ಕೆಂಪುಸಾವಿನ ಮುಖವಾಡನೃತ್ಯ

ಎಡ್ಗರ್ ಎಲನ್ ಪೋ ಅಮೆರಿಕದ ಪ್ರಸಿದ್ಧ ಕವಿ, ಕತೆಗಾರ, ವಿಮರ್ಶಕ ಹಾಗೂ ಪತ್ರಿಕಾ ಸಂಪಾದಕ. ಈತ ಅಮೆರಿಕದ ಪ್ರಾರಂಭಿಕ ಹಂತದ ಸಣ್ಣ ಕತೆಗಾರರಲ್ಲಿ ಒಬ್ಬ ಮಹತ್ವದ ಲೇಖಕ. ಪತ್ತೇದಾರಿ ಕತೆಗಳ ಸಾಹಿತ್ಯ ಪ್ರಕಾರವನ್ನು ಪ್ರಾರಂಭಿಸಿದವನು ಎಂದು ಪ್ರಸಿದ್ಧನಾಗಿದ್ದಾನೆ. ಎಡ್ಗರ ಎಲನ್ ಪೋ ಬರೆದ ನಿಗೂಢ ಹಾಗೂ ಘೋರ ಕಲ್ಪನೆಯ ಕತೆಗಳು ಬಹುದೊಡ್ಡ ಓದುಗ ವರ್ಗವನ್ನು ಸೃಷ್ಟಿಸಿಕೊಂಡಿವೆ. ಮಾರಕ ಸಂಕ್ರಾಮಿಕ ರೋಗದ ಕುರಿತಾಗಿ ಪೋ 1842ರಲ್ಲಿ ಪ್ರಕಟಿಸಿದ The Masque of the Red Death ಸಣ್ಣ ಕತೆಯು gothic fiction ಮಾದರಿಗೆ ಸೇರಿದೆ. ಕೆಲ ವಿಮರ್ಶಕರು ಇದನ್ನು ರೂಪಕ ಕತೆ ಎಂತಲೂ ವಿಶ್ಲೇಷಿಸಿದ್ದಾರೆ. ಸಾವಿನ ವಿರುದ್ಧದ ಹೋರಾಟದಲ್ಲಿ ಮನುಷ್ಯನ ವಿಫಲ ಪಲಾಯನವನ್ನು ಪ್ರಸ್ತುತ ಕತೆ ಸಾದರಪಡಿಸುತ್ತದೆ. Jack London ಬರೆದ ಕಾದಂಬರಿ The Scarlet Plague ಎಡ್ಗರ್ ಎಲನ್ ಪೋನ ಈ ಸಣ್ಣಕತೆಯಿಂದ ಪ್ರೇರಣೆ ಪಡೆದುಕೊಂಡಿದೆ. 

‘ಕೆಂಪು ಸಾವು’ ಆ ರಾಜ್ಯವನ್ನು ವಿಧ್ವಂಸಗೊಳಿಸಿಯಾಗಿತ್ತು. ಈ ಹಿಂದೆ ಆ ರಾಜ್ಯಕ್ಕೆ ಬಂದೊದಗಿದ ಯಾವುದೇ ಪಿಡುಗು ಈ ರೀತಿಯಾಗಿ ಮಾರಕವಾಗಿರಲಿಲ್ಲ. ರಕ್ತದ ರೂಪದಲ್ಲಿ ಅದು ಅವತರಿಸುತ್ತಿತ್ತು ಹಾಗೂ ರಕ್ತ ಅದರ ಮುದ್ರೆಯಾಗಿತ್ತು. ಅದೊಂದು ರೀತಿಯ ರಕ್ತದ ಹುಚ್ಚಾಟವಾಗಿತ್ತು. ಅದು ರುದ್ರ ನಾಟಕದಂತೆ ತೋರುತ್ತಿತ್ತು. ಅಲ್ಲಿ ತೀವ್ರತರವಾದ ನೋವು ಇರುತ್ತಿತ್ತು, ದೇಹದ ರಂಧ್ರಗಳ ಮೂಲಕ ರಕ್ತ ಸೋರುತ್ತಿತ್ತು. ಅಲ್ಲಿಗೆ ವ್ಯಕ್ತಿಯ ಕತೆ ಮುಗಿದೇ ಹೋಗುತ್ತಿತ್ತು. ಪಿಡುಗಿಗೆ ಬಲಿಯಾದವನ ಮುಖದ ಮೇಲೆ ಕಾಣಿಸಿಕೊಳ್ಳುವ ರಕ್ತದ ಕಲೆಗಳು ಅವನನನ್ನು ಸಾಂಕ್ರಾಮಿತನೆಂದು ಘೋಷಿಸುತ್ತಲೇ ಸಹಾಯ ಸಹಕಾರದ ಎಲ್ಲ ಬಾಗಿಲುಗಳು ಮುಚ್ಚಿಕೊಳ್ಳುತ್ತಿದ್ದವು. ಸಹಜೀವಿಗಳ ಕರುಣೆಯ ಸೆಲೆಗಳು ಬತ್ತಿಹೋಗುತ್ತಿದ್ದವು. ರೋಗ ವಕ್ಕರಿಸಿಕೊಂಡು, ರೋಗಿಯಲ್ಲಿ ಅದು ಬೆಳೆದು, ರೋಗಿಯ ಜೀವ ತೆಗೆದುಕೊಳ್ಳುವುದು ಅರ್ಧತಾಸಿನ ಆಟವಾಗಿತ್ತು.

ಆದರೆ ಮೇಧಾವಿಯೂ ಧೈರ್ಯವಂತನೂ ಆದ ಯುವರಾಜ ಪ್ರಾಸ್ಪೆರೊ ಮಾತ್ರ ಇಂಥ ಸಂದರ್ಭದಲ್ಲೂ ಉತ್ಸಾಹದ ಬುಗ್ಗೆಯಾಗಿದ್ದ. ತನ್ನ ಸಾಮ್ರಾಜ್ಯದ ಅರ್ಧದಷ್ಟು ಜನ ಪಿಡುಗಿಗೆ ತುತ್ತಾಗಿ ಹೆಣವಾಗುತ್ತಿದ್ದಂತೆ ಅವನು ತನ್ನ ಆಸ್ಥಾನದ ಸರದಾರರು ಹಾಗೂ ಸುಂದರಾಂಗಿಯರಲ್ಲಿಯೇ ಆರೋಗ್ಯವಂತರಾದ ಹಾಗೂ ಉತ್ಸಾಹಿಗಳಾದ ಒಂದು ಸಾವಿರ ಜನರನ್ನು ಆಸ್ಥಾನಕ್ಕೆ ಕರೆ ಕಳುಹಿಸಿದ. ಅವರನ್ನೆಲ್ಲ ಕರೆದುಕೊಂಡು ದೂರದ ಏಕಾಂತದಲ್ಲಿರುವ ಭವ್ಯ ವಿಹಾರಧಾಮಕ್ಕೆ ಹೊರಟುಹೋದ. ಹೊರಗಿನಿಂದ ಬರುವ ವೈರಿಗಳನ್ನು ನಿಯಂತ್ರಿಸುವುದಕ್ಕೆ ಆ ವಿಹಾರಧಾಮದ ಸುತ್ತಲೂ ನಿರ್ಮಿಸಿದ ಕೋಟೆ ಗೋಡೆಯಲ್ಲಿ ಗುಂಡು ಹಾರಿಸುವುದಕ್ಕೆ ತೋಪು ಕಿಂಡಿಗಳಿದ್ದವು.

