ಕೊಡಗಿನಲ್ಲಿ ಸಮಾಜಮುಖಿ ನಡಿಗೆ

ಮಾಜಮುಖಿ ಬಳಗದ ‘ನಡೆದು ನೋಡು ಕರ್ನಾಟಕ’ ಸರಣಿಯ ಮೂರನೆಯ ನಡಿಗೆ ಕೊಡಗು ಪ್ರದೇಶದಲ್ಲಿ ಏಪ್ರಿಲ್ 12 ರಿಂದ 14ರವರೆಗೆ ನಡೆಯಿತು. ಏಪ್ರಿಲ್ 12ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡಿಗೆಗೆ ಚಾಲನೆ ಹಾಗೂ ಸಮಾಜಮುಖಿ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊಡಗಿನ `ಪ್ರಜಾಸತ್ಯ ದಿನಪತ್ರಿಕೆ’ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ‘ಶಕ್ತಿ’ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ‘ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಪರ್ಯಾಯವಾಗಿ ಅಧ್ಯಯನ ಕಾರ್ಯಕ್ರಮ ಆಯೋಜಿಸಿರುವುದು ತುಂಬಾ ಸಂತೋಷದ ವಿಷಯ. ಇಲ್ಲಿ ಇತ್ತೀಚೆಗೆ ಪ್ರಕೃತಿ ವಿಕೋಪ ಆಗಿದೆ. ಇನ್ನೂ ಅದರಿಂದ ಇಲ್ಲಿನ ಜನ ಚೇತರಿಸಿಕೊಂಡಿಲ್ಲ. ಈ ಸಮಸ್ಯೆ ಕುರಿತು ನಡೆದು ನೋಡುವುದು, ಆ ಬಗ್ಗೆ ಅಧ್ಯಯನ ಮಾಡುವುದು ಸ್ವಾಗತಾರ್ಹ. ಪತ್ರಿಕೆಯೊಂದು ನಿಜವಾಗಿ ಮಾಡಬೇಕಾದ ಕೆಲಸವನ್ನು ‘ಸಮಾಜಮುಖಿ’ ಮಾಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಡಿಕೇರಿ ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ ಕುಟ್ಟಪ್ಪ ಮಾತನಾಡಿ, ‘ಕೊಡಗಿನ ಒಂದು ವರ್ಗ ಇಲ್ಲಿ ಬದುಕು ನಡೆಸಲಾಗದು ಎಂದು ಊರು ಬಿಟ್ಟು ಬೆಂಗಳೂರಿಗೆ ವಲಸೆ ಹೋಗುತ್ತದೆ. ಇನ್ನೊಂದು ವರ್ಗ ಇಲ್ಲಿನ ನಿಸರ್ಗವನ್ನೇ ತಮ್ಮ ಬದುಕಿನ ಉದ್ಯಮವಾಗಿ ರೆಸಾರ್ಟ್, ಹೋಟೆಲ್ ರೂಪದಲ್ಲಿ ಬಳಸಿಕೊಳ್ಳುತ್ತಿದೆ. ಈ ವೈರುಧ್ಯ ಗಮನಾರ್ಹ’ಎಂದರು. ‘ಪ್ರಜಾಸತ್ಯ’ ದಿನಪತ್ರಿಕೆಯ ಸಂಪಾದಕ ಡಾ.ಬಿ.ಸಿ.ನವೀನ್‍ಕುಮಾರ್, ಪ್ರಜಾಪ್ರಭುತ್ವ ಮತ್ತು ಮಾಧ್ಯಮ ಕುರಿತು ಮಾತನಾಡುತ್ತ, ‘ಮಾಧ್ಯಮಗಳಿಗೆ ನಿರ್ಬಂಧ ಹಾಕುವುದು ಸರಿಯಲ್ಲ. ಮಾಧ್ಯಮಗಳು ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದು ಒಳ್ಳೆಯದು. ಹಾಗೆಯೇ ನಾಲ್ಕು ಅಂಗಗಳು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ’ ಎಂದರು.

