ಕೃಷಿ ಮಾರುಕಟ್ಟೆ ಮಸೂದೆಗಳು: ಶಾಸನಗಳ ಪಠ್ಯ v/s ಜನರ ಅಭಿಮತ

ಈ ಶಾಸನಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ ಮಾರಾಟ ಮಾಡುವ ‘ಆಯ್ಕೆಯ ಸ್ವಾತಂತ್ರ್ಯವನ್ನು ನೀಡುವ ಒಂದು ಆರ್ಥಿಕ ವ್ಯವಸ್ಥೆಯಾಗಿದೆ ಎಂದು ಸರ್ಕಾರವು ಪ್ರತಿಪಾದಿಸಲು ಪ್ರಯತ್ನಿಸುತ್ತಿದೆ.

ಹರೀಶ್ ದಾಮೊಧರನ್

ಅನೇಕ ಪ್ರಸಂಗಗಳಲ್ಲಿ ಶಾಸನಗಳಿಗಿಂತ ಅವು ಏನನ್ನು ಪ್ರತಿಪಾದಿಸುತ್ತವೆ ಮತ್ತು ಸದರಿ ಶಾಸನಗಳನ್ನು ರೂಪಿಸಿದ ಸಂದರ್ಭ ಯಾವುದು ಎನ್ನುವ ಸಂಗತಿಗಳು ಹೆಚ್ಚು ಪ್ರಸ್ತುತವಾಗಿರುತ್ತದೆ. ಈ ಮಾತು ಸಂಸತ್ತಿನಲ್ಲಿ ಅನುಮೋದನೆ ಪಡೆದು ಶಾಸನವಾಗುತ್ತಿರುವ ‘ಫಾರ್ಮರ್ಸ ಪ್ರೋಡ್ಯೂಸ್ ಟ್ರೇಡ್ ಆಂಡ್ ಕಾರ್ಮಸ್ (ಪ್ರೋಮೋಶನ್ ಆಂಡ್ ಫೆಸಿಲಿಟೇಶನ್) ಶಾಸನ 2020’ಕ್ಕೆ ಹೆಚ್ಚು ಅನ್ವಯವಾಗುತ್ತದೆ.

ಪ್ರಸ್ತುತ ಆಚರಣೆಯಲ್ಲಿರುವ ಸರ್ಕಾರಿ ಏಜೆನ್ಸಿಗಳು ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಮ್‌ಎಸ್‌ಪಿ) ಆಹಾರ ಪದಾರ್ಥಗಳನ್ನು ರೈತರಿಂದ ಕೊಂಡು ಕಾಪು ದಾಸ್ತಾನು ಮಾಡಿಕೊಳ್ಳುವ ಕಾರ್ಯಕ್ರಮ ಕೊನೆಗೊಳ್ಳುತ್ತದೆ ಎಂದು ಶಾಸನದಲ್ಲಿ ಎಲ್ಲಿಯೂ ಹೇಳಿಲ್ಲ. ಈ ಶಾಸನಗಳ ಪಠ್ಯದ ಮೇಲೆ ಕಣ್ಣಾಡಿಸಿದರೆ ರಾಜ್ಯಗಳ ನಿಯಂತ್ರಣದಲ್ಲಿರುವ ಎಪಿಎಮ್‌ಸಿ ಮಂಡಿಗಳಲ್ಲಿ ಎಂದಿನಂತೆ ಮಾರಾಟ-ಖರೀದಿ ಕಾರ್ಯಕ್ರಮವು ಹಿಂದೆ ಇದ್ದಂತೆ ಮುಂದುವರಿಯುತ್ತದೆ ಎಂಬುದು ಖಚಿತವಾಗುತ್ತದೆ. ಈ ಶಾಸನಗಳ ಕಾರಣವಾಗಿ ಎಪಿಎಮ್‌ಸಿ (ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ)ಗಳು ಮುಚ್ಚಿಹೋಗುವುದಿಲ್ಲ. ಈ ಮಂಡಿಗಳಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ರೈತರನ್ನು ಅಥವಾ ಖರೀದಿಸುವ ವ್ಯಾಪಾರಗಾರರು/ಆಹಾರ ಸಂಸ್ಕರಣ ಘಟಕಗಳನ್ನು ಯಾರೂ ತಡೆಯುವುದಿಲ್ಲ. ಈ ಶಾಸನವು ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕಾಗಿ ಒಂದು ಪರ್ಯಾಯ ಮಾರುಕಟ್ಟೆ ವೇದಿಕೆಯನ್ನು ಒದಗಿಸುತ್ತದೆ. 

