ಕೇಶಿರಾಜ ವಿರಚಿತ ಶಬ್ದಮಣಿದರ್ಪಣಂ

ಭಾಷೆಯ ನಿರಂತರ ಹರಿವನ್ನು ಅರಿತು ಅದಲ್ಲಿ ಮುಳುಗೆದ್ದು ಅದರ ಆಳ-ಅಂತರಾಳವನ್ನು ಬಿಚ್ಚಿಡುವುದು ವ್ಯಾಕರಣಕಾರನ ಕೆಲಸ. ಅದು ಅಷ್ಟು ಸುಲಭದ್ದಲ್ಲ. ಎಲ್ಲಾ ಭಾಷಿಕ ಜ್ಞಾನನ್ನು ಒಳಗೊಂಡಿರುವ ಕೇಶಿರಾಜನಿಂದ ರಚಿಸಲ್ಪಟ್ಟ ಶಬ್ದಮಣಿದರ್ಪಣವು ಅಂತಹ ಒಂದು ವಿದ್ವತ್ಪೂರ್ಣ ಕೃತಿ.

ಬಾಷೆಯು ಬದುಕಿನ ಜೀವನಾಡಿ. ಅದು ಮಾನವನ ನಾಗರಿಕ ಬದುಕಿನ ಅವಿಭಾಜ್ಯ ಅಂಗ. ಅದರಲ್ಲಿ ನಾಡಿನ ಸಂಸ್ಕೃತಿ ಮತಿ ಎಲ್ಲವೂ ಅಡಗಿದೆ. ಹಾಗಾಗಿ ಭಾಷೆಯೊಂದರ ಹೊರತು ಭಾಷಿಕ ಸಮುದಾಯವನ್ನು ವಿವರಿಸುವುದು ಅಸಾಧ್ಯ. ಇಂತಹ ಭಾಷಿಕ ಘಟಕಗಳನ್ನು ಅದರ ಸ್ವರೂಪವನ್ನಾಧರಿಸಿ ನಿರ್ದಿಷ್ಟ ಕಾಲಘಟ್ಟದಲ್ಲಿ ಸೂತ್ರೀಕರಿಸುವ ಸವಾಲು ವ್ಯಾಕರಣಕ್ಕಿದೆ. ಯಾವುದೇ ಭಾಷೆಯ ವ್ಯಾಕರಣವು ಆ ಭಾಷೆಯ ಸ್ವರೂಪವನ್ನು ಪ್ರತಿಫಲಿಸುವ ಪ್ರತಿರೂಪಿಸುವ ಕೈಗನ್ನಡಿಯಿದ್ದಂತೆ.

ಭಾಷೆಯ ನಿರಂತರ ಹರಿವನ್ನು ಅರಿತು ಅದಲ್ಲಿ ಮುಳುಗೆದ್ದು ಅದರ ಆಳ-ಅಂತರಾಳವನ್ನು ಬಿಚ್ಚಿಡುವುದು ವ್ಯಾಕರಣಕಾರನ ಕೆಲಸ. ಅದು ಅಷ್ಟು ಸುಲಭದ್ದಲ್ಲ. ಅದಕ್ಕೆ ವಿದ್ವತ್ಪೂರ್ಣ ಅಭ್ಯಾಸದ ಅಗತ್ಯವಿದೆ. ಭಾಷೆಯ ವ್ಯಾಪ್ತಿಯನ್ನು ಅರಿತು ವ್ಯಾಖ್ಯಾನಿಸಲು ವಿಶೇಷವಾದ ಆಸಕ್ತಿ ಮತ್ತು ಶ್ರದ್ಧೆ ಭಾಷೆ ಮತ್ತು ಭಾಷಿಕ ಸಾಹಿತ್ಯದೊಂದಿಗೆ ನಿರಂತರ ಸಂಸರ್ಗ ಅನಿವಾರ್ಯ. ಈ ಎಲ್ಲಾ ಭಾಷಿಕ ಜ್ಞಾನವನ್ನು ಒಳಗೊಂಡಿರುವ ಕೇಶಿರಾಜನಿಂದ ರಚಿಸಲ್ಪಟ್ಟ ಶಬ್ದಮಣಿದರ್ಪಣವು ಅಂತಹ ಒಂದು ವಿದ್ವತ್ಪೂರ್ಣ ಕೃತಿ.

