ಕೃಷಿ ನೀತಿಯ ಗುರಿ ನೈಜ ಕೃಷಿಕರ ಪರ ಇರಬೇಕು

ಸರ್ಕಾರದ ಬಹುತೇಕ ಜನಕಲ್ಯಾಣ ಯೋಜನೆಗಳು ಬಡತನ ನಿರ್ಮೂಲನೆ ಮತ್ತು ತಳಮಟ್ಟದ ಜನರನ್ನು ಸಬಲೀಕರಿಸುವ ಉದ್ದೇಶದಿಂದಲೇ ರೂಪಿಸಲ್ಪಟ್ಟಿವೆ. ಇಲ್ಲಿ ಮಧ್ಯದಲ್ಲಿರುವವರು ತಳಮಟ್ಟಕ್ಕೆ ಜಾರುವ ಅಪಾಯವೂ ಇದ್ದು ಇದರ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿಲ್ಲ.

-ಹರೀಶ್ ದಾಮೋದರನ್

ಭಾರತದಲ್ಲಿರುವ ರೈತರ ಸಂಖ್ಯೆ ಎಷ್ಟು? 2016-17ರ ಕೇಂದ್ರ ಕೃಷಿ ಸಚಿವಾಲಯದ ಆಂತರಿಕ ಸಮೀಕ್ಷೆಯ ಅನುಸಾರ ಭಾರತದಲ್ಲಿ ಒಟ್ಟು 146.19 ದಶಲಕ್ಷ ಜನರು ವ್ಯವಸಾಯದಲ್ಲಿ ತೊಡಗಿದ್ದಾರೆ.  ನಬಾರ್ಡ್ ಸಂಸ್ಥೆಯ ಅಖಿಲ ಭಾರತ ಗ್ರಾಮೀಣ ಹಣಕಾಸು ಒಳಗೊಳ್ಳುವಿಕೆ ಸಮೀಕ್ಷೆಯ (2016-17) ಅನುಸಾರ ಭಾರತದಲ್ಲಿ ಕೃಷಿಯನ್ನು ಅಧರಿಸಿದ ಕುಟುಂಬಗಳ 100.7 ದಶಲಕ್ಷ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಲ್ಲಿ ಒಟ್ಟು 111.5 ದಶಲಕ್ಷ ಜನರು ಫಲಾನುಭವಿಗಳಾಗಿ ನೋಂದಾಯಿಸಿದ್ದಾರೆ. 2020-21ರಲ್ಲಿ ಸರಾಸರಿ 102 ದಶಲಕ್ಷ ಜನರಿಗೆ ಈ ಯೋಜನೆಯಡಿ ಪಾವತಿ ಮಾಡಲಾಗಿದೆ.

ಅಂದರೆ ಅಧಿಕೃತವಾಗಿ ಭಾರತದಲ್ಲಿ ಕೃಷಿಕರ ಸಂಖ್ಯೆ 100 ದಶಲಕ್ಷದಿಂದ 150 ದಶಲಕ್ಷದಷ್ಟಿದೆ ಎಂದು ನಿಶ್ಚಯವಾಗಿ ಹೇಳಬಹುದು. ಇವರ ಪೈಕಿ ಎಷ್ಟು ಜನ ವಾಸ್ತವಾಗಿ ವ್ಯವಸಾಯದಲ್ಲಿ ತೊಡಗಿದ್ದಾರೆ? ನಬಾರ್ಡ್‍ನ ವ್ಯಾಖ್ಯಾನಿಸುವಂತೆ ಕೃಷಿ ಬೇಸಾಯದ ಉತ್ಪನ್ನದಿಂದ ವರ್ಷಕ್ಕೆ 5000 ರೂಗಳಿಗಿಂತಲೂ ಹೆಚ್ಚಿನ ಆದಾಯ ಗಳಿಸುವ ಕುಟುಂಬಗಳನ್ನು ಕೃಷಿ ಕುಟುಂಬ ಎಂದು ಪರಿಗಣಿಸಲಾಗುತ್ತದೆ. ಇದು ಜೀವನ ನಿರ್ವಹಣೆಯ ಆದಾಯ ಎಂದು ಪರಿಗಣಿಸುವುದು ಕಷ್ಟ.

