ಕೊಡಗಿನಲ್ಲಿ ಆನೆ-ಮಾನವ ಸಂಘರ್ಷಕ್ಕೆ ಕೊನೆಯೆಲ್ಲಿ?

ಯಾವುದನ್ನೂ ಯಾಚಿಸಿ ಪಡೆಯದ, ಕಷ್ಟವನ್ನು ಸರಕಾರದ ಜೊತೆ ಹೇಳಿಕೊಂಡರೂ ಪರಿಹಾರ ಸಿಗದ, ಸಿಗದಿದ್ದರೂ ಮುನಿಸಿಕೊಳ್ಳದ, ಕೊಡಗಿನ ಮುಗ್ಧ ಜನ ಮೌನವಾಗಿ ನೋವು ಅನುಭವಿಸುತ್ತಿದ್ದಾರೆ. ಸಮಸ್ಯೆಗಳಿಗೆ ಹೊಂದಿಕೊಂಡು ಬದುಕುವ ನಮ್ಮ ಸಂಯಮ, ಶಕ್ತಿ, ಎಲ್ಲಿವರೆಗೆ ಇರುತ್ತೋ… ಕಾದು ನೋಡಬೇಕಾಗಿದೆ!

ಕೆ.ಜೀವನ್ ಚಿಣ್ಣಪ್ಪ  

ಆಗಸ್ಟ್ 12ರಂದು “ವಿಶ್ವ ಆನೆ ದಿನ” ಆಚರಿಸಲ್ಪಟ್ಟಾಗ ಕೊಡಗಿನ ಮಟ್ಟಿಗೆ ಯಾವುದೇ ರೀತಿಯ ಆಡಂಬರವು ಕಂಡು ಬರದಿದ್ದದ್ದು ಅಸಹಜ ಎನಿಸಿಕೊಳ್ಳಲಿಲ್ಲ. ಏಕೆಂದರೆ ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ಎಡೆಬಿಡದೆ ಮುಂದುವರೆದಿದೆ. ಆನೆಗಳ ಮೇಲೆ ಪ್ರೀತಿ, ಗೌರವ ಕೊಡಗಿನಲ್ಲಿ ವಿರಳವಾಗಿದೆ ಎಂದು ನಾನು ಹೇಳುತ್ತಿಲ್ಲ. ಹಾಗೆಯೇ ವಿಶ್ವ ಆನೆ ದಿನ ಆಚರಿಸಿ ಸಂಭ್ರಮಿಸುವ ಮಟ್ಟದಲ್ಲೂ ಕೊಡಗಿನ ಜನರು ಇಲ್ಲ ಎಂದೇ ಹೇಳಬೇಕು.

ಇದಕ್ಕೆ ಕಾರಣ ನಿರಂತರ ಮುಂದುವರೆದಿರುವ ಪ್ರಾಣಿ ಹಾಗೂ ಮಾನವರ ಮಧ್ಯೆ ತಿಕ್ಕಾಟ. ವಿಪರ್ಯಾಸವೆಂದರೆ, ಆಗಸ್ಟ್ 15 ರಂದು ಸುಂಟಿಕೊಪ್ಪದ ಬಳಿ ಕೆದಕ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಫಿ ತೋಟದ ಮಾಲೀಕ ಮಹಿಳೆಯೊಬ್ಬರು ಆನೆ ದಾಳಿಗೆ ಬಲಿಯಾದದ್ದು. ಯಾವ ಜಾತಿ, ಧರ್ಮ, ವರ್ಗ, ಕೊಡಗಿನಲ್ಲಿ ಆನೆ ದಾಳಿಯಿಂದ ಸುರಕ್ಷಿತವಲ್ಲ ಎಂಬುದು ಇದರಿಂದ ಸಾಬೀತಾಗಿದೆ. ದೇಶದಲ್ಲಿ ಒಂದು ಅಂದಾಜಿನ ಪ್ರಕಾರ 500ಕ್ಕೂ ಹೆಚ್ಚು ಜನರು ಪ್ರತಿ ವರ್ಷ ಆನೆ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿರುವ ಅಂಕಿಅಂಶ ಕೇಂದ್ರ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವಾಲಯದಿಂದ ಇತ್ತೀಚೆಗೆ ಪ್ರಕಟಗೊಂಡಿದೆ. ಕೊಡಗಿನಲ್ಲಿ ಪ್ರತಿವರುಷ ಸುಮಾರು 15ಕ್ಕಿಂತಲೂ ಹೆಚ್ಚು ಮಾನವ ಪ್ರಾಣಹಾನಿ ಆಗುತ್ತಿರುವುದು (ಹೆಚ್ಚಾಗಿ ಕಾರ್ಮಿಕ ವರ್ಗ) ವಾಸ್ತವ. ಹಾಗೆಯೇ ಆನೆಗಳು ಕೂಡ ವಿವಿಧ ಕಾರಣಗಳಿಂದ ಸಾವನ್ನಪ್ಪುತ್ತಿರುವುದು ಸತ್ಯ.

ಪ್ರಯತ್ನಗಳು ಏನಾದವು?

