ಕೇಂದ್ರ ಸರ್ಕಾರದ ಬಜೆಟ್ ಖಾಸಗಿ ವಲಯದ ವೈಭವೀಕರಣ ಜನರ ಬದುಕಿನ ಅಭದ್ರೀಕರಣ

ಪ್ರಸಿದ್ಧ ಆರ್ಥಿಕ ತಜ್ಞೆ ಜಯತಿ ಘೋಷ್ ಅವರೇನೋ ಬಜೆಟ್ಟಿನಲ್ಲಿರುವ ಪ್ರತಿ ಅಂಕಿಯೂ ‘ಸುಳ್ಳು’ ಎಂದು ಹೇಳಿದ್ದಾರೆ. ಹಾಗೆ ಹೇಳಲು ನನಗೆ ಧೈರ್ಯವಿಲ್ಲ. ಆದರೆ ನನಗೆ ಈ ಬಗ್ಗೆ ಅನುಮಾನಗಳಿವೆ.

– ಟಿ.ಆರ್.ಚಂದ್ರಶೇಖರ್

ನಮ್ಮ ಆರ್ಥಿಕತೆಯು ಇಂದು ಎಂದೂ ಕಂಡರಿಯದ ಬಿಕ್ಕಟ್ಟ್ಟು-ಇಕ್ಕಟ್ಟುಗಳನ್ನು ಎದುರಿಸುತ್ತಿದೆ. ಇದು ಕೇವಲ ಜಿಡಿಪಿ ಬೆಳವಣಿಗೆಯ ಕುಸಿತಕ್ಕೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ಸರ್ಕಾರವೇನೋ ವ್ಯಸನದಂತೆ ಐದು ಟ್ರಿಲಿಯನ್ ಡಾಲರ್ ಜಿಡಿಪಿ ಬಗ್ಗೆ, ರೈತರ ವರಮಾನವನ್ನು ದುಪ್ಪಟ್ಟು ಮಾಡುವುದರ ಬಗ್ಗೆ, ಆರ್ಥಿಕ ಪುನಶ್ಚೇತನದ ಬಗ್ಗೆ ಮಾತನಾಡುತ್ತಿದೆ. ಫೆಬ್ರವರಿ 1, 2020ರಂದು ವಿತ್ತಮಂತ್ರಿ ನಿರ್ಮಲ ಸೀತಾರಾಮನ್ ಮಂಡಿಸಿದ 2020-2021 ಸಾಲಿನ ಬಜೆಟ್ಟಿನಲ್ಲಿ ಆರ್ಥಿಕತೆಯ ಪುನಶ್ಚೇತನಕ್ಕೆ ಅಗತ್ಯವಾದ ಯಾವುದೇ ಉತ್ತಮವಾದ ಕ್ರಮಗಳು ಕಂಡುಬರುತ್ತಿಲ್ಲ.

ಮುಕ್ಕಾಲು ಪಾಲು ಅರ್ಥಿಕತಜ್ಞರೆಲ್ಲರೂ ಭಾರತ ಇಂದು ಯಾವುದನ್ನು ಜೆ.ಎಮ್.ಕೇನ್ಸ್ ‘ಸಮಗ್ರ ಬೇಡಿಕೆ’ ಎಂದು ಕರೆಯುತ್ತಿದ್ದನೋ ಅಂತಹ ಬೇಡಿಕೆಯ ಕುಸಿತದ ಪ್ರಕ್ರಿಯೆಯಲ್ಲಿ ಹಾದುಹೋಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಕೇಂದ್ರವು ಇದನ್ನು ಪೂರೈಕೆ ನೆಲೆಯಿಂದ ಪರಿಭಾವಿಸಿಕೊಂಡು (2019-2020ನೆಯ ಸಾಲಿನಿಂದಲೂ) ಆ ದೆಶೆಯಲ್ಲಿ ಪ್ರಯತ್ನಿಸುತ್ತಿದೆ.

ಆರ್ಥಿಕ ಬಿಕ್ಕಟ್ಟಿನ ಪರಿಹಾರಕ್ಕೆ ಅದು ತೆರಿಗೆ ವಿನಾಯಿತಿಯ ಮೊರೆ ಹೋಗಿದೆ, ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣದ ಕ್ರಮವನ್ನು ಅಳವಡಿಸಿಕೊಂಡಿದೆ. ದೊಡ್ಡ ಪ್ರಮಾಣದಲ್ಲಿ ಡಿಸ್‍ಇನ್‍ವೆಸ್ಟ್‍ಮೆಂಟ್ ಯೋಜನೆಯನ್ನು ಹಮ್ಮಿಕೊಂಡಿದೆ.

ಪುನಶ್ಚೇತನ ಏಕೆ ಸಾಧ್ಯವಿಲ್ಲ?

ಇಂದು ನಮ್ಮ ಮುಂದಿರುವ ಆರ್ಥಿಕ ಬಿಕ್ಕಟ್ಟಿನ ಪ್ರಶ್ನೆಗಳು: ಜಿಡಿಪಿ ಬೆಳವಣಿಗೆಯ ಸತತ ಕುಸಿತ, ಕೃಷಿ ಕ್ಷೇತ್ರದ ಕುಂಟಿತ ಬೆಳವಣಿಗೆ, ನಿಧಾನವಾಗಿ ಆದರೆ ಆತಂಕಕಾರಿಯಾಗಿ ಏರಿಕೆಯಾಗುತ್ತಿರುವ ಬೆಲೆ, ಭೂತಾಕಾರವಾಗಿ ಬೆಳೆಯುತ್ತಿರುವ ನಿರುದ್ಯೋಗ, ನೆಲೆಕಚ್ಚಿರುವ ರಫ್ತು ವ್ಯಾಪಾರ, ರೆವಿನ್ಯೂ ಸಂಪನ್ಮೂಲದಲ್ಲಿನ ತೀವ್ರ ಕೊರತೆ, ವೆಲ್ಥ್ ಕ್ರಿಯೇಟರುಗಳ ವೈಭವೀಕರಣ ಮುಂತಾದವು.  ಈ ಕೆಳಕಂಡ ಕಾರಣಗಳಿಗೆ ಬಜೆಟ್ಟಿನಿಂದ ಆರ್ಥಿಕ ಪುನಶ್ಚೇತನ ಸಾದ್ಯವಿಲ್ಲ.

