ಕೃತಕ ಬುದ್ಧಿಮತ್ತೆ ಪತ್ರಕರ್ತರಿಗೆ ಸವಾಲೇ?

ಡಾ..ಎಸ್.ಬಾಲಸುಬ್ರಹ್ಮಣ್ಯ

ಕೃತಕ ಬುದ್ಧಿಮತ್ತೆಯು ಸುದ್ದಿ ಮಾಧ್ಯಮ ಕ್ಷೇತ್ರದ ಪರಿವರ್ತನೆಯ ಮೂರನೇ ಬಹು ಮಹತ್ತರ ಕ್ರಾಂತಿಯಾಗಿದೆ. ಪತ್ರಿಕೆಗಳು ಆನ್ಲೈನ್ ಮೂಲಕ ಲಭ್ಯವಾಗುತ್ತಿರುವುದು ಮತ್ತು ಸಾಮಾಜಿಕ ಮಾಧ್ಯಮಗಳ ಆಗಮನ ನಂತರದ ಮಹತ್ವದ ಬೆಳವಣಿಗೆ ಇದಾಗಿದೆ. ಸರಳವಾಗಿ ಸುದ್ದಿ, ಲೇಖನ ಮತ್ತು ವಿಶ್ಲೇಷಣೆಗಳನ್ನು ರಚಿಸುವ ಮತ್ತು ದತ್ತಾಂಶ ಬಳಸಿ ಸುದ್ದಿ ಸಾರಾಂಶ ವಿವರಿಸುವಲ್ಲಿ ಮಹತ್ವದ ಹೆಜ್ಜೆಗಳನ್ನು ಇರಿಸಲು ಕೃತಕ ಬುದ್ಧಿಮತ್ತೆ ನೆರವಾಗುತ್ತಿದೆ.

ಗಣಕಯಂತ್ರಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಿವೆ. ಮೊಬೈಲ್ ಬಳಕೆ ಹೆಚ್ಚಾದಂತೆ ಜನಸಾಮಾನ್ಯರು ಸಹ ಗಣಕಯಂತ್ರಗಳ ಕಾರ್ಯಕ್ಷಮತೆಯ ಪರಿಚಯ ಹೊಂದುತ್ತಿದ್ದಾರೆ. ರೋಬೋಟ್ಗಳು ಅನೇಕ ಕಾರ್ಖಾನೆಗಳಲ್ಲಿ ನಿಗದಿಪಡಿಸಿದ ಕೆಲಸಗಳನ್ನು ಮಾಡುತ್ತಿವೆ. ಬರೆದುಕೊಟ್ಟ ಸುದ್ದಿಯನ್ನು ನಿರರ್ಗಳವಾಗಿ ಟಿವಿ ಯಲ್ಲಿ ಓದುವ ಸುಂದರ ರೋಬೋಟ್ ನಿರೂಪಕರನ್ನು ಸೃಷ್ಟಿಸಲಾಗಿದೆ. ಮನುಷ್ಯರಂತೆಯೇ ಹಾವ ಭಾವಗಳೊಡನೆ, ಸಂತಸದ ಸುದ್ದಿಯಾದರೆ ನಗು ಮುಖದಲ್ಲಿ ಇಲ್ಲವೇ ದುಃಖದ ಸುದ್ದಿಯಾದರೆ ಗಂಭೀರವಾಗಿ ಸುದ್ದಿಯನ್ನು ಓದುತ್ತವೆ. ಪ್ರತಿದಿನ ಇವುಗಳ ಮೇಕ್ಅಪ್ ಹಾಗೂ ಉಡುಗೆಗಳನ್ನು ಬದಲಿಸಬಹುದು. ಇವುಗಳಿಗೆ ಆಯಾಸವೇ ಆಗುವುದಿಲ್ಲ. ಸ್ವಯಂಚಾಲಿತ ಕಾರುಗಳು ನನಸಾಗುತ್ತಿವೆ. ರಿಮೋಟ್ ಮೂಲಕ ನಿಯಂತ್ರಿಸುವ ಆಟಿಕೆಗಳು ಈಗ ಸರ್ವೇ ಸಾಮಾನ್ಯವಾಗಿವೆ. ಕಂಪ್ಯೂಟರ್ ಗೇಮ್ ಗಳು ಮಕ್ಕಳನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತಿವೆ.

ಸಂಕೀರ್ಣವಾದ ಗಣಿತದ ಪರಿಣತಿಯ ನಿಯೋಜನೆಯೊಂದಿಗೆ, ಯಂತ್ರ ಕಲಿಕೆ ವ್ಯವಸ್ಥೆಯನ್ನು ಸೃಷ್ಟಿಸಲಾಗುವುದು. ಯಂತ್ರ ಭಾಷೆಯಲ್ಲಿ ಕೋಡ್ ಮಾಡಲಾದ ಯಂತ್ರಕಲಿಕೆಯ ಅಂಕಗಣಿತವನ್ನು ವಿನ್ಯಾಸಗೊಳಿಸಲಾಗುತ್ತದೆ. ಇದರಿಂದ ನಿರ್ದಿಷ್ಟ ಮಾಹಿತಿಮೂಲದಿಂದ ಬೇಕಾದ ಮಾಹಿತಿಯನ್ನು ವರ್ಗೀಕರಿಸಲು, ಅರ್ಥಮಾಡಿಕೊಳ್ಳಲು ಮತ್ತು ಅಂದಾಜು ಮಾಡಲು ಯಂತ್ರ ಕಲಿಕೆ ಅನುವು ಮಾಡಿಕೊಡುತ್ತದೆ. ತಂತ್ರಜ್ಞಾನ ಸ್ವಯಂ ಚಾಲಿತ ಕಾರುಗಳು, ಚಿತ್ರ ಮತ್ತು ಪದಗಳ ಗುರುತಿಸುವಿಕೆ, ಉಪಯುಕ್ತ ವೆಬ್ ಹುಡುಕಾಟ ಮತ್ತು ಇತರೆ ವ್ಯಾಪಕವಾದ ಪ್ರಯೋಗಗಳಲ್ಲಿ ಅಳವಡಿಸಲು ಅನುವು ಮಾಡಿದೆ.