ವಿಹಾರಧಾಮವು ಅತ್ಯಂತ ಭವ್ಯವೂ ವಿಸ್ತಾರವಾದುದೂ ಆಗಿತ್ತು. ಯುವರಾಜನ ಘನವತ್ತಾದ ಹಾಗೂ ವಿಲಕ್ಷಣವಾದ ಬುದ್ಧಿಯ ಅಭಿರುಚಿಯನ್ನು ಬಿಂಬಿಸುವಂಥದ್ದಾಗಿತ್ತು. ಬಲಿಷ್ಠವಾದ ಹಾಗೂ ಎತ್ತರವಾದ ಗೋಡೆಗಳು ಈ ಧಾಮವನ್ನು ಸುತ್ತುವರೆದು ಭದ್ರವಾಗಿಸಿದ್ದಿತು. ಈ ಗೋಡೆಗಳಿಗೆ ಕಬ್ಬಿಣದ ದ್ವಾರಗಳನ್ನು ಜೋಡಿಸಲಾಗಿತ್ತು. ಅಸ್ಥಾನಿಕರೆಲ್ಲ ಈ ದ್ವಾರಗಳನ್ನು ದಾಟಿ ಒಳಗೆ ಬರುತ್ತಿದ್ದಂತೆ ದ್ವಾರದ ಅಗುಳಿಗಳನ್ನು ದೊಡ್ಡ ದೊಡ್ಡ ಸುತ್ತಿಗೆಗಳಿಂದ ಹೊಡೆದು ಹೊಡೆದು ಬೆಸೆಯುವಂತೆ ಮಾಡಿ ಭದ್ರಗೊಳಿಸಲಾಯಿತು.

ಮನುಷ್ಯರ ಅಂತರಂಗದಲ್ಲಿ ಪುಟಿದೇಳುವ ಚಿತ್ತಭ್ರಮೆ ಹಾಗೂ ಹತಾಶೆಗಳು ಉಂಟುಮಾಡುವ ಧಾಮದಿಂದ ಒಳಹೊರಗೆ ಹೋಗಲು ಪ್ರಚೋದಿಸುವ ಯಾವುದೇ ಅಂಶಗಳು ಅಲ್ಲಿರದ ಹಾಗೆ ನೋಡಿಕೊಳ್ಳಾಗಿತ್ತು. ವಿಹಾರಧಾಮದಲ್ಲಿ ಯಾವುದೊಂದು ಕೊರತೆ ಕಾಣದ ಹಾಗೆ ನೋಡಿಕೊಳ್ಳಲಾಗಿತ್ತು. ಸೋಂಕನ್ನು ನಿರೋಧಿಸುವ ಎಲ್ಲ ಮುನ್ನೆಚ್ಚರಿಕಾ ಕ್ರಮವನ್ನು ತಗೆದುಕೊಳ್ಳಲಾಗಿತ್ತು. ಒಂದು ಸಾರಿ ಒಳಗೆ ಬಂದರೆ ಮುಗಿಯಿತು. ಬಾಹ್ಯ ಜಗತ್ತಿನ ವ್ಯವಹಾರಗಳಿಗೂ ಇವರಿಗೂ ಯಾವುದೆ ತೆರನಾದ ಸಂಬಂಧವಿಲ್ಲವಾಗುತ್ತದೆ. ಹೊರಜಗತ್ತಿನಲ್ಲಿ ಏನು ಸಂಭವಿಸುತ್ತಿದೆ ಎಂದು ವಿಚಾರಿಸುವುದು ಹಾಗೂ ಚಿಂತಿಸಿ ಕೊರಗುವುದು ಮೂರ್ಖತನದ ಮಾತಾಗುತ್ತದೆ. ಸುಖದ ಎಲ್ಲ ಸಲಕರಣೆಗಳನ್ನು ಯುವರಾಜ ಆ ಧಾಮದಲ್ಲಿ ಗುಡ್ಡೆ ಹಾಕಿದ್ದ. ಆಸ್ಥಾನಿಕರನ್ನು ಹುಕಿಯಲ್ಲಿಡಲು ಅಲ್ಲಿ ವಿದೂಷಕರಿದ್ದರು. ಅಲ್ಲಿ ಆಶು ಕವಿಗಳಿದ್ದರು. ಅಲ್ಲಿ ನುರಿತ ನೃತ್ಯಗಾರ್ತಿಯರಿದ್ದರು. ಅಲ್ಲಿ ಸಂಗೀತಗಾರಿದ್ದರು. ಚೆಲುವು ಎನ್ನುವುದೆಲ್ಲ ಅಲ್ಲಿಯೇ ಇತ್ತು. ಕೈ ಚಾಚಿದಲ್ಲೆಲ್ಲ ಮಧುಪಾತ್ರೆಗಳಿದ್ದವು. ಇವೆಲ್ಲವುಗಳ ಜೊತೆಗೆ ಮಹಾಮಾರಿಯಿಂದ ಬಹು ದೊಡ್ಡ ಸುರಕ್ಷತೆಯೂ ಅಲ್ಲಿದ್ದಿತು. ‘ಕೆಂಪು ಸಾವು’ ಆ ಧಾಮದ ಆಚೆಗೆಲ್ಲೋ ದೂರದಲ್ಲಿ ಮಾತ್ರ ಸಾಧ್ಯವಿತ್ತು.

ಹೀಗೆ ಐದಾರು ತಿಂಗಳು ಗತಿಸಿದ ನಂತರ ಯುವರಾಜ ಪ್ರಾಸ್ಪೆರೊ ತನ್ನ ಸಾವಿರ ಜನ ಸರದಾರರಿಗೆ ಭವ್ಯವಾದ ಮುಖವಾಡ ಧರಿಸಿ ನೃತ್ಯ ಮಾಡುವ ಕೂಟವನ್ನು ಆಯೋಜಿಸಿದ.

ಇಂಗ್ಲಿಷ್ ಮೂಲ: ಎಡ್ಗರ ಎಲನ್ ಪೋ

ಮುಖವಾಡ ಧರಿಸಿ ನೃತ್ಯಮಾಡುವ ಆ ಆಟ ಅವರ ಇಂದ್ರಿಯ ಸುಖವನ್ನು ಸೂರೆಗೊಳ್ಳುವಂಥಾದ್ದಾಗಿತ್ತು. ಮೊದಲು ಆ ನೃತ್ಯ ನಡೆದ ಕೋಣೆಯ ಬಗೆಗೆ ಒಂದಿಷ್ಟನ್ನು ನಾನು ಹೇಳಲೇಬೇಕು. ಆ ವಿಹಾರಧಾಮದಲ್ಲಿ ಅರಮನೆಯ ಕೋಣೆಗಳನ್ನು ಹೋಲುವಂಥ ಏಳು ಸಾಲು ಕೋಣೆಗಳಿವೆ. ಸಾಮಾನ್ಯವಾಗಿ ಅರಮನೆಗಳಲ್ಲಿ ಇಂಥ ಕೋಣೆಗಳು ದೀರ್ಘಾಕಾರದ ನೇರ ಸಾಲಿನ ಕೋಣೆಗಳಾಗಿರುತ್ತವೆ. ಅವುಗಳ ಬಾಗಿಲುಗಳು ಕೋಣೆಯ ಎರಡೂ ಗೋಡೆಗಳಿಗೆ ಹೋಗಿ ತಟ್ಟುವಂತಿರುತ್ತವೆ. ಹಾಗಾಗಿ ಕೋಣೆಯೊಳಗಿನ ವಿದ್ಯಮಾನಗಳನ್ನು ನೋಡಲು ಯಾವುದೇ ಅಡಚಣೆಗಳಿರುವುದಿಲ್ಲ. ಆದರೆ ಈ ವಿಹಾರಧಾಮದಲ್ಲಿ ಹಾಗಿಲ್ಲ. ಯುವರಾಜನ ವಿಲಕ್ಷಣ ಸ್ವಾಭಾವಕ್ಕೆ ಪೂರಕವಾಗಿ ಅವೆಲ್ಲ ಇವೆ. ಇಲ್ಲಿನ ಕೋಣೆಗಳನ್ನು ಅಸಂಗತ ರೀತಿಯಲ್ಲಿ ನಿರ್ಮಿಸಲಾಗಿದೆ. ನಿಮಗೆ ಇಲ್ಲಿನ ಯಾವುದೇ ಕೋಣೆಯ ಸಮಗ್ರ ದೃಶ್ಯ ಸಿಗಲು ಸಾಧ್ಯವೇ ಇಲ್ಲ.