  1. 2019-2020ನೆಯ ಸಾಲಿನಲ್ಲಿ ಒಟ್ಟು ವೆಚ್ಚವು ಅಂದಿನ ಜಿಡಿಪಿಯ ಶೇ. 13.63 ರಷ್ಟಿತ್ತು. ಆದರೆ 2020-2021ನೆಯ ಸಾಲಿನಲ್ಲಿ ಇದು ಶೇ. 13.53ಕ್ಕಿಳಿದಿದೆ. ಬೇಡಿಕೆ ಹೇಗೆ ಏರಿಕೆಯಗುತ್ತದೆ?
  2. ಗ್ರಾಮೀಣ ದುಡಿಮೆಗಾರರಿಗೆ ಜೀವದ್ರವವಾಗಿರುವ ಎಮ್‍ಜಿಎನ್ ಆರ್‍ಈಜಿಎ ಕಾರ್ಯಕ್ರಮದ 2019-2020ರಲ್ಲಿನ ವೆಚ್ಚ ರೂ.71000 ಕೋಟಿ. ಆದರೆ 2020-2021ರ ಬಜೆಟ್ಟಿನಲ್ಲಿ ನೀಡಿರುವ ಅನುದಾನ ರೂ.61000 ಕೋಟಿ. ಪುನಶ್ಚೇತನ ಹೇಗೆ ಸಾಧ್ಯ?
  3. ಕೇಂದ್ರವು ಕಳೆದ ವರ್ಷದ ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ ಖಾಸಗಿ ವಲಯಕ್ಕೆ ನೀಡಿದ್ದ ತೆರಿಗೆ ವಿನಾಯತಿ ರೂ.1.45 ಲಕ್ಷ ಕೋಟಿ. ಅದರಿಂದ ಬಂಡವಾಳ ಹೂಡಿಕೆಯಲ್ಲಿ ಹೇಳಿಕೊಳ್ಳುವಂತಹ ಏರಿಕೆ ಕಂಡುಬರಲಿಲ್ಲ.
  4. ಇಂದು ಬಜೆಟ್ಟಿನ ಒಟ್ಟು ವೆಚ್ಚದಲ್ಲಿ ಶೇ.23ರಷ್ಟು ಬಡ್ಡಿ ಪಾವತಿಗೆ ಹೋಗುತ್ತದೆ. ಅಭಿವೃದ್ಧಿಗೆ ದೊರೆಯುವ ಬಂಡವಾಳ ಕಡಿಮೆ. ಪುನಶ್ಚೇತನ ಕಷ್ಟಸಾಧ್ಯ.
  5. ಆರ್ಥಿಕ ಮೂಲಸೌಕರ್ಯದ ಮೇಲೆ ಮುಂದಿನ ಐದು ವರ್ಷಗಳಲ್ಲಿ ರೂ.100 ಲಕ್ಷ ಕೋಟಿ ವಿನಿಯೋಗಿಸುವ ಯೋಜನೆ ಸರ್ಕಾರಕ್ಕಿದೆ. ಆದರೆ ಇದು ಅಲ್ಪಾವಧಿಯಲ್ಲಿ ಉದ್ಯೋಗಗಳನ್ನು ನಿರ್ಮಿಸಲಾರದು.
  6. ದೇಶದಲ್ಲಿನ ಮಾಸಿಕ ತಲಾ ಅನುಭೋಗ ವೆಚ್ಚವು 2011-12ರಲ್ಲಿ ರೂ.1500 ರಷ್ಟಿದ್ದುದು 2017-18ರಲ್ಲಿ ರೂ.1440ಕ್ಕಿಳಿದಿದೆ.
  7. ಕೃಷಿ ಕ್ಷೇತ್ರದ ಪುನಶ್ಚೇತನಕ್ಕೆ ವಿತ್ತಮಂತ್ರಿ ಅವರು 16 ಅಂಶಗಳ ಕಾರ್ಯಯೋಜನೆಯನ್ನು ಬಜೆಟ್ಟಿನಲ್ಲಿ ಪ್ರಕಟಿಸಿದ್ದಾರೆ. ಅದರ ಎರಡು ಕಾರ್ಯಕ್ರಮಗಳು: ಕೃಷಿ ರೈಲು ಮತ್ತು ಕೃಷಿ ಉಡಾನ್(ವಿಮಾನ). ಬಜೆಟ್ಟಿನ ವಿಮರ್ಶಕರು ಇದನ್ನು ವಿತ್ತಮಂತ್ರಿ ಕೇವಲ ‘ರೈಲು ಬಿಡುತ್ತಿದ್ದಾರೆ’ ಎಂದು ಟೀಕಿಸುತ್ತಿದ್ದಾರೆ. ಈ 16 ಅಂಶಗಳ ಕಾರ್ಯಯೋಜನೆಯಲ್ಲಿ ದೇಶದ ಒಟ್ಟು ಶೇ.82 ರಷ್ಟಿರುವ ಅತಿಸಣ್ಣ-ಸಣ್ಣ ರೈತರ ಸಮಸ್ಯೆಗಳಿಗೆ ಪರಿಹಾರಗಳಿಲ್ಲ.
  8. ಕೇಂದ್ರವು 2019-2020ರಲ್ಲಿನ ಬಜೆಟ್ಟಿನಲ್ಲಿ ವಿವಿಧ ಇಲಾಖೆಗಳಿಗೆ-ವಿವಿಧ ಯೋಜನೆಗಳಿಗೆ ನೀಡಿದ್ದ ಅನುದಾನಗಳನ್ನು ಕಡಿತಗೊಳಿಸಿದೆ. ಉದಾ: 2019-2020ರ ಬಜೆಟ್ಟಿನಲ್ಲಿ ನಿಗದಿಪಡಿಸಿದ್ದ ಒಟ್ಟು ವೆಚ್ಚ ರೂ.27.86 ಲಕ್ಷ ಕೋಟಿ. ಆದರೆ ಪರಿಷ್ಕøತ ವೆಚ್ಚದ ಅಂದಾಜು ರೂ.26.98 ಲಕ್ಷ ಕೋಟಿ. ಇದೇ ರೀತಿ ರೆವಿನ್ಯೂ ಸ್ವೀಕೃತಿ ಬಜೆಟ್ ಅಂದಾಜು ರೂ.19.62 ಲಕ್ಷ ಕೋಟಿ. ವಾಸ್ತವವಾಗಿ ರೆವಿನ್ಯೂ ಸಂಗ್ರಹ ರೂ.18.50 ಲಕ್ಷ ಕೋಟಿ. ಹೀಗೆ 2019-2020ರ ಬಜೆಟ್ ಸಾಧನೆ ನಕಾರಾತ್ಮಕವಾಗಿದೆ. ಈ ಹಿನ್ನೆಲೆಯಲ್ಲಿ 2020-2021ರ ಬಜೆಟ್ಟಿನಲ್ಲಿ ಕಳೆದ ವರ್ಷದ ವೈಫಲ್ಯಗಳನ್ನು ತುಂಬಿಕೊಳ್ಳುವ ಕ್ರಮಗಳು ಕಾಣುತ್ತಿಲ್ಲ. ಪುನಶ್ಚೇತನ ಹೇಗೆ ಸಾಧ್ಯ!
  9. ಆರ್ಥಿಕ ಬೆಳವಣಿಗೆ-ಅಭಿವೃದ್ಧಿ ಎನ್ನುವುದು ಕೇವಲ ಬಂಡವಾಳ ವಿನಿಯೋಜನೆಯ ಸಂಗತಿ ಮಾತ್ರವಲ್ಲ. ಖಾಸಗಿವಲಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಳೆದ ವರ್ಷ ಕಾರ್ಪೋರೇಟ್ ವರಮಾನ ತೆರಿಗೆಯನ್ನು ತೀವ್ರ ಕಡಿತಗೊಳಿಸಿ ರೂ.1.45 ಲಕ್ಷ ಕೋಟಿ ತೆರಿಗೆ ವಿನಾಯಿತಿ ನೀಡಲಾಯಿತು. ಪ್ರಸ್ತುತ ಸಾಲಿನಲ್ಲಿ ನೀಡಿರುವ ತೆರಿಗೆ ವಿನಾಯಿತಿ (ವೈಯಕ್ತಿಕ ತೆರಿಗೆ ದರಗಳಲ್ಲಿ ಕಡಿತ + ಡಿವಿಡೆಂಡ್ ತೆರಿಗೆಯಲ್ಲಿನ ವಿನಾಯಿತಿ) ಸುಮಾರು  ರೂ.65000 ಕೋಟಿ. ಈ ಕ್ರಮಗಳಿಂದ ಖಾಸಗಿ ವಲಯದ ಬಂಡವಾಳ ಹೂಡಿಕೆಯೇನು ಉತ್ತಮವಾಗಲಿಲ್ಲ. ಆರ್ಥಿಕ ವಾತಾವರಣ, ನಿರೀಕ್ಷಿಸಿದ ಲಾಭದ ಪ್ರಮಾಣ, ಬೇಡಿಕೆ ಸ್ಥಿತಿ ಉತ್ತಮವಾಗಿಲ್ಲದಿದ್ದರೆ ಖಾಸಗಿ ವಲಯವು ಬಂಡವಾಳ ಹೂಡಲು ಮುಂದೆ ಬರುವುದಿಲ್ಲ. ಇಂದು ಭಾರತದಲ್ಲಿ ಇಂತಹ ಸ್ಥಿತಿಯಿದೆ. ಹೀಗಾಗಿ ಬಂಡವಾಳ ಹೂಡಿಕೆ ನೆಲಕಚ್ಚಿದೆ. ಬಂಡವಾಳ ಹೂಡಿಕೆಯು 2013-14ರಲ್ಲಿ ಜಿಡಿಪಿಯ ಶೇ.34 ರಷ್ಟಿದ್ದುದು 2019-2020ರಲ್ಲಿ ಶೇ.29ಕ್ಕಿಳಿದಿದೆ. 
  10. ಕೇಂದ್ರದ 2018-19ರ ಬಂಡವಾಳ ವೆಚ್ಚವು ಅಂದಿನ ಬಜೆಟ್ಟಿನ ಒಟ್ಟು ವೆಚ್ಚದ ಶೇ. 13.29 ರಷ್ಟಿತ್ತು. ಆದರೆ 2020-2021ರಲ್ಲಿ ಇದು ಶೇ. 13.25 ಕ್ಕೆ ಇಳಿದಿದೆ.

