ಕೃಷಿ ಕಾಯಿದೆಗಳಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

ಪ್ರತಾಪ್ ಭಾನು ಮೆಹ್ತಾ

ಕೃಷಿ ಕಾಯಿದೆಗಳ ವಿವಾದವು ಜಟಿಲವಾದುದು. ಈ ವಿಷಯದಲ್ಲಿ ಯಾರು ಯಾರ ಪರವಾಗಿದ್ದಾರೆ ಎಂಬುದಕ್ಕಿAತ ಸರ್ವೋಚ್ಚ ನ್ಯಾಯಾಲಯವು ತನ್ನ ವ್ಯಾಖ್ಯಾನದ ಕರ್ತವ್ಯವನ್ನು ಹೇಗೆ ನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಹೆಚ್ಚು ಆತಂಕಿತರಾಗಬೇಕಾಗಿದೆ.

ಸರ್ವೋಚ್ಚ ನ್ಯಾಯಾಲಯವು ಹೆಚ್ಚು ಹೆಚ್ಚಾಗಿ ಕಥಾನಕವೊಂದರ ರೂಪರಹಿತ ಆಕೃತಿಯಾಗಿ ಕಾಣುತ್ತಿದೆ. ಆದರೆ ಅದು ಹೇಗೆ ಕಾಣಬೇಕಾಗಿತ್ತೋ ಹಾಗೆ ಕಾಣುತ್ತಿಲ್ಲ. ಇದರ ರೂಪವು ರಹಸ್ಯಾತ್ಮಕವಾಗಿ ಬದಲಾಗುತ್ತಿದೆ. ಸಭ್ಯತನದ ಮುಖವಾಡ ತೊಟ್ಟು ಉದ್ದೇಶಪೂರ್ವಕವಾಗಿ ಇದು ತನ್ನ ಕೋರೆಹಲ್ಲುಗಳನ್ನು ಮರೆಮಾಚಿಕೊಂಡಿದೆ. ಅಗತ್ಯಕ್ಕೆ ತಕ್ಕಂತೆ ಇದು ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತಿದೆ. ಇದು ಸಂವಿಧಾನಾತ್ಮಕ ನ್ಯಾಯಾಲಯ. ಆದರೆ ಇದು ಕಾನೂನುಗಳ ಸಾಂವಿಧಾನಿಕತೆ ಬಗ್ಗೆ ತೀರ್ಪು ನೀಡುತ್ತಿಲ್ಲ. ಕಾನೂನಿನ ಯಾವುದೇ ಆಧಾರವಿಲ್ಲದೆ ಇದು ರಾಜಕೀಯ ಮತ್ತು ಆಡಳಿತಾತ್ಮಕ ನಿರ್ವಹಣೆಯ ಕ್ಷೇತ್ರಕ್ಕೆ ಪ್ರವೇಶಿಸುತ್ತಿದೆ.

ಇದು ಪ್ರಜಾಪ್ರಭುತ್ವದ ಕಾವಲುಗಾರ ಸ್ಥಾನದಲ್ಲಿದೆ. ಈ ಸ್ಥಾನವನ್ನು ಇದು ಸಂಸದೀಯ ಪ್ರಕ್ರಿಯೆಯನ್ನು ವಿಕೃತಗೊಳಿಸುವ ಆಟಕ್ಕೆ ಬಳಸಿಕೊಳ್ಳುತ್ತಿದೆ. ತಜ್ಞರ ಸಮಿತಿಯೆಂಬ ಮುಖವಾಡ ಧರಿಸಿಕೊಂಡು ಇದು ವಿವಾದÀಗಳನ್ನು ಪರಿಹರಿಸುವ ಕಾರ್ಯದಲ್ಲ್ಲಿ ಭಾಗವಹಿಸುತ್ತಿರುವಂತೆ ಕಾಣುತ್ತದೆ. ವಿತರಣಾ ಸಂಘರ್ಷಗಳು ತಾಂತ್ರಿಕವಾದವು ಎಂಬ ನಿಲುವನ್ನು ನ್ಯಾಯಾಲಯವು ತಳೆದಿದೆ. ಅತ್ಯಂತ ಪ್ರಾಮಾಣಿಕವಾದ ಜನತಾಂತ್ರಿಕ ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಪರಿಹರಿಸಲು ಇದು ನಿಜವಾಗಿ ಪ್ರಯತ್ನಿಸುತ್ತಿಲ್ಲ. ಶಿಸ್ತುಬದ್ಧವಾಗಿ ಮತ್ತು ಕಾನೂನಿನ ಚೌಕಟ್ಟನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಇದು ನೆರವು ನೀಡುತ್ತಿಲ್ಲ.