ಆನೆ-ಮಾನವ ಸಂಘರ್ಷ ಕೊನೆಗಾಣಿಸಲು ಕೊಡಗಿನಲ್ಲಿ ಇದುವರೆಗೆ ತೆಗೆದುಕೊಂಡ ಕ್ರಮಗಳು ಖಂಡಿತವಾಗಿ ನಿರರ್ಥಕವಾಗಿವೆ. ಎಷ್ಟು ವರುಷಗಳಲ್ಲಿ, ಎಷ್ಟು ಪ್ರಮಾಣದಲ್ಲಿ ಕೇಂದ್ರ, ರಾಜ್ಯ ಸರಕಾರಗಳಿಂದ ಹಣಕಾಸು ಹರಿದು ಬಂದವು ಎನ್ನುವುದರ ಬಗ್ಗೆ ಈಗ ಮಾತನಾಡುವುದು ನಿಷ್ಪ್ರಯೋಜಕವೆನಿಸುತ್ತದೆ. ಅದು ಹಾಗಿರಲಿ. ಎಲಿಫೆಂಟ್ ಪ್ರೂಫ್ ಟ್ರೆಂಚ್ (EPT), ಸೋಲಾರ್ ವಿದ್ಯುತ್ ತಂತಿಗಳು, ಇತ್ತೀಚೆಗೆ ರೈಲುಕಂಬಿ ಬೇಲಿಗಳು, ಬುದ್ಧಿವಂತ ಆನೆಗಳ ಮುಂದೆ ಸ್ವಲ್ಪ ಮಟ್ಟಿಗೆ ಪರಿಣಾಮಕಾರಿಯಾದರೂ ಸಂಪೂರ್ಣ ಪರಿಹಾರ ದೊರಕಿಲ್ಲ.

ಆನೆಗಳು ಕೊಡಗಿನ ಮೂಲೆ ಮೂಲೆಗೂ ಆಹಾರ, ನೀರನ್ನರಸಿ ಲಗ್ಗೆ ಇಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಬೆಳೆ ಹಾನಿಯಿರಲಿ, ಜೀವ ಒತ್ತೆ ಇತ್ತು ಬದುಕುವ ಪರಿಸ್ಥಿತಿ ಇವತ್ತು ಕೊಡಗಿನಲ್ಲಿದೆ ಎಂದರೆ ಜೆಲ್ಲೆಯ ಹೊರಗಿನವರು ನಂಬಲಿಕ್ಕಿಲ್ಲ. ಆನೆಗಳ ಸ್ವೇಚ್ಚಾಚಾರಿ ತಿರುಗಾಟಕ್ಕೆ ಇಂತಹದ್ದೇ ಸಮಯ ಎಂದಿಲ್ಲ. ಯಾವ ಸಮಯದಲ್ಲಾದರೂ, ಸುರಕ್ಷಿತ ಎನ್ನುವ ಜಾಗದಲ್ಲಾದರೂ ಅವು ಎದುರಾಗಬಹುದು.

ಹಿರಿಯ ರಾಜಕಾರಣಿ ಸ್ವರ್ಗೀಯ ಎ.ಕೆ.ಸುಬ್ಬಯ್ಯನವರ ಪುತ್ರ ಹಾಗೂ ಹೈಕೋರ್ಟ್ ವಕೀಲರಾದ ಎ.ಎಸ್.ಪೊನ್ನಣ್ಣ ಇತ್ತೀಚೆಗೆ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ; ಈ ಹಿಂದೆ ಕೊಡಗಿನ ಮಾಲ್ದಾರೆಯ ಬೆಳೆಗಾರರಾದ ಚೇರಂಡ ನಂದ ಸುಬ್ಬಯ್ಯನವರು ಆನೆ ಹಾವಳಿಯ ವಿರುದ್ಧ ಹೈಕೋರ್ಟ್ ಮೊರೆ ಹೋದಾಗ ನೀಡಿದ್ದ ಸ್ಪಷ್ಟ ಮಾರ್ಗದರ್ಶನವನ್ನು ಪಾಲನೆ ಮಾಡಲಾಗಿಲ್ಲ ಎಂಬುದು ಅವರ ದೂರು. ಅದು ಸರಕಾರದ ವಿರುದ್ಧ Contempt of Court ಆಗಲಿದೆ ಎಂದೂ ಎಚ್ಚರಿಸಿದ್ದಾರೆ. ‘ಹೊಸ ಆನೆ ಸಂತತಿ ಕಾಡುಗಳನ್ನು ನೋಡಿಯೇ ಇಲ್ಲ, ಏಕೆಂದರೆ ಅವು ಕಾಫಿ ತೋಟಗಳಲ್ಲಿಯೇ ಜನಿಸಿ, ಅಲ್ಲಿಯೇ ವಾಸಿಸುತ್ತಿವೆ’ ಎಂದು ನಂದ ಸುಬ್ಬಯ್ಯ ಹೇಳುತ್ತಾರೆ.