ಈ ಎಲ್ಲ ವಿವರಗಳು ಆರ್ಥಿಕ ಪುನಶ್ಚೇತನಕ್ಕೆ ಬಜೆಟ್ ಕ್ರಮಗಳು ಪೂರಕವಾಗಿಲ್ಲ ಎಂಬುದನ್ನು ಸೂಚಿಸುತ್ತವೆ. ಇದಕ್ಕೆ ಪ್ರಧಾನ ಕಾರಣ ಬೇಡಿಕೆಯಲ್ಲಿನ ಕುಸಿತ. ಬಜೆಟ್ಟಿನಲ್ಲಿ ಇದನ್ನು ಗಮನದಲ್ಲಿಟ್ಟುಕೊಂಡು ಕ್ರಮಗಳನ್ನು ರೂಪಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರವು ಆರ್ಥಿಕ ಕುಸಿತವನ್ನು ಅರ್ಥ ಮಾಡಿಕೊಂಡಿರುವ ವಿನ್ಯಾಸವೇ ಭಿನ್ನವಾಗಿದೆ. ಈ ಬಜೆಟ್ಟಿನಲ್ಲಿ ಉದ್ಯೋಗ ನಿರ್ಮಾಣವನ್ನು ಆದ್ಯತೆಯನ್ನಾಗಿ ಮಾಡಿಕೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕಾಗಿತ್ತು. ಆದರೆ ಇದು ಸಾಧ್ಯವಾಗಿಲ್ಲ.

ಖಾಸಗಿವಲಯ ಮತ್ತು ರಾಜಪ್ರಭುತ್ವದ ವೈಭವೀಕರಣ

ಇಂದು ನಾವು ಪ್ರಜಾಪ್ರಭುತ್ವ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಹಕ್ಕು ಪ್ರಣೀತ ಅಭಿವೃದ್ಧಿ ಪ್ರಣಾಳಿಕೆಯನ್ನು ನೆಮ್ಮಿಕೊಂಡಿದ್ದೇವೆ (ಹಕ್ಕುಗಳು ನಮ್ಮ ಭಾರತೀಯ ಪರಂಪರೆಯ ಭಾಗವಲ್ಲ ಎಂದು ಜಸ್ಟೀಸ್ ಎಂ.ರಾಮಾಜೋಯಿಸ್ ಹೇಳುತ್ತಿದ್ದರೆ ವಿತ್ತಮಂತ್ರ್ರಿ ಹಾಗೂ ಪ್ರಧಾನಮಂತ್ರಿ ಅವರು ಹಕ್ಕುಗಳಿಗಿಂತ ಇಂದು ಕರ್ತವ್ಯಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡುತ್ತಿದ್ದಾರೆ). ಆದರೆ 2019-2020ರ ಆರ್ಥಿಕ ಸಮೀಕ್ಷೆಯಲ್ಲಿ ರಾಜಪ್ರಭುತ್ವವನ್ನು ಮತ್ತು ಅಗೋಚರ ಹಸ್ತ (ಮಾರುಕಟ್ಟೆ ಶಕ್ತಿ)ಗಳ ಚರ್ಚೆ ಮಾಡಲಾಗಿದೆ.

