ಕೇಂದ್ರ ಸರ್ಕಾರದ ಕಾರ್ಯಸೂಚಿ ಜಾರಿಗೆ ಬಳಕೆಯಾಗುತ್ತಿದೆಯೇ ನ್ಯಾಯಾಂಗ?

ಸಾಂವಿಧಾನಕ ಸಂಸ್ಥೆಗಳು ಒಂದೊಂದಾಗಿ ಮೋದಿ ಯುಗದೊಂದಿಗೆ ಕೈ ಕುಲುಕಿರುವ ದುರಂತದ ನಡುವೆ ಬೆಳಕಿನ ಭರವಸೆಯಾಗಿ ಉಳಿದದ್ದು ಸುಪ್ರೀಮ್ ಕೋರ್ಟ್ ಮಾತ್ರವೇ. ಜನತಂತ್ರದ ಈ ಕಟ್ಟಕಡೆಯ ಕಂಬದಲ್ಲೂ ಬಿರುಕುಗಳು ಬಾಯಿ ತೆರೆದಿವೆ; ನ್ಯಾಯಮೂರ್ತಿಗಳ ನಡೆ ನುಡಿಗಳು, ತೀರ್ಪುಗಳ ಕುರಿತು ಪ್ರಶ್ನೆಗಳೆದ್ದಿವೆ.

ಡಿ.ಉಮಾಪತಿ

1990ರ ನಂತರ ದಶಕಗಳ ಕಾಲ ಸರ್ಕಾರಗಳನ್ನು ಮುತ್ತಿದ್ದ ನಿಷ್ಕ್ರಿಯತೆ ಮತ್ತು ಭ್ರಷ್ಟಾಚಾರದ ಕಾರಣ ದೇಶದ ನ್ಯಾಯಾಂಗ ‘ಧರ್ಮಯುದ್ಧ’ ನಡೆಸಿ, ಕಾರ್ಯಾಂಗದ ಕಾರ್ಯಭಾರವನ್ನು ತಾನೇ ಜರುಗಿಸಿತು. ಐತಿಹಾಸಿಕ ತೀರ್ಪುಗಳಿಂದಾಗಿ ಜನಮನ ಗೆದ್ದಿತು. ಏನೇ ಹಾಳು ಬಿದ್ದು ಹೋದರೂ, ನಂಬಿ ನೆಚ್ಚಬಹುದಾದ ನ್ಯಾಯಾಂಗವೊಂದು ಕಟ್ಟಕಡೆಯ ಭರವಸೆಯಾಗಿ ಇದ್ದೇ ಇದೆ ಎಂಬ ಅಚಲ ವಿಶ್ವಾಸವನ್ನು ಹುಟ್ಟಿಸಿತ್ತು.

ಆದರೆ ಈ ಚಿತ್ರ ಇತ್ತೀಚಿನ ವರ್ಷಗಳಲ್ಲಿ ಸರಸರನೆ ಬದಲಾಗಿದೆ. ಆಕ್ರಮಣಕಾರಿ ಮೋದಿ ಸರ್ಕಾರ ತನ್ನ ಕಾರ್ಯಸೂಚಿಯನ್ನು ಆಗು ಮಾಡಿಕೊಳ್ಳಲು ನ್ಯಾಯಾಂಗವನ್ನು ಬಳಸಿಕೊಳ್ಳತೊಡಗಿದೆ ಎಂಬ ಭಾವನೆ ಬಲಿಯತೊಡಗಿದೆ. ನಿರಾಧಾರವೇನೂ ಅಲ್ಲ ಈ ಅನಿಸಿಕೆ.

ಮೋದಿ ಸರ್ಕಾರ ಮೊದಲ ಸಲ ಅಧಿಕಾರಕ್ಕೆ ಬಂದ ಶುರುವಾತಿನಲ್ಲಿ ಸುಪ್ರೀಮ್ ಕೋರ್ಟಿನಿಂದ ಹೆಜ್ಜೆ ಹೆಜ್ಜೆಗೆ ತಪರಾಕಿಗಳನ್ನು ತಿನ್ನಬೇಕಾಗಿ ಬಂದಿತ್ತು. ನ್ಯಾಯಾಧೀಶರ ನೇಮಕಾತಿಯಲ್ಲಿ ತನಗೆ ಹೆಚ್ಚು ಅಧಿಕಾರ ನೀಡುವ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ರಚಿಸಲು ಮೋದಿ ಸರ್ಕಾರ ಮುಂದಾಗಿತ್ತು. ಈ ದೆಸೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿಯನ್ನು ಸುಪ್ರೀಮ್ ಕೋರ್ಟ್ ಹೊಡೆದು ಹಾಕಿತು. ಹೊಸ ಸರ್ಕಾರಕ್ಕೆ ಸುಪ್ರೀಮ್ ಕೋರ್ಟಿನಿಂದ ಬಿದ್ದಿದ್ದ ಮೊದಲ ಹೊಡೆತವಿದು.

ಅಭಿವೃದ್ಧಿ ಆದ್ಯತೆಯಾಗಿರಲಿಲ್ಲ. ಬದಲಾಗಿ ಅಡ್ಡದಾರಿಯಿಂದಾದರೂ ಸರಿ, ರಾಜ್ಯಗಳನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವ ತರಾತುರಿಯಲ್ಲಿತ್ತು ಹೊಸ ಸರ್ಕಾರ. ಜನತಂತ್ರ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಕೂಡ ಅದು ಲೆಕ್ಕಿಸಲಿಲ್ಲ.  ಈ ಪ್ರಯತ್ನದಲ್ಲಿ ಅದು ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕುತಂತ್ರಗಳಿಂದ ಕೆಡವಿದ್ದ ಕಾಂಗ್ರೆಸ್ ಸರ್ಕಾರಗಳನ್ನು ಸುಪ್ರೀಮ್ ಕೋರ್ಟು ಪುನಃ ಪ್ರತಿಷ್ಠಾಪಿಸಿತು. ಈ ಬೆಳವಣಿಗೆ ಮೋದಿ ಸರ್ಕಾರಕ್ಕೆ ಉಂಟಾದ ಪ್ರಮುಖ ಮುಖಭಂಗವಾಗಿತ್ತು. ಬೆಟ್ಟದಂತೆ ಬೆಳೆದಿದ್ದ ವಸೂಲಾಗದ ಬ್ಯಾಂಕ್ ಸಾಲಗಳು ಮತ್ತು ಪರಿಸರ ಮಾಲಿನ್ಯ ಹಾಗೂ ನಾನಾ ರಾಜ್ಯಗಳಲ್ಲಿ ಕವಿದ ಬರಗಾಲದ ದುಸ್ಥಿತಿ ಕುರಿತು ಸರ್ಕಾರದ ನಿಷ್ಕ್ರಿಯತೆಯನ್ನೂ ಸುಪ್ರೀಮ್ ಕೋರ್ಟ್ ಝಾಡಿಸಿತ್ತು. ಆಡಳಿತಾತ್ಮಕ ಮತ್ತು ಕಾರ್ಯಾಂಗದ ವೈಫಲ್ಯಗಳನ್ನು ಹಲವು ಬಾರಿ ಎತ್ತಿ ತೋರಿತ್ತು.