ಅನಂತರ ನಡಿಗೆ ತಂಡ ಪತ್ರಿಕಾಭವನದಿಂದ ಕಾಲ್ನಡಿಗೆಯಲ್ಲಿ ಪ್ರಮುಖ ಬೀದಿಗಳಲ್ಲಿ ಹಾಯ್ದು ಮಡಿಕೇರಿಯ ಕೋಟೆ ವೀಕ್ಷಣೆ ಮಾಡಿತು. ಕೋಟೆಯ ಕಟ್ಟಡದ ಮೇಲೆ ಹತ್ತಿ ಮಡಿಕೇರಿ ನಗರದ ವಿಹಂಗಮ ನೋಟವನ್ನು ಕಣ್ತುಂಬಿಕೊಂಡಿತು. 19ನೇ ಶತಮಾನದಲ್ಲಿ ಚಿಕ್ಕವೀರರಾಜೇಂದ್ರ ರಾಜನಿಂದ ಕೋಟೆ ನಿರ್ಮಾಣಗೊಂಡಿದ್ದು ಕೋಟೆ ಆವರಣದಲ್ಲೇ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದ ಚರ್ಚಿನಲ್ಲಿ ವಸ್ತುಸಂಗ್ರಹಾಲಯವಿದೆ, ಅದರಲ್ಲಿ 11ನೇ ಶತಮಾನದಿಂದ ಹಿಡಿದು 19ನೇ ಶತಮಾನದವರೆಗಿನ ವಿವಿಧ ವಿಗ್ರಹಗಳು, ರಾಜರು ಬಳಸುತ್ತಿದ್ದ ಕತ್ತಿ, ಆಯುಧಗಳನ್ನು ನೋಡುವ ಮೂಲಕ ಕೊಡಗಿನ ರಾಜರ ಕುರಿತು ಅರಿಯಲಾಯಿತು. ಹಾಗೆಯೇ ಪುರಾತನ ಕಾಲದ ಓಂಕಾರೇಶ್ವರ ದೇವಾಲಯಕ್ಕೆ ಭೇಟಿನೀಡಿದಾಗ ಅಲ್ಲಿನ ಸ್ಥಳಪುರಾಣ ಅರಿವಿಗೆ ಬಂತು.

‘ಇಬ್ಬನಿ ಕಾಡು’ ಹೋಂ-ಸ್ಟೇನಲ್ಲಿ ಮಧ್ಯಾಹ್ನದ ಊಟ ಮುಗಿಸಿದ ತಂಡ 11 ಕಿ.ಮೀ ದೂರದಲ್ಲಿರುವ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕೆ ಪ್ರಾಯೋಗಿಕ ಸಂಸ್ಥೆಗೆ ಭೇಟಿ ನೀಡಿತು. ಅಲ್ಲಿ ತೋಟಗಾರಿಕೆ ಬೆಳೆಗಳ ವಿಜ್ಞಾನಿ, ವೆಂಕಟರಮಣ ಅವರಿಂದ ಲಿಚ್ಚಿ, ನೇರಳೆ, ಕಿತ್ತಳೆ, ಪಪ್ಪಾಯಿ, ಚೆಕ್ಕೋತಾ, ರಾಮ್ ಬುಟಾನ್, ಅವಕಾಡೋ, ಕವಳಿಹಣ್ಣು, ಕೋಕಂ, ಕಮಲಾಕ್ಷಿ, ಡ್ರ್ಯಾಗನ್ ಫ್ರೂಟ್, ಸೀತಾಫಲ, ಎಗ್ ಫ್ರೂಟ್… ಇತ್ಯಾದಿ ಕಾಡು ಹಣ್ಣುಗಳ ಪರಿಚಯವಾಯಿತು.