ನಿಚ್ಚಂಪೊಸತಾಗಿಹ ಕನ್ನಡದ ನೆಲೆಯನ್ನು ಅನುಸರಿಸುತ್ತಾ, ಹನ್ನೆರಡು ಹದಿಮೂರನೇ ಶತಮಾನದಲ್ಲಿ ಉಂಟಾದ ಸಮಾಜೋ-ಧಾರ್ಮಿಕ ಸಾಹಿತ್ಯಿಕ ಆಂದೋಲನವನ್ನು ಒಳಗೊಂಡಂತೆ ಅದುವರೆಗಿನ ಭಾಷಿಕ ವ್ಯಾಕರಣವನ್ನು ಹಿಡಿಯಾಗಿ ಕನ್ನಡದಲ್ಲಿ ದಾಖಲಿಸುವ ಮಹತ್ವದ ಕೃತಿ ಶಬ್ದಮಣಿದರ್ಪಣ. ಇದರ ಕರ್ತೃ ಕೇಶಿರಾಜ ಪ್ರಸಿದ್ಧ ಕವಿಗಳ ಹಾಗೂ ಪ್ರತಿಷ್ಠಿತ ವಿದ್ವಾಂಸರ ಮನೆತನಕ್ಕೆ ಸೇರಿದವ. ತಂದೆ ಶ್ರೇಷ್ಠ ಹಾಗೂ ಆದ್ಯ ಹಳಗನ್ನಡ ಸಂಕಲನಗ್ರಂಥ ಸೂಕ್ತಿಸುಧಾರ್ಣವದ ಕರ್ತೃ ಚಿದಾನಂದ ಮಲ್ಲಿಕಾರ್ಜುನ; ತಾಯಿಯ ತಂದೆ ಹೊಯ್ಸಳ ಇಮ್ಮಡಿ ನರಸಿಂಹನಲ್ಲಿ ಕಟಕೋಪಾಧ್ಯಾಯನೂ ಜೈನ ಪುರಾಣಕರ್ತೃವೂ ಆಗಿದ್ದ ಕವಿಸುಮನೋಬಾಣ; ಸೋದರಮಾವ ಜನ್ನಕವಿ. ಈ ಸಾಹಿತ್ಯಿಕ ಕುಟುಂಬದಲ್ಲಿ ಬೆಳೆದು ಕಲಿತ ಕೇಶಿರಾಜ ಕವಿಯೂ ಪಂಡಿತನೂ ಆಗಿದ್ದು ಆಶ್ಚರ್ಯವೆನಿಸದು.

ಗುಣಮಮರೆ ಶಬ್ದಮಣಿದ

ರ್ಪಣನಾಮವನಿಟ್ಟು ನೆರೆಯೆ ಕರ್ಣಾಟಕಲ

ಕ್ಷಣ ಶಬ್ದಶಾಸ್ತ್ರಮಂ ಲಾ

ಕ್ಷಣಿಕರ್ ಪೇಳೆಂದು ಬೆಸಸೆ ಬಗೆವುಗೆ ಪೇಳ್ದೆಂ||3|| 

 