ಈ ವೇದಿಕೆಯು ಕಾರ್ಖಾನೆಯ ಅಂಗಳವಾಗಿರಬಹುದು ಸಂಸ್ಕರಣ ಘಟಕವಾಗಿರಬಹುದು, ಉತ್ಪನ್ನಗಳನ್ನು ಸಂಗ್ರಹಿಸುವ ಕೇಂದ್ರವಾಗಿರಬಹುದು, ಶೈತ್ಯಾಗಾರವಾಗಿರಬಹುದು, ಉಗ್ರಾಣವಾಗಬಹುದು, ಅಥವಾ ರೈತರ ಮನೆ ಬಾಗಿಲಾಗಿರಬಹುದು. ಈ ರೀತಿಯ ವೇದಿಕೆಗಳಲ್ಲಿನ ಮಾರಾಟ ವ್ಯವಹಾರಗಳಿಗೆ ಎಪಿಎಮ್‌ಸಿ ಮಾರುಕಟ್ಟೆ ಶುಲ್ಕ ಅಥವಾ ಸೆಸ್ ಇರುವುದಿಲ್ಲ. ಈ ಬಗೆಯ ಶುಲ್ಕ/ಸೆಸ್ ಕೇವಲ ಎಪಿಎಮ್‌ಸಿ ಯಾರ್ಡಿನಲ್ಲಿ ಮಾರಾಟ ಮಾಡುವ ವ್ಯವಹಾರಗಳಿಗೆ ಮಾತ್ರ ಅನ್ವಯವಾಗುತ್ತದೆ.

ರೈತರ ಅಭಿಮತ

ರೈತರು, ಅದರಲ್ಲೂ ಪಂಜಾಬ್, ಹರಿಯಾಣ ಹಾಗೂ ಮಧ್ಯಪ್ರದೇಶ, ಛತ್ತೀಸಗಡ ರಾಜ್ಯಗಳ ರೈತರು ಸದರಿ ಶಾಸನಗಳನ್ನು ನೋಡುವ ಪರಿ ಬೇರೆಯಿದೆ. ಸರ್ಕಾರವು ಸದರಿ ಶಾಸನಗಳ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಮಾರಾಟ ಮಾಡುವ ಒಂದು ಆರ್ಥಿಕ ವ್ಯವಸ್ಥೆಯನ್ನು ನೀಡುತ್ತದೆ ಎಂಬ ಆಸ್ವಾಸನೆ ನೀಡಲು ಪ್ರಯತ್ನಿಸುತ್ತಿದೆ. ಇನ್ನು ಮೇಲೆ ರೈತರಾಗಲಿ, ವ್ಯಾಪಾರಗಾರರಾಗಲಿ, ಆಹಾರ ಸಂಸ್ಕರಣ ಘಟಕಗಳಾಗಲಿ, ಚಿಲ್ಲರೆ ಮಾರಾಟಗಾರರಾಗಲಿ ಅಥವಾ ರಫ್ತುದಾರರಾಗಲಿ ಎಪಿಎಮ್‌ಸಿ ಯಾರ್ಡಿನಲ್ಲೇ ಮಾರಾಟ/ಖರೀದಿ ಮಾಡಬೇಕೆಂಬ ಕಡ್ಡಾಯವಿರುವುದಿಲ್ಲ.