ಹಾಗಾದರೆ, ತಂತ್ರಜ್ಞಾನ ಪತ್ರಿಕಾ ಲೋಕವನ್ನು ಪ್ರವೇಶಿಸಿಲ್ಲವೇ? ಖಂಡಿತವಾಗಿ. ಅವು ಅಪರೋಕ್ಷವಾಗಿ ಸುದ್ದಿಮನೆಯನ್ನು ಒಳಹೊಕ್ಕಿವೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣಕಯಂತ್ರಗಳ ಬಳಕೆ 1970 ದಶಕದಲ್ಲಿ ವ್ಯಾಪಕವಾಗಿ ವಿಸ್ತಾರಗೊಂಡಿತು. ಪ್ರತಿಸಲ ಅಚ್ಚುಮೊಳೆ ತಯಾರಿಸಿ ಬಳಸುವ ಮೊನೋಟೈಪ್ಲೈನೋಟೈಪ್ ಬದಲು ಗಣಕಯಂತ್ರದ ಪರದೆಯ ಮೇಲೆ ಅಕ್ಷರಗಳು ಮೂಡಲಾರಂಭಿಸಿದವು. ಅವುಗಳನ್ನು ಮುದ್ರಿಸಿ ಪತ್ರಿಕೆಯ ಆಕಾರಕ್ಕೆ ತಕ್ಕಂತೆ ಅಂಟಿಸುವ ವ್ಯವಸ್ಥೆ ಆರಂಭವಾದಮೇಲೆ ಓದುಗರಿಗೆ ಪತ್ರಿಕೆಗಳು ಹೆಚ್ಚು ಆಕರ್ಷಕವಾದವು. ಪುಟವಿನ್ಯಾಸ ತಂತ್ರಾಂಶಗಳು ಬಳಕೆಗೆ ಬಂದನಂತರ ಅಕ್ಷರ ಹಾಗೂ ಇತರೆ ವಿವರ ನೀಡುವ ಚಿತ್ರಗಳು, ಕೋಷ್ಟಕಗಳು ಹಾಗು ಅಲಂಕಾರ ವೃದ್ಧಿಸುವ ಸಚಿತ್ರಗಳ ಬಳಕೆ ಸುಲಭವಾಯಿತು. ಅಕ್ಷರ ಮಾಹಿತಿಗೆ ಇವೆಲ್ಲಾ ಪೂರಕವಾದವು.

ಅನುಕೂಲತೆಗಳು ಎಲ್ಲ ಭಾಷಾ ಪತ್ರಿಕೆಗಳಿಗೆ ನೆರವಾದವು. ತಂತ್ರಾಂಶ ಅಭಿವೃದ್ದಿಗೊಂಡಂತೆ ಕಾಗುಣಿತ ಸರಿಪಡಿಸುವ, ಸಮಾನಾಂತರ ಇಲ್ಲವೇ ವಿರುದ್ಧಾರ್ಥ ಪದಗಳ ಸೂಚನೆ ಹಾಗು ವ್ಯಾಕರಣ ಲೋಪಗಳನ್ನು ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ತಂತ್ರಾಂಶಗಳು ಇಂಗ್ಲಿಷ್ ಹಾಗೂ ಇತರೆ ವಿಶ್ವದ ಪ್ರಮುಖ ಭಾಷೆಗಳಲ್ಲಿ ಅಭಿವೃದ್ಧಿಗೊಂಡವು. ವರ್ಷಗಳುರಿಳಿದಂತೆ ತಂತ್ರಾಂಶಗಳು ಮತ್ತಷ್ಟು ಬಳಕೆದಾರರ ಸ್ನೇಹಿಗಳಾದವು. ಇದಕ್ಕೆ ಕಾರಣ ಕೃತಕ ಬುದ್ಧಿಮತ್ತೆಯ ವಿಕಾಸ.

ಹಾಗಾದರೆ ಕೃತಕ ಬುದ್ಧಿಮತ್ತೆ ಎಂದರೇನು? ಮಾನವರಂತೆ ತಾರ್ಕಿಕವಾಗಿ ಆಲೋಚಿಸಿ ಯಾಂತ್ರಿಕೃತವಾಗಿ ಕೆಲಸ ನಿರ್ವಹಿಸುವ ಸಾಮಥ್ರ್ಯವನ್ನು ಕೃತಕ ಬುದ್ಧಿಮತ್ತೆ ಎನ್ನಬಹುದು. ಅಂದರೆ ಯಾವುದು ಸರಿ ಯಾವುದು ತಪ್ಪು ಎಂದು ಗ್ರಹಿಸಿ ಮೊದಲೇ ನಿಗದಿಪಡಿಸಿದ ಸೂಚನೆಗಳ ಅನ್ವಯ ಕೆಲಸ ನಿರ್ವಹಣೆ ಮಾಡುವ ಧಾರಣಶಕ್ತಿ. ಇದು ಮಾನವನ ಬುದ್ಧಿಮತ್ತೆಯ ಅನುಕರಣೆಯನ್ನು ಯಂತ್ರಗಳ ಮೂಲಕ ನಿರ್ವಹಿಸುವ ಪ್ರಕ್ರಿಯೆ. ಕೃತಕ ಬುದ್ಧಿಮತ್ತೆಯ ಗುರಿಗಳಲ್ಲಿ ಕಲಿಕೆ, ತಾರ್ಕಿಕತೆ ಮತ್ತು ಗ್ರಹಿಕೆಗಳು ಸೇರಿವೆ.