ಕೆರಳಿದ ಮೋದಿ ಸರ್ಕಾರ ನ್ಯಾಯಾಂಗವನ್ನು ಸಂಸತ್ತಿನ ವೇದಿಕೆಯಿಂದ ತೀವ್ರ ಟೀಕೆಗೆ ಗುರಿ ಮಾಡಿತು. ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆಗಳ ವಿಚಾರದಲ್ಲಿ ಬೇಕೆಂದೇ ವಿಳಂಬ ಧೋರಣೆ ತಳೆಯಿತು. ಸುಪ್ರೀಮ್ ಕೋರ್ಟಿನ ಹಿರಿಯ ನ್ಯಾಯಮೂರ್ತಿಗಳ ಕೊಲಿಜಿಯಂ ಶಿಫಾರಸುಗಳನ್ನು ನಿರ್ಲಕ್ಷಿಸತೊಡಗಿತು. ಹಲವಾರು ಶಿಫಾರಸುಗಳನ್ನು ವಾಪಸು ಕಳಿಸಿತು. ಹೈಕೋರ್ಟುಗಳಲ್ಲಿ ನ್ಯಾಯಾಧೀಶರ ಅರ್ಧಕ್ಕರ್ಧ ಸ್ಥಾನಗಳು ಖಾಲಿ ಉಳಿದಿದ್ದವು. ತ್ವರಿತ ನೇಮಕಾತಿ ಮಾಡುವಂತೆ ಅಂದಿನ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಕೇಂದ್ರ ಸರ್ಕಾರಕ್ಕೆ ಪರಿಪರಿಯಾಗಿ ವಿನಂತಿಸಿದರು. ಫಲ ದೊರೆಯದಾಗ ಒಮ್ಮೆ ಮೋದಿಯವರೂ ಭಾಗವಹಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಅತ್ತುಬಿಟ್ಟಿದ್ದರು.

ಠಾಕೂರ್ ನಿವೃತ್ತಿಯ ನಂತರ ಸುಪ್ರೀಮ್ ಕೋರ್ಟು ಮೋದಿ ಸರ್ಕಾರದ ವಿಚಾರದಲ್ಲಿ ಕ್ರಮೇಣ ಹೆಚ್ಚು ಹೆಚ್ಚು ಮೆತ್ತಗಾಗುತ್ತ ಹೋಯಿತು. 

ನೋಟು ರದ್ದಿನಂತಹ ವಿವಾದಾತ್ಮಕ ದುರಂತ ಕುರಿತು ಸುಪ್ರೀಮ್ ಕೋರ್ಟು ತುಟಿ ಬಿಚ್ಚಿಲ್ಲ. ಪ್ರಶ್ನಿಸಿದ ಅರ್ಜಿಗಳು ವಿಚಾರಣೆಯ ಬೆಳಕು ಕಾಣದೆ ಕೊಳೆಯುತ್ತಿವೆ. `ಎಲೆಕ್ಟೊರಲ್ ಬಾಂಡ್‌ಗಳು’ ಬಿಜೆಪಿಯ ಪಾಲಿಗೆ ಅಪಾರ ಚುನಾವಾಣ ನಿಧಿ ಒದಗಿಸುವ ವರವಾಗಿ ಪರಿಣಮಿಸಿವೆ. ಈ ಬಾಂಡ್‌ಗಳನ್ನು ಪ್ರಶ್ನಿಸಿರುವ ಅರ್ಜಿಗಳಿಗೂ ವಿಚಾರಣೆಯ ಅದೃಷ್ಟ ಒದಗಿಲ್ಲ. ದೇಶದೆಲ್ಲೆಡೆ ಧಾರ್ಮಿಕ ಅಸಹಿಷ್ಣುತೆಯ ವಿಷಗಾಳಿಯನ್ನು ಹಬ್ಬಿಸಿದ ಪೌರತ್ವ ಕಾಯಿದೆ ತಿದ್ದುಪಡಿಯನ್ನು ಮತ್ತು, ಕಾಶ್ಮೀರವನ್ನು ಸಾಮೂಹಿಕ ಸೆರೆಮನೆಯಾಗಿಸಿದ ನೀತಿ ನಿರ್ಧಾರಗಳನ್ನು ಪ್ರಶ್ನಿಸಿದ ಅರ್ಜಿಗಳು ವಿಚಾರಣೆಯೇ ನಡೆಯುತ್ತಿಲ್ಲ. ಭೀಮಾ ಕೋರೇಗಾಂವ್, ಆಧಾರ್‌ನಂತಹ ವಿಷಯಗಳಲ್ಲಿ ನ್ಯಾಯಾಲಯದ ತೀರ್ಪು ನಿರಾಶಾದಾಯಕ.

ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಏಕಾಏಕಿ ಲಾಕ್‌ಡೌನ್ ಘೋಷಿಸಿ ಲಕ್ಷಾಂತರ ಬಡ ಕಾರ್ಮಿಕರು ಸಾವಿರಾರು ಕಿ.ಮೀ.ಗಳ ದೂರವನ್ನು ಕಾಲು ನಡಿಗೆಯಲ್ಲಿ ಸವೆಸಬೇಕಾದ ವಲಸೆಯ ದುರಂತ ಜರುಗಿತು. ಈ ಕುರಿತು ಸರ್ಕಾರದ ನೀತಿ ನಿರ್ಧಾರದ ವಿರುದ್ಧ ದನಿ ಎತ್ತಲು ಮೀನಮೇಷ ಎಣಿಸಲಾಯಿತು. ಸರ್ಕಾರ ಅಸಂತೋಷಗೊಂಡೀತು ಎಂಬ ಹಿಂಜರಿಕೆ ಒಡೆದು ಕಾಣತೊಡಗಿದೆ.

ಪ್ರೊ.ರೊಮಿಲಾ ಥಾಪರ್ ಮುಂತಾದ ಗಣ್ಯರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಭೀಮಾ ಕೋರೆಗಾಂವ್ ಕೇಸಿನ ತನಿಖೆಯನ್ನು ಪೂರ್ವಗ್ರಹಪೀಡಿತ ಮಹಾರಾಷ್ಟ್ರ  ಪೊಲೀಸರ ಕೈ ತಪ್ಪಿಸಿ ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಬೇಕೆಂದು ಕೋರಲಾಗಿತ್ತು. ಈ ಕೋರಿಕೆಯನ್ನು ತಳ್ಳಿ ಹಾಕಲಾಯಿತು. 