ಆದರೆ ಮೇಲೆ ಉಲ್ಲೇಖಿಸಿರುವ ರಾಜ್ಯಗಳ ರೈತರಿಗೆ ಸರ್ಕಾರವು ನೀಡುತ್ತಿರುವ  ಸ್ವಾತಂತ್ರ್ಯದ ಆಶ್ವಾಸನೆ ಬಗ್ಗೆ ರವಷ್ಟೂ ಆಸಕ್ತಿಯಿಲ್ಲ. ತನ್ನೆಲ್ಲ ಇತಿಮಿತಿಗಳೊಂದಿಗೆ ಸಾಕಷ್ಟು ಚೆನ್ನಾಗಿ ಕೆಲಸ ಮಾಡುತ್ತಿರುವ ಪ್ರಸ್ತುತ ವ್ಯವಸ್ಥೆಗೆ ಹೊಸ ಶಾಸನಗಳಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ರೈತರಿಗೆ ಹೆಚ್ಚು ಕಾಳಜಿಯಿದೆ. ಸರ್ಕಾರದ ಏಜೆನ್ಸಿಗಳ ಮೂಲಕ 2019-2020ನೆಯ ಸಾಲಿನಲ್ಲಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ 201.14 ಲಕ್ಷ ಟನ್ ಗೋಧಿ ಮತ್ತು ಮತ್ತು 226.56 ಲಕ್ಷ ಟನ್ ಭತ್ತವನ್ನು ಖರೀದಿಸಲಾಗಿದೆ. ಅವುಗಳ ಅನುಕ್ರಮವಾಗಿ ಪ್ರತಿ ಕ್ವಿಟಲ್ ಬೆಲೆಯಾದ ರೂ. 1925 ಮತ್ತು ರೂ. 1835ರಂತೆ ಒಟ್ಟು ಸಂಗ್ರಹದ ಬೆಲೆ ರೂ. 80293.21 ಕೋಟಿ. ಈ ಎಲ್ಲ ಉತ್ಪನ್ನಗಳನ್ನು ಎಪಿಎಮ್‌ಸಿ ಮಂಡಿಗಳಿಂದ ಖರೀದಿಸಲಾಗಿದೆ.

ಈಗಿರುವ ಆರ್ಥಿಕ ವ್ಯವಸ್ಥೆಯು ರೈತರಿಗೆ ಮಾತ್ರವಲ್ಲ, ಸರ್ಕಾರದ ಏಜೆನ್ಸಿಗಳು ದಲ್ಲಾಳಿಗಳಿಂದ (ಕಮೀಷನ್ ಏಜೆಂಟರುಗಳು) ಉತ್ಪನ್ನಗಳನ್ನು ಸಂಗ್ರಹಿಸಿಕೊಳ್ಳುತ್ತವೆ. ಉತ್ಪನ್ನಗಳನ್ನು ಮಂಡಿಗೆ ತಂದು ಇಳಿಸಿಯಾದ ಮೇಲೆ ಅವುಗಳನ್ನು ಚೊಕ್ಕಟ ಮಾಡಿ ಯಾರ್ಡಿನಲ್ಲಿನ ಖರೀದಿದಾರರ ಅಂಗಡಿಗಳ ಅಂಗಳದಲ್ಲಿ ಇಡಲಾಗುತ್ತದೆ. ನಂತರ ಹರಾಜು, ತೂಕ ಮಾಡುವುದು, ಚೀಲಗಳಿಗೆ ತುಂಬುವುದು ಮತ್ತು ಸಾಗಣೆೆ ವಾಹನಗಳಾದ ಲಾರಿಗಳು ಅಥವಾ ಸರಕು ಸಾಗಿಸುವ ರೈಲು ಬಂಡಿಗಳಿಗೆ ತುಂಬುವುದು ನಡೆಯುತ್ತದೆ. ಈ ಎಲ್ಲ ಸೇವೆಗಳಿಗೆ ಎಪಿಎಮ್‌ಸಿಯು ಶೇ. 2.5 ರಷ್ಟು ಕಮೀಷನ್ ವಿಧಿಸಲಾಗುತ್ತದೆ.