ಭಾರತೀಯ ಸುದ್ದಿ ಮಾಧ್ಯಮದಲ್ಲಿ ಕೃತಕ ಬುದ್ಧಿಮತ್ತೆ

ಪ್ರಮುಖ ಮಾಹಿತಿ ಮಾಧ್ಯಮಗಳಿಗೆ ಇಡೀ ಜಗತ್ತೇ ಒಂದು ಬೃಹತ್ ಮಾರುಕಟ್ಟೆಯಾಗಿದೆ. ಆದರೆ ಭಾಷೆಗಳ ತೊಡಕುಗಳಿಂದ ಹೊರಬರಲು, ಅವು ನೂತನ ಕೃತಕ ಬುದ್ಧಿಮತ್ತೆ ತಂತ್ರಾಂಶಕ್ಕೆ ಮೊರೆಹೋಗಿವೆ. ಉದಾಹರಣೆಗೆ ಯು ಟ್ಯೂಬ್, ಫೇಸ್ ಬುಕ್ ಮುಂತಾದ ಜಾಗತಿಕ ಮಾಧ್ಯಮ ಸಂಸ್ಥೆಗಳು ಭಾಷಾಂತರ ತಂತ್ರಾಂಶಗಳನ್ನು ಅಳವಡಿಸಿ ಜಗತ್ತಿನ ಎಲ್ಲ ಪ್ರಮುಖ ಭಾಷಿಕರನ್ನು ತಲುಪುತ್ತಿವೆ.

ಇದೇ ತಂತ್ರಾಂಶಗಳನ್ನು ಕೆಲ ಭಾರತೀಯ ಸುದ್ದಿ ಮಾಧ್ಯಮಗಳು ಅಭಿವೃದ್ಧಿಪಡಿಸಿ, ಅಳವಡಿಸಿಕೊಂಡಿವೆ. ಸುದ್ದಿ ಪೆೀರ್ಟಲ್ ಗಳ ಪೈಕಿ ಇನ್ಶಾಟ್ರ್ಸ್ ಎಂಬ ಸಂಸ್ಥೆ ಕೇವಲ 60 ಪದಗಳಲ್ಲಿ ಪ್ರಮುಖ ಸುದ್ದಿಗಳನ್ನು ಬಹು ಸಂಕ್ಷಿಪ್ತವಾಗಿ ಓದುಗರಿಗೆ ನೀಡುತ್ತಿದೆ. ಸ್ಮಾರ್ಟ್ ಫೆೀನ್ ಗಳ ಬಳಕೆಯಲ್ಲಿ ವಿಶ್ವದಲ್ಲೇ ಎರಡನೆಯ ಸ್ಥಾನದಲ್ಲಿರುವ ಭಾರತೀಯರನ್ನು ಗಮನದಲ್ಲಿರಿಸಿ ಸೇವೆಯನ್ನು ಜಾರಿಗೊಳಿಸಲಾಗಿದೆ.

ತಂತ್ರಜ್ಞಾನ ಮತ್ತು ಸುದ್ದಿ ಪ್ರಕಟಿಸುವ ಆಕಾರ ಹೊಂದಿಕೆಯಾದರೆ ಮಾಹಿತಿ ಸಂಗ್ರಹ ಮತ್ತು ವರ್ಗಾವಣೆ ಸುಲಭವಾಗುತ್ತದೆ. ರಾಪಿಡ್ 60 ಎಂಬ ಎಐಬೆಂಬಲಿತ ಅಲ್ಗಾರಿದಮ್ ಸ್ವಯಂಚಾಲಿತವಾಗಿ ಒಂದು ಸುದ್ದಿ ಲೇಖನವನ್ನು 60 ಪದಗಳಲ್ಲಿ ಸಂಕ್ಷಿಪ್ತಗೊಳಿಸುತ್ತದೆ. ಓದುಗರ ಆಸಕ್ತಿ ಮತ್ತು ಅವರು ಓದಲು ಕಳೆಯುವ ಸಮಯವನ್ನು ಸೂಕ್ಷ್ಮವಾಗಿ ಗಮನಿಸಿ, ಸ್ವಯಂಚಾಲಿತವಾಗಿ ಸುದ್ದಿಗಳನ್ನು ಮುನ್ನೆಲೆಗೆ ತರುತ್ತದೆ. ಸಂಸ್ಥೆ ಬಳಸುವ ತಂತ್ರಾಂಶ ಪ್ರತಿದಿನ ನೂರಾರು ಸುದ್ದಿಗಳನ್ನು ಸಿದ್ಧಪಡಿಸುವ ಸಾಮಥ್ರ್ಯ ಹೊಂದಿದೆ. ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಂತ್ರಾಂಶ ಅಭಿವೃದ್ಧಿಪಡಿಸಿ ಸುದ್ದಿ ಪೆೀರ್ಟಲ್ ಅನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ಮೊಬೈಲ್ ಕ್ಷೇತ್ರದಲ್ಲಿ ಜಿಯೋ ಗಣನೀಯ ಸಾಧನೆ ಮಾಡಿದೆ. ಜಿಯೋ ನ್ಯೂಸ್ ಆಪ್ 12 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಜಿಯೋ ನ್ಯೂಸ್ ದೇಶವಿದೇಶಗಳ 150 ಸುದ್ದಿ ವಾಹಿನಿಗಳು, 800ಕ್ಕೂ ಹೆಚ್ಚು ನಿಯತಕಾಲಿಕೆಗಳು ಹಾಗೂ 250ಕ್ಕೂ ಹೆಚ್ಚು ಪತ್ರಿಕೆಗಳು, ಆನ್ಲೈನ್ ಬ್ಲಾಗ್ ಗಳಿಂದ ಸುದ್ದಿ ಸಂಗ್ರಹಿಸುವ ಸಾಮಥ್ರ್ಯ ಹೊಂದಿದೆ. ಟ್ರೆಂಡಿಂಗ್ ವೀಡಿಯೊಗಳ ಬಗ್ಗೆ ಓದುಗರಿಗೆ ಸೂಚನೆಯನ್ನು ನೀಡುತ್ತದೆ.

ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯನ್ನು ಅಳವಡಿಸಿ ಓದುಗರಿಗೆ ಅತ್ಯಂತ ಪ್ರಸ್ತುತಸುದ್ದಿಗಳು ಮತ್ತು ವಿಡಿಯೋಗಳನ್ನು ನೀಡಲು ಕೃತಕ ಬುದ್ಧಿಮತ್ತೆ ತಂತ್ರಾಂಶ ನೆರವಾಗಿದೆ. ಓದುಗರು ತಮ್ಮ ಆಸಕ್ತಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಆಪ್ ಅನ್ನು ವೈಯಕ್ತೀಕರಿಸಲು ಅವಕಾಶ ಮಾಡಿಕೊಡುತ್ತದೆ.

ಪತ್ರಿಕೆಗಳನ್ನು ಮುದ್ರಿಸಿ ಓದುಗರಿಗೆ ತಲುಪಿಸಿದರೆ ಪ್ರಕಾಶಕರ ಕೆಲಸ ಮುಗಿಯಿತು ಎನ್ನುವ ಕಾಲವೀಗ ಇಲ್ಲ. ಏಕೆಂದರೆ ಬಹುತೇಕ ಎಲ್ಲ ಪತ್ರಿಕೆಗಳನ್ನು ಅಂತರ್ಜಾಲದ ಮೂಲಕ ಓದಬಹುದು. ಸಂಪಾದಕರನ್ನು ಸಂಪರ್ಕಿಸುವ, ಅಭಿಪ್ರಾಯಗಳನ್ನು ತಿಳಿಸುವ, ವರದಿಲೇಖನಗಳಲ್ಲಿನ ತಪ್ಪುಗಳು ಇಲ್ಲವೇ ಮುದ್ರಣ ದೋಷಗಳನ್ನು ತಕ್ಷಣವೇ ತಿಳಿಸುವ ಸಲಿಗೆ ಈಗ ಓದುಗರಿಗೆ ಲಭ್ಯ. ಅಂತರ್ಜಾಲ ಅವಕಾಶವನ್ನು ಕಲ್ಪಿಸಿದೆ. ಓದುಗರ ಆಸಕ್ತಿಗಳನ್ನು ಅರಿಯುವುದು ಸಹ ಈಗ ಸುಲಭ. ಯಾವ ಓದುಗ ಒಟ್ಟು ಎಷ್ಟು ಸಮಯವನ್ನು ಪತ್ರಿಕೆ ಓದಲು ವ್ಯಯಿಸುತ್ತಾನೆ, ಯಾವ ಸಮಯದಲ್ಲಿ ಓದುತ್ತಾನೆ, ಒಂದು ದಿನದ ಅವಧಿಯಲ್ಲಿ ಪುನಃ ಓದಲು ಜಾಲತಾಣಕ್ಕೆ ಬರುತ್ತಾನೆಯೇ, ಯಾವ ವಿಷಯಗಳಲ್ಲಿ ಆತನಿಗೆ ಆಸಕ್ತಿ ಇದೆ ಮುಂತಾದ ವಿಷಯಗಳ ಮಾಹಿತಿ ಕಲೆ ಹಾಕುವುದು ಬಹು ಸುಲಭವಾಗಿದೆ. ಬೇರೆಬೇರೆ ಮಾಹಿತಿಯನ್ನು ಹುಡುಕಲು ಒಂದು ಜಾಲತಾಣಕ್ಕೆ ಎಷ್ಟು ಸಲ ಭೇಟಿ ನೀಡಿರುವಿರಿ ಎಂಬ ಸುಳಿವು ಇಂದು ಬಹು ಸುಲಭವಾಗಿ ಸಿಗುತ್ತಿದೆ.