ನಿರಂತರವಾಗಿ ಕಾಲಬದ್ಧ ರೀತಿಯಲ್ಲಿ ಕಾನೂನುಗಳ ಸಂವಿಧಾನತಾತ್ಮಕತೆಯ ಬಗ್ಗೆ ನಿಲುವು ಪ್ರಕಟಿಸುವುದಕ್ಕೆ ಹಿಂಜರಿಯುತ್ತಿರುವ ಇದು ರೈತರ ಪ್ರತಿಭಟನೆಯನ್ನು ಪರಿಹರಿಸುವಲ್ಲಿ ಸರ್ಕಾರವು ಜಬಾವ್ದಾರಿಯುತವಾಗಿ ಸ್ಪಂದಿಸುತ್ತಿಲ್ಲವೆAದು ಅದರÀ ಮೇಲೆ ಗೂಬೆ ಕೂರಿಸುತ್ತಿದೆ. ತನ್ನ ಮುಂದಿರುವ ವಿವಾದದ ಬಗ್ಗೆ ಪ್ರಶ್ನೆಗಳನ್ನೆತ್ತದೆ ನ್ಯಾಯಾಲಯವು ನಿರಪೇಕ್ಷತೆಯ ಭಾಷೆಯಲ್ಲಿ ಮಾತಾಡುತ್ತಿದೆ. ವಾಸ್ತವವಾಗಿ ಇದು ಜನತಂತ್ರದಲ್ಲಿನ ಸಾಮಾನ್ಯ ಕೊಡುಕೊಳೆ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ಹಾಳುಗೆಡವುತ್ತಿದೆ. ಕೃಷಿ ಕಾಯಿದೆಗಳಿಗೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯು ಸಾಂವಿಧಾನಿಕವಾಗಿ ರಾಕ್ಷಸ ಹೆಜ್ಜೆಯಾಗಿದೆ ಮತ್ತು ಸದರಿ ಆದೇಶದಲ್ಲಿ ನ್ಯಾಯದ ಅಂಶ ಲವಲೇಶವೂ ಇಲ್ಲ. ಇದರÀ ನಡೆಯ ಹಿಂದೆ ಸಂಸ್ಥೆಯ ಸಿನಿಕತನದ ಘಮಲು ಹೊಡೆಯುತ್ತಿದೆ.

ಕೃಷಿ ಕಾನೂನುಗಳ ವಿವಾದವು ಜಟಿಲವಾಗಿದೆ. ಯಾರು ಯಾರ ಪರವಾಗಿದ್ದಾರೆ ಎಂಬುದಕ್ಕಿAತ ನಿಜವಾಗಿ ಸರ್ವೋಚ್ಚ ನ್ಯಾಯಾಲಯವು ತನ್ನ ಸಂವಿಧಾನದ ವ್ಯಾಖ್ಯಾನದ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ನಮ್ಮನ್ನು ಕಾಡುವ ಹೆಚ್ಚು ಗಂಭೀರವಾದ ಪ್ರಶ್ನೆಯಾಗಿದೆ. ಇದು ಕೃಷಿ ಕಾನೂನುಗಳ ಅನುಷ್ಠಾನವನ್ನು ಅಮಾನತುಗೊಳಿಸಿದೆ. ಅವುಗಳಿಗೆ ಸಂಬAಧಿಸಿದ ಸಮಸ್ಯೆಗಳನ್ನು ಅರಿತುಕೊಳ್ಳಲು ಸಮಿತಿಯೊಂದನ್ನು ರಚಿಸಿದೆ. ಈ ಅಮಾನತು ಆದೇಶಕ್ಕೆ ಯಾವ ಕಾನೂನಿನ ಆಧಾರವಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ.

