥಳಕ್ಕೊ ಮುಡಿಪು ಕಟ್ಟಿ ಹೇಳಿಕೊಳ್ಳುತ್ತಿದ್ದರೂ ಇರಬಹುದು.

ಮಳೆಗಾಲ ಕಾಲಿಟ್ಟ ಸಮಯ. ಹಗಲೆಲ್ಲ ಮಳೆ ಬೀಳುತ್ತಿತ್ತು. ಕತ್ತಲಾಗುತ್ತ ಬಂದಂತೆಲ್ಲ ಮಳೆ ಜೋರಾಯ್ತು. ಶಿವಮೊಗ್ಗದಿಂದ ಈಗ ಬರುತ್ತದೆ, ಇನ್ನೇನು ಬರುತ್ತದೆ ಎಂದು ಕಾಯುತ್ತಿದ್ದ ನೆರವು ಎಲ್ಲಿಯೂ ಗೋಚರವಾಗಲಿಲ್ಲ. ಜಗಲಿಗೆ ಲ್ಯಾಂಪು ಹೊತ್ತಿಸಿದರು. ತುಳಸಿಕಟ್ಟೆಯ ದೇವರಿಗೆ ನೀಲಾಂಜನ ಹೊತ್ತಿಸಿ, ಮಳೆಗಾಳಿಗೆ ಕೆಡದಂತೆ ತಗಡಿನ ಗೂಡಿನ ಮರೆಮಾಡಿದರು. ರಾತ್ರಿ ಏಳಾಯ್ತು, ಎಂಟಾಯ್ತು, ಒಂಬತ್ತೂ ಆಯ್ತು! ಎಲ್ಲರಿಗೂ ನಿಶ್ಚಯವಾಯ್ತು, ಪುಟ್ಟು ಬೆಳಗಿನ ತನಕ ಉಳಿಯುವುದು ಕಷ್ಟ ಎಂದು! ಇದ್ದಕ್ಕಿದ್ದಹಾಗೆ, ತಮ್ಮ ಕೋಣೆಯಲ್ಲಿ ಚಿಂತಾಕ್ರಾಂತರಾಗಿ ಕುಳಿತಿದ್ದ ಹೊಳೆಕೊಪ್ಪದ ಅಮ್ಮಗೆ ಕಿಟಕಿಯ ಮುಖಾಂತರ ಏನೊ ಒಂದು ಅತ್ಯತಿಪ್ರಕಾಶ ಪ್ರವೇಶಿಸಿದಂತಾಯ್ತು. ಕೋಣೆಯೆಲ್ಲ ಬೆಳ್ಳಂಬೆಳಕಾಯ್ತು. ಮಿಂಚಿರಬೇಕು ಎಂದು ಮೊದಲು ಭಾವಿಸಿದರು. ಆದರೆ ಆ ಕಾಂತಿ ಅಳಿಯಲೇ ಇಲ್ಲ, ಮತ್ತೂ ಪ್ರಕಾಶಮಾನವಾಯ್ತು, ಬೆರಗಾಗಿ ನೋಡುತ್ತಿದ್ದಂತೆ ಕಿವಿ ಕೆಪ್ಪಾಗುವುದು ಎಂಬಂತಹ ಒಂದು ಪೋಂಕ್ ಪೋಂಕ್ ಸದ್ದು ಆ ಮಳೆಗಾಳಿಗಳ ಸದ್ದನ್ನೆಲ್ಲ ತಿಂದು ತೇಗಿದಂತೆ ಕೇಳಿಸಿತು. ಬೆಚ್ಚಿಬಿದ್ದರು; ಅವರು ಎಂದೂ ಕಂಡಿರಲಿಲ್ಲ ಮೋಟಾರುಕಾರಿನ ಹೆಡ್‌ಲೈಟುಗಳನ್ನು, ಎಂದೂ ಕೇಳಿರಲಿಲ್ಲ ಕಾರಿನ ಹಾರನ್!