ಎಂದು ಗ್ರಂಥದ ಆದಿಯಲ್ಲೇ ತನ್ನ ಕೃತಿ ಬರಹದ ಕಾರಣವನ್ನು ಕೇಶಿರಾಜ ತಿಳಿಸಿದ್ದಾನೆ. ಇದು ಗುಣಗಳಿಂದ ಶಾಶ್ವತವೆನಿಸುವ, ಕನ್ನಡ ಲಾಕ್ಷಣಿಕರ ಪ್ರೇರಣೆಯಿಂದ ಕರ್ಣಾಟಕ ಲಕ್ಷಣಶಬ್ದಶಾಸ್ತ್ರವನ್ನು ಹೇಳುತ್ತಿರುವ ಕೃತಿ. ಶಬ್ದಮಣಿದರ್ಪಣದಲ್ಲಿ ಸಮಾಪ್ತಿ ಭಾಗದ ಪದ್ಯಗಳೂ ಸೇರಿ ಒಟ್ಟು 343 ಸೂತ್ರಪದ್ಯಗಳಿವೆ. 13ನೆಯ ಶತಮಾನದ ನಡುಗಾಲದವರೆಗೆ ಬೆಳೆದುಬಂದ ಹಳಗನ್ನಡ ಭಾಷೆಯ ಸ್ವರೂಪವನ್ನು ಪ್ರಾಮಾಣಿಕವಾದ ಪ್ರಯೋಗ ಪರೀಕ್ಷೆಯಿಂದ ವಿಶ್ಲೇಷಿಸಿ, ಶಾಸ್ತ್ರಬದ್ಧವಾಗಿ ನಿಯಂತ್ರಿಸಲು ಕೇಶಿರಾಜ ಪ್ರಯತ್ನಿಸಿದ್ದಾನೆ.

ಪ್ರಧಾನವಾಗಿ ಶಬ್ದಮಣಿದರ್ಪಣ ವಿದ್ಯಾತ್ಮಕ ಅಥವಾ ಆದರ್ಶ ರೀತಿಯ ವ್ಯಾಕರಣ. ಆದರೆ ವಿವರಣಾತ್ಮಕ ಅಥವಾ ವರ್ಣನಾತ್ಮಕ ರೀತಿಯನ್ನು, ನಿರೂಪಣಾ ದೃಷ್ಟಿಯನ್ನು ಇದು ಒಳಗೊಂಡಿದೆ. ಕನ್ನಡದ ಜಾಯಮಾನಕ್ಕೆ ಒಗ್ಗುವ ಲಕ್ಷಣಗಳನ್ನು ಇನ್ನಿಲ್ಲದಂತೆ ಸ್ಪಷ್ಟೀಕರಿಸುವ ಕೆಲಸವು ಇಲ್ಲಿ ನಡೆದಿದೆ. ಕನ್ನಡಕ್ಕೆ ಹೊರತಾದ ಸಂಸ್ಕೃತದ ಲಕ್ಷಣಗಳನ್ನು ಅವುಗಳ ಅಗತ್ಯತೆಗನುಗುಣವಾಗಿ  ಪರಿಷ್ಕರಿಸಿ  ತಿರಸ್ಕರಿಸುವ ಕಾರ್ಯವನ್ನು ಕೇಶಿರಾಜ ಮಾಡಿದ್ದಾನೆ. ಕನ್ನಡ ಭಾಷಾ ಪರಂಪರೆಯ ಸ್ಪಷ್ಟ ಹೊಳಹನ್ನು ಅರಿತಿರುವ ಕೇಶಿರಾಜನ ಮನೋಭೂಮಿಕೆಯು ಕನ್ನಡತನವನ್ನು ವ್ಯಾಕರಣಾತ್ಮಕವಾಗಿ ಮರುಸ್ಥಾಪಿಸಲು ಶಬ್ದಮಣಿದರ್ಪಣದ ಮೂಲಕ ಹವಣಿಸಿದೆ. ಸಂಸ್ಕೃತದ ಭೂಮಿಕೆಯಲ್ಲಿ ಕನ್ನಡದ ಅನನ್ಯತೆಯನ್ನು ಮೆರೆಸುವ ಸಾಹಸ ಇಲ್ಲಿದೆ. ಈತ ಪ್ರಸ್ತಾಪಿಸುವ ಕನ್ನಡದ ಅಸಾಧಾರಣ ಲಕ್ಷಣಗಳು ಇದಕ್ಕೆ ಸಾಕ್ಷಿಯಾಗಿವೆ.