ಭಾರತದ ಪ್ರಾಚೀನ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ ಭಾರತದ ಚರಿತ್ರೆಯಲ್ಲಿ ಅಗೋಚರ ಹಸ್ತವು ಅಭಿವೃದ್ಧಿಯ ಮೂಲಶಕ್ತಿಯಾಗಿತ್ತು ಎಂದು ಸಮೀಕ್ಷೆಯ ಕರ್ತೃ ಕೃಷ್ಣಮೂರ್ತಿ ಸುಬ್ರಮಣಿಯನ್ ಬರೆಯುತ್ತಾರೆ (ಈ ಸಂಶೋಧನೆಯ ಮೂಲದ ವಿವರವನ್ನು ಅವರು ನೀಡಿಲ್ಲ). ಚರಿತ್ರೆಯಲ್ಲಿನ ರಾಜಪ್ರಭುತ್ವದಲ್ಲಿ ಮಹಿಳೆಯರ, ದಲಿತರ, ಆದಿವಾಸಿಗಳ, ದುಡಿಮೆಗಾರರ ಬದುಕು ಹೇಗಿತ್ತು ಎಂಬುದರ ಬಗ್ಗೆ ಅವರು ಚರ್ಚೆ ಮಾಡುವುದಿಲ್ಲ. ಚಾಣಕ್ಯನ ಅರ್ಥಶಾಸ್ತ್ರದ ಉಲ್ಲೇಖ ಸಮೀಕ್ಷೆಯಲ್ಲಿದೆ. ಆದರೆ ಅವನ ಕಾಲದ ಸಾಮ್ರಾಜ್ಯದಲ್ಲಿ ರೈತರ, ಕಾರ್ಮಿಕರ, ಮಹಿಳೆಯರ, ದಲಿತರ ಬದುಕು ಹೇಗಿತ್ತು ಎಂಬುದರ ಬಗ್ಗೆ ಅದು ಮಾತನಾಡುವುದಿಲ್ಲ.

ಪ್ರಾಚೀನ ಭಾರತದ ಮಾರುಕಟ್ಟೆ ಚಿಂತನೆಯು 1991ರಲ್ಲಿ ನಾವು ಅಳವಡಿಸಿಕೊಂಡ ಉದಾರವಾದಿ-ಮಾರ್ಕೆಟ್ಟೀಕರಣ ನೀತಿಗೆ ಸಂವಾದಿಯಾಗಿದೆ ಎಂದು ಸಮೀಕ್ಷೆ ಹೇಳುತ್ತದೆ. ಇಂದು ನಾವು ರಾಜಪ್ರಭುತ್ವದಲ್ಲಿ ಬದುಕುತ್ತಿಲ್ಲ. ಆದರೆ ಅಂದಿನ ರಾಜಪ್ರಭುತ್ವದಲ್ಲಿ ದುಡಿಮೆಗಾರರ, ದಲಿತರ, ಮಹಿಳೆಯರ ಬದುಕು ಯಾವ ದುಸ್ಥಿತಿಯಲ್ಲಿತ್ತು ಎಂಬುದರ ಬಗ್ಗೆ ನಮಗೆ ಅರಿವಿದೆ. ಇದನ್ನು ಇಂದು ಅನುಸರಿಸುವುದು ಎಷ್ಟರಮಟ್ಟಿಗೆ ಸೂಕ್ತ?

ಹೀಗೆ ಸಮೀಕ್ಷೆಯು ರಾಜಪ್ರಭುತ್ವ ಎಂಬ ನುಡಿಯನ್ನು ಬಳಸದಿದ್ದರೂ ಅದನ್ನು ವೈಭವೀಕರಿಸುತ್ತಿದ್ದರೆ ಮತ್ತೊಂದು ಕಡೆ ಪ್ರಧಾನಮಂತ್ರಿ ಹಾಗೂ ವಿತ್ತಮಂತ್ರಿ ‘ವೆಲ್ಥ್ ಕ್ರಿಯೇಟರ್ಸ್’ಗಳ ವೈಭವೀಕರಣದಲ್ಲಿ ತೊಡಗಿದ್ದಾರೆ. ಅಭಿವೃದ್ಧಿಯ ಮೂಲ ಈ ವೆಲ್ಥ್ ಕ್ರಿಯೇಟರುಗಳು ಎಂಬುದು ಇವರ ಅಭಿಮತ. ‘ವೆಲ್ಥ್ ಕ್ರಿಯೇಟರುಗಳು ವೆಲ್ಥ್ ಕ್ರಿಯೆಟ್ ಮಾಡದಿದ್ದರೆ ಬಡವರಿಗೆ ಹಂಚಲು ವೆಲ್ಥೇ ಇರುವುದಿಲ್ಲ’ ಎಂದು ಪ್ರಧಾನಮಂತ್ರಿ ಹೇಳುತ್ತಿದ್ದಾರೆ (ನೋಡಿ: ಪ್ರಧಾನಮಂತ್ರಿಗಳ 2019ರ ಸ್ವಾತಂತ್ರ್ಯ ದಿನಾಚರಣೆಯ ಕೆಂಪುಕೋಟೆ ಭಾಷಣ). ವಿತ್ತಮಂತ್ರಿ ವೆಲ್ಥ್ ಕ್ರಿಯೇಟರುಗಳನ್ನು ಅನುಮಾನದಿಂದ ನೋಡಬಾರದು, ಅವರನ್ನು ಗೌರವಿಸಬೇಕು ಎಂದು ಪ್ರವಚನ ಮಾಡುತ್ತಿದ್ದಾರೆ. ಬಜೆಟ್ಟಿನ (2020-2021) ಭಾಷಣದಲ್ಲಾಗಲಿ ಅಥವಾ ಆರ್ಥಿಕ ಸಮೀಕ್ಷೆಯಲ್ಲಾಗಲಿ (2019-2020) ಆರ್ಥಿಕತೆಯ ಹಾಗೂ ವೆಲ್ಥ್ ಕ್ರೀಯೇಶನ್ನಿನ ಮೂಲದ್ರವ್ಯವಾಗಿರುವ ದೇಶದ 48 ಕೋಟಿ ದುಡಿಮೆಗಾರರ ಬಗ್ಗೆಯಾಗಲಿ, ಅವರಲ್ಲಿನ 14.4 ಕೋಟಿ ಭೂರಹಿತ ದಿನಗೂಲಿ ದುಡಿಮೆಗಾರರ ಬಗ್ಗೆಯಾಗಲಿ ಅಥವಾ 44 ಕೋಟಿ ಅನಕ್ಷರಸ್ಥರ ಬಗ್ಗೆಯಾಗಲಿ 20.13 ಕೋಟಿ ದಲಿತರ ಮತ್ತು 10.45 ಕೋಟಿ ಆದಿವಾಸಿಗಳ ಬದುಕಿನ ಬಗ್ಗೆಯಾಗಲಿ ಅಪ್ಪಿತಪ್ಪಿಯೂ ಉಲ್ಲೇಖವಾಗಲಿ ಅಥವಾ ಮಾತನಾಡಿದ್ದಾಗಲಿ ಕಂಡುಬರುವುದಿಲ್ಲ (ಅಂಕಿಅಂಶಗಳ ಮೂಲ: ಜನಗಣತಿ 2011).