ಇದೆಲ್ಲ ಈಗ ಸಂಭವನೀಯ ಆಗುತ್ತಿರುವುದು ಕಂಪ್ಯೂಟರುಗಳ ಜಾಣ ನಿರ್ವಹಣೆಯ ಕೃತಕ ಬುದ್ಧಿಮತ್ತೆ (ಂಡಿಣiಜಿiಛಿiಚಿಟ Iಟಿಣeಟಟಟಿಛಿe) ಅಂಶ. ವಿಶ್ವದ ಹಲವಾರು ಪ್ರಮುಖ ಪತ್ರಿಕೆಗಳು, ಸುದ್ದಿ ಜಾಲತಾಣಗಳು ಹಾಗು ಸುದ್ದಿ ಸಂಸ್ಥೆಗಳು ನೂತನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿ, ತಮ್ಮ ಓದುಗರ ಆಸಕ್ತಿಗಳ ಮಾಹಿತಿಯನ್ನು ಸುಲಭವಾಗಿ ಕಲೆಹಾಕುತ್ತಿವೆ. ರಾಯಿಟರ್, ಅಸೋಸಿಯೇಟೆಡ್ ಪ್ರೆಸ್, ಫೆೀಬ್ರ್ಸ್, ಪೆ್ರಪಬ್ಲಿಕ, ನ್ಯೂಯಾರ್ಕ್ ಟೈಮ್ಸ್, ಲಾಸ್ ಏಂಜಲೀಸ್ ಟೈಮ್ಸ್ ಮುಂತಾದವರು ನೂತನ ತಂತ್ರಜ್ಞಾನ ಆಧಾರಿತ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಅಳವಡಿಸಿಕೊಂಡಿದ್ದಾರೆ. ತಮ್ಮ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಅಗತ್ಯವೆನಿಸಿದಂತೆ ತಂತ್ರಾಂಶಗಳು ಕೆಲಸ ನೆರವೇರಿಸುತ್ತವೆ. ದಿನಗಳಲ್ಲಿ ಬಹುತೇಕ ಎಲ್ಲ ಸುದ್ದಿಸಂಸ್ಥೆಗಳು, ದೈನಿಕಗಳು ಹಾಗೂ ಸುದ್ದಿ ಪೆೀರ್ಟಲ್ ಗಳು ತಮ್ಮದೇ ಆದ ವೆಬ್ ತಾಣಗಳನ್ನು ಹೊಂದಿವೆ.

ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ ವರದಿ, ಲೇಖನಗಳನ್ನು ಸಜ್ಜುಗೊಳಿಸುವುದು ಪತ್ರಕರ್ತರ ಪ್ರಮುಖ ಕೆಲಸ. ಅವರ ಕೆಲಸಗಳನ್ನು ಸರಳಗೊಳಿಸಲು ಕೃತಕ ಬುದ್ಧಿಮತ್ತೆ ನೆರವಾಗುತ್ತಿದೆ. ಪ್ರತಿದಿನ ಪ್ರಕಟಿಸಬೇಕಾದ ಮಾಮೂಲು ಸುದ್ದಿಗಳನ್ನು ಕಂಪ್ಯೂಟರ್ ಗಳು ಸಿದ್ಧಪಡಿಸುತ್ತಿವೆ. ಒಂದು ಕಂಪನಿಯ ತ್ರೈಮಾಸಿಕ ಇಲ್ಲವೇ ವಾರ್ಷಿಕ ವರದಿಗಳು ನೂರಿನ್ನೂರು ಪುಟಗಳಿರುತ್ತವೆ. ಕೆಲವೇ ಸೆಕೆಂಡುಗಳಲ್ಲಿ ವರದಿಗಳನ್ನು ಪರಿಶೀಲಿಸಿ ನಿಗದಿಗೊಳಿಸಿದ ಪದಗಳ ಸಂಖ್ಯೆಯಲ್ಲಿ ಸುದ್ದಿಯನ್ನು ನೂತನ ತಂತ್ರಾಂಶಗಳು ಸಿದ್ಧಮಾಡುತ್ತವೆ. ಇಂತಹ ವರದಿಯೊಂದರಲ್ಲಿ ಯಾವ ಅಂಶಗಳು ಮುನ್ನಲೆಯಲ್ಲಿರಬೇಕೆಂಬುದನ್ನು ಪತ್ರಕರ್ತರು ಯೋಚಿಸುವ ರೀತಿಯಲ್ಲೇ ತಂತ್ರಾಂಶಗಳು ಸಿದ್ಧಪಡಿಸುತ್ತವೆ. ಯಾವುದೊ ಒಂದು ಪ್ರದೇಶದಲ್ಲಿ ಭೂಕಂಪ ಸಂಭವಿಸಿತೆನ್ನಿ. ಒಂದೆರಡು ನಿಮಿಷಗಳಲ್ಲಿ ಸರಕಾರ ಇಲ್ಲವೇ ಅಧಿಕೃತ ಸಂಸ್ಥೆಗಳ ವರದಿಗಳನ್ನು ಆಧರಿಸಿ ತಂತ್ರಾಂಶಗಳು ಪತ್ರಿಕಾ ವರದಿ ಸಿದ್ಧಪಡಿಸಿ ಜಾಲತಾಣದಲ್ಲಿ ಸೇರಿಸಿಬಿಡುತ್ತವೆ.