ಕೇಂದ್ರದ ಮಾರ್ಗಸೂಚಿ

ಕೇಂದ್ರ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವಾಲಯ ಇತ್ತೀಚೆಗೆ ಆನೆ-ಮಾನವ ಸಂಘರ್ಷ ನಿರ್ವಹಿಸಲು 40 ಪುಟಗಳ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರ ಪ್ರಕಾರ ಸಂಘರ್ಷ ನಿವಾರಣೆಗೆ ಹಲವಾರು ತಂತ್ರ, ಅಭ್ಯಾಸಗಳನ್ನು, ಸಿದ್ಧಪಡಿಸಿ ರಾಜ್ಯ ಸರಕಾರಗಳಿಗೆ, ವಿವಿಧ ಸ್ತರಗಳಲ್ಲಿ ಅವುಗಳನ್ನು ಅಳವಡಿಸಲು ಅವಕಾಶ ಮಾಡಿಕೊಟ್ಟಿದೆ. ಆ ಮಾರ್ಗಸೂಚಿಯಲ್ಲಿ ಚಿತ್ರಾಧಾರಿತ ಸೂಚನೆಗಳನ್ನು ನೀಡಲಾಗಿದೆ. ರಾಜ್ಯಗಳಲ್ಲಿನ ಸಂಘರ್ಷ ನಿವಾರಿಸುವಲ್ಲಿನ ಅನೇಕ ಕ್ರಮಗಳು ಆಯಾಯ ಪ್ರದೇಶಗಳ ಭೌಗೋಳಿಕತೆಗೆ ಅನುಗುಣವಾಗಿ, ಅಲ್ಪ ಸಮಯಾವಧಿಯ ಕ್ರಮಗಳಾದರೂ, ಬಹುತೇಕ ಯಶಸ್ವಿಯಾಗಿವೆ ಎಂದು ತಿಳಿಸಲಾಗಿದೆ. ಆನೆಗಳನ್ನು ಕಾಡಿಗೆ ಮರಳಿ ದಬ್ಬುವಲ್ಲಿ ಸಹಾಯಕಾರಿಯಾಗಿದೆ ಎಂದು ಹೇಳಲಾಗಿದೆ. ಆನೆಗಳನ್ನು ತಮ್ಮ ಸ್ವಸ್ಥಾನದಲ್ಲಿ ಇರಿಸಿ, ಉತ್ತಮ ಕುಡಿಯುವ ನೀರಿನ ಮತ್ತು ಅರಣ್ಯ ಬೆಂಕಿಯಿಂದ ರಕ್ಷಿಸುವ ವಿಧಾನಗಳನ್ನು ಕೂಡ ವಿಶ್ಲೇಷಿಸಲಾಗಿದೆ.

ಇತರ ಉತ್ತಮ ಕ್ರಮಗಳಾದ ತಮಿಳುನಾಡಿನ EPT,  ಕರ್ನಾಟಕದ ತೂಗಾಡುವ ಸೋಲಾರ್ ತಂತಿಗಳು ಮತ್ತು “ರಬ್ಬಲ್ ಗೋಡೆಗಳು” (ರಬ್ಬಲ್ ಅಂದರೆ ಕಟ್ಟಡ ತ್ಯಾಜ್ಯಗಳಾದ ಕಲ್ಲು, ಇಟ್ಟಿಗೆ, ಕಾಂಕ್ರೀಟ್), ಬಂಗಾಳದ ಉತ್ತರ ಭಾಗದ  ಮೆಣಸಿನಪುಡಿ ಹೊಗೆಯ ಪ್ರಯೋಗ ಅಥವಾ ಅಸ್ಸಾಂನಲ್ಲಿ ಪ್ರಚಲಿತವಿರುವ ಜೇನುನೊಣಗಳ ಗುಯ್ಯ್ ಗುಡುವಿಕೆ ಯಾ ಮಾಂಸಾಹಾರಿ ಪ್ರಾಣಿಗಳ ಘರ್ಜನೆ,  ಉತ್ತಮವಾದವು ಎಂದು ಉಲ್ಲೇಖಿಸಲಾಗಿದೆ. ಸಂರಕ್ಷಣಾ ಕ್ರಮವಾಗಿ ಕರ್ನಾಟಕದ ಎಡಯಾರಹಳ್ಳಿ-ದೊಡ್ಡಸಂಪಿಗೆ “ಎಲಿಫೆಂಟ್ ಕಾರಿಡಾರ್” ಗಾಗಿ ಖಾಸಗಿಯವರಿಂದ ಕೊಂಡೊಕೊಳ್ಳಲಾದ 25.37 ಎಕರೆ ಜಾಗ ಕೂಡ ಪರಿಣಾಮಕಾರಿ ಕ್ರಮವೆಂದು ತಿಳಿಸಲಾಗಿದೆ. ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ EPT ತಂತ್ರಯೋಜನೆ ಫಲಿಸುವುದಿಲ್ಲ ಎಂದು ಕೂಡ ವರದಿ ಲಭ್ಯವಿದೆ. ಅಂದರೆ, ಕೊಡಗಿನ ಮಟ್ಟಿಗೆ ಆ ಪ್ರಯೋಗ ಪರಿಣಾಮಕಾರಿಯಾಗಲಿಕ್ಕಿಲ್ಲ.

ವೈಯಕ್ತಿಕ ಗಣತಿ, ಗುರುತಿಸುವಿಕೆ

ದೇಶದ ಬೇರೆಡೆಗಳಲ್ಲಿ ಆನೆಗಳನ್ನು ವೈಯಕ್ತಿಕವಾಗಿ ಗುರುತಿಸಿ (ಬಂಗಾಳದ ದಕ್ಷಿಣ ಭಾಗದಲ್ಲಿ) ಸರ್ವೇಕ್ಷಣೆ ನಡೆಸುವ ಕೆಲಸ ಮುಂದುವರೆದಿದೆ. ತಮಿಳುನಾಡಿನ ಕೆಲವೆಡೆ ಎಸ್.ಎಂ.ಎಸ್. ಮೂಲಕ ಆನೆಗಳ ಉಪಸ್ಥಿತಿಯನ್ನು ಜನರಿಗೆ ತಿಳಿಸಲಾಗುತ್ತಿದೆ. ಕರ್ನಾಟಕದ ಕೆಲ ಭಾಗದಲ್ಲಿ ಜರ್ಮನ್ ತಂತ್ರಜ್ಞಾನವಿರುವ ರೇಡಿಯೋ-ಕಾಲರ್ ಅಳವಡಿಸಿ ಆನೆಗಳ ಚಲನವಲನಗಳ ಬಗ್ಗೆ ನಿಗಾವಹಿಸಲಾಗಿದೆ.