ಕೃಷಿ ಚಟುವಟಿಕೆಯಿಂದಲೇ ತನ್ನ ಬದುಕಿನ ಹೆಚ್ಚಿನ ಪ್ರಮಾಣದ ಆದಾಯವನ್ನು ಗಳಿಸುವವರನ್ನು ರೈತ ಅಥವಾ ನೈಜ ಕೃಷಿಕ ಎಂದು ಪರಿಗಣಿಸಬಹುದು. ಇದು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬೆಳೆ ಬೆಳೆಯುವವರನ್ನು ಒಳಗೊಳ್ಳುತ್ತದೆ. 2016-17ರ ಸಮೀಕ್ಷೆಯ ಅನುಸಾರ 157.21 ದಶಲಕ್ಷ ಹೆಕ್ಟೇರ್ (2.5 ಎಕರೆ=ಒಂದು ಹೆಕ್ಟೇರ್) ಕೃಷಿ ಭೂಮಿಯ ಪೈಕಿ 146.19 ದಶಲಕ್ಷ ಹಿಡುವಳಿದಾರರು 140 ದಶಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೇಸಾಯ ಮಾಡಿದ್ದಾರೆ. ಈ ನಿವ್ವಳ ಬೇಸಾಯ ಪ್ರದೇಶದ ಪೈಕಿ ಕೇವಲ 50.48 ದಶಲಕ್ಷ ಹೆಕ್ಟೇರ್ ಭೂಮಿಯಲ್ಲಿ ವರ್ಷಕ್ಕೆ ಎರಡು ಬೆಳೆ ಬೆಳೆಯಲಾಗಿದೆ. ಇದರಲ್ಲಿ 40.76 ದಶಲಕ್ಷ ಹೆಕ್ಟೇರ್ ನೀರಾವರಿ ಮತ್ತು 9.72 ದಶಲಕ್ಷ ಹೆಕ್ಟೇರ್ ಕುಷ್ಕಿ ಭೂಮಿ ಇದೆ. 2016-17ರಲ್ಲಿ ಸರಾಸರಿ ಭೂ ಹಿಡುವಳಿಯನ್ನು 1.08 ಎಂದು ಪರಿಭಾವಿಸಿದರೆ, ವರ್ಷಕ್ಕೆ ಎರಡು ಬೆಳೆ ಬೆಳೆಯುವ, ಮುಂಗಾರಿನ ನಂತರದ ಖಾರಿಫ್ ಮತ್ತು ಚಳಿಗಾಳದ ರೇಬಿ ಬೆಳೆಗಾರರು, ಪೂರ್ಣ ಪ್ರಮಾಣದ ರೈತರು ಕೇವಲ 47 ದಶಲಕ್ಷ ಮಾತ್ರ ಇದ್ದಾರೆ ಅಥವಾ 50 ದಶಲಕ್ಷ ಎನ್ನಬಹುದು.