ದಳ್ಳಾಳಿಗಳೂ ಸಹ ಬಿತ್ತನೆಯ ಕಾಲದಲ್ಲಿ ರೈತರಿಗೆ ಸಾಲ ನೀಡಿ ಹಣ ಮಾಡುತ್ತವೆ ಮತ್ತು ಸಾಲ ಪಡೆದ ರೈತರು ಸದರಿ ಕಮೀಷನ್ ಏಜೆಂಟರುಗಳಿಗೆ ಮಾರಾಟ ಮಾಡುವ ಷರತ್ತಿನಿಂದಾಗಿಯೂ ಅವು ಲಾಭ ಮಾಡಿಕೊಳ್ಳುತ್ತವೆ. ರೈತರಿಗೆ ದಲ್ಲಾಳಿಗಳಿಂದ (ಅನೇಕ ಸಂದರ್ಭಗಳಲ್ಲಿ ದೊಡ್ಡ ಜಮೀನ್ದಾರರೇ ದಲ್ಲಾಳಿಗಳಾಗಿರುತ್ತಾರೆ) ಮತ್ತು ಮಂಡಿಗಳಲ್ಲಿನ ಹಮಾಲರಿಂದ ಸ್ವಾತಂತ್ರ್ಯ ದೊರೆಯುತ್ತದೆ ಎಂಬುದು ಕೇವಲ ತಾತ್ವಿಕವಾದ ಸಂಗತಿ. ವ್ಯಾಪಾರ ಚಟುವಟಿಕೆಗಳು ಮಂಡಿಯ ವ್ಯಾಪ್ತಿಯಿಂದ ಹೊರಗೆ ಹೋಗುವುದರಿಂದ ಎಪಿಎಮ್‌ಸಿ ಅಪ್ರಸ್ತುತವಾಗುವ ಮತ್ತು ಸರ್ಕಾರವು ನಿಧಾನವಾಗಿ ಖರೀದಿಸುವುದನ್ನು ನಿಲ್ಲಿಸುವ ಅಪಾಯಗಳು ಕಟುವಾಸ್ತವ ಮತ್ತು ನಿಜವಾದ ಸಂಗತಿಗಳಾಗಿವೆ. ಒಂದು ವೇಳೆ ಎಪಿಎಮ್‌ಸಿಗಳು ಹೊರಗಿನ ಪರ್ಯಾಯ ಮಂಡಿಗಳಿಗಿಂತ ಮಾರುಕಟ್ಟೆ ಶುಲ್ಕದ ಮೂಲಕ ಹೆಚ್ಚು ಗಳಿಸದಿದ್ದರೆ ಜಿಯೋ/ಏರ್‌ಟೆಲ್‌ಗಳ ಮುಂದೆ ಬಿಎಸ್‌ಎಲ್‌ಎನ್ ಅಸಹಾಯಕ ಸ್ಥಿತಿಯಾದಂತೆ ಅಧಿಕೃತ ಎಪಿಎಮ್‌ಸಿಗೂ ಬರುವ ಸಾಧ್ಯತೆಯಿದೆ.