ಮೊದಲನೆಯದಾಗಿ ನ್ಯಾಯಾಲಯದ ಆದೇಶವು ಸಂವಿಧಾನಾತ್ಮಕವಾದ ಅಧಿಕಾರಗಳ ವಿತರಣೆಯ (ಸಪೆರೇಶÀನ್ ಆಫ್ ಫವರ್) ನಿಯಮದ ಉಲ್ಲಂಘನೆಯಾಗಿದೆ. ಈ ವಿತರಣಾ ಸಂಘÀರ್ಷವನ್ನು ತಾಂತ್ರಿಕ ವಿಧಾನ ಅಥವಾ ನ್ಯಾಯಾಧೀಕರಣದ ಮೂಲಕ ಪರಿಹರಿಸಬಹುದು ಎಂಬ ತಪ್ಪು ಸಂದೇಶವನ್ನು ಇದು ನೀಡುತ್ತಿದೆ. ರಾಜಕೀಯ ವಿವಾದದಲ್ಲಿ ಮಧ್ಯಪ್ರವೇಶಿಸುವುದು ನ್ಯಾಯಾಲಯದ ಕೆಲಸವಲ್ಲ. ಸದರಿ ವಿವಾದದ ಕಾನೂನುಗಳು ಸಂವಿಧಾನಾತ್ಮಕವಾಗಿವೆಯೋ ಅಥವಾ ಕಾನೂನುಗಳಿಗೆ ವಿರೋಧವಾಗಿವೆಯೋ ಎಂಬುದನ್ನು ತೀರ್ಮಾನಿಸುವುದು ಇದರ ಜವಾಬ್ದಾರಿ.

ಅಮಾನತುಗೊಳಿಸಿದ ಸಂದರ್ಭದಲ್ಲಿಯೂ ಸದರಿ ಕಾನೂನುಗಳ ರಚನೆಯ ಸಂದರ್ಭದಲ್ಲಿ ಲೋಪಗಳೇನಾದರೂ ನುಸುಳಿವೆಯೇ ಎಂಬುದನ್ನು ಇದು ಪರಿಗಣಿಸಿಲ್ಲ. ಈ ವಿವಾದಕ್ಕೆ ಕಾರಣವಾಗಿರುವ ಸದರಿ ಕಾನೂನುಗಳು ದೇಶದ ಒಕ್ಕೂಟ ವ್ಯವಸ್ಥೆಗೆ ಉದ್ಭವಿಸಿರುವ ಸವಾಲು, ವಿವಾದಗಳನ್ನು ಪರಿಹರಿಸುವ ಕ್ರಮಗಳನ್ನೇ ತೆಗೆದುಹಾಕಿದ ಪರಿಣಾಮವಾಗಿ ಉದ್ಭವಿಸಿರುವ ಸವಾಲು ಮುಂತಾದ ಸಂಗತಿಗಳ ಆಧಾರದಲ್ಲಿ ತಡೆಯಾಜ್ಞೆ ನೀಡುವುದಕ್ಕೆ ಬದಲಾಗಿ ರೈತರ ಆಕ್ಷೇಪಗಳನ್ನು ಪರಿಗಣಿಸುವುದಕ್ಕೆ ಸಮಿತಿಯೊಂದನ್ನು ನೇಮಿಸುವುದರ ಮೂಲಕ ಇದು ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿದಂತಾಗಿದೆ.

ಕೃಷಿಯ ಸ್ಥಿತಿಗತಿಯನ್ನು ಉತ್ತಮಪಡಿಸುವುದಕ್ಕಾಗಿ ಗಂಭೀರವಾದ ಸುಧಾರಣಾ ಕ್ರಮಗಳ ಚೌಕಟ್ಟು ಅಗತ್ಯವಾಗಿದೆ. ಸುಧಾರಣಾ ಕ್ರಮಗಳು ರೈತರ ವರಮಾನವನ್ನು ಹೆಚ್ಚಿಸುವ, ಅವರ ಬದುಕನ್ನು ಉತ್ತಮಪಡಿಸುವ, ಬೆಳೆಗಳಲ್ಲಿ ವೈವಿಧ್ಯವನ್ನು ಸಾಧಿಸಿಕೊಳ್ಳುವ, ಪರಿಸರಾತ್ಮಕವಾಗಿ ಕೃಷಿಯನ್ನು ಹೆಚ್ಚು ಸುಸ್ಥಿರತೆಯತ್ತ ಸಾಗುವಂತೆ ಮಾಡುವ, ಸಹಾಯಧನ ಕಾರ್ಯಕ್ರಮವು ಅನುತ್ಪಾದಕವಾಗದಂತೆ ಮಾಡುವ, ಆಹಾರ ಪದಾರ್ಥಗಳ ಹಣದುಬ್ಬರವನ್ನು ಹತೋಟಿಯಲ್ಲಿಡುವ ಮತ್ತು ಪೌಷ್ಟಿಕತೆಯು ಎಲ್ಲರಿಗೂ ದೊರೆಯುವಂತೆ ಮಾಡುವ ಗುರಿಗಳನ್ನು ಹೊಂದಿರಬೇಕು. ದೇಶದಲ್ಲಿ ಈ ಎಲ್ಲ ಗುರಿಗಳನ್ನು, ಅದರಲ್ಲೂ ಪಂಜಾಬ್ ರಾಜ್ಯದಲ್ಲಿ ಸಾಧಿಸಿಕೊಳ್ಳುವುದು ಸುಲಭಸಾಧ್ಯವಲ್ಲ. ಹೊಸ ಕೃಷಿ ವ್ಯವಸ್ಥೆಗೆ ಪರಿವರ್ತನೆಗೊಳ್ಳುವುದಕ್ಕೆ ಗಟ್ಟಿಯಾದ ವಿಶ್ವಾಸದ ಅಗತ್ಯವಿದೆ.

ಸುಧಾರಣೆಗಳು ಅಗತ್ಯವೆಂದು ಭಾವಿಸಿರುವ ಸರ್ಕಾರದ ಕ್ರಮ ಸರಿಯಾಗಿದೆ. ಆದರೆ ಸುಧಾರಣೆ ಕಾರ್ಯಕ್ರಮದಲ್ಲಿ ತಪ್ಪು ತಪ್ಪು ಗುರಿಗಳನ್ನು ಆದ್ಯತೆಯ ಸಂಗತಿಗಳನ್ನಾಗಿ ಅದು ಆಯ್ಕೆ ಮಾಡಿಕೊಂಡಿದೆ. ಉದಾ: ‘ಯಾರಿಗೆ ಬೇಕಾದರೂ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಸ್ವಾತಂತ್ರö್ಯ’ ಎಂಬುದು ಇಂತಹ ಒಂದು ತಪ್ಪು ಆದ್ಯತೆಯ ಗುರಿ. ಇಂತಹ ಗುರಿಯಿಂದ ಕೃಷಿಯ ಮೂಲದಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವುದು ಸಾಧ್ಯವಿಲ್ಲ. ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಪ್ರತಿಯಾಗಿ ಇದು ಸರ್ವತ್ರÀ್ರ ಅನಿಶ್ಚಿತತೆಯನ್ನು ಉಂಟು ಮಾಡುತ್ತದೆ.

