ಕೆವಿಎನ್ ಅವರ ‘ನುಡಿಗಳ ಅಳಿವು: ಬೇರೆ ದಿಕ್ಕಿನ ನೋಟ’ ನುಡಿಗಳ ಅಳಿವು ಕುರಿತ ಜಿಜ್ಞಾಸೆ

ಇದು ಕೇವಲ ಕರ್ನಾಟಕ ಭಾಷಿಕ ಸನ್ನಿವೇಶ ಇಲ್ಲವೇ ಕನ್ನಡ ನುಡಿ ಅಳಿವನ್ನು ಕುರಿತಾದ ಅನುಮಾನದ ಬಗೆಗೆ ಮಾತ್ರ ನಿಗಾವಹಿಸದೇ, ಲೋಕದ ನುಡಿಗಳ ಅಳಿವಿನ ಬಗೆಗೆ ನಡೆಯುತ್ತಿರುವ ಈ ಹೊತ್ತಿನ ಚರ್ಚೆಗಳ ಕಾಳಜಿ ಯಾವುದು? ನುಡಿ ಅಳಿವಿನಿಂದ ಸಮೂಹಗಳ ಬದುಕಿನಲ್ಲಿ ಏರ್ಪಡಬಹುದಾದ ಬಿಕ್ಕಟ್ಟು ಎಂತಹದು? ಈ ಬಿಕ್ಕಟ್ಟನ್ನು ನಿಭಾಯಿಸಲು, ಈಗ ಅಸ್ತಿತ್ವದಲ್ಲಿರುವ ನುಡಿಗಳ ಬಗೆಗೆ ನಮ್ಮ ನಿಲುವುಗಳೇನು? ಆ ನುಡಿಗಳನ್ನೇ ನಂಬಿ ಜೀವನ ಸವೆಯುತ್ತಿರುವ ಸಮುದಾಯಗಳ ಬಗೆಗಿನ ನಮ್ಮ ಕಾಳಜಿಗಳು ಏನಾಗಿರಬೇಕು? ಎಂಬೆಲ್ಲ ಪ್ರಶ್ನೆಗಳ ಮೂಲಕ ಜಿಜ್ಞಾಸೆಯನ್ನು ಬೆಳೆಸಲಾಗಿದೆ.

ನುಡಿ ಬಗೆಗಿನ ಚಿಂತನೆಗಳನ್ನು ಗ್ರಹಿಸುವ ವಿಧಾನ ಯಾವುದು? ಎನ್ನುವ ಪ್ರಶ್ನೆಯ ಮೂಲಕ ಕೆ.ವಿ.ನಾರಾಯಣ ಅವರ ‘ನುಡಿಗಳ ಅಳಿವು: ಬೇರೆ ದಿಕ್ಕಿನ ನೋಟ’ ಹೊತ್ತಿಗೆಯನ್ನು ಕುರಿತು ಚರ್ಚಿಸುವುದು ಸೂಕ್ತ. ಜನಪ್ರಿಯ ತಿಳಿವನ್ನು ಬದಲಾಯಿಸುವ ಬಗೆಯೇ ಅತ್ಯಂತ ತ್ರಾಸದಾಯಕ ಪ್ರಯತ್ನ. ಇದೊಂದು ರೀತಿಯಲ್ಲಿ ಜೀವಂತ ಪ್ರಾಣಿಯ ಚರ್ಮವನ್ನು ಸುಲಿದು ಮರುತೊಡೆಸುವ ಕ್ರಿಯೆಗೆ ಸಮಾನವಾದುದು. ಈ ರೂಪಕವೇ ಅತ್ಯಂತ ಅಪಾಯಕಾರಿ ನಿಲುವಿನಂತೆ ಕಂಡರೂ ಅಚ್ಚರಿ ಪಡಬೇಕಿಲ್ಲ. ಹಾಗಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ನುಡಿಯ ಸುತ್ತಣ ಜನಪ್ರಿಯ ಚರ್ಚೆಗಳನ್ನು ಬದಿಗೆ ಸರಿಸಿ ಹೊಸ ಚಿಂತನೆಗಳನ್ನು ನೆಲೆಗೊಳಿಸುವುದು ಎಷ್ಟೊಂದು ಬಿಕ್ಕಟ್ಟಿನ ವಿದ್ಯಮಾನ ಎಂಬುದು ನಮಗೆಲ್ಲರಿಗೂ ಮನವರಿಕೆಯಾಗಬೇಕಿದೆ.

ಆ ಹೊಸ ಚಿಂತನೆಗಳ ವೈಜ್ಞಾನಿಕ ದ್ರುಷ್ಟಿಕೋನ ಹಾಗೂ ವೈಚಾರಿಕ ನಿರ್ದಿಷ್ಟತೆಗಳ ಹಿಂದಿನ ತಾತ್ವಿಕತೆ ಎಂತಹದು ಎನ್ನುವುದನ್ನು ಪರಿಗಣಿಸದೇ, ಕೇವಲ ಅನಿಸಿಕೆಗಳ ಆಧಾರದ ಮೇಲೆ ತೀರ್ಮಾನಗಳನ್ನು ಕೈಗೊಳ್ಳುವುದು ಅವೈಚಾರಿಕ ನಿಲುವೇ ಸರಿ. ಏಕೆಂದರೆ ಚಿಂತನೆಗಳ ತಾತ್ವಿಕತೆ ನಿಂತಿರುವುದು ಕೇವಲ ನಮಗೆ ತೋರುವ ಸಮರ್ಥನೆಗಳಿಂದಲ್ಲ. ಪ್ರತೀ ಚಿಂತನಾ ಮಾದರಿಯು ತನ್ನದೇ ವೈಚಾರಿಕ ಚೌಕಟ್ಟುಗಳನ್ನು ತನ್ನೊಳಗೆಯೇ ಅಡಗಿಸಿಕೊಂಡಿರುತ್ತದೆ ಅನ್ನುವ ವಾದಗಳಿವೆ. ಆದರೆ ಈ ಆಲೋಚನಾ ಕ್ರಮವೂ ಎಷ್ಟು ಸರಿ ಅನ್ನುವ ಅನುಮಾನಳು ಈಗಲೂ ಮುಂದುವರೆದಿವೆ. ಆದ್ದರಿಂದ ಬರೀ ಸಮರ್ಥನೆಗಳಿಗೆ ಯಾವುದೇ ತಾತ್ವಿಕ ಚರ್ಚೆಗಳಲ್ಲಿ ಜಾಗವೇ ಇಲ್ಲ.