ಭಾರತದ ಸರ್ವೋಚ್ಚ ನ್ಯಾಯಾಲಯದ ಕಾರ್ಯವೈಖರಿ ಈಗಿನಷ್ಟು ಟೀಕೆ ಟಿಪ್ಪಣಿಗೆ ಗುರಿಯಾಗಿರುವಷ್ಟು ಕಳೆದ ಎಪ್ಪತ್ತು ವರ್ಷಗಳ ಅಸ್ತಿತ್ವದಲ್ಲಿ ಹಿಂದೆಂದೂ ಆಗಿರಲಿಲ್ಲ. ಆಳುವವರ ಮಗ್ಗುಲ ಮುಳ್ಳೆನಿಸುವ ಮೊಕದ್ದಮೆಗಳನ್ನು ವಿಚಾರಣೆಗೆ ಎತ್ತಿಕೊಳ್ಳದೆ ಬದಿಗೆ ಸರಿಸಿರುವ ನಿದರ್ಶನಗಳಿವೆ. ಇನ್ನು ಕೆಲವು ಪ್ರಕರಣಗಳಲ್ಲಿ ನೀಡಲಾಗಿರುವ ತೀರ್ಪುಗಳು ಪ್ರಶ್ನಾರ್ಹ ಎನಿಸಿವೆ.

2018ರ ಜನವರಿಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದು ಇದೇ ಅಂಶವನ್ನು. ಸುಪ್ರೀಮ್ ಕೋರ್ಟ್ ಆಡಳಿತ ಕೊಳೆತಿದ್ದು, ದೇಶದಲ್ಲಿ ಜನತಂತ್ರ ಉಳಿಯಬೇಕೆಂದಿದ್ದರೆ ಅದನ್ನು ಸರಿಪಡಿಸಬೇಕು ಎಂದು ಹೇಳಿಕೆ ನೀಡಿದ್ದರು.

ದೀಪಕ್ ಮಿಶ್ರ ಅವರು ಅಂದಿನ ಮುಖ್ಯನ್ಯಾಯಮೂರ್ತಿ. ಕೇಸು ಖಟ್ಲೆಗಳನ್ನು ವಿಚಾರಣೆಗೆ ಹಂಚಿಕೊಡುವುದು ಮುಖ್ಯ ನ್ಯಾಯಮೂರ್ತಿಯ ಅಧಿಕಾರ. ಯಾವ್ಯಾವ ನ್ಯಾಯಮೂರ್ತಿಗೆ ಯಾವ್ಯಾವ ಕೇಸುಗಳನ್ನು ವಿಚಾರಣೆಗೆ ಒಪ್ಪಿಸಬೇಕೆಂಬ ತೀರ್ಮಾನದಲ್ಲಿ ಗಂಭೀರ ಅಕ್ರಮಗಳು ನಡೆಯುತ್ತಿವೆ ಎಂಬ ಅಪಾದನೆಯನ್ನು ಈ ಹಿರಿಯ ನ್ಯಾಯಮೂರ್ತಿಗಳು ಮಾಡಿದ್ದರು. ನ್ಯಾಯಾಲಯದ ಘನತೆ ಮಣ್ಣುಪಾಲಾಗುತ್ತದೆಂಬ ಕಾರಣದಿಂದ ವಿವರಗಳನ್ನು ಬಹಿರಂಗಗೊಳಿಸುತ್ತಿಲ್ಲ ಎಂದೂ ಸಾರಿದ್ದರು. ಈ ನಾಲ್ವರ ಪೈಕಿ ಒಬ್ಬರಾದ ರಂಜನ್ ಗೋಗೋಯ್ ಮುಖ್ಯ ನ್ಯಾಯಮೂರ್ತಿಯ ಹುದ್ದೆ ಏರಿದರು. ಆದರೆ ಆಕ್ಷೇಪಾರ್ಹ ನಡವಳಿಕೆಗಳಲ್ಲಿ, ಆಳುವವರಿಗೆ ಮಣೆ ಹಾಕುವಲ್ಲಿ ಅವರು ದೀಪಕ್ ಮಿಶ್ರ ಅವರನ್ನೂ ಮೀರಿಸಿದ್ದು ಬಲು ದೊಡ್ಡ ವಿಡಂಬನೆ. ಗೋಗೋಯ್ ಮೇಲಿನ ಆಪಾದನೆಗಳು ದೀಪಕ್ ಮಿಶ್ರ ವಿರುದ್ಧ ಮಾಡಿದ್ದ ಅಪಾದನೆಗಳಿಗಿಂತ ಹೀನ ಸ್ವರೂಪದವು!

ಅಧಿಕೃತ ತುರ್ತುಪರಿಸ್ಥಿತಿಯನ್ನು ಕೂಡ ಘೋಷಿಸದೆ ಕಳೆದ ಆರು ವರ್ಷಗಳ ಅವಧಿಯಲ್ಲಿ ಭಾರತದ ಜನತಂತ್ರವನ್ನು ಹೇಗೆ ನಾಶ ಮಾಡಲಾಯಿತು ಎಂಬುದನ್ನು ಭವಿಷ್ಯತ್ತಿನಲ್ಲಿ ಇತಿಹಾಸಕಾರರು ಹೊರಳಿ ನೋಡಲಿದ್ದಾರೆ. ಆಗ ಅವರು ಈ ವಿನಾಶದಲ್ಲಿ ಸುಪ್ರೀಮ್ ಕೋರ್ಟಿನ, ಅದರಲ್ಲೂ ವಿಶೇಷವಾಗಿ ಕಳೆದ ನಾಲ್ವರು ಮುಖ್ಯನ್ಯಾಯಮೂರ್ತಿಗಳ ಪಾತ್ರವನ್ನು ರೇಖಾಂಕಿತಗೊಳಿಸಿ ಗುರುತಿಸುವರು. ತಮ್ಮ ಮೂಲಭೂತ ಹಕ್ಕನ್ನು ಉಳಿಸಿಕೊಳ್ಳಲು ಕದ ಬಡಿಯುವ ನಾಗರಿಕರ ಪಾಲಿಗೆ ಸುಪ್ರೀಮ್ ಕೋರ್ಟನ್ನು ಲಾಕ್‌ಡೌನ್ ಸ್ಥಿತಿಯಲ್ಲಿ ಇರಿಸಿ ಅವರಿಗೆ ನ್ಯಾಯವನ್ನು ನಿರಾಕರಿಸಿರುವ ಮುಖ್ಯ ನ್ಯಾಯಮೂರ್ತಿಯವರು ನಾಗಪುರದ ರಾಜಭವನದಲ್ಲಿ ಬಿಜೆಪಿ ನಾಯಕರೊಬ್ಬರ ಒಡೆತನದ 50 ಲಕ್ಷ ರೂಪಾಯಿ ಬೆಲೆ ಬಾಳುವ ಮೋಟರ್ ಸೈಕಲ್ಲನ್ನು ಏರಿ ಕುಳಿತಿದ್ದಾರೆ. ಮಾಸ್ಕ್ ಮತ್ತು ಹೆಲ್ಮೆಟ್ ಕೂಡ ಧರಿಸಿಲ್ಲ ಎಂಬ ಎರಡು ಟ್ವೀಟ್‌ಗಳಿಗಾಗಿ ಜನಪರ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರನ್ನು ಶಿಕ್ಷಿಸಲಾಗಿದೆ. ಶಿಕ್ಷಿಸಿದ್ದು ಅರುಣ್ ಶರ್ಮ ನೇತೃತ್ವದ ನ್ಯಾಯಪೀಠ.