ಸಾಮಾನ್ಯವಾಗಿ ಉಲ್ಲೇಖಿಸಲಾಗುವ ಅಂಕಿಸಂಖ್ಯೆಗಳ ಅರ್ಧ ಅಥವಾ ಮೂರನೆ ಒಂದರಷ್ಟಿರುವ ಈ ಅಂಕಿಸಂಖ್ಯೆಗಳು ಅಂತರಿಕ ಸಮೀಕ್ಷೆಯ ಮಾಹಿತಿಯೊಂದಿಗೆ ಹೊಂದಾಣಿಕೆಯಾಗುತ್ತವೆ. ಇವುಗಳಲ್ಲಿ ಪ್ರಧಾನವಾಗಿ ದೃಢೀಕೃತ/ಹೆಚ್ಚಿನ ಇಳುವರಿಯ ಬೀಜಗಳನ್ನು ಬಿತ್ತನೆ ಮಾಡುವ ಬೇಸಾಯಗಾರರು (59.01 ದಶಲಕ್ಷ), ಸ್ವಂತ ಅಥವಾ ಬಾಡಿಗೆ ಟ್ರಾಕ್ಟರ್ ಬಳಸುವವರು (72.29 ದಶಲಕ್ಷ), ವಿದ್ಯುತ್ ಅಥವಾ ಡೀಸೆಲ್ ಚಾಲಿತ ಪಂಪ್‍ಸೆಟ್ ಬಳಕೆದಾರರು (45.96 ದಶಲಕ್ಷ), ಸಾಂಸ್ಥಿಕ ಸಾಲ ಸೌಲಭ್ಯ ಪಡೆಯುವವರು (57.08 ದಶಲಕ್ಷ). ಯಾವುದೇ ಮಾನದಂಡವನ್ನು ಪರಿಗಣಿಸಿದರೂ ತಮ್ಮ ಮೂಲ ಆದಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿ ಬೇಸಾಯದಲ್ಲಿ ತೊಡಗಿರುವ ರೈತರ ಜನಸಂಖ್ಯೆ 50 ರಿಂದ 75 ದಶಲಕ್ಷ ಇದೆ ಎಂದು ಹೇಳಬಹುದು.

ಈಗ ದೇಶ ಎದುರಿಸುತ್ತಿರುವ ಕೃಷಿ ಬಿಕ್ಕಟ್ಟು ಮುಖ್ಯವಾಗಿ 50-75 ದಶಲಕ್ಷ ಕೃಷಿ ಕುಟುಂಬಗಳಿಗೆ ಸಂಬಂಧಿಸಿದ್ದು. ಈ ಬಿಕ್ಕಟ್ಟಿನ ಕೇಂದ್ರ ಬಿಂದು ಇರುವುದು ಬೆಲೆಯ ವ್ಯತ್ಯಯದಲ್ಲಿ. 1970-71ರಲ್ಲಿ ಗೋಧಿಯ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಒಂದು ಕ್ವಿಂಟಲಿಗೆ 76 ರೂ ಇದ್ದಾಗ 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 185 ರೂಗಳಷ್ಟಿತ್ತು. ಆಗ ಸರ್ಕಾರಿ ಶಾಲಾ ಮಾಸ್ತರರ ಮೂಲ ಮಾಸಿಕ ವೇತನ 150 ರೂಗಳಷ್ಟಿತ್ತು. ಇಂದು ಗೋಧಿಯ ಎಂಎಸ್‍ಪಿ ಕ್ವಿಂಟಲ್‍ಗೆ 1975 ರೂಗಳಾಗಿದೆ. ಚಿನ್ನದ ಬೆಲೆ 10 ಗ್ರಾಂಗೆ 45 ಸಾವಿರ ರೂಗಳಷ್ಟಾಗಿದೆ. ಸರ್ಕಾರಿ ಶಾಲಾ ಮಾಸ್ತರರ ಮೂಲ ಮಾಸಿಕ ವೇತನ 40 ಸಾವಿರ ರೂಗಳಷ್ಟಾಗಿದೆ. ಅಂದರೆ 1970-71ರಲ್ಲಿ 2 ರಿಂದ 2.5 ಕ್ವಿಂಟಲ್ ಗೋಧಿಯನ್ನು ಮಾರಾಟಮಾಡಿದರೆ 10 ಗ್ರಾಂ ಚಿನ್ನ ಖರೀದಿಸಬಹುದಿತ್ತು ಅಥವಾ ಒಬ್ಬ ಸರ್ಕಾರಿ ಶಾಲಾ ಮಾಸ್ತರನ ಮಾಸಿಕ ವೇತನ ನೀಡಬಹುದಿತ್ತು. ಈಗ ಒಬ್ಬ ರೈತ ಇಷ್ಟಕ್ಕೇ 20 ರಿಂದ 23 ಕ್ವಿಂಟಲ್ ಗೋಧಿ ಮಾರಾಟ ಮಾಡಬೇಕಾಗುತ್ತದೆ. 50 ವರ್ಷಗಳ ಹಿಂದೆ ಒಂದು ಕಿಲೋ ಗೋಧಿಯಿಂದ ಒಂದು ಲೀಟರ್ ಡೀಸೆಲ್ ಎಂಎಸ್‍ಪಿ ದರದಲ್ಲಿ ಖರೀದಿಸಬಹುದಿತ್ತು. ಇಂದು ಈ ಅನುಪಾತ 4:1 ಆಗಿದೆ.