‘ಈ ಪರ್ಯಾಯ ವೇದಿಕೆಯಿಂದ ಕಾರ್ಪೋರೇಟುಗಳಿಗೆ ಮೊದಲ ವರ್ಷ ನಷ್ಟವಾಗಬಹುದು. ಎರಡನೆಯ ವರ್ಷ ಖರ್ಚು-ಆದಾಯ ಸಮಸಮವಾಗಬಹುದು. ಮೂರನೆಯ ವರ್ಷ ಅಪಾರ ಲಾಭವಾಗುತ್ತದೆ. ಒಂದು ವೇಳೆ ಅವರಿಗೆ ನೇರವಾಗಿ ಖರೀದಿಸುವ ಅವಕಾಶ ನೀಡಿದರೆ ಸರ್ಕಾರಕ್ಕೆ ಪ್ರತಿಯಾಗಿ ತಾವೇ ಮಂಡಿಗಳನ್ನು ಮುಚ್ಚಿಸುವ ಕೆಲಸ ಮಾಡುತ್ತವೆ’ ಎಂಬುದು ಪಾಣಿಪಟ್‌ನ ಉರ್‌ಲಾನಾ ಗ್ರಾಮದ ರೈತ ಪ್ರೀತಮ್ ಸಿಂಗ್ ಹಂಜಾರ ಅವರ ಅಭಿಪ್ರಾಯವಾಗಿದೆ.

ಮುಂದೇನು?

ಈಗ ಕೇಳಬೇಕಾದ ಪ್ರಶ್ನೆಗಳು: ಎಪಿಎಮ್‌ಸಿಗಳ ಏಕಸ್ವಾಮ್ಯವನ್ನು ಕೆಡವಿಬಿಟ್ಟರೆ ಅವು ಅಪ್ರಸ್ತುತವಾಗಿ ಬಿಡುತ್ತವೆಯೇ? ಎರಡನೆಯದು, ಇದರಿಂದಾಗಿ ಕೃಷಿ ವ್ಯವಹಾರಕ್ಕೆ ಇಳಿದ ಕಾರ್ಪೋರೇಟುಗಳು ನೇರವಾಗಿ ರೈತರೊಂದಿಗೆ ಸಂಪರ್ಕ ಸಾಧಿಸಿಕೊಂಡು ಬಿಡುತ್ತವೆಯೇ ಮತ್ತು ಮಧ್ಯವರ್ತಿಗಳನ್ನು ತೊಡೆದುಹಾಕಿ ಬಿಡುತ್ತವೆಯೇ? ಮೊದಲನೆಯ ಪ್ರಶ್ನೆಗೆ ಉತ್ತರ ಬಿಹಾರದ ಅನುಭವದಿಂದ ದೊರೆಯುತ್ತವೆ. ಬಿಹಾರ ರಾಜ್ಯವು 2006ರಲ್ಲಿ ಎಪಿಎಮ್‌ಸಿ ಕಾಯಿದೆಯನ್ನು ರದ್ದುಪಡಿಸಿತು. ಆದರೆ ಪೂರ್‌ನಿಯಾ ಜಿಲ್ಲೆಯ ಗುಲಾಬ್ ಬಾಗ್ ಮಂಡಿಯಲ್ಲಿ ವಾರ್ಷಿಕ ಅಂದಾಜು 5 ರಿಂದ 6 ಲಕ್ಷ ಟನ್ನುಗಳಷ್ಟು ಮೆಕ್ಕೆಜೋಳದ ವ್ಯಾಪಾರ ನಡೆಯುತ್ತದೆ. ಅಂದರೆ ಈ ಮಂಡಿಯು ಪಂಜಾಬಿನ ಹೆಚ್ಚು ಪ್ರಸಿದ್ಧವಾದ ಖಾನ ಅಥವಾ ರಾಜಾಪುರ ಎಪಿಎಮ್‌ಸಿಯಷ್ಟೆ ದೊಡ್ಡ ಮಾರುಕಟ್ಟೆಯಾಗಿದೆ.