ಕೆವಿಎನ್ ತಮ್ಮೀ ಹೊತ್ತಿಗೆಯಲ್ಲಿ ಹೇಳಿರುವ ಮಾತಿನಿಂದ ಈ ಬಿಕ್ಕಟ್ಟನ್ನು ಬಿಡಿಸಿ ನೋಡಬಹುದು. ‘ಬೆಳಕು ದೀಪದ ಪರಿಣಾಮ ಎಂದು ತಿಳಿದರೆ, ಆ ಬೆಳಕಿನಲ್ಲಿ ದೀಪವೂ ಕಾಣುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ’ (ಪು.34). ನುಡಿ ಮತ್ತು ತಿಳಿವಳಿಕೆಯ ನಡುವಣ ನಂಟು ಯಾವ ಸ್ವರೂಪದ್ದು. ನುಡಿಯಿಂದ ತಿಳಿವು ಹುಟ್ಟಿದುದೋ? ಇಲ್ಲವೇ ನುಡಿಯಿಂದ ಅದು ದೀಪ್ಯಮಾನವಾದುದೋ? ಎಂಬೀ ಪ್ರಶ್ನೆಗಳಷ್ಟೇ ಸಂಕೀರ್ಣವಾದ ತಾತ್ವಿಕತೆಯನ್ನು ಈ ಚಿಂತನಾ ಮಾದರಿ ಮತ್ತು ಅದು ಹೊರಹೊಮ್ಮುವ ತಾತ್ವಿಕ ಚೌಕಟ್ಟಿನಲ್ಲಿಯೂ ನಾವು ಕಾಣುತ್ತೇವೆ. ಈ ನಿಟ್ಟಿನಲ್ಲಿ ಚರ್ಚೆಗಳು ಭಾರತ ಮತ್ತು ಯುರೋಪಿನಲ್ಲೂ ತಲೆಯೆತ್ತಿವೆ. ಆದರೆ ಇವುಗಳನ್ನು ಪರಿಶೀಲಿಸುವ ಮಾನದಂಡಗಳು ಮಾತ್ರ ನಮಗೆ ಇನ್ನೂ ಖಚಿತವಾಗಿ ದೊರೆತಿಲ್ಲ.

ವೈದಿಕ ಪರಂಪರೆ ಹಾಗೂ ಬೌದ್ಧ ಮತ್ತು ಜೈನ ಪರಂಪರೆಗಳು ಹುಟ್ಟು ಹಾಕಿರುವ ನುಡಿ ಮತ್ತು ತಿಳಿವಿನ ನಡುವಿನ ಜಿಜ್ಞಾಸೆಗಳನ್ನು ನಿಗಾವಹಿಸಿ ಪರಿಶೀಲಿಸಿದರೆ ಈ ಸಂಕೀರ್ಣತೆಯ ತೀವ್ರತೆ ನಮ್ಮ ಅರಿವಿಗೆ ಬರುತ್ತದೆ. ಆದ್ದರಿಂದ ಬೇರೆ ದಿಕ್ಕಿನ ನೋಟ ಎನ್ನುವುದು, ತಾತ್ವಿಕತೆಗೆ ಮಾತ್ರ ಸೀಮಿತವಾದದ್ದಲ್ಲ. ಅದು ಸಮೂಹಗಳ ಬದುಕಿನ ಅಸ್ತಿತ್ವದ ಪ್ರಶ್ನೆಗಳನ್ನು ಅತ್ಯಂತ ಗಂಭೀರವಾಗಿ ಮುಂಚೂನೆಗೆ ತರುವ ತುಡಿತವೂ ಆಗಿದೆ. ಜನ ಸಮೂಹಗಳ ಬದುಕು ಮುಖ್ಯವೋ? ಕೇವಲ ಅವರಾಡುವ ನುಡಿ ಮಾತ್ರ ಮುಖ್ಯವೋ? ಎಂಬೀ ಬಿಕ್ಕಟ್ಟನ್ನು ನಿರ್ವಹಿಸುವುದು ಹೇಗೆ? ಈ ವಾಸ್ತವವನ್ನು ಸಹಜವಾಗಿ ಯಾವುದೇ ಒಂದು ಆಕರ್ಷಕ ನಿಲುವಿನಿಂದ ವಿಶ್ಲೇಷಿಸಲು ಸಾಧ್ಯವಿಲ್ಲ. ಅಂದರೆ ನಮ್ಮ ಬದ್ಧತೆ ಮತ್ತು ಕಾಳಜಿಗಳನ್ನು ಜನಪ್ರಿಯ ನಂಬಿಕೆಗಳನ್ನು ಆಧರಿಸಿ ಮೌಲ್ಯಮಾಪನ ಮಾಡುವುದಲ್ಲ. ಬದಲಾಗಿ ನಾವು ಬಳಸಿಕೊಳ್ಳುವ ತಾತ್ವಿಕ ತಳಹದಿಯನ್ನು ಹೇಗೆ ಕಟ್ಟಿಕೊಳ್ಳಬೇಕು ಎನ್ನುವ ಎಚ್ಚರ ಮುಖ್ಯ. ಅಂತಹ ಎಚ್ಚರ ಮತ್ತು ವಿವೇಕದಿಂದ ಕೂಡಿದ ಅತ್ಯಂತ ಗಹನವಾದ ಚರ್ಚೆಗಳು ಈ ಪುಸ್ತಕದಲ್ಲಿ ಮೈಪಡೆದಿವೆ.

