ಕುಸಿದುಬಿದ್ದ ಕಲಿಸುವ ವ್ಯವಸ್ಥೆಯಲ್ಲಿ ಉತ್ಕøಷ್ಟತೆ ಹೇಗೆ ಸಾಧ್ಯ?

-ಎ.ನಾರಾಯಣ

ಮೂಲಭೂತವಾಗಿ ಸಂಶೋಧನೆ ಅಂದರೆ ಏನು ಮತ್ತು ಅದನ್ನು ಹೇಗೆ ನಡೆಸುವುದು ಎಂಬುದನ್ನೇ ಕಲಿಸುವ ವ್ಯವಸ್ಥೆ  ಇಲ್ಲದ ಒಂದು ದೇಶದಲ್ಲಿ ಅದ್ಭುತ ಸಂಶೋಧನೆಗಳಾಗಬೇಕು, ಜಾಗತಿಕ ಗಮನ ಸೆಳೆಯಬೇಕು, ಸಮಾಜಕ್ಕೆ ಪ್ರಯೋಜನಕಾರಿಯಾಗಿರಬೇಕು, ನೊಬೆಲ್ ಪ್ರಶಸ್ತಿ ಗಳಿಸಬೇಕು ಎಂಬ ಗುರಿ ಇಟ್ಟುಕೊಳ್ಳುವುದು ಸಂಪೂರ್ಣ ಹಾಸ್ಯಾಸ್ಪದ!

ವಿಶ್ವವಿದ್ಯಾನಿಲಯಗಳಲ್ಲಿ ಈಗಾಗಲೇ ಪಿಹೆಚ್‍ಡಿ ಪಡೆದವರು ಗಂಭೀರ ಸಂಶೋಧನೆಗಳಲ್ಲಿ ತೊಡಗಿರಬೇಕು ಅವರ ಕೈಕೆಳಗೆ ಪಿಹೆಚ್‍ಡಿ ವಿದ್ಯಾರ್ಥಿಗಳು ಸಂಶೋಧನೆ ಮಾಡುವುದು ಹೇಗೆ ಅಂತ ಕಲಿಯಬೇಕು. ಅದ್ಯಾಕೋ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಈ ಸಂಬಂಧ ಮುರಿದುಬಿದ್ದಿದೆ.

ಗಂಭೀರ ಸಂಶೋಧನೆಗಳಲ್ಲಿ ತೊಡಗುವ ಮಾತಿರಲಿ, ಕನಿಷ್ಠ ಸಂಶೋಧನೆ ಎಂದರೆ ಏನು ಎನ್ನುವುದನ್ನು ತಿಳಿದವರ ಸಂಖ್ಯೆ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಬೆರಳೆಣಿಕೆಗೆ ಕುಸಿದು ಅದೆಷ್ಟೋ ಕಾಲವಾಯಿತು. ಅಂದರೆ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ಮಾಡುವುದನ್ನು ಕಲಿಸುವವರೇ ಸಿಗುವುದಿಲ್ಲ. ಆದರೂ ವರ್ಷವೊಂದಕ್ಕೆ ಸಾವಿರಾರು ಪಿಹೆಚ್‍ಡಿ ಪ್ರಬಂಧಗಳು ಸಿದ್ಧಗೊಳ್ಳುತ್ತವೆ, ಸಾವಿರಾರು ಪಿಹೆಚ್‍ಡಿ ಪದವಿಗಳ ಪ್ರದಾನವಾಗುತ್ತದೆ. ಅಂದರೆ, ಪಿಹೆಚ್‍ಡಿ ಮಾಡುವುದು ಎಂದರೆ ಏನು ಎನ್ನುವುದನ್ನೇ ತಿಳಿಯದವರು ಪಿಹೆಚ್‍ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ. ಪಿಹೆಚ್‍ಡಿ ಅಂದರೆ ಏನು ಎನ್ನುವುದನ್ನೇ ತಿಳಿಯದೆ ಒಂದಷ್ಟು ಮಾಹಿತಿಯನ್ನು ಯಾವುದೋ ವಿಷಯದ ಬಗ್ಗೆ ಗುಡ್ಡೆ ಹಾಕಿ ಸಂಶೋಧನಾ ವಿದ್ಯಾರ್ಥಿಗಳು ಪಿಹೆಚ್‍ಡಿ ಪಡೆದಿರುತ್ತಾರೆ. ಮತ್ತೆ ಅವರು ಮಾರ್ಗದರ್ಶಕರಾಗಿ ಇದೇ ರೀತಿಯ ಅರೆಜ್ಞಾನದ ಪರಂಪರೆಯನ್ನು ಮುಂದುವರಿಸುತ್ತಾರೆ.