ಬಲಭಾಗಕ್ಕೂ ಎಡಭಾಗಕ್ಕೂ ಇಲ್ಲಿ ಒಮ್ಮಿಂದೊಮ್ಮೆಲೆ ಮರಳುಹಿಡಿಸುವ ತಿರುವುಗಳಿವೆ. ಪ್ರತಿ ಗೋಡೆಯ ಮಧ್ಯ ಭಾಗದಲ್ಲಿ ಕಡಿಮೆಯಗಲದ ಎತ್ತರವಾದ ಗಾಥಿಕ್ ಶೈಲಿಯ ಕಿಡಕಿಯನ್ನು ಹಚ್ಚಲಾಗಿದೆ. ಈ ಕಿಡಕಿಗಳ ಮೂಲಕ ಹೊರಗೆ ನೋಡಿದರೆ ಮೊಗಸಾಲೆಯ ಮುಚ್ಚಿದ ಆವಾರವೇ ಕಾಣಿಸುತ್ತದೆ. ಪ್ರತಿಯೊಂದು ಕೋಣೆಯ ಗೋಡೆಗಳ ಹಾಗೂ ಅಲ್ಲಿರುವ ಅಲಂಕಾರಿಕ ವಸ್ತುಗಳ ಬಣ್ಣಕ್ಕೆ ಹೊಂದಿಕೊಳ್ಳುವಂತೆ ಕಿಡಕಿಗಾಜುಗಳ ಬಣ್ಣವು ಇರುತ್ತದೆ.

ಉದಾಹರಣೆಗೆ ಪೂರ್ವದ ತೀರದಲ್ಲಿನ ಕೋಣೆಯ ಬಣ್ಣ ನೀಲಿಯಾಗಿದ್ದರೆ ಅದರ ಕಿಡಕಿಗಾಜುಗಳೂ ನೀಲಿ ಬಣ್ಣದ್ದಾಗಿರುತ್ತವೆ. ಎರಡನೆಯ ಕೋಣೆಯ ಅಲಂಕಾರಿಕ ಸಾಮಗ್ರಿಗಳ ಹಾಗೂ ಕಿಡಕಿ ಪರದೆಗಳು ನೇರಳೆ ಬಣ್ಣದ್ದಾಗಿದ್ದರೆ ಅದರ ಕಿಡಕಿಗಾಜಿನ ಬಣ್ಣವೂ ನೇರಳೆಯದ್ದೇ ಆಗಿರುತ್ತದೆ. ಮೂರನೆಯ ಕೋಣೆಯ ಎಲ್ಲ ಭಾಗದಲ್ಲೂ ಹಸಿರು ಬಣ್ಣವಿರುವುದರಿಂದ ಅದರ ಕಿಡಕಿಗಾಜು ಹಸಿರು ಬಣ್ಣದ್ದಾಗಿರುತ್ತದೆ. ನಾಲ್ಕನೆಯ ಕೋಣೆಯ ಪೀಠೋಪಕರಣಗಳೆಲ್ಲವೂ ಕಿತ್ತಳೆ ಬಣ್ಣದ್ದಾಗಿರುತ್ತವೆ. ಐದನೆಯ ಕೋಣೆ ಶ್ವೇತವರ್ಣಮಯವಾದದ್ದು. ಆರನೆಯ ಕೋಣೆ ಜಾಂಬಳಿ ಬಣ್ಣದ್ದು. ಏಳನೆಯ ಕೋಣೆಯು ಕರಿ ಬಣ್ಣದ ಮಕಮಲ್ಲ ಬಟ್ಟೆಯಿಂದ ಸಿದ್ಧಪಡಿಸಿದ ಪರದೆಗಳಿಂದ ಆಚ್ಛಾದಿತವಾಗಿದೆ. ಛತ್ತಿನಿಂದ ಹಿಡಿದು ಗೋಡೆಗುಂಟ ಇಳಿಬಿಟ್ಟ ಕಪ್ಪು ಮಕಮಲ್ಲ ಬಟ್ಟೆಯ ಪರದೆಗಳು ಕೆಳಗೆ ಹಾಸಿದ ಅದೇ ಬಣ್ಣದ ನೆಲೆವಾಸಿನ ಮೇಲೆ ಸುರುಳಿ ಸುರುಳಿಯಾಗಿ ಬಿದ್ದಿವೆ.

ಆದರೆ ಈ ಕೋಣೆಯ ಕಿಡಕಿಗಾಜಿನ ಬಣ್ಣ ಮಾತ್ರ ಭಿನ್ನವಾಗಿದೆ. ಕಿಡಕಿಯ ಪಡಕುಗಳು ಕಡು ರಕ್ತಗೆಂಪು ಬಣ್ಣದ್ದಾಗಿವೆ. ಏಳೂ ಕೋಣೆಯಲ್ಲಿ ಯಾವುದೇ ತೆರನಾದ ಹಿಲಾಲುಗಳೂ ಇಲ್ಲ ಹಾಗೂ ಕವಲುದೀಪದ ಕಂಬಗಳೂ ಇಲ್ಲ. ಯಥೇಷ್ಟವಾದ ಚಿನ್ನದ ಅಲಂಕಾರಿಕ ವಸ್ತುಗಳು ಈ ಕೋಣೆಯ ಛತ್ತಿನಿಂದ ನೇತಾಡುತ್ತವೆ. ಇಲ್ಲಿನ ಯಾವುದೇ ಕೋಣೆಯಲ್ಲಿ ದೀಪದಿಂದ ಅಥವ ಮೊಂಬತ್ತಿಯಿಂದ ಹೊರಸೂಸುವ ಬೆಳಕು ಇರುವುದಿಲ್ಲ. ಆದರೆ ಪ್ರತಿಕೋಣೆಯ ಕಿಡಕಿಗೆ ವಿರುದ್ಧ ದಿಕ್ಕಿನಲ್ಲಿರುವ ಆವಾರದಲ್ಲಿ ಒಂದೊಂದು ಮೂರುಕಾಲಿನ ದೀವಟಿಗೆನ್ನು ಉರಿಸಲಾಗಿರುತ್ತದೆ. ಆ ದೀವಟಿಗೆಯಿಂದ ಚಿಮ್ಮುವ ಬೆಳಕಿನ ಕಿರಣಗಳು ಕಿಡಕಿಗಾಜಿನ ಮೂಲಕ ಹಾಯ್ದು ಪ್ರತಿ ಕೋಣೆಯನ್ನು ಬೆಳಗುತ್ತವೆ. ಹೀಗೆ ಅನಂತ ಬೆಡಗಿನ ರಂಗು ಪ್ರತಿ ಕೋಣೆಗೆ ಪ್ರಾಪ್ತವಾಗಿರುತ್ತದೆ.