ಮುಖ್ಯನ್ಯಾಯಮೂರ್ತಿ ಠಾಕೂರ್ ನಿವೃತ್ತಿಯ ನಂತರದ ವರ್ಷಗಳಲ್ಲಿ ಮೋದಿ ಸರ್ಕಾರ ಮತ್ತು ಸರ್ಕಾರಕ್ಕೆ ಬೇಕಾದವರ ಕೇಸು ಖಟ್ಲೆಗಳು ಅರುಣ್ ಮಿಶ್ರ ಅವರ ನೇತೃತ್ವದ ಅಥವಾ ಅವರೂ ಇರುತ್ತಿದ್ದ ನ್ಯಾಯಪೀಠಕ್ಕೇ ವಿಚಾರಣೆಗೆ ಬಂದು ಬೀಳುತ್ತಿದ್ದವು.

ಅತಿ ಸೂಕ್ಷ್ಮಸ್ವರೂಪದ ಹಲವು ಪ್ರಕರಣಗಳನ್ನು ಅರುಣ್ ಮಿಶ್ರ ನೇತೃತ್ವದ ನ್ಯಾಯಪೀಠ ನಡೆಸುತ್ತದೆ. ಇಂತಿಂತಹ ವ್ಯಾಜ್ಯ-ಪ್ರಕರಣ-ಮೊಕದ್ದಮೆಯನ್ನು ಇಂತಿಂತಹ ನ್ಯಾಯಪೀಠವೇ ನಡೆಸಬೇಕೆಂದು ಅವುಗಳನ್ನು ಹಂಚಿಕೊಡುವ ಅಧಿಕಾರ ಮುಖ್ಯ ನ್ಯಾಯಮೂರ್ತಿಗಳದು ಎಂಬುದನ್ನು ಇಲ್ಲಿ ಮತ್ತೊಮ್ಮೆ ನೆನೆಯುವುದು ಸೂಕ್ತ. 2015ರಲ್ಲಿ ಗುಜರಾತಿನ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಅವರ ಪ್ರಕರಣ ಮಿಶ್ರ ಅವರ ನ್ಯಾಯಪೀಠದ ಮುಂದೆ ಬರುತ್ತದೆ. ಅಂದಿನ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರು.

ಗುಜರಾತ್ ಕೋಮು ದಂಗೆಗಳಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಂತಾದವರ ಪಾತ್ರವಿತ್ತೆಂದು ಆಪಾದಿಸಿದ್ದವರು ಭಟ್. ಅವರೀಗ ಜೈಲಿನಲ್ಲಿದ್ದಾರೆ. ತಮ್ಮ ಮೇಲೆ ಸಲ್ಲಿಸಲಾಗಿರುವ ಎಫ್.ಐ.ಆರ್.ಗಳ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನೇಮಿಸುವಂತೆ ಭಟ್ ಸುಪ್ರೀಮ್ ಕೋರ್ಟ್ ಮೊರೆ ಹೋಗಿರುತ್ತಾರೆ. ನ್ಯಾಯಮೂರ್ತಿ ಅರುಣ್ ಮಿಶ್ರ ಅವರು ಈ ಮನವಿಯನ್ನು ತಳ್ಳಿ ಹಾಕಿ ತೀರ್ಪು ನೀಡುತ್ತಾರೆ.

ಗುಜರಾತ್ ಮತ್ತು ಮಧ್ಯಪ್ರದೇಶದ ಅಂದಿನ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಶಿವರಾಜಸಿಂಗ್ ಚೌಹಾಣ್ ಅವರಿಗೆ ನಿಧಿ ಸಂದಾಯವಾಗಿದೆ ಎಂದು ಸೂಚಿಸುವ ಕಾಗದಪತ್ರಗಳನ್ನು ಆದಾಯ ತೆರಿಗೆ ಇಲಾಖೆ ಯಾಕೆ ಮುಚ್ಚಿಟ್ಟಿದೆ ಎಂಬುದಾಗಿ ಪ್ರಶ್ನಿಸಲಾದ ಸಹಾರಾ-ಬಿರ್ಲಾ ಡೈರಿಗಳ ಪ್ರಕರಣದ ವಿಚಾರಣೆಯೂ ಮಿಶ್ರ ಅವರ ಮುಂದೆ ಬರುತ್ತದೆ. ಪ್ರಶ್ನೆಯನ್ನು ಬದಿಗೊತ್ತಿ ತೀರ್ಪು ನೀಡಲಾಗುತ್ತದೆ.

ಗುಜರಾತಿನ ಮಾಜಿ ಗೃಹಮಂತ್ರಿ ಹರೇನ್ ಪಾಂಡ್ಯ ಅವರ ಕೊಲೆ ಪ್ರಕರಣವನ್ನು ಹೊಸ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಮರುತನಿಖೆ ನಡೆಸಬೇಕೆಂಬ ಪ್ರಶಾಂತ್ ಭೂಷಣ್ ಅವರ ಮನವಿಯನ್ನೂ ಮಿಶ್ರ ನ್ಯಾಯಪೀಠ ತಿರಸ್ಕರಿಸುತ್ತದೆ. ಅಷ್ಟೇ ಅಲ್ಲದೆ ಅರ್ಜಿದಾರರಿಗೆ 50 ಸಾವಿರ ರೂಪಾಯಿಗಳ ದಂಡ ವಿಧಿಸುತ್ತದೆ,