ಈ ಮಾತಿನಲ್ಲಿ ಯಾರಿಗಾದರೂ ಸಂಶಯ ಕಾಣಿಸಿದರೆ ಸರಕಾರ ಅಥವಾ ಯುಜಿಸಿ ಈಗಾಗಲೇ ಪ್ರಾರಂಭಿಸಿರುವ ಆನ್ಲೈನ್ ಪಾಠಗಳ ವಿಡಿಯೋಗಳಲ್ಲಿ (ಯೌಟ್ಯೂಬ್‍ನಲ್ಲಿ ಲಭ್ಯ) ಪಿಹೆಚ್‍ಡಿ ಅಥವಾ ಸಂಶೋಧನೆಗೆ ಸಂಬಂಧಿಸಿದ ಯಾವುದಾದರೂ ಒಂದು ವಿಡಿಯೋ ಪಾಠವನ್ನು ಕೇಳಿ. ನಿಮಗೇನಾದರೂ ಸ್ಪಷ್ಟವಾಗಿ ಅರ್ಥವಾದರೆ ಹೇಳಿ. ಈ ವಿಡಿಯೋಗಳಲ್ಲಿ ಹೆಚ್ಚುಕಡಿಮೆ ಪ್ರಸಿದ್ಧ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಇದ್ದಾರೆ. ಇವರೇ ಹೀಗಾದರೆ, ಇನ್ನು ಇತರ ವಿಶ್ವವಿದ್ಯಾನಿಲಯಗಳ ಸ್ಥಿತಿ ಹೇಗಿರಬಹುದೆಂದು ಊಹಿಸಬಹುದು.

ಅತ್ಯಂತ ಕಳಪೆ ವಿಶ್ವವಿದ್ಯಾನಿಲಯದಲ್ಲೂ ಅಲ್ಲೊಬ್ಬ ಇಲ್ಲೊಬ್ಬ ಗಂಭೀರ ಸಂಶೋಧಕ, ಸಂಶೋಧನಾ ಬೋಧಕ, ಸಂಶೋಧನಾ ವಿದ್ಯಾರ್ಥಿ ಸಿಗಬಹುದು. ಆದರೆ ಸಾಂಸ್ಥಿಕವಾಗಿ ಪಿಹೆಚ್‍ಡಿ ಎನ್ನುವ ಕಲಿಕೆಯನ್ನು ಅರ್ಥಪೂರ್ಣವಾಗಿ ನಡೆಸಬಲ್ಲ ವ್ಯವಸ್ಥೆ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಇದೆ ಅಂತ ಅನ್ನಿಸುತ್ತಿಲ್ಲ. ಈ ಮಾತನ್ನು ಇಲ್ಲಿ ಸಮಾಜ ವಿಜ್ಞಾನಗಳಿಗೆ ಮಾತ್ರ ಸಂಬಂಧಿಸಿ ಹೇಳಿದ್ದು. ಆದರೆ ಮಾನವಿಕಗಳ (ಚರಿತ್ರೆ, ಸಾಹಿತ್ಯ, ತತ್ವಶಾಸ್ತ್ರ ಇತ್ಯಾದಿ) ಮತ್ತು ವಿಜ್ಞಾನಗಳ ವಿಚಾರದಲ್ಲೂ ಪರಿಸ್ಥಿತಿಯೇನೂ ಭಿನ್ನವಾಗಿದೆ ಅಂತ ಅನ್ನಿಸುವುದಿಲ್ಲ.