 

ಗಮಕಸಮಾಸದಿಂ ಅರಕುಳಕ್ಷಳದಿಂ ಶೃತಿಸಹ್ಯಸಂಧಿಯಿಂ

ಸಮುಚಿತಮಾಗಿಬರ್ಪ ಸತಿಸಪ್ತಮಿಯಿಂ ಸಮಸಂಸ್ಕೃತದಿಂ

ವಮಹಪಭೇದದಿಂ ವಿರಹಿತವ್ಯಾಯ ಸಂಸ್ಕೃತಲಿಂದಿಂ ಪದೋ

ತ್ತಮ ಶಿಥಿಲತ್ವದಿಂ ಯತಿವಿಲಂಘನದಿಂದರಿದಲ್ತೆ ಕನ್ನಡಂ||

 

ಎನ್ನುವ ಈ ಒಂಬತ್ತು ಅಸಾಧಾರಣ ಲಕ್ಷಣಗಳನ್ನು ಕನ್ನಡದ ವಿಶೇಷ ಅಸ್ಮಿತೆಗಳೆಂದು ಸ್ಥಾಪಿಸಿದ್ದಾನೆ. ಇಲ್ಲಿನ ಯತಿಯ ವಿಚಾರವನ್ನು ಉಳಿದಂತೆ ಎಲ್ಲಾ ಎಂಟು ಅಂಶಗಳನ್ನು ಶಬ್ದಮಣಿದರ್ಪಣದಲ್ಲಿ ವಿಶದವಾಗಿ ವಿಶ್ಲೇಷಣೆಗೆ ಒಳಪಡಿಸಿದ್ದಾನೆ. ಯತಿಯೆಂಬ ಛಂದಸ್ಸಿನ ಅಂಶವನ್ನು ಇಲ್ಲಿ  ಪ್ರಸ್ತಾಪಿಸುವ ಅಗತ್ಯವೇನೆಂಬುದು ಒಂದು ಪ್ರಶ್ನೆ. ಅದು ಔಚಿತ್ಯವೇ ಎಂಬ ಸಂದೇಹ ಮೂಡುತ್ತದೆ. ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹೊರಟಾಗ; ಶಬ್ದದ ಉತ್ಪತ್ತಿಗೆ ಉಸಿರೇ ಮೂಲವಾಗಿದ್ದು, ಈ ಶಬ್ದದ ಹೊರತು ಕಾವ್ಯವಿಲ್ಲ. ಕಾವ್ಯದ ಓದು ಉಸಿರಾಟದ ಯತಿಯನ್ನು ಅವಲಂಬಿಸಿರುತ್ತದೆ. ಸಂಸ್ಕೃತದAತೆ ಕಟ್ಟನಿಟ್ಟಾದ ಯತಿತಾಣಗಳು ಕನ್ನಡದ ಜಾಯಮಾನವಲ್ಲ ಬದಲಾಗಿ ಅರ್ಥಕೆಡದಂತೆ, ಲಯಕ್ಕೆ ತಕ್ಕಂತೆ ಕನ್ನಡದ ಯತಿ ನಮ್ಯವಾಗಿದ್ದು. ಅಗತ್ಯಬಿದ್ದಲ್ಲಿ ಯತಿವಿಲಂಘನೆಯು ಕನ್ನಡಕ್ಕೆ ಸಹಜ. ಇದು ಕನ್ನಡದ ವಿಶೇಷತೆಯೂ ಹೌದು ಎಂದು ತಿಳಿದು ಪ್ರಸ್ತಾಪಿಸಿರುವ ಸಾಧ್ಯತೆ ಇದೆ. ಈ ಕಾರಣದಿಂದ ಶಬ್ದದ ಉತ್ಪತ್ತಿ, ಶಬ್ದದ ಉಚ್ಚಾರದ ನೆಲೆಯಲ್ಲಿ ಯತಿಯನ್ನು ಕೇಶಿರಾಜ ವ್ಯಾಕರಣವಾಗಿ ಸೇರಿಸಿಕೊಂಡಿರಬಹುದು ಎನಿಸುತ್ತದೆ. ಇದಲ್ಲದೆ ವಚನ, ಲಿಂಗ, ವಿಭಕ್ತಿ, ಸಂಧಿ ಹೀಗೆ ಯಾವುದೇ ವ್ಯಾಕರಣ ವಿಚಾರದಲ್ಲೂ ಕನ್ನಡದ ಸಹಜತೆಯನ್ನು ಪ್ರಸ್ತಾಪಿಸಿ ಅದನ್ನು ಎತ್ತಿಹಿಡಿದಿರುವುದು ವಿಶೇಷ.