ಸೊಹ್ರಾಬುದ್ದೀನ್ ಶೇಖ್ ಹುಸಿ ಎನ್ಕೌಂಟರ್ ಹತ್ಯೆ ಕುರಿತು  ಅಮಿತ್ ಶಾ ಅವರ ಮೇಲಿನ ಆಪಾದನೆಗಳ ವಿಚಾರಣೆ ನಡೆಸುತ್ತಿದ್ದ ಅಧೀನ ನ್ಯಾಯಾಲಯದ ನ್ಯಾಯಾಧೀಶ ಬಿ.ಎಚ್.ಲೋಯಾ ಅವರ ನಿಗೂಢ ಮರಣದ ಪ್ರಕರಣವನ್ನು ಸ್ವತಂತ್ರ ತನಿಖೆಗೆ ವಹಿಸುವಂತೆ ಅರ್ಜಿಗಳನ್ನು ಸಲ್ಲಿಸಲಾಗಿರುತ್ತದೆ. 2018ರ ಜನವರಿ 11ರಂದು ಈ ಅರ್ಜಿಗಳು ವಿಚಾರಣೆಗೆ ಬಂದಿರುತ್ತವೆ. ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಈ ಅರ್ಜಿಗಳ ವಿಚಾರಣೆಯನ್ನು ಅರುಣ್ ಮಿಶ್ರ ನ್ಯಾಯಪೀಠಕ್ಕೆ ಒಪ್ಪಿಸಿರುತ್ತಾರೆ. ಮರುದಿನ ಈ ಅರ್ಜಿಗಳ ವಿಚಾರಣೆ ನಡೆಯಬೇಕಿರುತ್ತದೆ. ಈ ಹಂತದಲ್ಲೇ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಐತಿಹಾಸಿಕ ಪತ್ರಿಕಾಗೋಷ್ಠಿ ನಡೆಸುತ್ತಾರೆ.

ದೇಶದ ಮೇಲೆ ಮತ್ತು ಸುಪ್ರೀಮ್ ಕೋರ್ಟ್ ಮೇಲೆ ದೂರಗಾಮಿ ಸಾಧಕ ಬಾಧಕಗಳನ್ನು ಹೊಂದಿದ ಕೇಸುಗಳನ್ನು ಮುಖ್ಯ ನ್ಯಾಯಮೂರ್ತಿಗಳು ಯಾವುದೇ ಕಾರ್ಯಕಾರಣ ನೀಡದೆ ತಮಗೆ ಬೇಕಾದ ನ್ಯಾಯಪೀಠಗಳಿಗೆ ಒಪ್ಪಿಸುತ್ತಾರೆ ಎಂಬ ಆಪಾದನೆಯನ್ನೂ ಈ ನಾಲ್ವರು ನ್ಯಾಯಮೂರ್ತಿಗಳು ಅಂದು ಮಾಡಿದ್ದರು. ಲೋಯಾ ಕೇಸನ್ನು ಅರುಣ್ ಮಿಶ್ರ ಪೀಠಕ್ಕೆ ಒಪ್ಪಿಸಿದ್ದೇ ಈ ಟೀಕೆಯ ಹಿಂದಿನ ಪ್ರಚೋದನೆ ಎಂದು ವ್ಯಾಖ್ಯಾನಿಸಲಾಗಿತ್ತು. ಈ ಆಪಾದನೆಯ ಹಿನ್ನೆಲೆಯಲ್ಲಿ ಲೋಯಾ ಕೇಸನ್ನು ತಮ್ಮ ನೇತೃತ್ವದ ನ್ಯಾಯಪೀಠಕ್ಕೆ ವರ್ಗಾಯಿಸಿಕೊಂಡರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ. ಸ್ವತಂತ್ರ ತನಿಖೆಯ ಅಹವಾಲನ್ನು ತಳ್ಳಿ ಹಾಕಿದರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಅದಾನಿ ಕಂಪನಿಗಳಿಗೆ ಸಂಬಂಧಿಸಿದ ನಾಲ್ಕು ಕೇಸುಗಳನ್ನು ಅರುಣ್ ಮಿಶ್ರ ನ್ಯಾಯಪೀಠಕ್ಕೇ ಒಪ್ಪಿಸಿರುವ ಕುರಿತು ಸುಪ್ರೀಮ್ ಕೋರ್ಟಿನ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ 2019ರ ಆಗಸ್ಟ್ ತಿಂಗಳಲ್ಲೇ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದು ದೂರಿರುತ್ತಾರೆ. ಆದರೆ ಅದರ ಪರಿಣಾಮ ಶೂನ್ಯ. ಅರುಣ್ ಮಿಶ್ರ ನೇತೃತ್ವದ ನ್ಯಾಯಪೀಠಗಳು 2019ರ ಆರಂಭದಿಂದ ಮೊನ್ನೆ ಅವರ ನಿವೃತ್ತಿಯ ತನಕ ಅದಾನಿ ಗ್ರೂಪ್ ಪರವಾಗಿ ತೀರ್ಪು ನೀಡಿದ ಖಟ್ಲೆಗಳ ಸಂಖ್ಯೆ ಒಟ್ಟು ಏಳು. ಮೊನ್ನೆ ಆಗಸ್ಟ್ 31ರಂದು ಹೊರಬಿದ್ದದ್ದು ಏಳನೆಯ ತೀರ್ಪು. ರಾಜಸ್ತಾನದಲ್ಲಿನ ಅದಾನಿ ವಿದ್ಯುಚ್ಛಕ್ತಿ ಉತ್ಪಾದನಾ ಸ್ಥಾವರಕ್ಕೆ 8000 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಸುಪ್ರೀಮ್ ಕೋರ್ಟು ಆದೇಶ ನೀಡಿತು. 

ಮೂರನೆಯ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದ ಅರುಣ್ ಮಿಶ್ರ ಇದೇ ಸೆಪ್ಟಂಬರ್ ಎರಡರಂದು ಸೇವೆಯಿಂದ ನಿವೃತ್ತರಾದರು. ನ್ಯಾಯವಾದಿಯಾಗಿದ್ದ ಅರುಣ್ ಮಿಶ್ರ ಅವರನ್ನು 1999ರಲ್ಲಿ ಮಧ್ಯಪ್ರದೇಶದ ಹೈಕೋರ್ಟಿಗೆ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗುತ್ತದೆ. 2014ರಲ್ಲಿ ಅವರಿಗೆ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಯಾಗಿ ಬಡ್ತಿ ದೊರೆಯುತ್ತದೆ. ಠಾಕೂರ್ ನಿವೃತ್ತಿಯ ನಂತರ ಮಿಶ್ರ ಅಧಿಕ ಪ್ರಾಮುಖ್ಯ ಗಳಿಸತೊಡಗುತ್ತಾರೆ.