ಸಾಮಾನ್ಯ ಜನರಿಂದ ಹಿಡಿದು ತಜ್ಞರವರೆಗೆ ಆನೆ ಸಂತತಿ ಕೊಡಗಿನಲ್ಲಿ ಹೆಚ್ಚಾಗಿದೆ ಎನ್ನುವ ಅಭಿಪ್ರಾಯವಿದೆ. ಆನೆ-ಮಾನವ ಸಂಘರ್ಷ ತಪ್ಪಿಸಿ, ಜೀವಹಾನಿ (ಆನೆಗಳ ಮತ್ತು ಮಾನವರ) ತಡೆಗಟ್ಟಿ, ವ್ಯವಸ್ಥಿತವಾಗಿ ನಿಭಾಯಿಸಲು “ಆನೆ-ಮಾನವ ಸಹಬಾಳ್ವೆ” ಗಟ್ಟಿಗೊಳಿಸಬೇಕಾದ ಅವಶ್ಯಕತೆ ಇದೆಯೆಂದು ಇತ್ತೀಚೆಗೆ ಕೇಂದ್ರ ಪರಿಸರ ಖಾತೆ ಮಂತ್ರಿ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಅವರು ಕೆಲ ದಿನಗಳ ಹಿಂದೆ “Best Practices of Human – Elephant Conflict Management in India” ಎನ್ನುವ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ್ದರು.

ಹೌದು, ಭಾರತದಲ್ಲಿ ಏಶಿಯನ್ ಆನೆಗಳ ಸಂತತಿ ಅತೀ ಹೆಚ್ಚಿದೆಯೆಂಬುದು ತಿಳಿದಿರುವ ವಿಚಾರ. “ಪ್ರಾಜೆಕ್ಟ್ ಎಲಿಫೆಂಟ್” ನಡೆಸಿದ 2017ರ ಗಣತಿಯ ಪ್ರಕಾರ ಭಾರತದಲ್ಲಿ 29,964 ಆನೆಗಳಿದ್ದವು. ಇದು ಜಾಗತಿಕ ಮಟ್ಟದಲ್ಲಿ ಸುಮಾರು ಶೇಕಡ 60ರಷ್ಟು. ವಿಶ್ವದಲ್ಲಿ 50,000 ದಿಂದ 60,000 ದವರೆಗೆ ಏಶಿಯನ್ ಆನೆಗಳ ಸಂತತಿಯಿದೆಯೆಂದು 2017ರ ಆನೆ ಗಣತಿಯ ಅಂದಾಜು. ಇಷ್ಟೆಲ್ಲಾ ಇದ್ದರೂ, ” International Union for the Conservation of Nature” (IUCN), ಏಶಿಯನ್ ಆನೆಗಳು ” endangered species”, ಅಂದರೆ ಅಳಿವಿನಂಚಿನಲ್ಲಿರುವ ಸಂತತಿ ಎಂದು ಹೇಳಿದೆ! ಭಾರತ ಹೊರತುಪಡಿಸಿ ಇತರ ಏಷ್ಯಾ ದೇಶಗಳಲ್ಲಿ ಆನೆಗಳ ವಾಸಸ್ಥಳಗಳ ನಾಶದಿಂದ ಅವುಗಳ ಸಂತತಿ ನಶಿಸಿರುವುದನ್ನು IUCN ಪರಿಗಣಿಸಿರುವುದು ಬಹುಶಃ ಈ ನಿಲುವಿಗೆ ಕಾರಣವಿರಬಹುದು.

ಕೇಂದ್ರದ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಹೇಳುವಂತೆ, ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿ ಬಹಳಷ್ಟು ಅಡಚಣೆಗಳಿವೆ. ಒಂದು ಉದಾಹರಣೆ: ಆನೆಗಳು ಝಾರ್ಖಂಡ್‌ನಿಂದ ಛತ್ತೀಸ್‌ಘಡಕ್ಕೂ, ಮಧ್ಯಪ್ರದೇಶದಿಂದ ಮಹಾರಾಷ್ಟ್ರಕ್ಕೂ ಓಡಾಡುವುದರಿಂದ ಪ್ರಾಣಿ-ಮಾನವರ ನಡುವೆ ಹೊಸ ಹೊಸ ಸಂಘರ್ಷಗಳಿಗೆ ಎಡೆ ಮಾಡಿಕೊಡುತ್ತಿದೆ ಎನ್ನುತ್ತಾರೆ ಅವರು.

ಆನೆಗೂ ಮನುಷ್ಯನಿಗೂ ಅಂತರವೇನು?

ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ವೆಳ್ಳಿಯಾರ್ ನದಿಯಲ್ಲಿ ಕೆಲ ತಿಂಗಳುಗಳ ಹಿಂದೆ ಸ್ಫೋಟಕ ವಸ್ತು ತಿಂದು ಸಾವನ್ನಪ್ಪಿದ ಗರ್ಭಿಣಿ ಆನೆ ದೇಶಾದ್ಯಂತ ಸುದ್ದಿಯಾದದ್ದು ಅಚ್ಚರಿಯೆನಿಸಲಿಲ್ಲ. ಅನುಕಂಪದ ಮಹಾಪೂರವೇ ಹರಿದು ಬಂದು ಎಲ್ಲರ ಮನಸ್ಸಿನಲ್ಲಿ ದುಃಖವಷ್ಟೇ ಅಲ್ಲ, ಚೈತನ್ಯ ಕುಗ್ಗಿಸಿದ ಭಾವನೆಯನ್ನೇ ಸೃಷ್ಟಿಸಿತ್ತು ಆ ಒಂದು ಸನ್ನಿವೇಶ.  ಆ “ಸೌಮ್ಯ ದೈತ್ಯ”ಕ್ಕೆ ಅಂತಹ ಕೊನೆ ಬರಬಾರದಾಗಿತ್ತು ನಿಜ. ಅದರಲ್ಲೂ ಆ ಹೆಣ್ಣಾನೆ ಗರ್ಭಿಣಿಯಾಗಿದ್ದದ್ದು ಬೇಸರವನ್ನು ಇಮ್ಮಡಿಗೊಳಿಸಿದ್ದು ದಿಟ.

ಜೊತೆಯಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಆ ಆನೆಯ ಪರ ಒಂದು ಅಭಿಯಾನವೇ ಪ್ರಾರಂಭವಾಯಿತು ಕೂಡ. ಸಾವಿರಾರು ಸಂಖ್ಯೆಯಲ್ಲಿ ಭಾರತೀಯ ನೆಟ್ಟಿಗರು ಸ್ಪಂದಿಸಲು ತೋರಿದ ಉತ್ಸಾಹ ಅದಮ್ಯ.

ಹೌದು, ಆನೆಗೂ ಭಾರತೀಯರಿಗೂ, ಅವಿನಾಭಾವ, ಅದ್ಭುತವಾದ ಸಂಬಂಧ ಇದೆ. ಗಣಪತಿ ಅಥವಾ ಗಣೇಶನನ್ನ ದೇವರು ಎಂದು ಪೂಜಿಸುವವರು ನಾವು. ಆದರೆ ನೆಲದ ಮೇಲಿನ ಸನ್ನಿವೇಶವೇ ಬೇರೆ. ಆನೆ-ಮಾನವ ಸಂಘರ್ಷ ಎಗ್ಗಿಲ್ಲದೆ ಮುಂದುವರೆದಿರುವಾಗ ಯಾವ ರೀತಿಯಲ್ಲಿ ಈ ಸಂಘರ್ಷವನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ವಿಷಯದಲ್ಲಿ ಅನೇಕರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಸಂಪೂರ್ಣ ಪರಿಹಾರ ಕಂಡಿಕೊಳ್ಳುವುದರಲ್ಲಿ ಆನೆ ಪರಿಣತರು, ಸರಕಾರಗಳು, ಸಂಘ ಸಂಸ್ಥೆಗಳು ವಿಫಲವಾಗಿವೆ.

ಎಪ್ಪತ್ತರ ದಶಕದ ಹಿಂದೆ ಕಾಣದಂತಹ ಆನೆ-ಮಾನವ ಸಂಘರ್ಷ ಈಗ ತಲೆನೋವಾಗಿ, ಅತ್ಯಂತ ಕ್ಲಿಷ್ಟ ಸಮಸ್ಯೆಯಾಗಿ ಪರಿಣಮಿಸಿರುವುದಕ್ಕೆ ಕಾರಣಗಳೇನು ಎಂಬುದಕ್ಕೆ ಹಲವು ಉತ್ತರಗಳಿದ್ದರೂ ಪರಿಹಾರವಿಲ್ಲದಾಗಿದೆ. ಹೆಚ್ಚಾದ ಸಂಘರ್ಷಗಳ ಸಂದರ್ಭದಲ್ಲಿ ಆನೆಗಳ ಸಂತತಿ ಜಾಸ್ತಿಯಾಗಿರುವುದಂತೂ ನಿಜ. ಹಾಗಂತ ನಮ್ಮದೇಶದಲ್ಲಿ “culling” (ಪ್ರಾಣಿಗಳ ಸಂಖ್ಯೆ ಕಡಿಮೆ ಮಾಡಲು ನಿರ್ದಿಷ್ಟ ಮಟ್ಟದಲ್ಲಿ ಪ್ರಾಣಿಗಳನ್ನು ಕೊಲ್ಲುವುದು) ವ್ಯವಸ್ಥೆ ನಿಷಿದ್ಧ.

ಚರಿತ್ರೆಯ ಪುಟಗಳನ್ನೂ ತಿರುವಿದಾಗ ನಮಗೆ ತಿಳಿದುಬರುವ ವಿಚಾರವೆಂದರೆ 350-290 ಬಿ.ಸಿ. ಯಲ್ಲಿ ಗ್ರೀಕ್ ಪ್ರವಾಸಿ ಮೇಗಸ್ಥೆನೆಸ್ ಪ್ರಕಾರ ಆನೆಗಳನ್ನು ಹಿಡಿದು ಪಳಗಿಸಲು ಒಂದು ಪ್ರಕಾರದ ಖೆಡ್ಡಾ ಕಾರ್ಯಾಚರಣೆ ನಡೆಯುತ್ತಿತ್ತಂತೆ. ಆನೆಗಳನ್ನು ಆಳವಾದ ಹೊಂಡಗಳಿಗೆ ಬೀಳಿಸಿಯಾಗಲಿ, ಸಾಕಿದ ಆನೆಗಳ (ಕುಮ್ಕಿ) ಸಹಾಯದಿಂದ ಒಂದು ರೀತಿಯ “ದಸಿಬೇಲಿ” (stockade) ನಿರ್ಮಿಸಿ ಅದರೊಳಗೆ ಅಟ್ಟಿ ಬಂಧಿಸುವುದು ನಡೆದಿತ್ತಂತೆ. ಅಂದರೆ, ಆನೆಗಳ ಸಂತತಿ ವೃದ್ಧಿಯಾದಾಗ ಅದನ್ನು ಕಡಿಮೆ ಮಾಡಿ ಪಳಗಿಸಿದ ಆನೆಗಳನ್ನು ವಿವಿಧ ರೀತಿಯ ಕೆಲಸಕಾರ್ಯಗಳಿಗೆ, ಯುದ್ಧವೂ ಸೇರಿದಂತೆ, ಉಪಯೋಗಿಸುತ್ತಿದ್ದರಂತೆ.