ಕೆವಿಎನ್ ಅವರ ಈ ಹೊತ್ತಿಗೆ ಮುಖ್ಯವಾಗಿ ನುಡಿಗಳ ಅಳಿವಿನ ಪರಿಣಾಮದಿಂದ ಸಮೂಹಗಳ ಲೋಕದ್ರುಷ್ಟಿ, ಸಾಂಸ್ಕ್ರುತಿಕ ನೆನಪು, ಚಿಂತನಾಧಾರೆಗಳು ಹಾಗೂ ತಿಳಿವು ಮೊದಲಾದ ಸಾಂಸ್ಕ್ರುತಿಕ-ಮಾನಸಿಕ ವಿನ್ಯಾಸಗಳು ನುಡಿಯೊಡನೆಯೇ ನಾಶ ಹೊಂದುತ್ತವೆ ಎನ್ನುವ ಜನಪ್ರಿಯ ಚಿಂತನಾ ಮಾದರಿಯನ್ನು ಒರೆಗೆಹಚ್ಚುವ ಕೆಲಸವನ್ನು ಮಾಡುತ್ತದೆ.

ಕೆವಿಎನ್ ಅವರ ಈ ಹೊತ್ತಿಗೆ ಮುಖ್ಯವಾಗಿ ನುಡಿಗಳ ಅಳಿವಿನ ಪರಿಣಾಮದಿಂದ ಸಮೂಹಗಳ ಲೋಕದ್ರುಷ್ಟಿ, ಸಾಂಸ್ಕ್ರುತಿಕ ನೆನಪು, ಚಿಂತನಾಧಾರೆಗಳು ಹಾಗೂ ತಿಳಿವು ಮೊದಲಾದ ಸಾಂಸ್ಕ್ರುತಿಕ-ಮಾನಸಿಕ ವಿನ್ಯಾಸಗಳು ನುಡಿಯೊಡನೆಯೇ ನಾಶ ಹೊಂದುತ್ತವೆ ಎನ್ನುವ ಜನಪ್ರಿಯ ಚಿಂತನಾ ಮಾದರಿಯನ್ನು ಒರೆಗೆಹಚ್ಚುವ ಕೆಲಸವನ್ನು ಮಾಡುತ್ತದೆ. ಈ ನಂಬಿಕೆಯ ಹಿಂದಿನ ತಾತ್ವಿಕ ಹಾಗೂ ವೈಚಾರಿಕ ತೊಡಕುಗಳೇನು? ಸಮುದಾಯದ ತಿಳಿವಳಿಕೆ ಹೇಗೆ ನೆಲೆಗೊಳ್ಳುತ್ತದೆ? ಈ ತಿಳಿವಳಿಕೆ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದರೂ, ಅದು ಅಸ್ತಿತ್ವ ಪಡೆಯುವ ಸ್ವರೂಪ ಯಾವುದು? ಸಮುದಾಯದ ತಿಳಿವಳಿಕೆಗೂ ಮತ್ತು ನುಡಿಗೂ ಇರಬಹುದಾದ ನಂಟು ಯಾವ ಬಗೆಯದು? ನುಡಿಕೇಂದ್ರಿತ ತಿಳಿವು ಇರುವುದಕ್ಕೆ ಸಾಧ್ಯವೇ? ತಿಳಿವಿಗೂ ಮತ್ತು ಸಮುದಾಯಗಳಿಗೂ ಇರಬಹುದಾದ ಅಂತರ್ಸಂಬಂಧ ಎಂತಹದು? ಪ್ರಮಾಣೀಕರಣಗೊಳ್ಳದ ಯಾವುದೇ ಒಂದು ತಿಳಿವಿಗೆ ಒದಗುವ ಅಪಾಯಗಳೆಂತವು? ತಿಳಿವನ್ನು ಪ್ರಮಾಣೀಕರಣಗೊಳಿಸುವ ಜರೂರಿದೆಯೇ? ಅಧಿಕಾರ, ತಿಳಿವು ಮತ್ತು ನುಡಿಗಳ ನಡುವಿನ ನಂಟು ಹೇಗೆ ನೆಲೆಗೊಳ್ಳತ್ತದೆ ಎಂಬೆಲ್ಲ ಪ್ರಶ್ನೆಗಳನ್ನು ಅಡ್ರೆಸ್ ಮಾಡುವ ತಾತ್ವಿಕ ವಿನ್ಯಾಸಗಳನ್ನು ವೈಚಾರಿಕ ನೋಟಕ್ರಮಗಳ ಮೂಲಕ ಇಲ್ಲಿ ಮಂಡಿಸಲಾಗಿದೆ.