ಮೂಲಭೂತವಾಗಿ ಸಂಶೋಧನೆ ಅಂದರೆ ಏನು ಮತ್ತು ಅದನ್ನು ಹೇಗೆ ನಡೆಸುವುದು ಎಂಬುದನ್ನೇ ಕಲಿಸುವ ವ್ಯವಸ್ಥೆ  ಇಲ್ಲದ ಒಂದು ದೇಶದಲ್ಲಿ ಅದ್ಭುತ ಸಂಶೋಧನೆಗಳಾಗಬೇಕು, ಆ ಸಂಶೋಧನೆಗಳು ಜಾಗತಿಕ ಗಮನ ಸೆಳೆಯಬೇಕು, ಸಮಾಜಕ್ಕೆ ಪ್ರಯೋಜನಕಾರಿಯಾಗಿರಬೇಕು, ನೊಬೆಲ್ ಪ್ರಶಸ್ತಿ ಗಳಿಸಬೇಕು ಮುಂತಾದ ಗುರಿಗಳನ್ನು ಇಟ್ಟುಕೊಳ್ಳುವುದು ಸಂಪೂರ್ಣ ಹಾಸ್ಯಾಸ್ಪದ. ಈ ದೇಶದ ಒಬ್ಬ ಸಂಶೋಧಕ ನೊಬೆಲ್ ಪ್ರಶಸ್ತಿ ಪಡೆದುಕೊಂಡದ್ದು 1930ರಲ್ಲಿ (ಸರ್ ಸಿ.ವಿ.ರಾಮನ್). ನಂತರದ 90 ವರ್ಷಗಳಲ್ಲಿ ಯಾರೊಬ್ಬರಿಗೂ ಆ ಮಟ್ಟಕ್ಕೇರುವುದು ಸಾಧ್ಯವಾಗಲಿಲ್ಲ ಎನ್ನುವುದು ಏನನ್ನು ತೋರಿಸುತ್ತದೆ.

ಹಲವಾರು ಮಂದಿ ಭಾರತೀಯರು ಈ ಅವಧಿಯಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. ಆದರೆ ಅವರೆಲ್ಲರೂ ವಿದೇಶಗಳಲ್ಲಿ ಓದಿದವರು ಅಥವಾ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಮಾಡಿದ ಸಂಶೋಧನೆಗಳಿಗಾಗಿ ಆ ಪ್ರಶಸ್ತಿ ಪಡೆದಿರುವುದು. ಭಾರತದ ವಿಶ್ವವಿದ್ಯಾನಿಲಯಗಳಲ್ಲೇ ಕಲಿತು, ಭಾರತದ ವಿಶ್ವವಿದ್ಯಾನಿಲಯಗಳಲ್ಲೇ ನಡೆಸಿದ ಸಂಶೋಧನೆಗಾಗಿ ಯಾರಾದರೂ ನೊಬೆಲ್ ಪ್ರಶಸ್ತಿ ಪಡೆಯದ ಹೊರತು ಭಾರತಕ್ಕೆ ಆ ಪ್ರಶಸ್ತಿ ಬಂದಿದೆ ಎನ್ನುವ ಹಾಗಿಲ್ಲ. ಹಾಗೆಂದು, ಎಲ್ಲದಕ್ಕೂ ನೊಬೆಲ್ ಪ್ರಶಸ್ತಿಯೇ ಮಾನದಂಡ ಎಂದಲ್ಲ. ಮತ್ತೆ ಸಮಾಜವಿಜ್ಞಾನಗಳ ವಿಚಾರಕ್ಕೆ ಬಂದರೆ, ಈ ದೇಶದ ಆರ್ಥಿಕ-ಸಾಮಾಜಿಕ, ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಕೂಡಾ ಜಗತ್ತಿನ ಗಮನಸೆಳೆಯುವ ಬಹುತೇಕ ಅಧ್ಯಯನಗಳನ್ನು ನಡೆಸುವುದು ಮತ್ತು ಬರಹಗಳನ್ನು ಪ್ರಕಟಿಸುವುದು ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುವವರೇ ಆಗಿರುತ್ತಾರೆ.