ರೈತರು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳ ಬಗ್ಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಅದು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಪ್ರತಿಭಟನೆ ನಡೆಸುವುದಕ್ಕೆ ರೈತರಿಗೆ ಎಲ್ಲ ಹಕ್ಕುಗಳಿವೆ. ಸರ್ಕಾರವು ಅವರನ್ನು ರಾಷ್ಟçದ್ರೋಹಿಗಳು ಎಂಬ ಆಧಾರರಹಿತ ಹಣೆಪಟ್ಟಿ ಹಚ್ಚಿದರೂ ಅದಕ್ಕೆ ವಿಚಲಿತರಾಗದೆ ರೈತರು ಪ್ರತಿಭಟನೆಯನ್ನು ಜನಮೆಚ್ಚುವ ರೀತಿಯಲ್ಲಿ ಗೌರವಯುತವಾಗಿ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯನ್ನು ಪರಿಹರಿಸುವ ದಿಶೆಯಲ್ಲಿ ಯಾವುದೇ ರೀತಿಯ ಮಧ್ಯಪ್ರವೇಶವು ಸ್ವಾಗತಾರ್ಹ. ಕಾನೂನುಗಳಲ್ಲಿ ಅಸಂವಿಧಾನಾತ್ಮಕತೆ ಎಂಬುದೇನಾದರೂ ಇದ್ದರೆ ಮಧ್ಯಪ್ರವೇಶವು ಸಂಸತ್ತು-ಸರ್ಕಾರ ಮತ್ತು ಪ್ರತಿಭಟನೆ ನಿರತ ರೈತರ ನಡುವಿನ ರಾಜಕೀಯ ಪ್ರಕ್ರಿಯೆಯಾಗಿರಬೇಕು. ಇಲ್ಲಿ ಏನಾದರೂ ಅಸಂವಿಧಾನಾತ್ಮಕತೆಯಿದ್ದರೆ ಇದರ ಬಗ್ಗೆ ಸಂಸತ್ತು ಕ್ರಮ ತೆಗೆದುಕೊಳ್ಳಬೇಕು.

ಈ ಕಾರಣದಿಂದಾಗಿ ಸರ್ವೋಚ್ಚ ನ್ಯಾಯಾಲಯವು ತೆಗೆದುಕೊಂಡ ಕ್ರಮವು ಅಪಾಯಕಾರಿಯಾಗಿದೆ. ಸಂಸತ್ತು ಅನುಮೋದಿಸಿರುವ ಕಾನೂನುಗಳ ಒಳಗಿರುವ ನಿಜವಾದ ಪರಿವಿಡಿಯನ್ನು ಪರಿಗಣಿಸದೆ, ಅವುಗಳ ಅನುಷ್ಠಾನಕ್ಕೆ ತಡೆಯಾಜ್ಞೆ ವಿಧಿಸುವುದರ ಮೂಲಕ ಸರ್ವೋಚ್ಚ ನ್ಯಾಯಾಲಯವು ಹೊಸದೊಂದು ಸಂಪ್ರದಾಯವನ್ನು ಹುಟ್ಟುಹಾಕಿದೆ. ಸಾಧÀ್ಯವಾಗಬಹುದಾದ ಎಲ್ಲ ರೀತಿಯ ನಾಯಾಧೀಕರಣದ ಪ್ರಕ್ರಿಯೆಗಳನ್ನು ಇದು ಗೊಂದಲದ ಗೂಡನ್ನಾಗಿ ಮಾಡಿಬಿಟ್ಟಿದೆ.

ಈ ವಿವಾದಾತ್ಮಕ ಕಾನೂನುಗಳ ಬಗ್ಗೆ ಯಾರು ಯಾವ ರೀತಿಯ ಸಲಹೆ-ಸಮಾಧಾನ-ಅಭಿಪ್ರಾಯ ನೀಡಿದ್ದಾರೆ, ವಿವಾದಕ್ಕೆ ಸಂಬAಧಿಸಿದAತೆ ಯಾವ ನಿರ್ದಿಷ್ಟ ಸಮಸ್ಯೆಗಳನ್ನು ಪರಿಗಣಿಸಬೇಕಾಗಿತ್ತು ಮತ್ತು ನ್ಯಾಯಾಲಯದ ಕ್ರಮಗಳು ಇವುಗಳನ್ನು ಹೇಗೆ ಪರಿಹರಿಸುತ್ತವೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರ ದೊರೆಯುತ್ತಿಲ್ಲ. ವಾಸ್ತವವಾಗಿ ರೈತರ ಅಹವಾಲುಗಳನ್ನು ನ್ಯಾಯಾಲಯವು ಕೇಳಿಲ್ಲ. ತನ್ನ ಆದೇಶ ನೀಡುವಾಗ ರೈತ ಪರ ನ್ಯಾಯವಾದಿಗಳು ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಕೇಳಿಲ್ಲ. ಇದೊಂದು ಮಹೋನ್ನತ ಸ್ಮಾರಕಸ್ವರೂಪಿ ವ್ಯಂಗ್ಯವಾಗಿದೆ. ಜವಾಬ್ದಾರಿಯುತ ಸರ್ಕಾರಕ್ಕೆ ಸಂಬAಧಿಸಿದ ನ್ಯಾಯವನ್ನು ನಿರ್ವಹಿಸುವಾಗ ತಾನೇ ವಿಧಿಸಿಕೊಂಡಿರುವ ಪಾರದಶÀðಕ ಆಡಳಿತ ನಿರ್ವಹಣಾ ಕ್ರಮಗಳ ಪಾಲನೆಯಾಗಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲ. ಇದೊಂದು ಪರಿಹಾರಗಳ ವಿಕೃತಿಯ ನಿದರ್ಶನವಾಗಿದೆ.