ಕರ್ನಾಟಕದಲ್ಲಿ ಖೆಡ್ಡಾ

ನಮ್ಮ ರಾಜ್ಯದಲ್ಲಿ ಕಾಡಾನೆಗಳನ್ನು ಹಿಡಿದು ಪಳಗಿಸುವ ಖೆಡ್ಡಾ ಕಾರ್ಯಾಚರಣೆ ಮೊಟ್ಟಮೊದಲಬಾರಿಗೆ 1873ರಲ್ಲಿ ಪ್ರಾರಂಭವಾಯಿತು. ಆಂಗ್ಲರ ಆಳ್ವಿಕೆಯಿದ್ದ ಆ ಕಾಲಘಟ್ಟದಲ್ಲಿ ಜಿ.ಪಿ.ಸ್ಯಾಂಡರ್ಸನ್ ಎಂಬಾತ ಪ್ರಪ್ರಥಮ ಖೆಡ್ಡಾ ಕಾರ್ಯಾಚರಣೆಯನ್ನು ಪರಿಚಯ ಮಾಡಿಕೊಟ್ಟ ನಂತರ ಮುಂದೆ 1973ರವರೆಗೆ ಖೆಡ್ಡಾ ನಿಷಿದ್ಧವಾಗುವವರೆಗೆ ಸುಮಾರು 35 ಖೆಡ್ಡಾ ಕಾರ್ಯಕ್ರಮಗಳು ನಡೆದಿವೆ. ಇವುಗಳಲ್ಲಿ 1800 ಹೆಚ್ಚು ಆನೆಗಳನ್ನು ಹಿಡಿದು ಪಳಗಿಸಲಾಗಿದೆ ಎಂಬುದು ಚರಿತ್ರೆಯಲ್ಲಿ ಅಡಕವಾಗಿರುವ ಅಂಶ.

ಇನ್ನೊಂದು ವಿಶೇಷತೆಯೆಂದರೆ, ಅಂತಹ ಕಾರ್ಯಾಚರಣೆಗಳು ವಿದೇಶದಿಂದ ಬಂದ ಪ್ರಮುಖ ವ್ಯಕ್ತಿಗಳ ಸಮ್ಮುಖದಲ್ಲಿ ಅವರಿಗೋಸ್ಕರ ಆಯೋಜಿಡಲ್ಪಡುತ್ತಿದ್ದವು. 1873ರಲ್ಲಿ ಆಗಿನ ಪ್ರಮುಖ ವ್ಯಕ್ತಿ ಗ್ರಾಂಡ್ ಡ್ಯೂಕ್ ಆಫ್ ರಷ್ಯಾ ಆಗಿದ್ದರಂತೆ. ಆದರೆ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯು ಜಾರಿಗೆ ಬಂದ ನಂತರ 1973ರಲ್ಲಿ ಖೆಡ್ಡಾ ಕೈಬಿಡಲಾಯ್ತು.

ಹಾಗೆ ನೋಡಿದರೆ ಆನೆಗಳ ಉಪಯುಕ್ತತೆ ಅಷ್ಟಿಷ್ಟಲ್ಲ. ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಅನೇಕ ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ದ್ರೋಣ ಕೂಡ ಕಾಡಿನಲ್ಲಿ ವಿದ್ಯುತ್ ಆಘಾತಕ್ಕೆ ಸಿಲುಕಿ ಕೆಲವರ್ಷಗಳ ಹಿಂದೆ ಮೃತಪಟ್ಟಿದ್ದು ಅತೀ ದಾರುಣ. ದ್ರೋಣನನ್ನು ಸಹ ಖೆಡ್ಡಾ ಕಾರ್ಯಾಚರಣೆಯಲ್ಲಿ ಹಿಡಿದು ಪಳಗಿಸಲಾಗಿತ್ತು. ನಂತರ ಅರ್ಜುನ ಅಂಬಾರಿ ಹೊತ್ತಿದ್ದ. ಈ ಬಾರಿ ಅರ್ಜುನನ ಬದಲಿಗೆ ಅಭಿಮನ್ಯು ಸಿದ್ಧವಾಗಿದ್ದಾನೆ.

ಮನುಷ್ಯರ ಜೀವಕ್ಕೆ ಬೆಲೆಯೆಷ್ಟು?

ನೆಟ್ಟಿಗರು ಕೇರಳದಲ್ಲಿ ಪ್ರಾಣ ಕಳೆದುಕೊಂಡ ಗರ್ಭಿಣಿ ಆನೆಯ ಬಗ್ಗೆ ತೋರಿದ ಅಭಿಮಾನ, ಪ್ರೀತಿ, ಕಾಳಜಿ, ಪ್ರಾಣಿಪ್ರಿಯರೂ ಸೇರಿದಂತೆ ಎಲ್ಲರ ಮನಸ್ಸನ್ನು ಗೆದ್ದಿದೆ. ಆದರೆ, ಒಬ್ಬ ರೈತ ತಾನು ಬೆಳೆದ ಬೆಳೆಯನ್ನು ಕಾಡುಪ್ರಾಣಿಗಳ ದಾಳಿಯಲ್ಲಿ ಕಳೆದುಕೊಂಡರೆ ಅಥವಾ ಪ್ರಾಣವನ್ನೇ ಕಳೆದುಕೊಂಡರೆ ಅವನ ಕುಟುಂಬಕ್ಕೆ ಸಿಗುವ ಅಲ್ಪ ಪರಿಹಾರದಿಂದ ಬದುಕು ಕಟ್ಟಿಕೊಳ್ಳಲು ಎಷ್ಟು ಕಷ್ಟವಿದೆ ಎಂದು ಅವರು ತಿಳಿದಿದ್ದಾರೆಯೇ, ಎಂಬುದು ರೈತರ ಪ್ರಶ್ನೆ.