ಮೂಲಭೂತ ಸಮಸ್ಯೆಯ ವಿಷಯಕ್ಕೆ ಬರೋಣ. ಸಂಶೋಧನೆಯನ್ನು ಕಲಿಸುವ ಒಂದು ಸರಿಯಾದ ವ್ಯವಸ್ಥೆಯೇ ಇಲ್ಲದಲ್ಲಿ ಸಂಶೋಧನೆಯ ಅಕಾಡೆಮಿಕ್ ಸಂಸ್ಕೃತಿಯೊಂದು ಹೇಗೆ ಬೆಳೆಯಲು ಸಾಧ್ಯ ಎನ್ನುವ ಪ್ರಶ್ನೆ ಅದು. ಕೆಲವರು ಹುಟ್ಟು ಸಂಶೋಧಕರಾಗಿರುತ್ತಾರೆ. ಕೆಲವು ರೀತಿಯ ಸಂಶೋಧನೆಗಳನ್ನು ಅಂಥವರಿಂದ ಬಯಸಬಹುದಾದರೂ, ವ್ಯವಸ್ಥಿತವಾದ ಸಂಶೋಧನಾ ಕಾರ್ಯದಲ್ಲಿ ತೊಡಗಲು ಒಂದು ರೀತಿಯ ಮಾನಸಿಕ-ಬೌದ್ಧಿಕ ಅರ್ಹತೆ, ಸೂಕ್ತ ತರಬೇತಿ, ತಯಾರಿ ಎಲ್ಲವೂ ಇರಬೇಕಾಗುತ್ತದೆ. ಈ ಮೂರೂ ಇಲ್ಲದ ಪಿ.ಹೆಚ್.ಡಿ. ಅಧ್ಯಯನಗಳು, ಪ್ರಬಂಧಗಳು ಸಂಶೋಧಕರನ್ನು ಸೃಷ್ಟಿಸುವುದಿಲ್ಲ.

ಪಿ.ಹೆಚ್.ಡಿ. ಅಧ್ಯಯನ ನಡೆಸುವುದು ಎಂದರೆ ಆಯ್ದುಕೊಂಡ ಕ್ಷೇತ್ರಗಳಲ್ಲಿ ಅಥವಾ ಶಿಸ್ತುಗಳಲ್ಲಿ ಹೊಸ ಜ್ಞಾನವನ್ನು ಸೃಷ್ಟಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳುವುದು. ಹೀಗೆ ಜ್ಞಾನವನ್ನು ಸೃಷ್ಟಿಸುವ ಪ್ರಕ್ರಿಯೆ ಬೇರೆಬೇರೆ ಶಿಸ್ತುಗಳಲ್ಲಿ ಅಥವಾ ವಿಷಯಗಳಲ್ಲಿ ಬೇರೆಬೇರೆ ರೀತಿಯದ್ದಾಗಿರುತ್ತದೆ. ಆದರೆ ಪಿ.ಹೆಚ್.ಡಿ. ಅಧ್ಯಯನ ನಡೆಸುವವರೆಲ್ಲಾ ಜ್ಞಾನವನ್ನು ಸೃಷ್ಟಿಸುವುದನ್ನೇ ಮೂಲಭೂತವಾಗಿ ಕಲಿಯುವುದರಿಂದ ಯಾವುದೇ ವಿಷಯದಲ್ಲಾದರೂ ಸರಿ ಈ ಸಾಮಾಥ್ರ್ಯವನ್ನು ಗಳಿಸಿದವರಿಗೆ ಡಾಕ್ಟರ್ ಆಫ್ ಫಿಲಾಸಫಿ  ಅಂತ ಪದವಿ ನೀಡುವುದು.

ಜ್ಞಾನಸೃಷ್ಟಿಗೆ ಶಾಸ್ತ್ರೀಯವಾದ ಮಾರ್ಗಗಳು ಅಥವಾ ವಿಧಾನಗಳಿವೆ. ಈ ಎಲ್ಲಾ ಅಥವಾ ಹೆಚ್ಚಿನ ವಿಧಾನಗಳನ್ನು ಕಲಿತು ಅದರಲ್ಲಿ ಸೂಕ್ತವಾದ ಒಂದು ವಿಧಾನವನ್ನು ಅಳವಡಿಸಿಕೊಂಡು ಅದನ್ನು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಗಹನವಾದ ಯಾವುದೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ವಿಧಿಬದ್ಧವಾಗಿ ಬಳಸಿಕೊಳ್ಳುವುದು ಪಿ.ಹೆಚ್.ಡಿ. ಅಧ್ಯಯನ. ಮೊದಲಿಗೆ ಜ್ಞಾನಸೃಷ್ಟಿ ಎಂದರೆ ಏನು ಎನ್ನುವ ವಿಷಯವನ್ನು ತತ್ತ್ವಶಾಸ್ತ್ರೀಯವಾಗಿ ಕಲಿಯುವುದು, ಆನಂತರ ಸಂಶೋಧನಾ ವಿಧಾನಗಳನ್ನು ಕಲಿಯುವುದು, ತನ್ನ ಆಯ್ದ ಕ್ಷೇತ್ರದಲ್ಲಿ ಪ್ರಶ್ನೆಯೊಂದನ್ನು ಆಯ್ಕೆ ಮಾಡಿಕೊಳ್ಳುವುದು, ಕೊನೆಯದಾಗಿ ಅದನ್ನು ವಿಧಿಬದ್ಧವಾಗಿ ಉತ್ತರಿಸುವುದು. ಈ ಉತ್ತರವೇ ಸಂಶೋಧನಾ ಪ್ರಬಂಧ.