ಅಲ್ಲಿಂದ ಎರಡು ಕಿ.ಮೀ. ದೂರದಲ್ಲಿರುವ ಕಾಫಿ ಸಂಶೋಧನಾ ಕೇಂದ್ರಕ್ಕೆ ಭೇಟಿ. ಅಲ್ಲಿ ಕೇಂದ್ರದ ಉಪನಿರ್ದೇಶಕ ಡಾ.ಜಗದೀಶನ್ ಅವರಿಂದ ಅರೇಬಿಕಾ, ರೋಬಸ್ಟಾ ಸೇರಿದಂತೆ ಕಾಫಿ ತಳಿಗಳು ಮತ್ತು ಬೆಳೆಯ ಕುರಿತು ಮಾಹಿತಿ ದೊರೆಯಿತು. ನಂತರ ಸಿದ್ಧಾಪುರ, ವಿರಾಜಪೇಟೆ ಮಾರ್ಗವಾಗಿ ಕಕ್ಕಬೆಯ ಕಿಂಗ್ಸ್ ಕಾಟೇಜ್ ವಸತಿಸ್ಥಳ ತಲುಪಿತು ತಂಡ.

ಸಂಜೆ 87ರ ಪ್ರಾಯದ ಬಾಚರಣಿಯಂಡ ಅಪ್ಪಣ್ಣ ಅವರು ಕೊಡವ ಜನಾಂಗದ ಇತಿಹಾಸ, ಸಂಸ್ಕೃತಿ, ಮದುವೆ ಪದ್ಧತಿ, ನ್ಯಾಯ ವ್ಯವಸ್ಥೆ, ಕೊಡವ ಮೂಲ ಜನಾಂಗದ ಮುಂದುವರಿಕೆ ಕ್ರಮಗಳ ಬಗ್ಗೆ ಸೊಗಸಾಗಿ ವಿವರಿಸಿದರು. ನಂತರ ಬಾರಿಯಂಡ ಜೋಯಪ್ಪ, ಕೊಡಗಿನ ಅರೆಭಾಷೆ ಕುರಿತು ವಿವರಣೆ ನೀಡುತ್ತ, ‘ನಾನು ಬರುತ್ತೇನೆ ಎಂಬುಕ್ಕೆ ನಾ ಬನ್ನೆ ಎನ್ನಲಾಗುತ್ತದೆ. ನಾನು ಹೋಗುತ್ತೇನೆ ಎಂಬುದಕ್ಕೆ ನಾ ಹೋನ್ನೆ ಎನ್ನಲಾಗುತ್ತದೆ. ಕಡಿಮೆ ಅಕ್ಷರಗಳಲ್ಲಿ ಮಾತನಾಡುವುದೇ ಅರೆಭಾಷೆಯ ವಿಶೇಷ’ ಎಂದಾಗ ನಡಿಗೆ ತಂಡದ ಸದಸ್ಯರ ಮುಖದಲ್ಲಿ ಅಚ್ಚರಿ. ಅನಂತರ ಕೊಡವ ಪದ್ಧತಿಯ ಭೋಜನ.

ನಡಿಗೆ ತಂಡ: ಕೊಡಗಿನ ನಡಿಗೆ ತಂಡ ಹಲವು ವಿಶೇಷಗಳನ್ನು ಹೊಂದಿತ್ತು. 9 ವರ್ಷದ ಬಾಲಕನಿಂದ ಹಿಡಿದು 83 ವರ್ಷದ ಹಿರಿಯರಿದ್ದರು. ಒಟ್ಟು 40 ಸದಸ್ಯರು ತಂಡದಲ್ಲಿದ್ದರು. 80 ವರ್ಷ ಮೇಲ್ಪಟ್ಟವರು ಇಬ್ಬರು, 70 ವರ್ಷ ಮೇಲ್ಪಟ್ಟವರು ಇಬ್ಬರು ಹಾಗೂ 16 ವರ್ಷದೊಳಗಿನ ಮಕ್ಕಳು ಐವರಿದ್ದರು. ಇಬ್ಬರು ಬಾಲಕಿ ಯರು ಸೇರಿದಂತೆ ನಾಲ್ವರು ಮಹಿಳೆಯರಿದ್ದರು. ವೃತ್ತಿಯಿಂದ 10 ಪ್ರಾಧ್ಯಾಪಕರು, ನಾಲ್ವರು ವಕೀಲರು, ಮೂವರು ವೈದ್ಯರು 8 ಜನ ಇಂಜಿನಿಯರಗಳಿದ್ದರು. ಜೊತೆಗೆ ಕಲಾವಿದರು, ಹವ್ಯಾಸಿ ಛಾಯಾಚಿತ್ರಕಾರರು ಜೊತೆಗೆ ಹೆಜ್ಜೆ ಹಾಕಿದರು. ಹೀಗೆ ಸಮಾಜಮುಖಿ ನಡಿಗೆ ತಂಡದ ವೈವಿಧ್ಯ ಮತ್ತು ವಿಸ್ತಾರ ಹೆಚ್ಚುತ್ತಲೇ ಇದೆ.