ಕೃಷಿ ಬೆಲೆಗಳಲ್ಲಿ ಸಾಮ್ಯ ಇಲ್ಲದಿರುವುದು ಕೃಷಿ ಉತ್ಪಾದಕೀಯತೆ ಹೆಚ್ಚುತ್ತಿರುವ ಪ್ರಾರಂಭಿಕ ಹಂತದಲ್ಲಿ ಹೆಚ್ಚಿನ ಪ್ರಭಾವ ಬೀರಲಿಲ್ಲ. ಹಸಿರು ಕ್ರಾಂತಿಗೂ ಮುನ್ನ, ಪಂಜಾಬ್ ರಾಜ್ಯದಲ್ಲಿ ಗೋಧಿ ಮತ್ತು ಭತ್ತದ ಇಳುವರಿ ಒಂದು ಹೆಕ್ಟೇರಿಗೆ ಕ್ರಮವಾಗಿ 1.2 ಮತ್ತು 1.5 ಟನ್‍ಗಳಷ್ಟಿತ್ತು. 1990-91ರ ವೇಳೆಗೆ ಇದರ ಪ್ರಮಾಣ ಮೂರು ಪಟ್ಟು ಹೆಚ್ಚಾಗಿ 3.7 ಮತ್ತು 4.8 ಟನ್‍ಗಳಷ್ಟಾಗಿತ್ತು. ಹೆಚ್ಚಿನ ಇಳುವರಿ ನೀಡುವಂತಹ ಬೀಜಗಳನ್ನು ಬಿತ್ತನೆ ಮಾಡುವ ಮೂಲಕ ರೈತರು ಗಳಿಸಿದ ಹೆಚ್ಚಿನ ಪ್ರಮಾಣದ ಉತ್ಪಾದನೆಯ ಪರಿಣಾಮವಾಗಿ, ಇತರ ಪದಾರ್ಥಗಳಿಗೆ ಹೋಲಿಸಿದರೆ ಕೃಷಿ ಉತ್ಪನ್ನಗಳ ಬೆಲೆ ಏರಿಕೆಯಲ್ಲಿ ಕುಸಿತ ಉಂಟಾದರೂ ರೈತರ ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ.