ನುಡಿಗೂ ಹಾಗೂ ತಿಳಿವಿಗೂ ನಂಟಿದೆ ಮತ್ತು ಈ ಲೋಕದ ನುಡಿಗಳಿಗೆಲ್ಲವೂ ಸಾಮಾನ್ಯ ರಚನೆಯಿಂದ ಕೂಡಿವೆ. ನುಡಿಯ ರಾಚನಿಕ ನೆಲೆಗಳು ವ್ಯಕ್ತಿಯ ಚಿಂತನೆಯ ಸ್ವರೂಪವನ್ನು ಪ್ರಭಾವಿಸುತ್ತವೆ (ಹಂಬೊಲ್ಟ್). ಎಲ್ಲ ನುಡಿಗಳಿಗೂ ಸಮಾನವಾದ ಚಿಂತನಾ ನೆಲೆಗಳಿರುತ್ತವೆ (ಕಾಂಟ್) ಎನ್ನುವ ವಾದಗಳಿಂದ ಶುರುವಾಗಿ, ನುಡಿಯೂ ವ್ಯಕ್ತಿಯ ಚಿಂತನೆಯನ್ನು ನಿಯಂತ್ರಿಸುತ್ತದೆ (ಸಪೀರ್-ವೂರ್ಫ್ ಪ್ರಮೇಯ) ಎಂಬ ನುಡಿ ಸಾಪೇಕ್ಷ ವಾದದವರೆಗೆ ಇಲ್ಲಿಯ ಚರ್ಚೆಗಳು ಬೆಳೆದಿವೆ. ಪೋರ್ಟ್ ರಾಯಲ್ ಚಿಂತನಾ ಪಂಥ, ಫ್ರಾನ್ಜ್ ಬೋಅಸ್, ಸಪೀರ್-ವೂರ್ಫ್, ಹಮನ್ ಮತ್ತು ಹರ್ಡರ್, ವಿಲಿಯಂ ಹಂಬೋಲ್ಟ್, ಕಾಂಟ್ ಮೊದಲಾದ ಚಿಂತಕರ ತಾತ್ವಿಕ ನಿಲುವುಗಳನ್ನು ಬಳಸಿಕೊಂಡು ಈ ಮೇಲೆ ಕೇಳಿದ ಪ್ರಶ್ನೆಗಳನ್ನು ಅಡ್ರೆಸ್ ಮಾಡಲಾಗಿದೆ. ಇದಕ್ಕೆ ಸಾಕಷ್ಟು ನಿದರ್ಶನ ಮತ್ತು ಸಾಕ್ಷಾಧಾರಗಳನ್ನು ಒದಗಿಸಲಾಗಿದೆ.

ವಾಸ್ತವವಾಗಿ ನುಡಿಗೂ ಮತ್ತು ಸಮುದಾಯದ ತಿಳಿವಿಗೂ ಸೂಚ್ಯ (ಸಿಗ್ನಿಫೈಯರ್)-ಸೂಚಕ (ಸಿಗ್ನಿಫೈಯ್ಡ್) ನಂಟಿದೆ ಎನ್ನುವುದನ್ನು ಸಮ್ಮಿತಿಸಬಹುದು. ಆದರೆ ಅನುಗಮನ ಮತ್ತು ನಿಗಮನ ತರ್ಕ್‍ವನ್ನು ನೆಲೆಯಾಗಿಸಿಕೊಂಡು ಈ ಎಲ್ಲ ವಾದಗಳನ್ನು ಪರಿಶೀಲಿಸುವ ಪರಿಪಾಠದಲ್ಲಿ ಏರ್ಪಟ್ಟಿರುವ ತೆರಪುಗಳನ್ನು ಇನ್ನಷ್ಟು ಗಮನಿಸುವ ಜರೂರನ್ನೂ ಈ ಪುಸ್ತಿಕೆ ನಮ್ಮನ್ನು ಎಚ್ಚರಿಸುತ್ತದೆ.

ಭಾರತೀಯ ಲಿಖಿತ ಪರಂಪರೆ ಮತ್ತು ಯುರೋಪಿನ ಸನ್ನಿವೇಶದಲ್ಲಿ ನುಡಿ, ಲೋಕಗ್ರಹಿಕೆ, ಸಾಂಸ್ಕ್ರುತಿಕ ನೆನಪು ಹಾಗೂ ಚಿಂತನೆಗಳ ನಡುವಣ ನಂಟನ್ನು ಕುರಿತು ಬಂದಿರುವ ಚರ್ಚೆಗಳನ್ನು ಅತ್ಯಂತ ತಲಸ್ಪರ್ಶಿಯಾಗಿ ಇಲ್ಲಿ ವಿಶ್ಲೇಷಿಸಲಾಗಿದೆ. ಈ ಎಲ್ಲ ಚಿಂತನೆಗಳ ಹರವು ಅತ್ಯಂತ ವ್ಯಾಪಕವಾದದ್ದು. ಹಾಗಾಗಿ ನುಡಿ ಮತ್ತು ಚಿಂತನೆಗಳ ನಡುವಿನ ನಂಟಸ್ತಿಕೆಯನ್ನು ಅರಿಯಲು ಚಾಮ್‍ಸ್ಕಿ, ಸ್ಟೀವನ್ ಪಿಂಕರ್, ಜೀನ್ ಪಿಯಾಜ್ ಮತ್ತು ಲೆವ್ ವ್ಯಗೊತ್ಸಕಿ ಅವರ ಚರ್ಚೆಗಳು ಇಲ್ಲಿ ನೆಲೆಯಾಗಿವೆ. ಇವರೆಲ್ಲರೂ ಮಂಡಿಸಿದ ಈ ಚಿಂತನೆಗಳನ್ನು ವಿಶ್ವಾತ್ಮಕವಾದ ಮತ್ತು ನುಡಿ ವಿಧಿವಾದ ಎಂಬೆರಡು ತಿಳಿವಿನ ಪಂಥಗಳನ್ನಾಗಿ ವಿಂಗಡಿಸಲಾಗಿದೆ.