ಆದರೆ ಪಶ್ಚಿಮದಲ್ಲಿರುವ ಏಳನೆಯ ಕೋಣೆ ತುಂಬಾ ವಿಲಕ್ಷಣವಾದುದಾಗಿದೆ. ಕಡುಗೆಂಪು ಬಣ್ಣದ ಕಿಡಕಿಗಾಜಿನ ಮೂಲಕ ಹಾಯ್ದು ಅಲ್ಲಿ ನೇತುಬಿಟ್ಟ ಕಪ್ಪುವರ್ಣದ ಪರದೆಗಳ ಗುಂಟ ಹಾಯ್ದು ಬರುವ ಬೆಳಕಿನ ಕಿರಣಗಳು ಸಾವಿನಂಥ ವಿವರ್ಣಮಯ ರಂಗನ್ನು ನಿರ್ಮಿಸಿ ಕೋಣೆಯ ತುಂಬೆಲ್ಲ ಭೀಕರತೆಯ ಭಾವವನ್ನು ಹರಡುತ್ತದೆ. ಆ ಕೋಣೆಯನ್ನು ಪ್ರವೇಶಿಸುವವರ ಮುಖದ ಮೇಲೆ ಒಂದು ಕ್ರೂರ ಚಹರೆ ನಿರ್ಮಾಣವಾಗುತ್ತದೆ. ಹೀಗಾಗಿ ಈ ಕೋಣೆಯನ್ನು ಪ್ರವೇಶಿಸುವ ಎದೆಗಾರಿಕೆ ಅಲ್ಲಿರುವ ಯಾವ ಸರದಾರನಿಗೂ ಇಲ್ಲ.

ಈ ಏಳನೆಯ ಕೋಣೆಯಲ್ಲಿ ಗೋಡೆಯೊಂದರ ಮೇಲೆ ಕರಿಮರದ ಕಟ್ಟಿಗೆಯ ಚೌಕಟ್ಟಿನಲ್ಲಿ ಕೂಡ್ರಿಸಲಾದ ದೊಡ್ಡಗಾತ್ರದ ಗಡಿಯಾರವೊಂದಿದೆ. ಆ ಗಡಿಯಾರದ ಲೋಲಕವು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ತೂಗಾಡುತ್ತ ಗಡುಚಾದ ಏಕತಾನತೆಯ ಟಂಕಾರವನ್ನು ಮಾಡುತ್ತದೆ. ಆ ಗಡಿಯಾರದ ನಿಮಿಷದ ಮುಳ್ಳು ಗಡಿಯಾರದ ಮುಖದ ಮೇಲೆ ಒಂದು ಸುತ್ತು ಹೊಡೆಯುತ್ತಿದ್ದಂತೆ ಅದರ ಹಿತ್ತಾಳೆಯ ಎದೆಯಿಂದ ಒಂದು ಆಳವಾದ, ಸ್ಪಷ್ಟವಾದ, ಜೋರಾದ ಸಂಗೀತಮಯ ನಾದವೊಂದು ಹೊರಡುತ್ತದೆ. ಆದರೆ ಆ ನಾದ ಎಷ್ಟು ವಿಶಿಷ್ಟವಾದುದಾಗಿರುತ್ತದೆ ಎಂದರೆ, ಪ್ರತಿ ಗಂಟೆಗೊಮ್ಮೆ ಆಸ್ಥಾನದ ವಾದ್ಯ ಮೇಳದವರು ಸಂಗೀತ ನುಡಿಸುವುದನ್ನು ನಿಲ್ಲಿಸಿ ಗಡಿಯಾರದ ಘಂಟಾನಾದವನ್ನು ಕೇಳುವಂತೆ ಅದು ಒತ್ತಾಯಿಸುತ್ತದೆ. ನೃತ್ಯಗಾರರು ನೃತ್ಯಮಾಡುವುದನ್ನು ನಿಲ್ಲಿಸುವಂತೆ ಮಾಡುತ್ತದೆ.

ಗಡಿಯಾರದ ಶ್ರುತಿಗೂಡಿದ ನಾದವು ಆ ಕೋಣೆಯಲ್ಲಿ ಆಮೋದದಲ್ಲಿ ತೇಲಾಡುತ್ತಿದ್ದ ಆ ಸರದಾರರ ಎದೆಯೊಳಗೆ ಒಂದು ಸಣ್ಣ ಪ್ರಮಾಣದ ಕ್ಷೋಭೆಯನ್ನುಂಟುಮಾಡುತ್ತದೆ. ತಲೆ ಸುತ್ತು ಬಂದು ಕೆಲವರು ಬಿಳಿಚಿಕೊಳ್ಳುತ್ತಾರೆ. ವಯಸ್ಸಾದವರು ಹಗಲುಗನಸು ಕಂಡವರಂತೆ ತಬ್ಬಿಬ್ಬಾಗಿ ತಮ್ಮ ಕೈಗಳನ್ನು ಹುಬ್ಬಿಗೆ ಒಯ್ಯತ್ತಾರೆ. ಘಂಟಾನಾದದ ಪ್ರತಿಧ್ವನಿ ಕರಗುತ್ತಿದ್ದಂತೆ ಸರದಾರರ ಗುಂಪಿನಲ್ಲಿ ಮತ್ತೆ ಲಘುವಾದ ನಗು ಪಸರಿಸುತ್ತದೆ. ಸಂಗೀತ ಮೇಳದವರು ಒಬ್ಬರ ಮುಖವನ್ನೊಬ್ಬರು ನೋಡಿ ಮುಗುಳು ನಗುತ್ತಾರೆ. ಮುಂದಿನ ಸಾರಿ ಈ ಘಂಟಾನಾದ ನಮ್ಮಲ್ಲಿ ಹಿಂದಿನಂತೆ ಯಾವುದೇ ತೆರನಾದ ಭೀತಿಯನ್ನು ಉಂಟುಮಾಡಲು ಸಾಧ್ಯವಾಗಬಾರದು ಎಂದು ಪ್ರತಿಜ್ಞೆ ಮಾಡುತ್ತಾರೆ. ಆದರೆ ಮತ್ತೆ ಅರವತ್ತು ನಿಮಿಷಗಳಾಗುತ್ತಿದ್ದಂತೆ (ಮೂರು ಸಾವಿರದಾ ಆರು ನೂರು ಸೆಕೆಂಡುಗಳು ಮುಗಿಯುತ್ತಿದ್ದಂತೆ) ಆ ಘಂಟಾನಾದ ಮರುಕಳಿಸುತ್ತಿದ್ದಂತೆ ಅವರೆಲ್ಲರಲ್ಲಿ ಮತ್ತದೇ ತೆರನಾದ ಚಿತ್ತಕ್ಷೋಭೆ, ಮತ್ತದೇ ತೆರನಾದ ವಿಹ್ವಲತೆ ಮರುಕಳಿಸುತ್ತದೆ.