ಪತ್ರಿಕೆಗಳಿಗೆ ಬಹು ಪ್ರಮುಖ ಆದಾಯದ ಮೂಲ ಜಾಹೀರಾತುಗಳಿಂದ ಬರುವ ಹಣ. ಶೇ. 60-70 ವರಮಾನ ಇವುಗಳಿಂದಲೇ ಬರಬೇಕು. ಡಿಜಿಟಲ್ ಮಾಧ್ಯಮಗಳ ತೀವ್ರತರ ಬೆಳವಣಿಗೆಯಿಂದಾಗಿ ಜಾಹೀರಾತುಗಳು ಮಾಧ್ಯಮಗಳತ್ತ ಮುಖಮಾಡಿವೆ. ಹೀಗಾಗಿ ವಿಶ್ವದಾದ್ಯಂತ ಪತ್ರಿಕೆಗಳು ಆರ್ಥಿಕ ಹಿನ್ನಡೆ ಅನುಭವಿಸುತ್ತಿವೆ. ಪತ್ರಕರ್ತರ ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ. ಸಣ್ಣ ಪತ್ರಿಕೆಗಳು ಮುಚ್ಚುತ್ತಿವೆ. ಇರುವಷ್ಟು ಪತ್ರಕರ್ತರಿಗೆ ಜವಾಬ್ದಾರಿಯುತ ಕೆಲಸ ನೀಡಿ, ಮಹತ್ವದ ಕೆಲಸಗಳಿಗೆ ವಿಶೇಷ ಒತ್ತು ನೀಡಲು ಪತ್ರಿಕೆಗಳು ಹೆಣಗುತ್ತಿವೆ.

ಪ್ರತಿ ಪತ್ರಿಕೆಗೆ ತನ್ನದೇ ಆದ ಶೈಲಿಸೂತ್ರವಿರುತ್ತದೆ. ಹೆಸರು, ಸ್ಥಳಗಳು, ಹುದ್ದೆಗಳನ್ನು ಹೀಗೆಯೇ ಬರೆಯಬೇಕೆಂಬ ನಿಯಮಗಳಿರುತ್ತವೆ. ಒಂದುವೇಳೆ ಓರ್ವ ಪತ್ರಕರ್ತ ಸರಿಯಾಗಿ ಇವುಗಳನ್ನು ಬರೆಯದಿದ್ದರೆ, ಸುದ್ದಿ ಪ್ರಕಟಿಸುವ ಮುನ್ನ ಇಂತಹ ತಪ್ಪುಗಳನ್ನೆಲ್ಲ ತಂತ್ರಾಂಶಗಳು ಸರಿಪಡಿಸುತ್ತವೆ. ಇದರಿಂದ ಸಂಪಾದನಾ ಸಮಯ ಉಳಿಸಬಹುದು. ಎಷ್ಟೋಸಲ ಓರ್ವ ಪತ್ರಕರ್ತ ಬರೆಯುವ ವರದಿಗಿಂತ, ಯಂತ್ರಗಳು ಸಿದ್ಧಪಡಿಸುವ ವರದಿಗಳು ಉತ್ತಮವಾಗಿರುತ್ತವೆ. ಆದರೆ ಇಂತಹ ವರದಿಗಳಲ್ಲಿ ಮಾನವೀಯ ಅಂಶಗಳ ಸ್ಪರ್ಶ ಇಲ್ಲದಿರಬಹುದು. ಆದರೆ ಸುದ್ದಿಯ ಮುಖ್ಯ ಅಂಶಗಳು ಓದುಗರಿಗೆ ಮುಟ್ಟುತ್ತದೆ.

ನೀವು ಆರ್ಥಿಕ ಸುದ್ದಿಗಳನ್ನು ಗಮನಿಸಿ. ಅಲ್ಲಿ ಕೆಲವೇ ಕಂಪನಿಗಳ ವಹಿವಾಟಿನ ಸುದ್ದಿಗಳು ಮಾತ್ರ ಬಹುತೇಕ ಪ್ರಕಟವಾಗುತ್ತವೆ. ಏಕೆಂದರೆ ಇತರೆ ಕಂಪನಿಗಳ ವರದಿಗಳನ್ನು ಓದಿ ಸುದ್ದಿ ಮಾಡಲು ಸಿಬ್ಬಂದಿಗಳ ಕೊರತೆ. ಆದರೆ ಈಗಿನ ತಂತ್ರಾಂಶಗಳ ನೆರವಿನಿಂದ ಬಹುತೇಕ ಸಂಸ್ಥೆಗಳ ಲಾಭನಷ್ಟ ವರದಿಗಳನ್ನು ಪ್ರಕಟಿಸುವುದು ಸಾಧ್ಯವಾಗಿದೆ. ಕೆಲವೇ ನಿಮಿಷಗಳಲ್ಲಿ ಕಂಪನಿಯ ವರದಿಗಳನ್ನು ವಿಶ್ಲೇಷಿಸಿ ಪ್ರಕಟಿಸಲು ಯೋಗ್ಯವಾದ ರೀತಿಯಲ್ಲಿ ಸುದ್ದಿಗಳು ಸಿದ್ಧಗೊಳ್ಳುತ್ತವೆ. ಇದರಿಂದ ಮಾರುಕಟ್ಟೆಯಲ್ಲಿ ಹಣ ಹೂಡಿಕೆದಾರರು ಖುಷಿಯಾಗಿದ್ದಾರೆ ಮತ್ತು ಕಂಪನಿಗಳಿಂದ ಅಧಿಕ ಜಾಹೀರಾತುಗಳು ಸಹ ಪತ್ರಿಕೆಗಳಿಗೆ ಬರುತ್ತಿವೆ. ಇವೆಲ್ಲ ಸಾಧ್ಯವಾಗಿರುವುದು ಕೃತಕ ಬುದ್ದಿಮತ್ತೆ ನೆರವಿನಿಂದ.