ಅಧ್ಯಯನದ ಈ ನಾಲ್ಕು ಭಾಗಗಳಲ್ಲಿ ಮೊದಲನೆಯ ಎರಡು ಹಂತಗಳನ್ನು ಮಾಮೂಲಿಯಾಗಿ ತರಗತಿಗಳಲ್ಲಿ ಕುಳಿತು ಕಲಿತರೆ, ಎರಡನೆಯ ಮತ್ತು ಮೂರನೆಯ ಹಂತಗಳನ್ನು ಏಕಾಕಿಯಾಗಿ ಓರ್ವ ಮಾರ್ಗದರ್ಶಕರ ಸಹಾಯದೊಂದಿಗೆ ಮಾಡಬೇಕೆಂದು ಲೆಕ್ಕ. ಅಮೆರಿಕನ್ ವಿಶ್ವವಿದ್ಯಾನಿಲಯಗಳಲ್ಲಿ ಮೊದಲ ಎರಡು ಹಂತಗಳಿಗೆ ಕನಿಷ್ಠ ಎರಡು ವರ್ಷಗಳನ್ನಾದರೂ ಮೀಸಲಿಡಬೇಕೆಂಬ ನಿಯಮವಿದೆ. ಈ ಎರಡು ವರ್ಷಗಳ ಅಂತ್ಯಕ್ಕೆ ಸಂಶೋಧನಾ ವಿಧಾನವನ್ನು ವಿದ್ಯಾರ್ಥಿ ಸಮರ್ಪಕವಾಗಿ ಮನದಟ್ಟು ಮಾಡಿಕೊಂಡಿರುವುದನ್ನು ಪರೀಕ್ಷೆಯ ಮೂಲಕ ಖಾತರಿ ಮಾಡಿದ ನಂತರವೇ ಮುಂದಿನ ಕೆಲಸಕ್ಕೆ ಅವಕಾಶ. ಪ್ರಾಯಃ ಇಡೀ ಪ್ರಕ್ರಿಯೆಯಲ್ಲಿ ಅತ್ಯಂತ ಕಷ್ಟದ ಕೆಲಸ ಎಂದರೆ ಸೂಕ್ತವಾದ ಪ್ರಶ್ನೆಯೊಂದನ್ನು ಎತ್ತಿಕೊಳ್ಳುವುದು.

ಎಲ್ಲಾ ರೀತಿಯ ಪ್ರಶ್ನೆಗಳು ಪಿ.ಹೆಚ್.ಡಿ. ಅಧ್ಯಯನಕ್ಕೆ ಸೂಕ್ತವಾಗುವುದಿಲ್ಲ ಎನ್ನುವುದು ಮತ್ತು ಕೆಲವೊಂದು ಸೂಕ್ತ ಪ್ರಶ್ನೆಗಳನ್ನು ಈಗಾಗಲೇ ಉತ್ತರಿಸಲಾಗಿರಬಹುದು ಎನ್ನುವುದು ಪಿಹೆಚ್.ಡಿ. ಅಧ್ಯಯನಕ್ಕೆ ಪ್ರಶ್ನೆಯನ್ನು ರೂಪಿಸುವ ಹಂತವನ್ನು ಇನ್ನಷ್ಟೂ ಕ್ಲಿಷ್ಟಗೊಳಿಸುತ್ತವೆ. ಪ್ರಶ್ನೆಯನ್ನು ಪ್ರಶ್ನೆಯ ರೂಪದಲ್ಲೇ ಉತ್ತರಿಸಬಹುದು ಅಥವಾ ಊಹೆಯ (ಹೈಪೊಥೆಸಿಸ್) ಮೂಲಕ ಪರಿಶೀಲನೆಗೆ ಒಳಪಡಿಸಬಹುದು. ಅದೇನೇ ಇರಲಿ. ಹೊಸ ಜ್ಞಾನ ಸೃಷ್ಟಿಸಲು ಪ್ರಶ್ನೆಯೊಂದನ್ನು ಹೇಗೆ ಎತ್ತಿಕೊಳ್ಳುವುದು ಎನ್ನುವುದನ್ನು ಪಿಹೆಚ್.ಡಿ ಮುಖ್ಯವಾಗಿ ಕಲಿಸಿಕೊಡಬೇಕು.