ಪ್ರಾಯಶಃ ನ್ಯಾಯಾಲಯವು ಅಪ್ರಜ್ಞಾಪೂರ್ವಕವಾಗಿ ಆದರೆ ಅಪಾಯಕಾರಿಯಾಗಿ ಸಾಮಾಜಿಕ ಆಂದೋಳನವೊAದರ ನಡೆಯನ್ನು ಮುರಿಯಲು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ. ಸರ್ಕಾರದ ನಡೆ ಸರಿಯೋ ಅಥವಾ ರೈತರ ಪ್ರತಿಭಟನೆ ಸರಿಯೋ ಎಂಬುದರ ಬಗ್ಗೆ ಜನರು ತೀರ್ಮಾನ ತೆಗೆದುಕೊಳ್ಳಬಹುದು. ಕೃಷಿ ಕಾನೂನುಗಳು ಅಸಂವಿಧಾನಾತ್ಮಕವಾಗಿಲ್ಲದಿದ್ದರೆ, ಯಾರು ಸರಿ ಎಂಬುದರ ಬಗ್ಗೆ ತೀರ್ಮಾನವನ್ನು ಜನರು ಮತ್ತು ರಾಜಕೀಯ ಪ್ರಕ್ರಿಯೆಯ ಮೂಲಕ ತೀರ್ಮಾನ ತೆಗೆದುಕೊಳ್ಳಬೇಕು. ರಾಜಕೀಯ ಚಳವಳಿಗೆ ಸಮಗ್ರವಾಗಿ ಜನರ ಕ್ರಿಯಾತ್ಮಕ ಪ್ರಯತ್ನದ ಅಗತ್ಯವಿದೆ ಮತ್ತು ಇಂತಹ ಚಳವಳಿಗೆ ಕಾಲ ಪಕ್ವವಾಗಿರಬೇಕು.

ಇಂತಹ ಚಳವಳಿಗೆ ಜನರನ್ನು ಸಂಘಟಿಸುವುದು ಸುಲಭವಲ್ಲ. ಯಾವ ಸಮಯದಲ್ಲಿ ಸರ್ಕಾರವು ಕೃಷಿ ಕಾನೂನುಗಳಿಗೆ ಅನುಮೋದನೆ ನೀಡಿದೆಯೋ ಆ ಸಂದರ್ಭವು ತೀವ್ರರೀತಿಯಲ್ಲಿ ಆರಂಭವಾದ ರೈತರ ಪ್ರತಿಭಟನೆಯನ್ನು ತಡೆಯುವ ಉದ್ದೇಶವನ್ನು ಸಾಧಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಸಮಿತಿಯೊಂದನ್ನು ನೇಮಿಸುವುದರ ಮೂಲಕ ನ್ಯಾಯಾಲಯವು ಪ್ರತಿಭಟನೆಯನ್ನು ಸ್ಥಗಿತಗೊಳಿಸುವುದಕ್ಕೆ ಸಂಬAಧಿಸಿದ ತೀರ್ಮಾನವನ್ನು ತೆಗೆದುಕೊಳ್ಳುವ ಸಂದಿಗ್ಧ ಜವಾಬ್ದಾರಿಯನ್ನು ರೈತರ ಅಂಗಳಕ್ಕೆ ಹಾಕಿಬಿಟ್ಟಿದೆ. ಆದರೆ ಇದು ಯೋಗ್ಯವಾದ ತೀರ್ಮಾನದಂತೆ ತೋರುತ್ತಿಲ್ಲ.