ಇದೆಲ್ಲದರ ಹೊರತಾಗಿಯೂ ಅವರೆಲ್ಲ ಅಭೂತಪೂರ್ವವಾದ ಮನರಂಜನೆಯನ್ನು ಪಡೆಯುತ್ತಿದ್ದರು. ಪ್ರಾಸ್ಪೆರೊ ಯುವರಾಜನ ಅಭಿರುಚಿಗಳೇ ಅಷ್ಟು ವಿಲಕ್ಷಣವಾಗಿರುತ್ತಿದ್ದವು. ಬಣ್ಣ ಹಾಗೂ ಅವು ಮಾಡುವ ಪರಿಣಾಮದ ಕುರಿತಾಗಿ ಯುವರಾಜನಲ್ಲಿ ವಿಶೇಷವಾದ ಪರಿಣತಿ ಇತ್ತು. ಕಾಟಾಚಾರದ ಅಲಂಕಾರದ ಬಗೆಗೆ ಅವನಿಗೆ ಗೌರವವಿರಲಿಲ್ಲ. ಅವನ ಯೋಜನೆಗಳೆಲ್ಲ ಆವೇಶಭರಿತವಾದ ದಿಟ್ಟತನದಿಂದ ಕೂಡಿರುತ್ತಿದ್ದವು. ಅವನ ಕಲ್ಪನೆಗಳು ಅನಾಗರಿಕವಾದ ಹೊಳಪಿನಿಂದ ಕೂಡಿರುತ್ತಿದ್ದವು. ಅವನೊಬ್ಬ ಹುಚ್ಚ ಎಂದು ಹಲವಾರು ಜನ ನಿರ್ಣಯಿಸಿಬಿಟ್ಟಿದ್ದರು. ಆದರೆ ಅವನಿಗೆ ಅವನದೇ ಆದ ಅಭಿಮಾನಿಗಳ ಬಳಗವಿದೆ. ಅವರಾರೂ ಅವನನ್ನು ಹುಚ್ಚ ಎಂದು ಭಾವಿಸುವುದಿಲ್ಲ. ಅವನದು ಹುಚ್ಚುತನವಲ್ಲ ಎನ್ನಬೇಕಾದರೆ ನೀವು ಅವನನ್ನು ಪ್ರತಿ ಕ್ಷಣವೂ ಮುಟ್ಟಬೇಕು; ಅವನ ಮಾತುಗಳನ್ನು ಹೆಜ್ಜೆ ಹೆಜ್ಜೆಗೂ ಕೇಳಿಸಿಕೊಳ್ಳಬೇಕು.

ಈ ವಿಶೇಷ ಮೇಜವಾನಿಯ ಸಲುವಾಗಿ ಏಳು ಕೋಣೆಗಳನ್ನು ಇನ್ನೂ ವಿಶೇಷವಾಗಿ ಅಲಂಕರಿಸುವ ನಿರ್ದೇಶನವನ್ನು ಯುವರಾಜ ಅಂದು ನೀಡಿದ್ದ. ಈ ಮುಖವಾಡದ ನೃತ್ಯ ಕಾರ್ಯಕ್ರಮವು ಅವನ ಅಭಿರುಚಿಗೆ ತಕ್ಕ ಹಾಗೆ ಆಯೋಜಿತವಾಗಿತ್ತು. ಆದರೆ ಅವೆಲ್ಲಾ ವಿಕಟ ವಿರಾಳ ಸ್ವರೂಪ್ಪದ್ದಾಗಿದ್ದವೆಂದು ಬೇರೆ ಹೇಳಬೇಕಾಗಿಲ್ಲ. ಹೊಳಪು ಮಿಂಚು ಮತ್ತು ಮಾಯಾರೂಪ ಅಲ್ಲಿ ಆವರಿಸಿತ್ತು. ಫ್ರೆಂಚ್ ನಾಟಕಕಾರ ವಿಕ್ಟರ್ ಹ್ಯೂಗೋನ ನಾಟಕ ‘ಹರ‍್ನಾನಿ’ಯಲ್ಲಿ ಕಾಣಸಿಗುವ ಎಲ್ಲವೂ ಅಲ್ಲಿತ್ತು. ಅಂಗಾಗಗಳ ಹೊಂದಾಣಿಕೆಯಿಲ್ಲದ ಅರಬದೇಶದ ವಿಲಕ್ಷಣವಾದ ಆಕೃತಿಗಳು ಹಾಗೂ ಸಾಮಗ್ರಿ ಸಲಕರಣೆಗಳು ಅಲ್ಲಿದ್ದವು. ಹುಚ್ಚು ಮನಸ್ಸು ಮಾತ್ರ ಕಲ್ಪಿಸಿಕೊಳ್ಳಬಹುದಾದ ವಿಕಲ್ಪಕತೆಯ ಭ್ರಮಾಲೋಕ ಅಲ್ಲಿತ್ತು. ಅತಿಯಾದ ಸೌಂದರ್ಯವೂ ಇತ್ತು, ಅತಿಯಾದ ಸ್ವೈರವೃತ್ತಿಯೂ ಇತ್ತು, ಅತಿಯಾದ ವಿಲಕ್ಷಣತೆಯೂ ಇತ್ತು. ಅಲ್ಲಿ ಭಯಾನಕತೆಯೂ ಇತ್ತು. ಆದರೆ ಅದು ಹೇವರಿಕೆಯನ್ನು ಪ್ರಚೋದಿಸುವಂಥದ್ದಾಗಿರಲಿಲ್ಲ.

ಆ ಏಳೂ ಕೋಣೆಗಳಲ್ಲಿ ಕನಸುಗಳ ಜನಸ್ತೋಮವು ಅತ್ತಿಂದ ಇತ್ತ ಇತ್ತಿಂದ ಅತ್ತ ಒಯ್ಯಾರದಿಂದ ಸುಳಿದಾಡುತ್ತಿದ್ದವು. ಆ ಎಲ್ಲ ಕನಸುಗಳು ತಾವು ಸಂಚರಿಸುತ್ತಿರುವ ಕೋಣೆಯ ಬಣ್ಣ ತೇಜಸ್ಸನ್ನು ಆಹ್ವಾನಿಸಿಕೊಳ್ಳುತ್ತ, ಒಳಗೂ ಹೊರಗೂ ಮನೋವೇದನೆಯನ್ನು ಅನುಭವಿಸುತ್ತ, ಅಲ್ಲಿ ಕೇಳಿಬರುತ್ತಿರುವ ಉನ್ಮಾದಮಯ ವಾದ್ಯಮೇಳದ ಸಂಗೀತವು ಕನಸುಗಳ ಹೆಜ್ಜೆಯ ಸಪ್ಪಳದ ಪ್ರತಿಧ್ವನಿಯಂತೆ ತೋರುತ್ತಿತ್ತು. ಆಗ ತಕ್ಷಣವೇ ಜಾಂಬಳಿ ಬಣ್ಣದ ಕೋಣೆಯ ಗೋಡೆ ಮೇಲಿನ ಗಡಿಯಾರವು ಘಂಟೆ ಬಾರಿಸತೊಡಗಿತು. ಗಡಿಯಾರದ ಘಂಟಾನಾವೊಂದನ್ನು ಹೊರತು ಪಡಿಸಿ ಎಲ್ಲವೂ ಸ್ತಬ್ಧವಾಯಿತು. ಅಲೆದಾಡುತ್ತಿದ್ದ ಕನಸುಗಳು ಹೆಪ್ಪುಗಟ್ಟಿದಂತೆ ಜಡಗೊಂಡವು. ಘಂಟಾನಾದವು ಕರಗುತ್ತ ಹೋದಂತೆ ಕನಸುಗಳು ತುಸು ಹೊತ್ತು ಇದ್ದಂತೆ ಮಾಡಿ ಸರಿದು ಹೋದವು. ಅವು ಸರಿದು ಹೋಗುತ್ತಿದ್ದಂತೆ ಅರೆ ಅದುಮಲ್ಪಟ್ಟ ನಗೆಯು ಅವುಗಳ ಹಿಂದೆಯೇ ತೇಲುತ್ತ ಹೋಯಿತು. ಅದಾದ ನಂತರ ಮತ್ತೆ ಅಲ್ಲಿ ಸಂಗೀತ ಅಬ್ಬರಿಸತೊಡಗಿತು. ಕನಸುಗಳು ಮತ್ತೆ ಜೀವ ಪಡೆದವು. ಅವು ಈ ಮುನ್ನಿನಕ್ಕಿಂತ ಹೆಚ್ಚು ಖುಷಿಯಿಂದ ಒಳಹೊರಗೆ ಮನೋವೇದನೆಯನ್ನು ಅನುಭವಿಸುತ್ತ ಅತ್ತಿಂದ ಇತ್ತ ಇತ್ತಿಂದ ಅತ್ತ ಸುಳಿದಾಡತೊಡಗಿದವು.