ಕನ್ನಡಕ್ಕೆ ಸಹಜವಾದ ಲೋಪ, ಆಗಮ, ಆದೇಶ ಸಂಧಿಗಳನ್ನು ಸ್ವೀಕರಿಸಿದ್ದಾನೆ ವಿನಾ ಸಂಸ್ಕೃತದ ಸಂಧಿಕಾರ್ಯಗಳ ಸೊಲ್ಲನ್ನು ಎತ್ತಿಲ್ಲ. ಈ ಎಲ್ಲಾ ನೆಲೆಯಲ್ಲಿ ಕೇಶಿರಾಜನ ಶಬ್ದಮಣಿದರ್ಪಣ ಸಂಸ್ಕೃತದ ಜಾಡನ್ನು ಅನುಸರಿಸಿಯೂ ಕನ್ನಡತನವನ್ನು ಪ್ರತಿಫಲಿಸುವ ವಿಶಿಷ್ಟ ಕೃತಿ.  ಅದು ಕಾವ್ಯಾತ್ಮಕ ನೆಲೆಯಲ್ಲಿ ವ್ಯಾಕರಣವನ್ನು ತೆರೆದಿಡುವ ಮಹತ್ವದ ಕೃತಿ. ಹಾಗಾಗಿ “ಶಬ್ದಮಣಿದರ್ಪಣ ಕಾವ್ಯವೂ ಹೌದು, ಶಾಸ್ತ್ರವೂ ಹೌದು. ಕಾವ್ಯಲೇಪನವನ್ನು ಪಡೆದಿರುವ ಶಾಸ್ತ್ರವೆಂದರೂ ಸರಿಯೇ. ಅದು ಒಳಗಿರುವ ಮೀನುಗಳ ಚೆಲ್ಲಾಟವನ್ನು ತೆರೆದು ತೋರಿಸುವ ಶರತ್ಕಾಲದ ಹೊಳೆ. ಕೇಶಿರಾಜನ ಮನಃಕ್ರೀಡೆ ಅದರಲ್ಲಿ ರಮ್ಯವಾಗಿ ರೂಪುಗೊಂಡಿದೆ.” ಎಂಬ ವಿದ್ವಾಂಸರಾದ ಡಿ.ಎಲ್.ನರಸಿಂಹಾಚಾರ್ ಅವರ ಮಾತು ಅಕ್ಷರಶಃ ಸತ್ಯವೆನಿಸಿದೆ.

ಕೇಶಿರಾಜ ಎಷ್ಟರಮಟ್ಟಿಗೆ ಸಾಂಪ್ರದಾಯಕ ವೈಯಾಕರಣನೋ ಅದಕ್ಕೂ ಮಿಗಿಲಾಗಿ ಸ್ವತಂತ್ರ ವಿಚಾರಪರನಾದ ಭಾಷಾ ವಿಜ್ಞಾನಿಯೂ ಹೌದು ಎಂಬುದನ್ನು ಶಬ್ದಮಣಿದರ್ಪಣ ಸಾಕ್ಷೀಕರಿಸುತ್ತದೆ. ತನ್ನನ್ನು ಕವಿ ಕೇಶವನೆನ್ ಎಂದು ಹೇಳಿಕೊಂಡು ಹೆಮ್ಮೆಪಟ್ಟಿದ್ದರೂ ಇವನ ಮನೋಧರ್ಮದಲ್ಲಿ ಅಡಗಿರುವ ಶಾಸ್ತçಸಾರವು ಶಬ್ದಮಣಿದರ್ಪಣದಲ್ಲಿ ಪ್ರಖರವಾಗಿ ಹೊರಹೊಮ್ಮಿದೆ. ಈತ ಉತ್ತಮ ನಿಘಂಟುಕಾರನೂ ಆಗಿದ್ದನೆಂಬುದನ್ನು ಈ ಕೃತಿಯಲ್ಲಿ ನೀಡಿರುವ ಪದಗಳ ಪಟ್ಟಿ ನಿರೂಪಿಸುತ್ತದೆ. ನಾನಾರ್ಥವನ್ನು ತಿಳಿಸುವ ಳ್ ಸಮೇತವಾದ ಶಬ್ದಗಳ ಕೋಶವಾಗಲಿ, ನಿತ್ಯಬಿಂದು, ವಿಕಲ್ಪ ಬಿಂದು, ನಿತ್ಯದ್ವಿತ್ವ, ಶಿಥಿಲದ್ವಿತ್ವಗಳನ್ನು ತಿಳಿಸುವ ಪದಗಳ ಪಟ್ಟಿಯಾಗಲೀ, ಕನ್ನಡ ಧಾತುಗಳನ್ನು ಕುರಿತ ಶಬ್ದಸಂಗ್ರಹವಾಗಲಿ, ಪ್ರಯೋಗಸಾರವೆಂಬ ಶಬ್ದಾರ್ಥಕೋಶವಾಗಲಿ ನಿಘಂಟುವಿನ ನೆಲೆಯ ಹೊಸ ಆಯಾಮವನ್ನು ಶಬ್ದಮಣಿದರ್ಪಣಕ್ಕೆ ಒದಗಿಸಿವೆ.