ಇದಕ್ಕೆ ಸಂಬAಧಿಸಿದAತೆ ರೈತರ ಪ್ರತಿಭಟನೆಯು ಖಲಿಸ್ಥಾನ ಚಳವಳಿಗೆ ದಾರಿಮಾಡಿಕೊಡಬಹುದು ಎಂಬ ಅಟಾರ್ನಿ ಜನರಲ್ ಅವರ ಆತಂಕದ ಅಭಿಪ್ರಾಯವನ್ನು ಅತಿಗಂಭೀರವಾಗಿ ಪರಿಗಣಿಸಿ ನ್ಯಾಯಾಲಯವು ದೆಹಲಿಯಲ್ಲಿ ಯಾವ ರೀತಿಯಲ್ಲಿ ರೈತರು ಪ್ರತಿಭಟನೆ ನಡೆಸಬೇಕು ಎಂಬುದಕ್ಕೆ ಒಂದು ರಾಜಿಸೂತ್ರ ರೂಪಿಸುವ ಕೆಲಸವನ್ನು ಮಾಡುತ್ತಿರುವಂತೆ ಕಾಣುತ್ತದೆ. ಇದೊಂದು ಅನಧಿಕೃತ ಪ್ರತಿಭಟನೆ ಎಂಬ ಭಾವನೆ ಮೂಡುವಂತೆ ಮಾಡಿ ಅದರ ದಿಕ್ಕುತಪ್ಪಿಸುವ ಪ್ರಯತ್ನವೂ ಇಲ್ಲಿ ನಡೆಯುತ್ತಿರುವಂತೆ ಕಾಣುತ್ತದೆ. ಈ ಪ್ರತಿಭಟನೆಯು ಅತಿದೊಡ್ಡ ಕಾನೂನು ಉಲ್ಲಂಘನೆಯ ಪ್ರತಿಭಟನೆ ಎಂಬ ಭಾವನೆಯನ್ನು ಮೂಡಿಸುವುದಕ್ಕೆ ಪರಿಪಕ್ವವಾದ ಭೂಮಿಕೆಯನ್ನು ಇದು ಸಿದ್ಧಪಡಿಸುತ್ತಿರುವಂತೆ ಕಾಣುತ್ತದೆ.

ಇನ್ನೊಂದು ಆಯಾಮದಲ್ಲಿ ಇದು ಮಧ್ಯಪ್ರವೇಶಿಸುವ ಪ್ರಕಾರ್ಯಕ್ಕೆ ಮರುವ್ಯಾಖ್ಯೆಯನ್ನು ನೀಡುವುದಕ್ಕೆ ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ. ‘ಮಧ್ಯಪ್ರವೇಶ’ವು ಸಮಿತಿಯೊಂದರ ಪ್ರಕಾರ್ಯವೆಂದಾದರೆ ಇದು ಮಧ್ಯಪ್ರವೇಶದ ಪ್ರಥಮ ನಿಯಮದ ಉಲ್ಲಂಘನೆಯಾಗುತ್ತದೆ. ಮಧ್ಯಪ್ರವೇಶವು ವಿವಾದದ ಎಲ್ಲ ಪಕ್ಷಗಳಿಗೂ ಸಮ್ಮತವಾಗುವ ರೀತಿಯಲ್ಲಿರಬೇಕು ಮತ್ತು ಎಲ್ಲ ಪಕ್ಷಗಳ ಪ್ರತಿನಿಧಿಗಳ ಕೂಡ ಸಮಾಲೋಚನೆ ನಡೆಸಿ ಸಮಿತಿಯನ್ನು ನೇಮಿಸಬೇಕು. ಸಮಿತಿಯನ್ನು ನೇಮಿಸುವುದರ ನ್ಯಾಯಾಲಯದ ಉದ್ದೇಶವು ವಿವಾದದ ವಿವಿಧ ಆಯಾಮಗಳನ್ನು ಅಥÀð ಮಾಡಿಕೊಳ್ಳುವುದಕ್ಕೆ ಎಂದಾಗಿದ್ದರೆ ವಿವಾದಕ್ಕೆ ಸಂಬAಧಿಸಿದ ಎಲ್ಲರ ಕೂಡ ನ್ಯಾಯಾಲಯದಲ್ಲಿ ಸಾರ್ವಜನಿಕ ವಿಚಾರಣೆ ನಡೆಸಬಹುದಾಗಿತ್ತು.