ಮಾನಪ್ಪ ಬಾಡಿಗೆ ಕಾರಿನಲ್ಲಿ, ಭದ್ರಾವತಿಯಲ್ಲಿ ಡಾಕ್ಟರಾಗಿದ್ದ ಚೊಕ್ಕಂ ಐಯ್ಯಂಗಾರರನ್ನು ಜೊತೆಗೆ ಕರೆದುಕೊಂಡು ಧಾವಿಸಿ ಬಂದಿದ್ದ, ಮಳೆಗಾಳಿ ಹಾಳು ರಸ್ತೆ ಒಂದನ್ನೂ ಲೆಕ್ಕಿಸದೆ, ಶಿವಮೊಗ್ಗೆಯಿಂದ ರಾತ್ರಾರಾತ್ರಿ!

ಡಾಕ್ಟರನ್ನೂ ಕರೆದುಕೊಂಡೇ ಬಂದಿದ್ದ ಅವನ ಮುಂದಾಲೋಚನೆ ಭಗವತ್ ಪ್ರೇರಣೆಯಿಂದಲೆ ಆದದ್ದು ಎಂದು ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಬಹುಶಃ ನನ್ನ ಹೆಣವನ್ನೆ ಸಾಗಿಸಬೇಕಾಗುತ್ತಿತ್ತೊ ಏನೊ? ಅಥವಾ, ಹಾಗೇಕೆ ತಿಳಿಯಬೇಕು? ಮುಂದೆ 1929ರಲ್ಲಿ ನಾನು ಅವನು ಒಟ್ಟಾಗಿ ಸ್ವಾಮಿ ಸಿದ್ಧೇಶ್ವರಾನಂದರೊಡನೆ ಬೇಲೂರು ಮಠಕ್ಕೆ ಹೋಗಿ ಸ್ವಾಮಿ ಶಿವಾನಂದ ಮಹಾರಾಜರಿಂದ ದೀಕ್ಷೆ ತೆಗೆದುಕೊಳ್ಳುವ ಯೋಗವಿದ್ದಾಗ?

ಸರ್ವದಾ ನಗೆಮೊಗದ ಮತ್ತು ವಿನೋದಶೀಲದ ಸರಳಹೃದಯದ ಸಾತ್ವಿಕ ವ್ಯಕ್ತಿ ಡಾ.ಚೊಕ್ಕಂ. ಬಂದವರೇ ಏನೇನೋ ವಿನೋದ ಮಾತುಗಳನ್ನೆ ನನ್ನನ್ನು ನಿರ್ದೇಶಿಸಿ ಹೇಳುತ್ತಾ, ಜೊತೆಯಲ್ಲಿ ತಾವು ತಂದಿದ್ದ ವೈದ್ಯನ ಮಂಜೂಷೆಯಿಂದ ಏನೇನನ್ನೊ ತೆಗೆದು ಸೂಜಿಮದ್ದು ಕೊಡಲು ಅಣಿಮಾಡಿದರು. ಕೈಹಿಡಿದು ನೋಡಿ ಸ್ಟೆಥಾಸ್ಕೋಪ್ ಇಟ್ಟುನೋಡಿ, ವಿಷಮತೆಯನ್ನು ಗ್ರಹಿಸಿದರು. ಒಂದು ಇಂಜೆಕ್ಷನ್ ಕೊಟ್ಟು, ಒಡನೆಯೆ ರೋಗಿಯನ್ನು ಭದ್ರಾವತಿಯ ತಮ್ಮ ಆಸ್ಪತ್ರೆಗೆ ಕರೆದೊಯ್ಯಲು ನಿಶ್ಚಯಿಸಿದರು.