ವೆಲ್ಥ್ ಕ್ರಿಯೇಟರ್ ವರ್ಗದ (ಕ್ಯಾಪಿಟಲ್) ಬಗ್ಗೆ ಮಾತನಾಡುವ ಬಜೆಟ್‍ನಲ್ಲಿ, ಆರ್ಥಿಕ ಸಮೀಕ್ಷೆಯಲ್ಲಿ ಹಾಗೂ ಪ್ರಧಾನಮಂತ್ರಿ ಅವರ ವೆಲ್ಥ್ ಕ್ರಿಯೇಶನ್ ಭಾಷಣದಲ್ಲಿ ಏಕೆ ದುಡಿಯುವ ವರ್ಗದ (ಲೇಬರ್) ಪಾತ್ರವನ್ನು ಗುರುತಿಸುವುದಿಲ್ಲ? ಇವರು ಮಾತನಾಡುವ ವೆಲ್ಥ್ ಕ್ರಿಯೇಟರುಗಳು ದೇಶದಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿದ್ದರೆ ದುಡಿಯುವ ವರ್ಗವು ಕೋಟಿ ಕೋಟಿಯಿದ್ದಾರೆ. ಪ್ರಧಾನಮಂತ್ರಿ ಮಾತನಾಡುವ ವೆಲ್ಥ್ ಕ್ರಿಯೆಟರುಗಳಲ್ಲಿ ‘ಮಹಿಳೆ’ಯರಿಲ್ಲ. ಆದರೆ ದುಡಿಯವ ವರ್ಗದಲ್ಲಿ ಕೋಟಿಗಟ್ಟಲೆ ಮಹಿಳೆಯರಿದ್ದಾರೆ. ಇವರು ಬೆವರು-ಕಣ್ಣೀರು-ರಕ್ತ ಹರಿಸಿ ನೀಡುವ ದುಡಿಮೆಯು ನಮ್ಮ ಆರ್ಥಿಕ ಅಭಿವೃದ್ಧಿಯ ಮೂಲದ್ರವ್ಯವಾಗಿದೆ.

ಬಜೆಟ್ಟಿನಲ್ಲಿ ಮಹಿಳಾ ಬಜೆಟ್ ಎಂಬ ಶಿರ್ಷಿಕೆಯೊಂದಿದೆ. ಇದರಲ್ಲಿ ಕೇಂದ್ರದ ಹತ್ತಾರು ಇಲಾಖೆಗಳ ಮಹಿಳಾ ಕೇಂದ್ರ್ರಿತ ಕಾರ್ಯಕ್ರಮಗಳನ್ನೆಲ್ಲ ಒಟ್ಟುಗೂಡಿಸಿ ಮಹಿಳಾ ಬಜೆಟ್ ಎಂಬುದನ್ನು ಲೆಕ್ಕಹಾಕಲಾಗಿದೆ. ಆದರೆ ನಿರ್ದಿಷ್ಟವಾಗಿ ಮಹಿಳೆಯರ ಸ್ವಾಯತ್ತತೆಯ ಸಮಸ್ಯೆಗಳನ್ನು ಇಲ್ಲಿ ಎದುರಿಸಿರುವುದು ಕಂಡುಬರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ 2019-2020ರ ಪರಿಷ್ಕೃತ ಬಜೆಟ್‍ನಲ್ಲಿ ಮಹಿಳಾ ಬಜೆಟ್ ರೂ.142813 ಕೋಟಿ. ಇದು 2020-2021ರಲ್ಲಿ ರೂ.143461 ಕೋಟಿಗೇರಿದೆ (ಶೇ. 0.45 ಏರಿಕೆ). ಆದರೆ ಮಹಿಳಾ ಬಜೆಟ್ 2019-2020ರಲ್ಲಿ ಬಜೆಟ್ಟಿನ ಒಟ್ಟು ವೆಚ್ಚದಲ್ಲಿ ಶೇ. 5.29 ರಷ್ಟಾಗಿದೆ. ಆದರೆ 2020-2021ರಲ್ಲಿ ಇದು ಶೇ. 4.71ಕ್ಕಿಳಿದಿದೆ. ಹೀಗೆ ಬಜೆಟ್ಟಿನ ಯಾವುದೇ ಬಾಬ್ತನ್ನು ತೆಗೆದುಕೊಂಡರೂ ವೆಚ್ಚದಲ್ಲಿ ಕಡಿತ ಕಂಡುಬರುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ‘ವೆಲ್ಥ್’ ಎಂದರೇನು? ಅರ್ಥಶಾಸ್ತ್ರದಲ್ಲಿ ಜನರ ಬಯಕೆಯನ್ನು ಪೂರೈಸುವ ಉತ್ಪಾದಿಸಿದ ಸರಕು-ಸಾಮಗ್ರಿ-ಸೇವೆಗಳನ್ನು ‘ವೆಲ್ಥ್’ ಎಂದು ಕರೆಯಲಾಗಿದೆ. ಈ ಕ್ರಿಯೆಯಲ್ಲಿ ಬಂಡವಾಳದ ಜೊತೆಯಲ್ಲಿ ಕಾರ್ಮಿಕ ಶಕ್ತಿಯ ಪಾತ್ರವೂ ಇರುತ್ತದೆ. ದುಡಿಯುವ ವರ್ಗಕ್ಕೆ ಪ್ರತಿಯಾಗಿ ಬಂಡವಳಿಗರನ್ನು ಪೋಷಿಸಿ ಪ್ರೋತ್ಸಾಹಿಸುವುದರ ಮೂಲಕ ಆರ್ಥಿಕ ಸಮೃದ್ಧಿಯನ್ನು ಸಾಧಿಸಿಕೊಳ್ಳುವುದು ಸಾಧ್ಯವಿಲ್ಲ (ವೆಲ್ಥ್ ಕ್ರಿಯೇಶನ್ = ಬಂಡವಾಳ + ಶ್ರಮಶಕ್ತಿ + ನೈಸರ್ಗಿಕ ಸಂಪನ್ಮೂಲ).