ಅವು ಯಾವ್ಯಾವ ಕೋಣೆಯಲ್ಲಿ ಸಂಚರಿಸುತ್ತವೆಯೋ ಅಲ್ಲಿನ ಮೂರುಕಾಲಿನ ದೀವಟಿಗೆ ಕಿಡಕಿಗಾಜಿನ ಮೂಲಕ ಸೂಸುವ ಬಣ್ಣವನ್ನು ಅವು ಪಡೆಯುತ್ತಿದ್ದವು. ಆದರೆ ರಾತ್ರಿಹೊತ್ತಿನ ಕಾಲಕ್ಷಯವಾಗುತ್ತಿದ್ದಂತೆ ಪಶ್ಚಿಮದ ದಿಕ್ಕಿನಲ್ಲಿರುವ ಏಳನೆಯ ಕೋಣೆಯನ್ನು ಯಾರೂ ಪ್ರವೇಶಿಸುವ ಧೈರ್ಯವನ್ನು ತೋರಲಿಲ್ಲ. ಆ ಕೋಣೆಯಲ್ಲಿ ಕಡುಗುಲಾಬಿ ರಂಗಿನ ಬೆಳಕು ರಕ್ತಕೆಂಪು ಕಿಡಕಿಗಾಜುಗಳ ಮೂಲಕ ಹಾಯ್ದು ಬರುತ್ತಿತ್ತು. ಕಪ್ಪುಬಣ್ಣದ ಪರದೆಯ ರಂಗು ಭಯಹುಟ್ಟಿಸುವಂತಿತ್ತು. ಆ ಕೋಣೆಯ ಗಡಿಯಾರದಿಂದ ಹೊರಸೂಸುವ ಭೀಕರ ನಾದವು ಮನರಂಜನೆಯಲ್ಲಿ ತಲ್ಲೀನವಾಗಿರುವ ಅನ್ಯ ಕೋಣೆಗಳ ಗಡಿಯಾರದ ನಾದಕ್ಕಿಂತ ಹೆಚ್ಚು ಪ್ರಬಲವಾಗಿತ್ತು. 

ಆದರೆ ಆ ಎಲ್ಲ ಕೋಣೆಗಳು ಮೋಜುಗಾರರಿಂದ ತುಂಬಿ ತುಳುಕುತ್ತಿದ್ದವು. ಅಲ್ಲಿ ಆ ಜನರ ಹೃದಯಗಳು ರೋಗೋದ್ರೇಕಕ್ಕೆ ತುತ್ತಾದವರಂತೆ ಬಡಿದುಕೊಳ್ಳುತ್ತಿದ್ದವು. ಮಧ್ಯರಾತ್ರಿಯ ಘಂಟೆ ಬಾರಿಸುವವರೆಗೆ ಕ್ರೀಡಾಲೋಲುಪ್ತತೆ ಅಲ್ಲಿ ಗರಗರನೆ ತಿರುಗುತ್ತಿತ್ತು. ಆದರೆ ಆ ಸಂಗೀತ ಆ ಉನ್ಮಾದ ಥಟ್ಟನೆ ನಿಲುಗಡೆಗೆ ಬಂದಿತು. ನೃತ್ಯಗಾರರ ಚಲನೆ ನಿಶ್ಚಲವಾಯಿತು. ಮುಂಚಿನಂತೆಯೆ ಅಲ್ಲಿ ಅಸಹನೀಯ ಸ್ತಬ್ಧತೆ ಆವರಿಸಿತು. ಈಗ ಗಡಿಯಾರ ಹನ್ನೆರಡು ಬಾರಿ ನಾದ ಹೊರಡಿಸುವ ಸಮಯ. ಘಂಟಾನಾದ ಪ್ರಾರಂಭವಾಗಿಯೇ ಬಿಟ್ಟಿತು. ಹನ್ನೆರಡು ಸಾರಿ ಘಂಟಾನಾದ ಮೊಳಗುತ್ತದೆಯಾದ್ದರಿಂದ ಕ್ರೀಡಾಲೋಲುಪ್ತತೆಯಲ್ಲಿ ತೊಡಗಿದ ಜನರು ಹೆಚ್ಚು ಸಮಯದವರೆಗೆ ವಿಚಾರದಲ್ಲಿ ಮುಳುಗುವಂತಾಗಿತ್ತು.

ಹೀಗೆ ಹನ್ನೆರಡನೆಯ ಘಂಟಾನಾದ ಕರಗುತ್ತಿದ್ದಂತೆ ಕಾಲಕ್ಷಯಮಾಡುತ್ತಿದ್ದ ಆ ಜನರಲ್ಲಿ ಅನೇಕರಿಗೆ ಈಗ ತಮ್ಮ ಮಧ್ಯದಲ್ಲಿ ಈವರೆಗೆ ಕಂಡಿರದಿದ್ದ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಬಂದಿರುವ ವಿಷಯ ಗೊತ್ತಾಯಿತು. ಈ ಹೊಸ ವ್ಯಕ್ತಿಯ ಹಾಜರಿಯ ಸುದ್ದಿಯು ಪಿಸುಗುಟ್ಟುವ ಧ್ವನಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹಬ್ಬತೊಡಗಿತು. ಪಿಸುಗುಟ್ಟುವಿಕೆ ನಿಧಾನವಾಗಿ ಗುಯ್ಯಿಗುಡುವಿಕೆಯಾಗಿ, ಗುಜುಗುಜು ಗೊಣಗಾಟವಾಗಿ, ಹೆದರಿಕೆಯಾಗಿ, ಅಂತಿಮವಾಗಿ ಹೇವರಿಕೆಯಾಗಿ ಮಾರ್ಪಟ್ಟಿತು.

ನಾನು ಚಿತ್ರಿಸಿದ ಮಾಯಾಲೋಕದ ನೆರವಿನಲ್ಲಿ ಸಾಧಾರಣ ರೂಪವು ಯಾವುದೇ ತೆರನಾದ ಉದ್ವೇಗವನ್ನು ಸೃಷ್ಟಿಸಲಾರದು. ವಾಸ್ತವವಾಗಿ ಇಂಥ ಮುಖವಾಡದ ನೃತ್ಯದಲ್ಲಿ ಸ್ವೇಚ್ಛೆ ಎನ್ನುವುದಕ್ಕೆ ಮಿತಿಯಿರುವುದಿಲ್ಲ. ಆದರೆ ಅಲ್ಲಿ ಗೋಚರಿಸಿದ ವ್ಯಕ್ತಿಯು ಮಹಾಕ್ರೂರಿ ಅರಸು ‘ಹೆರಾಡ ದಿ ಗ್ರೇಟ್’ನನ್ನೇ ಅವನ ಸಾಮ್ರಾಜ್ಯದಿಂದ ಹೊರಹಾಕಿ ತಾನು ಒಳನುಸುಳಿದಂತಹ ಇನ್ನೊಬ್ಬ ಹೆರಾಡನಂತೆ ಕಾಣುತ್ತಿದ್ದ. ಈ ವ್ಯಕ್ತಿಯ ಪ್ರವೇಶ ಯುವರಾಜನ ಅಸಂಗತವಾದ ಶಿಷ್ಟಾಚಾರದ ಮಿತಿಯಾಚೆಗೆ ಇದ್ದಿತು. ಉನ್ಮತ್ತರಾದವರ ಎದೆಯ ತಂತುಗಳು ಉದ್ವೇಗದ ಸ್ಪರ್ಷವಿಲ್ಲದೆ ಶ್ರುತಿಗೊಡಲಾರವು. ಜೀವನ್ಮರಣಗಳನ್ನು ಯಾರು ಸಮಾನವಾದ ವಿನೋದ ಪ್ರಜ್ಞೆಯಿಂದ ನೋಡಬಲ್ಲರೋ ಅಂಥವರಲ್ಲಿ ವಿನೋದಮಾಡುವುದಕ್ಕೆ ಸ್ಥಾನವೆಲ್ಲಿರುತ್ತದೆ?