ಕಗ್ಗತ್ತಲ ರಾತ್ರಿ; ಮುಂಗಾರು ಮಳೆ ಸುರಿಯುತ್ತಿತ್ತು; ಕಾಡುದಾರಿ ಗುಡ್ಡ ಬೆಟ್ಟ ಕಂದರಗಳಲ್ಲಿ ಸಾಗುತ್ತಿತ್ತು. ಆಗಿನ ಮಲೆನಾಡಿನಲ್ಲಿ ರಸ್ತೆಗಳೆ ಇರಲಿಲ್ಲ; ಕೊರಕಲು ಕಲ್ಲುಮುಳ್ಳು ಕೆಸರಿನ ಕಾಡುದಾರಿಗಳನ್ನೆ ರಸ್ತೆಯೆಂದು ಕರೆಯುತ್ತಿದ್ದರಷ್ಟೆ. ಆ ಕಾರು ಹಳೆಯ ಮಾದರಿಯ ಕ್ಯಾನ್‌ವಾಸ್ ಮುಚ್ಚಿಗೆಯ ಫೋರ್ಡ್ ಕಾರು. ಸೆಡಾನ್ ಬಾಡಿಯದಲ್ಲ. ಮಳೆ ಗಾಳಿಗಳಿಂದ ರಕ್ಷೆ ಕಷ್ಟಸಾಧ್ಯ. ಯಾವ ದೃಷ್ಟಿಯಿಂದ ಪರಿಶೀಲಿಸಿದರೂ ರೋಗಿಯನ್ನು, ಅದರಲ್ಲಿಯೂ ನಾನಿದ್ದ ವಿಷಮಸ್ಥಿತಿಯಲ್ಲಿ, ಎಪ್ಪತ್ತು ಎಂಬತ್ತು ಮೈಲಿ ಸಾಗಿಸುವುದಕ್ಕೆ ವಿರುದ್ಧವಾಗಿತ್ತು. ಆದರೂ ಧೈರ್ಯ ಮಾಡಿಬಿಟ್ಟಿದ್ದರು ಡಾ.ಚೊಕ್ಕಂ.

ಕಾರಿನ ಮುಂದಿನ ಸೀಟಿನಲ್ಲಿ ಚೊಕ್ಕಂ ಮತ್ತು ಮಾನಪ್ಪ ಕುಳಿತರು. ನನ್ನನ್ನು ಹಿಂದಿನ ಸೀಟಿನಲ್ಲಿ ದಿಂಬು ರಗ್ಗು ಇತ್ಯಾದಿಗಳಲ್ಲಿ ಹುದುಗಿಸಿ ಮಲಗಿಸಿಕೊಂಡು ದೊಡ್ಡ ಚಿಕ್ಕಪ್ಪಯ್ಯ ಒಂದು ತುದಿಯಲ್ಲಿ ಕುಳಿತರು. ಅವರು ಎಷ್ಟು ಕಾತರರೂ ಚಿಂತಾಕ್ರಾಂತರೂ ಆಗಿದ್ದರೆಂದರೆ ನನ್ನೊಡನೆ ಇತರರಾರನ್ನಾದರೂ ಕಳಿಸಲು ಒಪ್ಪಲಿಲ್ಲ.

ಮನೆಯವರೆಲ್ಲ ಹೆಬ್ಬಾಗಿಲಾಚೆಗೆ ಬಂದು ನಿಂತು ಕಾರು ಹೊರಟು ಹೋಗುವುದನ್ನೆ ನೋಡುತ್ತಿದ್ದರು, ಖಿನ್ನರಾಗಿ, ಪುಟ್ಟು ಮತ್ತೆ ಹಿಂದಕ್ಕೆ ಬರುತ್ತಾನೆಯೊ ಇಲ್ಲವೊ ಎಂಬ ಚಿಂತಾಭಾರದಿಂದ ಕುಸಿದು! ಏಕೆ? ಏನು? ಎಂತು? ಯಾರು? ಏನನ್ನೂ ಅರಿಯಲಾರದ ನಾಯಿಗಳೂ ಅವರೊಡನೆಯೆ ಬಾಲವಲ್ಲಾಡಿಸುತ್ತಾ ನಿಂತು ಬೆರಗಾಗಿದ್ದವು, ಮುಂದೀಪ ಹೊತ್ತಿಸಿಕೊಂಡು ಕಾರು ಮಳೆ ಗಾಳಿ ಮಿಂಚಿನ ಕತ್ತಲೆಯನ್ನು ಸೀಳಿಕೊಂಡು ಓಡಿ ಕಣ್ಮರೆಯಾಗುವುದನ್ನೆ ನೋಡುತ್ತಾ!