 

ಎರಡನೆಯ ದಿನ ಬೆಳಿಗ್ಗೆ ಎದ್ದಾಗ ಸುತ್ತಲ ಪ್ರದೇಶದಲ್ಲಿ ಮಂಜುಮುಸುಕಿತ್ತು. ಇದು ಒಂದು ರೀತಿ ಆಕಾಶದಲ್ಲಿ ಮೋಡಗಳ ಮಧ್ಯೆ ಇರುವ ಆಹ್ಲಾದಕರ ಅನುಭವ ನೀಡಿತು. ಈ ವಾತಾವರಣದಿಂದ ಹುರುಪುಗೊಂಡ ನಡಿಗೆದಾರರು ತಿಂಡಿ ತಿಂದು ತಡಿಯಾಂಡಮೋಳ್ ಬೆಟ್ಟದ ಚಾರಣಕ್ಕೆ ಹೊರಟುನಿಂತರು. ತಡಿಯಾಂಡಮೋಳ್ ಬೆಟ್ಟ ರಾಜ್ಯದಲ್ಲೇ ಎರಡನೆಯ ಅತ್ಯಂತ ಎತ್ತರದ (ಸಮುದ್ರಮಟ್ಟದಿಂದ 5681 ಅಡಿ ಎತ್ತರ) ಬೆಟ್ಟವಾಗಿದೆ. 7 ಕಿ.ಮೀ ದೂರದ ಬೆಟ್ಟದ ಹಾದಿಯ ಅರ್ಧಕ್ಕೆ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಹಾಕಿದೆ. ಬೇಸಿಗೆಯಲ್ಲಿ ಅಲ್ಲಿಂದ ಮುಂದೆ ಹತ್ತಲು ಬಿಡುವುದಿಲ್ಲ. ಸಮಾಜಮುಖಿ ನಡಿಗೆ ತಂಡದ ಹಿರಿಯ ಸದಸ್ಯರೂ, ಮಕ್ಕಳೂ ಬೆಟ್ಟವನ್ನು ನಿರಾಯಾಸವಾಗಿ ಹತ್ತಿಳಿದರು. ಚಾರಣದ ಮಾರ್ಗದಲ್ಲಿ ಉಪಜೀವನಕ್ಕೆ ಚಿಕ್ಕ ಅಂಗಡಿ ಹಾಕಿಕೊಂಡಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದೆ ಮಲೆಕುಡಿಯ ಬುಡಕಟ್ಟು ಸಮುದಾಯದ ಜಾನಕಿ ಜಾನಪದ ಹಾಡು ಹೇಳಿದರು. ಬಳಿಕ ತಡಿಯಾಂಡಮೋಳ್ ಬೆಟ್ಟದ ಕೆಳಗಿರುವ ನಾಲಕ್ನಾಡ್ ಅರಮನೆ, ಅಲ್ಲಿಂದ ಒಂದೆರಡು ಕಿ.ಮೀ. ದೂರದಲ್ಲಿರುವ ಇಗ್ಗುತಪ್ಪ ದೇವಸ್ಥಾನಕ್ಕೆ ಭೇಟಿ.