ಮುಖವಾಡ ಧರಿಸಿ ಬಂದ ಆಗಂತುಕನಲ್ಲಿ ಯಾವುದೇ ತೆರನಾದ ಯುಕ್ತಾಯುಕ್ತ ಪ್ರಜ್ಞೆಯಾಗಲೀ ಬುದ್ಧಿಚಾತರ‍್ಯವಾಗಲೀ ಇದ್ದಂತಿರಲ್ಲಿ. ಅಲ್ಲಿ ಆಗಮಿಸಿದ ಆ ವ್ಯಕ್ತಿ ತೆಳ್ಳಗೆ ಎತ್ತರದ ನಿಲುವಿನವನಾಗಿದ್ದ. ಆತ ಆಪಾದಮಸ್ತಕ ಪ್ರೇತದ ಉಡುಗೆಯಲ್ಲಿದ್ದ. ಅವನು ಧರಿಸಿದ ಮುಖವಾಡವು ಮರಗಟ್ಟಿದ ಹೆಣದ ಮುಖವನ್ನು ಹೋಲುತ್ತಿತ್ತು. ಅತ್ಯಂತ ನಿಕಟ ನೋಟವುಳ್ಳವರೂ ಈ ವಂಚನೆಯನ್ನು ಗುರುತಿಸಲಾರರು. ಆದಾಗ್ಯೂ ಕ್ರೀಡೋನ್ಮತ್ತರಾದವರು ಈ ಆಗಂತುಕನನ್ನು ಸ್ವೀಕರಿಸದಿದ್ದರೂ ಸಹಿಸಿಕೊಂಡಿದ್ದರು. ಅವರು ಗೊಣಗುತ್ತ ಗೊಣಗುತ್ತ ತಮ್ಮಲ್ಲೀಗ ಬಂದಿರುವುದು ‘ಕೆಂಪು ಸಾವು’ ಎಂದು ನಿರ್ಣಯಿಸಿದರು.

ಆ ವ್ಯಕ್ತಿ ಧರಿಸಿದ ಬಟ್ಟೆ ರಕ್ತದೋಕುಳಿಯಲ್ಲಿ ಮಿಂದಂತಿತ್ತು. ಅವನ ವಿಶಾಲವಾದ ಹುಬ್ಬಿನ ಮೇಲೆ ರಕ್ತಕೆಂಪಿನ ಸಿಂಪರಣೆಯಾಗಿತ್ತು. ಯಾವಾಗ ಯುವರಾಜ ಪ್ರಾಸ್ಪೆರೊ ಈ ಭೂತಬಿಂಬವು ನೃತ್ಯಗಾರರ ಮಧ್ಯ ಅತ್ತಿಂದ ಇತ್ತ ಇತ್ತಿಂದ ಅತ್ತ ನಿಧಾನವಾಗಿ ಗಂಭೀರವಾಗಿ ಸಂಚರಿಸುವುದನ್ನು ಕಂಡನೋ ಅವನು ಅಪಸ್ಮಾರಕ್ಕೆ ತುತ್ತಾದವರಂತೆ ಭೀತಗೊಂಡೋ ತಿರಸ್ಕಾರದಿಂದಲೋ ಜೋರಾಗಿ ಕಂಪಿಸಿದ. ಆದರೆ ಮರುಕ್ಷಣದಲ್ಲಿಯೇ ಅವನ ಹುಬ್ಬು ಕೋಪದಿಂದ ಕೆಂಪಾಯಿತು.

‘ಯಾರವರು? ಈ ತೆರನಾಗಿ ಧೈರ್ಯ ತೋರುವವರು? ಇಂಥ ದೇವದೂಷಕವಾದ ವ್ಯಂಗ್ಯದಿಂದ ನನ್ನನ್ನು ಅವಮಾನಪಡಿಸುತ್ತಿರುವವರು ಯಾರು?’ ಎಂದು ಅಲ್ಲಿ ನೆರೆದ ಅಸ್ಥಾನಿಕರನ್ನು ಒರಟಾಗಿ ಪ್ರಶ್ನಿಸಿದ. ‘ಅವನನ್ನು ಬಂಧಿಸಿರಿ; ಅವನ ಮುಖವಾಡವನ್ನು ಕಿತ್ತೆಸೆಯಿರಿ. ನಾಳೆ ಸೂರ್ಯೋದಯದ ವೇಳೆಗೆ ಅವನನ್ನು ಕೋಟೆಗೋಡೆಯ ಮೇಲೆ ಗಲ್ಲಿಗೇರಿಸಿರಿ’ಎಂದು ಆದೇಶಿಸಿದ.

ಯುವರಾಜ ಪ್ರಾಸ್ಪೆರೊ ಆಗ ನೀಲಿಬಣ್ಣದ ಪೂರ್ವದ ಕೋಣೆಯಲ್ಲಿ ನಿಂತಿದ್ದ. ಅವನ ಪಕ್ಕದಲ್ಲಿ ಬಿಳಿಚಿಟ್ಟುಕೊಂಡ ಮುಖದ ಆಸ್ಥಾನಿಕರು ನಿಂತಿದ್ದರು. ಯುವರಾಜ ಅವರನ್ನು ಮಾತನಾಡಿಸಲು ಪ್ರಾರಂಭಿಸುತ್ತಿದ್ದಂತೆ ಅವಸರದಲ್ಲಿ ಅವರು ಆ ಆಗಂತುಕನ ಕಡೆಗೆ ಹೊರಟರು. ಆಗ ಆ ಆಗಂತುಕ ಯುವರಾಜನ ಕಡೆಗೆ ಗಂಭೀರ ನಡೆಯಲ್ಲಿ ಹೊರಟುಬಂದ. ಆದರೆ ಆಸ್ಥಾನಿಕರಾರೂ ಆ ಮೂಕನಾಟಕಕಾರನ ಕಡೆಗೆ ಹೋಗಿ ಅವನನ್ನು ತಡೆಯುವಂತೆ ತೋರಲಿಲ್ಲ. ಹೀಗಾಗಿ ಆ ಆಗಂತುಕ ಯುವರಾಜನನ್ನು ಇನ್ನಷ್ಟೂ ಸಮೀಪಿಸಿದ.