‘ಮಾನವರು ಲೋಕವನ್ನು ಗ್ರಹಿಸಿ ತಮ್ಮ ಅನುಭವಗಳನ್ನು ಜೋಡಿಸಿಕೊಳ್ಳಲು ಬಳಸುವ ಬೇರೊಂದು ಅಮೂರ್ತ ವ್ಯವಸ್ಥೆ ಮೆದುಳಿನಲ್ಲಿದೆ. ಇದು ಅವರು ಆಡುವ ನುಡಿಗಿಂತ ಬೇರೆಯಾದುದು. ಈ ವ್ಯವಸ್ಥೆಯ ಮೂಲಕ ಜೋಡಣೆಗೊಂಡ ಅನುಭವವನ್ನು, ಚಿಂತನೆಯನ್ನು ಆ ಬಳಿಕ ನುಡಿಯ ಸ್ತರಕ್ಕೆ ಒಯ್ಯಲಾಗುತ್ತದೆ. ಹಾಗಾಗಿ ಅವರು ಆಡುವ ನುಡಿ ಇಲ್ಲದೇ ಇದ್ದರೂ ಅವರ ಲೋಕ ಗ್ರಹಿಕೆ ಮಾತ್ರ ಮೆದುಳಿನಲ್ಲಿ, ಅದರದೇ ಆದ ಸಾಂಕೇತಿಕ ನೆಲೆಯಲ್ಲಿ ಉಳಿದೇ ಇರುತ್ತದೆ’

‘ಚಿಂತನೆ ಎಂಬುದು ತನಗೆ ತಾನೇ ಸ್ವತಂತ್ರವಾದ ಸ್ಥಿತಿ’ (ಪು.46). ಹಾಗಾಗಿ ಚಿಂತನೆ ರೂಪುಗೊಳ್ಳುವುದು ಮತ್ತು ಅದು ಅಭಿವ್ಯಕ್ತಿಗೊಳ್ಳುವುದು ಬೇರೆ ಬೇರೆ. ಸ್ಟೀವನ್ ಪಿಂಕರ್ ಅವರ ಪ್ರಕಾರ, ‘ಮಾನವರು ಲೋಕವನ್ನು ಗ್ರಹಿಸಿ ತಮ್ಮ ಅನುಭವಗಳನ್ನು ಜೋಡಿಸಿಕೊಳ್ಳಲು ಬಳಸುವ ಬೇರೊಂದು ಅಮೂರ್ತ ವ್ಯವಸ್ಥೆ ಮೆದುಳಿನಲ್ಲಿದೆ. ಇದು ಅವರು ಆಡುವ ನುಡಿಗಿಂತ ಬೇರೆಯಾದುದು. ಈ ವ್ಯವಸ್ಥೆಯ ಮೂಲಕ ಜೋಡಣೆಗೊಂಡ ಅನುಭವವನ್ನು, ಚಿಂತನೆಯನ್ನು ಆ ಬಳಿಕ ನುಡಿಯ ಸ್ತರಕ್ಕೆ ಒಯ್ಯಲಾಗುತ್ತದೆ. ಹಾಗಾಗಿ ಅವರು ಆಡುವ ನುಡಿ ಇಲ್ಲದೇ ಇದ್ದರೂ ಅವರ ಲೋಕ ಗ್ರಹಿಕೆ ಮಾತ್ರ ಮೆದುಳಿನಲ್ಲಿ, ಅದರದೇ ಆದ ಸಾಂಕೇತಿಕ ನೆಲೆಯಲ್ಲಿ ಉಳಿದೇ ಇರುತ್ತದೆ’ (ಪು.47). ನುಡಿ ಮತ್ತು ಚಿಂತನೆಗಳು ಪೂರಕವಾಗಿವೆ ಹೊರತು ಅವುಗಳು ಸ್ವತಂತ್ರವಾಗಿಲ್ಲ ಎಂದು ಜೀನ್ ಪಿಯಾಜ್ ಅವರ ವಾದವಾಗಿದೆ. ಚಿಂತನೆ ಮತ್ತು ನುಡಿ ಎರಡೂ ಬೇರೆ ಬೇರೆ ಅಸ್ತಿತ್ವವನ್ನು ಹೊಂದಿದ್ದರೂ, ನುಡಿಯ ರಚನೆಯು, ಚಿಂತನೆಯು ಹೊರಹೊಮ್ಮುವ ಬಗೆಯನ್ನು ಪ್ರಭಾವಿಸುತ್ತದೆ. ನುಡಿಯು ಸಮುದಾಯದ ಚಿಂತನಾ ಕ್ರಮ ಇಲ್ಲವೇ ಲೋಕದ್ರುಷ್ಟಿಗಳು ರೂಪು ತಳೆಯುವ ನೆಲೆಯನ್ನೇ ನಿಯಂತ್ರಿಸುತ್ತದೆ ಎಂದು ಸಪೀರ್-ವೂರ್ಫ್ ಅವರು ವಾದಿಸುತ್ತಾರೆ. ಈ ಎಲ್ಲ ವಾದಗಳಲ್ಲಿ ವಿಶ್ವಾತ್ಮಕವಾದದ ನಿಲುವುಗಳು ಮುಖ್ಯವಾಗುತ್ತವೆ. ಅಂದರೆ ನುಡಿಯೊಂದು ಅಳಿದರೆ, ಲೋಕಗ್ರಹಿಕೆ/ಚಿಂತನೆ ಅಳಿಯಲಾರದು ಎಂಬ ಆಯಾಮವನ್ನು ಇದರಿಂದ ಗ್ರಹಿಸಬಹುದು.

ಯಾವ ಪರಿಕಲ್ಪನೆಗಳ ಮೂಲಕ ನುಡಿ ಅಳಿವಿನ ಮಹತ್ವವನ್ನು ನಿರೂಪಿಸಲಾಗುತ್ತದೆಯೋ, ಆ ಎಲ್ಲ ಪರಿಕಲ್ಪನೆಗಳಿಗೂ ಮತ್ತು ನುಡಿಗೂ ನೇರವಾದ ನಂಟಿಲ್ಲ, ಅವು ಪರಸ್ಪರ ಭಿನ್ನವಾದ ನೆಲೆಗಳನ್ನು ಹೊಂದಿವೆ. ತಿಳಿವನ್ನು ಪ್ರತಿನಿಧಿಸುವ ಬಗೆಗೂ ಮತ್ತು ತಿಳಿವು ವಿಕಾಸಗೊಳ್ಳುವ ಪ್ರಕ್ರಿಯೆಗೂ ಯಾವುದೇ ಸಾವಯವ ಸಂಬಂಧವಿಲ್ಲ ಎಂಬ ತಿಳಿವಳಿಕೆಯನ್ನೇ ಈ ಪುಸ್ತಿಕೆ ಬಲವಾಗಿ ಮಂಡಿಸುತ್ತದೆ.