ಬಡತನದ ಬೇಗೆಯಲ್ಲಿ ನೊಂದು ಬೆಂದು ಆತ್ಮಹತ್ಯೆಗೆ ಶರಣಾದ ಅದೆಷ್ಟೋ ರೈತ ಕುಟುಂಬಗಳ ಬಗ್ಗೆಯೂ ಅದೇ ಕಾಳಜಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿದರೆ ಸರಕಾರಗಳಿಗೆ ರೈತರ ಕಷ್ಟ ಮುಟ್ಟೀತು, ಅದರಿಂದ ಸಹಾಯವಾದೀತು ಎಂಬುದು ಅವರ ಅಭಿಮತ.

ಹಾಗೆಯೇ ಕೊರೋನಾ ವೈರಸ್ ದೆಸೆಯಿಂದ ವಲಸೆ ಹೋಗುತ್ತಿರುವ ಕಾರ್ಮಿಕರ ಬಗ್ಗೆಯೂ ನೆಟ್ಟಿಗರು ಗಮನ ಹರಿಸಲಿ ಎಂಬುದು ಅನೇಕರ ಅಭಿಪ್ರಾಯ. ಅದೆಷ್ಟೋ ಕಾರ್ಮಿಕರು ಬದುಕನ್ನು ಕಳೆದುಕೊಡು, ಅನ್ನ, ನೀರಿಲ್ಲದೆ ಪಡುತ್ತಿರುವ ಬವಣೆ ನೆಟ್ಟಿಗರ ಕಣ್ಣಿಗೆ ಬಿದ್ದಿಲ್ಲವೇ, ಎಂದು ಅವರು ಹೇಳುವಾಗ ಕಣ್ಣು ತುಂಬಿ ಬರುವುದಂತೂ ನಿಜ.

ಏಶಿಯನ್ ಆನೆಗಳ (Elephas Maximus Indicus) ಸಂತತಿಗೆ ಸೇರಿದ ಭಾರತೀಯ ಆನೆಗಳು ಅಳಿವಿನಂಚಿನಲ್ಲಿರುವ (endangered) ಪ್ರಾಣಿ ಸಂಕುಲವೆಂದು ಗುರುತಿಸಲ್ಪಟ್ಟಿದೆ. ಆನೆಗಳ ಜೀವ ಎಷ್ಟು ಮುಖ್ಯವೋ ಮಾನವ ಜೀವವು (ಹೆಚ್ಚಲ್ಲದಿದ್ದರು!) ಅಷ್ಟೇ ಮುಖ್ಯ. ಆನೆ-ಮಾನವ ಸಂಘರ್ಷಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಸಂಪೂರ್ಣ ಪರಿಹಾರ ಸಾಧ್ಯವಿಲ್ಲದಿದ್ದರೂ, ರೈತರ, ಸರಕಾರಿ ಅಧಿಕಾರಿಗಳ ಮಧ್ಯೆ ಸಾಮರಸ್ಯ ಹಾಗೂ ಎಚ್ಚರಿಕೆಯ ನಡೆ ಎರಡು ಕಡೆಗೂ ಸಂತಸದ, ಆತಂಕವಿಲ್ಲದ, ಸಹಬಾಳ್ವೆಯನ್ನ ಸೃಷ್ಟಿಸಬಹುದು.

ಕೊಡಗಿನಲ್ಲಿ ಸುಮಾರು 25 ವರುಷಗಳ ಹಿಂದೆ ಆನೆ-ಮಾನವ ಸಂಘರ್ಷ ಕೆಲವೆಡೆ ಇದ್ದು ಅದೊಂದು ಸಮಸ್ಯೆಯಾಗಿ ಕಾಡಿರಲಿಲ್ಲ. ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಪ್ರಸ್ತುತ ಸನ್ನಿವೇಶವೇ ಬೇರೆ. ಸಂಘರ್ಷಕ್ಕೆ ತನ್ನದೇ ಆದ ಕಾರಣಗಳಿವೆ. ಅದರಲ್ಲಿ ಆನೆಗಳ ಹಾದಿಯಲ್ಲಿ ಮನುಷ್ಯರು ಮನೆ ಕಟ್ಟಿಕೊಂಡಿದ್ದಿರಬಹುದು, ಕಾಫಿ ತೋಟಗಳನ್ನಾಗಿ ಪರಿವರ್ತನೆ ಮಾಡಿದ್ದಿರಬಹುದು, ಕಾಡಿನೊಳಗೆ ಇನ್ನೂ ವಾಸಿಸುತ್ತಿರುವ ಗಿರಿಜನರಿರಬಹುದು, ಆನೆಗಳಿಗೆ ಕುಡಿಯುವ ನೀರಿಲ್ಲದ ಕಾರಣವಿರಬಹುದು, ಸಾಕಷ್ಟು ಮೇವು ಸಿಗದ ವಿಷಯವಿರಬಹುದು; ಅಥವಾ ಆನೆಗಳು ಗುಂಡೇಟಿಗೆ ಬಲಿಯಾಗಿರಬಹುದು, ವಿಷಯುಕ್ತ ಆಹಾರ ಸೇವಿಸಿ ಸತ್ತಿರಬಹುದು, ಯಾವುದೇ ಪರಿಹಾರಗಳನ್ನು ಕಂಡುಕೊಳ್ಳಲಾಗಿಲ್ಲ.