ಅಲ್ಲಿ ನೆರೆದ ಎಲ್ಲರೂ ಅಂಜಿ ಕೋಣೆಯ ಮಧ್ಯದಿಂದ ನಿಧಾನವಾಗಿ ಗೋಡೆಯ ಕಡೆಗೆ ಸರಿದು ನಿಂತರು. ಆಗಂತುಕ ಯಾವುದೇ ಅಡಚಣೆಯಿಲ್ಲದೆ ಅಷ್ಟೇ ಗಂಭೀರವಾಗಿ ಯುವರಾಜನೆಡೆಗೆ ನಡೆದು ಬಂದ. ಅಲ್ಲಿ ನೆರೆದ ಉಳಿದವರಿಗಿಂತ ತಾನು ಭಿನ್ನ ಎನ್ನುವುದು ಅವನ ನಡಿಗೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆತ ನೇರಳೆ ಬಣ್ಣದ ಕೋಣೆಯಿಂದ ಹಸಿರು ಬಣ್ಣದ ಕೋಣೆಗೆ, ಹಸಿರು ಬಣ್ಣದ ಕೋಣೆಯಿಂದ ಕಿತ್ತಳೆ ಬಣ್ಣದ ಕೋಣೆಗೆ, ಕಿತ್ತಳೆ ಬಣ್ಣದ ಕೋಣೆಯಿಂದ ಬಿಳಿ ಬಣ್ಣದ ಕೋಣೆಗೆ, ಮತ್ತೆ ಅಲ್ಲಿಂದ ಜಾಂಬಳಿ ಬಣ್ಣದ ಕೋಣೆಗೆ ಬರುತ್ತಿರುವಷ್ಟರಲ್ಲಿ ಯುವರಾಜ ಅವನನ್ನು ಬಂಧಿಸಲು ಆಜ್ಞಾಪಿಸಿಯಾಗಿತ್ತು.

ಯುವರಾಜ ಪ್ರಾಸ್ಪೆರೊ ಆಗಂತುಕನ ಬಗೆಗಿನ ಸಿಟ್ಟು ಹಾಗೂ ಅವನನನ್ನು ಕಂಡು ಹುಟ್ಟಿಕೊಂಡ ಅಂಜಿಕೆ ಎರಡರಿಂದ ಹುಚ್ಚನಂತಾಗಿದ್ದ. ಅವನು ಆರೂ ಕೋಣೆಗಳುದ್ದಕ್ಕೂ ಅವಸರಿಸಿ ಆಗಂತುಕನ ಕಡೆಗೆ ನಡೆದ. ಆಗಂತುಕನನ್ನು ಕಂಡು ಅಂಜಿಕೊಂಡಿದ್ದ ಆಸ್ಥಾನಿಕರು ಯಾರೂ ಯುವರಾಜನನ್ನು ಹಿಂಬಾಲಿಸಲಿಲ್ಲ. ಯುವರಾಜನು ಎತ್ತಿದ ಕೈಯಲ್ಲಿ ಕಠಾರಿ ಹಿಡಿದು ಆಗಂತುಕನ ಕಡೆಗೆ ಅವಸರಿಸಿ ಓಡಿದ. ಹಿಂದಕ್ಕೆ ಸರಿಯುತ್ತಿದ್ದ ಆ ವ್ಯಕ್ತಿ ಇನ್ನೇನು ಕೇವಲ ಎರಡು ಅಡಿ ಅಂತರದಲ್ಲಿದ್ದ. ಜಾಂಬಳಿ ಬಣ್ಣದ ಕೋಣೆಯ ಆಚೆ ದಡವನ್ನು ತಲುಪುತ್ತಿದ್ದಂತೆ ಅವನು ಬೆನ್ನತ್ತಿ ಬರುತ್ತಿದ್ದ ಯುವರಾಜನ ಕಡೆಗೆ ತಿರುಗಿ ನಿಂತ. ಅಲ್ಲಿ ಥಟ್ಟನೆ ಜೋರಾದ ಕಿರುಚುವಿಕೆ ಕೇಳಿ ಬಂತು.

ಯುವರಾಜನ ಕೈಯಲ್ಲಿನ ಕಠಾರಿ ಕರಿ ಬಣ್ಣದ ನೆಲಹಾಸಿನ ಮೇಲೆ ಬಿದ್ದಿತು. ಆ ಕ್ಷಣದಲ್ಲಿಯೇ ಯುವರಾಜ ಪ್ರಾಸ್ಪೆರೊನ ಹೆಣವು ನೆಲದ ಮೇಲೆ ಉದ್ದಕ್ಕೆ ಬಿದ್ದುಬಿಟ್ಟಿತು. ನಿರಾಸೆಯಲ್ಲೂ ಒಂದಿಷ್ಟು ಹುಂಬು ಧೈರ್ಯ ತುಂಬಿಕೊಂಡು ಕ್ರೀಡಾಲೋಲುಪ್ತರಾಗಿದ್ದ ಆಸ್ಥಾನಿಕರು ಕರಿ ಬಣ್ಣದ ಕೋಣೆಯನ್ನು ಪ್ರವೇಶಿಸಿಬಿಟ್ಟರು. ಕರಿಮರದ ಕಟ್ಟಿಗೆಯ ಚೌಕಟ್ಟಿನಲ್ಲಿದ್ದ ಬೃಹತ್ ಗಡಿಯಾರದ ನೆರಳಿನಲ್ಲಿ ನೆಟ್ಟಗೆ ನಿಶ್ಚಲನಾಗಿ ನಿಂತಿದ್ದ ಮೌನ ನೃತ್ಯಗಾರ ನಿಜವಾಗಿಯೂ ಯಾರು ಎಂದು ಅವರೆಲ್ಲ ಅರ್ಥೈಸಿಕೊಂಡರು. ಭೀತಿಯಿಂದ ಮಾತೇ ಬರದವರಾಗಿ ಅವರು ಕೇವಲ ತೇಕುತ್ತಿದ್ದರು. ಆ ಮೌನ ನೃತ್ಯಗಾರ ಪ್ರೇತವಸ್ತçವನ್ನು ಧರಿಸಿದ್ದ, ಹೆಣದ ಮುಖದಂತಹ ಮುಖವಾಡ ಧರಿಸಿದ್ದ.

ಅವರಿಗೀಗ ತಾವು ಕೆಂಪು ಸಾವಿನ ನಜರಿನಲ್ಲಿದ್ದೇವೆ ಎಂಬ ಸತ್ಯದ ಅರಿವಾಯಿತು. ಆತ ರಾತ್ರಿ ವೇಳೆ ಕಳ್ಳನ ಹಾಗೆ ಕದ್ದು ಅಲ್ಲಿಗೆ ಬಂದಿದ್ದ. ಮನರಂಜನೆಯ ಅವರ ಕೋಣೆಗಳಲ್ಲಿ ಒಬ್ಬೊಬ್ಬರನ್ನಾಗಿ ಆತ ರಕ್ತಸಿಂಚನಗೊಳಿಸಿ ಕೆಳಗುರುಳಿಸಿದ. ಒಬ್ಬೊಬ್ಬರು ವಿವಿಧ ಭಂಗಿಯಲ್ಲಿ ನೆಲದ ಮೇಲೆ ಬಿದ್ದರು. ಕೊನೆಯ ಅಸ್ಥಾನಿಕನ ಹೆಣ ಬೀಳುತ್ತಿದ್ದಂತೆಯೇ ಕರಿಮರದ ಚೌಕಟ್ಟಿನ ಗಡಿಯಾರದ ಉಸಿರು ನಿಂತು ಹೋಯಿತು. ಮೂರು ಕಾಲಿನ ದೀವಟಿಗೆಯ ಉರಿ ನಂದಿಹೋಯಿತು. ಕಾಳ ಕತ್ತಲೆ, ವಿನಾಶ ಹಾಗೂ ಕೆಂಪು ಸಾವು- ಇವುಗಳ ಅಬಾಧಿತ ಚಕ್ರಾಧಿಪತ್ಯ ಎಲ್ಲೆಡೆ ಪಸರಿಸಿತು.

Leave a Reply

Your email address will not be published.