ನುಡಿ ಕಸುವು ಎಂಬ ಚಾಮ್‍ಸ್ಕಿಯ ಪರಿಕಲ್ಪನೆಯು ಕೂಡ ಒಂದು ನಿರ್ದಿಷ್ಟ ನುಡಿಯನ್ನು ಮಾತ್ರ ನೆಲೆಯಾಗಿಸಿಕೊಳ್ಳದೇ, ಯಾವುದೇ ನುಡಿಯೊಂದನ್ನು ಪಡೆಯುವುದರ ಪರಿಣಾಮ ಎಂಬುದಾಗಿದೆ. ಲೋಕಗ್ರಹಿಕೆ, ಸಾಂಸ್ಕ್ರುತಿಕ ನೆನಪು ಹಾಗೂ ತಿಳಿವು ನೆಲೆಪಡೆಯುವ ಮತ್ತು ಮೈಪಡೆಯುವ ವಿನ್ಯಾಸಗಳು ನುಡಿಕೇಂದ್ರಿತವಲ್ಲ ಎಂಬ ಚಾಮ್‍ಸ್ಕಿ ಮತ್ತು ಸ್ಟೀವನ್ ಪಿಂಕರ್ ಅವರ ಚರ್ಚೆಗಳನ್ನು ಇಲ್ಲಿಯ ವಿಶ್ಲೇಷಣೆಗೆ ಬಳಸಿಕೊಳ್ಳಲಾಗಿದೆ. ಈ ವೈಚಾರಿಕ ನಡೆಗಳನ್ನೇ ಇಲ್ಲಿ ‘ಬೇರೆ ದಿಕ್ಕಿನ ನೋಟ’ವೆಂದು ಬಣ್ಣಿಸಿಲಾಗಿದೆ. ಬೇರೆ ದಿಕ್ಕಿನ ನೋಟ ಎನ್ನುವುದು ನುಡಿ ಸಂಸ್ಕ್ರುತಿಯ ಬಗೆಗಿನ ನಮ್ಮ ಆಲೋಚನಾ ಮಾದರಿಗಳನ್ನು ಪಲ್ಲಟಗೊಳಿಸುವ ಬಗೆಯೇ ಎಂದು ಹೇಳಬೇಕು. ಅದೊಂದು ಸಮೂಹ ವಿರೋಧಿ ನಿಲುವು ಎಂದು ಹೇಳಿದರೆ, ಈ ಹೇಳಿಕೆಯೇ ಮನುಷ್ಯ ವಿರೋಧಿ ನಿಲುವನ್ನು ಸೂಚಿಸುತ್ತದೆ. ಈ ಪುಸ್ತಿಕೆಯ ಚರ್ಚೆಗಳು ಭಾಷಾಶಾಸ್ತ್ರೀಯ ನೋಟಕ್ರಮಗಳು, ತಾತ್ವಿಕ ವಿನ್ಯಾಸಗಳು ಹಾಗೂ ಅವುಗಳೊಳಗೆ ಹುದುಗಿರುವ ತೆರಪುಗಳನ್ನು ಅತ್ಯಂತ ಜಾಗೂರಕತೆಯಿಂದ, ನುಡಿ ಅಳಿವಿನ ಬಗೆಗಿನ ವಿದ್ಯಮಾನಗಳನ್ನು ಬಿಡಿಸಿ ನೋಡುವುದಾಗಿದೆ.

ಇದು ಕೇವಲ ಕರ್ನಾಟಕ ಭಾಷಿಕ ಸನ್ನಿವೇಶ ಇಲ್ಲವೇ ಕನ್ನಡ ನುಡಿ ಅಳಿವನ್ನು ಕುರಿತಾದ ಅನುಮಾನದ ಬಗೆಗೆ ಮಾತ್ರ ನಿಗಾವಹಿಸದೇ, ಲೋಕದ ನುಡಿಗಳ ಅಳಿವಿನ ಬಗೆಗೆ ನಡೆಯುತ್ತಿರುವ ಈ ಹೊತ್ತಿನ ಚರ್ಚೆಗಳ ಕಾಳಜಿ ಯಾವುದು? ನುಡಿ ಅಳಿವಿನಿಂದ ಸಮೂಹಗಳ ಬದುಕಿನಲ್ಲಿ ಏರ್ಪಡಬಹುದಾದ ಬಿಕ್ಕಟ್ಟು ಎಂತಹದು? ಈ ಬಿಕ್ಕಟ್ಟನ್ನು ನಿಭಾಯಿಸಲು, ಈಗ ಅಸ್ತಿತ್ವದಲ್ಲಿರುವ ನುಡಿಗಳ ಬಗೆಗೆ ನಮ್ಮ ನಿಲುವುಗಳೇನು? ಆ ನುಡಿಗಳನ್ನೇ ನಂಬಿ ಜೀವನ ಸವೆಯುತ್ತಿರುವ ಸಮುದಾಯಗಳ ಬಗೆಗಿನ ನಮ್ಮ ಕಾಳಜಿಗಳು ಏನಾಗಿರಬೇಕು? ಎಂಬೆಲ್ಲ ಪ್ರಶ್ನೆಗಳ ಮೂಲಕ ನುಡಿ ಮತ್ತು ಸಮುದಾಯಗಳ ಭವಿಷ್ಯವನ್ನು ಎದುರುಗೊಳ್ಳುವ ಜಿಜ್ಞಾಸೆಯನ್ನು ಇಲ್ಲಿ ಬೆಳೆಸಲಾಗಿದೆ. ಏಕೆಂದರೆ, ನುಡಿ ಅಳಿವಿನ ಪರಿಣಾಮದಿಂದ ಉಂಟಾಗುವ ನಷ್ಟಗಳ ಬಗೆಗೆ ನಾವು ಮರುಕಪಡುವುದು ಸರಿ. ಆದರೆ ಬದುಕುಳಿದಿರುವ ಸಮುದಾಯ ಮತ್ತು ನುಡಿಗಳನ್ನು ಅಧ್ಯಯನ ಮಾಡಿ, ಆ ಸಮುದಾಯಗಳ ಏಳ್ಗೆಗೆ ನಾವೇನೆಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ ಹಾಗೂ ಆಯಾ ಸಮುದಾಯಗಳ ಸಾಂಸ್ಕ್ರುತಿಕ ಮತ್ತು ಶೈಕ್ಷಣಿಕ ಆಶೋತ್ತರಗಳನ್ನು ಈಡೇರಿಸುವ ಯಾವುದೆ ಇರಾದೆಯನ್ನು ಹೊಂದಿದ್ದೇವೆಯೇ ಎಂಬುದರ ಬಗೆಗೆ ನಾವು ಗಮನಹರಿಸುವ ಅವಶ್ಯಕತೆಯನ್ನು ಈ ಹೊತ್ತಿಗೆ ಮಂಡಿಸುತ್ತದೆ.