ಕಾರು ಕೊಪ್ಪ- ನರಸಿಂಹರಾಜಪುರ ಮಾರ್ಗದಲ್ಲಿ ಹೊರಟಿತು. ಆಗ ತೀರ್ಥಹಳ್ಳಿಯಲ್ಲಿ ತುಂಗಾನದಿಗೆ ಸೇತುವೆ ಕಟ್ಟಿರಲಿಲ್ಲವಾಗಿ ಶಿವಮೊಗ್ಗ ಕಡೆ ಹೋಗುವ ಯಾನಗಳು ಸ್ವಲ್ಪ ಹೆಚ್ಚು ದೂರವಾಗುವ ಕೊಪ್ಪ- ನರಸಿಂಹರಾಜಪುರ ಮಾರ್ಗವಾಗಿಯೆ ಪ್ರಯಾಣಿಸಬೇಕಿತ್ತು. ಅಮ್ಮಡಿ ಕಾಫಿಕಾನಿನ ಕಲ್ಗುಂಡು- ಕೆಮ್ಮಣ್ಣು ಕೆಸರೆದ್ದ ರಸ್ತೆಯಲ್ಲಿ ಹಾದು ಕಾರು ನಿಧಾನವಾಗಿ ಮುಂದುವರಿದು ಸಾಗಿತು. ಮಳೆ ಉದ್ದಕ್ಕೂ ಸುರಿಯುತ್ತಿತ್ತು. ದಾರಿಯಲ್ಲೊಮ್ಮೆ ಡಾಕ್ಟರು ನನ್ನ ನಾಡಿ ಹಿಡಿದು ನೋಡಿದರಂತೆ. ನಾಡಿಯ ಬಡಿತ ಎಷ್ಟು ಅತೃಪ್ತಿಕರವಾಗಿತ್ತು ಎಂದರೆ, ತರುವಾಯ ಅವರು ನನ್ನೊಡನೆ ಹೇಳಿದಂತೆ “It was so low, I was shaking in my boots. And I was cursing myself for having brought you in the car in such a condition. And began praying.” ಅಷ್ಟು ನಿರಾಶಾದಾಯಕವಾಗಿತ್ತಂತೆ.

ಜೊತೆಯಲ್ಲಿ ತಂದಿದ್ದ ಕಾಫಿಯನ್ನೊ ಏನನ್ನೊ ಕುಡಿಸಿದರು.

ಭದ್ರಾವತಿಗೆ ಇನ್ನೇನು ಏಳೆಂಟು ಮೈಲಿಗಳಿವೆ ಎನ್ನುವಾಗ ಕಾರಿನ ಹೆಡ್ ಲೈಟುಗಳು ಕೆಟ್ಟುಹೋದವು. ಕಗ್ಗತ್ತಲೆಯಲ್ಲಿ ಒಂದು ಅಡಿ ದಾರಿ ಕಾಣಿಸುತ್ತಿರಲಿಲ್ಲ. ಬೆಳಕು ಬಿಡುವ ತನಕ ಕಗ್ಗಾಡ ನಡುವೆ ಅಲ್ಲಿಯೆ ನಿಲ್ಲಬೇಕಾಯಿತು. ಅಪಶಕುನದ ಮೇಲೆ ಅಪಶಕುನ!

ಹಾದಿ ತುಸುವೆ ಕಾಣುವಷ್ಟು ಬೆಳಕುಬಿಡಲು ಆ ನಸುಕಿನಲ್ಲಿಯೆ ಮೆಲ್ಲನೆ ಚಲಿಸಿ ಬೆಳಗಾಗುವಷ್ಟರಲ್ಲಿ ಕಾರು ಭದ್ರಾವತಿಯ ನದಿಯ ದಂಡೆಯ ಮೇಲಿದ್ದ ಆಸ್ಪತ್ರೆಗೆ ತಲುಪಿತು. ಪಕ್ಕದಲ್ಲಿದ್ದ ಶೆಡ್ಡಿನಂತಹ ವಾರ್ಡಿನಲ್ಲಿ ರೋಗಿಯನ್ನು ಮಂಚಸ್ಥ ಮಾಡಿದರು.

ಅಚ್ಚರಿಯೆಂಬಂತೆ ಮರುದಿನದಿಂದಲೆ ಜ್ವರ ಇಳಿದು ನಾನು ಚೇತರಿಸಿಕೊಳ್ಳತೊಡಗಿದೆ. ಡಾ.ಚೊಕ್ಕಂ ಅವರು ನಾನು ಯಾವ ಮಾನಸಿಕ ಶ್ರಮದ ಕಾರ್ಯವನ್ನೂ ಮಾಡಬಾರದು ಎಂದು ವಿಧಿಸಿದರು.

Leave a Reply

Your email address will not be published.