ಬಹುತೇಕ ದೇಶಗಳಲ್ಲಿ ಮುದ್ರಿತ ಪತ್ರಿಕೆಗಳ ಪ್ರಸಾರ ಸಂಖ್ಯೆ ಕುಸಿಯುತ್ತಿದೆ. ಅಂತರಜಾಲ ವಿಸ್ತರಣೆಯಿಂದಾಗಿ ಮೊಬೈಲ್, ಟ್ಯಾಬ್ ಇಲ್ಲವೇ ಕಂಪ್ಯೂಟರ್ ನೆರವಿನಿಂದ ಪತ್ರಿಕೆಗಳನ್ನು ಓದಬಹುದಾಗಿದೆ. ಸಾಧನಗಳಲ್ಲಿ ಸುಲಭವಾಗಿ ಓದಲೆಂದೇ ಪತ್ರಿಕೆಗಳ ಪುಟಗಳನ್ನೂ ಬೇರೆಬೇರೆ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ವಿಶ್ವದ ಹೆಸರಾಂತ ಪತ್ರಿಕೆ `ದಿ ನ್ಯೂಯಾರ್ಕ್ ಟೈಮ್ಸ್ ಮುದ್ರಿತ ಪ್ರತಿಗಳ ಪ್ರತಿದಿನದ ಪ್ರಸಾರ ಕೇವಲ ನಾಲ್ಕು ಲಕ್ಷ. ಆದರೆ ಅಡುಗೆ, ಪದಬಂಧ, ವಿಡಿಯೋ ಮುಂತಾದ ಸೇವೆಗಳಿಗಾಗಿ ಅಮೆರಿಕಾ ಸೇರಿದಂತೆ ವಿಶ್ವದಾದ್ಯಂತ 76 ಲಕ್ಷ ಮಂದಿ ಹಣ ಕೊಟ್ಟು ಜಾಲತಾಣಕ್ಕೆ ಭೇಟಿ ನೀಡುತ್ತಾರೆ. ಅದೇ ರೀತಿ ಇಂಗ್ಲೆಂಡಿನ `ದಿ ಗಾರ್ಡಿಯನ್ಪತ್ರಿಕೆಯ ಮುದ್ರಿತ ಪ್ರತಿಗಳ ಪ್ರತಿದಿನದ ಪ್ರಸಾರ ಸಂಖ್ಯೆ ಸುಮಾರು ಒಂದು ಲಕ್ಷ ಮಾತ್ರ. ಆದರೆ ಪತ್ರಿಕೆಯ ಜಾಲತಾಣದಲ್ಲಿ ಪ್ರತಿತಿಂಗಳು 35.6 ಮಿಲಿಯನ್ ಅಂದರೆ 350.60 ಲಕ್ಷ ಓದುಗರು ಶುಲ್ಕ ನೀಡಿ ಓದುತ್ತಾರೆ. ಅಂದರೆ ಪ್ರತಿದಿನ ಸುಮಾರು 12 ಲಕ್ಷ ಓದುಗರು ಪ್ರಪಂಚದ ಎಲ್ಲೆಡೆಯಿಂದ ಪತ್ರಿಕೆಯ ಜಾಲತಾಣಕ್ಕೆ ಭೇಟಿ ನೀಡುತ್ತಾರೆ.

ಈಗ ಪ್ರತಿಕಾ ಪ್ರಕಾಶಕರ ಸವಾಲೆಂದರೆ, ಇರುವ ಆನ್ ಲೈನ್ ಓದುಗರನ್ನು ಉಳಿಸಿಕೊಂಡು ಹೊಸ ಓದುಗರನ್ನು ಆಕರ್ಷಿಸುವುದು. ಓದುಗರ ಸಂಖ್ಯೆಯನ್ನು ಹೆಚ್ಚಿಸಿ ಮತ್ತಷ್ಟು ಆದಾಯ ಸಂಪಾದಿಸುವಲ್ಲಿ ಕೃತಕ ಬುದ್ಧಿಮತ್ತೆ ತಂತ್ರಾಂಶಗಳು ಬಹುವಾಗಿ ಉಪಯುಕ್ತವಾಗಿವೆ.

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಪದಬಂಧ ಮತ್ತು ಅಡುಗೆ ಅಂಕಣಗಳು ಬಹು ಹೆಸರುವಾಸಿ. ಅಂಕಣಗಳನ್ನು ಮಾತ್ರ ಹಣ ನೀಡಿ ಓದುವ ಸಹಸ್ರಾರು ಓದುಗರು ದೇಶವಿದೇಶಗಳಲ್ಲಿದ್ದಾರೆ. ಆನ್ ಲೈನ್ ಓದುಗರ ಬೇಕುಬೇಡಗಳನ್ನು ತಿಳಿಯುವುದು ಮತ್ತು ಅವರಿಂದ ಚಂದಾ ಹಣ ನೀಡಿಕೆ ಬಗ್ಗೆ ನೆನಪಿಸುವುದು, ಹಣ ನೀಡಿದ ಮೇಲೆ ರಶೀದಿ ನೀಡುವುದು ಹಾಗೂ ಹೊಸ ಓದುಗರ ಮನವೊಲಿಸಿ ಅವರ ಮಿಂಚಂಚೆ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ನಯವಾಗಿ ಪಡೆಯುವ ಕೆಲಸಗಳನ್ನು ಕೃತಕ ಬುದ್ಧಿಮತ್ತೆ ತಂತ್ರಾಂಶಗಳೇ ಮಾಡುತ್ತವೆ. ಕೆಲಸಗಳಿಗೆ ನೌಕರರು ಬೇಡ.