ನುಡಿ ಅಳಿವು, ಪಲ್ಲಟಕ್ಕೆ ಇಂತಹದೇ ನಿರ್ದಿಷ್ಟ ಕಾರಣವನ್ನು ಗುರುತಿಸುವುದು ಕಷ್ಟ. ಅಧಿಕಾರ ಸಂಬಂಧಗಳು, ನುಡಿ ಪ್ರಾಬಲ್ಯ, ಶೈಕ್ಷಣಿಕ ನಿಲುವುಗಳು, ರಾಜಕೀಯ ಇಲ್ಲವೇ ಆರ್ಥಿಕ ವಿದ್ಯಮಾನಗಳು ಹಾಗೂ ನೈಸರ್ಗಿಕ ವಿಕೋಪ ಇತ್ಯಾದಿಗಳ ಪರಿಣಾಮದಿಂದ ನುಡಿಯೊಂದು ಅಳಿವಿನಂಚಿಗೆ ಸರಿಯುತ್ತದೆ ಇಲ್ಲವೇ ಪಲ್ಲಟಗೊಳ್ಳುತ್ತದೆ.

ಈ ವಾಸ್ತವವು ಜನಪ್ರಿಯ ಚಿಂತನೆಗಳಕ್ಕಿಂತ ಭಿನ್ನವಾಗಿರುವುದಷ್ಟೇ ಅಲ್ಲ ಆ ಎಲ್ಲ ಚಿಂತನೆಗಳು ಪ್ರಚುರಪಡಿಸುವ ಚರ್ಚೆಗಳನ್ನು ಈ ಪುಸ್ತಿಕೆ ತಾತ್ವಿಕವಾಗಿ ನಿರಾಕರಿಸುತ್ತದೆ ಹಾಗೂ ಈ ಜನಪ್ರಿಯ ಚಿಂತನೆಗಳಲ್ಲಿ ಅಡಕವಾಗಿರುವ ಅಪಾಯಗಳು ಎಂತಹವು ಎನ್ನುವ ಎಚ್ಚರವನ್ನೂ ನಮ್ಮಲ್ಲಿ ಒಡಮೂಡಿಸುತ್ತದೆ. ಅಂದರೆ ಈಗಾಗಲೇ ಅಳಿದು ಹೋಗಿರುವ ನುಡಿಯೊಳಗಿನ ಸಾಂಸ್ಕ್ರುತಿಕ ನೆನಪು, ಲೋಕಗ್ರಹಿಕೆ ಮತ್ತು ತಿಳಿವು ಮಾತ್ರ ಮಹತ್ವದ್ದು ಎಂದು ತಿಳಿದು, ಈಗ ಅಸ್ತಿತ್ವದಲ್ಲಿರುವ ನುಡಿಗಳಲ್ಲಿ ಹುದುಗಿರುವ ಈ ವಿನ್ಯಾಸಗಳು ಮಹತ್ವದ್ದಲ್ಲವೆಂದು ತಿಳಿದರೆ, ಅದು ಎಂತಹ ಅಪಾಯಕ್ಕೆ ನಮ್ಮನ್ನು ನೂಕಬಲ್ಲದು ಎಂಬುದನ್ನು ಯೋಚಿಸುವ ಜರೂರಿದೆ.

