ಕೆಳದಿ ನೃಪವಿಜಯಂ ಆಧಾರಿತ ಕೆಳದಿ ಅರಸರ ಯಶೋಗಾಥೆ

ರಾಣಿ ಚೆನ್ನಮ್ಮಳ ದತ್ತುಪುತ್ರ ಸೋಮಶೇಖರನ ವಂಶಸ್ಥರು ಸಾಧಾರಣ ವ್ಯಕ್ತಿಗಳಾಗಿ ಇಂದಿಗೂ ನರಗುಂದದಲ್ಲಿದ್ದಾರೆ. ಅವರ ವಂಶಸ್ಥರಾದ ಸೋಮಶೇಖರ ರಾಜ, ಶಿವರಾಜ ಅರಸರು 1927ರಲ್ಲಿ ತಮ್ಮ ಅಸಹಾಯಕ ಬದುಕು ತಿಳಿಸಿ ಮಹಿಶೂರ ಮಹಾರಾಜ ಕೃಷ್ಣರಾಜೇಂದ್ರ ಒಡೆಯರ್‌ಗೆ ಬರೆದ ಪತ್ರವನ್ನು ಮುದ್ರಿಸಿ ಲೇಖಕರು ಕೆಳದಿ ಇತಿಹಾಸದ ಕೊನೆಯ ವಂಶಸ್ಥರ ಬವಣೆ ದಾಖಲಿಸಿದ್ದಾರೆ.

ಲೇಖಕ: ಜಯದೇವಪ್ಪ ಜೈನಕೇರಿ

ಶಾಂತಲಾ ಪ್ರಕಾಶನ

ಪುಟ:240, ಬೆಲೆ: ರೂ.200

ಪ್ರಥಮ ಮುದ್ರಣ: 2018

ಜಯದೇವಪ್ಪ ಜೈನಕೇರಿ ರಚಿಸಿರುವ ಕೆಳದಿ ಸಂಸ್ಥಾನದ ಐತಿಹಾಸಿಕ ಸಂಶೋಧನಾ ಕೃತಿ ಕೆಳದಿ ಅರಸರ ಯಶೋಗಾಥೆ, ಲಿಂಗಣ್ಣ ಕವಿಯ ಐತಿಹಾಸಿಕ ಚಂಪೂಕಾವ್ಯ ಕೆಳದಿ ನೃಪವಿಜಯವನ್ನು ಆಧರಿಸಿದೆ. ಆ ಕಾವ್ಯದ ಸರಳ ಗದ್ಯಾನುವಾದವನ್ನು ಕೆಳದಿ ಗುಂಡಾ ಜೋಯಿಸರು ಕೆಳದಿ ನೃಪವಿಜಯವಾಗಿ ರಚಿಸಿದ್ದಾರೆ. ಡಾ.ಕೆಳದಿ ವೆಂಕಟೇಶ ಜೋಯಿಸರು ಕೆಳದಿ ಐತಿಹಾಸಿಕ ಅಧ್ಯಯನ ಕೃತಿ ಪ್ರಕಟಿಸಿದ್ದಾರೆ. ಕೆಳದಿ ಅರಸು ಬಸವರಾಜನು ‘ಶಿವತತ್ತ್ವ ರತ್ನಾಕರ’ ವಿಶ್ವಕೋಶ ರಚಿಸಿದ್ದಾನೆ. ಅವುಗಳೆಲ್ಲದರ ಅಧ್ಯಯನ ಮತ್ತು ಕೆಳದಿ ಅರಸರ ಬಗೆಗಿನ ಸಂಶೋಧನಾ ಆಸಕ್ತಿಯ ಫಲವಾಗಿ ಈ ಕೃತಿ ರೂಪುಗೊಂಡಿದೆ.