ತಿಂಗಳ ಹಿಂದಷ್ಟೇ ಅಂತಾರಾಷ್ಟ್ರೀಯ  ನ್ಯಾಯಾಂಗ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮೋದಿಯವರನ್ನು ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ದಾರ್ಶನಿಕ ಮತ್ತು ಬಹುಮುಖೀ ಮೇಧಾವಿ ಎಂದು ಹೊಗಳಿದ್ದರು ಅರುಣ್ ಮಿಶ್ರ. ಎಂ.ಆರ್.ಶಾ ಅವರು ಹಾಲಿ ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿ. 2019ರ ಆಗಸ್ಟ್ ತಿಂಗಳಲ್ಲಿ ಮೋದಿಯವರನ್ನು ಮಾಡೆಲ್ ಮತ್ತು ಹೀರೋ ಎಂದು ಹೊಗಳಿದ್ದರು. ಆಗ ಅವರು ಪಟನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ.

ಅರುಣ್ ಮಿಶ್ರ ಅವರ ನಿವೃತ್ತಿಯಾಗಿದ್ದಾರೆ. ಆದರೆ ಅವರ ಪರಂಪರೆಗೆ ಚ್ಯುತಿಯಿಲ್ಲ. ಅರುಣ್ ಮಿಶ್ರ ಅವರ ಕಿರಿಯ ಸೋದರ ವಿಶಾಲ್ ಮಿಶ್ರ 2019ರಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಮಧ್ಯಪ್ರದೇಶ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕ ಹೊಂದಿದರು. 

2014ರ ಮೇ 17ರಂದು ವಿಶಾಲ್ ಮಿಶ್ರ ಅವರ ಫೇಸ್ಬುಕ್ ಪೋಸ್ಟ್ ಹೀಗಿತ್ತು- `ಬಿಜೆಪಿಯ ಘನವಾದ ಗೆಲುವಿಗೆ ಎಲ್ಲ ದೇಶವಾಸಿಗಳಿಗೆ ಹಾರ್ದಿಕ ಅಭಿನಂದನೆಗಳು’. ಅದೇ ದಿನ ಅವರು ಹಾಕಿದ್ದ ಮತ್ತೊಂದು ಫೇಸ್ಬುಕ್ ಪೋಸ್ಟ್- ಇಂದು ಹವೆ ಕೂಡ ಬಿಜೆಪಿಗೆ ಅನುಕೂಲಕರ ಆಗಿದೆ. ಇಂದು ಮತದಾನದ ಎಲ್ಲ (ಹಳೆಯ) ದಾಖಲೆಗಳೂ ಮುರಿದುಬೀಳಬೇಕು. ಜಲ್ದಿ ಮನೆಯಿಂದ ಹೊರಟು ಬಿಜೆಪಿಗೆ ಮತ ನೀಡಿರಿ. ದೇಶದಲ್ಲಿ ಬದಲಾವಣೆ ತನ್ನಿರಿ. ಅಬ್ ಕೀ ಬಾರ್ ನರೇಂದ್ರ ಮೋದಿ ಸರ್ಕಾರ್. ಜೈ ಹಿಂದ್, ಜೈ ಭಾರತ್.

ಮೋತಿಲಾಲ್ ನೆಹರೂ ಅವರ ತಂದೆ ಘಯಾಸುದ್ದೀನ್ ಘಾಜಿ ಎಂತಲೂ ಜವಾಹರ ಲಾಲ್ ನೆಹರೂ ತಂದೆ ಮುಬಾರಕ್ ಅಲಿ ಎಂದೂ, ಫಿರೋಜ್ ಗಾಂಧಿ ಮುಸ್ಲಿಮ್ ಎಂದೂ 2013ರ ಅಕ್ಟೋಬರ್ 12ರಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದವರು ವಿಶಾಲ್ ಮಿಶ್ರ. ಆಗ ಅವರು ಇನ್ನೂ ಮಧ್ಯಪ್ರದೇಶ ಹೈಕೋರ್ಟ್ ವಕೀಲರಾಗಿದ್ದರು. 2019ರ ಲೋಕಸಭಾ ಚುನಾವಣಾ ಫಲಿತಾಂಶಗಳ ಹೊರಬೀಳುವ ಹಿಂದಿನ ದಿನ ಅವರು ಮಧ್ಯಪ್ರದೇಶ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ವ್ಯಕ್ತಿಯ ವಯಸ್ಸು 45 ವರ್ಷ ದಾಟಿರಬೇಕು. ಆದರೆ ಅರುಣ್ ಮಿಶ್ರ ಅವರ ಕಿರಿಯ ಸೋದರ ವಿಶಾಲ್ ಮಿಶ್ರ ಅವರಿಗೆ ಸಂಬಂಧಿಸಿದಂತೆ ಈ ನೇಮಕಾತಿ ನಿಯಮದ ಪಾಲನೆಯಾಗಲಿಲ್ಲ. ಕಳೆದ ವರ್ಷ ವಿಶಾಲ್ ಮಿಶ್ರ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಯ ಹುದ್ದೆಗೆ ನೇಮಕ ಮಾಡಿದಾಗ ಅವರಿಗೆ 45 ತುಂಬಿರಲಿಲ್ಲ. 2019ರ ಮೇ 10ರಂದು ಈ ನೇಮಕಾತಿಗೆ ಸುಪ್ರೀಮ್ ಕೋರ್ಟ್ ಕೊಲಿಜಿಯಂ ಅನುಮೋದನೆ ನೀಡಿತು.

ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್, ಎರಡನೆಯ ಮತ್ತು ಮೂರನೆಯ ಹಿರಿಯ ನ್ಯಾಯಮೂರ್ತಿಗಳಾಗಿದ್ದ ಎಸ್.ಎ.ಬೋಬ್ಡೆ ಮತ್ತು ಎನ್.ವಿ.ರಮಣ ಅವರು ಈ ಕೊಲಿಜಿಯಂ ನಲ್ಲಿದ್ದರು. ವಿಶಾಲ್ ಮಿಶ್ರ ಅವರ ವಯಸ್ಸನ್ನು ಕುರಿತು ಹೈಕೋರ್ಟ್ ನೀಡಿರುವ ಸಮರ್ಥನೆ ತೃಪ್ತಿಕರವಾಗಿದೆ ಎಂದು ಕೊಲಿಜಿಯಂ ಹೇಳಿತ್ತು. ಆದರೆ ಆ ಸಮರ್ಥನೆ ಏನೆಂದು ಹೊರಬಿದ್ದಿಲ್ಲ. ನ್ಯಾಯಮೂರ್ತಿ ಅರುಣ್ ಮಿಶ್ರ ಆಗ ಸುಪ್ರೀಮ್ ಕೋರ್ಟಿನಲ್ಲಿ ನಾಲ್ಕನೆಯ ಹಿರಿಯ ನ್ಯಾಯಮೂರ್ತಿಯಾಗಿದ್ದರು. ಅನುಮೋದನೆಯ ತೀರ್ಮಾನದಲ್ಲಿ ಅವರು ಭಾಗಿಯಾಗಿರಲಿಲ್ಲ.