ನುಡಿಗಳ ಅಳಿವಿಗೆ ನೈಸರ್ಗಿಕ ವಿಕೋಪಗಳು ಮತ್ತು ರಾಜಕೀಯ, ಆರ್ಥಿಕ ಕಾರಣಗಳೆಂಬ ಎರಡು ಪ್ರಮುಖ ಕಾರಣಗಳನ್ನು ಇಲ್ಲಿ ಗುರುತಿಸಲಾಗುತ್ತದೆ. ಈ ಯಾವುದೇ ಪರಿಣಾಮದಿಂದ ನುಡಿಯೊಂದು ಅಳಿದರೆ, ಆ ನುಡಿ ಸಮುದಾಯದ ಲೋಕಗ್ರಹಿಕೆಯನ್ನು, ಆ ನುಡಿ ಮೂಲಕವೇ ಅರಿಯಬಹುದು ಎನ್ನುವುದನ್ನು ಒಪ್ಪಲು ಆಗದು. ಆಯಾ ಸಮುದಾಯಗಳ ಬದುಕಿನ ಚಲನಶೀಲತೆಯಿಂದಲೂ ಅವರ ಸಾಂಸ್ಕ್ರುತಿಕ ನೆನಪು, ತಿಳಿವು ಹಾಗೂ ಲೋಕಗ್ರಹಿಕೆಯ ವಿನ್ಯಾಸಗಳನ್ನು ಗುರುತಿಸಬಹುದು. ಅಂದರೆ, ಸಮುದಾಯಗಳ ಬದುಕಿನ ವಿವಿಧ ನೆಲೆಗಳಿಂದ (ಅಶಾಬ್ದಿಕ) ಇವುಗಳನ್ನು ಅರಿಯುತ್ತೇವೆ. ಸಮುದಾಯಗಳ ಈ ಎಲ್ಲ ವಿನ್ಯಾಸಗಳನ್ನು ನುಡಿಯ ಮೂಲಕವೂ (ಶಾಬ್ದಿಕ) ಅರಿಯಲು ಸಾಧ್ಯ. ಆದರೆ ಆ ನುಡಿಯು ಚಲನಶೀಲವಾಗಿರಬೇಕು. ಹಾಗಂತ ಈ ನೆಲೆಗಳು ಆ ನುಡಿಯಲ್ಲಿಯೇ ಅಂತರ್ಗತವಾಗಿರುತ್ತವೆ ಎನ್ನಲಾಗದು. ಆ ನುಡಿಯ ಮೂಲಕ ಇವುಗಳು ಪ್ರತಿನಿಧಿಸಲ್ಪಡುತ್ತವೆ. ಆದ್ದರಿಂದ ಜೀವ ವೈವಿಧ್ಯದ ಅಳಿವಿಗೆ ನುಡಿ ಅಳಿವು ಕಾರಣ ಎಂಬುದನ್ನೂ ಒಪ್ಪಲು ಸಾಧ್ಯವಿಲ್ಲ.

ದಿಟ, ಜೀವ ವೈವಿಧ್ಯ ಇರುವ ಪ್ರದೇಶಗಳಲ್ಲಿ ನುಡಿ ವೈವಿಧ್ಯವೂ ಇರುತ್ತದೆ. ಆದರೆ ಯಾವುದು ಯಾವುದಕ್ಕೆ ಕಾರಣ ಎನ್ನುವ ವಾಸ್ತವವನ್ನು ಕಂಡರಿಯಲು ಆಗುವುದಿಲ್ಲ ಎಂಬುದನ್ನೂ ಈ ಪುಸ್ತಿಕೆ ಚರ್ಚಿಸುತ್ತದೆ. ನುಡಿ ಅಳಿವು, ಪಲ್ಲಟಕ್ಕೆ ಇಂತಹದೇ ನಿರ್ದಿಷ್ಟ ಕಾರಣವನ್ನು ಗುರುತಿಸುವುದು ಕಷ್ಟ. ಅಧಿಕಾರ ಸಂಬಂಧಗಳು, ನುಡಿ ಪ್ರಾಬಲ್ಯ, ಶೈಕ್ಷಣಿಕ ನಿಲುವುಗಳು, ರಾಜಕೀಯ ಇಲ್ಲವೇ ಆರ್ಥಿಕ ವಿದ್ಯಮಾನಗಳು ಹಾಗೂ ನೈಸರ್ಗಿಕ ವಿಕೋಪ ಇತ್ಯಾದಿಗಳ ಪರಿಣಾಮದಿಂದ ನುಡಿಯೊಂದು ಅಳಿವಿನಂಚಿಗೆ ಸರಿಯುತ್ತದೆ ಇಲ್ಲವೇ ಪಲ್ಲಟಗೊಳ್ಳುತ್ತದೆ. ಲೋಕದಾದ್ಯಂತ ನುಡಿ ಅಳಿವಿನ ಪ್ರಕ್ರಿಯೆ ಒಂದೇ ಬಗೆಯಲ್ಲಿ ನಡೆಯುವುದಿಲ್ಲ ಮತ್ತು ಇದರ ಪರಿಣಾಮಗಳೂ ಒಂದೇ ಬಗೆಯಲ್ಲಿ ಹೊರಹೊಮ್ಮುವುದಿಲ್ಲ. ಆದರೆ ಮನುಷ್ಯರಲ್ಲಿ ನೆಲೆನಿಂತಿರುವ ನುಡಿ ಕಸುವು ಮಾತ್ರ ವಿಶ್ವಾತ್ಮಕವಾಗಿರುತ್ತದೆ. ನುಡಿ ಅಳಿವಿನ ಪ್ರಭಾವದಿಂದ ನುಡಿ ಕಸುವು ಅಳಿಯಲಾರದು. ಹಾಗಾಗಿ ನುಡಿ ಅಳಿವಿನ ಪ್ರಶ್ನೆಗಳು ಕೇವಲ ನುಡಿಯ ವ್ಯಾಪಾರಕ್ಕೆ ಮಾತ್ರ ಸೀಮಿತಗೊಳ್ಳದೇ, ಸಮೂಹಗಳ ಬದುಕಿನ ಪ್ರಶ್ನೆಗಳಾಗಿ ಮುಂಚೂಣೆಗೆ ಬರಬೇಕು ಎನ್ನುವ ಆಶಯವನ್ನು ಈ ಪುಸ್ತಿಕೆ ಹೊಂದಿದೆ.

*ಲೇಖಕರು ಮೂಲತಃ ಬಾಗಲಕೋಟೆ ಜಿಲ್ಲೆಯ ಹಳದೂರು ಗ್ರಾಮದವರು. ಪ್ರಸ್ತುತ ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಭಾಷಾಶಾಸ್ತ್ರದ ಸಹ ಪ್ರಾಧ್ಯಾಪಕರು; ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ 95 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

ನುಡಿಗಳ ಅಳಿವು: ಬೇರೆ ದಿಕ್ಕಿನ ನೋಟ
ಕೆ.ವಿ.ನಾರಾಯಣ
ಪುಟ: 88, ಬೆಲೆ: ರೂ. 100
ಅಹರ್ನಿಶಿ ಪ್ರಕಾಶನ.

Leave a Reply

Your email address will not be published.