ವೆಲ್ಥ್ ಕ್ರಿಯೆಟರುಗಳ ಬಗ್ಗೆ ಗೌರವವಿರಬೇಕು, ಸರಿ. ಆದರೆ ದುಡಿಯುವ ವರ್ಗದ ಬಗ್ಗೆಯೂ ಸಮಾಜ-ಸರ್ಕಾರ ಗೌರವವನ್ನು ಹೊಂದಿರಬೇಕು. ಇದಕ್ಕೆ ಪ್ರತಿಯಾಗಿ ಇಂದು ಕಾರ್ಮಿಕ ವರ್ಗವನ್ನು, ಅನಕ್ಷರಸ್ಥರನ್ನು, ಸಣ್ಣ-ಪುಟ್ಟ ಕೆಲಸ ಕಾರ್ಯ ಮಾಡುವುದರ ಮೂಲಕ ಕೂಲಿ ಸಂಪಾದನೆ ಮಾಡಿಕೊಳ್ಳುತ್ತಿರುವವರನ್ನು ಆಳುವ ವರ್ಗದ ಜನರು ಅಪಹಾಸ್ಯ ಮಾಡುತ್ತಿದ್ದಾರೆ, ಹೀಯಾಳಿಸುತ್ತಿದ್ದಾರೆ ಮತ್ತು ಅವರ ಬಗ್ಗೆ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಆರ್ಥಿಕತೆಯಲ್ಲಿ ಎರಡೂ ವರ್ಗಗಳ ಪಾತ್ರ ಸರಿಸಮ. ಇದನ್ನು ಇಂದು ನಮ್ಮ ಸರ್ಕಾರ ಮರೆತಂತೆ ಕಾಣುತ್ತದೆ. ವಿತ್ತ ಮಂತ್ರಿ, ಪ್ರಧಾನಮಂತ್ರಿ ಮತ್ತು ಆರ್ಥಿಕ ಸಮೀಕ್ಷೆಯ ಕರ್ತೃ ವೆಲ್ಥ್ ಕ್ರಿಯೇಶನ್ ಪ್ರಕ್ರಿಯೆಯಲ್ಲಿನ ಕಾರ್ಮಿಕ ಶಕ್ತಿಯ ಪಾತ್ರವನ್ನು ಗುರುತಿಸುತ್ತಿಲ್ಲ.

ಸಾಮಾಜಿಕ ವಲಯದ ನಿರ್ಲಕ್ಷ್ಯ

ಶಿಕ್ಷಣ, ಆರೋಗ್ಯ, ಮಕ್ಕಳು ಮತ್ತು ಮಹಿಳೆ, ಕುಡಿಯುವ ನೀರು, ಶೌಚಾಲಯ, ವಸತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮುಂತಾದವುಗಳನ್ನು ‘ಸಾಮಾಜಿಕ ವಲಯ’ ಎಂದು ಕರೆಯಲಾಗಿದೆ. ಈ ವಲಯಕ್ಕೆ ಬಜೆಟ್ಟಿನಲ್ಲಿ ನೀಡುತ್ತಿರುವ ಅನುದಾನವು ಕಡಿಮೆಯಾಗುತ್ತಿದೆ. ಪ್ರಸ್ತುತ ವರ್ಷ ಬಜೆಟ್ಟಿನಲ್ಲಿ ನೀಡಿರುವ ಅನುದಾನವು ರೂ.302322 ಕೋಟಿ. ಇದು ಬಜೆಟ್ಟಿನ ಒಟ್ಟು ವೆಚ್ಚದ ಶೇ.9.93 ರಷ್ಟಾಗುತ್ತದೆ. ಆದರೆ ಇದು 2019-2020ರ ಪರಿಷ್ಕøತ ಅಂದಾಜಿನ ಪ್ರಕಾರ ಇದು ಶೇ.10.17 ರಷ್ಟಾಗಿತ್ತು. 2018-19ರಲ್ಲಿ ಒಟ್ಟು ಬಜೆಟ್ ವೆಚ್ಚದಲ್ಲಿ ಸಾಮಾಜಿಕ ವಲಯದ ನಿಜವೆಚ್ಚವು ಶೇ.11.07ರಷ್ಟಿತ್ತು. ಅಂದರೆ ಸಾಮಾಜಿಕ ವಲಯದ ಅನುದಾನ ಕಡಿಮೆಯಾಗುತ್ತಾ ನಡೆದಿದೆ. ಜನರ ಬದುಕಿನ ದೃಷ್ಟಿಯಿಂದ ಸಾಮಾಜಿಕ ವಲಯದ ಮೇಲಿನ ಅನುದಾನದ ಪಾತ್ರ ಅತ್ಯಂತ ಮಹತ್ವವಾದುದು. ಸಾಮಾಜಿಕ ವಲಯದ ಮೇಲಿನ ವೆಚ್ಚವು 2020-2021ರ ಜಿಡಿಪಿಯ (ಪ್ರೊಜೆಕ್ಟೆಡ್) ಶೇ.1.34 ರಷ್ಟಾಗುತ್ತದೆ.

ಅತ್ಯಂತ ವಿಷಾದದ ಸಂಗತಿಯೆಂದರೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ನೀಡಿರುವ 2020-2021ರ ಒಟ್ಟು ಬಜೆಟ್ ಅನುದಾನ ರೂ.124856 ಕೋಟಿ. ಇದು 2020-2021ರ ಪ್ರೊಜೆಕ್ಟೆಡ್ ಜಿಡಿಪಿಯ ಶೇ.0.55 ರಷ್ಟಾಗುತ್ತದೆ. ಇದು ಜಿಡಿಪಿಯ ಕನಿಷ್ಟ ಶೇ.5 ರಷ್ಟಿರಬೇಕು ಎಂಬುದು ತಜ್ಞರ ಅಭಿಪ್ರಾಯ. ಆದರೆ ಇದು ಶೇ. 1 ರಷ್ಟೂ ಆಗುತ್ತಿಲ್ಲ!