ನಾಲ್ಕನೆಯ ಹಂತದಲ್ಲಿ ಅಂದರೆ ಉತ್ತರ (ಪ್ರಬಂಧ) ಬರೆಯುವಲ್ಲಿ ಪ್ರಬಂಧದ ಹೊಸತನ ಅಥವಾ ಸಾಮಾಜಿಕ ಉಪಯುಕ್ತತೆ ಮುಖ್ಯವಲ್ಲ. ಬರೆಯುವಲ್ಲಿ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಲಾಗಿದೆಯೇ ಮತ್ತು ಸೂಕ್ತ ರೀತಿಯಲ್ಲಿ ಅಳವಡಿಸಿಕೊಳ್ಳಲಾಗಿದೆಯೇ ಎನ್ನುವುದಷ್ಟೆ ಮುಖ್ಯ. ಆದುದರಿಂದ ಪಿಹೆಚ್.ಡಿ. ಪ್ರಬಂಧ ಎನ್ನುವುದು ಪರೀಕ್ಷೆಯಲ್ಲಿ ಬರೆದ ಉತ್ತರ ಇದ್ದಂತೆ. ಅದರ ಮೂಲಕ ಪಿಹೆಚ್.ಡಿ.ವಿದ್ಯಾರ್ಥಿ ತನಗೆ ತಾನು ಆಯ್ದುಕೊಂಡ ಶಿಸ್ತಿನಲ್ಲಿ ಹೊಸ ಜ್ಞಾನ ಸೃಷ್ಟಿಸಲು ಸಾಧ್ಯ ಅಂತ ಸಾಬೀತುಪಡಿಸಬೇಕು ಅಷ್ಟೇ. ಅದಕ್ಕಿಂತ ಹೆಚ್ಚಿನ ಪ್ರಾಮುಖ್ಯವನ್ನು ಅದರಿಂದ ನಿರೀಕ್ಷಿಸಬಾರದು.

ಒಬ್ಬ ಸಮಾಜ ವಿಜ್ಞಾನಿಯ ಸಂಶೋಧನೆ ಪ್ರಾರಂಭವಾಗುವುದು ಪಿಹೆಚ್.ಡಿ. ತೇರ್ಗಡೆ ಆದ ನಂತರ. ಆದುದರಿಂದ ವಿಶ್ವವಿದ್ಯಾನಿಲಯಗಳಲ್ಲಿ ಇಷ್ಟೊಂದು ಪಿಹೆಚ್.ಡಿ.ಗಳಾಗುತ್ತಿವೆ, ಇದರಿಂದ ಸಮಾಜಕ್ಕೆ ಏನು ಪ್ರಯೋಜನ ಎನ್ನುವ ಪ್ರಶ್ನೆ ಅಷ್ಟೊಂದು ಸೂಕ್ತವಾಗುವುದಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ಇಷ್ಟೊಂದು ಪಿಹೆಚ್.ಡಿ. ಅಧ್ಯಯನಗಳು ನಡೆಯುತ್ತಿದ್ದರೂ ನಮ್ಮಲ್ಲಿ ಸರಿಯಾದ ಸಂಶೋಧನೆ ಯಾಕೆ ನಡೆಯುವುದಿಲ್ಲ, ಸಂಶೋಧಕರು ಯಾಕೆ ಸೃಷ್ಟಿಯಾಗುತ್ತಿಲ್ಲ ಎನ್ನುವ ಪ್ರಶ್ನೆ ಸೂಕ್ತವಾದದ್ದು.