ಸಾಗರದ ಕೆಳದಿಯಲ್ಲಿ ಕ್ರಿ.ಶ.1500ರಲ್ಲಿ ಚೌಡಗೌಡನಿಂದ ಸ್ಥಾಪಿತವಾದ ಕೆಳದಿ ಸಂಸ್ಥಾನ, 1773ರವರೆಗೆ ಇಕ್ಕೇರಿ, ಬಿದನೂರುಗಳನ್ನು ರಾಜಧಾನಿಯಾಗಿಸಿಕೊಂಡು ಆಳಿದ 16 ರಾಜರ ಕನ್ನಡ ರಾಜ್ಯವಾಗಿದೆ. ಕೊನೆಯ ರಾಜ ಚನ್ನಬಸವನಾಯಕ. 263 ವರ್ಷಗಳ ಆಳ್ವಿಕೆಯಲ್ಲಿ ವಿಜಯನಗರದ ಅರಸರ ಬೆಂಬಲದಿಂದ ಬೆಳೆದು ಸ್ವತಂತ್ರ ಸಂಸ್ಥಾನವಾಗಿ ಉತ್ತಮ ಆಡಳಿತದಿಂದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಕನ್ನಡ ಜನಾಂಗವನ್ನು ಉತ್ತಮವಾಗಿ ರೂಪಿಸಿದ ರಾಜವಂಶ ಎಂಬುದು ಹೆಮ್ಮೆಯ ವಿಷಯವಾಗಿದೆ.

ಲಿಂಗಣ್ಣ ಕವಿಯ ‘ಕೆಳದಿ ನೃಪವಿಜಯ’ ಕನ್ನಡ ರಾಜವಂಶದ ಚರಿತ್ರೆಯನ್ನು ಅರ್ಹ ದಾಖಲೆಗಳೊಂದಿಗೆ ಕಾವ್ಯವಾಗಿ ರಚಿಸಿರುವ ಮೊದಲ ಕನ್ನಡದ ಐತಿಹಾಸಿಕ ಸಾಹಿತ್ಯಕೃತಿಯಾಗಿದೆ. ಅದು 1500ರಿಂದ 1773ರವರೆಗಿನ ಕೆಳದಿ, ಇಕ್ಕೇರಿ ಬಿದನೂರುಗಳನ್ನು ರಾಜಧಾನಿಯಾಗಿಸಿಕೊಂಡು ಆಳಿದ ಕೆಳದಿ ರಾಜರ ಹೋರಾಟ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಇತಿಹಾಸ ತಿಳಿಸುತ್ತದೆ. ಆ ರಾಜವಂಶದಲ್ಲಿ ಪರಾಕ್ರಮಕ್ಕೆ ಸದಾಶಿವನಾಯಕ, ವಿದ್ವತ್ತಿಗೆ ಬಸಪ್ಪನಾಯಕ, ಶೌರ್ಯತನಕ್ಕೆ ವೀರರಾಣಿ ಚೆನ್ನಮ್ಮ ಹೆಸರಾಗಿದ್ದಾರೆ.

ರಾಜಧರ್ಮದ ಉಳಿವು ಪ್ರಜಾಧರ್ಮದ ಪಾಲನೆಯಲ್ಲಿದೆ ಎಂದವರು ತಿಳಿದಿದ್ದರು. ಕೆರೆ-ಕಟ್ಟೆಗಳನ್ನು ಕಟ್ಟಿಸಿ, ಧಾರ್ಮಿಕ ನಂಬಿಕೆಗೆ ಪೋಷಕವಾಗುವ ದೇವಾಲಯಗಳನ್ನು ನಿರ್ಮಿಸಿದ್ದರು. ಸರ್ವಧರ್ಮವನ್ನು ಗೌರವಿಸಿದರು ಎಂಬುದನ್ನು ಲೇಖಕರು ಉಲ್ಲೇಖಿಸಿದ್ದಾರೆ.