ಈ ಬಜೆಟ್ಟಿನಲ್ಲಿ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಐದು ಟ್ರಿಲಿಯನ್ ಡಾಲರ್ ಜಿಡಿಪಿ ಬಗ್ಗೆ ಚರ್ಚೆ ಮಾಡಲಾಗಿದೆ. ವಿತ್ತ ಮಂತ್ರಿಗಳು ಇದನ್ನು ಮಂತ್ರದಂತೆ ಜಪಿಸುತ್ತಿದ್ದಾರೆ. ಈ ಬಗೆಯ ಮಹತ್ವಾಕಾಂಕ್ಷೆ ಇರಬೇಕು. ಆದರೆ ನಮ್ಮ ಈಗಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಇದು ಸಾಧ್ಯವೇ ಎಂಬುದನ್ನು ಪರಿಗಣಿಸಬೇಕಾಗುತ್ತದೆ. ವರಮಾನ ಮತ್ತು ಸಂಪತ್ತು ಅಭಿವೃದ್ಧಿಯ ಸಾಧನವೇ ವಿನಾ ಅದರ ಸಾಧ್ಯವಲ್ಲ ಎಂದು ಅಮತ್ರ್ಯಸೆನ್ ಮತ್ತೆ ಮತ್ತೆ ಹೇಳುತ್ತಿದ್ದಾರೆ. ಈ ಬಜೆಟ್ಟು ಆರ್ಥಿಕ ಸಮೃದ್ಧಿಯ ಬಗ್ಗೆ ಮಾತನಾಡುತ್ತಿದೆಯೇ ವಿನಾ ಜನರ ಬದುಕಿನ ಸಮೃದ್ಧಿಯ ಬಗ್ಗೆ ಮಾತನಾಡುವುದಿಲ್ಲ.

ಉದಾ: ಬಜೆಟ್ಟಿನಲ್ಲಿ ವಿತ್ತಮಂತ್ರಿ ಆಯ್ದ ಹಿಂದುಳಿದ ಜಿಲ್ಲೆಗಳ ಜಿಲ್ಲಾ ಆಸ್ಪತ್ರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ಅಭಿವೃದ್ಧಿಪಡಿಸುವುದಾಗಿ ಹೇಳುತ್ತಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲಿ ಖಾಸಗೀಕರಣ ಸರಿ. ಆದರೆ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಖಾಸಗೀಕರಣವು ಕೇಂದ್ರ ಸರ್ಕಾರ ಹೇಳುವ ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಮಂತ್ರಕ್ಕೆ ವಿರುದ್ಧವಾದುದಾಗಿದೆ. ಈ ಬಗೆಯ ಮಾದರಿಯನ್ನು ಅನುಸರಿಸುತ್ತಿರುವ ರಾಜ್ಯಗಳಲ್ಲಿ ಇದು ವಿಫಲವಾಗಿರುವ ನಿದರ್ಶನ ನಮ್ಮ ಮುಂದಿದೆ.

 

ಕ್ರ.ಸಂ ಬಜೆಟ್ ಸೂಚಿಗಳು     2018-19    ನಿಜ ವೆಚ್ಚ       2019-2020       ಪರಿಷ್ಕತ ಅಂದಾಜು 2020-2021   ಬಜೆಟ್ ಅಂದಾಜು
1 ರೆವಿನ್ಯೂ ಸ್ವೀಕೃತಿ 1552916 1850101 2020926
2 ತೆರಿಗೆ ಸ್ವೀಕೃತಿ 1317211 1504587 1635909
3 ತೆರಿಗೇತರ ಸ್ವೀಕೃತಿ 235705 345514 385017
4 ಬಂಡವಾಳ ಸ್ವೀಕೃತಿ 762197 648451 1021304
ಇದರಲ್ಲಿ ಮಾರುಕಟ್ಟೆ ಸಾಲ 649418 766846 796337
5 ಒಟ್ಟು ವೆಚ್ಚ 2315113 2698552 3042230
ಇದರಲ್ಲಿ ಬಡ್ಡ್ಟಿ ಪಾವತಿ 582648 625105 708203
6 ರೆವಿನ್ಯೂ ಕೊರತೆ 454483 499544 609219
7 ವಿತ್ತೀಯ ಕೊರತೆ 649418 766846 796337

 

ತೆರಿಗೆ ಸ್ವೀಕೃತಿ ಮತ್ತು ವೆಚ್ಚದ ನಿಜ ಸ್ಥಿತಿ

ಈಗಾಗಲೆ ಹೇಳಿರುವಂತೆ ನಮ್ಮ ಆರ್ಥಿಕತೆಯ ಆರೋಗ್ಯ ಹದಗೆಟ್ಟಿದೆ. ಅದರ ನಿರ್ವಹಣೆಯೂ ಹೇಳಿಕೊಳ್ಳುವಂತಿಲ್ಲ. ಇಂದಿನ ಸರ್ಕಾರಕ್ಕೆ ‘ಆರ್ಥಿಕತೆ’ ಬಜೆಟ್ ಸಂದರ್ಭದಲ್ಲಿ ಮಾತ್ರ ನೆನಪಿಗೆ ಬರುತ್ತದೆ. ಉಳಿದಂತೆ ಸಮಸ್ಯೆಗಳಲ್ಲದ ಸಂಗತಿಗಳನ್ನು ಸಮಸ್ಯೆಗಳನ್ನಾಗಿ ರೂಪಿಸುವುದರಲ್ಲಿ ಕಾರ್ಯಪ್ರವೃತ್ತವಾಗಿರುವಂತೆ ಕಾಣುತ್ತದೆ. ಇದರಿಂದಾಗಿ ನಮ್ಮ ಆರ್ಥಿಕತೆಯು ಅಭದ್ರತೆಯನ್ನು ಎದರಿಸುವಂತಾಗಿದೆ. ವಿತ್ತಮಂತ್ರಿ ಹೇಳುತ್ತಿರುವಂತೆ ನಮ್ಮ ಆರ್ಥಿಕತೆಯ ಮೂಲಭೂತ ರಚನೆಯು ಭದ್ರವಾಗಿದೆ. ಆದರೆ ಜನರ ಬದುಕು ಮೂರಾಬಟ್ಟೆಯಾಗುತ್ತಿದೆ.