1990ರಿಂದಲೂ ಗೋಧಿ ಬೆಳೆಯ ಇಳುವರಿಯ ಪ್ರಮಾಣ ಪ್ರತಿ ಹೆಕ್ಟೇರಿಗೆ 5.1-5.2 ಟನ್‍ಗಳಿಗೆ ಏರಿಕೆಯಾಗಿದ್ದರೆ, ಭತ್ತದ ಬೆಳೆಯಲ್ಲಿ 6.4-65 ಟನ್‍ಗಳಿಗೆ ಏರಿಕೆಯಾಗಿದೆ. ಆದರೆ ಇದರೊಟ್ಟಿಗೆ ಉತ್ಪಾದನೆಯ ವೆಚ್ಚವೂ ಹೆಚ್ಚಾಗುತ್ತಲೇ ಹೋಗಿದೆ. ಈ ಶತಮಾನದ ಮೊದಲ 15 ವರ್ಷಗಳ ಅವಧಿಯಲ್ಲಿ, ಹತ್ತಿ, ಜೋಳ, ತರಕಾರಿ, ಹಾಲು, ಕುಕ್ಕುಟ ಉತ್ಪನ್ನಗಳಲ್ಲಿ ರೈತರು ಹೆಚ್ಚಿನ ಇಳುವರಿಯನ್ನು, ಬಿಟಿ ಕಾಟನ್ ಮೂಲಕ, ಹೈಬ್ರಿಡ್ ಬೀಜಗಳು ಮತ್ತು ತಂತ್ರಜ್ಞಾನದ ಮೂಲಕ, ಹನಿ ನೀರಾವರಿ ಮತ್ತು ಸ್ಪ್ರಿಂಕ್ಲರ್ ನೀರಾವರಿಯ ಮೂಲಕ, ಲೇಸರ್ ಲೆವೆಲಿಂಗ್ ತಂತ್ರಜ್ಞಾನದ ಮೂಲಕ, ಕ್ರಾಸ್ ಬ್ರೀಡಿಂಗ್ ಮತ್ತು ಅಗ್ರೋನಾಮಿಕ್ಸ್ ತಂತ್ರಜ್ಞಾನಗಳ ಮೂಲಕ ಗಳಿಸಿದ್ದಾರೆ. ಹಾಗೆಯೇ ಹೆಚ್ಚಾಗುತ್ತಿದ್ದ ದೇಸೀಯ ಆದಾಯ ಮತ್ತು ರಫ್ತು ಬೇಡಿಕೆಗಳ ಹೆಚ್ಚಳದಿಂದ ಉತ್ತಮ ಬೆಲೆಯನ್ನೂ ಗಳಿಸಿದ್ದಾರೆ. ಕಳೆದ ಆರು ವರ್ಷಗಳಲ್ಲಿ ಈ ಬೆಳೆಗಳ ಮಾರುಕಟ್ಟೆ ಬೆಲೆ ಸತತವಾಗಿ ಕುಸಿಯುತ್ತಲೇ ಇದ್ದು ಮತ್ತೊಂದೆಡೆ ಡೀಸೆಲ್, ರಸಗೊಬ್ಬರ, ಕೀಟನಾಶಕಗಳು, ಯೂರಿಯಾ ಏತರ ಗೊಬ್ಬರಗಳ ಬೆಲೆಗಳು ಸತತವಾಗಿ ಏರುತ್ತಲೇ ಇವೆ.

ಎಂಎಸ್‍ಪಿ ಕಾನೂನುಬದ್ಧ ಹಕ್ಕು ಎಂದು ಪರಿಗಣಿಸಬೇಕು ಎನ್ನುವ ಬೇಡಿಕೆ ಮೂಲತಃ ಬೆಲೆ ಸಾಮ್ಯವನ್ನು ಸಾಧಿಸುವ ಒಂದು ಆಗ್ರಹವಾಗಿದ್ದು ಇದರಿಂದ ಕೃಷಿ ಉತ್ಪನ್ನಗಳಿಗೆ ಖರೀದಿಯ ಸಾಮಥ್ರ್ಯವನ್ನು ಹೆಚ್ಚಿಸಿದಂತಾಗುತ್ತದೆ. ರೈತರು ತಮ್ಮ ಖರೀದಿ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಇದು ನೆರವಾಗುತ್ತದೆ. ಈ ಬೇಡಿಕೆ 50 ರಿಂದ 75 ದಶಲಕ್ಷ ಪೂರ್ಣಾವಧಿ ರೈತರಿಂದಲೇ ಕೇಳಿಬರುತ್ತಿದ್ದು ಇವರ ಬಳಿ ಮಾರಾಟ ಮಾಡಲು ಹೆಚ್ಚುವರಿ ಉತ್ಪನ್ನಗಳಿವೆ ಮತ್ತು ಇವರು ಕೃಷಿ ಕ್ಷೇತ್ರದ ನೈಜ ಭಾಗಿದಾರರೂ ಆಗಿರುತ್ತಾರೆ. ಭಾರತದ ಕೃಷಿ ನೀತಿಗಳು ಇವರನ್ನೇ ಉದ್ದೇಶಿಸಬೇಕಿದೆ.