“ಆಂಧ್ರ ಸ್ಕೂಲ್ ಆಫ್ ಗ್ರಾಮರಿಯನ್ಸ್” ಎಂಬ ಗ್ರಂಥದಲ್ಲಿ ಡಾ. ಬರ್ನೆಲ್ ಎಂಬ ವಿದ್ವಾಂಸರು ಶಬ್ದಮಣಿದರ್ಪಣವನ್ನು ಕುರಿತಂತೆ “The great and real merit of shabdamani Darpana is that it bases the rules on independent research and the Usage of writers of repute in this way it is far ahead of the Tamil and Telugu treaties which are much occupied  with vain scholastic disputations” ಈ  ಹೇಳಿಕೆ 13ನೇ ಶತಮಾನಕ್ಕಾಗಲೇ ಕನ್ನಡವು ತನ್ನ ದ್ರಾವಿಡ ವರ್ಗದ ಸೋದರ ಭಾಷೆಗಳಲ್ಲಿಲ್ಲದ ವಿದ್ವತ್ಪೂರ್ಣ ವ್ಯಾಕರಣವನ್ನು ತನ್ನ ಭಾಷೆಯಲ್ಲೇ ಹೊಂದಿತ್ತೆಂಬ ವಿಚಾರದೊಂದಿಗೆ ದರ್ಪಣದ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ. 

“ಕನ್ನಡಕ್ಕೆ ಪ್ರಮಾಣಪೂರ್ವವಾದ ವ್ಯಾಕರಣ ಶಬ್ದಮಣಿದರ್ಪಣವಾದುದರಿಂದ ಅದನ್ನು ಜಾತಿ, ಮತಗಳ ಹಂಗಿಲ್ಲದೆ ಎಲ್ಲರೂ ಅಭ್ಯಸಿಸುತ್ತ ಬಂದಿರುವರು. ಹಿಂದಿನ ಜೈನ, ವೀರಶೈವ, ಬ್ರಾಹ್ಮಣರ ಮಠ-ಮಾನ್ಯಗಳಲ್ಲಿ, ಪಾಠಶಾಲೆಗಳಲ್ಲಿ ದೊರೆಯುವ ಹಸ್ತಪ್ರತಿಗಳ ಸಂಗ್ರಹದಲ್ಲಿ ಶಬ್ದಮಣಿದರ್ಪಣವೊಂದು ಸಾರ್ವತ್ರಿಕವಾಗಿ ದೊರೆಯುವ ಅಮೂಲ್ಯ ಪ್ರತಿಯಾಗಿರುವದು ಕಂಡುಬರುತ್ತದೆ.” ಎಂದು ಆರ್.ಸಿ.ಹಿರೇಮಠ ಅವರು ಹೇಳಿರುವ ಮಾತು ಶಬ್ದಮಣಿ ದರ್ಪಣವು ಹೇಗೆ ಸಾರ್ವತ್ರಿಕ ಮತ್ತು ಸಾರ್ವಕಾಲಿಕವಾಗಿತ್ತೆಂಬುದನ್ನು ಸ್ಪಷ್ಟೀಕರಿಸಿದೆ. ಕೇಶಿರಾಜನ ವ್ಯಾಕರಣವನ್ನು ಆಧುನಿಕ ಭಾಷಾವಿಜ್ಞಾನದ ದೃಷ್ಟಿಯಿಂದ ಅಧ್ಯಯನ ಮಾಡಬೇಕಾದ ಅಗತ್ಯವಿದ್ದು, ಈ ಪ್ರಯತ್ನ ನಿರಂತರವಾಗಿ ಸಾಗುತ್ತಲೇ ಬಂದಿದೆ.