1974ರಲ್ಲಿ ಜನಿಸಿರುವ ವಿಶಾಲ್ ಮಿಶ್ರ 2036ರಲ್ಲಿ ಸೇವೆಯಿಂದ ನಿವೃತ್ತರಾಗುತ್ತಾರೆ. ಸುಪ್ರೀಮ್ ಕೋರ್ಟಿಗೆ ಬಡ್ತಿ ದೊರೆತರೆ ಅವರ ನಿವೃತ್ತಿ 2039ಕ್ಕೆ. ಅವರ ಕಿರಿಯ ವಯಸ್ಸನ್ನು ಪರಿಗಣಿಸಿದರೆ ಬಡ್ತಿ ಹೊಂದಿದಲ್ಲಿ ವಿಶಾಲ್ ಮಿಶ್ರ ಅವರು ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗುವುದು ನಿಶ್ಚಿತ.

2002ರ ಕೋಮು ಗಲಭೆಗಳ ಹಿನ್ನೆಲೆಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರನ್ನು `ಆಧುನಿಕ ದಿನಗಳ ನೀರೋ’ ಎಂದು ಕರೆದಿದ್ದ ಅದೇ ಸುಪ್ರೀಮ್ ಕೋರ್ಟು ಇಂದು ತದ್ವಿರುದ್ಧ ಹಾದಿ ತುಳಿದಿದೆ.

ಸುಪ್ರೀಮ್ ಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿದ್ದ ಪಿ.ಎನ್.ಭಗವತಿ ಅವರು 1980ರಲ್ಲಿ ಇಂದಿರಾಗಾಂಧಿಯವರ ಚುನಾವಣಾ ವಿಜಯಕ್ಕೆ ಅಭಿನಂದಿಸಿ ದೊಡ್ಡ ಪತ್ರವನ್ನೇ ಬರೆದು ಹೊಗಳಿದ್ದುಂಟು. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರ ನಾಗರಿಕರ ಮೂಲಭೂತ ಹಕ್ಕುಗಳನ್ನು ರದ್ದು ಮಾಡಬಹುದು ಎಂಬ ಕುಖ್ಯಾತ ತೀರ್ಪು ನೀಡಿದ್ದ ನ್ಯಾಯಪೀಠದಲ್ಲಿ ಭಗವತಿಯವರೂ ಕುಳಿತಿದ್ದರು. ಈ ತೀರ್ಪಿಗಾಗಿ ಭಗವತಿ ಅವರು 30 ವರ್ಷಗಳ ನಂತರ ಕ್ಷಮಾಪಣೆ ಕೋರಿದರು.

ರಾಜಕೀಯ ನಾಯಕರ ಚುನಾವಣಾ ವಿಜಯಗಳಿಗೆ ಅಭಿನಂದಿಸಿ ಹೂಗುಚ್ಛ ನೀಡುವುದು, ಪತ್ರಗಳನ್ನು ಬರೆಯುವುದು ಸಲ್ಲದು. ಇದರಿಂದ ನ್ಯಾಯಾಂಗದಲ್ಲಿ ಜನರ ವಿಶ್ವಾಸಕ್ಕೆ ಕುಂದು ಬರುತ್ತದೆ ಎಂದು ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಯಾಗಿದ್ದ ತುಳಜಾಪುರಕರ್ ಅವರು ಭಗವತಿ ಅವರ ನಡೆಯನ್ನು ಖಂಡಿಸಿದ್ದರು.

ತಮ್ಮ ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಜೈಲಿಗೆ ತಳ್ಳಿ ಕೊಳೆಸುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ. ಜಾತಿವ್ಯವಸ್ಥೆಯ ಅನಿಷ್ಟದ ವಿರುದ್ಧ ಸೆಣೆಸುತ್ತ ಬಂದಿರುವ ಆನಂದ್ ತೇಲ್ತುಂಬ್ಡೆ ಮೋದಿಯವರ ಉಗ್ರರಾಷ್ಟ್ರವಾದ, ದಲಿತ ಮತ್ತು ಅಲ್ಪಸಂಖ್ಯಾತ ವಿರೋಧಿ ನೀತಿಗಳನ್ನು ಉಗ್ರವಾಗಿ ಟೀಕಿಸುತ್ತ ಬಂದಿರುವವರು. ಸುಧಾ ಭಾರದ್ವಾಜ್ ಅವರು ಆದಿವಾಸಿ ಬಂಧುಗಳ ಕಷ್ಟ ಕಣ್ಣೀರು ತೊಡೆಯಲು ಬಡಿದಾಡುತ್ತ ಬಂದಿರುವ ಹೆಣ್ಣುಮಗಳು. ಇವರಿಗೆ ಮಾವೋವಾದಿಯ ಹಣೆಪಟ್ಟಿ ಹಚ್ಚಿ ಜೈಲಿಗೆ ತಳ್ಳಲಾಗಿದೆ. ಸುಪ್ರೀಮ್ ಕೋರ್ಟ್ ಕೂಡ ಜಾಮೀನು ನೀಡಲು ಸತತವಾಗಿ ನಿರಾಕರಿಸಿದೆ. ಪಂಚತಾರಾ ಹೋರಾಟಗಾರರಿಂದ ಪ್ರೇರಿತವಾದ ಗ್ರಹಿಕೆ ಆಧಾರಿತ ತೀರ್ಪುಗಳ ಕುರಿತು ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕೆಂದು ಮೋದಿಯವರು ಮುಖ್ಯಮಂತ್ರಿಗಳು ಮತ್ತು ಮುಖ್ಯನ್ಯಾಯಮೂರ್ತಿಗಳ ಸಮ್ಮೇಳನವೊಂದರಲ್ಲಿ ಬುದ್ಧಿವಾದ ಹೇಳಿದ್ದುಂಟು.