ಸಂಜೆ ಅಪ್ಪಾರಂಡ ಪ್ರಕಾಶ ಕೊಡವರು, ಕಾವೇರಿ ಮತ್ತು ಕಾಫಿಬೆಳೆ ಇತಿಹಾಸದ ಬಗ್ಗೆ ಉಪನ್ಯಾಸ ನೀಡಿದರು. ಅನಂತರ ರಾಧಿಕಾ ನೇತೃತ್ವದ ಹೂಮಾಲೆ ಕುಡಿಯರ ಸಾಂಸ್ಕೃತಿಕ ಸಂಘದ ಯುವತಿಯರು ನಡೆಸಿಕೊಟ್ಟ ಗೀತಗಾಯನ ಮತ್ತು ಉರುಟಿಕುಟ್ಟ ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳಿಂದ ಕೊಡವರ ವಿಶಿಷ್ಟ ಸಂಸ್ಕೃತಿಯ ಅನಾವರಣವಾಯಿತು.

ಮೂರನೆಯ ದಿನ ಭಾನುವಾರ ಬೆಳಿಗ್ಗೆ ಎದ್ದಾಗ ಚಿಗುರುಬಿಸಿಲು ಬಂದಿತ್ತು. ಲಗುಬಗೆಯಿಂದ ಸ್ನಾನ ಮಾಡಿ ತಯಾರಾಗುತ್ತಿದ್ದಂತೆ ಅಕ್ಕಿಯಿಂದ ಮಾಡಿದ ಕೊಡಗಿನ ವಿಶೇಷ ಕಡಬು, ಇಡ್ಲಿ ಮತ್ತು ಪೂರಿ ಹಾಗೂ ಬಿಸಿಬಿಸಿ ಕಾಫಿ ಸಿದ್ಧವಾಗಿದ್ದವು. ತಿಂಡಿ ಸೇವನೆ ನಂತರ ತಲಕಾವೇರಿ, ತ್ರಿವೇಣಿ ಸಂಗಮ ದರ್ಶನ. ಕೆಲವರು ಬ್ರಹ್ಮಗಿರಿ ಬೆಟ್ಟ ಹತ್ತಿ ಕೊಡಗಿನಲ್ಲಿ ಹರಡಿಕೊಂಡಿರುವ ಸಾಲುಸಾಲು ಬೆಟ್ಟಗಳ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಂಡರು.

ಕೊಡಗು ನಡಿಗೆಯ ಯಶಸ್ಸಿಗೆ ಶ್ರಮಿಸಿದವರು ಸ್ಥಳೀಯರಾದ ಡಾ.ನವೀನಕುಮಾರ್ ಮತ್ತು ಮೈಸೂರಿನ ಎಚ್.ನಾಗರಾಜು.

 

ಕೊಡಗಿನಲ್ಲಿ ‘ಹೋಮ್ ಸ್ಟೇ’ ಹುಟ್ಟು

1988ರಲ್ಲಿ ಬ್ರಿಟಿಷ್ ಪ್ರಜೆ ಅಲೂಕ್ ಎಂಬವ ತಡಿಯಾಂಡಮೋಳ್ ಬೆಟ್ಟದ ಚಾರಣ ಮಾಡಿ ಅದರ ಕೆಳಬದಿಯಲ್ಲಿದ್ದ ನಾಲಕ್ನಾಡು ಅರಮನೆ ವೀಕ್ಷಿಸುತ್ತಿದ್ದಾಗ ಅಪ್ಪಾರಂಡ ಪ್ರಕಾಶ್ ಎಂಬ ಸ್ಥಳೀಯ ಯುವಕನಿಗೆ ಪರಿಚಯವಾಗುತ್ತಾನೆ. ಅಲೂಕ್ ಗೆ ಹಸಿವೆಯಾಗಿರುತ್ತದೆ. ಆದರೆ ಅಲ್ಲಿ ಯಾವುದೇ ಹೋಟೆಲು, ಅಂಗಡಿ ಇರುವುದಿಲ್ಲ. ಆಗ ಪ್ರಕಾಶ್ ಬ್ರಿಟಿಷ್ ಪ್ರಜೆಗೆ “ಈಗ ನೀನು ನಗರಕ್ಕೆ ಹೋಗು. ನಾಳೆ ಬರುವಾಗ ಮೂರು ಕೆ.ಜಿ. ಹಂದಿ ಮಾಂಸ ತೆಗೆದುಕೊಂಡು ಬಾ’’ ಎಂದು ಹೇಳುತ್ತಾನೆ.