ಕೃಷಿಯೇತರ ಚಟುವಟಿಕೆಗಳಿಂದಲೇ ಹೆಚ್ಚಿನ ಸಂಪಾದನೆ ಮಾಡುವ ಅರೆಕಾಲಿಕ ರೈತನ ಪಾಲಿಗೆ ಪಿಎಂ ಕಿಸಾನ್ ಯೋಜನೆಯಡಿ ನೀಡುವ ಆರು ಸಾವಿರ ರೂಗಳು ನೆರವಾಗುತ್ತದೆ. ಆದರೆ ಒಂದು ಎಕರೆ ಗೋಧಿ ಬೆಳೆಯಲು ವರ್ಷಕ್ಕೆ 14 ರಿಂದ 15 ಸಾವಿರ ಖರ್ಚು ಮಾಡುವ, ಭತ್ತ ಬೆಳೆಯಲು ಎಕರೆಗೆ 24 ರಿಂದ 25 ಸಾವಿರ ರೂ ಖರ್ಚು ಮಾಡುವ, ಈರುಳ್ಳಿ ಬೆಳೆಯಲು ಎಕರೆಗೆ 39 ರಿಂದ 40 ಸಾವಿರ ರೂ ಖರ್ಚು ಮಾಡುವ, ಕಬ್ಬು ಬೆಳೆಯಲು ಎಕರೆಗೆ 75 ರಿಂದ 76 ಸಾವಿರ ರೂ ಖರ್ಚು ಮಾಡುವ ಪೂರ್ಣಾವಧಿಯ ರೈತರಿಗೆ ಈ ಮೊತ್ತ ನಗಣ್ಯ ಎನಿಸುತ್ತದೆ. ಕೃಷಿ ಸಲಕರಣೆಗಳು ಮತ್ತು ಕಚ್ಚಾ ವಸ್ತುಗಳ ಏರುತ್ತಿರುವ ವೆಚ್ಚಗಳಿಗೆ ಅನುಗುಣವಾಗಿ ಕೃಷಿ ಉತ್ಪನ್ನಗಳ ಬೆಲೆ ಏರಿಕೆ ಆಗದಿದ್ದರೆ, ಇದರ ಪರಿಣಾಮ ಹೆಚ್ಚುವರಿ ಉತ್ಪಾದನೆ ಮಾಡುವ 50 ರಿಂದ 75 ದಶಲಕ್ಷ ರೈತರ ಮೇಲಾಗುತ್ತದೆ. ರೈತರು ಒಳ್ಳೆಯ ಕಾಲವನ್ನು ಕಂಡಿದ್ದಾರೆ, ಇಳುವರಿ ಹೆಚ್ಚಾಗಿರುವ ಕಾಲಘಟ್ಟವನ್ನು ದಾಟಿ ಬಂದಿದ್ದಾರೆ, ವ್ಯಾಪಾರ ನಿಯಮಗಳು ಕೃಷಿಗೆ ಪೂರಕವಾಗಿದ್ದ ಸಂದರ್ಭವನ್ನೂ ಎದುರಿಸಿದ್ದಾರೆ.

ಯಾವುದೇ ಕೃಷಿ ನೀತಿಯಾದರೂ ಮೊದಲು ಬೆಲೆ ಸಾಮ್ಯ ಸರಿಪಡಿಸುವಂತಿರಬೇಕು. ಇದನ್ನು ಎಂಎಸ್‍ಪಿ ಸಂಗ್ರಹದ ವ್ಯವಸ್ಥೆಯ ಮೂಲಕ, ಎಂಎಸ್‍ಪಿ ಬೆಲೆ ಮತ್ತು ಮಾರುಕಟ್ಟೆ ಬೆಲೆಯ ನಡುವಿನ ವ್ಯತ್ಯಾಸವನ್ನು ಎಕರೆಗೆ ಇಷ್ಟು ಎಂದು ನಿಗದಿಪಡಿಸಿ ಪಾವತಿಸುವ ಮೂಲಕ ಸಾಧಿಸಲು ಸಾಧ್ಯವೇ? ಬೆಂಬಲ ಬೆಲೆ ಹೆಚ್ಚಳದ ಬದಲು ಸರ್ಕಾರ ರೈತರಿಗೆ ಕನಿಷ್ಠ ಆದಾಯವನ್ನು ನಿಗದಿಪಡಿಸಿದರೆ ರೈತರ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವೇ? ಈ ಕುರಿತು ಸ್ಪಷ್ಟ ಚಿತ್ರಣ ದೊರೆಯಬೇಕೆಂದರೆ ಕೃಷಿ ಬೆಳೆಯ ಬೆಲೆಯ ಹೆಚ್ಚಳದಿಂದ ಪ್ರಭಾವಕ್ಕೊಳಗಾಗುವ ರೈತರ ಸಂಖ್ಯೆಯ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಚಿತ್ರಣ ಇರಬೇಕಾಗುತ್ತದೆ.