ವಿಜಯನಗರದ ಆಶ್ರಯದಲ್ಲಿದ್ದ ಕೆಳದಿ ಅರಸರು ಶತ್ರುಗಳಾದ ಬಹುಮನಿ ಸುಲ್ತಾನರು, ಗೋವೆ ಅರಸರು, ಮರಾಠ ದೊರೆಗಳು, ಚಿತ್ರದುರ್ಗ, ಮೈಸೂರು ಅರಸರೊಂದಿಗೆ ಹೋರಾಡಿದ ವಿವರ ಚಂಪೂಕಾವ್ಯದಲ್ಲಿದೆ. ಕೆಳದಿ ಅರಸರು ಶೃಂಗೇರಿ, ಮೂಕಾಂಬಿಕ, ತಿರುಪತಿ, ಕಾಶಿ, ಕೇದಾರ ದೇವಾಲಯಗಳಿಗೆ ದಾನ ನೀಡಿದ್ದರು ಎಂಬ ಧಾರ್ಮಿಕ ವಿವರವೂ ಇಲ್ಲಿದೆ.

1638ರಲ್ಲಿ ರಣದುಲ್ಲಾ ಖಾನ್‌ನ ಆಕ್ರಮಣದಿಂದ ಇಕ್ಕೇರಿ ಪಟ್ಟಣ ನಾಶವಾದಾಗ ರಾಜ ವೀರಭದ್ರನಾಯಕ ವೈರಿಯೊಂದಿಗೆ ಸಂಧಾನ ಮಾಡಿಕೊಳ್ಳುತ್ತಾನೆ. ಬಿದನೂರು ನಗರದಲ್ಲಿ ಹೊಸ ರಾಜಧಾನಿಯನ್ನು ನಿರ್ಮಿಸಿ, ಏಳು ಸುತ್ತಿನ ಕೋಟೆ ಕಟ್ಟಿಸುತ್ತಾನೆ.

ಮುತ್ತಿಗೆ ಹಾಕಿದ ಹೈದರಾಲಿಯ ಸೇನೆಯನ್ನು ರಾಣಿ ವೀರಮ್ಮಾಜಿ ಯುದ್ಧ ಭೂಮಿಯಲ್ಲಿ ನಿಂತು ಹೋರಾಡಿ ಹಿಮ್ಮೆಟ್ಟಿಸುತ್ತಾಳೆ. ಹೈದರಾಲಿಯು ಮರುದಾಳಿ ಮಾಡಿ ವೀರಮ್ಮಾಜಿಯನ್ನು ಸೆರೆಹಿಡಿಯುತ್ತಾನೆ. ಬಿದನೂರನ್ನು ಸೊರೆಗೈಯುತ್ತಾನೆ. ರಾಣಿಯನ್ನು, ದತ್ತುಪುತ್ರ ಸೋಮಶೇಖರನನ್ನು ಮಧುಗಿರಿ ಕೋಟೆಯಲ್ಲಿ ಬಂಧಿಸುತ್ತಾನೆ. ಸ್ವಲ್ಪಕಾಲದಲ್ಲಿ ರಾಣಿ ಮರಣಹೊಂದುತ್ತಾಳೆ. ಸೋಮಶೇಖರನ ವಂಶಸ್ಥರು ಇಂದಿಗೂ ನರಗುಂದದಲ್ಲಿದ್ದಾರೆ. ಅವರ ವಂಶಸ್ಥರಾದ ಸೋಮಶೇಖರ ರಾಜ, ಶಿವರಾಜ ಅರಸರು 22.6.1927ರಲ್ಲಿ ತಮ್ಮ ಅಸಹಾಯಕ ಬದುಕು ತಿಳಿಸಿ ಸಹಾಯ ಕೇಳಿ ಮಹಿಶೂರ ಮಹಾರಾಜ ಕೃಷ್ಣರಾಜೇಂದ್ರ ಒಡೆಯರ್ ಅವರಿಗೆ ಬರೆದ ಪತ್ರವನ್ನು ಲೇಖಕರು ಮುದ್ರಿಸಿ ಕೆಳದಿ ಇತಿಹಾಸದ ಕೊನೆಯವಂಶಸ್ಥರ ಬವಣೆ ದಾಖಲಿಸಿದ್ದಾರೆ. ಇದು ಅವರ ಇತಿಹಾಸ ಸಂಶೋಧನಾ ಸೂಕ್ಷ್ಮತೆ.