ಇಂದಿಗೂ ಬಿಹಾರ ರಾಜ್ಯದಲ್ಲಿ 30 ರಿಂದ 40 ಲಕ್ಷ ಟನ್‌ಗಳಷ್ಟು ಬೃಹತ್ ಪ್ರಮಾಣದ ಮೆಕ್ಕೆಜೋಳವನ್ನು ಬಹು ರಾಷ್ಟ್ರೀಯ ಆಹಾರ ಪದಾರ್ಥಗಳ ವ್ಯಾಪಾರ ನಡೆಸುವ ಸಂಸ್ಥೆಗಳಿಗಾಗಿ ಮತ್ತು ಪಶು ಆಹಾರ ಉತ್ಪಾದಿಸುವ ಉದ್ದಿಮೆಗಳಿಗಾಗಿ ವ್ಯಾಪಾರಗಾರರು/ಸಗಟು ವ್ಯಾಪಾರಗಾರರು ಖರೀದಿ ಮಾಡುತ್ತಾರೆ. ವಿಶೇಷ ಆಹಾರ ಪದಾರ್ಥಗಳಿಗಾಗಿಯೇ ಸ್ಥಾಪಿತವಾಗಿರುವ ಮತ್ತು ವ್ಯವಸ್ಥಿತವಾಗಿ ವ್ಯವಹಾರ ನಡೆಸುತ್ತಿರುವ ಕೆಲವು ಎಪಿಎಮ್‌ಸಿಗಳಿವೆ.

ಉದಾ: ಜೀರಿಗೆ ವ್ಯಾಪಾರಕ್ಕೆ ಪ್ರಸಿದ್ಧವಾದ ಗುಜರಾತಿನ ಉಂಜಾ, ಆಂಧ್ರಪ್ರದೇಶದ ಗುಂಟೂರು ಮಿರ್ಚಿ ಮಾರುಕಟ್ಟೆ, ಮಹಾರಾಷ್ಟ್ರದ ಲಸಾನ್‌ಗಾಂವ್ ಮತ್ತು ನಾರಾಯಣಗಾಂವ್‌ಗಳಲ್ಲಿನ ಈರುಳ್ಳಿ ಮತ್ತು ಟೊಮಾಟೋ ಮಾರುಕಟ್ಟೆ. ಈ ಮಾರುಕಟ್ಟೆಗಳಿಗೆ ಮುಂದಿನ ದಿನಗಳಲ್ಲಿ ಅಸ್ತಿತ್ವದ ಪ್ರಶ್ನೆಯನ್ನು ಎದುರಿಸಬೇಕಾದ ಪ್ರಮೇಯ ಬರುವ ಸಾಧ್ಯತೆಯಿಲ್ಲ. ಏಕೆಂದರೆ ಇವುಗಳಿಗೆ ರೈತರು ಮತ್ತು ವ್ಯಾಪಾರಗಾರರ ಪ್ರೋತ್ಸಾಹ ಮತ್ತು ಪೋಷಣೆ ದೊರೆಯುತ್ತಿದೆ. ಈ ಮಾರುಕಟ್ಟೆಗಳಿಗೆ ಸಮನಾಂತರ ಮಾರುಕಟ್ಟೆ ಮೂಲಸೌಲಭ್ಯಗಳನ್ನು ಸೃಷ್ಟಿಸುವುದು ಅಷ್ಟೊಂದು ಸುಲಭವಲ್ಲ.