1862ರಲ್ಲಿ ಜೆ.ಗ್ಯಾರೆಟ್ ಅವರ ಶಬ್ದಮಣಿದರ್ಪಣದ ಸಂಪಾದನೆಯಿAದ ಹಿಡಿದು ಇದುವರೆವಿಗೂ ಸುಮಾರು 22ಕ್ಕೂ ಅಧಿಕ ಸಂಪಾದನೆಗಳು, ಸುಮಾರೂ 100ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು, ಸುಮಾರು 80ಕ್ಕೂ ಹೆಚ್ಚು ಪುಸ್ತಕಗಳು ಶಬ್ದಮಣಿದರ್ಪಣವನ್ನು ಕುರಿತು ಬಂದಿವೆ.  ಇಂದಿಗೂ ಸಾಕಷ್ಟು ಅಧ್ಯಯನಗಳು ಶಬ್ದಮಣಿದರ್ಪಣದ ಮೇಲೆ ನಡೆಯುತ್ತಲೇ ಇವೆ.  ಇದಕ್ಕೆ ಕಾರಣ ಕನ್ನಡವನ್ನು ಕನ್ನಡದ ಪರಂಪರೆಯನ್ನು ಪ್ರಾಥಮಿಕವಾಗಿ ಅರ್ಥೈಸಲು, ಕನ್ನಡದ ಅವಸ್ಥಾಂತರಗಳನ್ನು ಖಚಿತವಾಗಿ ಅಭ್ಯಸಿಸಲು, ಭಾಷಿಕ ಅಸ್ಮಿತೆಯ ಚಹರೆಗಳನ್ನು ವಿಶ್ಲೇಷಿಸಲು ಅಗತ್ಯವಾದ ಸತ್ವಪೂರ್ಣ ವಿಚಾರಗಳನ್ನು ದರ್ಪಣವು ಒಳಗೊಂಡಿರುವುದೇ ಆಗಿದೆ. ಈ ನೆಲೆಯಲ್ಲಿ ಶಬ್ದಮಣಿದರ್ಪಣವೆಂಬ ವ್ಯಾಕರಣ ಕೃತಿಯ ಮೂಲಕ ಕೇಶಿರಾಜನು ಕನ್ನಡಕ್ಕೆ ಕನ್ನಡತನವನ್ನು ತೋರುವ  ಕೈಗನ್ನಡಿ (ಮಣಿಖಚಿತ ದರ್ಪಣವನ್ನು) ಯೊಂದನ್ನು ಹಿಡಿದಿದ್ದಾನೆ. ಅದು ಪ್ರತಿಫಲಿಸುವ ಕನ್ನಡದ ಚಹರೆಯು ಕನ್ನಡದ ಹಿರಿಮೆಗೆ ಸೇರುವ ಮತ್ತೊಂದು ಗರಿ ಎಂಬುದರಲ್ಲಿ ಸಂಶಯವಿಲ್ಲ.

*ಲೇಖಕರು ನಂಜನಗೂಡಿನವರು; ಕನ್ನಡದಲ್ಲಿ ಎಂ.ಎ., ಪಿ.ಎಚ್.ಡಿ. ಮಾಡಿದ್ದಾರೆ, ಮೈಸೂರಿನ ಭಾರತೀ0ಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಸಹ-ಸಂಶೋಧಕರು; ‘ಅಜ್ಜಿಗೊಂದು ಪ್ರಶ್ನೆಪ್ರಕಟಿತ ಕವನ ಸಂಕಲನ.

Leave a Reply

Your email address will not be published.