ಇಷ್ಟೆಲ್ಲಾ ವ್ಯವಸ್ಥೆಗಳು ಇದ್ದರೂ ಮಾನವ ಪ್ರಾಣಹಾನಿ ಅಥವಾ ಬೆಳೆ ನಾಶದಂತಹ ಘಟನೆಗಳು ಅವ್ಯಾಹತವಾಗಿ ಕೊಡಗಿನಲ್ಲಿ ಸಂಭವಿಸುತ್ತಿದೆ. ಆನೆಗಳಾಗಲಿ, ಹುಲಿ ಅಥವಾ ಬೇರೆ ಬೇರೆ ಕಾಡು ಪ್ರಾಣಿಗಳು ದುರಂತಕ್ಕೀಡಾದಾಗ ಇಲ್ಲಿನ ಜನ “ಅಯ್ಯೋ, ಪಾಪ” ಎಂದು ಮರುಗುತ್ತಾರೆ. ಆನೆಗಳು ಕೂಡ ಅಸಹಜ ಸಾವುಗಳಾದ ವಿದ್ಯುತ್ ಶಾಕ್ ನಂತಹ ಘಟನೆ ಸಂಭವಿಸಿದಾಗ ಕೊಡಗಿನ ಜನ ವ್ಯಥೆ ವ್ಯಕ್ತಪಡಿಸುತ್ತಾರೆ. 

ಕೆಲ ದಿನಗಳ ಹಿಂದೆ ವಾಲ್ನೂರು, ತ್ಯಾಗತ್ತೂರು, ಅಭ್ಯತ್ಮಂಗಲ, ನೆಲ್ಲಿಹುದಿಕೇರಿ, ಬೆಟ್ಟದಕಾಡು, ಅರೆಕಾಡು, ಮುಂತಾದೆಡೆಗಳಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ 25ಕ್ಕೂ ಹೆಚ್ಚು ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಅಟ್ಟಿದ್ದರು. ಆದರೆ, ಅದೇ ಆನೆಗಳು ಮತ್ತೆ ಕಾಫಿ ತೋಟಗಳಿಗೆ ವಾಪಸ್ಸಾಗಿವೆ. ಈ ಸಮಸ್ಯೆ ಕೊಡಗಿನ ಬಹುತೇಕ ಎಲ್ಲಾ ಸ್ಥಳಗಳಲ್ಲಿಯೂ ಕಂಡುಬರುತ್ತದೆ. ಹಿಂಡು ಹಿಂಡಾಗಿ ಭತ್ತದ ಪೈರುಗಳನ್ನು ನಾಶಪಡಿಸುತ್ತಿರುವ ಆನೆಗಳ ಜೊತೆಗೆ ಕಾಡುಹಂದಿಗಳು ಕೂಡ ಪೈಪೋಟಿಗೆ ಇಳಿದಿವೆ.

ಯಾವುದನ್ನೂ ಯಾಚಿಸಿ ಪಡೆಯದ, ಕಷ್ಟವನ್ನು ಸರಕಾರದ ಜೊತೆ ಹೇಳಿಕೊಂಡರೂ ಪರಿಹಾರ ಸಿಗದ, ಸಿಗದಿದ್ದರೂ ಮುನಿಸಿಕೊಳ್ಳದ, ಕೊಡಗಿನ ಮುಗ್ಧ ಜನ ಪ್ರತಿ ವರ್ಷದ ಮಳೆಗಾಲದಲ್ಲಿ ನಿರ್ವಸತಿಕರಾಗಿ ನೋವು ಅನುಭವಿಸುತ್ತಿದ್ದಾರೆ. ಜೊತೆಗೆ ಬೆಳೆ ಹಾನಿಯಿಂದ ನಷ್ಟಹೊಂದುವುದು, ಕೋವಿಡ್-19 ಕಾಯಿಲೆಯಿಂದ ಇತ್ತೀಚೆಗೆ ನರಳುತ್ತಿರುವುದು, ಅಸುನೀಗುತ್ತಿರುವುದು, ಬಲಾಢ್ಯವಲ್ಲದ ರಾಜಕಾರಣಿಗಳ ಕ್ಷೀಣಿಸಿದ ಕೂಗಿನಿಂದ, ದುರಂತಕ್ಕೊಳಗಾಗುತ್ತಿರುವುದು ನಿರಂತರ ಎಂದು ಭಾಸವಾಗುತ್ತಿದೆ. ಈ ಸಮಸ್ಯೆಗಳಿಗೆ ಹೊಂದಿಕೊಂಡು ಬದುಕುವ ನಮ್ಮ ಸಂಯಮ, ಶಕ್ತಿ, ಎಲ್ಲಿವರೆಗೆ ಇರುತ್ತೋ… ಕಾದು ನೋಡಬೇಕಾಗಿದೆ!

*ಲೇಖಕರು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದವರು; ದಿ ಹಿಂದೂ ಪತ್ರಿಕೆ ಬೆಂಗಳೂರು ಆವೃತ್ತಿಯ ಮಾಜಿ ಬ್ಯೂರೋ ಮುಖ್ಯಸ್ಥರು.

 

 

Leave a Reply

Your email address will not be published.