ಪಿಹೆಚ್.ಡಿ. ಹೊಂದಿದ ಹಲಾವಾರು ಅಭ್ಯರ್ಥಿಗಳನ್ನು ಉದ್ಯೋಗಕ್ಕಾಗಿ ಸಂದರ್ಶನ ನಡೆಸಿದ ಅನುಭವದಲ್ಲಿ ಹೇಳುವುದಾದರೆ ನೂರಕ್ಕೆ 95 ಕ್ಕಿಂತಲೂ ಹೆಚ್ಚು ಮಂದಿ ಅಭ್ಯರ್ಥಿಗಳು ತಮ್ಮ ಪಿಹೆಚ್.ಡಿ ಅಧ್ಯಯನದಲ್ಲಿ ಉತ್ತರಿಸಲಾದ ಪ್ರಶ್ನೆ ಏನು ಎಂದು ಕೇಳಿದರೆ ತಡವರಿಸುತ್ತಾರೆ. ಹೆಚ್ಚಿನವರ ಬಳಿ ಉತ್ತರವೇ ಇರುವುದಿಲ್ಲ. ಅಕಸ್ಮಾತ್ ಪ್ರಶ್ನೆ ಏನು ಎಂದು ಹೇಳಲು ಸಾಧ್ಯವಾದರೂ ಅದರ ಪ್ರಾಮುಖ್ಯ ಏನು, ಅದು ಯಾವ ಕಾರಣಕ್ಕಾಗಿ ನಿಮ್ಮ ಅಧ್ಯಯನಕ್ಕೆ ಒಪ್ಪುತ್ತದೆ ಎಂದು ಕೇಳಿದರೆ   ತಡವರಿಸುತ್ತಾರೆ. ಹೆಚ್ಚಿನವರು ಒಂದು ಪುಸ್ತಕ ಬರೆಯುವುದಕ್ಕೆ ಮತ್ತು ಒಂದು ಪಿಹೆಚ್.ಡಿ ಪ್ರಬಂಧ ಬರೆಯುವುದಕ್ಕೆ ಇರುವ ವ್ಯತ್ಯಾಸ ಏನು ಎನ್ನುವ ಪ್ರಶ್ನೆಗೆ ಉತ್ತರ ನೀಡಲಾಗದ ಸ್ಥಿತಿಯಲ್ಲಿರುತ್ತಾರೆ. ಜ್ಞಾನದ ಸೃಷ್ಟಿ ಮತ್ತು ಈಗಾಗಲೇ ಸೃಷ್ಟಿಸಿರುವ ಜ್ಞಾನವನ್ನು ಮಾಹಿತಿಯ ರೂಪದಲ್ಲಿ ಸಂಗ್ರಹಿಸುವುದಕ್ಕೆ ಇರುವ ವ್ಯತ್ಯಾಸ ತಿಳಿಯದವರೇ ಹೆಚ್ಚು. ಇನ್ನೊಂದು ವಿಶೇಷ ಏನು ಎಂದರೆ ತಮ್ಮ ಪಿಹೆಚ್.ಡಿಯ ಬಗ್ಗೆ ಪ್ರಾಥಮಿಕ ಪ್ರಶ್ನೆಗಳಿಗೆ ಉತ್ತರಿಸಲಾಗದವರು ಕೂಡಾ ಈಗಾಗಲೇ ತಾವು ಹಲವಾರು `ದೇಶಿಯ ಮತ್ತು ಅಂತಾರಾಷ್ಟ್ರೀಯ’ ನಿಯತಕಾಲಿಕಗಳಲ್ಲಿ ಹತ್ತೈವತ್ತು ವಿದ್ವತ್ ಪ್ರಬಂಧಗಳನ್ನು ಪ್ರಕಟಿಸಿದ್ದೇವೆ ಅಂತ ಸ್ವವಿವರದಲ್ಲಿ ಬರೆದಿರುತ್ತಾರೆ. ಹಾಗೆಯೇ ಹತ್ತಾರು ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನೂ ಮಾಡಿರುತ್ತಾರೆ.