ಅರೆಕಾಲಿಕ ಕೃಷಿಕರು ಜನಕಲ್ಯಾಣ ಯೋಜನೆಗಳಿಂದ ಹೆಚ್ಚಿನ ಪ್ರಯೋಜನ ಪಡೆಯುವ ಸಾಧ್ಯತೆಗಳಿರುತ್ತವೆ. ಅವರ ಕೃಷಿಯೇತರ ಚಟುವಟಿಕೆಗಳಿಂದ ಒದಗುವ ಆದಾಯಕ್ಕೆ ಸರ್ಕಾರದ ಸವಲತ್ತುಗಳು ನೆರವಾಗುತ್ತವೆ. ಈ ರೈತರಿಗೆ ಅವರ ಕೃಷಿ ಉತ್ಪಾದನೆಯೊಂದೇ ಆಧಾರವಾಗಿ ಇರುವುದಿಲ್ಲ. ಒಂದು ಎಕರೆ ಭೂಮಿ ಇರುವ ರೈತ ಐದು ಹಸುಗಳನ್ನು ಸಾಕುವ ಮೂಲಕ ದಿನಕ್ಕೆ 30 ಲೀಟರ್ ಹಾಲು ಉತ್ಪಾದನೆ ಮಾಡಲು ಸಾಧ್ಯವಿದೆ. ಇದೇ ಪ್ರಮಾಣದ ಭೂಮಿ ಹೊಂದಿರುವ ಕುಟುಂಬ 10 ಸಾವಿರ ಕೋಳಿಗಳನ್ನು ಹೊಂದಿರುವ ಕುಕ್ಕುಟ ಉದ್ಯಮ ನಡೆಸಲು ಶಕ್ಯವಾಗಿರುತ್ತದೆ.

ಕೃಷಿ ಬೆಳೆ ಆಗಲಿ, ಜಾನುವಾರು ಆಗಲಿ ಅಥವಾ ಕುಕ್ಕುಟ ಉದ್ಯಮವಾಗಲಿ, ಕೃಷಿನೀತಿಗಳನ್ನು ಮೂಲತಃ ಪೂರ್ಣಾವಧಿ ರೈತರನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಬೇಕಾಗುತ್ತದೆ. ಇವರಲ್ಲಿ ಬಹುತೇಕರು ಶ್ರೀಮಂತರೂ ಆಗಿರುವುದಿಲ್ಲ ಬಡವರೂ ಆಗಿರುವುದಿಲ್ಲ. ಈ ಗ್ರಾಮೀಣ ಮಧ್ಯಮ ವರ್ಗಗಳು ಒಂದು ಕಾಲಘಟ್ಟದಲ್ಲಿ ಕೃಷಿಯಲ್ಲೇ ತಮ್ಮ ಭವಿಷ್ಯವನ್ನು ಕಂಡುಕೊಂಡು ವಿಶ್ವಾಸದಿಂದಿದ್ದರು. ಆದರೆ ಈಗ ತಮ್ಮ ನೆಲೆಯನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಇದು ಆಗದಂತೆ ನೋಡಿಕೊಳ್ಳಬೇಕಿದೆ.

Leave a Reply

Your email address will not be published.