ಕಳೆದ ನವೆಂಬರಿನಲ್ಲಿ ನಿವೃತ್ತಿಗೆ ಮುನ್ನ ಅಂದಿನ ಸುಪ್ರೀಮ್ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೋಯ್ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದಲ್ಲಿ ಹಿಂದೂಗಳ ಪರ ನೀಡಿದ ತೀರ್ಪು ಮೋದಿ ಸರ್ಕಾರಕ್ಕೆ ದೊರೆತ ಬಹು ದೊಡ್ಡ ಉಡುಗೊರೆ. ನಿವೃತ್ತಿಯಾದ ನಾಲ್ಕೇ ತಿಂಗಳುಗಳಲ್ಲಿ ಗೋಗೋಯ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಲಾಯಿತು. ಭಾರತೀಯ ನ್ಯಾಯಾಂಗದ ನಿಷ್ಪಕ್ಷಪಾತ ನೀತಿಗೆ ಬಿದ್ದ ಭಾರೀ ಹೊಡೆತವಿದು. ನ್ಯಾಯಮೂರ್ತಿಗಳು ನಿವೃತ್ತಿಯ ನಂತರದ `ಪುನರ್ವಸತಿ’ಯ ಆಮಿಷಕ್ಕೆ ಒಳಗಾಗಿ ತೀರ್ಪುಗಳನ್ನು ನೀಡುವುದನ್ನು ತಡೆಯಬೇಕು. ಈ ದಿಕ್ಕಿನಲ್ಲಿ ನಿಯಮವೊಂದನ್ನು ರೂಪಿಸಿ ನಿವೃತ್ತಿ ನಂತರ ಎರಡು ವರ್ಷಗಳ ಕಾಲ ಅವರು ಯಾವುದೇ ಹುದ್ದೆಗಳನ್ನು ಒಪ್ಪಿಕೊಳ್ಳದಂತೆ ನಿರ್ಬಂಧಿಸಬೇಕು ಎಂಬುದು ಬಿಜೆಪಿ ಪ್ರತಿಪಕ್ಷದಲ್ಲಿದ್ದಾಗ ಮಾಡಿದ್ದ ಪ್ರತಿಪಾದನೆ. ಆದರೆ ಆಡಳಿತ ಕೈಗೆ ಬಂದಾಗ ತಾನೇ ಹೇಳಿದ್ದ ನೀತಿಯನ್ನು ಗಾಳಿಗೆ ತೂರಿತ್ತು.

ರಫೇಲ್ ಯುದ್ಧ ವಿಮಾನ ಖರೀದಿ ಹಗರಣದ ಆರೋಪಗಳಿಂದ ಮೋದಿ ಸರ್ಕಾರವನ್ನು ಸುಪ್ರೀಮ್ ಕೋರ್ಟ್ ಮುಕ್ತಗೊಳಿಸಿದ್ದೂ ರಂಜನ್ ಗೋಗೋಯ್ ಮುಖ್ಯ ನ್ಯಾಯಮೂರ್ತಿ ಆಗಿದ್ದಾಗಲೇ. ಇತ್ತೀಚಿನ ದೆಹಲಿ ಕೋಮು ಗಲಭೆಗಳಲ್ಲಿ ಮುಸಲ್ಮಾನರ ವಿರುದ್ಧ ದ್ವೇಷದ ಭಾಷಣಗಳನ್ನು ಮಾಡಿ ನರಮೇಧವನ್ನು ಪ್ರಚೋದಿಸಿದ ಬಿಜೆಪಿ ಮಂತ್ರಿಗಳು ಮತ್ತು ಪೊಲೀಸ್ ನಿಷ್ಕ್ರಿಯತೆಯನ್ನು ಪ್ರಶ್ನಿಸಿದ್ದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯನ್ನು ರಾತ್ರೋರಾತ್ರಿ ಬೇರೆ ಹೈಕೋರ್ಟಿಗೆ ಎತ್ತಂಗಡಿ ಮಾಡಲಾಯಿತು.

ಪಾರ್ಲಿಮೆಂಟನ್ನು ಕೈವಶ ಮಾಡಿಕೊಂಡ ನಂತರ `ಮೀಡಿಯಾ’ವನ್ನು ಸಾಮ ದಾನ ಭೇದ ದಂಡಪ್ರಯೋಗಿಸಿ ಸಂಪೂರ್ಣವಾಗಿ ಮಣಿಸಿ ಅದರ ಕುತ್ತಿಗೆಗೆ ಪಟ್ಟಿ ಕಟ್ಟಿತು ಮೋದಿ ಸರ್ಕಾರ. ಚುನಾವಣಾ ಆಯೋಗ, ಸಿ.ಎ.ಜಿ.ಗಳನ್ನು ಪಳಗಿಸಿಕೊಳ್ಳಲಾಗಿದೆ.  ಸಿ.ಬಿ.ಐ. ಮತ್ತು ತೆರಿಗೆ ಏಜೆನ್ಸಿಗಳು ತನ್ನ ರಾಜಕೀಯ ವೈರಿಗಳ ಸದೆಬಡಿವ ದೊಣ್ಣೆಗಳು. ಆರಂಭದಲ್ಲಿ ಕಬ್ಬಿಣದ ಕಡಲೆಯಾಗಿದ್ದ ನ್ಯಾಯಾಂಗವನ್ನೂ ಆನಂತರ ಜೀರ್ಣಿಸಿಕೊಂಡಿದೆ ಮೋದಿ ಸರ್ಕಾರ.

ಸ್ವತಂತ್ರ ನ್ಯಾಯಾಂಗ ಅದಕ್ಷ ಮತ್ತು ಜನತಂತ್ರ ವಿರೋಧಿ ಅಧಿಕಾರಸ್ಥರ ಪಾಲಿಗೆ ಎಂದೆಂದಿಗೂ ಗಂಟಲ ಮುಳ್ಳು. ಇಂದಿರಾಗಾಂಧಿ ಕಾಲದಲ್ಲಿ ಕೂಡ ನ್ಯಾಯಾಂಗದ ಒಂದು ವರ್ಗ ಅಧಿಕಾರಸ್ಥರ ಬಾಲಬಡುಕನಾಗಿತ್ತು. ತುರ್ತುಪರಿಸ್ಥಿತಿಯೂ ಸೇರಿದಂತೆ ಇಂದಿರಾ ಅವರ ಕ್ರಮಗಳನ್ನು ಬೆಂಬಲಿಸುವ ನ್ಯಾಯಾಂಗವನ್ನು `ಬದ್ಧತೆಯುಳ್ಳ ನ್ಯಾಯಾಂಗ’ ಎಂದು ಕರೆಯಲಾಗಿತ್ತು. ಈಗ ಅಂತಹ ಅಲಂಕಾರಿಕ ಪದಪುಂಜಗಳ ಹೊರಾವರಣ ಇಲ್ಲ. ಆದರೆ ಒಳತಿರುಳು ಅದೇ ಆಗಿದೆ.

*ಲೇಖಕರು ಹಿರಿಯ ಪತ್ರಕರ್ತರು; ಪ್ರಸ್ತುತ ದೆಹಲಿಯಲ್ಲಿದ್ದುಕೊಂಡೇ ಪತ್ರಿಕೆಗಳು, ವೆಬ್‌ಸೈಟ್‌ಗಳಿಗೆ ಫ್ರೀಲಾನ್ಸ್ ಬರೆಹ ಮತ್ತು ಪುಸ್ತಕಗಳ ಅನುವಾದದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ `ನ್ಯಾಯಪಥ’ ವಾರಪತ್ರಿಕೆಯ ಸಲಹಾ ಸಂಪಾದಕರು.

Leave a Reply

Your email address will not be published.