ರೈತರಿಗೆ ನ್ಯಾಯಾಲಯದ ಸಹಾನುಭೂತಿಯ ಪರಿಪೋಷಣೆಯ ಅಗತ್ಯವಿಲ್ಲ. ರೈತರು ತಮ್ಮನ್ನು ತಾವು ರಕ್ಷಿಸಿಕೊಳ್ಳಲಾರರು. ಏಕೆಂದರೆ ಅವರನ್ನು ಪೋಷಣೆಯ ಅಗತ್ಯವಿರುವ ಶಿಶುಗಳ ಮಟ್ಟಕ್ಕೆ ನ್ಯಾಯಾಲಯವು ಇಳಿಸಿಬಿಟ್ಟಿದೆ. ಕಾನೂನುಗಳ ಬಗ್ಗೆ ಖಚಿತವಾದ ವಿವರಣೆಯು ರೈತರಿಗೆ ಪ್ರಸ್ತುತÀವಾದ ಸಂಗತಿಯಾಗಿದೆ. ತಮ್ಮ ನಿಜವಾದ ಹಕ್ಕೊತ್ತಾಯವನ್ನು ರಾಜಕೀಯ ಪ್ರಕ್ರಿಯೆಯ ಮೂಲಕ ನಾಗರಿಕ ಸಮಾಜದ ಮುಂದಿಡುವ ಹಕ್ಕು ರೈತರಿಗಿದೆ. ಅರ್ಧಂಬರ್ಧ ಬುದ್ಧಿವಂತಿಕೆೆಯನ್ನು ಪ್ರದರ್ಶಿಸುವುದಕ್ಕೆ ಹೋಗಿ ನ್ಯಾಯಾಲಯವು ರಾಜಕೀಯ ಆಸ್ಫೋಟಕಾರಿ ಸ್ಥಿತಿಯನ್ನು ಸೃಷ್ಟಿಸಿಬಿಟ್ಟಿದೆ.

ಯಾವುದೇ ಕಾನೂನಿನ ಆಧಾರವಿಲ್ಲದೆ ಅವುಗಳ ಅನುಷ್ಠಾನಕ್ಕೆ ತಡೆಯಾಜ್ಞೆಯನ್ನು ನೀಡಿ ನ್ಯಾಯಾಲಯವು ಕೆಟ್ಟಸಂಪ್ರದಾಯವೊAದನ್ನು ಹುಟ್ಟು ಹಾಕಿದೆ. ರೈತರಲ್ಲಿ ನ್ಯಾಯಾಲಯದ ಉದ್ದೇಶದ ಬಗ್ಗೆ ಅವಿಶ್ವಾಸ ಮೂಡುವಂತೆ ಮಾಡಲಾಗಿದೆ. ನ್ಯಾಯಾಲಯದ ನಡೆಯಿಂದ ಸರ್ಕಾರಕ್ಕೆ ಹಿನ್ನಡೆಯಾಗುವಂತೆ ಕಾಣಿಸಿದರೂ ಇದು ಸರ್ಕಾರ ಸಂದಿಗ್ಧ ಸ್ಥಿತಿಯಿಂದ ಹೊರಬರುವ ಒಂದು ಉಪಾಯವಾಗಿದೆ. ಚಳವಳಿಯ ಸಂದರ್ಭದಲ್ಲಿ ತನ್ನ ರಾಜಕೀಯ ನಡೆಯನ್ನು ಮೆರೆÉಮಾಚಿಕೊಳ್ಳುವ ಕ್ರಮ ಇದಾಗಿದೆ. ಈ ಆದೇಶದ ಮೂಲಕ ನ್ಯಾಯಾಲಯವು ತಾನು ಯಾವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿತ್ತೊ ಅದನ್ನು ಕಳೆದುಕೊಂಡಿದೆ.

*ಲೇಖಕರು ದಿ ಇಂಡಿಯನ್ ಎಕ್ಸ್ಪ್ರೆಸ್‌ನ ವಿಶೇಷ ಸಂಪಾದಕರು.

Leave a Reply

Your email address will not be published.