ಎರಡನೆಯ ಪ್ರಶ್ನೆಯ ಬಗ್ಗೆ ಹೇಳುವುದಾದರೆ, ಹಾಲನ್ನು ಮಂಡಿಗಳಿಗೆ ಯಾರೂ ಸರಬರಾಜು ಮಾಡುತ್ತಿಲ್ಲ ಮತ್ತು ಈ ಸರಕು ಎಪಿಎಮ್‌ಸಿ ಕಾಯಿದೆ ವ್ಯಾಪ್ತಿಗೆ ಬರುವುದಿಲ್ಲ. ಆದರೆ ದೊಡ್ಡ ಪ್ರಮಾಣದಲ್ಲಿ ಹಾಲನ್ನು ಸಂಗ್ರಹಿಸುವ ಖಾಸಗಿ ಡೈರಿಗಳಿಂದ ಅತ್ಯಂತ ಸಂಘಟಿತ ರೀತಿಯಲ್ಲಿ ಹಾಲನ್ನು ಖರೀದಿಸುತ್ತವೇ ವಿನಾ ನೇರವಾಗಿ ರೈತರಿಂದ ಖರೀದಿಸುವುದಿಲ್ಲ. ಒಂದು ವೇಳೆ ಎಪಿಎಮ್‌ಸಿಗಳು ತಮ್ಮ ಅಸ್ತಿತ್ವ ಕಳೆದುಕೊಂಡರೂ ಸಗಟು ಖರೀದಿದಾರರು ಮತ್ತು ಮಧ್ಯವರ್ತಿಗಳು ಕೃಷಿ ಮಾರುಕಟ್ಟೆ ಜಗತ್ತಿನಲ್ಲಿ ಮುಂದುವರಿಯುತ್ತಾರೆ. ಬೃಹತ್ ಕಾರ್ಪೋರೇಟ್ ಸಂಸ್ಥೆಗಳೂ ಸಹ ರೈತರೊಂದಿಗೆ ನೇರವಾಗಿ ವ್ಯವಹಾರ ನಡೆಸದೆ ಇವರಿಂದಲೇ ಖರೀದಿಸುತ್ತವೆ.

ಪಂಜಾಬ್ ಮತ್ತು ಹರಿಯಣ ರೈತರ ಹೋರಾಟದಲ್ಲಿ ಎಪಿಎಮ್‌ಸಿಗಳನ್ನು ಉಳಿಸಿಕೊಳ್ಳುವುದು ಮತ್ತು ಸರ್ಕಾರವು ಕಾಪು ದಾಸ್ತಾನಿಗಾಗಿ ರೈತರ ಉತ್ಪನ್ನಗಳನ್ನು ಖರೀದಿಸುವ ಕಾರ್ಯಕ್ರಮವನ್ನು ಮುಂದುವರಿಯುವಂತೆ ಮಾಡುವುದು ಮುಖ್ಯವಾಗಿವೆ. ಸರ್ಕಾರವು ಹೇಳುತ್ತಿರುವ ‘ಆಯ್ಕೆಯ  ಸ್ವಾತಂತ್ರ್ಯಕ್ಕೆ ಪ್ರತಿಯಾಗಿ ಇವೆರಡನ್ನು ಸಾಧಿಸಿಕೊಳ್ಳುವುದು ಹೆಚ್ಚು ಅರ್ಥಪೂರ್ಣವಾಗಿದೆ.

ಮೂರು ಮಸೂದೆಗಳು ಯಾವುವು?

  1. ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪೋಷಣೆ ಮತ್ತು ಅನುಕೂಲ ಮಾಡಿಕೊಡುವುದು) ಮಸೂದೆ 2020.
  2. ರೈತರ (ಸಶಕ್ತೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಒಪ್ಪಂದ ಮತ್ತು ಕೃಷಿ ಸೇವಾ ಮಸೂದೆ 2020.
  3. ಅತ್ಯಗತ್ಯ ಸರಕುಗಳ ಮಸೂದೆ 2020.

ಮಸೂದೆಗಳ ಪರ-ವಿರೋಧ

ಕೇಂದ್ರ ಸರ್ಕಾರವು ಸೆಪ್ಟೆಂಬರ್ 20, 2020ರಂದು ಸಂಸತ್ತಿನಲ್ಲಿ ಅನುಮೋದಿಸಿರುವ ಮೂರು ಮಸೂದೆಗಳನ್ನು ಬೆಂಬಲಿಸುವ ಪಕ್ಷಗಳು ಯಾವುವು? ಮತ್ತು ವಿರೋಧಿಸುವ ಪಕ್ಷಗಳು ಯಾವುವು?