ಅದರಂತೆ ಅಲೂಕ್ ಮರುದಿನ ಮೂರು ಕೆ.ಜಿ. ಹಂದಿ ಮಾಂಸ ತೆಗೆದುಕೊಂಡು ನಾಲಕ್ನಾಡು ಅರಮನೆ ಬಳಿ ಬರುತ್ತಾನೆ. ಪ್ರಕಾಶ್ ಅವನನ್ನು ಸಮೀಪದಲ್ಲೇ ಇದ್ದ ತನ್ನ ಮನೆಗೆ ಕರೆದೊಯ್ದು ಹಂದಿ ಮಾಂಸದ ಅಡುಗೆ ಮಾಡಿಸಿ, ತಮ್ಮ ತೋಟದಲ್ಲೇ ಬೆಳೆದ ಕಾಫಿ ಪುಡಿಯಿಂದ ತಯಾರಿಸಿದ ಕಾಫಿ ಕುಡಿಸಿ ಉಪಚರಿಸುತ್ತಾನೆ. ಅಪ್ಪಟ ಕೊಡಗು ಶೈಲಿಯ ಮನೆಯಡುಗೆ ಉಂಡು ಖುಷಿಯಾದ ಅಲೂಕ್, `ನೀವು ಯಾಕೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಒಂದು ಪ್ರತ್ಯೇಕ ಕೊಠಡಿ ಮಾಡಿ ಊಟ-ವಸತಿ ಕಲ್ಪಿಸಬಾರದು? ಇದರಿಂದ ನಿಮಗೂ ಒಂದಿಷ್ಟು ಆದಾಯ ಬರುತ್ತದೆ. ಈ ಬಗ್ಗೆ ಯೋಚಿಸಿ’ ಎಂದು ಪ್ರಕಾಶ್‍ಗೆ ಸಲಹೆ ನೀಡುತ್ತಾನೆ.

ಸಾಂಪ್ರದಾಯಿಕ ಕೊಡವರಾದ ಪ್ರಕಾಶ್ ಮನಸ್ಸು ಮೊದಲು ಒಪ್ಪುವುದಿಲ್ಲ. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಗಮನಿಸಿ ಮನೆಯವರೊಂದಿಗೆ ಚರ್ಚಿಸಿ 1990ರಲ್ಲಿ ಅಲೂಕ್ ಸಲಹೆಯನ್ನು ಕಾರ್ಯಗತಗೊಳಿಸುತ್ತಾರೆ. ಆರಂಭದಲ್ಲಿ ವರ್ಷಕ್ಕೆ 10-20 ಜನ ಬರುತ್ತಿದ್ದವರ ಸಂಖ್ಯೆ ಬಳಿಕ ನೂರಕ್ಕೆ ತಲುಪುತ್ತದೆ. 1996ರಲ್ಲಿ ಉದಯಂಡ ಜಮುನಾ ಚೆಂಗಪ್ಪ ಅವರು ಇದಕ್ಕೆ `ಹೋಮ್ ಸ್ಟೇ’ ಎಂದು ಹೆಸರು ಕೊಡುತ್ತಾರೆ. ಈಗ ಕೊಡಗಿನಲ್ಲಿ 600ಕ್ಕೂ ಅಧಿಕ ನೋಂದಾಯಿತ ಹೋಮ್ ಸ್ಟೇಗಳಿವೆ. ಕೊಡಗು ನಡಿಗೆ ವೇಳೆ ‘ಸಮಾಜಮುಖಿ’ ತಂಡಕ್ಕೆ ಪ್ರಕಾಶ್ ಈ ಮಾಹಿತಿ ಹಂಚಿಕೊಂಡರು.

3 Responses to "ಕೊಡಗಿನಲ್ಲಿ ಸಮಾಜಮುಖಿ ನಡಿಗೆ"

Leave a Reply

Your email address will not be published.