ಆನ್ಲೈನ್ ಓದುಗರ ಆಸಕ್ತ ಸುದ್ದಿ ಕ್ಷೇತ್ರಗಳನ್ನು ಬಹು ಸುಲಭವಾಗಿ ವಿಶ್ಲೇಷಿಸಲು ಈಗ ಸಾಧ್ಯವಾಗುತ್ತಿದೆ. ಉಚಿತವಾಗಿ ನೀಡಲಾಗುತ್ತಿದ್ದ ಆನ್ ಲೈನ್ ಪತ್ರಿಕೆಗಳಿಗೆ ಈಗ ಹಣ ನೀಡಿ ಓದಲು ಓದುಗರನ್ನು ಮನವೊಲಿಸಲಾಗುತ್ತಿದೆ. ಇಂಗ್ಲಿಷಿನಲ್ಲಿ ಇದಕ್ಕೆ ಪೆವಾಲ್ ಎನ್ನಲಾಗುತ್ತದೆ. ಅನೇಕ ಕನ್ನಡ ಪತ್ರಿಕೆಗಳು ನಿಯಮವನ್ನು ಜಾರಿಗೊಳಿಸಿವೆ. ಯಾವ ಬಗೆಯ ಸುದ್ದಿಗಳನ್ನು ಓದಲು ಓದುಗರು ಪದೇಪದೇ ಪತ್ರಿಕೆಯ ಜಾಲತಾಣಕ್ಕೆ ಬರುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸುವ ತಂತ್ರಾಂಶ, ಅವರ ಮನವೊಲಿಸುವ ಸಂದೇಶಗಳನ್ನು ಕಳುಹಿಸಿ ಚಂದಾದಾರರಾಗಲು ಪ್ರಯತ್ನಿಸುತ್ತದೆ.

ಕೆನಡಾದ `ದಿ ಗ್ಲೋಬ್ ಅಂಡ್ ಮೇಲ್ಪತ್ರಿಕೆ ಅಳವಡಿಸಿರುವ `ಸೋಪಿತಂತ್ರಾಂಶ ಬಹು ಜಾಣತನದಿಂದ ಕೆಲಸ ನಿರ್ವಹಿಸಿ, ಪತ್ರಿಕೆಯ ಯಶಸ್ಸಿಗೆ ಕಾರಣವಾಗಿದೆ. 30:70 ಇದ್ದ ಚಂದಾ ಮತ್ತು ಜಾಹೀರಾತಿನ ಆದಾಯ ಪ್ರಮಾಣವನ್ನು ಈಗ 70:30 ಕ್ಕೆ ಬದಲಿಸಿದೆ ಎಂದರೆ ಆಶ್ಚರ್ಯವಾಗದಿರದು. ಪತ್ರಿಕೆಯನ್ನು ಓದಲು ಬರುವ ಪ್ರತಿಯೊಬ್ಬ ಓದುಗನ ಓದುವ ಹವ್ಯಾಸಗಳನ್ನು ಬಹು ಸೂಕ್ಷ್ಮವಾಗಿ ಅಧ್ಯಯನಿಸಿ, ಆತನನ್ನು ಹಣ ನೀಡಿ ಆನ್ ಲೈನ್ ನಲ್ಲಿ ಓದಲು ಪ್ರೇರೇಪಿಸುತ್ತದೆ. ಯಾವ ಸುದ್ದಿಲೇಖನಗಳನ್ನು ಉಚಿತವಾಗಿ ನೀಡಬೇಕು, ಯಾವುಗಳನ್ನು ಪೆವಾಲ್ ನಲ್ಲಿ ನೀಡಬೇಕೆಂಬುದನ್ನು ಜಾಣ್ಮೆಯಿಂದ ನಿರ್ವಹಿಸಲು ಸಾಧ್ಯವಾಗಿರುವುದರಿಂದ ಪತ್ರಿಕೆ ಯಶಸ್ಸನ್ನು ಸಾಧಿಸಿದೆ.

ಪತ್ರಕರ್ತರ ಕೆಲಸವನ್ನು ನೂತನ ತಂತ್ರಾಂಶಗಳು ಶೇ.20 ರಷ್ಟು ಕಡಿಮೆಗೊಳಿಸಿವೆ ಎಂದು ಅನೇಕ ಪತ್ರಿಕಾ ಹಾಗು ಸುದ್ದಿಸಂಸ್ಥೆಗಳು ಪ್ರತಿಪಾದಿಸುತ್ತಿವೆ. ಪತ್ರಕರ್ತರ ಮೇಲಿನ ವೇತನ ವೆಚ್ಚವನ್ನು ಕಡಿತಗೊಳಿಸಲು ಮುಂದಿನ ದಿನಗಳಲ್ಲಿ ತಂತ್ರಾಂಶಗಳನ್ನು ವಿಸ್ತರಿಸಿದರೆ ಆಶ್ಚರ್ಯವೇನಿಲ್ಲ.

*ಲೇಖಕರು ವಿಶ್ರಾಂತ ಪತ್ರಿಕೋದ್ಯಮ ಪ್ರಾಧ್ಯಾಪಕರು ಮತ್ತು ಮಾಧ್ಯಮ ತಜ್ಞರು.

Leave a Reply

Your email address will not be published.