ಇಕ್ಕೇರಿ ಮತ್ತು ನಗರಗಳಲ್ಲಿ ಟಂಕಸಾಲೆ ಹೊಂದಿದ್ದ ಕೆಳದಿ ಅರಸರು ವಿಜಯನಗರ ಅರಸರ ಪದ್ಧತಿಯಂತೆ ನಾಣ್ಯ ಮುದ್ರಿಸುತ್ತಿದ್ದರು. ಒಂದು ಮುಖದಲ್ಲಿ ಶಿವಪಾರ್ವತಿ ವಿಗ್ರಹ ತ್ರಿಶೂಲವಿದ್ದರೆ, ಇನ್ನೊಂದು ಮುಖದಲ್ಲಿ ಶ್ರೀ ಸದಾಶಿವ ಎಂಬ ಬರಹವಿತ್ತು. ಅದು ಇಕ್ಕೇರಿ ವರಹ ಎಂದು ಪ್ರಸಿದ್ಧವಾಗಿತ್ತು. 1) ವರಹ-ವರಾಹ-ಗದ್ಯಾಣ=2ಹೊನ್ನು=5ಗೇನ್ ತೂಕ, 2) ತಾರ=4ಕಾಸು(ಬೆಳ್ಳಿ), 3) ವೀಸ=2ಅರ್ಧ ವೀಸ(ತಾಮ್ರ) ನಾಣ್ಯಗಳಿದ್ದವು ಎಂಬ ವಿವರ ಜೈನಕೇರಿ ನೀಡಿದ್ದಾರೆ.

ಕೆಳದಿ ಅರಸರ ಸಚಿವರು, ಅಧಿಕಾರಿಗಳ ವಿವರ ಆರ್.ಶಾಮಾಶಾಸ್ತಿç (ಸಂಪಾದನೆ) ಅವರ ‘ಕೆಳದಿ ನೃಪವಿಜಯ’ದ ಮಾಹಿತಿಯನ್ನು ನೀಡಿದ್ದು, ಆಡಳಿತ ವಿವರ, ಅಧ್ಯಯನಕ್ಕೆ ಉಪಯುಕ್ತವಾಗಿದೆ. ಕೆಳದಿ ರಾಮೇಶ್ವರ ದೇವಾಲಯ, ಇಕ್ಕೇರಿ ಅಘೋರೇಶ್ವರ ದೇವಾಲಯ, ಕೆಳದಿ ವೀರಭದ್ರ ದೇವಾಲಯ, ಕವಲೇದುರ್ಗ ಕಾಶಿವಿಶ್ವನಾಥ ದೇವಾಲಯ, ಕವಲೇದುರ್ಗ ಅರಮನೆ ಅವಶೇಷ, ಸಾಲಗೇರಿಯ ಉಮಾಮಹೇಶ್ವರ ದೇವಾಲಯ, ಕೆಳದಿ ಸಾಮ್ರಾಜ್ಯದ ಲಾಂಛನ, ಶಿವಮೊಗ್ಗದಲ್ಲಿರುವ ಸಿಸ್ತಿನ ಶಿವಪ್ಪನಾಯಕನ ಅರಮನೆ ಬಹುವರ್ಣ ಚಿತ್ರಗಳನ್ನು ನೀಡಿ ಪುಸ್ತಕದ ಮೌಲ್ಯ ಹೆಚ್ಚಿದ್ದಾರೆ.

Leave a Reply

Your email address will not be published.