ಮಸೂದೆಗಳನ್ನು ವಿರೋಧಿಸಿದ ರಾಜಕೀಯ ಪಕ್ಷಗಳು: ತೃಣಮೂಲ ಕಾಂಗ್ರೆಸ್ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ, ಡಿ.ಎಂ.ಕೆ., ಸಿ.ಪಿ.ಎಂ., ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಆಮ್ ಆದ್ಮಿ ಪಾರ್ಟಿ, ಅಕಾಲಿ ಶಿರೋಮಣಿ ದಳ, ರಾಷ್ಟ್ರೀಯ ಜನತಾ ದಳ, ಶಿವ ಸೇನಾ, ಎ.ಐ.ಎ.ಡಿ.ಎಂ.ಕೆ.

ಮಸೂದೆಗಳ ಪರವಾಗಿರುವ ರಾಜಕೀಯ ಪಕ್ಷಗಳು: ವೈ.ಎಸ್.ರಾಜಶೇಖರ ರೆಡ್ಡಿ ಕಾಂಗ್ರೆಸ್ ಪಕ್ಷ, ಜೆ.ಡಿ.(ಯು), ಆಳುವ ಪಕ್ಷವಾದ ಭಾರತೀಯ ಜನತಾ ಪಕ್ಷ ಮತ್ತು ತೆಲುಗು ದೇಶಂ ಪಾರ್ಟಿ, (ಬಿಜು ಜನತಾ ದಳದ ಖಚಿತ ನಿಲುವಿನ ಬಗ್ಗೆ ಅನುಮಾನವಿದೆ, ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷದ ನಿಲುವು ಗೊತ್ತಿಲ್ಲ).

ಅನುವಾದಕನ ಟಿಪ್ಪಣಿ: ರೈತರು ಬಾಣಲೆಯಿಂದ ಬೆಂಕಿಗೆ

ಸರ್ಕಾರದ ಕೃಷಿ ಮಾರುಕಟ್ಟೆ ಮಸೂದೆಗಳು ‘ಸರ್ಕಾರಿ-ನಿಯಂತ್ರಿತ ಮಾರುಕಟ್ಟೆ’ಯಿಂದ ರೈತರನ್ನು ಬಿಡುಗಡೆಗೊಳಿಸುತ್ತವೆ ಎಂದು ಸರ್ಕಾರ ಘೋಷಿಸಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂಬುದರ ಪರಿವೆ ಸರ್ಕಾರಕ್ಕಿದಂತೆ ಕಾಣುತ್ತಿಲ್ಲ. ‘ಸರ್ಕಾರಿ-ನಿಯಂತ್ರಿತ ಮಾರುಕಟ್ಟೆ’ಯಿಂದ ರೈತರಿಗೆ ಲಾಭ-ಅನುಕೂಲವಾಗದಿದ್ದರೆ ಇದು ‘ಖಾಸಗಿ-ನಿಯಂತ್ರಿತ ಮಾರುಕಟ್ಟೆ’ಯಿಂದ ಸಾಧ್ಯವೆನ್ನುವುದು ಯಾವ ಅರ್ಥಶಾಸ್ತ್ರದಲ್ಲಿದೆ ಎಂಬುದನ್ನು ಸರ್ಕಾರವು ಮುಗ್ಧ ರೈತರಿಗೆ ಹೇಳಬೇಕು. ಸರ್ಕಾರವು ಪ್ರಜ್ಞಾಪೂರ್ವಕವಾಗಿ ರೈತರನ್ನು ಬಾಣಲೆಯಿಂದ ಬೆಂಕಿಗೆ ದೂಡುತ್ತಿದೆ ಎಂದು ಅನಿವಾರ್ಯವಾಗಿ ಹೇಳಬೇಕಾಗಿದೆ. ಸರ್ಕಾರವೇ ‘ತನ್ನನ್ನು ರೈತರು ನಂಬಿದರೆ’ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತಿದೆಯೇ!

ಮೂಲ: ದ ಇಂಡಿಯನ್ ಎಕ್ಸ್ ಪ್ರೆಸ್ 
ಅನುವಾದ: ಟಿ.ಆರ್.ಚಂದ್ರಶೇಖರ

Leave a Reply

Your email address will not be published.