ಇನ್ನು ಭಾರತದಲ್ಲಿ ಎಲ್ಲರಿಗೂ ಪಿಹೆಚ್.ಡಿ. ಮಾಡಿ ಹೆಸರಿನ ಮುಂದೆ `ಡಾ’ ಎಂದು ಸೇರಿಸುವ ಚಟ ಬೇರೆ ಇದೆ. ಐಎಎಸ್ ಮುಂತಾದ ಸರಕಾರೀ ನೌಕರಿಯಲ್ಲಿರುವವರು, ಖಾಸಗಿರಂಗದ ಉನ್ನತ ಹುದ್ದೆಗಳಲ್ಲಿ ಇರುವವರು, ಕಲೆ-ಕ್ರೀಡೆಗಳಲ್ಲಿ ತೊಡಗಿರುವವರು ಎಲ್ಲರೂ ಪಿಹೆಚ್.ಡಿ. ಪಡೆದಿದ್ದಾರೆ ಎನ್ನುವ ಸುದ್ದಿ ಪತ್ರಿಕೆಗಳಲ್ಲಿ ಓದುವಾಗ ನಗಬೇಕೋ ಅಳಬೇಕೊ ತಿಳಿಯುವುದಿಲ್ಲ. ಯಾವುದೇ ತರಬೇತಿ, ವ್ಯವಸ್ಥಿತ ತಯಾರಿ, ಇತ್ಯಾದಿ ಏನೂ ಇಲ್ಲದೆ ಕಚೇರಿಯಲ್ಲೇ ಕುಳಿತು ಏನೋ ಒಂದು ಪ್ರಬಂಧ ಬರೆದು ಪಿಹೆಚ್.ಡಿ.ಪಡೆಯುವ ಕೆಟ್ಟ ಸಂಪ್ರದಾಯವನ್ನು ನಮ್ಮ ವಿಶ್ವವಿದ್ಯಾನಿಲಯಗಳು ಪ್ರೋತ್ಸಾಹಿಸುತ್ತಿವೆ. ಆತ್ಮಸಾಕ್ಷಿ ಇಲ್ಲದ ಅಥವಾ ಸ್ವತಃ ಸಂಶೋಧನೆ ಏನು ಅಂತ ತಿಳಿಯದ ಪ್ರಾಧ್ಯಾಪಕರು ಕೆಲವರು ಇಂತಹ ಪಿಹೆಚ್.ಡಿ.ಗಳಿಗೆ `ಮಾರ್ಗದರ್ಶಕ’ ರಾಗುತ್ತಾರೆ. ಪಿಹೆಚ್.ಡಿ. ಕ್ರಯಕ್ಕೆ ಸಿಗುತ್ತದೆ. ಪಿಹೆಚ್.ಡಿ. ಪ್ರಬಂಧ ಬರೆದುಕೊಡುವ ದಂಧೆಯೂ ಇದೆ. ಹಾಗಾಗಿ ಅಸಲಿ ಪಿಹೆಚ್.ಡಿ. ಪಡೆದವರಿಗೆ ತಮ್ಮ ಹೆಸರಿನ ಜೊತೆ ‘ಡಾ’ ಅಂತ ಸೇರಿಸಲು ನಾಚಿಕೆ ಆಗುವ ಪರಿಸ್ಥಿತಿ ಇದೆ.

ಇವೆಲ್ಲದರ ಅರ್ಥ ಇಷ್ಟೇ. ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ನಡೆಸಲು ತರಬೇತಿ ನೀಡುವ ವ್ಯವಸ್ಥೆಯೇ ಕುಸಿದುಬಿದ್ದಿದೆ. ಹಾಗಿರುವಾಗ ಮಹತ್ವದ ಸಂಶೋಧನೆಗಳನ್ನು ಭಾರತೀಯ ವಿಶ್ವವಿದ್ಯಾನಿಲಯಗಳಿಂದ (ಕೆಲವೇ ಕೆಲವನ್ನುಳಿದು) ಸದ್ಯದ ಮಟ್ಟಿಗಂತೂ ನಿರೀಕ್ಷಿಸಲಾಗದು.

*ಲೇಖಕರು ಮಂಗಳೂರು ವಿವಿಯಲ್ಲಿ ಎಂ.ಎ., ಇಂಗ್ಲೆಂಡಿನ ಸುಸೆಕ್ಸ್ ವಿವಿಯಿಂದ ಅಭಿವೃದ್ಧಿ ಅಧ್ಯಯನ ವಿಷಯದಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಪ್ರಸ್ತುತ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು, ಅಂಕಣಕಾರರು.

Leave a Reply

Your email address will not be published.