ರೆವಿನ್ಯೂ ಸ್ವೀಕೃತಿಯು 2019-20ರ ಬಜೆಟ್ ಅಂದಾಜು ಮತ್ತು ಪರಿಷ್ಕೃತ ಅಂದಾಜುಗಳ ನಡುವೆ ತೀವ್ರ ಕುಸಿತವನ್ನು ಕಾಣುತ್ತಿದೆ. ರೆವಿನ್ಯೂ ಸ್ವೀಕೃತಿ 2019-20 ರ ಬಜೆಟ್ ಅಂದಾಜಿನ ಪ್ರಕಾರ ರೂ.19.62 ಲಕ್ಷ ಕೋಟಿ. ಆದರೆ ಪರಿಷ್ಕೃತ ಅಂದಾಜು ರೂ.18.50 ಕೋಟಿ. ಇಲ್ಲಿನ ಕುಸಿತದ ಪ್ರಮಾಣ ಶೇ.5.71. ಇದೇ ರೀತಿಯಲ್ಲಿ 2019-20ರ ಬಜೆಟ್ ಅಂದಾಜಿನಲ್ಲಿ ಒಟ್ಟು ವೆಚ್ಚ ರೂ.27.86 ಲಕ್ಷ ಕೋಟಿ. ಪರಿಷ್ಕೃತ ಅಂದಾಜು ರೂ.26.98 ಲಕ್ಷ ಕೋಟಿ. ಇಲ್ಲಿನ ಕಡಿತದ ಪ್ರಮಾಣ ಶೇ.3.15. ಆರ್ಥಿಕತೆಯ 2019-2020ರ ಸಾಧನೆಯ ಹಿನ್ನೆಲೆಯಲ್ಲಿ 2020-2021ರ ಬಜೆಟ್ ಲೆಕ್ಕಾಚಾರವನ್ನು ನೋಡಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಬಜೆಟ್ಟಿನಲ್ಲಿ ನೀಡಿರುವ 2019-2020ರ ಅಂಕಿಗಳು 2019ರ ಡಿಸೆಂಬರ್‍ವರೆಗಿನ ಅಂಕಿಗಳಾಗಿವೆ. ಮುಂದೆ ಮೂರು ತಿಂಗಳ ಲೆಕ್ಕಾಚಾರಗಳು ಅಂದಾಜಿನ ಅಂಕಿಗಳಾಗಿವೆ. ಹೀಗಾಗಿ ಇಲ್ಲಿನ ಅಂಕಿಸಂಖ್ಯೆಗಳ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈಗ 2019-2020ರಲ್ಲಿ ಪರಿಷ್ಕೃತ ಅಂದಾಜಿನ ಪ್ರಕಾರ ರೂ.18.50 ಲಕ್ಷ ಕೋಟಿ ರೆವಿನ್ಯೂ ಸಂಗ್ರಹವಾಗುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ. ಆದರೆ ಇದು ಎಷ್ಟರಮಟ್ಟಿಗೆ ನಿಜವಾಗಬಲ್ಲದು? ಆರ್ಥಿಕತೆಯು ಕುಸಿತವನ್ನು ಅನುಭವಿಸುತ್ತಿದೆ. ಇದು ಅಸಾಧ್ಯವೆನ್ನದೆ ವಿಧಿಯಿಲ್ಲ.

ಈಗ 2020-2021ರ ಬಜೆಟ್ ಅಂದಾಜುಗಳನ್ನು ನೋಡಬಹುದು. ಆರ್ಥಿಕ ಅಭದ್ರತೆಯ, ಸಾಮಾಜಿಕ ಅಸಮಾಧಾನದ, ರೆವಿನ್ಯೂ ಸಂಗ್ರಹದ ಅನಿಶ್ಚಿತತೆಯ ವಾತಾವರಣದಲ್ಲಿ 2020-2021ರ ಬಜೆಟ್ ಅಂದಾಜುಗಳು ವಾಸ್ತವಿಕ ಎಂದು ಹೇಳಲು ಬರುವುದಿಲ್ಲ. ಪ್ರಸಿದ್ಧ ಆರ್ಥಿಕ ತಜ್ಞೆ ಜಯತಿ ಘೋಷ್ ಅವರೇನೋ ಬಜೆಟ್ಟಿನಲ್ಲಿರುವ ಪ್ರತಿ ಅಂಕಿಯೂ ‘ಸುಳ್ಳು’ ಎಂದು ಹೇಳಿದ್ದಾರೆ. ಹಾಗೆ ಹೇಳಲು ನನಗೆ ಧೈರ್ಯವಿಲ್ಲ. ಆದರೆ ನನಗೆ ಈ ಬಗ್ಗೆ ಅನುಮಾನಗಳಿವೆ.

ಒಟ್ಟಾರೆ ನಮ್ಮ ಆರ್ಥಿಕತೆಗೆ ಪುನಶ್ಚೇತನದ ತುರ್ತು ಅಗತ್ಯವಿದೆ. ಈ ತುರ್ತು ಬಜೆಟ್ಟಿನಲ್ಲಿ ಇದ್ದಂತೆ ಕಾಣುವುದಿಲ್ಲ. ಆರ್ಥಿಕತೆಯ ಅಭದ್ರತೆಯನ್ನು ಎದುರಿಸುತ್ತಿರುವಾಗ, ಸಾಮಾಜಿಕವಾಗಿ ‘ಕ್ಷೋಭೆ’ಯ ವಾತಾವರಣವಿರುವಾಗ ಮತ್ತು ಜನರ ಬದುಕು ಅತಂತ್ರದಲ್ಲಿರುವಾಗ ಸರ್ಕಾರವು ಹಗಲು-ರಾತ್ರಿ ಆರ್ಥಿಕ ಸ್ಥಿತಿಯ ಬಗ್ಗೆ ಕಣ್ಣಿರಿಸಬೇಕು. ಅದರ ನಿರ್ವಹಣೆಯು ಇಂದು ಆದ್ಯತೆಯ ಸಂಗತಿಯಾಗಬೇಕು. ಆದರೆ ಹಾಗಾಗುತ್ತಿಲ್ಲ ಎಂಬುದೆ ಆತಂಕದ ಸಂಗತಿಯಾಗಿದೆ. ಅನೇಕ ತಜ್ಞರು ಭಾವಿಸಿರುವಂತೆ ಇಂದಿನ ಆರ್ಥಿಕ ಅಭದ್ರತೆಯು 1991ರಲ್ಲಿನ ಅಭದ್ರತೆಗಿಂತ ತೀವ್ರತರವಾಗಿದೆ. ಆದ್ದರಿಂದ ನಮ್ಮ ಆತಂಕವೂ ಗಂಭೀರವಾದುದಾಗಿದೆ.

*ಲೇಖಕರು ಸಮಾಜ ವಿಜ್ಞಾನಿ; ಮಾನವ ಅಭಿವೃದ್ಧಿ, ಬಜೆಟ್ ಅಧ್ಯಯನ, ಲಿಂಗ ಸಂಬಂಧಗಳು ಮತ್ತು ವಚನ ಸಂಸ್ಕೃತಿ ಕುರಿತಂತೆ ಸಂಶೋಧನೆ ನಡೆಸಿದ್ದಾರೆ. ನಿವೃತ್ತಿ ನಂತರ ನಾಲ್ಕನೇ ರಾಜ್ಯ ಹಣಕಾಸು ಆಯೋಗದಲ್ಲಿ ಸಮಾಲೋಚಕರಾಗಿದ್ದರು.   

Leave a Reply

Your email address will not be published.